ಎಚ್ ಆರ್ ರಮೇಶ ಓದಿದ ವೈದೇಹಿಯವರ ‘ದೀಪದೊಳಗಿನ ದೀಪ’

ಫೆಮಿನಿಸಿಮ್ಮಿನ ಪೋಷಾಕಿಲ್ಲದ ಹೆಣ್ಣ ಸಹಜ ನೋಟ

ಎಚ್ ಆರ್ ರಮೇಶ

ಕಾವ್ಯಕ್ಕೆ ಕಾಲದ ಹಂಗಿಲ್ಲ. ಹಾಗಾಗಿ ಅದಕ್ಕೆ ದೇಶಕಾಲದ ಮಿತಿಯೂ ಇಲ್ಲ. ಒಂದು ಪಕ್ಷ ಪರಲೋಕದಲ್ಲಿ/ಏಲಿಯನ್ ಗ್ರಹದಲ್ಲಿ ಜೀವಿಗಳಿದ್ದಲ್ಲಿ ಅಲ್ಲೂ ಸಹ ಇಂತಹದ್ದೇ ಅಂದರೆ ನಮ್ಮ ಲೋಕದಲ್ಲಿರುವಂತಹ ದುಃಖ, ದುಮ್ಮಾನಗಳಿರಬಹುದು. ಅವುಗಳನ್ನು ಕುರಿತು ಕವಿತೆಗಳು ಇಲ್ಲಿಯಂತೆ ಅಲ್ಲಿಯೂ ಇರಬಹುದು. ಇದೊಂದು ಊಹೆ. ಅಥವಾ ಅನಿಸಿಕೆ. ಮತ್ತು ಇರಬಹುದು, ಇಲ್ಲದಿರಬಹುದು. ಕವಿತೆ ಒಂದು ಬೆಳಕು. ಆ ಬೆಳಕಲ್ಲಿ ಲೋಕದ ಅಂಕುಡೊಂಕುಗಳು ಬಯಲಾಗುತ್ತವೆ. ಕವಿತೆ ಮಾಡುತ್ತದೆ. ಆರ್ನಾಲ್ಡ್ ಹೇಳುತ್ತಾನಲ್ಲ ಬದುಕಿನ ವಿಮರ್ಶೆ. ಸರಿಯೆನಿಸುತ್ತದೆ ಒಮ್ಮೊಮ್ಮೆ. ಸಂಪೂರ್ಣವಾಗಿ ಅಲ್ಲದಿದ್ದರೂ. ಕವಿತೆ ಬೆಳಕಾದರೆ ಅದು ಹೊಮ್ಮಿಸುವುದು ಅರಿವನ್ನು. ಅರಿವೆನ್ನುವುದಿದ್ದರೆ ಅದು ಕೇಡನ್ನು ಮಾಡಲು ಹೇಗೆ ಬಿಡುತ್ತದೆ. ನೋ ವೇ ಬಿಡುವುದಿಲ್ಲ. ಅರಿವಿಗಿಂತ ಕಾಮನ್ ಸೆನ್ಸ್ ಇಲ್ಲ, ಅರಿವಿಗಿಂತ ಜ್ಞಾನವಿಲ್ಲ. ಈ ಕಾಮನ್ ಸೆನ್ಸನ್ನು ಇಟ್ಟುಕೊಂಡೇ ಕವಿ ಏನೇಲ್ಲ ತೋರಿಸುತ್ತಾನೆ/ಳೆ ತನ್ನ ಮುಷ್ಟಿಗ್ರಾಹಿಯಾದ ಕವಿತೆಯಲ್ಲಿ. ಕವಿತೆ ‘ದೀಪದೊಳಗಿನ ದೀಪ’.

ಈ ಶೀರ್ಷಿಕೆಯನ್ನು ವೈದೇಹಿಯವರು ತಮ್ಮ ಇತ್ತೀಚಿನ ಕವನ ಸಂಕಲನಕ್ಕೆ ಕೊಟ್ಟಿದ್ದಾರೆ. ವಾಟ್ ಎ ಸೂಟಬಲ್ ಟೈಟಲ್! ಭಾಷೆ ಕವಿಯ ಇಂಗಿತವನ್ನು ಹೊರ ಹಾಕಲು ಎಂತಹ ಪದ ಪುಂಜವನ್ನು ಕೊಟ್ಟಿದೆ. ಭಾಷೆ ಇಲ್ಲದಿದ್ದರೆ ಈ ಲೋಕವನ್ನು ಗ್ರಹಿಸುವುದಾದರೂ ಹೇಗೆ. ನೋಡುವುದರಲ್ಲಿ ಅಂತಃಕರಣವನ್ನು ಮೀಟುವಂತಹದ್ದು ಇದ್ದರೆ ನೋಡಿದ್ದಕ್ಕೂ ಸಾರ್ಥಕ. ಆಗ ಭಾಷೆ ತನ್ನಿಂದ ತಾನೆ ಪದಗಳನ್ನು ತಂದು ನಿಧಾನ ಸುರಿಯುತ್ತದೆ. ನಾವು ಆಡುವ, ನುಡಿಯುವ ಭಾಷೆಯೂ ಇಲ್ಲಿಯೇ ಉತ್ಪತ್ತಿಯಾಗುತ್ತದೆ. ಆಶ್ಚರ್ಯ. ಮತ್ತು ಇದು ಇರುವುದು ಹೀಗೆಯೇ ಅಲ್ಲವೆ. 

ಸಹಜ ನೋಟದಲ್ಲೇ ಲೋಕದ ಎಲ್ಲ ಮಗ್ಗಲುಗಳು ಕಾಣುತ್ತವೆ. ಹೀಗೆ ನೋಡಬೇಕು ಎಂದು ದೃಷ್ಟಿಕೋನಗಳನ್ನಿಟ್ಟುಕೊಂಡರೆ ಲೋಕ ಅಥವಾ ಬದುಕು ನಮ್ಮನ್ನು ಮಕಾಡೆ ಮಲಗಿಸಿಬಿಡುತ್ತದೆ. ಸೋ ಕವಿ ವೈದೇಹಿ ಅವರು ಸೋ ಕಾಲ್ಡ್ ಸ್ತ್ರೀ ಕೇಂದ್ರಿತ ದೃಷ್ಟಿಕೋನದಲ್ಲಿ ಸುತ್ತಮುತ್ತಲಿನದನ್ನು ನೋಡದೆ ಸಹಜವಾಗಿಯೇ ನೋಡಿದ್ದಾರೆ ಅಥವಾ ಕಂಡಿದ್ದಾರೆ. ಕಂಡಾಗ ಅಲ್ಲಿರುವುದು ಮನುಷ್ಯಲೋಕದ ಸಜಹ ನೋವು ಮತ್ತು ನೋವಿನಿಂದ ನರಳುತ್ತಿರುವ ಸಮಾಜ. ಇದಕ್ಕೆ ಕಾರಣ ಗಂಡು, ಹೆಣ್ಣು, ಜಾತಿ, ಬಡವ, ಶ್ರೀಮಂತ , ಧರ್ಮ ಎನ್ನುವ ಭಿನ್ನ ಭೇದದ  ವರ್ಗೀಕರಣ.

ಪ್ರಪಂಚದ ಯಾವ ಮೂಲೆಗೆ ಹೋದರೂ ಇದ್ಯಾವುದಾದರೂ ಒಂದು ಸಮಸ್ಯೆಯಿಂದ ಸಮಾಜ ನರಳುತ್ತಿದೆ. ಇದು ಇಂದು ಮತ್ತು ಹಿಂದೆಯೂ. ಮುಂದೆ ಇದರಿಂದ ಪಾರಾಗಬೇಕಿದೆ, ಯಾರು ಪಾರುಮಾಡುವುದು, ಕಾಪಾಡುವುದು, ನಮಗೆ ನಾವೇ ಕಾಪಾಡಿಕೊಳ್ಳಬೇಕಿದೆ ಈ ಭಿನ್ನ ಭೇದಗಳನ್ನು ಛಿದ್ರಗೊಳಿಸಿ, ಇನ್‍ಕ್ಲೂಸಿವ್ ಆದಂತಹ ಬದುಕನ್ನು ಕಟ್ಟಿಕೊಳ್ಳುವುದರ ಮೂಲಕ. ಆದರೆ ಈ ಎಕ್ಸ್ ಕ್ಲೂಸಿವ್ ಆದಂತಹದ್ದು ಇದೆಯಲ್ಲ ಅದರಲ್ಲಿ ಅಹಮ್ಮಲ್ಲದೆ ಮತ್ತೇನಿದೆ. ಸ್ತ್ರೀ ಮನುಷ್ಯಳು ಎನ್ನುವುದು ಅಂತರಂಗದಲ್ಲಿ ಮೂಡಿದಾಗ ಶೋಷಣೆಯ ಮಾತೆಲ್ಲಿ, ಆದರೆ ಈ ಪುರುಷ ಸಮಾಜದಲ್ಲಿ ಅದು ಅಷ್ಟು ಸುಲಭವೆ? ಹೌದು ಸುಲಭ, ಆದರೆ ಅದನ್ನು ಬೇಕಂತಲೇ ದೂರ ತಳ್ಳಲಾಗುತ್ತಿದೆ. ಇದು ಆತ್ಮವಂಚನೆ. ಈ ಸಂಕಲನದ  ಕಾಣದೇ? ಎನ್ನುವ ಪದ್ಯದಲ್ಲಿ ‘ಪುರುಷನಲ್ಲ ಅದು ಗಂಡು/ಗಂಡಲ್ಲ ಅದು ಮೃಗ/ಮೃಗವಲ್ಲ ಅದು ಪಶು/ಕಾಣದೆ?/ ದೇಹವಲ್ಲ ಇದು ಗೇಹ/ಯೋನಿಯಷ್ಟೇ ಅಲ್ಲ, ಜೀವ/ಹೆಣ್ಣಷ್ಟೇ ಅಲ್ಲ, ಆತ್ಮ/ನಾನಷ್ಟೇ ಅಲ್ಲ, ನೀನೂ/ತಿಳಿಯದೇ?’ ಈ ಸಾಲುಗಳಿದ್ದಾವೆ. ಪುರುಷ ಕೇಂದ್ರಿತ ಮನಸ್ಸನ್ನು ತಿವಿಯುತ್ತಲೇ ಅಧ್ಯಾತ್ಮ, ಪಾರಾಮಾರ್ಥ ಎಂದು ಪುಂಖಾನುಪುಂಖವಾಗಿ ಪುಂಗಿ ಬಿಡುವವರಿಗೆ ಮೈ ಮತ್ತು ಮನಸ್ಸುಗಳಿಗೆ ಕರೆಂಟು ಶಾಕು ಕೊಡುವಂತೆ ಸತ್ಯದ ದರ್ಶನಮಾಡಿಸುತ್ತಾರೆ ಕವಯತ್ರಿ ವೈದೇಹಿ.

ಹೊರೆಗೆ ಏನಾಗುತ್ತಿದೆಯೋ, ಮತ್ತು ಎಲ್ಲೋ ಏನೋ ಆಗುತ್ತಿದೆಯೋ ಅದು ತನ್ನ ಮೇಲೂ ಪರಿಣಾಮ ಬೀರುತ್ತದೆ ಮತ್ತು ಆಗುತ್ತದೆ ಎಂದು ಭಾವಿಸಿದ್ದಾರೆ ಕವಿ. ಅಷ್ಟರಮಟ್ಟಿಗೆ ಇವರ ಕವಿತೆಗಳು ಬದುಕಿಗೆ ಮತ್ತು ಸಮಾಜಕ್ಕೆ ನಿಷ್ಟವಾಗಿದ್ದಾವೆ. ಈ ದೇಶದಲ್ಲಿ ಎನ್ನುವ ಕವಿತೆಯಲ್ಲಿ ಕೇಳುತ್ತಾರೆ ‘ಜನರು ಇರುವರು ಸರಿ,/ಮನುಜರೆಲ್ಲಿ?/ಗಂಡುಗಳಿದ್ದಾರೆ ಸರಿ,/ಪುರುಷರೆಲ್ಲಿ?/ ನೋಡುವವರಿದ್ದಾರೆ ಸರಿ,/ಕಾಣುವವರೆಲ್ಲಿ?/ ಹೀಗೆ ಈ ಕವಿತೆ ಧರ್ಮ ಮತ್ತು ರಾಜಕಾರಣವನ್ನು ಜೋರಾಗಿಯೇ ಕೇಳುತ್ತದೆ. ಹೀಗೆ ಕೇಳಬೇಕು. ಪ್ರಭುತ್ವಕ್ಕೆ, ಸಮಾಜಕ್ಕೆ ಕಣ್ಣು, ಕಿವಿ, ಹೃದಯಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಅದಕ್ಕೆ. ಬಂದಳೆ? ಎನ್ನುವ ಕವಿತೆ ಇಡೀ ಸಂಕಲನದಲ್ಲೇ ಎಷ್ಟು ಸೂಕ್ಷ್ಮವಾದ ಮತ್ತು ಮಾರ್ಮಿಕವಾದ ಕವಿತೆಯೆಂದರೆ ಅದು ಏಕ ಕಾಲಕ್ಕೆ ಸಮಾಜದ ಮತ್ತು ಹೆಣ್ಣಿನ ಬಯೋಗ್ರಫಿ ಹಾಗೆ ಇದೆ.

ಹೆಣ್ಣೊಬ್ಬಳ ತುಮುಲ, ಆತಂತವಿದೆ. ಮತ್ತು ಹೆಣ್ಣು ಸಮಾಜದಲ್ಲಿ ಹೇಗಿದ್ದಾಳೆ ಎನ್ನುವುದನ್ನು ಹೇಳುತ್ತದೆ. ಇದನ್ನು ಓದುತ್ತ ಸಮಾಜದಲ್ಲಿ ಯಾಕೆ ಸಹಜತೆ ಇಲ್ಲ, ಯಾಕೆ ಆತಂಕ ಇದೆ, ಅರೆ ಹೊರ ಹೋದ ನಮ್ಮ ಮನೆಯ ಹೆಣ್ಣೊಬ್ಬಳು ವಾಪಸ್ಸು ಬರುವ ವಿಶ್ವಾಸ ನಮಗೆ ಏಕೆ ಇಲ್ಲ, ಅಂತಹ ಸ್ಥಿತಿ ಯಾಕೆ ಬಂದಿದೆ, ಯಾಕೆ ಹೀಗೆ, ಮತ್ತೆ, ಸಂವಿಧಾನದ ರೈಟ್ ಲಿವ್ ಎನ್ನುವುದರ ಅರ್ಥ ಎನ್ನುವ ಪ್ರಶ್ನೆಗಳು ಏಳುತ್ತವೆ. ಅಂದರೆ ನಮ್ಮದು ನಾಗರೀಕ ಸಮಾಜವಲ್ಲವಾ? ಯಾರಿಗೆ ಹೆದರಬೇಕಾಗಿದೆ ಎನ್ನಿಸುತ್ತದೆ. ಈ ಕವಿತೆಯ ಹಿಂದೆ ಮಡುಗಟ್ಟಿದ ದುಃಖ, ನೋವು, ಹತಾಶೆ, ಇದೆ. ಜೊತೆಗೆ ಇಲ್ಲಿ ಜನ ಸರಿಯಿದ್ದಂತೆ ಕಾಣುತ್ತಿಲ್ಲ, ಏನಾಯ್ತೋ ಏನೋ ಇಷ್ಟೊತ್ತು ಆಯಿತು ಎನ್ನುವ ಆತಂಕ ಅರೆ ನಮ್ಮದು ಅನಾಗರೀಕವಾದಂತಹ ಸಮಾಜವಾ, ಅಲ್ಲಿ ಸೇಫ್ಟಿಯೆನ್ನುವುದೇ ಇಲ್ಲವಾ ಎಂದುಕೊಳ್ಳುವಂತೆ ಮಾಡುತ್ತದೆ ಈ ಕವಿತೆ: ‘ಬಂದಳೆ?/ಇಲ್ಲಮ್ಮ?/ಬಂದಳೆ?/ಇನ್ನೂ ಇಲ್ಲಮ್ಮ?/ಬಂದಳೆ?/ಬರಬೇಕಿತ್ತು ಇಷ್ಟರಲ್ಲಿ?/ಬಂದಳೆ?/ಊಹುಂ?/ಬಂದಳೆ?/ಹ್ಞಾ, ಬಸ್ಬಂತು/ಇಳಿದಳೆ??/ಹೂಂ ಅಮ್ಮ?/ಬಂದಳೇ?/ಹೌದಮ್ಮ?/ಅಮ್ಮ! ಅಮ್ಮಮ್ಮ!/ಸದ್ಯ! ಬಂದಳೆ!’

ಇನ್ನೊಂದು ಕವಿತೆ ಮಗು ಸತ್ತಿದೆ, ದೇಶ ಸೂತಕದಲ್ಲಿದೆ (ಇದು ಕಥುವಾ ಬಾಲೆ ಅಸೀಫಾಳ ನೆನಪಲ್ಲಿ ಬರೆದಂತಹ ಕವಿತೆ). ಇದರಲ್ಲಿ ಇವರು ಹೇಳುವುದು ದೇಶದೊಳಗೆ ಒಂದು ಮಗುವಿನ ಸಾವೂ ಪ್ರಭುತ್ವಕ್ಕೆ ಮುಟ್ಟಬೇಕು. ಅದು ಮುಟ್ಟದಿದ್ದರೆ ಆ ದೇಶ ಸಂವೇದನಾರಹಿತವಾದಂತಹ ದೇಶ. ಅಂದರೆ ಆಳುವವರಿಗೆ ಸಂವೇದನೆ ಇದ್ದರೆ ದೇಶಕ್ಕೆ ತನ್ನಿಂದ ತಾನೇ ಇರುತ್ತದೆ. ಕವಿ ಹೀಗೆ ಕೇಳುತ್ತಾರೆ: ‘ಅಯ್ಯೋ ಮಗು ಸತ್ತಿದೆ ದೇಶ ಸೂತಕದಲ್ಲಿದೆ/ಅಳೆಯಲಾರದ ಶೋಕ ಉರಿಯುತ್ತಿದೆ/ಭಾಷೆ ತಿಳಿಯದೆ ನಿಮಗೆ?’ ಭಾಷೆ ತಿಳಿಯುವುದಿಲ್ಲವಾ ನಿಮಗೆ ಅಂದರೆ ಮತಿ ಇಲ್ಲವಾ ನಿಮಗೆ, ಏನಾಗಿದೆ, ಸೂತಕದ ಮನೆಯಲ್ಲಿ ಸಂಭ್ರಮವನ್ನು ಏಕೆ ಪಡುತ್ತಿದ್ದೀರಿ, ನೀವು ವಿಲಕ್ಷಣರು, ನಿಮಗೆ ಏನಾಗಿದೆ, ಸ್ವಲ್ಪ ಕೇಳಿಸಿಕೊಳ್ಳೀ ಆಕ್ರಂದನವನ್ನು, ಮಿಡಿಯಿರಿ ನೋವುಗಳಿಗೆ. ರಾಜಕೀಯದಲ್ಲಿ ರಾಜಕಾರಣ ಬಿಟ್ಟು ಅಂತಃಕರಣ ತನ್ನಿ ಎಂದು ಈ ಕವಿತೆ ಹೇಳುತ್ತದೆ.

ಬಾಳುವೆಗೆ ಕೈ ಮುಗಿದು.. ಕವಿತೆಯಲ್ಲಿ ನಿತ್ಯದ ಯಥಾಪ್ರಕಾರದ ಬದುಕಲ್ಲಿ ಹೊಸದನ್ನು ಕಂಡುಕೊಳ್ಳುತ್ತ ಹೊಸದಾಗಿ ಬದುಕಬೇಕಾದ ಅನಿವಾರ್ಯತೆಯ ಚಿತ್ರಣವನ್ನು ತುಂಬಾ ತೀಕ್ಷ್ಣವಾಗಿ ಕಟ್ಟಿಕೊಟ್ಟಿರುವುದನ್ನು ಕಾಣಬಹುದು. ಬದುಕಿದ್ದ ಬದುಕನ್ನ ಬದುಕುವುದಕ್ಕೆ ಎದೆಗಾರಿಕೆ ಬೇಕು, ಸೋಪಜ್ಞತೆ ಬೇಕು. ಅದೇ ಜೀವಂತಿಕೆ. ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಆ ಎರಡು ಹೆಣ್ಣು ಎಷ್ಟು ಕಷ್ಟ ಪಡುತ್ತಾರೆ. ಅದೂ ಒಂದೇ ಮನೆಯಲ್ಲಿ. ಹೊಗೆಯನ್ನು ಕುಡಿಯುತ್ತ, ಅದೇ ಸೌತೆಕಾಯಿಯ ಸಾರನ್ನು ಉಣ್ಣುತ್ತ ಅನ್ನಿಸುತ್ತೆ. ಹೌದು. ಅವರು ನಿತ್ಯ ಅದನ್ನೇ ಬದುಕುವುದು. ತಪಸ್ಸಿನಂತೆ ಸಾಗಿಸುತ್ತಿದ್ದಾರೆ ಜೀವನವನ್ನು. ನಿಜವಾದ ಜೀವನ್ಮುಖಿಗಳು ಅವರು. ದಿನಗಳನ್ನು ಸವೆಸದೆ, ಜೀವನದಲ್ಲಿ ಛಲಬಿಡದೆ ಮೆಲ್ಲನೆ ಮುಂದೆ ಸಾಗಿದವರು. ಹೀಗಿದೆ ಆ ಕವಿತೆ: ‘ನಿತ್ಯವೂ ಇದೇ ಕಾಯಿ ತುರಿದು, ತುರಿದು/ನಿತ್ಯವೂ ಇದೇ ಮಸಾಲೆ ಹುರಿದು ಹುರಿದು/ ನಿತ್ಯವೂ ಮಿಂದುಟ್ಟು ಹಳೆ ಹೊಸ ಉಡುಗೆ/ನಿತ್ಯ ಪುಷ್ಪಗಳಕೊಯ್ದಾಯ್ದು ಕಟ್ಟಿ/ ಎಷ್ಟು ನಿತ್ಯಗಳ ನಿತ್ಯ ನಿತ್ಯ ಕಳೆಯುವೆವೋ’

ಈ ಕವಿತೆಯನ್ನು ಓದುವಾಗ ಹಂಗೇರಿಯಾದ ಸಿನಿಮಾ ನಿರ್ಧೇಶಕನ ಮಹತ್ವಾಕಾಂಕ್ಷೆಯ ಮತ್ತು ಜಾಗತಿಕ ಸಿನಿಮಾದಲ್ಲಿಯೇ ಒಂದು ಮಿರಾಕಲ್ ಆಗಿ ಪರಿಗಣಿಸಲ್ಪಟ್ಟಿರುವ ‘ದ ಟ್ಯುರಿನ್ ಹಾರ್ಸ್’ ನೆನಪಾಯಿತು. ಇಡೀ ಸಿನಿಮಾ ಶೇಕಡ ತೊಬ್ಬಂತ್ತರಷ್ಟು ತಂದೆ ಮತ್ತು ಮಗಳು(?) ಇವರ ಮೇಲೆ ಕೇಂದ್ರಿತವಾಗಿದೆ. ಹೊರಗಡೆ ವಿಪರೀತ ಗಾಳಿ. ಇವರು ಒಳಗಡೆ ಬೇಸಿದ ಆಲೂಗಡ್ಡೆಯನ್ನು ತಿನ್ನುತ್ತಿರುತ್ತಾರೆ. ಒಮ್ಮೆ ಹೊರಗಡೆ ಹೋಗಲು ಪ್ರಯತ್ನಪಟ್ಟು ಮತ್ತೆ ವಾಪಸ್ಸು ಮನೆಗೆ ಮರಳಿ ಮತ್ತೆ ಅದೇ ಆಲೂಗಡ್ಡೆಯನ್ನು ತಿನ್ನುತ್ತ ಬದುಕುವರು. ಸಿನಿಮಾ ನೋಡುವಾಗ ಕಾಲವೇ ಒಂದು ಕಡೆ ಸ್ತಬ್ಧವಾಗಿರುವಂತೆ ಭಾಸವಾಗುತ್ತದೆ. ನೋಡಲಾರದಂತಹ, ಸಹಿಸಲಾರದಂತಹ ವಾಸ್ತವದ ಚಿತ್ರಣ. ಅಂತಹ ಬದುಕನ್ನು ಅವರು ಸಹಜವೆಂಬಂತೆ ಬದುಕುತ್ತಿರುತ್ತಾರೆ ಅವರಿಬ್ಬರು. ಹೇಗೆಂದರೆ ವೈದೇಹಿ ತಮ್ಮ ಕವಿತೆಯಲ್ಲಿಎಷ್ಟು ನಿತ್ಯಗಳ ನಿತ್ಯ ನಿತ್ಯ ಕಳೆಯುವೆವೋ/ನಿತ್ಯಾನಿತ್ಯಗಳ ಗೊಡವೆಯೇ ಇಲ್ಲದೆ/ನಿತ್ಯಗಳ ಮಿಥ್ಯೆಯನು ಅರಿತು ಮರೆತಂತೆ/ನಿತ್ಯವೂ ನಿತ್ಯಕ್ಕೆ ಸತ್ಯ ತೊಡಿಸುವೆವು/ಬಾಳುವೆಯ ಬೆಳಕಿಗೆ ನಿತ್ಯ ಶ್ರಮಿಸುವೆವು’ ಹೇಳುವ ಹಾಗೆ.

ಗಾಂಧಿಯನ್ನು ಕುರಿತು ನಾಕೈದು ಕವಿತೆಗಳಿದ್ದಾವೆ. ಈ ಕವಿತೆಗಳಲ್ಲಿ ಗಾಂಧಿಯನ್ನು ಅರಿಯುವುದರ ಮೂಲಕವೇ ಗಾಂಧಿಯನ್ನು ಸಮಾಜ ಹೇಗೆ ನಡೆಸಿಕೊಂಡಿತು, ಮತ್ತು ಹೇಗೆ ನೆನಪಿಸಿಕೊಳ್ಳುತ್ತಿದೆ, ಗಾಂಧಿಯನ್ನು ಹೇಗೆಲ್ಲ ಮಾಡಲಾಗಿದೆ ಎನ್ನುವುದನ್ನು ಕವಿ ಚಿತ್ತಿಸಿದ್ದಾರೆ. ಗಾಂಧಿ ಬಗ್ಗೆ ಬರೆಯುತ್ತಲೇ ಇವೊತ್ತಿನ ಕಾಲ ಮತ್ತು ಸಮಾಜವನ್ನು ಬಿಂಬಿಸಿದ್ದಾರೆ. ಕವಿತೆಗಳ ಶೀರ್ಷಿಕೆಗಳೇ ಕವಿತೆಗಳು ಏನನ್ನು ಹೇಳಲು ಹೊರಟಿವೆ ಎನ್ನುವುದನ್ನು ಸೂಚ್ಯವಾಗಿ ಹೇಳುತ್ತವೆ: ಗಾಂಧಿನಕ್ಷತ್ರ, ಎಲ್ಲಿ ಸಿಗುವಿರೀ ಗಾಂಧೀಜೀ?, ಗಾಂಧೀ ತಾತಾ ಇನ್ನೂ ಬಾರದೆ ಎಲ್ಲಿರುವೆ?, ಸಾವೆನ್ನದಿರಿ ಬಿಡುಗಡೆಗೆ, ಗಾಂಧಿ ಕೇಸ್.

ನಮ್ಮ ದೇಶದಲ್ಲಿ ಗಾಂಧಿಯನ್ನು ಮುಖಾಮುಖಿಯಾಗದ ಹೊರತು ಏನನ್ನೂ ಮಾಡಲು ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಗಾಂಧಿ ನಮ್ಮ ಚಿಂತನೆಗಳಲ್ಲಿ ಹಾಸುಹೊಕ್ಕಾಗಿ ಹೋಗಿದ್ದಾರೆ. ಗಾಂಧಿಯ ಸರಳತೆಯೇ ನಮ್ಮನ್ನು ಆಳುವವರಿಗೆ ಕಬ್ಬಿಣದ ಕಡಲೆಯಾಗಿದೆ. ಅಲ್ಲದೆ ಅವನನ್ನು ಕೇವಲ ಕನ್ನಡಕದ ಮಟ್ಟಿಗೆ ತಂದು ನಿಲ್ಲಿಸಿರುವುದು ಶೋಚನೀಯವೇ ಆಗಿದೆ. ವೈದೇಹಿ ಅವರ ಕೆಲವು ಸಾಲುಗಳು: ‘ನೂರು ರೇಖೆಯಲಿ ಚಿತ್ರ ಬಿಡಿಸಿದರೂ/ಗಾಂಧಿ ಮೂಡಲಿಲ್ಲ/ಮೂರು ಮುನ್ನೂರುಶಬ್ದ ಬರೆದರೂ/ಆತನು ಸಿಗಲಿಲ್ಲ/ಮೂರು ಮಂಗಗಳ ಆಡಿ ತೋರಿದರು/ಆತ ಕಾಣಲಿಲ್ಲ.ʼ

ಇವರ ಕವಿತೆಗಳ ಕುರಿತು ಅಂದರೆ ಕವಿ ತಾನು ಇಲ್ಲಿ ಏನನ್ನು ಬರೆಯುತ್ತಿದ್ದೇನೆ, ಮಾತಾಡುತ್ತಿದ್ದೇನೆ, ತನ್ನ ಕಾಳಜಿ ಏನು ಎನ್ನುವುದನ್ನು ಅವರದೇ ಒಂದು ಕವಿತೆ ಶ್ರುತಿ-ಗತಿಯ ಮಾತು ನಲ್ಲಿ ಕಾಣಬಹುದು. ಇಲ್ಲಿ ತತ್ವವಿದೆ, ಬದುಕಿನ ಅರ್ಥವಿದೆ, ತಪ್ಪು ಇದೆ, ಒಪ್ಪು ಇದೆ, ಸಹಜತೆ ಇದೆ,  ಮತ್ತು ಸಹಜತೆಯನ್ನು ಕಳೆದುಕೊಂಡರೆ ಹಸನಾದ ಬದುಕು ಹೇಗೆ  ಹದಗೆಡುತ್ತದೆ ಎಂದು ಹೇಳುವ ಕವಿಯ/ಕವಿತೆಯ ಗಾಸ್ಪೆಲ್ ಇದೆ: ‘ಬೇರೆಯೇ ಶ್ರುತಿಯ ಜೊತೆ ಹಾಡಲೂ ಬಹುದು/ಭಿನ್ನ ಶ್ರುತಿಗೆ ಹೇಗೋ ಹೊಂದಿಕೊಳ್ಳಲೂ ಬಹುದು/ವಿಭ್ರಾಂತ ಶ್ರುತಿಗೆಂತೋ ಸಂವಾದಿಸಬಹುದು/ವಿಚ್ಟಿದ್ರ ಶ್ರುತಿ ಜೊತೆ ಮಾತ್ರ ಆಗದಾಗದು , ಗೆಳತೀ’

ಈ ಒಂದು ಪುಟ್ಟ ಕವಿತೆ ಬದುಕಿನ ಸಮಗ್ರತೆಯನ್ನು ಕುರಿತು ಧ್ಯಾನಿಸಿದಂತೆ ಇದೆ. ಇಂತಹ ಕವಿತೆಗಳಲ್ಲಿ ಶುದ್ಧ ಕವಿಯಾಗಿ ಕಾಣುತ್ತಾರೆ. ಈ ಥರದ ಸಾಂದ್ರತೆ ಎಲ್ಲ ಕವಿತೆಗಳಿಗೂ ಸಿಕ್ಕಿದ್ದಿದ್ದರೆ ಅದರ ಮಾತೇ ಬೇರೆ ಇರುತ್ತಿತ್ತು. ಮತ್ತು ಲೋಕದ ಸಂಗತಿಗಳು ಕವಿಯನ್ನು ಧ್ಯಾನಸಲು ಅನುವು ಮಾಡಿಕೊಡುವುದಕ್ಕಿಂತಲೂ ಚಿಂತಿಸುವಂತೆ, ಮಾತಾಡುವಂತೆ, ಅಭಿಪ್ರಾಯವನ್ನು ಹೇಳುವಂತೆ ಆವರಿಸಿಕೊಂಡಿದ್ದಾವೆ. ಹಾಗಾಗಿ ಲೋಕದ ಕುರಿತು ಮಾತಾಡುವ ಅನಿವಾರ್ಯಕ್ಕೆ ಅವರು ಸಿಕ್ಕಿಬಿದ್ದಿದ್ದಾರೆ, ಅಥವಾ ಲೋಕವೇ ಸಿಕ್ಕಿಸಿದೆ. ಲೋಕದ ಸಂಗತಿಗಳನ್ನು ಅವರಷ್ಟೇ ಆವರಿಸಿಕೊಂಡಿಲ್ಲ, ಓದುವಾಗ ನಮಗೂ ಆವರಿಸಿಕೊಳ್ಳುವಂತೆ ಮಾಡುತ್ತವೆ. ಯಾಕಂದರೆ ಹೇಳಿ ಕೇಳಿ ಇವು ವಾಸ್ತವತೆಯ ಬೆಂಕಿಯಲ್ಲಿ ಬೆಳಕನ್ನು ಕಾಣಿಸುವ ಸಾಲುಗಳು. 

ಕವಿ ಸುಮ್ಮನಿಲಾರ/ಳು ಲೋಕದಲ್ಲಿ ಸಂಭವಿಸುತ್ತಿರುವುದ ಕಂಡು. ಸಹಜವಾಗಿದ್ದುಕೊಂಡೇ ಇಲ್ಲಿ ಏನೋ ನಡೆಯುತ್ತಿದೆ, ಇಲ್ಲಿ ಏನೋ ಸರಿಯಿಲ್ಲ, ಸಮ್ ಥಿಂಗ್ ಈಸ್ ರಾಟನ್ ಇನ್ ಡೆನ್ಮಾರ್ಕ್ ಎನ್ನುತ್ತಾನಲ್ಲ ಶೇಕ್ಸ್‌ಪಿಯರ್‌ ಹಾಗೆ. ಸಹಜತೆಯನ್ನು ಕದಡಲಾಗುತ್ತಿದೆ, ಯಾಕೆ ಹೀಗೆ ಎಂದು ಚಡಪಡಿಕೆ. ನೋವು, ವಿಷಾದ . ಶರಿಫರು ಹೇಳುತ್ತಾರಲ್ಲ ಲೋಕದ ಕಾಳಜಿ ಮಾಡಬೇಕಂತಿ, ಯಾರ ಬ್ಯಾಡ ಅಂತರ ಮಾಡಪ್ಪ ಚಿಂತಿ ಆ ಥರ. ಮನುಷ್ಯರಿಗೆ ಅರ್ಥವಾಗದ್ದು, ದಕ್ಕದ್ದು, ಕವಿತೆಗೆ ಸಿಗುತ್ತದೆ, ಹಾಗಾಗಿ  ಅದಕ್ಕೆ ಕಾಳಜಿ, ದುಃಖ.

ಲೋಕ ತನ್ನ ಮಾತನ್ನು ಕೇಳಿಸಿಕೊಳ್ಳದಿದ್ದರೂ,ಕವಿತೆ ತನ್ನ ಅಂಕುಶದಿಂದ ಅದನ್ನು ತಿವಿಯುವುದನ್ನು ಬಿಡುವುದಿಲ್ಲ. ವ್ಯಾಸರು ಹೇಳುತ್ತಾರಲ್ಲ ನನ್ನ ಮಾತನ್ನು ಯಾರು ಕೇಳುತ್ತಿಲ್ಲ ಹಾಗೆ. ಏನೆಲ್ಲ ಆಗುತ್ತೆ ಎನ್ನುವ ಊಹೆ ಸಿಕ್ಕಿದ್ದರೂ ವ್ಯಾಸರಿಗೆ ಏನನೂ ನಿಲ್ಲಿಸಲಾಗಲಿಲ್ಲ, ನಿಲ್ಲಿಸಲು ಆಗುತ್ತಲೂ ಇರಲಿಲ್ಲ, ಹೇಳುವುದನ್ನು ಹೇಳದೆ, ಸುಮ್ಮನೆ ಇರಲೂ ಇಲ್ಲ, ಹಾಗೆ ವೈದೇಹಿಯವರು ಇಲ್ಲಿ ಲೋಕದ ಬಗ್ಗೆ.

ಇಲ್ಲಿ ಅಭಿವ್ಯಕ್ತಿಗೊಂಡಿರುವ ಬದುಕಿನ ಚಿತ್ರಣ,  ಹೆಣ್ಣಿನ ಚಿತ್ರಣ ಎಷ್ಟು ಸಹಜವೆಂದರೆ ‘ಗಿಡವಾಗಿ ಮರವಾಗಿ ಹೂವಾಗಿ ಅರಳಿ ಪದ/  ಗಗನವನು ಬೆಳಗಿತ್ತು ಧವಳ ಕಾಂತಿ, ಎನ್ನುವಷ್ಟು ಸಹಜ. ಮತ್ತು, ‘ ಒಲೆಯ ಒಳಗಿಂದಲೇ ಉರಿತಾಪ ಕುರಿತೇ/ ಹಾಡೊಂದು ಸರಾಗ ಹರಿಯುತಿದೆ ಪ್ರಭುವೇ’ ಎನ್ನುವ ಸಾಲುಗಳಲ್ಲಿ ಕಾಣುವುದು ಫೆಮಿನಿಸಮ್ಮಿನ ಕಲರ್ ಫುಲ್ ಪೋಷಾಕಿಲ್ಲದ ಕೇವಲ ಅಂತಃಕರಣ ಮೀಟುವ ನೋಟ ಮಾತ್ರ.

ಕವಿತೆಗಳನ್ನು ಓದುವುದರಿಂದ ಸಿಗುವ ಸುಖ ಅರ್ಥಕ್ಕೆ ನಿಲುಕ್ಕದ್ದು. ಲೋಕದಲ್ಲೇ ಇದ್ದೇ ಅಲೌಕಿಕವಾದಂತಹ ಅನುಭವವನ್ನು ಅನುಭವಿಸುವಂತಹದ್ದು. ನಮ್ಮ ಬದುಕಿನ ದುಃಖದ ರಾಗಗಳನ್ನು ಮತ್ತ್ಯಾರೋ ಹೇಳಿದ್ದಾರಲ್ಲ, ಹಾಗಾದರೆ ದುಃಖವೆನ್ನುವುದು ಸಹಜವೇ ಎಲ್ಲಕಡೆ ಎನ್ನುವ ಸಮಾಧಾನ ವಾಗುತ್ತದೆ. ಇಷ್ಟಾದರೆ ಸಾಕಲ್ಲವೆ. ಈ ಸಂಕಲನದ ಮತ್ತೊಂದು ಮಹತ್ವಾದ ಕವಿತೆ ಪಯಣದ ಹಾಡು ಕವಿತೆಯ ಸಾಲುಗಳ ಮೂಲಕ ಈ ಪುಟ್ಟ ಬರಹವನ್ನು ಮುಗಿಸಬಹುದು: ‘ಕವನದಲಿ ಸಾಲಾಗಿ ಜೋಡಿಸಿಡಬೇಕು/ದೀಪದೊಳಗಿನ ದೀಪ ಕೆಡದಂತೆ ಜೋಪಾನ/ಕಾಯಬೇಕು.’

‍ಲೇಖಕರು Admin

September 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: