‘ಬೀದಿರಂಗ’ವೆಂಬ ಭೂಮಿಯ ಹಾಡು

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

ಅಕ್ಷರ ಆಂದೋಲನದ ಸಮಯದಲ್ಲಿ ನಟನಾಗಿ ಈ ಬೀದಿರಂಗಕ್ಕೆ ಅಧಿಕೃತ ಪ್ರವೇಶ ಪಡೆದ ನನಗೆ ಆ ನಂತರ ಅದೊಂದು ಬಗೆಯ ಗೀಳಾಗಿಯೇ ಮಾರ್ಪಟ್ಟಿತು. ನಾನು ಕಟ್ಟಹೊರಟ ಎಷ್ಟೋ ನಾಟಕದಲ್ಲಿ ಅದು ಛದ್ಮವೇಷಧಾರಿಯಾಗಿಯಾದರೂ ಪ್ರವೇಶಪಡೆದಿರುತ್ತದೆ. ಬೀದಿರಂಗಭೂಮಿ ನನ್ನೊಳಗೆ ಆ ಪರಿಯಾದ ಮೋಹವಾಗಿ ಬೆಳೆದಿದ್ದು ಹೇಗೆ ಅಂತ ತಿಳಿಯದಿದ್ದರೂ ಯಾಕೆ ಅಂತ ಈಗ ಹುಡುಕಹೊರಟರೆ ಕೆಲವು ಕಾರಣಗಳನ್ನು ಹೀಗೆ ಪತ್ತೆಹಚ್ಚಬಹುದೇನೊ?.

ನಟನಾಗಿ ನನಗೆ ಅದೊಂದು ಮಿತಿಯಿಲ್ಲದ ಅವಕಾಶ ಎಂದೇ ಯಾವತ್ತೂ ತೋರುವುದು. ಭೂ ವ್ಯೋಮವನ್ನು ಆವರಿಸಿ ಬೆಳೆಯಬಹುದಾದ ಅದರ ‘ಸ್ಪೇಸ್’, ದೇಹ ಮತ್ತು ದನಿಯ ‘ಎನರ್ಜಿ’ಯನ್ನು ರಂಗಸ್ಥಳದ ಆಚೆಯೂ ಚಾಚಿಕೊಳ್ಳುತ್ತ ಎದುರು ಇರುವ ಪ್ರೇಕ್ಷಕರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ, ಅವರನ್ನು ತಲುಪುವ, ಅವರ ಕಣ್ಣ ಹೊಳಪನ್ನು ಅನುಭವಿಸುವ, ಅವರು ಸಹಮತ ಹೊಂದಿದರು ಎಂಬ ಉತ್ತರವನ್ನು ಅಲ್ಲೇ ಪಡೆಯುವ ರೋಚಕತೆ ಅನುಭವಿಸುವ, ನೆಲವನ್ನು ಚಪ್ಪರಿಸುತ್ತ ಚಿಮ್ಮಬಹುದಾದ ಉತ್ಸಾಹದ ಉಲ್ಲಾಸ ಪಡೆಯುವ ಹೀಗೆ ಹಲವು ಅಮೃತಗಳಿಗೆಗಳು ಅಲ್ಲಿ ದೊರಕುತ್ತವೆ; ನಾನದರ ರೋಮಾಂಚನವನ್ನು ಎಷ್ಟೋ ಸಾರಿ ಅನುಭವಿಸಿದೇನೆ. ಅಲ್ಲೇ ಡ್ರಾ ಆಗುವ ಲಾಟರಿಯ ರೋಚಕತೆ ಇದೆ ಅದಕ್ಕೆ.

ಇದರ ವಿನ್ಯಾಸ ನಮ್ಮ ಸ್ಮೃತಿಗಳಲ್ಲಿ ಸಹಜ ಭಾವವಾಗಿ ಉಳಿದುಕೊಂಡಿದೆ. ನಾವು ದಿನನಿತ್ಯ ನೋಡುವ ಅನುಭವಿಸುವ ಪ್ರಕೃತಿ ಸಹಜ ಚಟುವಟಿಕೆಯಲ್ಲೂ ಅದರ ಆಕಾರವಿದೆ. ಹಗಲು ರಾತ್ರಿಯ ದಿನದ ಚಲನೆಯ ಚಕ್ರದ ಗತಿಯಲ್ಲಿ, ಋತುಮಾನಗಳ ಆವರ್ತನದ ರೀತಿಯಲ್ಲಿ, ಬುಡಕಟ್ಟಿನ ಮನೆಗಳ ವಿನ್ಯಾಸದಲ್ಲಿ, ಹಲವಾರು ಆಚರಣಾ ಮೂಲವಾದ ಮಂಡಲಗಳ ಕುಣಿತಗಳ ನಡೆಯಲ್ಲಿ, ‘ಸೆಂಟರ್ ಈಸ್ ದಿ ಗಾಡ್’ ಎಂಬ ಪರಿಕಲ್ಪನೆಯ ಹಲವು ವಿಧದ ತಾಂತ್ರಿಕ ರಂಗೋಲಿಗಳಲ್ಲಿ ಹೀಗೆ ಇವೆಲ್ಲ ವೃತ್ತಗಳೂ ನಮ್ಮೊಳಗಿನ ಲೋಕಗೃಹಿಕೆಯ ಭಾಗವಾಗಿಯೂ ಬೆಳೆದು ಬಂದಿರುವುದೂ ಕಾರಣ ಆಗಿರಬಹುದು.

ಬೀದಿಯಲ್ಲಿನ ಹಲವು ಪ್ರದರ್ಶನಗಳು, ಅವು ದೊಂಬರ ಸರ್ಕಸ್ ಆಟವಿರಲಿ, ಸೈಕಲ್ ಸರ್ಕಸ್ ಪ್ರದರ್ಶನವಿರಲಿ, ಬಸ್ ಸ್ಟ್ಯಾಂಡಿನ ಪಕ್ಕದಲ್ಲಿ ಹಾವಾಡಿಗನ ಆಟವಿರಲಿ ಅಥವಾ ನನ್ನನ್ನು ತುಂಬ ಪ್ರಭಾವಿಸಿದ ಯಕ್ಷಗಾನದ ಪ್ರಮುಖ ಚಲನೆಗಳಿರಲಿ ಎಲ್ಲವೂ ‘ಸರ್ಕಲ್ಲೇ’.

ಇಲ್ಲಿ ಸಂವಹನೆ ನಡೆಯುವದು ನಾಟಕದೊಳಗೆ ಇರುವ ಮನುಷ್ಯ ಮತ್ತು ನಾಟಕದಾಚೆ ಅದನ್ನು ನಿಂತು ನೋಡುತ್ತಿರುವ ಮನುಷ್ಯರ ನಡುವೆ. ಹೀಗಾಗಿ ತಾನೇನೋ ಬಹು ಮುಖ್ಯವಾದ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ ಎಂದು ನಟರಾದ ನಮಗೆ ಅನಿಸಿಬಿಡುತ್ತದೆ. ಹೀಗಾಗಿ ಹಲವು ತ್ಯಾಗಗಳಿಗೂ ನಾವು ಸಿದ್ಧರಾಗುತ್ತೇವೆ.

ಅಕ್ಷರ ಆಂದೋಲನದ ಸಮಯದಲ್ಲಿ ಬೀದಿನಾಟಕದ ತಿರುಗಾಟದಲ್ಲಿರುವಾಗ ಜನರ ಪ್ರತಿಕ್ರಿಯೆಗಳಿಂದ ಉತ್ತೇಜಿತರಾಗಿ ಒಂದೆರಡು ಪ್ರದರ್ಶನ ಹೆಚ್ಚಿಗೆ ನೀಡಿ, ಸಮಯಕ್ಕೆ ಸರಿಯಾಗಿ ಹೋಗಬೇಕಿದ್ದ ಸ್ಥಳಕ್ಕೆ ತಲುಪಲಾಗದೇ ಅಲ್ಲೆಲ್ಲೋ ಶಾಲಾ ವರಾಂಡದ ಮೇಲೆ ಮಲಗಿ, ಹಸಿವಾಯ್ತೆಂದು ಅಲ್ಲಿಯೇ ರಸ್ತೆ ಪಕ್ಕದ ತೆಂಗಿನ ಮರದಿಂದ ಕಾಯಿ ಇಳಿಸಿ ಕಲ್ಲಿನಿಂದ ಜಜ್ಜಿಕೊಂಡು ಅದನ್ನು ತಿಂದು ಹಸಿವನ್ನು ನೀಗಿಸಿಕೊಂಡ ಎಷ್ಟೋ ಸಂದರ್ಭಗಳುಂಟು. ಅವ್ಯಾವುದೂ ಕಷ್ಟಕರ ಅಂತ ಆಗ ಅನಿಸದೇ ಇರುವ ಪವಾಡಕ್ಕೆ ಇವೆಲ್ಲವೂ ಕಾರಣ.

ಮತ್ತೆ, ಇದಕ್ಕಿರುವ ಶೈಕ್ಷಣಿಕ ಸಂಬಂದ. ಸಮಾಜ ಶಿಕ್ಷಣದ ಭಾಗವಾಗಿಯೇ ಇವು ಬಳಕೆಯಲ್ಲಿರುವುದು. ರಂಗಭೂಮಿಗಿರುವ ಶೈಕ್ಷಣಿಕ ಮುಖ ಈ ಪ್ರಕಾರದಲ್ಲಿ ಮುನ್ನೆಲೆಯಲ್ಲೇ ಇದೆ. ಆಚರಣಾತ್ಮಕ ರಂಗಭೂಮಿಯಲ್ಲಿ ಪ್ರಕೃತಿಯಲ್ಲಿ ನಾವು ಯಾವ ಬದಲಾವಣೆ ಆಗಬೇಕೆಂದು ಅಂದುಕೊಳ್ಳುತ್ತೀವೋ ಅದರ ಪುನರಭಿನಯ ಮಾಡುತ್ತೇವೆ ತಾನೆ. ಹೋಮಿಯೋ ಪ್ಯಾತಿಕ್ ಮ್ಯಾಜಿಕ್ ಅಂತಲೂ ಇವನ್ನು ಕರೆಯಲಾಗುತ್ತದೆ. ಸಮಾನ ಪ್ರವರ್ತಕ ತಂತ್ರ. ಜಗತ್ತಿನಾದ್ಯಂತ ಇಂತಹ ಆಚರಣಾ ಪ್ರದರ್ಶನಗಳಿವೆ.

ಡಬ್ಬಿ, ತಗಡು ಬಾರಿಸಿ, ಎತ್ತರದ ಮರ ಏರಿ ನೀರನ್ನು ಚಿಮುಕಿಸಿ ಮಳೆಯನ್ನು ಆವಾಹಿಸುವುದು, ಕೃಷಿ ಆಚರಣೆಗಳ ಪುನರಭಿನಯದ ಮೂಲಕ ಬೆಳೆಯ ಫಲವಂತಿಕೆಗೆ ಪ್ರಾರ್ಥಿಸುವದು ಹೀಗೆ ಹಲವು. ಇವೆಲ್ಲವೂ ಬದಲಾವಣೆಯನ್ನು ಆಶಿಸಿಯೇ ಪ್ರಯೋಗವಾಗುವ ರಂಗಾಚರಣೆಗಳು. ಬೀದಿರಂಗವೂ ಅಷ್ಟೆ. ಸಮಾಜದಲ್ಲಿ ನಿರ್ದಿಷ್ಟ ಬದಲಾವಣೆಯನ್ನು ಉದ್ದೇಶಿಸಿಯೇ ರೂಪುಗೊಂಡಿರುತ್ತದೆ. ‘ಜಗತ್ತನ್ನು ಬದಲಾಯಿಸುವ ಜನರಿಗಾಗಿ ಪ್ರದರ್ಶಿಸಲ್ಪಡುವ ನಾಟಕ ಪ್ರಕಾರ’ ಎಂತಲೇ ಇವು ಪ್ರಸಿದ್ಧ. ಥೇಟ್ ಶಿಕ್ಷಣದ ವ್ಯಾಖ್ಯೆಯಂತೆಯೇ!.

ಈ ಶೈಕ್ಷಣಿಕ ಕಾರಣಗಳಂತೂ ಶಿಕ್ಷಕನಾಗಿ ನನಗೆ ಬಹಳ ಹತ್ತಿರ ಅನಿಸಿದ್ದು ಸಹಜವಿರಬಹುದು. ಜತೆಗೆ ಇದರ ಸರಳ ಮತ್ತು ವೇಗವಾದ ಸ್ವ-ಭಾವ, ಪ್ರೊಸೀನಿಯಂ ರಂಗಭೂಮಿಯಲ್ಲಿ ಮುಖ್ಯ ಅನಿಸಿದ ಎಷ್ಟೋ ಅನುಕೂಲಗಳನ್ನು ಇದು ಬಯಸದೇ ಬಡತನವನ್ನು ಅಪ್ಪುವ ರೀತಿ, ಸಂದುಗೊಂದು, ಹಾದಿ ಬೀದಿ, ತಿಳಿಹಗಲು ಯಾವಾಗಬೇಕಿದ್ದರೂ, ಎಲ್ಲಿ ಬೇಕಿದ್ದರೂ ಎಂಬ ಇದರ ಸ್ಥಿತಿಸ್ಥಾಪಕಗುಣ ಇತ್ಯಾದಿಗಳ ಕಾರಣದಿಂದಾಗಿಯೂ ಹಲವು ಬೀದಿನಾಟಕಗಳನ್ನು ಅಥವಾ ಬೀದಿಯಲ್ಲಿ ನಾಟಕಗಳನ್ನು ನಾನು ಸಮಾಜದಲ್ಲಿ ಎಂತೋ ಅಂತೇ ಶಾಲಾ ಪರಿಸರದಲ್ಲಿಯೂ ಕಟ್ಟಲು ಅನುಕೂಲವಾಯಿತು.

ನಾನು ಈ ಹಿಂದೆ ಕೆಲಸಮಾಡುತ್ತಿದ್ದ ಪ್ರೌಢಶಾಲೆ ಕಚವಿಯಲ್ಲಿ ವಿದ್ಯಾರ್ಥಿನಟರ ಜತೆ ಸೇರಿ ಹಲವಾರು ಬೀದಿನಾಟಕಗಳನ್ನು ಪ್ರಯೋಗಿಸಿದ್ದಿದೆ. ರಾಷ್ಟ್ರೀಯ ಉತ್ಸವಗಳ ಮತ್ತು ರಾಜ್ಯೋತ್ಸವಗಳ ದಿನದಂದು ಶಾಲಾ ಮಕ್ಕಳೆಲ್ಲ ಊರ ಮಧ್ಯದಲ್ಲಿ ನಡೆಯುವ ಧ್ವಜಾರೋಹಣೆಗಾಗಿ ಅಲ್ಲಿಯ ಪಂಚಾಯತಿ ಕಟ್ಟಡದ ಎದುರು ಸೇರುತ್ತಿದ್ದೆವು. ಆ ಸಮಯದಲ್ಲಿ ನಮ್ಮ ಮಕ್ಕಳ ಬೀದಿನಾಟಕ ಖಾಯಂ ಆಗಿತ್ತು.

ಭಗತ್ ಸಿಂಗ್, ಎಲ್ಲವೂ ಸ್ವಾತಂತ್ರ್ಯಕ್ಕಾಗಿ, ದೇವಿಯ ಬೆಳಕು, ಕಸಾಸುರ, ಉಪ್ಪಿನ ಸತ್ಯಾಗ್ರಹ, ಅಂಧೇರ್ ನಗರಿ ಮುಂತಾದ ನಾಟಕಗಳು ಈ ಸಂದರ್ಭಕ್ಕೆಂದೇ ರೂಪಿತವಾಗಿದ್ದವು. ಕ್ರಮೇಣ ಇವುಗಳ ಪ್ರಸಿದ್ಧಿಯಿಂದಾಗಿ ಸುತ್ತಮುತ್ತಲಿನ ಶಾಲಾ ಆವರಣ, ಊರ ಸಮಾರಂಭ, ಸ್ಕೌಟ್ ಮೇಳಗಳು ಹೀಗೆ ಹಲವುಕಡೆ ಆಮಂತ್ರಿತವಾಗಿ ಪ್ರದರ್ಶನಗಳು ನಡೆಯುತ್ತಿದ್ದವು.

ನಟರು ತಮ್ಮೆದುರಿನಲ್ಲಿಯೇ ಪಾತ್ರವಾಗುವ ಮಾಯಕವನ್ನು ಬಿಟ್ಟಗಣ್ಣಿನಿಂದ ಪ್ರೀತಿ ಮತ್ತು ಬೆರಗಿನಿಂದ ಪ್ರೇಕ್ಷಕರು ನೋಡುತ್ತಿದ್ದರೆ ನಟರಾಗಿರುವ ಮಕ್ಕಳ ಒಳಗು ಹಿಗ್ಗುವದನ್ನು, ಅವರು ಅವರನ್ನು ವಿಸ್ತರಿಸಿಕೊಳ್ಳುತ್ತ ನಡೆದುದನ್ನು, ಪ್ರೇಕ್ಷಕರ ಆಕ್ಷಣದ ಪ್ರತಿಕ್ರಿಯೆಯ ಮಾತುಗಳನ್ನು ಅರಗಿಸಿಕೊಂಡು ಪ್ರತ್ಯುತ್ಪನ್ನ ಮತಿಗಳಾಗಿದ್ದನ್ನೂ ಸಾಕಷ್ಟು ಸಲ ಕಂಡಿರುವೆ.

ಆ ಮಟ್ಟಿಗಿನ ಶಿಕ್ಷಣವನ್ನು ನಾನು ತರಗತಿಯ ಕೋಣೆಯೊಳಗೆ ಕಳೆದ ಮೂವತ್ತು ವರ್ಷಗಳಿಂದಲೂ ನೀಡಲಾಗಿಲ್ಲ. ಬೀದಿನಾಟಕ ಶಾಲಾ ಶಿಕ್ಷಣದ ಬಹು ಮುಖ್ಯ ಸಾಧನವಾಗಬಲ್ಲದು; ರಾಜಕೀಯಕಾರಣಕ್ಕೂ.

ನಾನು ಉತ್ತರಕನ್ನಡ ಜಿಲ್ಲೆಗೆ ವರ್ಗವಾಗಿ ವಾಪಾಸು ಬಂದಾಗ ವಿಜಯಮ್ಮ ಬರೆದಿರುವ ಬಂದರೋ ಬಂದರು ಮುಂತಾದ ಬೀದಿನಾಟಕಗಳನ್ನು ಕಾಲೇಜು ವಿದ್ಯಾರ್ಥಿಗಳ ಜತೆ ಹೊನ್ನಾವರದ ಹಲವು ಊರುಗಳಲ್ಲಿ ಪ್ರಯೋಗಿಸಿದ್ದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ನೇತೃತ್ವದಡಿ ಸಂತಸ ಕಲಿಕೆಯ ಚಿಣ್ಣರ ಮೇಳಗಳನ್ನು ಸುಮಾರು ನೂರರಷ್ಟು ಶಾಲೆಗಳಲ್ಲಿ ಸಂಘಟಿಸುವ ಸಂದರ್ಭದಲ್ಲಿ ನಾವು ಆ ಶಿಕ್ಷಕರಿಗೆ ನೀಡುತ್ತಿದ್ದ ರಂಗ ತರಬೇತಿಯನ್ನು ಬಯಲುಗಳಲ್ಲಿ ನೀಡುತ್ತ, ನಿಧಾನವಾಗಿ ಬೀದಿರಂಗದ ಕೆಲವು ಪಟ್ಟುಗಳನ್ನು ಪರಿಚಯಿಸಿ ಅದನ್ನು ಅವರಿಗೆ ಆತ್ಮೀಯಗೊಳಿಸಲು ಯತ್ನಿಸಿದ್ದೆವು.

ಇದೇ ಸಂಘಟನೆಯಡಿ, ಜಿಲ್ಲೆಯ ಯುವಕರೊಂದಿಗೆ ನಮ್ಮ ಸಮಾಜ, ನಮ್ಮ ಜೀವನ, ನಮ್ಮ ಆರ್ಥಿಕತೆ, ನಮ್ಮ ಧರ್ಮ ಮುಂತಾದ ಸಂವಾದ ಗೋಷ್ಠಿಗಳನ್ನು ನಡೆಸತೊಡಗಿದ್ದ ಸಮಯಗಳಲ್ಲಿ ಬೀದಿ ನಾಟಕದ ಒಂದು ಪ್ರಯೋಗ ಕಡ್ಡಾಯವಾಗಿ ಪ್ರದರ್ಶನಗೊಳ್ಳುವಂತೆ ನೋಡಿಕೊಂಡೆವು. ಮುಂದೆ ಸಾಕ್ಷರತೆಯ ಸಮಾಲೋಚನಾ ಸಭೆ, ಶಿಕ್ಷಕರ ಸಮಾಲೋಚನಾ ಸಭೆ, ನವ ಸಾಕ್ಷರರ ಸಭೆ ಹೀಗೆ ಎಲ್ಲೆಲ್ಲಿ ಜನರ ಕೂಡುವಿಕೆ ಇರುತ್ತದೋ ಅದರಲ್ಲೂ ಮುಖ್ಯವಾಗಿ ಶೈಕ್ಷಣಿಕ ಸಂಬಂಧದ ಸೇರುವಿಕೆ ಇರುತ್ತದೋ ಅಲ್ಲೆಲ್ಲ ಬೀದಿನಾಟಕ ಪ್ರಯೋಗಿಸುತ್ತಿದ್ದೆವು.

ಧರ್ಮದ ಸಾಮರಸ್ಯ ಸಾರುವ ಕಲ್ಲು ಬರೇ ಕಲ್ಲು, ನಾವೆಲ್ಲ ಒಂದು ಎಂಬ ನಾಟಕ, ರಾಜಕೀಯ ವಿಡಂಬನೆಯ ಖುರ್ಚಿ ಎಂಬ ನಾಟಕ ಸಾಕಷ್ಟು ಪ್ರಸಿದ್ಧಿಯನ್ನೂ ಗಳಿಸಿತ್ತು. ಆಗೆಲ್ಲ ನಮಗೆ ನಾಟಕದ ವಸ್ತುವನ್ನು ಮುಟ್ಟಿಸುವುದೇ ಮುಖ್ಯ ಧ್ಯೇಯವಾಗಿತ್ತು. ರಂಗಾತ್ಮಕತೆಗೆ ಸಂಬಂಧಿಸಿದಂತೆ ತುಂಬ ಪ್ರಯೋಗಗಳನ್ನೇನೂ ಮಾಡಿದ್ದಿರಲಿಲ್ಲ. ಆ ಬಗೆಯ ಪ್ರಯತ್ನ ಆರಂಭಿಸಿದ್ದು ವಿಜ್ಞಾನ ವರ್ಷಾಚರಣೆಯ 2004ರ ಜಾಥಾದಲ್ಲಿ.

ಚಿಂತನ ಉತ್ತರಕನ್ನಡ ಸಂಘಟನೆಯಿಂದ ಕರಾವಳಿ ವಿಜ್ಞಾನ ಜಾಥಾ ಎಂಬ ಬೀದಿನಾಟಕಗಳ ತಿರುಗಾಟವನ್ನು 2004ರಲ್ಲಿ ಆರಂಭಿಸಿದ್ದಾಗ ಅದರಲ್ಲಿ ಮಕ್ಕಳಿವರೇನಮ್ಮ, ಬಲಿ, ಚೆಲ್ಲಿದರು ಮಲ್ಲಿಗೆಯ ಎಂಬ ನಾಟಕಗಳನ್ನು ಪ್ರಯೋಗಿಸಿದ್ದೆವು. ಆ ಪ್ರಯೋಗಗಳಲ್ಲಿ ಬಣ್ಣ ಬಣ್ಣದ ವೇಲ್‍ಗಳನ್ನು ಮತ್ತು ಕೋಲುಗಳನ್ನು ಬಳಸಿ ಹಲವಾರು ವಿನ್ಯಾಸಗಳನ್ನು ಹುಡುಕಿಕೊಂಡೆವು. ಈ ವಿನ್ಯಾಸಗಳು ಮುಂದೆ ತಿರುಗಾಟದ ಸಮಯದಲ್ಲಿ ಉಂಟುಮಾಡಿದ ಪರಿಣಾಮ ಮಹತ್ವದ್ದಾಗಿತ್ತು. ಅದೊಂದು ಅಧ್ಯಯನದ ಅವಕಾಶವೂ ಆಗಿ ನನಗೊದಗಿಬಂದಿತ್ತು.

ಚಿಂತನ ರಂಗ ಅಧ್ಯಯನ ಕೇಂದ್ರದಿಂದ ನಾವು ಮಾಡಿದ ಎರಡು ಮಹತ್ವದ ಬೀದಿನಾಟಕದ ತಿರುಗಾಟ ನಮ್ಮ ಕಲಾ ಕಲಿಕೆಯ ಬದುಕಿನಲ್ಲಿ ಮಹತ್ವದ ಪಾತ್ರವಹಿಸಿತು. ಒಂದನೇಯ ತಿರುಗಾಟ ಅಸ್ಪೃಶ್ಯತಾ ನಿವಾರಣೆಯ ಆಂದೋಲನದ ಅಂಗವಾಗಿ ಪ್ರೀತಿಪದಗಳ ಪಯಣ ಎಂಬ ಹೆಸರಿನಲ್ಲಿ ನಡೆಸಿದ್ದಾದರೆ, ಇನ್ನೊಂದು ತಿರುಗಾಟ ಸಾಹಿತ್ಯ ಸಮ್ಮೇಳನಕ್ಕಾಗಿ ನಡೆಸಿದ್ದು.

ಪ್ರೀತಿ ಪದಗಳ ಪಯಣ ಜಾಥಾದ ಸಂಘಟಕರಾಗಿ ವಿಠ್ಠಲ ಭಂಡಾರಿ ಮತ್ತು ಯಮುನಾಗಾಂವ್ಕರ್ ಜಿಲ್ಲೆಯಾದ್ಯಂತ ಉತ್ತಮ ಸಂಘಟನೆ ಮಾಡಿದ್ದರು. ಅಲ್ಲಿಯ ಭಾಷಣಗಳು, ಹಾಡುಗಳು, ನಾವು ಪ್ರದರ್ಶಿಸಿದ್ದ ಪೇಂಟಿಂಗ್‍ಗಳು ಮತ್ತು ನಾಟಕಗಳು ಎಲ್ಲವೂ ಯೋಜನಾಬ್ಧವಾಗಿತ್ತು. ಕಿರಣಭಟ್ ಜತೆ ಸೇರಿ ಕಟ್ಟಿದ ಇದರ ನಾಟಕದಲ್ಲಿ ಸಿದ್ದಲಿಂಗಯ್ಯನವರ ಉತ್ತರ ದಿಕ್ಕಿಗನ ರಾಣಿ ಕವನದ ರೂಪಕ, ಹೀಗೊಂದು ಅತ್ಯಾಚಾರ ಎಂಬ ನಾಟಕ, ತುಂಬ ಪ್ರಭಾವಶಾಲಿಯೂ ಆಗಿತ್ತು.

ದೇಹ ದನಿಗಳ ಬಳಕೆಯ ನಿಖರತೆ, ತೀವ್ರವಾದ ಚಲನೆಗಳು ನಿರ್ದಿಷ್ಟ ಪರಿಣಾಮ ಉಂಟು ಮಾಡುತ್ತಿದ್ದವು. ನಿಧಾನವಾಗಿ ನಮ್ಮ ತಂಡದ ನಟರ ಚಿಂತನಾಕ್ರಮ ಬದಲಾದದ್ದು, ಅನ್ಯರೊಂದಿಗೆ ಅವರು ಬೆರೆಯುವ ಬಗೆಯಲ್ಲಿ ಆದ ಮಾರ್ಪಾಡುಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು.
ಉತ್ತರಕನ್ನಡದ ಜೊಯ್ಡಾ ಎಂಬ ಗಡಿನಾಡ ತಾಲೂಕು. ಅಲ್ಲಿ ವಾಸಿಸುವವರಿಗೆ ಶಾಪಗ್ರಸ್ಥ ಸ್ಥಳವಾಗಿ ಮಾರ್ಪಾಡಾಗಿತ್ತು. ಯಾವ ಸೌಲಭ್ಯವೂ ಇಲ್ಲದ ಆ ತಾಣ, ಬಹುತೇಕ ಬುಡಕಟ್ಟು ಜನಾಂಗದಿಂದಲೂ ತುಂಬಿರುವದರಿಂದ ಶೋಷಣೆಯ ಕೇಂದ್ರಸ್ಥಾನವೂ ಆಗಿತ್ತು.

ನಮ್ಮ ಜಿಲ್ಲೆಯ ಜಾಗ್ರತ ಪ್ರಜ್ಞೆಯಂತಿರುವ ಡಾ.ಆರ್.ವಿ.ಭಂಡಾರಿಯವರು ಆ ವರ್ಷ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ‘ತಾನು ಅಧ್ಯಕ್ಷನಾಗಬೇಕೆಂದರೆ ಜೊಯ್ಡಾದಲ್ಲಿಯೇ ಸಮ್ಮೇಳನ ನಡೆಸಬೇಕೆಂಬ’ ಶರತ್ತು ವಿಧಿಸಿಯೇ ಅವರು ಒಪ್ಪಿದ್ದರು. ನಾವೆಲ್ಲ ಅಂದರೆ ನಮ್ಮ ಜಿಲ್ಲೆಯ ಮುಕ್ಕಾಲು ಪಾಲು ಜನರು ಜೊಯ್ಡಾ ಎಂಬ ನಮ್ಮ ಜಿಲ್ಲೆಯ ತಾಲೂಕನ್ನು ಅದುವರೆಗೂ ನೋಡಿಯೇ ಇರಲಿಲ್ಲ. ಈ ಸಮ್ಮೇಳನ ಅಲ್ಲಿಯ ಜನರ ಸಮಸ್ಯೆಗಳ ಕುರಿತು ಮುಖ್ಯ ಚರ್ಚೆಯನ್ನು ಎತ್ತಬೇಕೆಂಬುದು ಎಲ್ಲರ ಆಶಯ.

ಹೀಗಾಗಿ ನಾವು ಸಮ್ಮೇಳನದ 10 ದಿನ ಮೊದಲು ‘ಉತ್ತರ ಕಾಣದ ಕನ್ನಡ’ ಎಂಬ ಬೀದಿನಾಟಕ ಸಿದ್ಧಪಡಿಸಿಕೊಂಡು ಜಿಲ್ಲೆಯ ಹಲವೆಡೆ ಮತ್ತು ಮುಖ್ಯವಾಗಿ ಜೊಯ್ಡಾದ ಹಳ್ಳಿಗಳಲ್ಲಿ ನಾಟಕ ಪ್ರದರ್ಶಿಸುತ್ತ ಅವರನ್ನೆಲ್ಲ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದ್ದೆವು. ಜೊಯ್ಡಾದ ಪರಿಸರ, ಅಲ್ಲಿಯ ಜನರ ಬದುಕನ್ನು ನೇರವಾಗಿ ನೋಡಿದ ಅನುಭವ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸಿತ್ತು ಎನ್ನಬಹುದೇನೋ. ಪ್ರೇಕ್ಷಕ ಪ್ರಧಾನ ರಂಗನೆಲೆಯ ಸರಿಯಾದ ಅರಿವು ಆಗತೊಡಗಿದ್ದೂ ಆಗಲೇ.

ಜನ ನಾಟ್ಯಮಂಚ್ ತಂಡದ ಔರತ್ ನಾಟಕದಲ್ಲಿಯ ಆರಂಭದಲ್ಲಿ ಬಳಕೆಯಾದ ಮಾರ್ಝಿ ಅಹ್ಮದಿ ಊಸುರೆ ಅವರ ಕವನವನ್ನು ಕಿರಣಭಟ್ ನಾನೊಬ್ಬ ಹೆಣ್ಣು ಎಂಬ ಹೆಸರಿನಲ್ಲಿ ಅನುವಾದಿಸಿದ್ದರು. ಆ ಕವನವನ್ನು ತಿಳವಳ್ಳಿಯ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗಾಗಿ ಹಾಗೂ ರಾಜ್ಯ ಮಟ್ಟದ ಮಹಿಳೆ ಮತ್ತು ಸಂಸ್ಕೃತಿ ಶಿಬಿರದ ಮಹಿಳೆಯರಿಗಾಗಿ ನಿರ್ದೇಶಿಸಿದ್ದೆ.

ಮುಂದೆ ಸಮುದಾಯದ ನಿರ್ದೇಶಕರ ತರಬೇತಿ ಕಮ್ಮಟದಲ್ಲಿ ಅದನ್ನು ಕಲಿಕಾ ಪಠ್ಯವಾಗಿ ಬಳಸಿಕೊಂಡಾಗ, ಜನನಾಟ್ಯ ಮಂಚ್ ತಂಡದ ಸುಧನ್ವ ದೇಶಪಾಂಡೆ ಜತೆಗಿದ್ದು ಬೀದಿನಾಟಕದ ಸೂಕ್ಷ್ಮಗಳ ಕುರಿತು ಸಾಕಷ್ಟು ಚರ್ಚೆ ನಡೆಸಿದ್ದರು. ಆ ಕವನ ಮತ್ತೆ ಮತ್ತೆ ಬೇರೆಬೇರೆ ಲಯದಲ್ಲಿ ಭಿನ್ನ ಭಿನ್ನ ಸಂಯೋಜನೆಯಲ್ಲಿ ಬೆಳೆಯುತ್ತಲೇ ಇರುವುದನ್ನು ನೋಡುತ್ತ ವಿಸ್ಮಯಪಟ್ಟಿದ್ದೇನೆ. ಆಡುವವರು ಯಾರು ಎಂಬುದರ ಮೇಲೆಯೂ ಪಠ್ಯ ವಿಕಾಸಗೊಳ್ಳುವ ಬಗೆಗೂ ಅದು ನನಗೆ ಅಧ್ಯಯನದ ಮಾದರಿಯೇ ಆಗಿದೆ.

ಬೀದಿನಾಟಕದ ಅತ್ಯುತ್ತಮ ಪ್ರದರ್ಶನ ನೋಡಲು ನನಗೆ ದೊರೆತಿದ್ದು ಮೈಸೂರು ರಂಗಾಯಣದ ಬಹುರೂಪಿ ಉತ್ಸವದಲ್ಲಿ. ಜನನಾಟ್ಯ ಮಂಚ್ ಸದಸ್ಯರನ್ನು ಪ್ರಸನ್ನ ಆಮಂತ್ರಿಸಿದ್ದರು. ಅವರು ಹೇಳಿನೀವ್ಯಾರ ಕಡೆ ನಾಟಕವನ್ನು ಪ್ರಯೋಗಿಸಿದ್ದರು. ಮುಂದೆ, ಹಿಂದಿಯಲ್ಲಿದ್ದ ಆ ನಾಟಕವನ್ನು ಐ.ಕೆ.ಬೊಳುವಾರು ಅವರು ಕನ್ನಡಕ್ಕೆ ರೂಪಾಂತರಿಸಿಕೊಟ್ಟರು. ಆ ಪಠ್ಯವನ್ನು ಬೇರೆಬೇರೆ ಬಗೆಯಲ್ಲಿ ಹಲವು ತಂಡಗಳ ಜತೆ ಪ್ರಯೋಗಿಸಿದೆ.

ಕೆಲಸಗಾರ/ಗುಲಾಮ ಮತ್ತು ರಾಜನ ಕಥೆ ಇದು. ಮೂರು ಹಂತದಲ್ಲಿ ಈ ಕಥೆ ಬೆಳೆಯುತ್ತದೆ. ಪ್ರತಿ ಹಂತದಲ್ಲಿ ಕಥೆಯನ್ನು ನಿಲ್ಲಿಸಿ ಪ್ರೇಕ್ಷಕರೊಂದಿಗೆ ಸಂಭಾಷಿಸಬಹುದಾದ ಅವಕಾಶವಿದೆ ಈ ನಾಟಕದಲ್ಲಿ. ಆರಂಭದಲ್ಲಿ ರೂಢಿಗತ ನಂಬಿಕೆಯಂತೆ ರಾಜನ ಪರವಾಗಿಯೇ ವಾದ ಮಾಡುವವರೆಲ್ಲರೂ ಕತೆ ಬೆಳೆದ ಹಾಗೆ ತಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ವಿಮರ್ಶಿಸಿಕೊಳ್ಳುವಂತೆ ಅವರನ್ನು ಚಿಂತನೆಗೆ ಹಚ್ಚುವ ತುಂಬ ಜಾಣ್ಮೆಯ ಸಂಯೋಜನೆ ಇರುವ ಕಥನವಿದು.

ಹಾವೇರಿಯಲ್ಲಿ ಬಂಡಾಯ ಸಾಹಿತ್ಯದ ವಿಚಾರ ಸಂಕೀರಣದ ಸಂದರ್ಭದಲ್ಲಿ ಈ ನಾಟಕವನ್ನು ಸತೀಶ ಕುಲಕರ್ಣಿ ಸಂಘಟಿಸಿದ್ದರು. ಬರಗೂರು ರಾಮಚಂದ್ರಪ್ಪ ಅಂದಿನ ಮುಖ್ಯ ಅತಿಥಿ. ವಿಚಾರ ಸಂಕಿರಣ ಮುಗಿಸಿ ಹೊರಗಿನ ಬಯಲಿನಲ್ಲಿ ನಾಟಕ ನಡೆಸಿದೆವು. ಕಥನದ ಪ್ರತಿ ಹಂತದಲ್ಲಿಯೂ ನಾನು ನಿರೂಪಕನಾಗಿ ಪ್ರೇಕ್ಷಕರೊಂದಿಗೆ ಸಂಭಾಷಿಸುತ್ತಲಿದ್ದೆ. ಬರಗೂರರಿಗೆ ಮಧ್ಯ, ಚರ್ಚೆಯಲ್ಲಿ ಮಾತನಾಡುವ ಮನಸ್ಸಿದ್ದು ಅವರು ಆ ಕುರಿತು ಸೂಚನೆ ನೀಡಿದರೂ ನಾನು ಬೇಕೆಂದೇ ಅವರನ್ನು ಮಾತನಾಡಗೊಡಲಿಲ್ಲ. ನಾಟಕದ ಅಂತಿಮ ಘಟ್ಟದಲ್ಲಿ ‘ಒಂದೆಡೆ ರಾಜ, ಇನ್ನೊಂದೆಡೆ ಗುಲಾಮ ಇದ್ದಾನೆ, ಹೇಳಿ ನೀವ್ಯಾರಕಡೆ?’ ಅನ್ನುವ ಮಾತಿದೆ. ನಾನು ಆ ಮಾತು ಮುಗಿದ ತಕ್ಷಣ ನಾಟಕೀಯವಾಗಿ ಅವರಿಗೆ ಮೈಕ್ ಕೊಟ್ಟೆ.

ಅದುವರೆಗೂ ಉತ್ತೇಜಿತರಾಗಿ ತುಡಿಯುತ್ತಿದ್ದ ಅವರು, ವ್ಯವಸ್ಥೆ ಪೋಷಿಸುವ ಚಿಂತನಾ ಕ್ರಮದ ವಿರುದ್ಧ ನೋಡಬೇಕಾದ ನೋಟದ ಬಗ್ಗೆ ವಿವರಿಸುತ್ತಾ, ಕಥೆಯ ಉದ್ದಕ್ಕೂ ಅಲ್ಲಿಯ ಗುಲಾಮ ಎದುರಿಸುವ ಹಲವು ಸಂದರ್ಭಗಳು ಬೇರೆ ಬೇರೆ ಸ್ವರೂಪದಲ್ಲಿ ತಮ್ಮ ಜೀವನದಲ್ಲಿಯೂ ಹೇಗೆ ಎದುರಾಗಿತ್ತು ಎಂಬುದನ್ನು ವರ್ಣಿಸುತ್ತಾ “ನಾನು ಗುಲಾಮನ ಕಡೆ” ಎಂದು ಅವರು ಘೋಷಿಸಿದಾಗ ಅರ್ಧಘಂಟೆ ಕಳೆದಿತ್ತು.

ಅವರ ಮಾತು ಅಂದು ಸೇರಿದವರಿಗೆ ನಾಟಕದ ಭಾಗವಾಗಿಯೇ ಕಂಡಿತ್ತು. ಅವರು ನಾಟಕದಲ್ಲಿನ ನಿರೂಪಕನ ಕೆಲಸವನ್ನು ಅವರಿಗೆ ತಿಳಿಯದೇ ಮಾಡಿದ್ದರು. ಆಗತಾನೆ ಮುಗಿದಿದ್ದ ಸಭಾಂಗಣದ ಒಳಗಿನ ಅವರ ಭಾಷಣಕ್ಕಿಂತ ಇದು ತುಂಬ ಹೃದ್ಯವಾಗಿತ್ತೆಂದು ಹಲವರು ಅಭಿಪ್ರಾಯಪಟ್ಟರು. ನಿಜ. ನೋಡುವವರಿಗೆ ಇದು ನಮ್ಮದೇ ಕತೆ ಅಂತ ಅನಿಸುವಹಾಗೆ ಮಾಡಬಹುದಾದ ಬಹುದೊಡ್ಡ ಅವಕಾಶವಿದು.

ಆಗ ನಾನು ಶಿವಮೊಗ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜತೆ ನಾಟಕ ಕಟ್ಟುತ್ತಿದ್ದೆ. ನಮ್ಮನ್ನು ಅಗಲಿದ ಸಿ.ಜಿ.ಕೆ. ಅವರಿಗೆ ಬೀದಿನಾಟಕಗಳ ಮೂಲಕ ಗೌರವ ನಮನ ಸಲ್ಲಿಸಲು ಸಮುದಾಯ ಬಯಸಿತ್ತು. ಶಶಿಧರ ಬಾರಿಘಾಟರ ಆಮಂತ್ರಣದ ಮೇರೆಗೆ ಶಿವಮೊಗ್ಗ ಸಮುದಾಯದ ಸಂಘಟನೆಯಡಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಸಿದ್ಧಮಾಡಿ ಬೆಂಗಳೂರಿಗೆ ಕೊಂಡೊಯ್ದಿದ್ದೆ. ಅಲ್ಲಿಯ ಸಂಸ ಬಯಲು ರಂಗಮಂದಿರದ ನೆಲದ ಮೇಲೆ ನಾಟಕಗಳ ಪ್ರಯೋಗಕ್ಕೆ ಸಿದ್ಧತೆ ಆಗಿತ್ತು.

ನಾಡಿನ ಬೇರೆಬೇರೆ ತಂಡಗಳು ಆಗಮಿಸಿದ್ದವು. ನಾವಾಗ ಪ್ರಯೋಗಿಸಿದ್ದು ದುಂಡಿರಾಜರ ಕವನ ‘ಇಷ್ಟುಬೇಗ ಮದುವೆಯಾಕವ್ವ’ ಆಧರಿಸಿದ ಪ್ರಯೋಗ. 20 ನಿಮಿಷ ಅವಧಿಯದು. ಆ ಕವನದ ಜತೆ ಬಿ.ಎಚ್.ಶ್ರೀಧರರ ‘ಪುಟ್ಟದೊಂದು ಪಟ್ಟಣ’ ಕವನವನ್ನೂ ಜೋಡಿಸಿದ್ದೆ. ಹಾಡುಗಳ ನಡುವಿನ ತಾಣದಲ್ಲಿ ಸ್ಥಾಪಿತ ಮೌಲ್ಯಗಳ ವಿಡಂಬನೆ, ಲೇವಡಿ, ಹಾಸ್ಯ ಎಲ್ಲವೂ ಇತ್ತು. ಎಂಟರಿಂದ ಹತ್ತು ಭಿನ್ನಬಗೆಯ ಕಾವ್ಯಾತ್ಮಕ ದೃಶ್ಯ ಸಂಯೋಜನೆ.

‘ಬಲೂನು ಮತ್ತು ಸೂಜಿ’ ಬಳಸಿ ಹೆಣ್ಣಿನ ಕನಸು ಭಗ್ನಗೊಳ್ಳುವ ರೂಪಕವನ್ನು ಸೃಷ್ಟಿಸಿದ್ದೆ ಅದು ಎಲ್ಲರನ್ನೂ ಗಮನಸೆಳೆದಿತ್ತು. ಆ ಸಮಯದಲ್ಲಿಯೇ ನಮಗೆ ಬೆಲ್ಚಿ, ಪತ್ರೆಸಂಗಪ್ಪನ ಕೊಲೆ ಮುಂತಾದ ನಾಟಕಗಳನ್ನು ನೋಡಲು ಸಿಕ್ಕಿದ್ದು. ನಾಟಕಗಳು ಮುಗಿದ ನಂತರವೂ ಸಿ.ಜಿ.ಕೆ.ನೆನಪಿನ ಮಾತುಗಳು, ರಂಗಗೀತೆಗಳು ಸರಿಸುಮಾರು ಮುಂಜಾನೆಯವರೆಗೂ ನಡೆದಿತ್ತು. ಬಯಲಿನ ಗುಂಗು ಸಂಪೂರ್ಣ ಆವರಿಸಿದ ದಿನವುದು.

ಶಿವಮೊಗ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ನಿರ್ದೇಶಿಸಿದ ಮೆಟ್ಟಿಲ ಕತೆಗಳು, ನ್ಯಾಯದ ಬಾಗಿಲು, ಬದುಕು ಬಂದೀಖಾನೆ, ಮಹಿಳಾಭಾರತ ಮುಂತಾದ ನಾಟಕಗಳು ಬೀದಿನಾಟಕದ ದಟ್ಟ ಛಾಯೆಯಿಂದಲೇ ರೂಪಿಸಿದ್ದಾದರೆ ಕ್ಲಾಸಿಕಲ್ ಮಾದರಿಯ ನಾಟಕವೊಂದನ್ನು ಬೀದಿರಂಗದ ಸಾಧ್ಯತೆಬಳಸಿ ಮಾಡಿದ ಪ್ರಯೋಗ ‘ಪುರೂರವ’. ಸಾಂಕೇತಿಕ ಆಹಾರ್ಯಗಳನ್ನು ಬಳಸುತ್ತ ನಟರದೇಹವನ್ನೇ ಆತ್ಯಂತಿಕ ಸಾಧನವಾಗಿ ರೂಪಿಸಿಕೊಂಡು ನಿರ್ಮಿಸಿದ ಇದರ ಶಿವಮೊಗ್ಗ, ಉತ್ತರಕನ್ನಡ, ಮೈಸೂರು ಮೊದಲಾದ ಕಡೆ ಜರುಗಿತು.

ಇನ್ನೊಮ್ಮೆ ಹೀಗಾಯ್ತು. ದಿವಂಗತ ಡಿ.ಕೆ.ಚೌಟರ ಮೂರು ಹೆಜ್ಜೆ ಮೂರು ಲೋಕ ನಾಟಕವನ್ನು ಕಟ್ಟುವಾಗ ನನ್ನ ಪ್ರಜ್ಞೆಗೂ ಮೀರಿ ಅದರಲ್ಲಿ ಬೀದಿರಂಗದ ಅಂಶಗಳು ಸೇರಿಕೊಂಡಿದ್ದವು. ಅದರ ಪ್ರಯೋಗವಾಗುವಾಗ ಪ್ರೇಕ್ಷಕರು ಸಮೀಪದಲ್ಲಿರುವ ಆಪ್ತರಂಗಭೂಮಿಯ ಸಂದರ್ಭವಾದರೆ ಅದು ಪರಿಣಾಮಕಾರಿಯಾಗಿಯೂ, ಪ್ರೇಕ್ಷಕ ದೂರದ ಅಪ್ಪಟ ಪ್ರೊಸೀನಿಯಂನಲ್ಲಿಯಾದರೆ ನೀರಸವಾಗಿಯೂ ಕಾಣುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೇನೆ. ಪ್ರತಿಯೊಂದು ರಂಗವಿನ್ಯಾಸವೂ ಅದು ನಾಟಕ ರೂಪುಗೊಳ್ಳುವದಕ್ಕೆ ಮಾತ್ರವಲ್ಲದೇ ಪ್ರೇಕ್ಷಕರನ್ನೂ ಸೇರಿಯೇ ರೂಪುಗೊಳ್ಳಬೇಕಾಗುತ್ತದೆ ಎಂಬ ಪಾಠವೂ ನನಗಾಯ್ತು.

ಬೀದಿನಾಟಕಗಳ ಕುರಿತು ತುಂಬ ಅಪಕಲ್ಪನೆಗಳಿವೆ. ವ್ಯವಸ್ಥೆಯ ವಿರುದ್ಧ ಎದ್ದುನಿಂತ ಪ್ರಕಾರಕ್ಕೇ ಒಂದು ವ್ಯವಸ್ಥೆಯ ಬಂಧನ ತೊಡಿಸಿದ ಮಡಿವಂತರೂ ಇದ್ದಾರೆ. ಎಲ್ಲರೂ ವರ್ತುಲವಾಗಿಯೇ ಕುಳಿತುಕೊಳ್ಳಬೇಕು, ಘೋಷಣೆ ಇರಲೇ ಬೇಕು, ತಮಟೆಯನ್ನು ಬಳಸಲೇ ಬೇಕು, ರಂಗಪರಿಕರಗಳನ್ನು ಬಳಸಲೇ ಕೂಡದು, ಆ ಕ್ಷಣದ ಸಮಸ್ಯೆಗೆ ಮಾತ್ರ ಸ್ಪಂದಿಸುವ ವಿಷಯ ವಸ್ತು ಹೊಂದಿರಬೇಕು ಇತ್ಯಾದಿ. ಬಂಗಾಳದಲ್ಲಿ ವಿದ್ಯಾರ್ಥಿ ಒಕ್ಕೂಟ ಟ್ಯಾಗೋರರ ‘ಕಾಲೇರ್ ಜಾತ್ರಾ’ ದಂತಹ ಕ್ಲಾಸಿಕ್ ಅನ್ನು ಬೀದಿಯಲ್ಲಿ ಪ್ರಯೋಗಿಸಿದ್ದು ಒಂದು ಮಾದರಿಯಾದರೆ, ದೆಹಲಿ ಸಾರಿಗೆ ಸಂಸ್ಥೆ ಬಸ್ ದರವನ್ನು ಹೆಚ್ಚಿಸಿದ ಕಾರಣಕ್ಕಾಗಿ ಆ ಹೆಚ್ಚಳ ಜಾರಿಯಾದ 24 ತಾಸಿನ ಒಳಗೆ ಡಿ.ಟಿ.ಡಿ.ಸಿ. ಕಾ ದಾಂದ್ಲಿ ಎಂಬ 12 ನಿಮಿಷದ ನಾಟಕವನ್ನು ಜನನಾಟ್ಯಮಂಚ್ ಪ್ರಯೋಗಿಸಿದ್ದೂ ಒಂದು ಮಾದರಿ.

‘ಚಿತ್ರಾ’ ತಂಡ ಬೀದಿಯಲ್ಲಿ ಮಾಡಿದ ನಾಟಕಗಳೂ ಒಂದು ಮಾದರಿಯಾದರೆ, ಸಮುದಾಯದ್ದೂ ಇನ್ನೊಂದು ಮಾದರಿ. ಅದು ತಕ್ಷಣದ ಪ್ರತಿಕ್ರಿಯೆಯೇ, ಪೋಸ್ಟರ್ ಆಗಿಯೇ ಇರಬೇಕೆಂದಿಲ್ಲ. ‘ಜನಂ’ ತಂಡವೇ ಹೇಳುವಂತೆ ಕೆಲವು ನಾಟಕ ಸಿದ್ಧತೆಗೆ 3 ತಿಂಗಳು ತೆಗೆದುಕೊಂಡಿದ್ದೂ ಇದೆ. ಸಮುದಾಯ ರೆಪರ್ಟರಿಗಾಗಿ ನಾನು ನಿರ್ದೇಶಿಸಿದ ‘ಗೋಡೆಗೆ ಕತೆ ಹೇಳಿ’ ಎಂಬ ಬೀದಿ ನಾಟಕವು ಕೆಲವು ಪರಿಕರಗಳನ್ನೂ, ಬೇರೆ ಬೇರೆ ‘ಲೇವಲ್’ ಗಳನ್ನೂ, ಹಲವು ಬಗೆಯ ಸಂಗೀತ ಮತ್ತು ಚಲನೆಗಳನ್ನೂ ಬಳಸಿಕೊಂಡಿತ್ತು.

ತುಂಬ ಜನ ಹಿರಿಯರಿಗೆ ಅದು ಕಸಿವಿಸಿ ಉಂಟುಮಾಡಿತ್ತು. ಬೆಂಗಳೂರಿನಲ್ಲಿ ಪ್ಯಾಲಿಸ್ಟೈನ್ ತಂಡ ಮತ್ತು ಜನಂ ಸೇರಿ ಸಿದ್ಧಪಡಿಸಿದ ನಾಟಕದ ಜತೆ ನಮ್ಮ ಈ ನಾಟಕವೂ ಪ್ರಯೋಗ ಆದಾಗ ದೆಹಲಿಯಿಂದ ಆಗಮಿಸಿದ್ದ ಪ್ರಸಿದ್ಧ ನಿರ್ದೇಶಕಿ, ಗೊಂಬೆಯಾಟದ ದಂತಕತೆಯಂತಿರುವ ಅನುರೂಪರಾಯ್ ನಮ್ಮ ಬೀದಿನಾಟಕದ ವಿನ್ಯಾಸನೋಡಿ ಹರ್ಷಿಸಿದ್ದರು.

‘ಬೀದಿ’ ಅನ್ನುವದು ನಮ್ಮ ಪ್ರಜ್ಞೆಗೂ ಸಂಬಂಧಿಸಿದ್ದು. ಈ ಪ್ರಜ್ಞೆ ಮೂಡುತ್ತ ಹೋದಹಾಗೆ ಅದು ನಮ್ಮ ಸಂವೇದನೆಯಾಗಿ, ಜೀವನದೃಷ್ಟಿಯಾಗಿ ಮಾರ್ಪಾಡಾಗ ತೊಡಗುತ್ತದೆ. ನಿಜ. ಇದನ್ನು ರಾಜಕೀಯ ರಂಗಭೂಮಿ ಎನ್ನಬಹುದು. ಏಕೆಂದರೆ ಇದು ಪ್ರೇಕ್ಷಕರನ್ನು ಸುರಕ್ಷಿತ ಅಂತರದಿಂದ ನೋಡುವ, ವಿಮರ್ಶಿಸುವ ಸವಲತ್ತಿನಿಂದ ಕೆಳಗಿಳಿಸುತ್ತದೆ ಮತ್ತು ತನ್ನ ನೋಟ, ದೃಷ್ಟಿ ಇದನ್ನು ಪ್ರೇಕ್ಷಕರಿಗೆ ವರ್ಗಾಯಿಸುತ್ತದೆ. ಆ ಮೂಲಕ ಪ್ರೇಕ್ಷಕ ನಾಟಕದ ಭಾಗವಾಗುವಂತೆ, ವೈಯಕ್ತಿಕ ಅಭಿಪ್ರಾಯ, ಸಿದ್ದಾಂತ, ಸಂಘರ್ಷಗಳನ್ನು ಸಾಮಾಜಿಕ ವೇದಿಕೆಯಲ್ಲಿ ಮೌಲ್ಯಮಾಪಿಸಿ ಕೊಳ್ಳುವಂತೆ ಒತ್ತಾಯಿಸುತ್ತದೆ.

ಈ ಬೀದಿ ಪ್ರಜ್ಞೆ ಉಂಟುಮಾಡುವ ರಾಜಕೀಯ ಎಚ್ಚರ ಮತ್ತು ಇದರ ಪ್ರೇಕ್ಷಕ ಸಾಮಿಪ್ಯದ ವಿನ್ಯಾಸ ಎರಡನ್ನೂ ಬೀದಿನಾಟಕ ರೂಪದಲ್ಲಿಲ್ಲದ ಪ್ರೊಸೀನಿಯಂ ಮಾದರಿಯ ನಾಟಕಗಳಲ್ಲಿಯೂ ಬಳಸಿದ ಹಲವು ಉಧಾಹರಣೆಗಳಿವೆ. ಈ ಬಗೆಯ ಕೆಲವು ಪ್ರಯೋಗಗಳನ್ನು ನಾನು ಪ್ರಯತ್ನಿಸುತ್ತಲೇ ಇರುವೆ. ಕಾವ್ಯರಂಗ, ಗಾಂಧಿಪಯಣ ಇತ್ಯಾದಿ ರೂಪಗಳು ಈ ಬಗೆಯ ಪ್ರಯತ್ನದವೇ ಆಗಿದೆ.

ಬೀದಿ ರಂಗಭೂಮಿಗೆ ಅಪಾರ ಸಾಧ್ಯತೆ ಇದೆ. ಅದನ್ನು ರಂಗಶಾಲೆಗಳು ವೃತ್ತರಂಗಭೂಮಿ ಅನ್ನುವ ಪರಿಕಲ್ಪನೆಯಲ್ಲಾದರೂ ಪರಿಚಯಿಸಬೇಕು. ನಟ ತನ್ನನ್ನು ವಿಸ್ತರಿಸಿಕೊಳ್ಳೋದಕ್ಕೆ ಇದಕ್ಕಿಂತ ಉತ್ತಮ ತರಬೇತಿ ಇನ್ನೊಂದಿಲ್ಲ.

ವೈಯಕ್ತಿಕವಾಗಿ ಪಾತ್ರದ ಮನಃಶಾಸ್ತ್ರದೊಳಗೆ ಇಳಿ, ಕತ್ತಲಲ್ಲಿ ಪಿಸುಗುಟ್ಟು, ಮಂದ್ರದನಿಯನ್ನು (ಬೇಸ್ ವೈಸ್ ) ಅಭ್ಯಾಸಮಾಡು, ಬೆಳಕಿನ ಸೋರ್ಸ್ ಪಡೆಯುವದನ್ನು ಅಭ್ಯಸಿಸು . . ಎಂಬುದನ್ನು ಮಾತ್ರವಲ್ಲ, ಬೀದಿಗೆಳೆ, ಬೀದಿಯಲ್ಲಿ ನಿಲ್ಲು, ಬೀದಿಗೆ ಬಾ ಇತ್ಯಾದಿ ನುಡಿಗಟ್ಟುಗಳನ್ನೂ ಅಭ್ಯಸಿಸಬೇಕು.

ಬೀದಿ ರಂಗಭೂಮಿಗೆ ರಂಗಸ್ಥಳದ ಪ್ರತ್ಯೇಕತೆ ಮಾತ್ರವೇ ಸಾಲದು ಅದರ ಜತೆಗೆ “‘ಹೇಳಿ ನೀವ್ಯಾರ ಕಡೆಗೆ” – ಎಂಬ ಮ್ಯಾಕ್ಸಿಂ ಗಾರ್ಕಿಯ ಮಾತು,
“ಅವರು ಕೇಳುತ್ತಾರೆ ನೀನೇಕೆ ಹಾಡುವುದಿಲ್ಲ ಹೂಗಳ ಕುರಿತು ಹಕ್ಕಿಗಳ ಕುರಿತು, ನಾನು ಹೇಳುತ್ತೇನೆ ನೋಡಿ ಬೀದಿಯಲಿ ರಕ್ತವಿದೆ” – ಎಂಬ ನೆರೂಡನ ಕವನದ ಸಾಲುಗಳು, “ನಮಗೆ ಬೇಕಿರುವುದು ರಂಗವೇದಿಕೆಯಲ್ಲ ಬೀದಿ ತಿರುವು, ಪ್ರೇಕ್ಷಕರಲ್ಲ ಸಮುದಾಯ” – ಎಂಬ ಪಿಸ್ಕೇಟರ್ ಅವರ ನುಡಿ ಅರ್ಥವಾದಲ್ಲಿ ಬೀದಿಯಲ್ಲಿ ನಾಟಕವಾಡುವ ಸ್ಥೈರ್ಯವಾದರೂ ಬಂದೀತು. ಪದ ಮಾಂತ್ರಿಕ ಬೇಂದ್ರೆಯವರು ಬೀದಿಯಲ್ಲಿ ಸಿಕ್ಕ ಪದಗಳ ತಲೆಬಾಚಿ ಮಡಿಲಲಿರಿಸಿಕೊಳ್ಳುತ್ತಿದ್ದರಂತೆ.

‍ಲೇಖಕರು ಶ್ರೀಪಾದ್ ಭಟ್

October 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ಅನುಭವಗಳು ಹರಳುಗಟ್ಟಿದ ಬರಹ.
    ಇನ್ನೊಂದಿಷ್ಟು ವಿವರಗಳು ಬೇಕಿತ್ತೇನೊ?

    ಪ್ರತಿಕ್ರಿಯೆ
  2. ಕಿರಣ ಭಟ್

    ಸಾಕ್ಷರತಾ ಜಾಥಾ ದ ನಾಟಕಗಳ ಅನುಭವವೇ ದೊಡ್ಡ ಕತೆಯಾಗಬಹುದೇನೋ.
    *ಕಾಕತಾಳೀಯವೆಂಬಂತೆ ನಾನು ಅನುವಾದಿಸಿದ ‘ ಔರತ್’ ಇಂದೇ ಅವಧಿಯಲ್ಲಿ ಪ್ರಕಟವಾಗಿದೆ.
    ಹೊಸ ನೋಟಗಳ ಬರಹ.

    ಪ್ರತಿಕ್ರಿಯೆ
  3. Sudha ChidanandGowda

    “ಅಲ್ಲಿ ಕಲಿಸಿದ ಪಾಠಗಳನ್ನು ಕ್ಲಾಸಿನಲ್ಲಿ ಕಲಿಸಿಲ್ಲ” ಎಂಥಾ ಮಾತು!
    ಬೀದಿನಾಟಕಗಳ ಪ್ರೇಕ್ಷಕಿಯಾಗಿ ತುಂಬ ಪ್ರಭಾವಕ್ಕೊಳಗಾಗಿದ್ದೆ. ಇದೀಗ
    ಬೀದಿಯೂ ಬದುಕೂ ಶಿಕ್ಷಣವೂ ಒಂದಾದ ಕಲೆಗಾರನ ಒಟ್ಟುಮೊತ್ತದ ಅಭಿವ್ಯಕ್ತಿಯನ್ನು ಓದಿದಂತಾಯಿತು. ಜನಮಧ್ಯದ, ಸಮಸ್ಯೆಕೆಂದ್ರಿತ, ಅಷ್ಟು ಸುಲಭವಲ್ಲದ ದಾರಿ ಬೀದಿನಾಟಕಗಳದ್ದು. ಅವುಗಳ ಅಭಿನಯವೂ ಜಟಿಲ, ಅನುಭವಗಳ ಕಥನ ಸೊಗಸಾಗಿ ಮೂಡಿಬಂದಿದೆ.

    ಪ್ರತಿಕ್ರಿಯೆ
  4. Kavya Kadame

    ಬೀದಿನಾಟಕವನ್ನು ಅಲ್ಲೇ ಡ್ರಾ ಆಗುವ ಲಾಟರಿಗೆ ಹೋಲಿಸಿದ್ದು ಚೆನ್ನಾಗಿದೆ. ಬೀದಿ ನಾಟಕದ ವಿನ್ಯಾಸವೇ ಅಷ್ಟು ಆಕರ್ಷಕವಾದುದು. ರಂಗಭೂಮಿಯ ಸಮೃದ್ಧ ಅನುಭವಗಳು, quote ಗಳು, ಉಪಕತೆಗಳ ಮೂಲಕ ಈ ಬರಹ ಪ್ರಜ್ಞೆಯ ಭಿತ್ತಿಯನ್ನು ವಿಸ್ತರಿಸುವಂತಿದೆ.  

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: