ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಒಂದು ಕರೆ-ಸಾವಿರಾರು ಜನ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

22

ʻಅಮ್ಮಾ ನಿನಗೂ ಅಪ್ಪನಿಗೂ ಅಷ್ಟೊಂದು ಏಜ್ ಗ್ಯಾಪ್ ಇತ್ತಾ?ʼಎಂದು ಆಶಾ ಕೇಳಿದಾಗಲೇ ನನಗೆ ಈ ಕಡೆ ಗಮನ. ʻಪ್ರೀತಿ ಅನ್ನೋದು ಹೇಳಿ ಕೇಳಿ ಆಗೋದಲ್ಲ ಕಣೆ. ನೀನಿನ್ನೂ ಮಲಗಿಲ್ವಾʼ ಎಂದೆ. ಅವಳ ಕಣ್ಣುಗಳಲ್ಲಿ ನಿದ್ದೆ ತೂಗುತ್ತಿದ್ದರೂ ಅಪ್ಪನ ಬಗ್ಗೆ ನಾನೆಂದೂ ಹೇಳದೇ ಇರುವ ಕಥೆಗಳನ್ನು ಅತ್ತೆ ಹೇಳುತ್ತಿದ್ದರೆ, ಅಂಥಾ ಅಪ್ಪನ ಮಗಳು ತಾನು ಎನ್ನುವ ಹೆಮ್ಮೆ ಅವಳ ಕಣ್ಣುಗಳಲ್ಲಿ ಕಾಣುತ್ತಿತ್ತು. ನಿಜ ಸತೀಶ, ಆಶಾಗೆ ಮಾತ್ರವಲ್ಲ ನನಗೂ ದಂತಕಥೆಯ ಹಾಗೆ ಭಾವಿತವಾಗತೊಡಗಿದ್ದ. ನಾನು ಕಂಡ ಸತೀಶನಿಗೆ ಅತ್ತೆ ತಮ್ಮ ಕಲ್ಪನೆಯನ್ನೂ ಸೇರಿ ಹೇಳುತ್ತಿದ್ದಾರೆಯೇ ಅಥವಾ ಅವನು ಇದ್ದದ್ದೇ ಹಾಗಾ? ಗೊತ್ತಾಗದೆ ಒದ್ದಾಡಿದೆ.       

ಇನ್ನೂ ಆಶಾ ಹುಟ್ಟಿರಲಿಲ್ಲ. ಏಳೆಂಟನೇ ತಿಂಗಳಿರಬೇಕು. ಬಯಕೆ ಎಂದು ಅಮ್ಮ ಮನೆಯಿಂದ ಏನನ್ನಾದರೂ ಕಳಿಸುತ್ತಿದ್ದಳು. ಅತ್ತೆ ಮಾವ ಮಾತ್ರ ಊರೊಳಗೆ ಹೋಗುತ್ತಿರಲಿಲ್ಲ. ಹೋಗಬಾರದೆಂದೇನೂ ನಿಯಮ ಇಲ್ಲದಿದ್ದರೂ ಹೋಗದಿರುವುದು ಅಭ್ಯಾಸ ಆಗಿಬಿಟ್ಟಿತ್ತು. ನಾನು ಮಾತ್ರ ಅಮ್ಮನ ಮನೆಗೆಂದು ಹೋಗಿಬರುತ್ತಲೇ ಇದ್ದೆ. ಒಮ್ಮೊಮ್ಮೆ ಹೋರಾಟ, ಮೀಟಿಂಗ್ ಎಂದು ಸತೀಶ ವಾರಗಟ್ಟಲೆ ಹೋದಾಗ ಅತ್ತೆ ಹೋಗಿ ಅಮ್ಮನ ಮನೆಯಲ್ಲಿದ್ದು ಬಾ ಎಂದು ಕಳಿಸುತ್ತಿದ್ದರು. ಅಮ್ಮನ ಮನೆಗೂ ಅವರು ಬರಲಿಲ್ಲ. ಅಮ್ಮನೂ ಅವರನ್ನು ಯಾವತ್ತು ಕರೆಯಲಿಲ್ಲ. ಎರಡು ಕೋಲು ಏರಿಸಿ ಗರಿ ಹೊಚ್ಚಿದ್ದ ಈ ಗುಡಿಸಿಲಿಗೆ ಏನಂತ ಕರೀಲಿ ಎನ್ನುತ್ತಿದ್ದಳು. ಅಗತ್ಯವಸ್ತುಗಳನ್ನು ಮಾವ ನಮ್ಮ ಮನೆಗೆ ಸ್ವಲ್ಪವೇ ದೂರವಿರುವ ಇನ್ನೊಂದು ಹಳ್ಳಿಯಿಂದ ತರುತ್ತಿದ್ದರು. ಕೇಳಿದರೆ ನಾನೇ ಆ ಊರನ್ನು ಬಹಿಷ್ಕರಿಸಿದ್ದೇನೆ ಎನ್ನುತ್ತಿದ್ದರು – ಮಿಕ್ಕ ಹಾಗೆ ಒಂದೂವರೆ ಎಕರೆಯಲ್ಲಿ ನಾವೇನು ಬೆಳೆದುಕೊಳ್ಳುತ್ತೇವೋ ಅದೇ ಊಟಕ್ಕೆ. ನಮಗೆ ಜಾಸ್ತಿಯಾಗಿದ್ದನ್ನು ಮಾತ್ರ ಮಾರುತ್ತಿದ್ದುದು. ಆದರೂ ಬದುಕು ಎಷ್ಟೊಂದು ಚೆನ್ನಾಗಿತ್ತಲ್ಲವಾ!

ಸತೀಶ ಹೋದ ಕಡೆಯಿಂದೆಲ್ಲಾ ಒಂದೊಂದು ಕಥೆಯನ್ನು ತರುತ್ತಿದ್ದ. ತುಂಬು ಗರ್ಭಿಣಿಯಾಗಿದ್ದ ನನಗೆ ಆಯಾಸ. ಹೊರಗೆ ಹೋಗುವುದು ಬೇಡವಾಗುತ್ತಿತ್ತು. ದಿನವಿಡೀ ಅವನಿಗೋಸ್ಕರ ಕಾಯುವುದು ತುಂಬಾ ಇಷ್ಟ ಆಗುತ್ತಿತ್ತು. ಮನೆಯ ಮುಂದಿನ ಮಲ್ಲಿಗೆಯ ಬಳ್ಳಿ ದುಂಡು ಮೊಗ್ಗುಗಳನ್ನು ಅರಳಿಸುತ್ತಿದ್ದರೆ, ಬಸುರಿ ಹುಡುಗಿ ಎಂದು ಅತ್ತೆ ಅವುಗಳನ್ನು ಬಿಡಿಸಿ ಕಟ್ಟಿ ಇಟ್ಟರೂ ಮುಡಿಯುತ್ತಿರಲಿಲ್ಲ. ಯಾಕೋ ಮಲ್ಲಿಗೆಯ ಪರಿಮಳ ತಲೆನೋವನ್ನು ತರುತ್ತಿತ್ತು. ʻನಾವಿಬ್ಬರೂ ಹೀಗೆ ಕ್ರಾಂತಿ ಎಂದು ಹೊರಟಾಗ ನಮ್ಮ ಮಗುವಿಗೆ ಹೇಗೆ ಪರಿಮಳ, ಮೃದುತ್ವ ಎಲ್ಲಾ ಇಷ್ಟವಾಗಬೇಕು? ಅದೂ ಮಹಾನ್ ಕ್ರಾಂತಿಕಾರಿಯೇ ಆಗಿರುತ್ತೆʼ ಎಂದು ಸತೀಶ ರೇಗಿಸುತ್ತಿದ್ದ. ಅವನು ಸದಾ ನನ್ನ ಬಳಿ ಇರಬೇಕು ಅನ್ನಿಸುತ್ತಿತ್ತಾದರೂ ಒಮ್ಮೆಯೂ ಇರು ಎಂದು ಹೇಳಲಿಲ್ಲ. ಅವನ ಜವಾಬ್ದಾರಿ ನನಗರ್ಥವಾಗುತ್ತಿತ್ತು. ಈ ವಿಷಯಕ್ಕೆ ನನ್ನ ಬಗ್ಗೆ ಹೆಮ್ಮೆ ಇತ್ತು. ಅವನು ಬಂದನೆಂದರೆ ಏನೋ ಉತ್ಸಾಹ. ಹೇಳುತ್ತಿದ್ದ ಕಥೆಗಳನ್ನು ಕಣ್ಣ ಮುಂದೆ ಕಲ್ಪನೆ ಮಾಡಿಕೊಳ್ಳುತ್ತಾ ರೋಮಾಂಚಿತಳಾಗುತ್ತಿದ್ದೆ. ವಿವರಗಳ ಆಳಕ್ಕಿಳಿಯಲು ಅಲ್ಲೇನು ನಡಿಯಿತು ಎನ್ನುವುದನ್ನು ನನ್ನ ಅನುಭವದ ಮೂಲಕ ಅಳೆಯುತ್ತಿದ್ದರಿಂದ ನನಗೆ ಗೋಚರವಾಗುತ್ತಿದ್ದುದು ಬರೀ ನೂರಾರು ಜನ ಮಾತ್ರ. ʻಹುಚ್ಚಿ ಅಲ್ಲಿದ್ದುದ್ದು ನೂರಾರು ಜನ ಅಲ್ಲ ಸಾವಿರಾರು ಜನ. ಎಲ್ಲ ಎಲ್ಲಿಂದ ಬರ್ತಾರೆ ಗೊತ್ತಾಗ್ತಾ ಇಲ್ಲ. ಆದರೆ ಒಂದು ಕರೆ ಅದು ಬಾಯಿಂದ ಬಾಯಿಗೆ ಹರಡಿ ನಮ್ಮ ಹೋರಟಕ್ಕೆ ದೊಡ್ಡ ಬಲ ಬರ್ತಾ ಇದೆ. ನಿನಗೆ ಗೊತ್ತಾ. ಹತ್ತು ಹನ್ನೆರಡರ ವಯಸ್ಸಿನ ಮಕ್ಕಳು ನಮ್ಮ ಹೋರಾಟದ ಭಾಗವಾಗುತ್ತಿದ್ದಾರೆ ಎಂದರೆ ಅಕ್ಷರಕ್ಕೆ ಎಂಥಾ ದೊಡ್ಡ ಶಕ್ತಿ ಇದೆಯಲ್ಲವೇʼ ಎಂದು ಅವನು ಹೇಳುತ್ತಿದ್ದರೆ, ʻಹೌದಾ?ʼ ಎಂದು ಬಾಯಿ ತೆಗೆದುಕೊಂಡು ಕೂರುತ್ತಿದ್ದೆ. ಅವನಿಗೋ ಕೈತುಂಬಾ ಕೆಲಸ. ಇವತ್ತೆಲ್ಲಿ ಹೋದೆವು? ಏನು ಮಾಡಿದೆವು? ಎಲ್ಲವನ್ನೂ ಬರೆದಿಡುತ್ತಿದ್ದ. ʻಇದೆಲ್ಲಾ ಯಾಕೆ ಸತೀಶ ಇದರಿಂದ ಏನು ಪ್ರಯೋಜನ?ʼ ಎಂದರೆ, ʻಅಂತಿಮವಾಗಿ ಹೋರಾಟದ ಫಲಶ್ರುತಿ ಏನಾಗುತ್ತದೆ, ಅದಕ್ಕಾಗಿ ನಮ್ಮ ಪಯಣ ಏನಾಗಿತ್ತು ಎನ್ನುವುದನ್ನು ಮುಂದೆ ಹೋರಾಟ ಮಾಡುವವರಿಗೆ ತಲುಪಿಸ ಬೇಕಲ್ಲವೇ? ನಾಳೆ ನಾವೇ ತಿರುಗಿ ನೋಡಿದಾಗ ರೋಮಾಂಚನಕ್ಕೆ ನೆನಪುಗಳ ಅಗತ್ಯ ಇದೆಯಲ್ಲವೇ, ಅದಕ್ಕೆʼ ಎನ್ನುತ್ತಿದ್ದ. ನನ್ನ ಅತ್ಯಂತ ಸಂಕಷ್ಟದ ಕಾಲದಲ್ಲಿ ಈ ಬರವಣಿಗೆಗಳೇ ನನ್ನ ಬದುಕನ್ನು ತೀರ್ಮಾನಿಸುವ ನಿರ್ಣಾಯಕ ಸಂಗತಿಗಳಾಗಿದ್ದು.

ಇವತ್ತು ಏನಾಯ್ತು ಗೊತ್ತಾ? ಎಂದು ಶುರು ಮಾಡಿದನೆಂದರೆ ಅಲ್ಲೊಂದು ಕಥೆ. ಕಥೆ ಎಂದರೆ ಕಥೆಯಲ್ಲ ಬದುಕಿನ ದಾರುಣತೆ. ಮನುಷ್ಯರನ್ನು ಮನುಷ್ಯರೆಂದು ನೋಡದ ಮೇಲ್ಜಾತಿಯ, ವರ್ಗದ ಜನಗಳ ಸ್ವಾರ್ಥ. ಗೇಣುಭೂಮಿಯ ಕನಸನ್ನು ನನಸು ಮಾಡಲಿಕ್ಕೆ ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ. ಊರು ಊರಿಗೆ ಹೋಗಿ ಅಲ್ಲಿ ಭೂಮಿ ಇಲ್ಲದವರನ್ನು ಗುರುತಿಸಬೇಕು, ನಂತರ ಭೂಮಿಯನ್ನು ಗುರುತಿಸಬೇಕು. ಇದೆಲ್ಲಾ ಆದ ಮೇಲೆ ಸರಕಾರದ ಗಮನಕ್ಕೆ ತಂದು ಕಾಡು ಕಡಿಯಬೇಕಿತ್ತು. ಹಗಲು ರಾತ್ರಿ ಎನ್ನದೆ ಜನರ ಸಹಾಯದಿಂದ ಕಾಡನ್ನು ಕಡಿದು ಬಂದರೆ ನಾಳೆ ಕಳೆಯುವುದರೊಳಗೆ ಊರಿನ ಶ್ರೀಮಂತರು, ʻಇದು ನಮಗೆ ಸೇರಿದ್ದ ಜಾಗ, ಉಳುಮೆ ಮಾಡದೆ ಸುಮ್ಮನೆ ಬೀಳುಬಿಟ್ಟಿದ್ದೀವಿʼ ಎಂದು ದಾಖಲೆಗಳನ್ನು ಸೃಷ್ಟಿಸಿ ತರುತ್ತಿದ್ದರು. ಅಸಹಾಯಕ ಜನ ತಮ್ಮ ಜೀವನ ಕಟ್ಟಿಕೊಳ್ಳಲು ಇರುವ ದಾರಿಗಳನ್ನು ಇಂಥವರು ನುಂಗಿ ಹಾಕುತ್ತಿದ್ದುದನ್ನು ಹೇಳಿ ಬೇಸರ ವ್ಯಕ್ತಪಡಿಸುತ್ತಿದ್ದ. ಒಮ್ಮೆಯಂತೂ ಕಾಲಿಗೆ ಆದ ಗಾಯ ಮಾಯದೇ ಹುಣ್ಣು ಜಾಸ್ತಿ ಆಗಿ ಕೀವು ಸುರಿಯ ತೊಡಗಿದಾಗ ನಾನೇ ಈ ಹೋರಾಟನೂ ಬೇಡ ಏನೂ ಬೇಡ ಅಂತ ಗಲಾಟೆ ಮಾಡಿದ್ದೆ. ಮಾವ ಕಾಡಿನಿಂದ ಯಾವುದೋ ಗಿಡದ ಎಲೆಗಳ ರಸವನ್ನು ಹಿಂಡಿ ವಾಸಿಯಾಗುತ್ತೆ ಎಂದಿದ್ದರು. ಹೊರಟ ಅವನಿಗೆ ಆಸ್ಪತ್ರೆಗೆ ತೋರಿಸು ಎಂದು ಸಾರಿ ಸಾರಿ ಹೇಳಿದ್ದೆ. ಕೆಲವೊಮ್ಮೆ ಒಪ್ಪಿ ತಾವೇ ಜಾಗ ಆಯ್ಕೆ ಮಾಡಿ ಇನ್ನೇನು ಆಯಿತು ಎನ್ನುವಷ್ಟರಲ್ಲಿ ಅವರೇ ತಮಗೆ ಆ ಜಾಗ ಬೇಡ ಊರಿಂದ ದೂರ, ನಮ್ಮ ಕೆಲಸಕ್ಕೂ ನಮ್ಮ ವಾಸದ ಜಾಗಕ್ಕೂ ಇಷ್ಟು ದೂರ ಆದರೆ ಓಡಾಡುವುದು ಹೇಗೆ? ಕಾಡುಪ್ರಾಣಿಗಳ ಕಾಟ ಎಂದೆಲ್ಲಾ ಕಾರಣ ಹೇಳುತ್ತಿದ್ದರಂತೆ. ʻಕೆಲವೊಂದು ಕಡೆ ಕೊಲೆಗಳಾಗಿದ್ದೂ ಉಂಟು. ಇದೆಲ್ಲಾ ಸುಮ್ಮನೆ ಆದವು ಎಂದುಕೊಳ್ಳಬೇಡ ಇದರ ಹಿಂದೆ ಬೇರೆ ಬೇಯವರದ್ದೇ ಕೈವಾಡ ಇರುತ್ತೆʼ – ಹೀಗೆ ಅವನು ಹೇಳುತ್ತಿದ್ದ ಸಂಗತಿಗಳು ನನ್ನೊಳಗೆ ತಲ್ಲಣವನ್ನು ಹುಟ್ಟುಹಾಕುತ್ತಿತ್ತು. ಒಮ್ಮೆಯಂತೂ ಹೀಗೆ ಜಾಗ ಗುರ್ತು ಮಾಡಲು ಹೋಗಿ ಕೈಗೆ ಹೊಡೆತಬಿದ್ದು ಕೈ ಮಡಚಿದರೆ ಹಾಗೇ ಲಾಕ್ ಆಗಿಬಿಡುತ್ತಿತ್ತು. ಬಲವಂತಕ್ಕೆ ಬಿಡಿಸಿಕೊಳ್ಳಬೇಕಿತ್ತು. ಇಷ್ಟಾದರೂ ಅವನ ಉತ್ಸಾಹಕ್ಕೆ ಭಂಗವೇನೂ ಬಂದಿರಲಿಲ್ಲ.

ತನ್ನ ಕೆಲಸದಲ್ಲಿ ಸತೀಶ ಎಷ್ಟು ಮಗ್ನನಾಗಿರುತ್ತಿದ್ದ ಎಂದರೆ ಅವನಿಗೆ ಶೇವ್ ಮಾಡುವುದರಲ್ಲಿ ಆಸಕ್ತಿಯೇ ಇರಲಿಲ್ಲ. ಎಂದಾದರೂ ಬಿಡುವಾದಾಗ ನನ್ನ ಹೊಟ್ಟೆಯ ಮೇಲೆ ಕೈಯಿಟ್ಟು ಮಗುವಿನ ಜೊತೆ ಮಾತಾಡುತ್ತಿದ್ದ. ನಾನು, ʻನಾಳೆ ಇಷ್ಟು ಸಿಹಿಯಾಗಿ ಮಾತಾಡುವ ಅಪ್ಪ ನೀನೇ ಎಂದು ನಂಬದ ಮಗು, ಅಪ್ಪ ನನಗೆ ನಿನ್ನ ನೋಡಿದ್ರೆ ಭಯ ಆಗುತ್ತೆ ಅಂದ್ರೆ ಏನು ಮಾಡ್ತೀಯ?ʼ ಎನ್ನುತ್ತಿದ್ದೆ. ʻನನ್ನ ಮಗು ನನ್ನೋಡಿ ಹೆದರುವುದಾ? ಅದು ಹೋರಾಟಗಾರನ ಮಗುʼ ಎಂದು ನಗುತ್ತಿದ್ದ. ಒಂದು ದಿನ ಚಿಕ್ಕೋಳಮ್ಮ ಬ್ಲೇಡನ್ನ ತಂದುಕೊಟ್ಟು, ʻಅಯ್ಯ ಮೊದಲು ಗಡ್ಡಬೋಳಿಸು ಒಳ್ಳೇ ಬಟ್ಟೆ ಇಕ್ಕೋ, ನಿನ್ನ ಇಂಗೆ ನೋಡೋಕ್ಕೆ ಆಗ್ತಾ ಇಲ್ಲ ಎಂಗಿದ್ದವ ಎಂಗಾಗಿ ಓದೆʼ ಎಂದು ವರಾತ ಹಚ್ಚಿದ್ದರಿಂದ, ʻಆಯ್ತು ಚಿಕ್ಕಿʼ ಎಂದು ಗಡ್ದ ಬೋಳಿಸಿದ್ದ. ʻನಾವು ಹೇಳಿದ್ರೆ ಆಗ್ಲಿಲ್ಲ ನೋಡು ಆ ಚಿಕ್ಕೋಳು ಹೇಳಿದ್ರೆ ಆಯ್ತುʼ ಎಂದು ಅತ್ತೆ ಹಾಸ್ಯ ಮಾಡಿದಾಗ, ʻನಿಮಗೆ ಹೇಳಿದ್ರೆ ಅರ್ಥ ಆಗುತ್ತೆ. ಅವಳಿಗೆ ಈ ಹೋರಾಟ, ನನ್ನ ಸಂಕಟ, ಸಮಯವಿಲ್ಲದೆ ಇರೋದು ಎಲ್ಲಾ ಏನು ಗೊತ್ತಾಗುತ್ತೆ? ಅವಳಿಗೆ ಗೊತ್ತಿರೋದು ಒಂದೇ ನನ್ನ ಮೇಲಿನ ಪ್ರೀತಿʼ ಎಂದು ನಕ್ಕಿದ್ದ. ʻಏನೇ ಹೇಳು ಇವತ್ತು ಮಾತ್ರ ನೀನು ತುಂಬಾ ಮುದ್ದಾಗಿ ಕಾಣ್ತಾ ಇದೀಯʼ ಎಂದು ಅವನನ್ನು ತುಂಟತನದಿಂದ ರೇಗಿಸಿದ್ದೆ. ಹೌದಾ ಎಂದು ನನ್ನ ತಬ್ಬಿದ್ದ.   

ಅದ್ಯಾವ ಊರೆಂದು ನನಗೂ ನೆನಪಿಲ್ಲ. ವ್ಯವಸಾಯದ ಭೂಮಿಗಾಗಿ ಹೋರಾಟವೊಂದು ನಡೆದಿತ್ತು. ಈ ಸಂಬಂಧ ನಾಲ್ಕಾರು ಜನರ ಜೊತೆ ನಮ್ಮ ಮನೆಗೆ ಬಂದಿದ್ದರು. ಗೋಮಾಳದ ಕುರುಚುಲು ಕಾಡನ್ನು ಆಗಲೇ ಅಕ್ಕಪಕ್ಕ ರೈತರು, ರೈತರಿಗಿಂತ ಜಮೀನುದಾರರು ಒತ್ತುವರಿ ಮಾಡಿಕೊಂಡು ಬಿಟ್ಟಿದ್ದರು. ಆದರೆ ಆ ಊರಲ್ಲಿ ಆ ಜಾಗ ಬಿಟ್ಟು ಬೇರೆ ಜಾಗ ಇಲ್ಲ. ಏನು ಮಾಡುವುದು ತೋಚುತ್ತಿಲ್ಲ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು. ದೀರ್ಘವಾಗಿ ಯೋಚಿಸಿದ ಸತೀಶ ಗುರುತಾದ ಜಾಗದಲ್ಲಿ ಬೆಳೆ ಇಡೋಣ ಎಂದ. ಅಚ್ಚರಿಯಿಂದ ನೋಡಿ, ʻಅದು ಹೇಗೆ ಸಾಧ್ಯ ಸತೀಶ. ಗುರುತು ಮಾಡಿರುವುದು ೧೦೦ ಎಕರೆ ಜಾಗವನ್ನುʼ ಎಂದರು. ʻಹಾ ಯಾಕೆ ಆಗಬಾರದು? ಅಲ್ಲಿರುವ ಜನರಿಗೆ ಒಂದೋ ಎರಡು ಎಕರೆಯನ್ನು ತಾನೆ ಕೊಡ್ತಾ ಇರೋದು. ಅಷ್ಟು ಜಾಗವನ್ನು ಉಳುಮೆ ಮಾಡಲು ಸಾಧ್ಯವಿಲ್ಲವೋ?ʼ ಎಂದಿದ್ದ. ಬಂದವರು ಇದೇ ಸರಿಯಾದ ಉಪಾಯ ಎಂದು ತಲೆ ಆಡಿಸಿದ್ದರು. 

ವಾರ ಕಳೆದು ವಾಪಾಸು ಬರುವಾಗ ಸತೀಶನ ಮುಖ ಕಳೆಗುಂದಿತ್ತು. ಇಷ್ಜೆಲ್ಲಾ ಯೋಚಿಸಿ ಅಲ್ಲಿ ಹೋದರೆ ಅಲ್ಲಿ ಪರಿಸ್ಥಿತಿಯೇ ಬೇರೆಯಾಗಿತ್ತಂತೆ. ಜನ ರಾತ್ರೋರಾತ್ರಿ ಜಾಗವನ್ನು ಕ್ಲೀನ್ ಮಾಡಿ, ಯಾರಿಗೂ ಗೊತ್ತಾಗದಂತೆ ಉಳುಮೆ ಮಾಡಿ, ಬೆಳೆ ಇಟ್ಟಿದ್ದೂ ಆಯಿತಂತೆ. ಆದರೆ ಪರಿಸ್ಥಿತಿ ಎಂದಿನಂತೆ ಇರಲಿಲ್ಲವಾದ್ದರಿಂದ, ಅವರ ಮೇಲೆ ಕೇಸುಗಳು ಒಂದರ ಮೇಲೆ ಒಂದರಂತೆ ಬೀಳತೊಡಗಿದ ತಕ್ಷಣ, ಅದು ರೆವೆನ್ಯೂ ಭೂಮಿ ಅಂತ ರೆಕಾರ್ಡ್ ತೆಗೆದುಕೊಂಡು ತಹಸೀಲ್ದಾರರ ಹತ್ತಿರ ಹೋಗಿದ್ದಾರೆ. ಇದಕ್ಕೆಲ್ಲಾ ಪರ್ಮೀಷನ್ ತೆಗೆದುಕೊಳ್ಳದೆ ಯಾಕೆ ಮಾಡಿದ್ರಿ ಎಂದು ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡರಂತೆ. ವಾಪಾಸಾದ ಸತೀಶ ಎಂದಿಲ್ಲದ ನಿರುತ್ಸಾಹದಿಂದ ಮಾತಾಡಿದ್ದ. ʻಹೋಗಲಿ ಬಿಡು. ಎಲ್ಲ ದಿನಗಳೂ ಒಂದೇ ಅಲ್ಲವಲ್ಲʼ ಎಂದು ಸಮಾಧಾನ ಹೇಳಿದ್ದೆ. ʻಇಲ್ಲ ಚೇತು, ಆ ಜನ ಶತಮಾನಗಳಿಂದ ಭೂಮಿಯ ಕನಸನ್ನು ಕಂಡವರು. ಈಗಲೂ ಸಿಕ್ಕಿಲ್ಲ ಅಂದ್ರೆ ಯಾವಾಗಲೂ ಸಿಗಲ್ಲ ಎಂತಲೇ ಅರ್ಥʼ ಎಂದಿದ್ದ. ಅವನ ಈ ನಿರಾಸೆಗೆ ಕಾರಣ ಅಲ್ಲಿ ನಡೆದ ಘಟನೆಯೋ ಅಥವಾ ಸೋತೆ ಎನ್ನುವ ಭಾವನೆಯೋ ತಿಳಿಯಲಿಲ್ಲ.   

ಇದಾದ ಸ್ವಲ್ಪ ದಿನಗಳಲ್ಲೇ ಪೋಲೀಸರು ಮನೆಗೆ ಬಂದಿದ್ದರು. ಸತೀಶನನ್ನು ಅರೆಸ್ಟ್ ಮಾಡಿ ಕರೆದೊಯ್ಯುತ್ತಿದ್ದರೆ, ಯಾಕೆಂದು ಗೊತ್ತಾಗದೆ ಕಂಗಾಲಾಗಿದ್ದೆವು. ʻನ್ಯಾಯಕ್ಕಾಗಿ ಹೋರಾಟ ಮಾಡ್ತಾ ಇದೀವಿ. ಇದರಲ್ಲಿ ನಮ್ಮ ಸ್ವಾರ್ಥ ಏನೂ ಇಲ್ಲ. ಯೋಚನೆ ಮಾಡಬೇಡ. ನಾನು ವಾಪಾಸು ಬರುತ್ತೇನೆʼ ಎಂದಿದ್ದ. ಅವನ ಧ್ವನಿಯಲ್ಲಿ ವೀರಯೋಧನ ಗತ್ತಿತ್ತು. ಸರಕಾರ ಭೂಸ್ವಾದೀನದ ಕಾರ್ಯದಲ್ಲಿ ಭಾಗವಹಿಸಿದ್ದ ಉಳಿದ ಕಾರ್ಯಕರ್ತರನ್ನು ಮನೆಮನೆಗೆ ಬಂದು ಅರೆಸ್ಟ್ ಮಾಡಿ ಜೈಲಿಗೆ ಹಾಕಿಬಿಟ್ಟರು. ಫಾರೆಸ್ಟ್ ಡಿಪಾರ್ಟ್ಮೆಂಟ್‌ನವರು ಫೋರ್ಸ್ ತಗೊಂಡು ಹೋಗಿ ಗಲಾಟೆಗೆ ಕಾರಣವಾಗಿದ್ದ ಜಾಗದ ಸುತ್ತಾ ಬೇಲಿಯನ್ನೂ ಹಾಕಿಬಿಟ್ಟರು. ಊರಿಗೂರಿಗೇ ಭಯದ ವಾತಾವರಣ. ಆಗ ಜೈಲಿಗೂ ಹೋಗಿ ಸಾಹಾ ಭೇಟಿಯಾಗಿ ಬಿಡುಗಡೆಯ ಮಾತನ್ನಾಡಿದರೆ ಸತೀಶ ಜನರ ಭೂಮಿಯ ಬಗ್ಗೆ ಮಾತಾಡಿದನಂತೆ. ʻಏನಮ್ಮಾ ನಿನ್ನ ಗಂಡ? ಅವನ ಬಗ್ಗೆ ಅವನಿಗೆ ಕಾಳಜಿಯೇ ಇಲ್ಲ. ನಾವು ಬಚಾವಾದರೆ ಇದಲ್ಲ ಇನ್ನೊಂದು ಹೋರಾಟ, ಮತ್ತೊಂದಷ್ಟು ಜನರಿಗೆ ನ್ಯಾಯ ಅಲ್ಲವಾ? ನೀನಾದರೂ ಬುದ್ದಿ ಹೇಳುʼ ಎಂದಿದ್ದರು. ʻನೀವವನ ಗುರು. ನಿಮ್ಮ ಮಾತನ್ನೇ ಕೇಳದ ಮೇಲೆ ನನ್ನ ಮಾತನ್ನು ಕೇಳುತ್ತಾನೆಯೇ?ʼ ಎಂದಿದ್ದೆ.

ಸಾಹಾ ಇಂತಲ್ಲೆಲ್ಲಾ ಅಂತಃಕರಣಪೂರ್ವಕವಾಗಿ ಕೆಲಸ ಮಾಡುತ್ತಿದ್ದರು. ಅವರ ಒಂದೊಂದು ಮಾತುಗಳನ್ನು ಸತೀಶ ಹೇಳುತ್ತಿದ್ದರೆ, ಸಾಹಾರ ಬಗ್ಗೆ ನನ್ನೊಳಗೆ ಆರಾಧನೆಯ ಭಾವ ಬೆಳೆಯುತ್ತಿತ್ತು. ಅವರೂ ಅದನ್ನ ಇಲ್ಲಿಗೇ ಬಿಡದೆ ಸರಕಾರದ ಜೊತೆ ಮಾತಾಡಿ ಒಪ್ಪಿಗೆ ಪಡೆದ ನಂತರ ಸ್ಪೆಷಲ್ ಡಿಸಿಯ ಜೊತೆ ಓಡಾಡಿ ಸಮಸ್ಯೆಯನ್ನು ವಿವರಿಸಿ ಹೇಳಿದ್ದೇ ಅಲ್ಲದೆ, ಗುರುತಿಸಿದ್ದ ಜಾಗಗಳನ್ನು ತೋರಿಸಿ ಅವರನ್ನು ಕನ್ವಿನ್ಸ್ ಮಾಡಿದ್ದರು. ಸತೀಶನ ಸಮಾಧಾನ ಬಹುಕಾಲ ಉಳಿಯಲಿಲ್ಲ. ಬದಲಿ ಜಾಗಕ್ಕೂ ಫಾರೆಸ್ಟ್ ಡಿಪಾರ್ಟ್ಮೆಂಟ್‌ನವರು ಮತ್ತೆ ಕಿರಿಕಿರಿ ಶುರು ಮಾಡಿದರು. ಬದಲಿ ಜಾಗಕ್ಕೆ ಹೋಗುವಾಗ ಮಧ್ಯದಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟ್‌ಗೆ ಸಂಬಂಧಿಸಿದ ಜಾಗವಿತ್ತು. ಈ ಬಿಸಿಯಲ್ಲಿ ಆ ಜಾಗವನ್ನೂ ಮತ್ತೆಲ್ಲಿ ಒತ್ತುವರಿ ಮಾಡಿ ಬಿಡ್ತಾರೋ ಎನ್ನುವ ಭಯದಿಂದ ಅವರು ಜನರನ್ನು ಅಲ್ಲಿಗೆ ಬರದೇ ಇರುವ ಹಾಗೆ ತಡೆಯುತ್ತಿದ್ದರು. ಆನೆ, ಹುಲಿಕಾಟ ಅಂತೆಲ್ಲಾ ಹೇಳಿ ಹೆದರಿಸಿದ್ರು. ಜನ ಜೀವಂತವಾಗಿದ್ರೆ ಕೂಲಿ ಮಾಡ್ಕೊಂಡಾದ್ರೂ ಬದುಕಬಹುದು. ಅದಕ್ಕೆಲ್ಲಿ ಕಲ್ಲು ಬೀಳುತ್ತೋ ಅಂತ ಹಿಂದೇಟು ಹಾಕಿದ್ರು. ಹೀಗಾಗಿ ಅಷ್ಟೂ ಹೋರಾಟ ವ್ಯರ್ಥವಾಗಿ ಹೋಯ್ತು. ಪೊಲೀಸರು, ಅರಣ್ಯ ಇಲಾಖೆಯವರು ಹಾಕಿದ್ದ ಕೇಸಿಗೆ ಮಾತ್ರ ಕೋರ್ಟಿಗೆ ಸುತ್ತುವುದು ತಪ್ಪಲಿಲ್ಲ. ಈ ಸೋಲು ಸತೀಶನ್ನು ಕಂಗೆಡಿಸಿತ್ತು.

ಆದರೆ ಈ ಸೋಲಿನ ಪರಿಣಾಮ ಮಾತ್ರ ಸುತ್ತಮುತ್ತಲ ಜಮೀನುದಾದರೆಲ್ಲಾ ಒಂದಾಗಿ ಹೋಗಿದ್ದು. ಇಷ್ಟು ದೊಡ್ಡ ಹೋರಾಟಕ್ಕೆ ಯಾವ ಬೆಂಬಲ ಸಿಗುತ್ತಿದೆ? ಎಲ್ಲಿಂದ ಹಣ ಬರುತ್ತಿದೆ ಎನ್ನುವ ಅನುಮಾನ ಕಾಡತೊಡಗಿದ್ದು. ಆಗಲೇ ಇನ್ನೊಂದು ಪಿತೂರಿ ಹುಟ್ಟಿದ್ದು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

July 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: