ಬದಲಾಗುತ್ತಿರುವ ಮಾನವೀಯ ಸಂಬಂಧಗಳು

ಡಾ.ಎಂ.ಎಸ್. ವಿದ್ಯಾ

ಮಾನವ, ಮನುಜ, ಮನುಷ್ಯ, ಮೊದಲಾದ ಪದಗಳು ಉದ್ಭವಿಸಿರುವುದು ‘ಮನು’ವಿನಿಂದ ಎನ್ನಬಹುದಾದರೂ ‘ಮನಸ್ಸು’ ಇರುವುದರಿಂದ ಮಾನವ ಎನ್ನುವುದು ಹೆಚ್ಚು ಸಮರ್ಪಕ. ‘ಮನಸ್ಸು’ ಇನ್ನೊಬ್ಬರ ಜೊತೆ ಸ್ನೇಹ ಸಂಬಂಧ ಬೆಳೆಸಲು ಹಾತೊರೆಯುತ್ತದೆ. ತತ್ವಜ್ಞಾನಿ ಅರಿಸ್ಟಾಟಲ್ ಶತಮಾನಗಳ ಹಿಂದೆಯೇ ‘ಮನುಷ್ಯ ಸಾಮಾಜಿಕ ಜೀವಿ’ ಎಂದು ಹೇಳಿರುವುದರ ಅಂತರಾರ್ಥವು ಅದೆಯೇ.

ಪರಸ್ಪರ ‘ಬಂಧ’ವನ್ನು ಒಳಗೊಂಡಿರುವುದೇ ಸಂಬಂಧ. ಮನುಷ್ಯನನ್ನು ಇತರೆ ಜೀವಿಗಳಿಗಿಂತ ಭಿನ್ನವಾಗಿಸಿರುವುದೂ ಸಂಬಂಧಗಳೇ. ತನ್ನ ಜೊತೆಗಿರುವ ಜನರೊಂದಿಗೆ, ಪರಿಸರದೊಂದಿಗೆ, ಇತರೆ ಜೀವಿಗಳೊಂದಿಗೆ, ತನಗೆ ಹಾಗೂ ಜಗತ್ತಿಗೆ ಒಳಿತಾಗುವಂತೆ ಸಂಬಂಧ ಇಟ್ಟುಕೊಳ್ಳುವ ಬುದ್ಧಿ ಜೀವಿ ಮನುಷ್ಯ.

ಆದರೆ ಕಾಲಚಕ್ರ ಉರುಳಿದಂತೆ, ಮಾನವನು ಆದಿ ಮಾನವನಿಂದ ಆಧುನಿಕ ಮಾನವನಾಗುತ್ತಾ ಬಂದಂತೆ ಮನುಷ್ಯ ಸಂಬಂಧಗಳ ವ್ಯಾಖ್ಯೆಗಳು ಬದಲಾದವು. ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬದೆಡೆಗೆ ಪರಿವಾರ ವ್ಯವಸ್ಥೆ ಸಾಗಿದಂತೆ ಮಾನವೀಯ ಸಂಬಂಧಗಳು ನಿಧಾನವಾಗಿ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳಲಾರಂಭಿಸಿದವು. ಜೀವನ, ಆಚಾರ-ವಿಚಾರಗಳು ನಗರೀಕರಣಗೊಳ್ಳುತ್ತಿರುವುದು ಪ್ರಮುಖ ಕಾರಣವಾಯಿತು.

ಪ್ರಾಚೀನ ಕಾಲವನ್ನು ಗಮನಿಸಿದರೆ, ತನ್ನ ಸುತ್ತಮುತ್ತಲಿನ ಜನರಷ್ಟೇ ಅಲ್ಲದೇ, ಪರಿಸರದೊಂದಿಗೆ ಇಟ್ಟುಕೊಂಡ ಸಂಬಂಧಗಳು ಪ್ರತಿ ಕ್ಷಣದಲ್ಲೂ ಮಾನವನ ಜೀವನ ಪ್ರೀತಿಗೆ ಜ್ವಲಂತ ಸಾಕ್ಷಿಗಳಾಗಿವೆ. ಪ್ರಕೃತಿ, ಸುತ್ತಲಿನ ಪರಿಸರ ಮತ್ತು ಮನುಷ್ಯ ಸಂಬಂಧಗಳು ಸತ್ವಯುತವಾಗಿದ್ದರೆ ಯಾವುದೇ ರೀತಿಯ ಕೆಡುಕಾಗಲು ಸಾಧ್ಯವಿಲ್ಲ. ಆದರೆ ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ ಮಾನವನು ಎಡುವುತ್ತಿರುವುದು ಕಾಣುತ್ತದೆ.

ಮನುಷ್ಯ ತಾನು, ತನ್ನದು ಎಂಬ ಸಂಕುಚಿತ ಭಾವ ಬೆಳಸಿಕೊಂಡು, ಎಲ್ಲವು ತನಗೊಬ್ಬನಿಗೇ ಇರಲಿ. ಇತರರಿಗೆ, ಸಮಾಜಕ್ಕೆ, ದೇಶಕ್ಕೆ, ಜಗತ್ತಿಗೆ ಏನಾದರೆ ‘ತನಗೇನು?’ ಎಂಬ ಮನೋಭಾವದಿಂದ, ‘ದುಡ್ಡೇ ದೊಡ್ಡಪ್ಪ’ ಎಂದಾಗಿರುವ ಸಮಾಜದಲ್ಲಿ ಹಣಕ್ಕಿಂತಲೂ ಮಿಗಿಲಾದದ್ದು ಮನುಷ್ಯ ಪ್ರೀತಿ ಮತ್ತು ಸಂಬಂಧಗಳು ಎಂಬ ಅರಿವೇ ಇಲ್ಲದಂತಾಗಿರುವುದು ದುರಂತ.

ಜಾಗತೀಕರಣದ ನಂತರವಂತೂ ಉದ್ಯೋಗ ನಿಮಿತ್ತ ನಗರವಾಸಿಗಳಾಗಿರುವವರ ಸಂಖ್ಯೆಯೇ ಇಂದು ಹೆಚ್ಚಾಗಿದೆ. ಅಸಂಖ್ಯಾತರಾಗಿ ನಗರ ಸೇರುತ್ತಿರುವ ಜನರು ತಮ್ಮ ಹಳ್ಳಿಯನ್ನು ಬಿಟ್ಟೊಡನೆ ಅಲ್ಲಿನ ಸಂಬಂಧದ ಕೊಂಡಿಗಳನ್ನು ಕಳಚಿಕೊಳ್ಳುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಕೊನೆಗೆ ತನಗೆ ತಾನೇ ಅಪರಿಚಿತನಾಗಿ ಬದುಕುವ ಪ್ರಸಂಗ ಮಾನವನಿಗೆ ಬರವ ದಿನ ದೂರವಿಲ್ಲ.

ಕೆಲವರು ಪ್ರಯೋಗಾತ್ಮಕವಾಗಿ ‘ಹೆನ್ರೀ ವಾಲ್ಡನ್’ ರೀತಿಯಲ್ಲಿ ಏಕಾಂತತೆಯನ್ನು ಬಯಸಿ, ಒಬ್ಬರೇ ಜೀವಿಸಲು ಪ್ರಯತ್ನಿಸಿರಬಹುದು. ಆದರೆ ಅಂತಹವರೂ ಸಹ ಸಮಾಜದಿಂದಲೇ ಬಂದದ್ದು. ಗೌತಮ ಬುದ್ಧನೂ ಕೂಡ ಪಿ.ಲಂಕೇಶ್ ಅವರು ಬರೆದಿರುವಂತೆ ‘ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ’ ಒಳಗಾಗಿ ಸಮುದಾಯದ ನಡುವೆಯೇ ಬಾಳಿದ. ಒಟ್ಟಿನಲ್ಲಿ ಎಲ್ಲಾ ಮಾನವರ ಬದುಕಿನ ಅಡಿಪಾಯ ‘ಸಂಬಂಧ’. ಅವರ ಭಾವನೆ, ಸಂಪರ್ಕ, ಭೌತಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ಅಸ್ಮಿತೆಗಳು ಸಂಬಂಧಗಳ ಆಧಾರದ ಮೇಲೆಯೇ ನಿಂತಿರುವುದು.

ಕುಟುಂಬ ವ್ಯವಸ್ಥೆ’

ಆದಿ ಮಾನವನಿಂದ ಬೆಳವಣಿಗೆಯನ್ನು ಗಮನಿಸುತ್ತ ಬಂದರೆ ಮೊದಲು ಕಾಡಿನಲ್ಲಿ, ನಂತರ ಬಯಲಿನಲ್ಲಿ, ‘ಕುಟುಂಬ ವ್ಯವಸ್ಥೆ’ ಎನ್ನುವ ಸ್ವರೂಪ ಇಂದಿನಂತೆ ಇಲ್ಲದಿದ್ದರೂ, ಅವನು ಗುಂಪಿನಲ್ಲಿಯೇ ಜೀವಿಸುತ್ತಿದುದ್ದನ್ನು ಓದಿದ್ದೇವೆ. ಬೆಂಕಿ, ಚಕ್ರ, ಕೃಷಿ ಅನ್ವೇಷಣೆಗಳ ನಂತರ ಪ್ರತ್ಯೇಕ ಕುಟುಂಬ ವ್ಯವಸ್ಥೆ ಪ್ರಾರಂಭವಾಯಿತು, ಕಾಲ ಕಳೆಯುತ್ತ ಬಂದ ಹಾಗೆ, ಆಯಾಯಾ ಪ್ರದೇಶಗಳಲ್ಲಿ ಒಂದು ಜನಾಂಗ ಆಗಿ, ಅವರದೇ ಆದ ಸಮಾಜ ಕಟ್ಟಳೆಗಳು ಪ್ರಾರಂಭವಾದವು. ಕುಟುಂಬ ವ್ಯವಸ್ಥೆ ಪ್ರಧಾನ ಸ್ಥಾನ ಪಡೆಯಿತು.

ಮೊದಲು ಅವಿಭಕ್ತ ಕುಟುಂಬದ ಪದ್ಧತಿಯಿಂದ ಆರಂಭವಾದ ಮನುಷ್ಯನ ಸಂಸಾರದಲ್ಲಿ ಒಬ್ಬ ಹಿರಿಯ, ಅವನ ಕೆಳಗೆ ಮಕ್ಕಳು, ಮೊಮ್ಮಕಳು, ಹೀಗೆ ಎಲ್ಲರೂ ಒಟ್ಟಾಗಿ ಬಾಳುವಂಥ ಸ್ಥಿತಿ ಇತ್ತು. ಅದಕ್ಕೆ ಅದರದೇ ಆದ ಲಾಭ ನಷ್ಟಗಳೂ ಇದ್ದವು. ಕಾಲಕಳೆದಂತೆ, ಹಳ್ಳಿಗಳಿಂದ ನಗರಕ್ಕೆ ವಲಸೆ ಬಂದಂತಹ ಜನರು ಆ ಜೀವನಕ್ಕೆ ಹೊಂದಿಕೊಂಡು, ವಿಶಾಲ ಬದುಕಿನಿಂದ ಒಂದು ರೀತಿಯಲ್ಲಿ ಸಂಕುಚಿತ ಬಾಳ್ವೆಯ ಅನಿವಾರ್ಯತೆಗೆ ಒಳಗಾಗಿ ವಿಭಕ್ತ ಕುಟುಂಬವಾಯಿತು.

ಈ ವ್ಯವಸ್ಥೆಯಲ್ಲಿಯೂ ಲಾಭ ನಷ್ಟಗಳಿದವು. ಏನೇ ಆಗಲಿ ಮನುಷ್ಯ, ಸಂಬಂಧಗಳನ್ನು ಬಿಟ್ಟಿರಲು ಸಾಧ್ಯವಿಲ್ಲ. ಆದರೆ ಪ್ರಾದೇಶಿಕ ಸಂಬಂಧ, ರಕ್ತ ಸಂಬಂಧ, ಜಾತಿ ಮತಗಳ ಸಂಬಂಧ, ಪ್ರೀತಿ ವಾತ್ಸಲ್ಯಗಳ ಸಂಬಂಧ – ಕಾಲದಿಂದ ಕಾಲಕ್ಕೆ ನಾನಾ ರೀತಿಯ ಬದಲಾವಣೆಗಳನ್ನು ಪಡೆಯಿತು.

ಜಾಗತಿಕರಣವಾದ ಮೇಲೆ ಸಂಬಂಧಗಳ ವ್ಯಾಖ್ಯಾನ ಮತ್ತಷ್ಟು ಬದಲಾವಣೆ ಕಂಡಿತು. ಆರ್ಥಿಕ ಸ್ಥಿತಿ ಏರು ಪೇರಾಗಿ ಸಂಸಾರ ಸಾಗಿಸಲು ಗಂಡ ಹೆಂಡತಿಯರು ಹಗಲೂ ರಾತ್ರಿ ದುಡಿಯಬೇಕಾಗಿ ಬಂದಿತು. ತಮ್ಮ ಮಕ್ಕಳನ್ನು ‘ಸತ್ಪ್ರಜೆ’ಗಳನ್ನಾಗಿ ಮಾಡುವುದಕ್ಕಿಂತ ಸಂಪಾದನೆಯ ಯಂತ್ರಗಳನ್ನಾಗಿ ಮಾಡಲು ಅಪ್ಪ-ಅಮ್ಮಂದಿರು ಸತತವಾಗಿ ದುಡಿದರು. ಕಾಲವೇ ಅದನ್ನು ಬಯಸತೊಡಗಿತ್ತು. ಪರಿಣಾಮವಾಗಿ ಮಕ್ಕಳಿಗೆ ಅಜ್ಜಿ-ತಾತಂದಿರ, ಬಂಧು-ಬಳಗದ ಬಾಂಧವ್ಯದ ಪುಷ್ಟಿ ಸಿಗಲಿಲ್ಲ.

ಬದಲಾವಣೆ ಜಗದ ನಿಯಮ’

ಕಾಲಕ್ಕೆ ತಕ್ಕ ಹಾಗೆ ಮಾನವ ಬದುಕಬೇಕು ನಿಜ. ನಗರಗಳಲ್ಲೂ ಮೊದಲು ವಠಾರ, ಸ್ವತಂತ್ರವಾದ ಮನೆಗಳಿದ್ದದ್ದು, ಈಗ ಅರ್ಪಾಟ್‍ಮೆಂಟ್‍ಗಳಾಗಿ ಬದಲಾವಣೆಗೊಂಡಿವೆ. ಸಾಲ ಸುಲಭವಾಗಿ ಸಿಗುವುದರಿಂದ ಎಲ್ಲರೂ ಸ್ವಂತ ಮನೆ, ಕಾರು ಹಾಗೂ ಉಪಭೋಗದ ವಸ್ತುಗಳನ್ನು ಸಾಲದ ಆಧಾರದ ಮೇಲೆ ತೆಗೆದುಕೊಂಡು ಜೀವನದ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಸಾಲ ತೀರಿಸುವ ಬಾಧೆ ಕೆಲಸದ ಒತ್ತಡಗಳಿಂದ ಮನೆಯವರೊಂದಿಗೇ ಸಂಭಾಷಣೆ ಕಷ್ಟವಾಗಿರುವಾಗ, ಇನ್ನು ನೆರೆಹೊರೆಯವರ ಜೊತೆ ಬೆರೆಯುವುದಂತೂ ಅಸಾಧ್ಯದ ಮಾತು.

1990 ರ ದಶಕದ ನಂತರ ಜಾಗತೀಕರಣದಿಂದ ಇಡೀ ಜಗತ್ತೇ ಒಂದು ಗ್ರಾಮವಾಗಿದೆ. ಎಲ್ಲಾ ದೇಶಗಳನ್ನು ವಿವಿಧ ಸಂಪರ್ಕ ಸಾಧನೆಗಳು ಹತ್ತಿರ ತಂದಿದೆ. ಅಪ್ಪ-ಅಮ್ಮನನ್ನು ನೋಡಲು ಆಗದ್ದಿದವರು ಅಂರ್ತಜಾಲ ಸಹಾಯದಿಂದ ಮಾತಾಡುವಂತಾಗಿದೆ. ಅಭಿವೃದ್ಧಿ, ಬೆಳವಣಿಗೆ ಸಮಾಜಕ್ಕೆ ಬಹಳ ಮುಖ್ಯ. ಆದರೆ ನಾವು ಅದಕ್ಕೆ ತೆರುತ್ತಿರುವ ಬೆಲೆಯು ಅಪಾರ.

ಎಲ್ಲದರಲ್ಲಿಯೂ ಪಾಶ್ಚಾತ್ಯರನ್ನು ಅನುಸರಿಸುವ ನಾವು ಮದರ್ಸ್ ಡೇ, ಫಾದರ್ಸ್ ಡೇ, ಇತ್ಯಾದಿ ದಿನಗಳನ್ನು ಆಚರಿಸುವ ಮಟ್ಟಿಗೂ ತಲುಪಿದ್ದೇವೆ. ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ಸಂದರ್ಭವೇ ಹಾಗಿದೆ. ವಯಸ್ಸಾದ ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿ ಬಿಡುವುದು (ಈಗಂತೂ ಆಧುನಿಕ ವೃದ್ಧಾಶ್ರಮ) ಅನಿವಾರ್ಯವಾಗಿದೆ. ಮನೆಯಲ್ಲಿ ನೋಡಿಕೊಳ್ಳುವರು ಯಾರೂ ಇಲ್ಲ. ಇಲ್ಲಿ ಆರ್ಥಿಕ ಸಬಲತೆ ಪ್ರಧಾನ ಪಾತ್ರ ವಹಿಸುತ್ತದೆ.

ಆರ್ಥಿಕವಾಗಿ ಹಿಂದುಳಿದವರ ಕಥೆ ಒಂದು ವ್ಯಥೆಯಾಗಿದೆ. ಆಸ್ತಿ ವ್ಯಾಮೋಹ, ಕೀರ್ತಿ ಶನಿ, ಅಧಿಕಾರದಲ್ಲಿ ದೊಡ್ಡ ಹೆಸರು ಮಾಡುವುದು, ಸಮಾಜದಲ್ಲಿ ಪ್ರತಿಷ್ಠಿತವಾಗಿ ಬದುಕುವುದು- ಹೀಗೆ ನಾನಾ ಉದ್ದೇಶಗಳನ್ನು ಗುರಿಯಾಗಿಸಿ ಬದುಕು ಸಾಗಿಸುತ್ತಿರುವಾಗ ಮನುಷ್ಯನಿಗೆ ಸಂಬಂಧಗಳನ್ನು ನಿಭಾಯಿಸುವ ತಾಳ್ಮೆಯಾದರೂ ಎಲ್ಲಿದೆ?

ಹಬ್ಬ ಹಾಗೂ ಇತರ ಪದ್ಧತಿಗಳ ಆಚರಣೆಗೆಯೂ ಬದಲಾವಣೆ ಕಂಡಿದೆ. ಮೊದಲು ಹಬ್ಬ ಹರಿದಿನಗಳಲ್ಲಿ ಒಟ್ಟಿಗೆ ಕೂಡುತ್ತಿದ್ದವರು ಈಗ ಅವರವರ ಮನೆಯಲ್ಲಿಯೇ ಆಧುನಿಕ ರೀತಿಯಲ್ಲಿಯೇ ಆಚರಿಸುವಂತಾಗಿದೆ. ಕಾಲವೆಂಬ ‘ಹಕ್ಕಿ ಹಾರುತ್ತಿದೆ ನೋಡಿದಿರಾ’ ಎಂದು ಬೇಂದ್ರೆಯವರು ಹೇಳಿದಂತೆ ವರ್ಷಗಳು ಹಾರಿ ಹೋಗುತ್ತಿವೆ. ‘ಮಾನವನು ಚಂದ್ರ, ಅಂತರಿಕ್ಷದ ಜೊತೆ ಸಂಬಂಧಗಳನ್ನು ಬೆಳೆಸಲು ಯತ್ನಿಸುತ್ತಿರುವನು, ಆದರೆ ಭೂಮಿಯ ಮೇಲಿನ ಸಂಬಂಧವನ್ನು ಮರೆಯುತ್ತಿರುವನು’ – ಇದು ಎಂಥ ವಿಪರ್ಯಾಸ.

ಜಾಗತೀಕರಣದ ದುಷ್ಪರಿಣಾಮಗಳು

ಈಗಂತೂ ಜಾಗತೀಕರಣದ ಸಂಪರ್ಕದಿಂದ ಸೌಲಭ್ಯಗಳು ಒದಗಿದ ಹಾಗೆಯೇ ರೋಗಗಳೂ ಹರಡುತ್ತಿವೆ. ಈ ಮಹಾ ರೋಗಗಳು ಮನುಷ್ಯರನ್ನು ಹತ್ತಿರ ತರುವುದನ್ನು ಬಿಟ್ಟು ದೂರವಾಗಿಸುತ್ತಿವೆ. ಪರಸ್ಪರರನ್ನು ಮುಟ್ಟಬಾರದ ಸ್ಥಿತಿ- ದೂರದಿಂದ ಮಾತನಾಡಬೇಕು, ಪರಸ್ಪರರನ್ನು ಭೇಟಿ ಮಾಡಬಾರದು, ಮಕ್ಕಳು ಹೊರಗೆ ಹೋಗಿ ಆಟ ಆಡಬಾರದು….‘Social Distancing’-‘ಸಾಮಾಜಿಕ ಅಂತರ’ ಎನ್ನುವ ಪದವೇ ದೊಡ್ಡ ವಿಡಂಬನೆ.

ಸಮಾಜ ಎನ್ನುವುದೇ ಜನರಿಂದ ಕೂಡಿ ಆಗಿರುವುದು ಅದರಲ್ಲಿ ಪರಸ್ಪರ ದೂರವಿರುವುದು ಎಂದರೇನು? ಆದರೆ ಅದು ಈಗ ಅನಿವಾರ್ಯ. ವಿಪರ್ಯಾಸ ಎಂದರೆ ಒಂದು ರೀತಿಯಲ್ಲಿ ಇಡೀ ವಿಶ್ವವನ್ನೇ ಈ ಪಿಡುಗು ‘ಒಂದಾಗಿಸಿದೆ’ ಎನ್ನಬಹುದು. ಮಹಾ ಪಿಡುಗು ಸಾವು, ನೋವಿನಲ್ಲಿ ಪ್ರಪಂಚವನ್ನು ಒಂದಾಗಿಸಿದರೂ ಯಾರೂ ಹತ್ತಿರ ಸೇರದಂತೆ ಮಾಡಿದೆ. ಎಲ್ಲವೂ ಅಯೋಮಯವಾಗಿದೆ.

ಪ್ರೀತಿ ಇಲ್ಲದ ಮೇಲೆ

ಇದು ಸಾಲದೆ ಎಂಬಂತೆ ಗಡಿಗಳಿಗಾಗಿ ಯುದ್ಧ, ಜಾತಿ ಮತಗಳ ನಡುವೆ ಕದನ, ಅಧಿಕಾರಗಳಿಗೆ ಸಮರ – ಹೀಗಿರುವಾಗ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಲು ಹೇಗೆ ಸಾಧ್ಯ? ಡಾ.ಜಿ.ಎಸ್.ಶಿವರುದ್ರಪ್ಪನವರ ಕವನದ ಸಾಲುಗಳು ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ’ ನೆನಪಿಗೆ ಬರುತ್ತದೆ. ಅಡ್ಡ ಗೋಡೆಗಳನ್ನು ಒಡೆದರೆ ಮಾತ್ರ ಪ್ರೀತಿ ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಕೃತಿಯಿಂದ ಮಾನವ ಕಲಿಯುವುದು ಬೇಕಾದಷ್ಟಿದೆ. ಅವುಗಳಲ್ಲಿರುವ ಪರಸ್ಪರ ಹೊಂದಾಣಿಕೆ ನಮಗೆ ಮಾದರಿಯಾಗಬೇಕು.

ಅನಗತ್ಯವಾಗಿ ಹಣ ಕೂಡಿಹಾಕುವುದನ್ನು ಬಿಟ್ಟು, ಮನುಷ್ಯನು, ಸಂಬಂಧದ ಭದ್ರತೆಯತ್ತ ಗಮನ ನೀಡಬೇಕಾಗಿರುವುದು ಈಗ ಬಹಳ ದೊಡ್ಡ ಅವಶ್ಯಕತೆ. ಯಂತ್ರದಂತೆ ಬದುಕದೇ ಮನಸ್ಸುಗಳ ಸಾಂಗತ್ಯದಿಂದ ನಾವು ನೆಮ್ಮದಿಯ ಬದುಕನ್ನು ಪಡೆಯಬೇಕು. ಎಲ್ಲಕ್ಕಿಂತ ಪ್ರಧಾನವಾಗಿ ನಮ್ಮ ಆವಿಷ್ಕಾರಗಳು ಮಾನವೀಯ ಗುಣಗಳನ್ನು ಗುರಿಯಾಗಿ ಹೊಂದಿದ್ದರೆ ಸಂಬಂಧಗಳು ಗಟ್ಟಿಗೊಳ್ಳಲು ಸಾಧ್ಯ.

ಹಿರಿಯರು ಹೇಳಿರುವಂತೆ ‘ಮಾನವನು ಮೀನಿನಂತೆ ಈಜುವುದನ್ನು ಕಲಿತ, ಹಕ್ಕಿಯಂತೆ ಹಾರುವುದನ್ನು ಕಲಿತ, ಆದರೆ ಮಾನವ ಮಾನವನಂತೆ ಬದುಕಲು ಕಲಿಯಲಿಲ್ಲ’. ಬುದ್ಧ ಹೇಳಿದ ‘ಆಸೆಯೇ ದುಖಕ್ಕೆ ಮೂಲ’ ಈ ಮಾತು ಉಪದೇಶಕ್ಕೆ ಮಾತ್ರ ಸೀಮಿತವಾಗಿದೆ, ‘ಕೊಳ್ಳುಬಾಕ ಸಂಸ್ಕಂತಿ’, ಸಮಾಜದಲ್ಲಿ ಬದುಕುತ್ತಿರುವ ನಾವು ‘ಹಣವೇ’ ಸಂಬಂಧಕ್ಕಿಂತ ಮುಖ್ಯ ಎಂಬುದನ್ನು ಭಾವಿಸಿ ಮಕ್ಕಳಲ್ಲೂ ಅದನ್ನು ಬಿತ್ತುತ್ತಿದ್ದೇವೆ.

ಇಲ್ಲಿ ‘ಮಾನವೀಯ ಸಂಬಂಧಗಳು’ ಕೂಡ ಕೇವಲ ವ್ಯಾಪಾರದ ವಸ್ತುಗಳಾಗಿಯೇ ಹೊರಹೊಮ್ಮುತ್ತಿವೆ. ಭಾವನಾತ್ಮಕ ಸಂಬಂಧಗಳೂ ವ್ಯಾವಹಾರಿಕಗೊಳ್ಳುತ್ತಿವೆ. ‘ಕುರುಡು ಕಾಂಚಾಣ’ ಕುಣಿಯುತಲಿತ್ತು ಕಾಲಿಗೆ ಬಿದ್ದವರನ್ನು ತುಳಿಯುತಲಿತ್ತು” ಬೇಂದ್ರೆಯವರ ಈ ನುಡಿಗಳು ‘ಸಾರ್ವಕಾಲಿಕ ಸತ್ಯ’ ವನ್ನು ಸಾರುತ್ತದೆ.

ಕೋಮು ಜಗಳಗಳೂ, ಅಸುರಕ್ಷಿತ ಭಾವ, ಕೆಟ್ಟ ಚಟಗಳು ಸಾಮಾಜಿಕ ಸ್ವಾಸ್ಥ್ಯದ ನಾಶಕ್ಕೆ ಕಾರಣವಾಗುತ್ತಿದೆ. ಅಧಿಕಾರದ ದಾಹದಿಂದ ಸಮಾಜ ಹಾಳಾಗುತ್ತಿದೆ. ಆರ್ಥಿಕ/ ಅನಾರೋಗ್ಯದ ಒತ್ತಡಗಳ ಕಾರಣದಿಂದ ಅಸ್ಥಿರವಾದ ವ್ಯವಸ್ಥೆಯನ್ನು ಅಪ್ಪಿಕೊಂಡು ಮಾನಸಿಕ ಸಂತುಲತೆಯನ್ನು ಕಳೆದುಕೊಂಡು ಮನಸ್ಸು ಖಿನ್ನತೆಗೆ ಜಾರುತ್ತಿದೆ. ಸಂಬಂಧಗಳನ್ನು ಬೆಳಸಿಕೊಳ್ಳದೆ, ರೂಢಿಸಿಕೊಳ್ಳದೆ, ಹಗಲು ರಾತ್ರಿ ದುಡಿದು ಮನಸ್ಸನ್ನು ಮೂಕವಾಗಿಸುತ್ತಿದ್ದೇವೆ.

ಇದು ಎಲ್ಲಿಗೆ ಬಂದು ಮುಟ್ಟುತ್ತದೋ ಗೊತ್ತಿಲ್ಲ. ಶಿವರಾಮ ಕಾರಂತರ “ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ” ಎಂದು ಕಿಸಾ ಗೋತಮಿಯಲ್ಲಿ ಬುದ್ಧನು ಹೇಳಿದ. ಆದರೆ ಇಂದು ‘ಖಿನ್ನತೆ ಮತ್ತು ಚಿಂತೆ ಇಲ್ಲದ ಮನೆಯಿಂದ ಸಾಸಿವೆ ತೆಗೆದು ಕೊಂಡ ಬಾ’ ಎನ್ನುವ ಪರಿಸ್ಥಿತಿಗೆ ಬಂದಿದ್ದೇವೆ.

ಸಂಬಂಧದ ಮಹತ್ವ

ಬದಲಾವಣೆಯ ಕೀಲಿ ನಮ್ಮ ಕೈಯಲ್ಲೇ ಇದೆ. ನಾವು ಈಗ ಗಮನ ಹರಿಸಿಬೇಕಾಗಿರುವುದು ಸಮಾಜದ ಐಕ್ಯತೆ, ರಾಷ್ಟ್ರದ ಐಕ್ಯತೆ ಹಾಗೆಯೇ ದೇಶ ದೇಶಗಳ ನಡುವಿನ ದ್ವೇಷಗಳನ್ನು ಅಳಿಸಿ, ಸಂಬಂಧಗಳನ್ನು ಗಟ್ಟಿಗೊಳಿಸುವುದರ ಬಗ್ಗೆ. ವರ್ಣ, ಜಾತಿ, ವರ್ಗ, ಲಿಂಗ – ಈ ಎಲ್ಲಾ ಅಂತರಗಳನ್ನು ತೊಡೆದು ಹಾಕಿ ‘ನಾವೆಲ್ಲರೂ ಒಂದೇ ಜಾತಿ ಒಂದೇ, ಮತ ಒಂದೇ, ಕುಲ ಒಂದೇ, ನಾವು ಮನುಜರು’ ಎನ್ನುವುದು ಕೇವಲ ಸಾಲುಗಳಾಗದೇ ದೇವನೂರರು ‘ಕುಸುಮಬಾಲೆ’ ಯಲ್ಲಿ ಹೇಳಿರುವಂತೆ ‘ಈ ಸಂಮಂಜ ಅನ್ನೋದು ದೊಡ್ಡದು ಕನಾ’ ಎಂದು ಪ್ರತಿಯೊಬ್ಬರೂ ಭಾವಿಸಿದರೆ ಮಾನವೀಯ ಸಂಬಂಧ ಗಟ್ಟಿಯಾಗಿ, ವಿಶ್ವ ಪರಿಸರವು ಸತ್ವಯುತವಾಗುತ್ತದೆ.

ಇವನ್ಯಾರವ, ಇವನ್ಯಾರವ, ಇವನ್ಯಾರವ ಎನ್ನದಿರೀ

 ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎನ್ನಿರೀ” ಬಸವಣ್ಣನವರ ವಚನದ ಈ ಸಾಲುಗಳೆಲಾ ಇದನ್ನೇ ಸಾರುತ್ತವೆ.

‘ಕರೋನಾ’ ಎಂಬ ಮಹಾಪಿಡುಗು ಮಾನವನ ಅಹಂಕಾರಕ್ಕೆ ತಕ್ಕ ಶಾಸ್ತಿ ಮಾಡಿ, ಸಂಬಂಧಗಳು ಎಷ್ಟು ಮುಖ್ಯ, ಆಸ್ತಿ ಅಂತಸ್ತು, ಪ್ರತಿಷ್ಠೆ ಅಲ್ಲ ಎಂದು ಅಬ್ಬರಿಸಿ ಹೇಳುತ್ತಿದೆ. ಇದು ಕುಟುಂಬದ ನಡುವಿನ ಸಂಬಂಧವಲ್ಲದೇ, ಗುರು ಶಿಷ್ಯರ ಸಂಬಂಧವನ್ನೂ ಬೇರೆ ರೀತಿಯಲ್ಲಿ ಕೊಂಡ್ಯೊಯುತ್ತಿದೆ. ಇನ್ನಾದರೂ ಜಗತ್ತಿನಲ್ಲಿ ಮಾನವೀಯ ಸಂಬಂಧಗಳು ಪುಷ್ಟಿಗೊಂಡು, ಮನುಷ್ಯನಲ್ಲಿ ಗುಪ್ತಗಾಮಿನಿಯಾಗಿರುವ ಅಂತಃಕರಣ, ಪ್ರೀತಿ, ವಿಶ್ವಾಸಗಳು ಹೊರಸೂಸಿ, ಮಕ್ಕಳಿಗೆ ನೆಮ್ಮದಿಯ ನಾಳೆಗಳನ್ನು ನೀಡುತ್ತದೆ ಎಂದು ಭಾವಿಸೋಣ.

ಡಿ.ವಿ.ಜಿ ಯವರು ತಮ್ಮ ಕಗ್ಗದಲ್ಲಿ ಹೇಳಿರುವಂತೆ
ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆ? |
ಮಧುರ ಭಾವ ಪ್ರೇಮ ದಯೆಯೆಲ್ಲ ಬರಿದೆ ||
ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ !
ಬದುಕಿನಲ್ಲಿ ತಿರುಳೇನು? ಮಂಕುತಿಮ್ಮ. ||

ಈ ಅಮರ ನುಡಿಗಳು ಶೀರ್ಷಿಕೆಯ ಹಿಂದಿರುವ ತಳಮಳ, ಆತಂಕ ಹಾಗೂ ಈ ಲೇಖನದ ಉದ್ದೇಶವನ್ನು ಸ್ಪಷ್ಟೀಕರಿಸುತ್ತದೆ ಎಂದು ಭಾವಿಸುತ್ತೇನೆ.

‍ಲೇಖಕರು Avadhi

October 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Vijay kumar

    Dr. M. S. Vidya’s article is really good and relevant to each and every individual, beginning of the article itself attracts and make readers to go through entire article. Family system, globalization and relationship’s important are bring out excellently I congratulate Vidya madam and avadhumag team for valuable and educating article

    ಪ್ರತಿಕ್ರಿಯೆ
  2. ಡಾ. ರಾಜಪ್ಪ ದಳವಾಯಿ

    ಡಾ. ವಿದ್ಯಾ ಅವರ ಲೇಖನ ಸಕಾಲಿಕ. ಸಂಬಂಧಗಳ ಕುರಿತ ಉತ್ತಮ ವ್ಯಾಖ್ಯಾನವಾಗಿದೆ.

    ಪ್ರತಿಕ್ರಿಯೆ
  3. Lokeshwarappa KB

    ಡಾ. ಎಂ.ಎಸ್. ವಿದ್ಯಾ ಅವರ ಲೇಖನ ಬಹಳ ಚೆನ್ನಾಗಿದೆ. ಕುಟುಂಬ, ಸಂಬಂಧ, ಮುಂತಾಗಿ ಬೆಳೆದ ಮನುಷ್ಯನ ಸಕಾರಾತ್ಮಕ ನಕಾರಾತ್ಮಕ ಮುಖಗಳನ್ನು ಚೆನ್ನಾಗಿ ವಿಮರ್ಶೆ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು

    ಪ್ರತಿಕ್ರಿಯೆ
  4. ಬಿ.ಎ ಪ್ರಕಾಶ್

    ಮನುಷ್ಯ ಸಂಬಂಧಗಳ ಹೊಂದಾಣಿಕೆಯ ಮಹತ್ವವನ್ನು ಕುರಿತ ಈ ಲೇಖನ ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ. ಧನ್ಯವಾದಗಳು ಮೇಡಂ

    ಪ್ರತಿಕ್ರಿಯೆ
  5. Dr. S.Divya

    Dr. M. S. Vidya madam avara lekhana chennagi moodi bandide.idu prasthutha maanaveeya sambandhagalige hidida kannadi.

    ಪ್ರತಿಕ್ರಿಯೆ
  6. Smt. Neela N M

    Dr Vidya madam Congratulations .

    To Your Heartouching Article .
    Really what you expressed the human beings leading luxury lifestyle without pure love, affection, adjustment to their joint family members .
    These r mandatory for all . when they adopt all these in their life then only life will satisfy themselves .

    Thank you madam.

    ಪ್ರತಿಕ್ರಿಯೆ
  7. Dr. Manonmani

    Congratulations, Very nice article. ಮಾನವೀಯ ಸಂಬಂಧಗಳು ಅಂದಿನಿಂದ ಇಂದಿನವರೆಗೂ ಬದಲಾಗುತ್ತಾ ಬರಲು ಕಾರಣವಾದ ಸಂದರ್ಭಗಳನ್ನು ಬಹಳ ಹೃದ್ಯ ವಾದ ಶೈಲಿಯಲ್ಲಿ ಪ್ರಸ್ತುತ ಪಡಿಸಿರುವುದು ಮನಸ್ಸಿಗೆ ಹರ್ಷ ತಂದಿದೆ. ಅಭಿನಂದನೆಗಳು

    Dr.Manonani

    ಪ್ರತಿಕ್ರಿಯೆ
  8. Dr. Manonmani

    ಮಾನವೀಯ ಸಂಬಂಧಗಳ ಮೌಲ್ಯ-ಮಹತ್ತ್ವ ಗಳನ್ನು ಕುರಿತ ಡಾ ಎಂ.ಎಸ್. ವಿದ್ಯಾ ಅವರ ಈ ಲೇಖನ ಸಮಕಾಲೀನ ಸಂದರ್ಭಕ್ಕೆ ಹಿಡಿದ ಕನ್ನಡಿಯಾಗಿದೆ. ಅಭಿನಂದನೆಗಳು ವಿದ್ಯಾ.

    ಪ್ರತಿಕ್ರಿಯೆ
  9. Smt. Neela N M

    Dr. Vidya madam Congratulations for your article
    It is really hearttouching to each& everyone who are running behind the luxury life leading without real feelings of love, affection, sympathy to each other in nowadays family members.
    Thank you very much for need of real values to life awareness through this article .

    ಪ್ರತಿಕ್ರಿಯೆ
  10. Manjula N. Hosadurga

    ನಿಮ್ಮ ಈ ಲೇಖನ ಅತ್ಯುತ್ತಮವಾಗಿ ಮೂಡಿ ಬಂದಿದೆ, ವಿದ್ಯಾ ಅವರೇ…

    ಕಗ್ಗ, ವಚನ ಹಾಗೂ ಹಿರಿಯರ ನುಡಿಗಳನ್ನು ಉಲ್ಲೇಖಿಸಿ ಓದುಗರಿಗೆ *ಸಂಬಂಧಗಳ ಮೌಲ್ಯ* ಗಳನ್ನು ಮನಮುಟ್ಟುವಂತೆ ಬರೆದಿದ್ದೀರಿ. ನೀವು ಹೇಳಿದ ಹಾಗೆ ಈ ‘ಕರೋನಾ ಹಾವಳಿ’ ಮಾನವರಿಗೆ ಅವರ ಇತಿಮಿತಿ ಗಳ ಅರಿವನ್ನು ಚೆನ್ನಾಗಿ ಮೂಡಿಸಿದೆ.
    ಈ ವೈರಸ್ ಆದಷ್ಟು ಬೇಗ ಪರಿಹಾರವಾಗಲಿ ಹಾಗೂ ಈ ಪರಿಸ್ಥಿತಿಯಲ್ಲಿ ಮನವರಿಕೆ ಆದ ‘ಜೀವನದ ನಿಜಮೌಲ್ಯಗಳ ಪಾಠಗಳು’ ನಮ್ಮೆಲ್ಲರಲ್ಲಿ ಹಾಸುಹೊಕ್ಕಾಗಲಿ ಎಂದು ನಮ್ಮ ಹಾರೈಕೆ…

    ಮತ್ತೊಮ್ಮೆ ಈ ಉತ್ತಮ ಲೇಖನಕ್ಕಾಗಿ ಧನ್ಯವಾದಗಳು… ✨

    ಶುಭ ಹಾರೈಕೆಗಳೊಂದಿಗೆ,
    ಮಂಜುಳಾ ಹೊಸದುರ್ಗ

    ಪ್ರತಿಕ್ರಿಯೆ
  11. ಎಂ.ಎಸ್.ವಿದ್ಯಾ

    ಓದಿ ಪ್ರತಿಕ್ರಿಯೆ ನೀಡಿದ ಆತ್ಮೀಯರೆಲ್ಲರಿಗೂ ಧನ್ಯವಾದಗಳು

    ಪ್ರತಿಕ್ರಿಯೆ
  12. Rahima Begum

    Good. Dear vidya you’ve analyzed relationships very well. I appreciate your effort.

    ಪ್ರತಿಕ್ರಿಯೆ
  13. Chandrika Puranik

    ಸಕಾಲಿಕ ಅರ್ಥಪೂರ್ಣ ಬರಹ ವಿದ್ಯಾ
    ಇದನ್ನು ಮುಂದುವರೆಸಿ …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: