ಬಿ ಜಿ ಎಲ್ ಸ್ವಾಮಿಯವರ ದೌರ್ಗಂಧಿಕಾಪಹರಣ

ಪ್ರಸನ್ನ ಸಂತೇಕಡೂರು

ಸುಮಾರು ವರ್ಷಗಳ ಹಿಂದೆ ನಾನು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ. ವಿದ್ಯಾರ್ಥಿಯಾಗಿದ್ದೆ. ಆಗ ನಮ್ಮ ಪಠ್ಯದಲ್ಲಿ ಸಸ್ಯಶಾಸ್ತ್ರವೂ ಒಂದು ಕಡ್ಡಾಯ ವಿಷಯವಾಗಿತ್ತು. ಅದು ನನಗೆ ಇಷ್ಟದ ವಿಷಯವೂ ಆಗಿದ್ದರಿಂದ ಅದನ್ನು ಸಂತೋಷದಿಂದಲೇ ಆಯ್ಕೆಮಾಡಿಕೊಂಡಿದ್ದೆ.

ನಮ್ಮ ಕಾಲೇಜಿನ ಸಸ್ಯಶಾಸ್ತ್ರ ವಿಷಯದ ಮುಖ್ಯಸ್ಥರಾಗಿದ್ದವರು ಪ್ರೊಫೆಸರ್ ಪುಷ್ಪಲತಾ ಅವರು. ಅವರ ಹೆಸರಿನಲ್ಲಿಯೇ ಹೂವು ಬಳ್ಳಿ ಸೇರಿಕೊಂಡಿರುವದರಿಂದಲೋ ಅಥವಾ ಸುಮಾರು ವರ್ಷ ಸಸ್ಯಶಾಸ್ತ್ರವನ್ನು ಇಷ್ಟಪಟ್ಟು ಬೋಧಿಸಿದ್ದರಿಂದಲೋ ಪುಷ್ಪಲತಾ ಮೇಡಂ ಅವರು ಸಸ್ಯಶಾಸ್ತ್ರವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ಜೀವನ ಪ್ರೀತಿಯೂ ಇಂದಿಗೂ ಹಾಗೆ ಇದೆ. ಅವರ ಗಿಡ, ಸಸ್ಯ ಮತ್ತು ಮರಗಳ ಮೇಲಿನ ಪ್ರೀತಿ ಬರಡು ಬೆಂಗಾಡಿನಂತೆ ನೀಲಗಿರಿ ಮರಗಳಿಂದ ಕೂಡಿದ್ದ ನಮ್ಮ ಸಹ್ಯಾದ್ರಿ ಕಾಲೇಜಿನ ಮುಂದೆ ಒಂದು ಸುಂದರವಾದ ಉದ್ಯಾನವನ ಮೂಡಿನಿಲ್ಲಲ್ಲು ಕಾರಣವಾಯಿತು. ಆ ಉದ್ಯಾನವನದ ಹೆಸರು ಸದ್ಭಾವನಾ ವನ. 

ಪುಷ್ಪಲತಾ ಮೇಡಂ ಪ್ರತಿ ಕ್ಲಾಸ್ಸಿನಲ್ಲಿಯೂ ಒಂದಲ್ಲ ಒಂದು ಗಿಡ, ಹೂವು, ಕಾಯಿ ಅಥವಾ ಬೀಜಗಳ ಚಿತ್ರಗಳು ಅಥವಾ ಫೋಟೋಗಳನ್ನ ಉದಾಹರಣೆಯಾಗಿ ತೋರಿಸುತ್ತಿದ್ದರು. ಒಂದು ದಿನ ಡಾ. ಬಿ.ಜಿ.ಎಲ್. ಸ್ವಾಮಿಯವರ ‘ಹಸುರು ಹೊನ್ನು’ ಎಂಬ ಅದ್ಭುತ ಪುಸ್ತಕದ ಬಗ್ಗೆ ತಿಳಿಸಿದ್ದರು. ನಮ್ಮ ಪಿಯುಸಿಯಲ್ಲಿಯೂ ಬಿ.ಜಿ.ಎಲ್. ಸ್ವಾಮಿಯವರ ‘ಹಸುರು ಹೊನ್ನು’ ಪುಸ್ತಕದ ಒಂದು ಅಧ್ಯಾಯ ‘ಮಾಧವೀಲತೆ ಮತ್ತು ಸಾರ್ಕ್ಯಾನ್ಡ್ರ ಇರ್ವಿಂಗ್ ಬೈಲಿ’ ಪಠ್ಯವಾಗಿತ್ತು ಎಂದು ನೆನಪು. ಆ ಕಾರಣದಿಂದ ನಮಗೆ ಬಿ.ಜಿ.ಎಲ್. ಸ್ವಾಮಿಯವರ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದರೂ ಪುಷ್ಪಲತಾ ಮೇಡಂ ಅವರಿಂದ ಹೆಚ್ಚು ತಿಳಿಯಲು ಅವಕಾಶವಾಯಿತು.

ಅದೇ ಸಮಯದಲ್ಲಿ ನನ್ನ ಸಹಪಾಠಿ ಮತ್ತು ಗೆಳತಿಯಾಗಿದ್ದ ಛಾಯಾ ಭಟ್ ತಮ್ಮ ಹತ್ತಿರ ಇದ್ದ ಹಸುರು ಹೊನ್ನು ಪುಸ್ತಕವನ್ನು ಓದಲು ನೀಡಿದ್ದರು. ಆ ಪುಸ್ತಕ ಓದಿದ ಮೇಲೆ ನಾನೇ ಸ್ವಾಮಿಯವರ ಜೊತೆ ತೆಕ್ಕಡಿ, ಆಗುಂಬೆಗಳಿಗೆಲ್ಲಾ ಬೊಟಾನಿಕಲ್ ಟೂರ್ ಹೋಗಿಬಂದ ಅನುಭವಾಗಿತ್ತು. ಆ ನಂತರ ಅವರ ಇನ್ನು ಕೆಲವು ಪುಸ್ತಕಗಳನ್ನು ಓದಲು ಅವಕಾಶ ಸಿಕ್ಕಿತು.

ಕಾಡು ಮೇಡು, ಬೆಟ್ಟ ಗುಡ್ಡಗಳ ಮೇಲೆ ಹೂವು, ಹಣ್ಣು, ಕಾಯಿ, ಬೀಜ ಮತ್ತು ಗಿಡ, ಬಳ್ಳಿಗಳನ್ನ ಹುಡುಕುತ್ತ ಅಲೆಯುವುದು ಒಂದು ರೀತಿಯ ಟ್ರೆಕಿಂಗ್ಗೆ ಹೋಗುವ ಹಾಗೆ ರೋಮಾಂಚನದ ಅನುಭವವಾಗಿರುತ್ತದೆ. ಪ್ರಕೃತಿಯ ಅಪಾರವಾದ ವಿಸ್ಮಯಕ್ಕೆ ನಾವೇ ನೇರಾ ಸಾಕ್ಷಿಯಾಗಬಹುದು. ನಾನು ಇಲ್ಲಿ ಹೇಳ ಹೊರಟಿರುವದು ಡಾ. ಬಿ.ಜಿ.ಎಲ್. ಸ್ವಾಮಿಯವರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಪ್ರಶಸ್ತಿಗಳನ್ನ ತಂದುಕೊಟ್ಟ ‘ಹಸುರು ಹೊನ್ನು’  ಪುಸ್ತಕದ ಭಾಗವೇ ಇರುವಂತಿರುವ ಒಂದು ಕಿರುಪುಸ್ತಕದ ಬಗ್ಗೆ.

ಆ ಪುಸ್ತಕದ ಹೆಸರು ‘ದೌರ್ಗಂಧಿಕಾಪಹರಣ’. ಇದೇನು ಈ ಪುಸ್ತಕದ ಹೆಸರು ಇಷ್ಟು ಕೆಟ್ಟದಾಗಿದೆ ಎಂದು ಅನಿಸುತ್ತಿದ್ದೆಯೇ? ನೀವೆಲ್ಲಾ ಮಹಾಭಾರತದಲ್ಲಿ ಬರುವ ಸೌಗಂಧಿಕಾಪುಷ್ಪಹರಣ ಎಂಬ ಕತೆಯನ್ನು ಕೇಳಿರಬಹುದು. ಸೌಗಂಧಿಕಾ ಪುಷ್ಪ ಅಂದರೆ ಒಂದು ಸುಗಂಧಭರಿತವಾದ ಪುಷ್ಪ ಅದನ್ನು ಸುರುಳಿ ಸುಗಂಧಿ ಎಂದು ಕರೆಯುತ್ತಾರೆ. ಅದು ಒಂದು ಪರಿಮಳ ಭರಿತವಾದ ಹೂವು ಎಂದು ಹೇಳಬಹುದು. ಮಹಾಭಾರತದಲ್ಲಿ ಬರುವ ಒಂದು ಪ್ರಸಂಗದಲ್ಲಿ ಭೀಮನು ತನ್ನ ಪತ್ನಿಯಾದ ದ್ರೌಪದಿಗೆ ಈ ಹೂವನ್ನು ತಂದುಕೊಡುತ್ತಾನೆ.

ನಮ್ಮ ಕನ್ನಡದಲ್ಲಿ ಈ ಹೂವಿಗೆ ಸುಗಂಧಿ ಹೂ ಎಂದು ಕರೆಯುತ್ತಾರೆ. ಕೆಲವು ಕಡೆ ಸ್ಥಳೀಯವಾಗಿ ಸುರುಳಿ ಹೂವು ಎಂದುಕರೆಯುತ್ತಾರೆ. ಸಂಸ್ಕೃತ ಭಾಷೆಯಲ್ಲಿ ಅನಂತ, ಗೋಪಕನ್ಯೆ, ಗೋಪಸುತ ಇನ್ನು ಹಲವು ಹೆಸರುಗಳಲ್ಲಿ ಕರೆಯುತ್ತಾರೆ ಎಂದು ತಿಳಿದುಬರುತ್ತದೆ. ಆಂಗ್ಲ ಭಾಷೆಯಲ್ಲಿ ‘Butterfly ginger’ ಅಥವಾ ಚಿಟ್ಟೆಯ ಶುಂಠಿ ಎಂದು ಕರೆಯುತ್ತಾರೆ. ಸಸ್ಯಶಾಸ್ತ್ರೀಯವಾಗಿ ಈ ಹೂವಿನ ಗಿಡಕ್ಕೆHedychium coronarium ಎಂದು ಕರೆಯುತ್ತಾರೆ.

ವಿಶಿಷ್ಟವಾದ ಸುಗಂಧ ಮತ್ತು ಪರಿಮಳವನ್ನು ಹೊಂದಿರುವ ಸುಗಂಧಿ ಪುಷ್ಪ ಎಲ್ಲರನ್ನೂ ಬಹುದೂರದಿಂದಲೇ ತನ್ನತ್ತ ಸೆಳೆಯುತ್ತದೆ. ಆ ಕಾರಣದಿಂದಲೇ ಮಹಾಭಾರತದಲ್ಲಿ ದ್ರೌಪದಿ ಈ ಹೂವಿಗೆ ಮನಸೋತದ್ದು ಎಂದು ಹೇಳಬಹುದು. ಸೌಗಂಧಿಕಾ ಪುಷ್ಪಹರಣದಲ್ಲಿ ದ್ರೌಪದಿಯ ವಿನಂತಿಯಂತೆ ಭೀಮ ಈ ಹೂವನ್ನು ಹುಡುಕಿಕೊಂಡು ಹೋದಾಗ ದಾರಿಯಲ್ಲಿ ವಯ್ಯಸ್ಸಾದ ಕಪಿಯೊಂದು ಅಡ್ಡ ಮಲಗಿರುತ್ತದೆ. ಭೀಮ ಆ ಕಪಿಯನ್ನು ದಾಟಿಕೊಂಡು ಹೋಗಿ ಆ ಹೂವನ್ನು ತರಬೇಕಾಗುತ್ತದೆ. ಆ ಕಾರಣದಿಂದ ಭೀಮ ಆ ಕಪಿಗೆ ಪಕ್ಕಕ್ಕೆ ಸರಿದು ದಾರಿಬಿಡಲು ಕೇಳಿಕೊಳ್ಳುತ್ತಾನೆ. ಆ ಕಪಿಯೂ ನನಗೆ ತುಂಬಾ ವಯ್ಯಾಸಗಿರುವುದರಿಂದ ಪಕ್ಕಕ್ಕೆ ಸರಿಯಲು ಆಗುತ್ತಿಲ್ಲ. ‘ನೀನೇ ನನ್ನ ಬಾಲವನ್ನು ಪಕ್ಕಕ್ಕೆ ತೆಗೆದಿಟ್ಟು ದಾರಿ ಮಾಡಿಕೊಂಡು ಹೋಗು’ ಎಂದು ಹೇಳುತ್ತದೆ.

ಭೀಮ ಆ ಕಪಿಯ ಅಣತಿಯಂತೆ ಆ ಬಾಲವನ್ನು ಪಕ್ಕಕ್ಕೆ ತೆಗೆದಿಡಲು ಹೋಗುತ್ತಾನೆ. ಆದರೆ ಭೀಮನಂತಹ ಮಹಾಕಾಯ ಶಕ್ತಿಶಾಲಿಗೂ ಆ ಮುದಿಕಪಿಯ ಬಾಲವನ್ನು ತೆಗೆದಿಡಲು ಆಗುವುದಿಲ್ಲ. ತುಂಬಾ ಪ್ರಯತ್ನ ಪಟ್ಟು ಭೀಮ ಸೋಲುತ್ತಾನೆ. ಅಲ್ಲಿ ಭೀಮನ ಗರ್ವಭಂಗವಾಗುತ್ತದೆ. ಆಗ ಭೀಮನಿಗೆ ಆ ಕಪಿ ಬೇರೆ ಯಾರು ಅಲ್ಲ. ಅದು ತನ್ನ ಅಣ್ಣ ಆಂಜನೇಯ ಎಂದು ತಿಳಿಯುತ್ತದೆ. ಭೀಮನು ಆಂಜನೇಯನು ವಾಯುಪುತ್ರರು ಎಂದು ಪುರಾಣಗಳು ಹೇಳುವುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬೇಕು. ಆ ನಂತರ ಭೀಮ ತನ್ನ ಅಣ್ಣನಲ್ಲಿ ಕ್ಷಮೆ ಕೇಳಿ ಆ ಹೂವನ್ನು ಕಿತ್ತು ತಂದು ದ್ರೌಪದಿಗೆ ಮುಡಿಸುತ್ತಾನೆ. 

ಇಂತಹ ಅಪರೂಪ ಪರಿಮಳ ಹೊಂದಿರುವ ಹೂವು ಭಾರತ ದೇಶದಲ್ಲಿ ಗಂಗಾನದಿ ಬಯಲಿನಲ್ಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ದಕ್ಷಿಣ ಭಾರತದಲ್ಲಿ ಇದು ಎಲ್ಲಾ ಕಡೆಗಳಲ್ಲಿಯೂ ಕಾಣಸಿಗುತ್ತದೆ. ಈ ಹೂವು ಕ್ಯೂಬ ದೇಶದ ರಾಷ್ಟ್ರೀಯ ಹೂವು ಎಂದು ತಿಳಿದುಬರುತ್ತದೆ. ಆ ದೇಶದಲ್ಲಿ ಈ ಹೂವನ್ನು ‘ಮರಿಪೊಸ’ ಅಂದರೆ ಚಿಟ್ಟೆ ಎಂದೂ ಕರೆಯಲ್ಪಡುತ್ತದೆ.

ಇದುವರೆಗೂ ಸುಗಂಧ ಬೀರುವ ಸೌಗಂಧಿಕಾಪುಷ್ಪದ ಬಗ್ಗೆ ಇಲ್ಲಿ ತಿಳಿಸಿದೆ. ಆದರೆ ಬಿ.ಜಿ.ಎಲ್. ಸ್ವಾಮಿಯವರು ಹಸಿರು ಹೊನ್ನಿನಲ್ಲಿ ಒಂದು ಗಿಡದ ಬಗ್ಗೆ ಹೇಳುತ್ತ ‘ಆ ಗಿಡದ ಬುಡಕ್ಕೆ ಕೈ ಹಾಕಿ ಗಿಡವನ್ನು ಕಿತ್ತದ್ದಾಯಿತು. ಸಂಸಾರದ ಹೆಸರು ಏರಾಯ್ಡೀ ( Aroideae ), ಪ್ರಧಾನ ಜಾತಿ ಅನಫಿಲ್ಲಮ್ (Anaphyllum). ಆ ಗಿಡದಿಂದ ಹೊರಬರುತ್ತಿದ್ದ ದುರ್ನಾತವು ನಮ್ಮ ದೇಹದ ಒಳಗನ್ನು ರಂಧ್ರಗಳ ಮೂಲಕ ಹೊಕ್ಕು ಗಾಢವಾಗಿ ಅಚಲವಾಗಿ ನಿಂತಿತು. ನಾವು ದುರ್ಗಂಧ ಬ್ರಹ್ಮದಲ್ಲಿ ನಾವು ಐಕ್ಯರಾದೆವು’ ಎಂದು ಹೇಳುತ್ತಾರೆ.

ಜೊತೆಗೆ ಆ ತಕ್ಷಣಕ್ಕೆ

ಕುಸುಮದೊಳು ಗಂಧವೊ
ಗಂಧದೊಳು ಕುಸುಮವೊ
ಕುಸುಮಗಂಧಗಳೆರಡು
ಘ್ರಾಣದೊಳಗೊ?
ಎಂದು ಕೇಳಿದರು ಕನಕದಾಸರು ಎಂದು ಹೇಳುತ್ತಾರೆ.

ಇನ್ನು ಮುಂದೆ ಹೋಗಿ

ಕಣ್ಣಿಗೂ ನಾಲಗೆಗೂ ಕನಕದಾಸರು ಸೂಚಿಸಿರುವ ಭಾವವನ್ನೇ ಮೂಗಿಗೂ ಅನ್ವಯಿಸಿ,

ಮೂಗು ಬುದ್ದಿಯ ಒಳಗೊ
ಬುದ್ದಿ ಮೂಗಿನ ಒಳಗೊ
ಮೂಗುಬುದ್ದಿಗಳೆರಡು
ನಿನ್ನೊಳಗೊ ಹರಿಯೇ?
ಒಡಲು ದುರ್ಗಂಧದೊಳೊ
ದುರ್ಗಂಧದೊಳು ಒಡಲೊ
ಒಡಲು ದುರ್ಗಂಧಗಳೆರಡು
ನಿನ್ನೊಳಗೊ ಹರಿಯೇ?
ಎಂಬ ಪ್ರಶ್ನೆಗಳನ್ನು ನಮ್ಮನ್ನು ನಾವೇ ಕೇಳಿಕೊಳ್ಳುವಂತಾಯಿತು ಎಂದು ಹೇಳುತ್ತಾರೆ. ಇದು ಹಸಿರುಹೊನ್ನು ಪುಸ್ತಕದಲ್ಲಿ ಬರುವ ಘಟನೆಯಾದರೂ ಇದೆ ರೀತಿ ತಮ್ಮ ಹಾಸ್ಯವನ್ನು ಸ್ವಾಮಿಯವರು ತಮ್ಮ ದೌರ್ಗಂಧಿಕಾಪಹರಣ ಪುಸ್ತಕದಲ್ಲೂ ಮುಂದೆವರೆಸಿದ್ದಾರೆ.

ಈ ಪುಸ್ತಕದಲ್ಲಿ ಮೂರು ಭಾಗಗಳಿವೆ

ಮೊದಲ ಭಾಗದಲ್ಲಿ ಸ್ವಾಮಿಯವರು ತಮ್ಮ ಅಯ್ಯಂಗಾರಿ ಪ್ರೊಫೆಸರ್ ಒಬ್ಬರ ಜೊತೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ಬೊಟಾನಿಕಲ್ ಟೂರ್ ಹೋದಾಗ ಅಲ್ಲಿನ ಬೆಟ್ಟ ಗುಡ್ಡ ಮತ್ತು ಕಾಡುಗಳಲ್ಲಿ ನಡೆಯುವ ಘಟನೆಯನ್ನು ಹಾಸ್ಯಭರಿತವಾಗಿ ಬರೆದಿದ್ದಾರೆ. ಇಲ್ಲಿ ಸ್ವಾಮಿಯವರು ತಮ್ಮ ಪ್ರೊಫೆಸರ್ ಜೊತೆ ಹೋದಾಗ ಆ ಪ್ರೊಫೆಸರ್ ಅವರಿಗೆ ಉದರವಾಯುವಿನ ಸಮಸ್ಯೆ ಇರುತ್ತದೆ. ಅದು ಎಲ್ಲಾ ಸಮಯದಲ್ಲಿಯೂ ವ್ಯಕ್ತವಾಗುತ್ತಿರುತ್ತದೆ. ಅದೇ ರೀತಿಯ ಸಮಸ್ಯೆ ಒಂದು ಜಾತಿಯ ಹಲಸಿನ ಹಣ್ಣನ್ನು ತಿಂದರೆ ಬರುತ್ತದೆ. ಕಾಡಿನಲ್ಲಿ ಹೋದಾಗ ಕೆಲವರಿಗೆ ಆ ಸಮಸ್ಯೆ ಉಂಟಾಗಿದ್ದನ್ನು ಇಲ್ಲಿ ಕಾಣಬಹುದು.

ಎರಡನೇ ಭಾಗದಲ್ಲಿ ಸಸ್ಯ ಪ್ರಪಂಚದ ಕೆಲವು ಹಣ್ಣುಗಳು ತುಂಬಾ ಸಿಹಿಯಾಗಿ, ಪರಿಮಳಭರಿತವಾಗಿ ಇರುತ್ತವೆ. ಅವು ಕೊಳೆತಾಗ ದುರ್ನಾತ ಹೊಡೆಯುತ್ತವೆ. ಇದನ್ನು ಕೂಡ ಸ್ವಾಮಿಯವರು ಹಾಸ್ಯಭರಿತವಾಗಿ ತಿಳಿಸಿದ್ದಾರೆ.

ಮೂರನೇ ಭಾಗದಲ್ಲಿ ಕೇರಳಕ್ಕೆ ಪ್ರವಾಸ ಹೋಗಿದ್ದಾಗ ಅಲ್ಲಿನ ಕಾಡುಗಳಲ್ಲಿ ತಮ್ಮ ವಿದ್ಯಾರ್ಥಿನಿಯರ ನಡುವೆ ನಡೆಯುವ ಘಟನೆಗಳನ್ನು ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಮತ್ತು ಸಸ್ಯಶಾಸ್ತ್ರದ ಕ್ಲಿಷ್ಟಕರ ವಿಷಯಗಳನ್ನು ಸುಲಭವಾಗಿ ಎಲ್ಲರಿಗೂ ತಲುಪುವ ಹಾಗೆ ವಿವರಿಸಿದ್ದಾರೆ.

ಈ ಪುಸ್ತಕ ಕಿರುಪ್ರವಾಸ ಕಥನ ಎಂದು ಹೇಳಬಹುದು. ಇಲ್ಲಿ ಮನರಂಜನೆ ಹೆಚ್ಚಾಗಿದೆ, ಹಾಸ್ಯವಿದೆ, ವಿಜ್ಞಾನವಿದೆ. ಪುರಾಣದ ಕತೆಗಳು ಆಧುನಿಕ ಬದುಕಿನ ಪಾತ್ರಗಳಿಗೆ ತಳುಕು ಹಾಕಿಕೊಂಡಿವೆ. ಆ ಕಾರಣದಿಂದ ಈ ಪುಸ್ತಕ ಎಲ್ಲಾ ರೀತಿಯ ಓದುಗರಿಗೂ ಇಷ್ಟವಾಗುತ್ತದೆ.

February 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dhanyakumar B Minajigi

    ಡಾ. ಸಂತೆಕಡೂರ ಪ್ರಸನ್ನ ಅವರು ಅಪರೂಪ ಪುಸ್ತಕದ ಕುರಿತಾಗಿ ಬರೆದಿದ್ದಾರೆ. ಈ ಪುಸ್ತಕ ಪ್ರಥಮ ಬಾರಿಗೆ ಧಾರವಾಡದ ಮನೋಹರ ಗ್ರಂಥಮಾಲೆ ಮೂರು ದಶಕಗಳ ಹಿಂದೆ ಪ್ರಕಟಿಸಿತ್ತು. ನನಗೆ ತಿಳಿದ ಮಟ್ಟಿಗೆ ಆಗ ಈ ಗ್ರಂಥಕ್ಕೆ ಸಿಗಬೇಕಾದ ಮನ್ನಣೆ ಸಿಗಲೇ ಇಲ್ಲ. ನಮ್ಮ ವಿಮರ್ಶಕರೂ ಕೂಡ ಅವಗಣಿಸಿದರು. ನಮ್ಮ ವಿಮರ್ಶಕ ವರ್ಗ ಹೇಗಿದೆ ಎಂದರೆ ಅವರಿಗೆ ಕತೆ, ಕಾವ್ಯ ಕಾದಂಬರಿ ಮಾತ್ರ ಸಾಹಿತ್ಯ ಉಳಿದ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯ ಬಂದರೆ ಅದನ್ನು ಹೊರಳಿ ಕೂಡ ನೋಡುವುದಿಲ್ಲ. ದೌರ್ಗಂಧಿಕಾ ಅಪಹರಣದ ಲ್ಲಿ ಬರುವ ಸಸ್ಯಶಾಸ್ತ್ರೀಯ ಅಂಶ ಬದಿಗಿಟ್ಟು ಅಲ್ಲಿ ಬಂದಿರುವ ಲಘು ಹಾಸ್ಯ ಗುರುತಿಸದೇ ಹೋದರು.
    ಇರಲಿ. ತಾವು ಒಳ್ಳೆಯ ಪರಿಚಯಾತ್ತ್ಮಕ ಲೇಖನ ನೀಡಿದ್ದೀರಿ. ಅದಕ್ಕಾಗಿ ತಮಗೆ ಅಭಿನಂದನೆಗಳು.
    ಧನ್ಯಕುಮಾರ ಮಿಣಜಗಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: