ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಬಷೀರ್ ಹೊಸ ಕವಿತೆ: ಗೃಹಿಣಿಯೊಬ್ಬಳ ಪಯಣ!

ಬಿ ಎಂ ಬಷೀರ್

ಉಚಿತವೆನ್ನುವ ಕಾರಣಕ್ಕಾಗಿ

ಸರಕಾರಿ ಬಸ್ ಹತ್ತಿ ಕೂತಿರುವ ಗೃಹಿಣಿ ನಾನು…

ಎಲ್ಲಿಗೆ ತಲುಪಬೇಕು ಎನ್ನುವುದನ್ನು

ಇನ್ನೂ ನಿರ್ಧರಿಸಿಲ್ಲ….

ಕಂಡಕ್ಟರ್ ಬಂದು ಟಿಕೆಟ್ ಹರಿಯುವ

ಮೊದಲು ಅದನ್ನು ನಿರ್ಧರಿಸಿ ಬಿಡಬೇಕು!

ತಾಯಿಯ ಮನೆಯಿಂದ ಗಂಡನ ಮನೆಯವರೆಗೆ

ಬದುಕು ಸಿದ್ಧಪಡಿಸಿದ್ದ ನನ್ನ ರಸ್ತೆ

ನನಗಾಗಿ ಕಂಡಕ್ಟರ್ ಹರಿದು ಕೊಟ್ಟ ಕೊನೆಯ ಟಿಕೆಟ್

ಮದುವೆ ಎನ್ನುವ ತಂಗುದಾಣದಲ್ಲಿ

ಇಳಿದ ಬಳಿಕ ನಾನು ಬಸ್ ಹತ್ತಿದ್ದೇ ಇಲ್ಲ

ಅದು ನನ್ನ ಕೊನೆಯ ಪಯಣ…!

ಒಮ್ಮೆ ತಂದೆಯಲ್ಲಿ ‘ಒಂದಿಷ್ಟು ಹಣ ಬೇಕು’ ಎಂದು ಕೇಳಿದ್ದೆ

‘ಗಂಡನ ಬಳಿ ಕೇಳು’ ಎಂದು ಸಲಹೆ ನೀಡಿದ್ದ

ಗಂಡನ ಬಳಿ ಕೇಳಿದೆ

‘‘ನಿನಗೇಕೆ ಹಣ, ದಿನವಿಡೀ ಮನೆಯಲ್ಲೇ ಇರುವುದಲ್ಲವ?’’

ಎಂದು ನಕ್ಕಿದ್ದ

‘ಇವತ್ತು ನಿನ್ನ ತವರು ಮನೆಗೆ ಹೋಗೋಣ…’

‘ಮುಂದಿನ ತಿಂಗಳು ರಜೆ ಇದೆ…ತಿರುಪತಿಗೆ ಹೋಗೋಣ…’

‘ರೆಡಿಯಾಗು….ಆಸ್ಪತ್ರೆಗೆ ಹೋಗೋಣ…’

“ಎರಡು ಟಿಕೆಟ್ ಇದೆ ಸಿನಿಮಾಕ್ಕೆ ಹೋಗೋಣ”

ಸಿನಿಮಾದ ಹೆಸರೂ ಕೇಳದೆ ಸಂಭ್ರಮಿಸಿ ಹೊರಟಿದ್ದೆ

ನನ್ನ ಪ್ರಯಾಣವನ್ನೆಲ್ಲ ಅವನೇ ಮುಗಿಸಿದ್ದ…!

ಮೊನ್ನೆ, ಯಾರೋ ಹೇಳಿದರು

ಬಸ್ನಲ್ಲಿ ಪ್ರಯಾಣಿಸಲು ಹಣ ಬೇಕಾಗಿಲ್ಲ, ಉಚಿತ ಎಂದು!

ಅಂದು ಗಂಡ ಫೋನಲ್ಲಿ ತನ್ನ ಗೆಳೆಯನ ಬಳಿ

ಸಿಡಿಮಿಡಿಗೊಳ್ಳುತ್ತಾ ಮಾತನಾಡುತ್ತಿದ್ದ

‘‘ಇನ್ನು ಹೆಂಗಸರನ್ನು ಕಟ್ಟಿ ಹಾಕುವವರೇ ಇಲ್ಲ…’’

ಝಾಡಿಸಿದ!

ಆಗ ನನಗೆ, ನನ್ನ ಎರಡು ಕಾಲುಗಳನ್ನು

ಕಟ್ಟಿ ಹಾಕಿರುವುದು ಗಮನಕ್ಕೆ ಬಂತು!

‘ಟಿಕೆಟ್!’

ಪುರುಷ ಕಂಡಕ್ಟರ್ ನನ್ನೆದುರು ಬಂದು ನಿಂತು

‘‘ಎಲ್ಲಿಗೆ?’’ ಎಂದು ಕೇಳುತ್ತಿದ್ದಾನೆ

ಅವನ ಮುಖದಲ್ಲಿ ಮಿಡಿನಾಗರದಂತೆ

ಹರಿಯುತ್ತಿದ್ದ ವ್ಯಂಗ್ಯ ನಗುವೊಂದು

ನನ್ನ ಎದೆಯನ್ನು ಇರಿಯುತ್ತಾ ಹೋಯಿತು

ಇನ್ನಾದರೂ ನಿರ್ಧರಿಸಲೇ ಬೇಕು

ನಾನು ತಲುಪಬೇಕಾದ ಊರನ್ನು!

‍ಲೇಖಕರು avadhi

4 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading