ಶ್ರೀಪಾದ ಹೆಗಡೆ ಮೆಚ್ಚಿದ ‘ಜೀವನ ಪಥ ನೆನಪಿನ ರಥ’

ಶ್ರೀಪಾದ ಹೆಗಡೆ

‘ಸಪ್ತಕ’ ಎಂಬ ಸಂಸ್ಥೆ ಸ್ಥಾಪಿಸಿಕೊಂಡು ನಾಡಿನ ಮೂಲೆ ಮೂಲೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾ ಸೇವೆ ಗೈಯುತ್ತಿರುವ ಜಿ ಎಸ್ ಹೆಗಡೆಯವರದು ಹಿಂದುಸ್ತಾನಿ ಸಂಗೀತ ಪ್ರಿಯರಿಗೆ ಪರಿಚಿತ ಹೆಸರು. ಎಡೆಬಿಡದ ಚಟುವಟಿಕೆಯಲ್ಲಿ ತಮ್ಮನ್ನು ಈ ಕಾರ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ತೊಡಗಿಸಿ ಕೊಂಡಿದ್ದ ಇವರು, ಕೊರೊನಾ ಸಾಂಕ್ರಮಿಕದಿಂದಾಗಿ ಉಂಟಾದ ಕಳೆದ ಎರಡು ವರ್ಷದ ಸಾರ್ವಜನಿಕ ಗೃಹ ಬಂಧನದ ಸಮಯದಲ್ಲಿ ಬಾಹ್ಯ ಚಟುವಟಿಕೆಯನ್ನು ಕೈ ಬಿಡಬೇಕಾಗಿ ಬಂದಾಗ ಕಂಡುಕೊಂಡ ಅಂತರಂಗ ಚಟುವಟಿಕೆಯ ಫಲ ಶ್ರುತಿಯಾಗಿ ಹೊರ ಬಂದ ಪುಸ್ತಕ ಇದಾಗಿದೆ.

ಯಕ್ಷಗಾನವನ್ನೇ ಉಸಿರಾಡುವ ಪರಿಸರದಲ್ಲಿ ಹುಟ್ಟಿ ಬೆಳೆದ ಇವರು ಸಂಗೀತ ಮತ್ತು ಯಕ್ಷಗಾನ ಎರಡರಲ್ಲೂ ಸಮಾನ ಆಸಕ್ತಿ ಬೆಳೆಸಿಕೊಂಡ ಬಗೆಯನ್ನು ವಿವರಿಸುತ್ತಲೇ ಸುಮಾರು ಅರವತ್ತು ವರ್ಷಗಳ ಹಿಂದೆ ತಾವು ಬೆಳೆದ ಪ್ರದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ಅನೇಕ ಮಗ್ಗಲುಗಳನ್ನು ಇವರ ಬರಹ ತೆರೆದಿಡುತ್ತದೆ. ‘ಸುಖವಾದ ಬಡತನ’ದ ಪರಿಸರದಲ್ಲಿ ತಾವು ಬೆಳೆದ ರೀತಿಯನ್ನು ಅನನ್ಯವಾಗಿ ವಿವರಿಸಿದ್ದಾರೆ. ಶರಾವತಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ, ಈಗ ಇಡೀ ಪ್ರದೇಶದ ಚಿತ್ರಣವೇ ಬದಲಾಗಿದೆ. ಆದರೆ ಮುಂದಿನ ತಲೆ ಮಾರಿಗೆ ಇದೊಂದು ದಾಖಲೆಯಾಗಿ ಉಳಿಯ ಬಲ್ಲದಾಗಿದೆ.

ಜಿ.ಎಸ್.ಹೆಗಡೆಯವರ ಇಡೀ ಕುಟುಂಬ ಸಂಗೀತ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದೆ. ಇವರು ಸ್ವತಃ ತಬಲಾವಾದಕರು ಮತ್ತು ಸಂಗೀತ ಪರಿಚಾರಕರು, ಇವರ ಮಡದಿ ಗೀತಕ್ಕ ಹಾಡುಗಾರ್ತಿ ಮತ್ತು ಉತ್ತಮ ಸಂಗೀತ ಶಿಕ್ಷಕಿಯಾಗಿ ಹೆಸರಾಗಿದ್ದಾರೆ ಮತ್ತು ಅನೇಕ ಉದಯೋನ್ಮುಖ ಸಂಗೀತಗಾರರನ್ನು ತಯಾರು ಮಾಡಿದ್ದಾರೆ. ಇವರಿಬ್ಬರ ಮಗ ಧನಂಜಯ ಹೆಗಡೆ ನಾಡಿನ ಪ್ರಖ್ಯಾತ ಸಂಗೀತಗಾರರಲ್ಲಿ ಒಬ್ಬರು. ಯಾವ ಕಲೆಯೂ ಸುಲಭವಾಗಿ ಒಲಿಯುವುದಿಲ್ಲ. ಅದರ ಹಿಂದೆ ಅಗಾಧವಾದ ಪರಿಶ್ರಮವಿರುತ್ತದೆ. ಸಂಗೀತ ಸಿದ್ಧಿಗಾಗಿ ಈ ದಂಪತಿ ಪಟ್ಟ ಶ್ರಮದ ದಾಖಲೆಯಾಗಿಯೂ ಈ ಪುಸ್ತಕ ವಿಶೇಷವಾಗಿದೆ.

ಸಂಗೀತದ ಹಿನ್ನೆಲೆ ಇರದ ಗೋಕರ್ಣದಂತಹ ಪುಟ್ಟ ಊರಿನಲ್ಲಿ ಹತ್ತು ವರ್ಷಗಳ ಕಾಲ ನೆಲೆಸಿ, ಸಂಗೀತ ಕಲಿಯುವ ಶ್ರಮ ಮತ್ತು ಸಾಹಸ ಇವರಿಗಿರುವ ಸಂಗೀತದ ಬದ್ಧತೆಯನ್ನು ತೋರುತ್ತದೆ. ಇದನ್ನು ಬದ್ಧತೆ ಎಂದರೆ ಸೂಕ್ತವಾಗಲಾರದು ಇವರದು ಸಂಗೀತದ ತಪಸ್ಸು ಎಂದೇ ಹೇಳಬೇಕು. ಈ ದಂಪತಿಗಳ ತಪಸ್ಸಿನ ಫಲವಾಗಿ ಬಾಲ ಪ್ರತಿಭೆಯ ಕಲಾವಿದ ಧನಂಜಯ ಇವರ ಮಗನಾಗಿ ಜನ್ಮ ತಾಳಿದ ಎಂದಾಗ ತಪಸ್ಸು ಎಂಬ ರೂಪಕ ಅರ್ಥಪೂರ್ಣವಾಗುತ್ತದೆ. ತನ್ನ ಮೂರನೇಯ ವಯಸ್ಸಿಗೇ ದೇಗುಲದ ಗಂಟೆ ಶಬ್ದ, ರಸ್ತೆಯ ವಾಹನಗಳ ಶಬ್ದಗಳ ಸ್ವರ ಸ್ಥಾನವನ್ನು ಗುರುತಿಸುವ ಪ್ರತಿಭೆ ಅಸಮಾನ್ಯವಾದುದು. ಇವೆಲ್ಲವೂ ಈ ಪುಸ್ತಕದಲ್ಲಿ ಮೂಡಿ ಬಂದಿವೆ.

ಕೇವಲ ತಮ್ಮ ಕತೆಯೊಂದನ್ನೇ ಹೇಳದೆ ತಾವು ಜೀವನದ ಪಥದಲ್ಲಿ ಸಂಧಿಸಿದ ಅದೆಷ್ಟೊ ಸಾಂಸ್ಕೃತಿಕ ಮಹತ್ವದ ವ್ಯಕ್ತಿಗಳನ್ನು ಮತ್ತು ಸಾಮಾನ್ಯರನ್ನೂ ಇವರು ಇದರಲ್ಲಿ ನೆನೆದಿದ್ದಾರೆ. ಇವರ ನೆನಪಿನ ರಥದಲ್ಲಿ ಒಂದು ಉತ್ತುಂಗದ ತುದಿಯಲ್ಲಿ ಭಾರತ ರತ್ನ ಭೀಮಸೇನ ಜೋಶಿಯವರಿದ್ದರೆ ಇನ್ನೊಂದು ತುದಿಯಲ್ಲಿ ಗೋಕರ್ಣದಲ್ಲಿದ್ದಾಗ ಇವರ ಮನೆಗೆ ಹಾಲು ಹಾಕುತ್ತಿದ್ದ ಬೀರಪ್ಪ ಗೌಡ ಮತ್ತು ಜಾನಕಿ ಗೌಡ ದಂಪತಿಗಳಿದ್ದಾರೆ. ಇದು ಇವರ ವಿನಮ್ರ ವ್ಯಕ್ತಿತ್ವಕ್ಕೆ ಧ್ಯೋತಕವಾಗಿದೆ. ಇವರ ನೆನಪಿನ ಶಕ್ತಿ ಮಾತ್ರ ಅಗಾಧವಾಗಿದೆ. ಇವರು ಬದುಕಿನಲ್ಲಿ ಸಂಧಿಸಿದ ಸುಮಾರು ಸಾವಿರಕ್ಕಿಂತಲೂ ಹೆಚ್ಚಿನ ವ್ಯಕ್ತಿಗಳ ಉಲ್ಲೇಖವನ್ನು ಈ ಪುಸ್ತಕದಲ್ಲಿ ನಾವು ಕಾಣಬಲ್ಲೆವು.

ಪುಸ್ತಕ ತುಂಬ ಆಕರ್ಷಕವಾಗಿ ಬಂದಿದೆ. ಅಲ್ಲದೆ ಇದರ ವಿಶೇಷತೆಯೆಂದರೆ QR Code ಬಳಸಿ ತಂತ್ರಜ್ಞಾನದ ನೆರವಿನಿಂದ ಇದನ್ನು ಕೇವಲ ಓದುಗಬ್ಬವನ್ನಾಗಿಸದೆ ಕೇಳುಗಬ್ಬ ಹಾಗೂ ನೋಡುಗಬ್ಬಗಳನ್ನಾಗಿಯೂ (Multi Media) ಮಾಡಿದ್ದಾರೆ. ಹಾಗಾಗಿ ಐವತ್ತು ವರ್ಷಗಳ ಹಿಂದಿನ ಹಾಡನ್ನೂ ಕೇಳಬಹುದು ಮತ್ತು ಅದಕ್ಕೂ ಹಳೆಯದಾದ ಛಾಯಾಚಿತ್ರವನ್ನೂ ನೋಡಬಹುದಾಗಿದೆ. ನಾನು ನೋಡಿದ ಹಾಗೆ ಕನ್ನಡದಲ್ಲಿ ಇದೊಂದು ವಿನೂತನ ಪ್ರಯೋಗ.

‍ಲೇಖಕರು Admin

December 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: