ಸುರೇಶನ ʼಅಂತಃಕರಣʼದ ಆಳದಲ್ಲಿ..

ವೀರೇಶ್ ತೇರದಾಳ್

ಬಹುಶಃ ಈ ಸುರೇಶನನ್ನು ನೋಡಿದವ್ರು ಇಂವಾ ಒಂದ್ ಪುಸ್ತೇಕ್ ಬರಿತಾನಂತ ಅಂದ್ಕೊಂಡಿರಾಕ್ ಸಾಧ್ಯನ ಇಲ್ಲ..ಕ್ರಿಕೇಟ್ ಆಟಾ ಅಂದ್ರೆ ಪಂಚಪ್ರಾಣ, ಇದೆಲ್ಲಾಕಿಂತ ಹೆಚ್ಚಾಗಿ ಈತನಿಗಿದ್ದ ಜವಾಬ್ದಾರಿಗಳು, ನೂರಾರ್ ಹರದಾರಿ ದೂರದ  ಊರದಷ್ಟೇ ಬದುಕನ್ನ ಜವಾಬ್ದಾರಿಗಳು ಆಕ್ರಮಿಸಿಕೊಂಡ್ ಬಿಟ್ಟಾವು.. ಹೀಂಗಿರುವಾಗ ಸೂರಿ ‘ಅಂತಃಕರಣ’ ಅಂತಾ ಹೆಸರಿನಲ್ಲಿ ಒಂದ್ ಕಥಾ ಸಂಕಲನ ವನ್ನ ಮೊನ್ನೆಯಷ್ಟೇ ಅವರವ್ವನ ಕೈಯಿಂದ ಬಿಡುಗಡೆ ಮಾಡಿಸಿದಾನ…                 

ಬಾಳ್ ಮಂದಿಗೆ ವಿಷಯ ಗೊತ್ತಿರ್ಲಿಕ್ಕಿಲ್ಲ.. ಆದ್ರೆ ಸೂರಿ ಪುಸ್ತೇಕ್ ಬರ್ದಿದ್ ಕೇಳಿ ನಂಗಂತೂ ಬಾಳಂದ್ರ ಬಾಳ್ ಖುಷಿ ಆತು.. ಪುಸ್ತಕಾ ಬಿಡುಗಡೆ ಸಮಾರಂಭಕ್ ನಾನೂ ಹೋಗಿದ್ದೆ.. ಮುಗಿಯೋವರ್ಗೂ ಕಲ್ ಕುಂತ್ಕೊಂಡಾಂಗ ಅಳಗ್ಯಾಡ್ದಾಂಗ್ ಕುಂತ್ಕೊಂಡು, ಬಂದಂತಾ ದೊಡ್ಡಾವ್ರ ಮಾತೆಲ್ಲಾ ಕೇಳಿ, ಸೂರಿಗೆ ವಿಷ್ ಮಾಡಿ, ಅಂತಃಕರಣ ದಿಂದ ಅಂತಃಕರಣ ಕೊಂಡ್ಕೊಂಡು ಮನೆಗೆ ಬಂದೆ.

ಸೂರಿಯ ಪರಿಸ್ಥಿತಿ, ಬದುಕು, ಸರಳತೆ, ಮುಗ್ಧತೆ ಎಲ್ಲವನ್ನೂ ತುಂಬಾ ದಿನಗಳಿಂದ ನೋಡ್ತಾ ಬಂದ ನನಗೆ ಕಥೆಗಾರನಾಗಿಯೂ ಸೂರಿ ಇಷ್ಟವಾಗೋದು ಇದೆ ಕಾರಣಕ್ಕೆ… ಮಲೆನಾಡಿನ ಮಲೆಯಲ್ಲಿಯೇ ಪುಟ್ಟ ಮನೆ ಮಾಡ್ಕೊಂಡು, ಮಲ್ಲಿಗೆಯನ್ನ ಜೊತೆಯಲ್ಲಿ ಇಟ್ಕೊಂಡು ಬದುಕು ಕಟ್ಕೊಂಡವ ಸೂರಿ.. ನಮ್ಮಂತವರನ್ ಕಂಡ್ರೂ ಅದೇ ಮುಗ್ಧತೆಯಿಂದ ‘ಅಣ್ಣಾ’ಅಂತಾ ಮಾತಾಡೋದು. ಮಾತು ತುಂಬಾ ಕಡಿಮಿ..               ಕಥೆಗಳಿಗೆ ಒಳಹೊಕ್ಕಾಗ ತಾ ಕಂಡ, ಅನುಭವಿಸಿದ ಎಲ್ಲವನ್ನೂ ಹಿಡಿದಿಡುವ‌, ಅವಕ್ಕೆಲ್ಲ ಅಕ್ಷರಗಳ ರೂಪಾ ಕೊಟ್ಟು ಚೆಂದ್ ಕಾಣುವಂಗ್ ಹೆಣಕಿ  ಅರಬಿ ಮ್ಯಾಲ, ಉಲನ್ ದಾರದ್ಲೇ ಚಿತ್ರಾ ತಗದು, ನೋಡಿದವ್ರೆಲ್ಲ ಹೇ ಚೆಂದ್ ಬರದಾನು ಅನ್ನುವಂಗ್ ಮಾಡೋದೈತೆಲ್ಲಾ ಬಾಳ್ ತ್ರಾಸಿನ ದಗದ.ಅದನ್ ಸೂರಿ ಅಂತಃಕರಣದೊಳಗ ಮಾಡ್ಯಾನ..             

ಪುಸ್ತೇಕ್ ತೆರದ್ ಒಳಗಡೆ ನೋಡಿದ್ರ, ಅಪ್ಪನಿಗೆ ಅರ್ಪಣೆ ಮಾಡಿದ್ ಕಾಣಿಸ್ತೈತಿ.. ಎರಡ ಸಾಲಾಗ ಇಡೀ ಪುಸ್ತೇಕದ ಉತ್ತರಾ ಅದರಾಗ ಸಿಗತೈತಿ.. ಅಪ್ಪನ್ನ ಬದಕಿಸಿಕೊಳ್ಳಾಕ್ ಆಗೂದಿಲ್ಲಂತ್ ಗೊತ್ತಿದ್ರೂ ಮಾಡೋ ಪ್ರಯತ್ನ, ಕ್ಯಾನ್ಸರ್ ಜಡ್ ಆಗೈತಿ ಅಂತ್ ಡಾಕ್ಟರ್ ಹೇಳ್ದಾಗ ಆಗೋ ದುಃಖ, ಅದನ್ ಮನ್ಯಾವ್ರಕೂಡಾ ಹೇಳ್ಕೊಳ್ಳದ ತಾನ… ಸ್ವತಃ ಅನುಭವಿಸೋದು ಇವೆಲ್ಲ ಸೂರಿಯನ್ ನಮ್ಮ್ ಕಣ್ಣುಂದ್ ತಂದ್ ನಿಲ್ಲಸ್ತಾವು.               

ಮದ್ಲನೇ ಕತಿ ‘ರಾಮೇಗೌಡರ ಸ್ವಪ್ನ ಸುಂದರಿ’ಮುದುಕ ರಾಮೇಗೌಡನನ್ನ ನಮ್ಮೆದುರಿಗೆ ತಂದ್ ನಿಲ್ಲಸ್ತೈತಿ.. ನಿದ್ಯಾಗ ಕಾಣು ಕನಸು ಅಂತಾ ಗೊತ್ತಾಗೋದೇ ಗೌಡಾ ಪಲ್ಲಂಗ್ ಮ್ಯಾಲಿಂದ ಬಿದ್ದಾಗ.               

ಯಾಡ್ನೇದೇ ಪುಸ್ತಕದ ಹೆಸರನ್ನ ಹಣಿಮ್ಯಾಲ್ ಇಟಗೊಂಡ್ ಕುಂಕುಮದಾಂಗ ಕಾಣ್ಸೋ ‘ಅಂತಃಕರಣ’ದ್ದು. ಇದರಾಗ ಕಥೆಗಾರ ಸೂರಿ ಅಪ್ಪನ್ನ ಬಾಳ ಹಚ್ಕೊಂಡಿರ್ತಾನು. ಅಂವಾ ಪಟ್ ಕಷ್ಟಾನ ಕಣ್ಣಾರೆ ಕಂಡಿರ್ತಾನೆ.. ಸಂಸಾರ ಸಾಗ್ಸಾಕ ಅಪ್ಪಾ ಗಾನದೆತ್ತಿನಾಂಗ ದುಡದದ್ದು, ರಾತ್ರಿ ಹಗಲನ್ನದ ದಗದಾ ಮಾಡಿದ್ದು, ಅಂವಗ ಗೊತ್ತಿರಲಾರ್ದಾಂಗ ಬಂದಿದ್ ಜಡ್ಡು, ಅದನ್ ಆರಾಮ್ ಮಾಡ್ಸಾಕ ಪಟ್ಟಿದ್ ಪಡಪಾಟು, ಲಾಸ್ಟ್ ಸ್ಟೇಜ್ನ್ಯಾಗಿದ್ದ ಕ್ಯಾನ್ಸರ್ ದಿಂದಾ ಅಪ್ಪಾ ಒದ್ಯಾಡಿ ಮಗನ ಕೈಯಾಗ ಜೀವಾ ಬಿಟ್ಟಿದ್ದು, ಸತ್ಯ್ಮಾಲ ಊರಾವ್ರೆಲ್ಲ ಆಡೋ ಮಾತು, ಅಪ್ಪಾ ಇನ್ಮುಂದೆ ಇಲ್ಲಾ,ಅವನ್ ಉಳಸ್ಕೊಳ್ಳಾಕ ಆಗ್ಲಿಲ್ಲಾ ಅನ್ನೋ ಕೊರಗು ಕಣ್ಣಂಚಲ್ಲಿ ನೀರ್ ತರಸ್ತೈತಿ..                     

ಮೂರ್ನೆ ಕತಿ’ಪಶ್ಚಾತ್ತಾಪದ ಗಂಟೆ’ ಓದಿದ್ಮ್ಯಾಲೆ ಎಲಾಇವನ ದಿನಾ ನಾನೂ ಅದ ದಾರಿಲಿ ಸಾಲಿಗಿ ಹೋಗಾಂವ.. ನಾನೂ ಸೂರಿನ ನೋಡ್ತಿದ್ದೆ.. ಇಂತಾವೆಲ್ಲ ಆಗ್ಯಾವಲ್ಲ ಅಂತಾ ವಿಚಿತ್ರ ಅನ್ನಿಸ್ತು.. ಇಲೆಕ್ಸೆನ್ ಡ್ಯೂಟಿ ಬಂದಾಗ ತ್ರಾಸ್ ಇದ್ದಾವ್ರುನ್ ಹುಡಕ್ಯಾಡೋ ಮಂದಿ ಬಾಳ್ ಇರ್ತಾರ.. ನನಗ್ ಇಟ್ ಕೊಟ್ರೆ ನಿಮ್ಮ ಡ್ಯೂಟಿ ನಾ ಮಾಡ್ತೀನಂತೇಳಿ ಸಾವಿರಾರ್ ರೂಪಾಯಿ ರೊಕ್ಕಾ ದೇಬ್ಕೊಳ್ಳಾವ್ರನ್ ನಾ ನೋಡೀನಿ.. ಆದ್ರ ಐದ್ನೂರ ರೂಪಾಯಿ ಇಸಗೊಂಡು, ಇಸಗೊಂಡ ಡ್ಯೂಟಿ ಮಾಡಿದ್ ತಪ್ಪಂತ ಗೊತ್ತಾಗಿ ಪಶ್ಚಾತ್ತಾಪ ಪಟ್ ಸೀಮಿ ದುರಗವ್ವನ ಗುಡ್ಯಾಗ ಏದ್ನೂರು ಕೊಟ್ ತಪ್ಪಾತಂತೇಳಿ ಗಂಟಿ ಕಟ್ಟಿದ ಮೊದಲ್ನೇ ವ್ಯಕ್ತಿ ಸೂರಿನೇ..ಬಾಳ್ ಇಷ್ಟಾ ಆತು..               

ನಾಕನೇದು ಅವ್ವನ ಬಗ್ಗೆ ಬರೇದ ‘ಸಾವಿತ್ರಮ್ಮ ಮತ್ತು ಹುಲಿ’ಮಲೇನಾಡಿನ ಕಾಡ್ಯ್ನಾಗ ಜೀವ್ನಾ ಮಾಡೋ ಬಡೂರ್ ಹೆಣ್ಮಕ್ಕಳ ಕಥಿ.. ನಸಕ್ಯ್ನಾಗ ಮೂರಕ್ಕೆದ್ ನಾಕ್ ಮಂದಿ ಹೆಂಗಸೂರ್ ಸೇರಿ ದೊಡ್ಡ ಕಾಡ್ಯ್ನಾಗ ಒಣಗಿದ ಗಿಡಾ ಹುಡುಕಿ ಕಡಕೊಂದ್ ಬಂದ್ ಮಾರಿ ಬಂದಿದ್ದ್ ರೊಕ್ಕದಾಗ ಸಂಸಾರ ಮಾಡೋದು,ಕಾಡು ಪ್ರಾಣಿಗಳು, ಇಟಕಾದ ದಾರಿ, ಕಲ್ಲು, ಮುಳ್ಳು, ಹಳ್ಳಾ ಇವೆಲ್ಲಾ ದಾಟಿ, ಕಾಡ್ ಕಾಯೋ ಪೋಲೀಸರ ಕಣ್ಣಾಗ ಬೀಳ್ದಾಂಗ್, ಕಟಿಗಿ ಕಡಕೊಂಡ ಬರೂದಚತೆಲ್ಲ, ನಿಜ್ವಾಗ್ಲೂ ಜೋಡು ಗುಂಡಿಗಿ ಬೇಕು. ಹೆಣಮಗಳು ಸಾವಿತ್ರಮ್ಮ ಕಟಿಗಿ ತರಾಕ್ ಹೋದಾಗ ಎದುರಿಗಿ ಬರೋ ಹುಲೀನಾ ಧೈರ್ಯದಿಂದ ಓಡಸ್ತಾಳಲ್ಲ ಹೇ ಹೌದ್ ಹಮ್ಮವ್ವಾ ಅಂತ ಅನಸ್ತೈತಿ.                 

ಐದನೇದು’ಶ್ವಾನ ಪುರಾಣ’ಸೂರಿಯ ಪ್ರಾಣಿ ಪ್ರೀತಿಯನ್ನ ತೋರಸ್ತ್ತೈತಿ..ಮನ್ಯಾನಾವ್ರು ಎಟ್ ಬೇದ್ರೂ,ಬ್ಯಾಸರಾ ಮಾಡಿಕೊಳ್ಳದ,ತಿರಿಗಿ ಬೈದ, ಹತ್ತಾರು ನಾಯಿ ಸಾಕೋದು, ಪ್ರೀತಿಯ ಕರಿಯ ನ ಸಾಹಸ, ರೂಬಿಯ ಲವಲವಿಕೆ, ಫೇಸ್ಬುಕ್ ನ್ಯಾಗ ನಾಯಿ ಸಿಕ್ಕಾದೆ ಒಯ್ರಿ ಅಂತಾ ಮೆಸೇಜು, ಮಂದಿ ಅದಕ್ ಮಾಡಿರೋ ಕಮೆಂಟ್ಗಳು, ನನಗೇ ಬೇಕು ನಾಯಿ ಸಾಕ್ತೀನಿ ಅಂತ ಸೂರಿ ಆ ನಾಯಿ ತಂದು ಸಾಕೋದು ಇವೆಲ್ಲಾ ಚೆಂದಾಗಿ ಕಾಣ್ತಾವು.                 

ಆರನೇದು’ಸುಬ್ಬಣ್ಣನ ಉಯಿಲು ಪತ್ರ’ಸಾವ್ಕಾರ್ನಾಗಿದ್ದ ಸುಬ್ಬಣ್ಣ ಸಾದಾ ಸೀದಾ ಬದುಕು ಮಾಡ್ತಿದ್ದ.. ಗರ್ವ, ಸೊಕ್ಕಾ, ಸೆಡುವು ಇರ್ಲಿಲ್ಲ.. ಕಾಡ್ಯ್ನಾಗ ನಡಬಾರಕ ಮೈನಿ ಮಾಡ್ಕೊಂಡಿದ್ದ. ಮಕ್ಕಳು ದೊಡ್ಡಾವ್ರಾದ್ಮ್ಯಾಗ ಮದಿವಿ ಮಾಡಿದಾ. ಮಕ್ಳು ಹೆಂಡ್ರ ಮಾತ್ ಕೇಳಿ ಕಾಡು ಬಿಟ್ ಸಿಟ್ಯಾಗ ಬಂದ್ ಮನಿ ಮಾಡೋದು.. ಅಪ್ಪಾ ಸುಬ್ಬಣ್ಣ ಮಾರ ಅನ್ನೋ ಆಳಿನ ಜೊತಿ ಅಲ್ಲೇ ಇರೋದು, ಕಾಡುಕಳ್ಳರು ಸುಬ್ಬಣ್ಣನನ್ ಸಾಯ್ಸೋದು, ಆಂವಾ ಸಾಯೋಕಿಂತಾ ಮದ್ಲ ತನ್ನ ಆಸ್ತಿನೆಲ್ಲಾ ನಾಯಿ ಹೆಸರಿಗೆ ಬರ್ಸಿರೋದು, ಸುಬ್ಬಣ್ಣ ಸತ್ತಾಗ ಡೌವ್ ಮಾಡ್ಕೋತಾ ಅಳೋ ಮಕ್ಳು ಸೊಸ್ತ್ಯಾರಿಗೆ ಕಡೀಕ್ ಆಸ್ತಿ ನಾಯಿ ಹೆಸರಿಗೆ ಬರ್ದಿದ್ ಗೊತ್ತಾಗೋದು, ನಾಯಿ ಸತ್ಯ್ಮಾಲ ಅನಾಥಾಶ್ರಮ ಕ್ ದಾನಾ ಮಾಡಿಟ್ಟಿದ್ದು ಎಲ್ಲಾ ರೋಚಕತೆ ಅನಸ್ತೈತಿ.               

ಯೋಳ್ನೇದು’ರೂಮ್ ನಂಬರ್ ೦೦೭’ರೋಗಿ ಒಬ್ಬ ತಪ್ಪಾಗಿ ಆ ರೂಮಿಗೋಗಿ ಆಮ್ಯಾಲೆ ಅದರ್ ಸೀಕ್ರೆಟ್ ತಿಳಕೊಂಡ್ ಎದ್ನೋ, ಬಿದ್ನೋ ಅಂತಾ ಮನಿಗಿ ಓಡೋದು, ಇವೆಲ್ಲಾ ತಪ್ಪು ತಿಳುವಳಿಕೆ ಗಳಿಂದಾಗೊ ಅನಾಹುತಗಳನ್ನು ಹಾಗೊ ಅಕಸ್ಮಾತ್ ಆಗೋ ಅನಾಹುತಗಳನ್ನು ತುಲನೆ ಮಾಡಿ ನೋಡೋ ಹಾಗೆ ಮಾಡ್ತಾವು.               

ಎಂಟನೇದು’ಕೇದಗೆಯ ಬೆನ್ನತ್ತಿ’ಮಲೆನಾಡಿ ಕಗ್ಗತ್ತಲ ಕಾಡುಗಳು, ಅಲ್ಲಿಯ ಪಕ್ಷಿ ಪ್ರಾಣಿ ಪ್ರಪಂಚ, ಜೀವಸಂಕುಲಗಳು, ಸಸ್ಯಪ್ರಭೇದಗಳ ಬಗ್ಗೆ ಪುಟ ತೆರೆಯುತ್ತಾ ಹೋಕ್ಕಾವು.. ಕ್ಯಾದಿಗಿ ಹೂವಿನ ವಾಸನಿಗಿ ಹಾವು ಬರ್ತಾವು, ಕ್ಯಾದಿಗಿ ಗಿಡದಾಗೂ ಅವು ಇರ್ತಾವು ಅಂತ ನಮ್ಮೂರಾಗೂ ಹೇಳೋ ಮಾತು, ನಾನೂ ಕ್ಯಾದಿಗಿ ಕೀಳಾಕ್ ಹೋಗಿ ಮೈ ಕೈಗೆಲ್ಲಾ ರಕ್ತಾ ಬರಸ್ಕೊಂಡಿದ್ದ್ ನೆಂಪಾತು..

ಒಟ್ಟಾರೆ ಸೊರಿಯ ಮದಲ್ನೇ ಕಥಾ ಪುಸ್ತಕ ಬಹುಶಃ ಮಲೆನಾಡಿನ ರಾತ್ರಿಗಳಲ್ಲೇ ತೆರೆದು, ರಾತ್ರಿನೇ ಮುಗೀತೈತಿ.. ಅಲ್ಲಿ ರಾತ್ರಿ ಹಗಲಿಗೇನ ಫರಕ್ ಇಲ್ಲಾ.. ಯಾಕಂದ್ರ ಕಾಡು ಜಾಸ್ತಿ,ಹಂಗಾಗಿ ದಿನಾ ಮಳಿ ಹಾಕೊಂಡ್ ಜಡಿತಿರ್ತ್ತೈತಿ.. ಆ ಮಳ್ಯಾಗ ಅಲ್ಲಿನವ್ರು ತಮ್ಮತಮ್ ಕೆಲ್ಸಾ ಮಾಡ್ತಿರ್ತಾರ್.. ಮಲೆನಾಡಿನ ಚಿಗುರೋ ಯುವ ಪ್ರತಿಭೆ ಸೂರಿಯ ಪ್ರಯತ್ನ ಮೆಚ್ಚುವಂತದ್ದೆ… ಆತನಿಗೆ ನಿಮ್ಮೆಲ್ಲರ ಪ್ರೋತ್ಸಾಹ ಇರ್ಲಿ.. ತಮ್ಮನಂತವ ಅಂತೇಳಿ ಏಕವಚನದಲ್ಲಿ ಸಂಭೋದಿಸಿದ್ದೇನೆ ಸಲುಗೆಯಿಂದ..             

ಸುರೇಶ್ನ ಮಲ್ಲಿಗೆ ಮನೆಯಂತಾ ಅಂತಃಕರಣ ಎಲ್ಲೇಡೆ ಪರಿಮಳ ಬೀರ್ಲಿ. ಅಣ್ಣನಂತಾ ಗೆಳೆಯ ಯುವ ಕವಿ ಶರಣಬಸವ ಗುಡದಿನ್ನಿ ಯವರ ಪ್ರೋತ್ಸಾಹ, ಸಲಹೆ ಯಾವತ್ತೂ ಇರ್ಲಿ. ತಮ್ಮಾ ಸುಗೂರೇಶನ ಪುಟವಿನ್ಯಾಸ ಉತ್ತಮವಾಗಿ ಮೂಡಿಬಂದಿದೆ… ಅವನಿಗೂ. ಶುಭಾಶಯಗಳು ನನ್ನಿಂದ. ಶುಭವಾಗಲಿ ತಮ್ಮಾ…

‍ಲೇಖಕರು Admin

November 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: