ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಕೆ ಮೀನಾಕ್ಷಿ ಓದಿದ ‘ನೆಲದಾಸೆಯ ನಕ್ಷತ್ರಗಳು’

ಮನಸಿಗೆ ಕನ್ನಡಿ ಹಿಡಿಯುವ ರೂಪಕಗಳು

ಬಿ ಕೆ ಮೀನಾಕ್ಷಿ

ಶ್ರೀಮತಿ ಎಂ.ಆರ್. ಕಮಲ ಮೇಡಂ ರ ಗದ್ಯಗಂಧಿಯ ಹಾದಿಯಲ್ಲೇ ನಡೆದುಬಂದಿರುವ ನೆಲದಾಸೆಯ ನಕ್ಷತ್ರಗಳು ನನ್ನ ಕೈ ತಲುಪಿ ಅದನ್ನು ಓದಿ ಕೆಲದಿನಗಳಾಗಿಅದರ ಬಗ್ಗೆ ಬರೆಯಬೇಕೆಂಬ ತುಡಿತವಿದ್ದರೂ ಬರೆಯಲಾಗಲಿಲ್ಲ. ಆಂತೆಯೇ ಬರೆಯದಿರಲೂ ಆಗದೆ ಕಡೆಗೊಮ್ಮೆ ಬರೆಯಲು ಕುಳಿತೆ.

ಕವಿ-ಕತೆಗಾರ್ತಿ ತನ್ನ ಗ್ರಹಿಕೆಗೆ ಸಿಕ್ಕ ಒಂದು ಸಣ್ಣ ಮಣ್ಣ ಕಣವನ್ನೂ ಕವಿತೆಯಾಗಿಸಿ ಅದರಲ್ಲೇ ಮಿಂದೆದ್ದು, ಓದುಗರನ್ನೂ ಅದರಲ್ಲೇ ಮೀಯಿಸಿ ತೇಲಿಸುವ ಅವರ ನೆನಪುಗಳ ಹಂದರ ಸದಾ ಹಸಿರಾಗಿಯೇ ಇರುವುದಕ್ಕೆ ‘ನಿಮ್ಮನ್ನು ಪ್ರೀತಿಸಲಾರೆ ಪ್ರೀತಿಸದಿರಲಾರೆ’ಯ ಒಂದು ಪುಟದಿಂದ ತಮ್ಮ ಮನೋಭೂಮಿಕೆಯಲ್ಲಿ ಕುಣಿವ ನೆನಪುಗಳ ನಾಟ್ಯದ ಚಿತ್ರವನ್ನು ಕುಸುರಿಯಾಗಿಸಿ ಓದುಗರಿಗೆ ಸವಿಯಲಿತ್ತಿದ್ದಾರೆ.

ಪ್ರೀತಿಸುವುದನ್ನು, ಪ್ರೀತಿಸುವವರನ್ನು, ಪ್ರೀತಿಸಲ್ಪಟ್ಟವರನ್ನು ಸದಾಕಾಲ ಮರೆಯದೆ ಮನದುಂಬಿಕೊಂಡಿರಲಾದೀತೇ ಮರೆಯಲಾಗದಾದೀತೆ? ನೆನೆಯುತ್ತಲೇ ಮರೆಯುವ ಈ ಪ್ರಶ್ನೆಗಳು ಸೂಕ್ಷ್ಮ ಸಂವೇದಿಗಳಿಗೆ ಕಾಡುವ ಪ್ರಶ್ನೆಯೇ ಹೌದು!

ನಾನಾ ಗಂಧಿಕನ್ಯೆಯರು, ಬೇಡವೆಂದರೂ ಅನ್ಯನೋಟದ ಸರಕುಗಳಾಗಿ ಮೃದುಹೂದಳಗಳ ಹೊಸಕುವ ಪ್ರಯತ್ನದಲ್ಲಿಯೇ ಬದುಕುಳಿವ, ದಕ್ಕದ, ಕನಸುಗಳಿಗಾಗಿ ನೂರು ಬಣ್ಣದ ವೇಷ ತೊಡಿಸುವವರಿಗೆ ದಕ್ಕಲಾರದ ನನಸುಗಳ ಎಚ್ಚರಿಕೆಯಾದರೂ ನಲುಗಿದ, ನಲುಗಿಸಿದ ವೇದನೆ ಎದೆಹೊಕ್ಕು ಇರಿಯುವುದು.

ಅಗ್ಗಿಷ್ಟಿಕೆಯೆಂದರೆ ಸದಾ ಕೆಂಡವಿಡುವ ಗುಡಿ. ಎದೆಎದೆಯೊಳಗೆ ಉರಿಯುತ್ತಿರುವ ಈ ಕೆಂಡದ ಗೂಡುಗಳು ಆರುವುದೇ ಇಲ್ಲ. ಅದು ನೆನಪೋ, ವಾಸ್ತವವೋ ಅದೇನಾದರಾಗಿರಲಿ, ಸದಾ ಕೆಂಡದ ಗಂಟನ್ನು ಹೊತ್ತು ತಿರುಗುತ್ತಲೇ ಇರುವ ಅಗ್ಗಿಷ್ಟಿಕೆಗಳು ಒಂದೆಡೆ ಇಳುಕಲಾಗದವು.

ಹೆಣ್ಣಿನ ಕೆಲಸ ಹೊಲಿಯುವುದು, ಸೀದಾ ಸಾದಾ ಸಿಗದಿದ್ದರೆ ಅಲ್ಲಿಂದ ಇಲ್ಲಿಂದ ಚೂರು ಚೂರೇ ಸೇರಿಸಿ ಎಷ್ಟೇ ತೇಪೆ ಹಚ್ಚಿದರೂ ಮುಗಿಯುವುದಿಲ್ಲ. ಕಡೆಗೆ ಬಣ್ಣಬಣ್ಣದ ದಾರಗಳ ಮನಸಿನ ಬಾಬೀನುಗಳಲಿ ಸುತ್ತಿಸುತ್ತಿ ಬೇಡದ್ದನ್ನು ಬೇಕಾದ್ದನ್ನು ಕೂಡಿಸುವುದೇ ಕೈಂಕರ್ಯ. ತೇಪೆ ಹಚ್ಚುವುದು ಮುಗಿಯಲಾರದು ಜೀವವಿರುವವರೆಗೂ! ಅದ್ಭುತ ಪ್ರತಿಮಾ ರೂಪಕ!

ಅವಳು ಅವನು ಅತ್ಯಂತ ಮಾರ್ಮಿಕವಾದ ರೂಪಕ. ಅವಳು ಜೋಳಿಗೆ ತುಂಬ ತುಂಬಿಕೊಂಡ ಕನಸುಗಳನ್ನು  ಖಾಲಿ ಕಣ್ಣುಗಳಿಗೆ ಹಂಚಿ, ನೆಲದಲ್ಲಿ ನಕ್ಷತ್ರ ನೆಟ್ಟು ತಲೆಯೆತ್ತಿನಿಂತ ಬಾಹುಬಲಿಯಾದರೆ ಅವನು ಪದವಿ ಕಿರೀಟಗಳನಾಸೆ ಪಟ್ಟು, ಸಿಕ್ಕದ್ದನ್ನೆಲ್ಲ ಹೊಸಕಿ ಹಿಮಾಲಯವನೇರಿದರೂ, ತಲೆತಗ್ಗಿಸಿದ ಭರತನಾಗಿದ್ದ! ಎಂಥ ಚಂದದ ರೂಪಕವಿದು!

ನೀನು ಹಚ್ಚಿದ ಬೆಂಕಿ ಕಡೆಗೆ ನಿನ್ನ ಮನೆಬಾಗಿಲನ್ನೇ ತಟ್ಟಿ ನಿನ್ನನೂ ಬಲಿತೆಗೆದುಕೊಳ್ಳಬಹುದು. ನವಿರಾದ ನನ್ನ ಹಸಿರಿಗೆ, ಹಕ್ಕಿಚಿಲಿಪಿಲಿಗೆ ಬೆಂಕಿಯಿಟ್ಟವನು ಮನುಜನಾಗಲು ಸಾಧ್ಯವೇ? ತಾನು ಹಚ್ಚಿದ ಕಿಚ್ಚು… ತನ್ನನೇ ಸುಡದಿದ್ದೀತೇ? ಪ್ರಕೃತಿಯ ಮೇಲಿನ ದೌರ್ಜನ್ಯದದ ಬಗೆಗೆಹತಾಶೆಯ ಅಥವಾ ರೊಚ್ಚಿಗೆದ್ದ ರೂಪಕವಿದು. ಫೇಸ್ ಬುಕ್ ಬಳಕೆಯಾಗುತ್ತಿರುವ ಇಂದಿನ ಬಗೆಯನ್ನು ಕಟ್ಟಿಕೊಟ್ಟಿರುವ ಶೈಲಿಯೇ ತುಟಿಯಂಚಿನಲ್ಲೊಂದು ವಿಶಾದದ ಎಳೆ ಹೊತ್ತ ನಗು ತರಿಸುತ್ತದೆ. ಏನಾದರೂ ಬರೆಯಿರಿ ಎಂದಾಕ್ಷಣ ಅಡೆತಡೆಯಿಲ್ಲದೆ ಎಲ್ಲವನ್ನೂ ಉದುರಿಸಿಬಿಡುವ ಭಾವ ನಿಕೃಷ್ಟವೆನಿಸುತ್ತದೆ. ಆಳದಲ್ಲುಳಿದ ಭಾವ ನೂರಾರು.

ಯಾವ ರಾಡಿಯೂ ಮೇಲೆ ತೋರಗೊಡದಂತೆ, ಸದಾ ನಗುವಿನ ನೈದಿಲೆಯ ಹೊತ್ತ ಮೊಗದ ನವಿರು ಹೊರನೋಟಕ್ಕೆ, ನೋಡುಗರ ಮನವ ತಿಳಿಗೊಳಿಸುವಂತ  ಆಪ್ತ ಭಾವ ಹಸನ್ಮುಖಿಯದ್ದು! ಹೌದು! ಅಜ್ಜಿಯಾಗುವುದೆಂದರೆ ಮಲಗಿದ್ದ ಒಳಗಿನ ಮಗುವನ್ನು ತಟ್ಟಿ ಎಬ್ಬಿಸಿ ಮುಗ್ಧ ಭಾವಗಳ ಪೊರೆಯುತ್ತಾ ನಲಿಯುವುದು. ಅಜ್ಜಿಯಾದವರೆಲ್ಲರ ಭಾವಕ್ಕೆ ಕನ್ನಡಿ! ಮನೆ, ಮನಸ್ಸು ಚಿಕ್ಕದಾಗಿದೆ. ಚಿಕ್ಕದಾಗುತ್ತಾ ಹೋಗುತ್ತಿದೆ. ಕಡೆಗೆ ಅಪ್ಪ ಅಮ್ಮ ಅಜ್ಜ ಅಜ್ಜಿಯರನ್ನೂ ಯೂಸ್ ಅಂಡ್ ಥ್ರೋ ಬುಟ್ಟಿಯಲ್ಲಿಟ್ಟು ತೂಗಿದಾಗ. ನಾಗರಿಕ ನಡೆಗಳ ಬಗ್ಗೆ ಅನುಕಂಪದ ನೋಟವೆಸೆಯುವ ಈ ಬರೆಹ ಎಲ್ಲರಿಗೂ ಅನ್ವಯ. ಹೆಣ್ಣಿನ ನಿರೀಕ್ಷೆಗೆ ದಕ್ಕದ, ಫಲವೇ ಸಿಗದ ಕಾಯುವಿಕೆ ಕಾಲದಿಂದಲೂ ಮುಂದುವರಿದೇ ಇದೆ. ಮುಂದಕ್ಕೂ ಕೂಡ. ಕೇವಲ ಕಾಯುವುದಷ್ಟೇ ಅವಳ ಕಾಯಕವಾಗಿರಿಸಿಕೊಂಡಿರುವಾಗ ಆಸೆಯ ತೀರುವಿಕೆಗೆಲ್ಲಿ ದಾರಿ? ನಿಜಕ್ಕೆ ಕೇವಲ ನಾಲ್ಕಾರು ವಾಕ್ಯದ ವ್ಯಾಖ್ಯೆ!

ಇಷ್ಟೇ ಅಲ್ಲದೆ, ಇಲ್ಲಿ ಕೊರೋನಾ ಜಾಡ್ಯಕ್ಕೆ ಬೇಸತ್ತ ಕ್ಷಣಗಳು, ಮಡಿಕೆ ಬಿಡಿಸದ ಸೀರೆಗಳು ಮತ್ತು ಮನಸುಗಳು, ಮೌನ ಮುರಿವಾಗ ಅದೇಕೋ ದನಿಯೇಳದೆ ಕತ್ತು ಹೊರಳಿಸುವಾಟ ವಾಸ್ತವಕ್ಕೆ, ಕಂಡ ಸತ್ಯಕ್ಕೆ. ಮಾತಾಗಬಹುದಿತ್ತು, ಆದರೆ  ಆಗಲಿಲ್ಲ. ಪಲಾಯನ ವಾದದ ಪ್ರತೀಕವೇನೋ… ಬೆಳಕಾಗಬಹುದಾಗಿದ್ದ ನಡೆ ಜಾರಿಕೊಳ್ಳುವ ಮೌನದ ಹೊದಿಕೆಯೊಳಗೆ! ಇದು ನಾವೆಲ್ಲರೂ ನಡೆದುಬರುತ್ತಿರುವ ಹಾದಿ. ಒಮ್ಮೆ ಎದೆಮುಟ್ಟಿ ನೋಡಿಕೊಳ್ಳಲು ಅಂಜಿಕೆ. ಗೋಮುಖವ್ಯಾಘ್ರಗಳ ವೇಷದ ಅನಾವರಣ ಮಾಡುತ್ತಲೇ ಕವಿಯ ಮನಸ್ಸತ್ವವನ್ನು ಬಂಧಿಸಲಾಗದೆ ಬಂಧಿಸಿದರೂ, ಅವನಂತರಾತ್ಮದಲ್ಲಿ ಹೊಸ ಹೊಸ ರೂಪಕಗಳು ಮೊಟ್ಟೆಯೊಡೆಯುತ್ತಲೇ ಇರುತ್ತವೆ.

ಸ್ವಂತ ನೆಲದ ಭಾಷೆ, ನೆಲದ ಅಳಲನ್ನರಿಯದೆ, ದೇಸೀಯ ಸಂಸ್ಕೃತಿಯ ಮರೆಯುತ್ತಾ ಪರರಿಗೆ ಮಾರುಹೋಗುವ, ಸುತ್ತಲಿನ ಆಗುಹೋಗುಗಳನ್ನೇ ಅರಿಯದೆ ಸದಾ ಪರಧ್ಯಾನದಲ್ಲಿರುವ ನಮಗೆ, ಸ್ವಂತಿಕೆಯ ಉಳಿಸುವಿಕೆಗೆ ಒಂದು ಆದೇಶದಂತಿದೆ ಜೇಡರಬಲೆ ನೇಯುವ ಕತೆ. ರೂಪ ಕಳೆದುಕೊಂಡೂ ಅಲ್ಲೆಲ್ಲೋ ಮಧ್ಯದಲ್ಲಿ ಸಿಲುಕಿ ನಲುಗುವ ಎಳ್ಳು ಕುಸುರಾಗದೆ, ಎಳ್ಳಿಲ್ಲದೆ ರುಚಿಯಿರದ ಸಂಕ್ರಾಂತಿ, ರೂಪ, ಮೌಲ್ಯವಳಿದರೂ ರುಚಿಯಳಿಯದಂತೆ ನೋಡಿಕೊಳ್ಳುವುದೇ ಹೆಣ್ಣಿನ ಕೆಲಸವೆಂಬ ಭ್ರಮೆ ಹುಟ್ಟಿಸಿರುವ ಸಮಾಜಕ್ಕೆ ಈ ಪುಟ ತಕ್ಕ ಉತ್ತರ.

ನೆಲದಾಸೆಯ ನಕ್ಷತ್ರಗಳು ಇದರಲ್ಲಿ, ಕವಯತ್ರಿ ಬರೆದಿರುವುದೆಲ್ಲ ನಮ್ಮೆಲ್ಲರ ಮನದಲ್ಲಿ ಹಾದುಹೋಗುವ, ಹಾದುಹೋಗಿರುವ  ಭಾವಗಳೇ. ಎಲ್ಲವೂ ಸಾಮಾನ್ಯವೇ, ಸರ್ವೇ ಸಾಧಾರಣವೇ. ಹಾಗಾದರೆ ಇದರಲ್ಲೇನು ವಿಶೇಷ? ಓದಿ ಹಳತಾಗಿ, ಪುಸ್ತಕವನ್ನೊಮ್ಮೆ ಅತ್ತ ಪಕ್ಕಕ್ಕಿಬಿಡಬಹುದಾದದ್ದನ್ನು, ಪಕ್ಕಕ್ಕಿಡದಂತೆ ಮಾಡುವ, ಎದೆಗೊತ್ತಿಕೊಂಡು ಕಣ್ಣುಮುಚ್ಚಿ ಅವಲೋಕಿಸಿಕೊಳ್ಳುವ, ನಿಂದಿಸಿಕೊಳ್ಳುವ, ನಾನೂ ಇದರಲ್ಲೊಬ್ಬಳಲ್ಲವೇ ಅನ್ನುತ್ತಾ ಪ್ರಶ್ನಿಸಿಕೊಳ್ಳುವ, ಇದೆಲ್ಲಕ್ಕೂ ಮೂಕವಾಗಿ ರೋಧಿಸುವ, ಕ್ಲುಪ್ತಕಾಲದಲ್ಲಿ ಮಾಡದೆ ಬಾಕಿಯುಳಿದ ಕಾರ್ಯಗಳ, ಮನದ ವಿಕ್ಷಿಪ್ತತೆಯನ್ನು ಒಳಗೇ ಅನುಭವಿಸುವ, ಅವುಗಳ ಆಳಕ್ಕಿಳಿದು ಪರಾಮಾರ್ಶಿಸುವ, ಆತ್ಮಾವಲೋಕನಕ್ಕೆ ದಾರಿಯಾಗುವ ಈ ಪುಸ್ತಕದ ವಿನ್ಯಾಸ ವಿಶೇಷವಾದದ್ದು. ಒಮ್ಮೆ ಕುಳಿತು ಮೌನವಾಗಿ ಓದಲೇಬೇಕಾದ್ದು. ನನಗೆ ಇಷ್ಟವಾಯಿತು, ಬಹಳ ಇಷ್ಟವಾಯಿತು.

‍ಲೇಖಕರು Admin

1 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading