ಬಿ ಆರ್ ಎಲ್ ‌ʼನವೋನ್ಮೇಷʼ

ಕನ್ನಡದ ಮುಖ್ಯ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಹೊಸ ಸಂಕಲನ ಮಾರುಕಟ್ಟೆಯಲ್ಲಿದೆ. ನವೋನ್ಮೇಷಕ್ಕೆ ವಿಮರ್ಶಕ, ಕವಿ ಚಿಂತಾಮಣಿ ಕೊಡ್ಲೆಕೆರೆ ಬರೆದ ಮುನ್ನುಡಿ ಇಲ್ಲಿದೆ. ಅಂಕಿತ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ.

                ಚಿಂತಾಮಣಿ ಕೊಡ್ಲೆಕೆರೆ 

ಕನ್ನಡದ ಮಹತ್ವದ ಕವಿಗಳಲ್ಲೊಬ್ಬರಾದ ಶ್ರೀ ಬಿ.ಆರ್. ಲಕ್ಷ್ಮಣರಾವ್ ಅವರ ಒಂಬತ್ತನೆಯ ಕವನ ಸಂಕಲನವಿದು. ನವನವೋನ್ಮೇಷ , ಹೊಸತು ಹೊಸತಾಗಿ ಅರಳುವುದು, ಹೊಸ ಹೊಳಹು, ಹೊಸ ಹೊಸ ಭಾವಗಳನ್ನು ಸಂತತವಾಗಿ ಕಾಣುವುದು, ಕಟ್ಟುವುದು ..  ಪ್ರತಿಭೆಯ  ಮುಖ್ಯ ಲಕ್ಷಣವೆಂದು ಕಾವ್ಯ ಮೀಮಾಂಸಕರು ಗುರುತಿಸಿದ್ದಾರೆ. ಆರಂಭದಿಂದಲೂ ಅದು  ಈ ಕವಿಯ ಕಾವ್ಯದ ಗುಣವಾಗಿದೆ.  ಈ ನವ ನವೀನತೆಯೇ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಪ್ರಸ್ತುತ ಸಂಕಲನವೂ ಅವರ ಕಾವ್ಯಪ್ರತಿಭೆಯ ನವೋನ್ಮೇಷಕ್ಕೆ ಸಾಕ್ಷಿಯಾಗಿದೆ.

“ಆನು ಒಲಿದಂತೆ ಹಾಡುವೆ”  ಇದು ಬಿ.ಆರ್.ಲಕ್ಷ್ಮಣರಾವ್ ಅವರ ಕಾವ್ಯದೃಷ್ಟಿ. ಅವರ ಸಂವೇದನೆಗಳ ಸಾಚಾತನ ಮತ್ತು ಅನುಭವಗಳ ಪ್ರಾಮಾಣಿಕತೆ ನಿಸ್ಸಂದೇಹವಾದುದು. ಅದು ಆತ್ಮವಂಚನೆಯನ್ನೊಲ್ಲದು. ಹಾಗಾಗಿ ಅವರ ಕಾವ್ಯದಲ್ಲಿ ಕಪಟದ ಸಾಲುಗಳಿಲ್ಲ. ಕಳೆದ ಐವತ್ತು ವರ್ಷಗಳಿಂದ ಅವರು ಕಾವ್ಯ ಸೃಷ್ಟಿಯಲ್ಲಿ ತೊಡಗಿದ್ದಾರೆ. ಅವರನ್ನು ಸೀಮಿತ ಆಶಯಗಳ ಕವಿ ಎಂದವರಿದ್ದಾರೆ. ಅಂಥ ಸಂದರ್ಭಗಳಲ್ಲಿ ಕವಿ ಅತ್ಯಂತ ವಿನಮ್ರವಾಗಿ ತಮ್ಮದು ಒಂದು ಪುಟ್ಟ ಕೈದೋಟ ಎಂದು ಹೇಳಿಕೊಂಡಿದ್ದಾರೆ. ಪುರುಷೋತ್ತಮನ ರೂಪರೇಖೆಯಲ್ಲ , ಮಧ್ಯಮವರ್ಗದ  ಶ್ರೀಸಾಮಾನ್ಯ ಪಟ್ಟ ಪಾಡು, ಅವನ ಹುಟ್ಟು ಹಾಡು ಲಕ್ಷ್ಮಣರಾಯರ ಕಾವ್ಯ. 

ಕಾವ್ಯದ ಆಕೃತಿಯ ದೃಷ್ಟಿಯಿಂದ ನೋಡಿದಾಗ ಅವರು ತಮ್ಮನ್ನು ತಾವು ಕೆಲವು ಆಕೃತಿಗಳಿಗೆ ಮಾತ್ರ ಒಗ್ಗಿಸಿಕೊಂಡವರು, ಒಪ್ಪಿಸಿಕೊಂಡವರು ಎನ್ನಿಸುವುದಿದೆ. ಆದರೆ ಕಾವ್ಯದ ಗಹನತೆಯನ್ನು ಕಂಡಾಗ ಈ ತೀರ್ಮಾನ ಅವಸರದ್ದು ಅನ್ನಿಸಿಬಿಡುತ್ತದೆ. ಕನ್ನಡದ ಎಲ್ಲಾ ಮುಖ್ಯ ಕವಿಗಳು ಕೇಳಿಕೊಳ್ಳುತ್ತ ಬಂದಿರುವ ಪ್ರಶ್ನೆಗಳನ್ನು ಅವರ ಕಾವ್ಯವೂ ಎದುರಿಸಿದೆ. ಅವರು ಅಲ್ಪತೃಪ್ತರಲ್ಲ. ಈ ಕವಿ ತಮ್ಮ  ಅನುಭವ, ಅನಿಸಿಕೆಗಳನ್ನು ವ್ಯಕ್ತಪಡಿಸುವಲ್ಲಿ ಧೀರತೆಯೂ ಇದೆ, ವಿನಯವೂ ಇದೆ.

ಈ ಸಂಗ್ರಹದ ಮೊದಲ ಕವಿತೆ “ನವೋನ್ಮೇಷ”ದಲ್ಲಿ ಒಂದು ಅರಗಿಳಿ ಹಾರಿಬಂದು  ಮುಂಗೈ ಮೇಲೆ ಕುಳಿತು ಶಾಪ ವಿಮೋಚನೆಗಾಗಿ  ಕವಿಯನ್ನು ಕೋರುತ್ತದೆ. ಅದು ಕವಿಯದೇ ಪ್ರೇಮಪುತ್ಥಳಿ ಎಂಬುದಿಲ್ಲಿ ಸ್ವಾರಸ್ಯಕರ ಸಂಗತಿ. ಸಖನ ಪ್ರೇಮಸುಧೆಯಿಂದಲೇ ಅದರ  ಬದುಕಿನ ಹೊಸ ಚೈತನ್ಯ. ಆದರೆ ಕವಿಗೋ ತನಗೆ  ವಯಸ್ಸಾಗಿದೆ ಎಂಬ ಅಳುಕು. ಆಗ ಗಿಳಿ ಹೇಳುತ್ತದೆ: “ನಿನ್ನನ್ನು  ಬಿಗಿದಪ್ಪುವೆ. ನನ್ನ ಸಂಗ ಹೊಸ ಹರೆಯವ  ನಿನಗೆ ತಾರದೇನು?”.                                      

        ಇದೀಗ ಕವಿ ಜಿಗಿದು ಕುಳಿತಿದ್ದಾರೆ:      
         “ಕೊಟ್ಟುಬಿಡಲೆ ಪ್ರೀತಿಯನ್ನು?    

         ಮುಟ್ಟಿಬಿಡಲೆ ಗಿಳಿಯ?”

        “ನಂಬುನನ್ನಮುಂದುವರಿ”
            ಅನ್ನುತ್ತಿದೆ ಹೃದಯ.

ಕವಿಯ ಹೊಸ ಉಲ್ಲಾಸ, ಹೊಸ ಉನ್ಮೇಷದ ಹಿಂದಿನ ಕಥೆ ಇದು. ಹೃದಯದ ಮಾತನ್ನು ನಂಬಿ ಮುಂದುವರಿಯುವ ಕವಿ ಬಿ ಆರ್ ಎಲ್. ಅದರಿಂದ ಅವರ ಕವಿತೆಗಳು ಹೃದಯವನ್ನೇ ಮುಟ್ಟುವವು. ಹರಯ ಅವರ ಕಾವ್ಯದ ಶಾಶ್ವತ  ಹೊಂಗನಸು. ಇಂದ್ರಿಯಗಳ ಪಾಟವ, ಚುರುಕಾಗಿರುವುದು, ಭವದ ಸಕಲ ಭೋಗಗಳ ಅನುಭವ ಅವರ     ಜೀವನದೃಷ್ಟಿಯಲ್ಲಿ ಮೌಲ್ಯಗಳೇ ಆಗಿವೆ. ಅಪ್ಪಟ ಹೃದಯವಂತಿಕೆಯೇ ಅವರಿಗೆ ಕಾವ್ಯದ ನಿಕಷವೂ ಕೂಡ ಹೌದು. ವ್ಯಕ್ತಿ  ಸ್ವತಃ ಸಾಧಿಸಬಹುದಾದದ್ದು, ಸೃಷ್ಟಿಸಬಹುದಾದದ್ದು ಎಂದರೆ ಹಾರ್ದಿಕ ಪ್ರೇಮಮಯ ಜಗತ್ತನ್ನು ಮಾತ್ರ  ಎಂದು ಲಕ್ಷ್ಮಣರಾವ್ ಕವಿತೆಗಳು ಮತ್ತೆ ಮತ್ತೆ ಸಾರುತ್ತ ಬಂದಿವೆ. ದೇವರಿಲ್ಲದ ಅವರ ಜಗತ್ತಿನಲ್ಲಿ ಪ್ರೀತಿ, ವಿನಯ, ಸೌಜನ್ಯ, ಹೃದಯವಂತಿಕೆಗಳಂಥ ರೂಪವಿಲ್ಲದ ಆದರೆ ಅನುಭವವೇದ್ಯವಾದ ಭಾವಾನುಭೂತಿಗಳ ಮಹತ್ವ  ಹೆಚ್ಚಿನದು.  ಇಂದ್ರಿಯಗ್ರಾಹ್ಯ ಅನುಭವಗಳಿಂದಲೇ ಅವರು ಲೋಕವನ್ನು ತಿಳಿಯಬಯಸುವವರು. 

 “ಪ್ರೀತಿ ಎಂದರೇನು ?” ಇದು ಈ ಕವಿ ಇವತ್ತಿಗೂ ಉತ್ತರ ಹುಡುಕುತ್ತ ಬಂದಿರುವ ಪ್ರಶ್ನೆ. ಅಮ್ಮ, ಮಡದಿ, ಪ್ರೇಯಸಿ, ಮಗ,ಮಗಳು  ಒಬ್ಬೊಬ್ಬರದೂ ಅದಕ್ಕೆ ಒಂದೊಂದು ಉತ್ತರ.  ಇವೆಲ್ಲವೂ ಸತ್ಯವೇ, ಆದರೆ ಸಮಗ್ರವಲ್ಲ, ಹಾಗಾಗಿ ಅಂತಿಮವಾಗಿ ಕವಿ ತನ್ನನ್ನು ತಾನೇ ಕೇಳಿಕೊಳ್ಳುತ್ತಾನೆ: 

`ಪ್ರೀತಿ ಎಂದರೇನು?’ ಕೇಳಿದೆ
ನನ್ನನ್ನೇ ನಾನು;
ಆಗ ನನಗೆ ತೋರಿದ್ದು:
ಈ ಭೂಮಿ, ಆ ಬಾನು.

ವಿಶ್ವವ್ಯಾಪಕವಾದುದು ಕವಿ ಕಾಣುವ ಪ್ರೀತಿಯ ಸ್ವರೂಪ. ಅದರಲ್ಲಿ ಬೇರೆಲ್ಲರೂ ಕಂಡ ಅರ್ಥಗಳೂ ಇವೆ. ಅಷ್ಟೇ ಅಲ್ಲ, ಅವನ್ನೆಲ್ಲ  ಒಳಗೊಂಡೂ ಪ್ರೀತಿಯು ಇನ್ನೂ ಅಗಾಧವಾದುದು, ಇನ್ನೂ ಅಸೀಮವಾದುದು.. ಆಗಲೇ ಹೇಳಿದಂತೆ  ಅದರ ಸ್ವರೂಪವನ್ನು ಅವರು ಹುಡುಕುತ್ತಲೇ ಬಂದಿದ್ದಾರೆ. ತಾಯಿಯ ಒಲವು ,ಮಡದಿಯ ಪ್ರೀತಿ, ಪ್ರೇಯಸಿಯ  ಸ್ನೇಹ,  ಗೆಳೆತನ, ಸೋದರ ವಾತ್ಸಲ್ಯ, ಪರಿಧಿಯಾಚೆಯ ಸರಸ  .. ಎಲ್ಲವೂ ಅವರಿಗೆ ಅಮೂಲ್ಯವೇ. ಅದು ಐಹಿಕವಿರಬಹುದು, ದೈಹಿಕವಿರಬಹುದು, ಅಲ್ಲದಿರಬಹುದು ಪ್ರೀತಿಯಲ್ಲಿ ಯಾವುದೂ ಅವರಿಗೆ ತ್ಯಾಜ್ಯವಲ್ಲ. ಒಂದು ಪುಟ್ಟ ಪದ್ಯದಲ್ಲಿ ಅವರೇ ಬಳಸಿದ ಪದವನ್ನು ಉಪಯೋಗಿಸಿ ಹೇಳಬಹುದಾದರೆ ಪ್ರೀತಿಯೊಂದು  “ಔಷಧೀಯ ಎಂಜಲು!”.  

‘ಲೋಲೀಟ’  ಈ ಕವಿಯ ಪ್ರಸಿದ್ಧ ಕವಿತೆ (ಟುವಟಾರ ಸಂಕಲನ) . ಹರಯದಲ್ಲಿ ಕವಿಯನ್ನು ಕಾಡಿದ, ಅವರ   ಹೃದಯ ಕದ್ದ, ಜ್ವರದಂತೆ ಅವರೊಳಗನ್ನೆಲ್ಲ ವ್ಯಾಪಿಸಿದ ಹುಡುಗಿ. ಈ ಸಂಕಲನದ  ‘ ಮತ್ತೆ ಲೋಲೀಟ’ದಲ್ಲಿ  ಅವಳು ಮತ್ತೆ ಬಂದಿದ್ದಾಳೆ, ಮತ್ತೆ ಕೆಣಕುತ್ತಿದ್ದಾಳೆ. ಎಲ್ಲವೂ  ಕನಸಿನಲ್ಲಿ!  ಅದೇ ಮಾತಿನ ಮಲ್ಲಿ, ಅದೇ ತುಂಟ ನಗೆ. ಹಿಂದಿನ ಪದ್ಯದ ಬೋನಲ್ಲೇ ಸೆರೆಯಾಗಿಬಿಟ್ಟಿದ್ದಾಳಂತೆ!  (“ಮದುವೆ ಆಗ್ತೀಯೇನೇ, ಹುಡುಗಿ?”   ಅಂತ ನನ್ನ ಕೇಳಿ, ‘ಮಾಡ್ಕೊಳ್ತೀರಾ, ಸಾರ್?’  ಎಂದರೆ,   ಯಾಕೋ ಮೌನ ತಾಳಿದಿರಿ.. ಎಂದು ನೆನಪಿಸುತ್ತಾಳೆ). ಕವಿ ಅವಳ ಪ್ರಶ್ನೆಗೆ ಉತ್ತರಿಸಿಲ್ಲ ಆ ಪದ್ಯದಲ್ಲಿ. ಈಗಲೂ! ಅವಳು ’ನಿತ್ಯಕನ್ಯೆ’. ಆದರೀಗ ಕವಿಯ ಪ್ರಕಾರ ಅವನ  ಪಾಲಿಗೆ ಇರುವುದು ನಿನ್ನೆಗಳಷ್ಟೇ, ಅವಳಿಗೆ ಹಾಗಲ್ಲ.  “ನನಗೆ  ಪುಸ್ತಕ ಮುಗಿದಿದೆ, ಬರೆಯಲು ಹಾಳೆಗಳು ಉಳಿದಿಲ್ಲ”. ಅದಕ್ಕೂ ಅವಳ ಉತ್ತರ ಸಿದ್ಧವಿದೆ:


ಅವಳೆಂದಳು,”ಸಾರ್, ಅಷ್ಟೇ ತಾನೆ?
ಅದಕ್ಕೇಕೆ ಚಿಂತೆ?
ತಗೊಳ್ಳಿ ನನ್ನೀ ನೋಟ್‍ಬುಕ್ಕನ್ನು,
ಬರೀರಿ, ಖಾಲಿಯಿದೆ”

ಲೋಲೀಟ ಕನಸು ಮಾತ್ರವಲ್ಲ, ಕವಿಯ ಎಚ್ಚರವನ್ನೂ ಕಾಪಿಡುವ ನವೋನ್ಮೇಷಶಾಲಿನಿ ಕನ್ಯೆ. ಅವಳ ಯೌವನ ಕವಿಗೆ ಹೊಸ ಅಧ್ಯಾಯ ಆರಂಭಿಸಲು ಹುರಿದುಂಬಿಸುವಂತಿದೆ.

“ಅಪಥ್ಯ” ಕವಿತೆ ಈ ಕವಿಯಲ್ಲಿ ಆಗಾಗ ಕಾಣಿಸಿಕೊಳ್ಳುವ ಒಂದು ದೃಶ್ಯದೊಂದಿಗೇ ಆರಂಭವಾಗುತ್ತದೆ.ಪಾರ್ಕಿನಲ್ಲಿ ಒಂದು ಜೋಡಿ ಬೆಂಚಿಗೆ ಬಂದು ಕೂತಿತು. ಹೆಣ್ಣು ಇನ್ನೂ ತರುಣಿ, ಲಕ್ಷಣವಾಗಿದ್ದಳು; ಗಂಡು ನಡುವಯಸ್ಕ. ಅವಳು ಏನೋ ಹೇಳಿಕೊಂಡು ಅತ್ತಳು, ಅವನ ಭುಜದ ಮೇಲೆ ತಲೆ ಆನಿಸಿ. ಅವನು ಆಕೆಯನ್ನು  ಸಂತೈಸಿದ, ನವಿರಾಗಿ ಕಣ್ಣೀರನೊರೆಸಿದ..ಈ ಜಗದ ಪರಿವೆ ಇರದೆ ಅವರ ಸರಸ ಸಲ್ಲಾಪ ಸಾಗಿತ್ತು. “ಪ್ರೀತಿ ಎನ್ನುವ ಮಾಯೆ ಇಳಿಬಿಟ್ಟಹಾಗಿತ್ತು ಅವರ ಕಂಗಳ ಮುಂದೆ ಪರದೆ”. ಸ್ವಾರಸ್ಯವೆಂದರೆ ಅವರ ಈ ಅಪಥ್ಯದ  ಖುಷಿ ಕಂಡು ಕವಿಗೂ ಖುಷಿಯಾಯಿತು, ಎದ್ದು ಮನೆಗೆ ಬಂದರು. ಬರುವಾಗ ಅಂಗಡಿಯಿಂದ ಗುಟ್ಟಾಗಿ ತಂದಿದ್ದ ಜಿಲೇಬಿ ಕದ್ದು ತಿಂದರು. ಇವರ  ಕಾವ್ಯದಲ್ಲಿ ಮರುಕಳಿಸುವ ಮೋಹಕ ಗಳಿಗೆಗಳು ಇಂಥವು. ಸ್ನೇಹ, ಮಾನವ ಸಂಬಂಧದ ಬೆಚ್ಚನೆ ಭಾವ ಅಂಥ ಸಂದರ್ಭಕ್ಕೆ  ಕವಿಯೂ ಉಲ್ಲಾಸಗೊಳ್ಳುವುದು, ಜಿಲೇಬಿ ಗುಟ್ಟಾಗಿ ತಿನ್ನುವುದು(!)  ನಿಜಕ್ಕೂ ಸರಳ ಮಾರ್ದವ ಸುಂದರ. ಇದು ನೈತಿಕತೆಯ ನೀತಿ ನಿಬಂಧನೆಗಳ ಜಗತ್ತಿಗೆ ಆಚೆಯದು. 

ಇಲ್ಲಿಯೇ ಪ್ರಸ್ತಾಪಿಸಬೇಕಾದ ಹಾಡು “ಪರಿಧಿ”. ಇಲ್ಲಿ ಪ್ರಣಯಿಯೊಬ್ಬ ತನ್ನ ಮಿತಿಯರಿತು ನಲ್ಲೆಗೆ ಹಾಡುವ ಸಾಲುಗಳು:

ನಿನ್ನ ಪ್ರೀತಿಯ ನದಿಗೆ ಉಂಟು ಅಣೆಕಟ್ಟು,
  
ಜಗದ ಚೌಕಟ್ಟು.

ಮೀರಿದರೆ ಏನೆಂದು ನಿನಗೂ ಗೊತ್ತು
  
ಅದರ ಆಪತ್ತು.
ಕೆಂಡಸಂಪಿಗೆ ಮುಡಿಯಬಹುದೇ ವಿನಾ
   
ಕೆಂಡವನು ಮುಡಿಯಲಹುದೇ?
ಮುಗುದೆ, ಕೆಂಡವನು ಮುಡಿಯಲಹುದೇ?

ಪ್ರೇಮಲೋಲೆ, ಸಿಕ್ಕರೆ, ನಿನ್ನದೇ ನೆನಪು ನನಗೆ .. ಈ ಹಾಡುಗಳೂ ಪ್ರಣಯಿಗಳ ಯೌವನದ ಕನಸುಗಳನ್ನು ತೋಡಿಕೊಂಡ ರಚನೆಗಳು. ಬದುಕು ಸಣ್ಣದೇ ಇರಬಹುದು, ಪ್ರೀತಿ ಅದಕ್ಕೆ ರಸವನ್ನೂ , ರುಚಿಯನ್ನೂ,  ಸಾರ್ಥಕತೆಯನ್ನೂ    ತರುವುದೆಂಬುದು   ಈ     ಕವಿಯ ಅನುಭವವಾಗಿದೆ, ಕಾವ್ಯದ ಅನುಭವವೂ ಆಗಿದೆ. 

‘ಸಂಸಾರ’ ಕವಿತೆಯಲ್ಲಿ  ಪಂಜರದಲ್ಲಿರುವ  ಜೋಡಿಹಕ್ಕಿ ದಾಂಪತ್ಯದ ರೂಪಕ. ತಂದ ಹೊಸದರಲ್ಲಿ ಅನ್ಯೋನ್ಯ ದಾಂಪತ್ಯ! ಹಸಿಮೆಣಸಿನಕಾಯಿ ಕುಕ್ಕಿ ಕುಕ್ಕಿ ಇದರ ಬಾಯಿಗದು ಅದರ ಬಾಯಿಗಿದು ಇಕ್ಕಿ ಮೆಲ್ಲುತ್ತ ಮೈಗೆ ಮೈ ತಿಕ್ಕಿ ಮುದ್ದಾಡಿ…ಮತ್ತೆ ಯಥಾ ಪ್ರಕಾರ ಯಾಂತ್ರಿಕ ಸಂಸಾರ! ಬೋರಾಗಿ,ಇದರ ಮೋರೆ ಇತ್ತ ಕಡೆ ಅದರ ಮೋರೆ ಅತ್ತ ಕಡೆ. ಆಗಾಗ ಇದನ್ನದು ಕುಕ್ಕಿ ಅದನ್ನಿದು ಕುಕ್ಕಿ ಚೀರಾಡಿ ಗಾಯಗಳ ನೆಕ್ಕುತ್ತ..ಹೀಗಿರುತ್ತ  ಒಂದು ಕಾಯಿಲೆ ಬಿತ್ತ? ಇನ್ನೊಂದು ಕಕ್ಕಾವಿಕ್ಕಿ! ಏನು ಉಪಚಾರ! ಎಂಥ ಆರೈಕೆ! ಸರಿಹೋದ ಮರುದಿನ ಮತ್ತೆ ಯಥಾ ಪ್ರಕಾರ..ಇದು ಯಾರ ಸಂಸಾರದ ಚಿತ್ರವಲ್ಲ! ಕವಿ ಕಟ್ಟುವ ಪ್ರೇಮಮಯ ಜೋಡಿಗಳ ಸುಂದರ ಕಿರು ಚಿತ್ರಗಳು ಇಂಥವು.

‘ದ್ವಂದ್ವ’ ಕವಿತೆಯಲ್ಲಿ  ಶಿವನ ಮುಡಿಯ ಮೇಲೆ, ತೊಡೆಯ ಮೇಲೆ ಕೂತ   ಗಂಗೆ, ಗೌರಿಯರಿಗೆ    ತಮ್ಮ  ಜಾಗ ಬದಲಾಯಿಸುವ  ಆಸೆ. ಶಿವನ ಸಮಸ್ಯೆ ಪುರುಷಲೋಕದ ಸಮಸ್ಯೆಯಾಗಿ ಮಾರ್ಪಡುವ ಬಗೆ ಲಕ್ಷ್ಮಣರಂಥ ಕುಶಲ ಕವಿಗಳಲ್ಲಿ ಕಾಣುವ ಪ್ರತಿಭಾವ್ಯಾಪಾರ! (ತಲೆಗೊಬ್ಬಳು, ತೊಡೆಗೊಬ್ಬಳು, ಇದು ಗಂಡಿನ ದ್ವಂದ್ವ). ಮುಂದೆ ಈ ಸಮಸ್ಯೆ ಶಿವನದು ಮಾತ್ರವಲ್ಲ, ಗಂಗೆ ಉಮೆಯರದೂ ಕೂಡ ಹೌದು ಎಂಬ ತಿರುವು ಪಡೆದು  ಸ್ತ್ರೀವಾದಕ್ಕೆ ಚಲಿಸಿದ ಬಗೆ ಈ ಕವಿತೆಯ ಯಶಸ್ಸಿನ ಇನ್ನೊಂದು ಅಂಶ( ಹೆಣ್ಣಿಗೂ ಅನ್ವಯಿಸಬಹುದೇ  ಇಂದೀ ಶಿವತತ್ತ್ವ?).  

ಹುಚ್ಚು ಪ್ರೀತಿಯ ಒಂದು ವಿಚಿತ್ರ ರೂಪ “ವಾಟ್ಸ್ಯಾಪ್ ಪ್ರೇಮಿಯ ಸಂಕಟ”ದಲ್ಲಿದೆ. ಇಮೋಜಿಗಳೊಂದಿಗೆ ಕವಿತೆಯೊಂದು ರಚಿತವಾದ ಮೊದಲ ಸಾಹಸ ಇದಿದ್ದೀತು. ಅದು ಸ್ವಾರಸ್ಯದಿಂದಲೂ ಮನ ಸೆಳೆಯುವಂತಿದೆ. ಪ್ರೀತಿ, ಪ್ರಣಯದ ಕುರಿತು  ನಾನು ಉದಾಹರಿಸಿರುವ ಮೇಲಿನ ಪದ್ಯಗಳಲ್ಲದೆ ಪ್ರತ್ಯೇಕವಾಗಿ  ಒಂದು ಗೊಂಚಲು ಪುಟ್ಟ ಪದ್ಯಗಳೂ ಇವೆ (‘ಪ್ರೀತಿಯ ರೀತಿ’) . ಸ್ವಾರಸ್ಯಕ್ಕಾಗಿ ಅವುಗಳಲ್ಲಿಪೂರ್ಣಾಹುತಿನೋಡಿ:

ನಿನ್ನೆಲ್ಲ ಪ್ರೇಮ ಸಂದೇಶಗಳು

ಸ್ವಾಹಾ..
ಖಾಸಗಿಸೆಲ್ಫೀಗಳು
ಸ್ವಾಹಾ..
ಇಮೇಲು,ವಾಟ್ಸಪ್ಪುಗಳು
ಸ್ವಾಹಾ..
ಏನೆಲ್ಲಸ್ಮೈಲೀಗಳು
ಸ್ವಾಹಾ..
ಈ ಸ್ವಾಹಾಕಾರಗಳ ಯಾದಿ ಇನ್ನೂ  ದೊಡ್ಡದಿದೆ.  ವಿಶೇಷವೆಂದರೆ  ಈ ಪೂರ್ಣಾಹುತಿಯಲ್ಲಿ ಸ್ಟೈಲಿ, ಸೆಲ್ಫಿ ಮುಂತಾದ ಅಸಾಂಪ್ರದಾಯಿಕ ಸಂಗತಿಗಳೂ ಆಹುತಿಯಾಗುತ್ತಿವೆ! 

ಅಣ್ಣ ತಮ್ಮಂದಿರ ನಡುವೆ ಪಿತ್ರಾರ್ಜಿತ ಆಸ್ತಿಯ ಬಗ್ಗೆ  ಕಲಹ ಉಂಟಾಗಿ ಕವಿ ತಮ್ಮನ ಮಗಳು ಚಂದೂಳ  ಮಧುರ ಮುಗ್ಧ  ಪ್ರೀತಿಯನ್ನು ಕಳಕೊಂಡ ಸಂಕಟದಿಂದ ಆರಂಭವಾಗುತ್ತದೆ ‘ಚಂದೂ’ ಕವಿತೆ. ಕವಿತೆಯ ಉತ್ತರಾರ್ಧದಲ್ಲಿ ತಮ್ಮ ಮತ್ತು  ಚಂದೂ  ಬಂದು ಬಾಗಿಲು ತಟ್ಟುತ್ತಿದ್ದಾರೆ! ತಮ್ಮ ‘ಕೋರ್ಟಿಂದ ಕೇಸನ್ನು ಹಿಂತೆಗೆದುಕೊಂಡಿದ್ದೇನೆ  ತಗೊ ಎಲ್ಲ ಆಸ್ತಿಪತ್ರ’ ಎಂದು ಕಾಲಿಗೆ ಬಿದ್ದರೆ  ಕವಿ  ಆ ಎಲ್ಲ “ಕ್ಷುದ್ರ ಪತ್ರಗಳನ್ನು” ಹರಿದೆಸೆದು  ” ನಮ್ಮಾಸ್ತಿ ಈ ಚಂದೂ” ಎಂದು ಸಾರುತ್ತಿದ್ದಾರೆ! ಸಾಮಾನ್ಯರು ಅನ್ನಿಸುವವರ ಬಾಳಿನಲ್ಲಿ ನಡೆಯಬಹುದಾದ ಇಂಥ ಘಟನೆಗಳ ಸಾಧ್ಯತೆಯೇ ಮನ ಅರಳಿಸುವಂಥದ್ದು. “ಆಗ ನನಗನ್ನಿಸಿತು, ಬಾಹುಬಲಿ ಇದ್ದಾನೆ  ನಮ್ಮಲ್ಲಿ ಅಷ್ಟಿಷ್ಟು ಇಂದೂ.”  ಬದುಕಿನಲ್ಲಿ ಪ್ರತಿಯೊಬ್ಬನೂ ತನ್ನನ್ನು ತಾನೇ ಮೀರುವ ಇಂಥ ಉದಾತ್ತ ಕ್ಷಣಗಳು ಇವೆ ಎಂಬುದನ್ನು ಎಲ್ಲರೂ ಕೇಳಿಬಲ್ಲೆವು. ಲಕ್ಷ್ಮಣರಾವ್ ಥರದ ಕವಿಗಳು ನಿಜಜೀವನದಲ್ಲೇ ಅದನ್ನು ತೋರಿಸಿಕೊಡುತ್ತಾರೆ. ಹಾಗೆ ನೋಡಿದರೆ ಭರತ, ಬಾಹುಬಲಿಯರ ಕಥೆ  ಈ ಕವಿತೆಯ ನಿರೂಪಕನಿಗೆ ಮೊದಲೇ ಗೊತ್ತಿತ್ತು. ಆದರೆ ತನ್ನದೇ ಜೀವನದಲ್ಲಿ ಅದಕ್ಕೆ ಸಮಾನಾಂತರವೆನ್ನಬಹುದಾದ ಸಂದರ್ಭದಲ್ಲಿ ಅವನು ಕ್ಷುದ್ರತೆ ಮೀರಿ ನಿಂತಿದ್ದು ತನ್ನದೇ ಅನುಭವಗಳ ತಾಕಲಾಟ ಮತ್ತು ಪಾಕದಿಂದ. ಹೃದಯದಲ್ಲಿ ಹುಟ್ಟಿದ ಅಪ್ಪಟ ಪ್ರೀತಿಯಿಂದ.  ಆಮೇಲೆ ಒಬ್ಬ ಧೀರೋದಾತ್ತನ ಕಥೆಯ ಜೊತೆ ಅದನ್ನಿಟ್ಟು ನೋಡಿದಾಗ ಹುಟ್ಟಿದ್ದು ಮೇಲಿನ ಮಾತು.   

ಜೀವನದ ಸಣ್ಣ ಸಣ್ಣ ಘಟನೆಗಳು, ದೃಶ್ಯಗಳಿಂದ ಹೊಸ ತಿಳಿವಳಿಕೆಗಳನ್ನು ಪಡೆಯುವ ಕ್ರಮ ಈ ಕವಿಯ ಕಾವ್ಯದಲ್ಲಿ ಮೊದಲಿನಿಂದಲೂ ಕಾಣುವಂಥದು.  ಈಗಾಗಲೇ ನಾವು ಚರ್ಚಿಸಿದ ಕವಿತೆಗಳಲ್ಲೂ ಅಂಥ ಮಾದರಿಗಳಿವೆ. ಇಂಥ ಕೆಲ ಕವಿತೆಗಳು ಕಥನಕವನಗಳಂತೆಯೂ ಓದಬಹುದಾದವು. ಪ್ರಸ್ತುತ ಅವರ  “ಸಣ್ಣ ಸಂಗತಿ” ಎಂಬ ಕವಿತೆಯನ್ನು ನೋಡೋಣ.   ಮನೆಗೆಲಸದ ಹುಡುಗಿ ತಿಂಗಳ ಮಧ್ಯೆ  ಸ್ವಲ್ಪ ಹೆಚ್ಚೇ ಹಣ   ಕೇಳಿದರೆ ಮಧ್ಯಮ ವರ್ಗದ  ಕುಟುಂಬದವರು ಕೊಡಲು ಅನುಮಾನ ಮಾಡುವುದು ಸಹಜವೇ. ಹುಡುಗಿ ಒಳ್ಳೆಯವಳು, ಕಷ್ಟದಲ್ಲಿದ್ದಾಳೆ, ಇಡೀ ಸಂಸಾರದ ಹೊಣೆ ಇವಳದೇ. ಆದರೂ  ‘ಹಣ ಕೊಡುವುದು ಬೇಡ’ ಎಂದು ನಿರ್ಧರಿಸುತ್ತಾರೆ ಕವಿ. ಹಣ ಕೊಡಲಿಲ್ಲವಾದ್ದರಿಂದ ಮರುದಿನ ಅವಳು ಕೆಲಸಕ್ಕೆ ಬರುವುದಿಲ್ಲ ಎಂದು  ಕವಿಯೇ ತೀರ್ಮಾನಿಸಿಕೊಂಡರು. ದಂಪತಿ ತಮ್ಮ ಕೆಲಸ ತಾವೇ ಮಾಡಿಕೊಂಡರು. ಅಷ್ಟರಲ್ಲಿ ಹುಡುಗಿ ಬಂದೇ ಬಿಟ್ಟಳು!”ಸಾರಿ ಅಕ್ಕ, ತುಂಬಾ ಜ್ವರ,ಎದ್ದದ್ದು ಲೇಟಾಯ್ತು” ಅಂತ ಕೆಲಸ ಮುಂದುವರಿಸಿದಳು. 

ತನ್ನ ಕೆಲಸಕಾರ್ಯ ಮುಗಿಸಿ, ಕೈಕಾಲುಮುಖ ತೊಳೆದು,
ಹೊರಟುಹೋದಳು ಹುಡುಗಿ ಮೌನವಾಗಿ;
ಮುಖಮುಖಾ ನೋಡುತ್ತ ನಿಂತುಬಿಟ್ಟೆವು ನಾವು;
ಯಾಕೋ ನನ್ನ ತಲೆ ತಗ್ಗಿತು ನಾಚಿಕೆಯಿಂದ!

 ಹನ್ನೆರಡು ಸ್ಟ್ಯಾಂಜಾಗಳ ಒಂದು ಪುಟ್ಟ ಕವಿತೆಯಲ್ಲಿ ಎಷ್ಟೊಂದು ಸಂಗತಿಗಳು ನಡೆದಿವೆ,ಗಮನಿಸಿ. ಇಲ್ಲಿ ನಡೆದಿರುವ ಘಟನೆಗಳು ಸಣ್ಣ ಸಂಗತಿಗಳೆ ? ಹೌದು ಮತ್ತು ಅಲ್ಲ! ಕವಿ ಕಡೆಯಲ್ಲಿ ನಾಚಿಕೆಯಿಂದ ತಲೆ ತಗ್ಗಿಸುವುದನ್ನು ಕಂಡಾಗ ಸಣ್ಣ ಸಂಗತಿಯಲ್ಲ ಎನ್ನಬೇಕಾಗುತ್ತದೆ. ಹುಡುಗಿಯ ನಡತೆಯೂ ಗಂಭೀರವಾಗಿದೆ, ಗೌರವ ಹುಟ್ಟಿಸುವಂತಿದೆ. ಇನ್ನು ಇಲ್ಲಿ ಚರ್ಚೆಯಲ್ಲಿರುವವಳು ಮನೆಗೆಲಸದ ಹುಡುಗಿಯಾದ್ದರಿಂದ ಇದು ಸಣ್ಣ ಸಂಗತಿಯೇ. ಅವಳೆಷ್ಟು ಸಣ್ಣವಳೆಂದು ಕವಿ ತಿಳಿಯುತ್ತಾರೆಂದರೆ ಅವರು ಅವಳ ಹೆಸರನ್ನೂ ಹೇಳಿಲ್ಲ.ಜೀವನದ ಇಂಥ ಸಂದರ್ಭಗಳೆದುರು ನಮ್ಮನ್ನು ನಿಲ್ಲಿಸಿ ನಮ್ಮ ಸಣ್ಣತನವನ್ನೂ,ಮಿತಿಯನ್ನೂ ತೋರಿಸಿ ಸೂಕ್ಷ್ಮಜ್ಞತೆಯನ್ನು ಹೆಚ್ಚಿಸುವುದು ಇಂಥ ಕವಿತೆಗಳ ಸಾಧನೆ ಎಂದು ತೋರುತ್ತದೆ. ಇದನ್ನು ಸ್ವಾನುಭವದಂತೆ ಕವಿತೆ ಮಂಡಿಸಿದೆ. ಈ ಕವಿಗೆ ಕಾವ್ಯವು ಅಂತರಂಗದ ಪರೀಕ್ಷೆಯ ಮಾಧ್ಯಮವೂ ಹೌದು. ಆ ದೃಷ್ಟಿಯಿಂದ   ಇಲ್ಲಿಯೇ ಓದಬೇಕಾದ ಎರಡು ಕವಿತೆಗಳು ‘ಕೊರಗು’ ಮತ್ತು ‘ಹಗೇವು’. 

  “ಕೊರಗು” ಬದುಕಿನ ಒಂದು ವಿಲಕ್ಷಣ ನೋವನ್ನು ಕುರಿತು ಹೇಳುವ ಕವಿತೆ.  ಕವಿಯ ಕುಟುಂಬದವರು ಅಜ್ಜಿಯ ಅಸಹಾಯಕ ದಿನಗಳಲ್ಲಿ ಅವಳ ರೂಮಿನಲ್ಲಿ ಒಂದು  ಬಚ್ಚಲು ಕಟ್ಟಿಸಿಕೊಡಲಾಗಲಿಲ್ಲ,. (“ನನ್ನ ರೂಮಲ್ಲೇ ನನಗೊಂದು/ ಬಚ್ಚಲು ಕಟ್ಟಿಸಿಕೊಡಿರಪ್ಪ,/ನಿಮ್ಮ ಪುಣ್ಯ!”).  ಅದೇಕೋ ಕಿಕ್ಕಿರಿದ ಕೂಡುಕುಟುಂಬದ  ಅಂದಿನ ಮನೆಯಲ್ಲಿ ಅಜ್ಜಿಯ ಆ ಚಿಕ್ಕ ಕೊನೆಯ ಆಸೆ ಈಡೇರಿಸಲು  ಸಾಧ್ಯವಾಗಲೇ ಇಲ್ಲ! ಯಾಕೆಂದು ಹೇಳುವುದು ಕಷ್ಟ, ಕೆಲವೊಮ್ಮೆ ಸಣ್ಣದೆನ್ನಬಹುದಾದ ಕಾರ್ಯಗಳನ್ನು ಎಂದೂ ಮಾಡಲಾಗುವುದೇ ಇಲ್ಲ. ದುಃಖದ ಸಂಗತಿ ಎಂದರೆ ಕಡೆಯವರೆಗೂ ಈ ಸಂಕಟದಿಂದ ಬಿಡುಗಡೆಯೂ  ಇಲ್ಲ. ಇನ್ನೊಂದು ಕವಿತೆ “ಹಗೇವು”. “ಚೊಚ್ಚಲು ಬಸುರಿನ ಆ ದಿನಗಳಲ್ಲಿ ನನಗಿದ್ದದ್ದುಒಂದೇಒಂದು ಸಣ್ಣಬಯಕೆ, ಬಾಂಬೇಮಿಕ್ಸ್ಚರ್ ತಿನ್ನಬೇಕೆಂದು.   ಎಷ್ಟು   ಗೋಗರೆದರೇನು?  ಅದು ನಿಮ್ಮ   ಕಿವಿಗೆ ಬೀಳಲೇ ಇಲ್ಲ.  ಅಂದಿನಿಂದ ಆ ಹಾಳು ಬಾಂಬೇ ಮಿಕ್ಸ್ಚರನ್ನು ತಿನ್ನುವುದನ್ನೇ  ಬಿಟ್ಟುಬಿಟ್ಟೆ”  ಎಂದರು ಕವಿಯ ಮಡದಿ  ತಮ್ಮ  ಕೊರಳಿಂದ ಇಳಿಬಿದ್ದ,  ಕವಿ ಪ್ರೀತಿಯಿಂದ ಕೊಡಿಸಿದ್ದ ಮುತ್ತಿನ ಸರ ಸವರುತ್ತ! ಮನದಾಳದ ಹಗೇವಿನಲ್ಲಿ ಸವಿ ನೆನಪುಗಳನ್ನು  ಕಡೆಗಣಿಸಿ  ಏಕೆ ಕಹಿ ನೆನಪುಗಳೇ ಹೀಗೆ ಉಳಿದುಬಿಡುತ್ತವೆ? ಇದಕ್ಕೂ ಉತ್ತರ ಇಲ್ಲ. ಇಲ್ಲಿಯೂ  ಕವಿತೆ ಹೇಳುವಂತೆ ಇದು ಸಣ್ಣ ಸಂಗತಿ ಎನ್ನಬಹುದೆ? ಅಜ್ಜಿ ಇರಬಹುದು, ಹೆಂಡತಿ ಇರಬಹುದು ಪುರುಷಲೋಕ ಕೆಲವು ಸೂಕ್ಷ್ಮ ಬಯಕೆಗಳಿಗೆ, ಅಗತ್ಯಗಳಿಗೆ ಕಿವುಡಾಗುವುದಿದೆ. ಚಿನ್ನದ ಸರಕ್ಕಿಂತ ಬಾಂಬೆ ಮಿಕ್ಸ್ಚರ್ ಯಾಕೆ ಮುಖ್ಯ ಎಂಬುದನ್ನು ಬುದ್ಧಿ ಹೇಳಲಾರದು, ಅದಕ್ಕೆ ಭಾವಶುದ್ಧಿ ಬೇಕು! ಮುಂದೊಂದು ಪದ್ಯದಲ್ಲಿ  ಕವಿಪತ್ನಿ  ಪೂರ್ಣದೃಷ್ಟಿಯ ಅಗತ್ಯದ ಬಗೆಗೆ  ಕೊಂಚ ತಮಾಷೆಯಾಗಿಯೂ  ಮಾತಾಡಿ ಕವಿಯನ್ನು ಯೋಚನೆಗೆ ಹಚ್ಚಿದ್ದಾರೆ.(ಪೂರ್ಣದೃಷ್ಟಿ).           

ಲಕ್ಷ್ಮಣರಾವ್ ಅವರು  ಕಾವ್ಯದಲ್ಲಿ ರಾಜಕೀಯ, ಸಾಮಾಜಿಕ ಸಂಗತಿಗಳ ಬಗೆಗೆ ಬದ್ಧ ನಿಲುವುಗಳನ್ನು ವ್ಯಕ್ತಪಡಿಸುವ ಪ್ರವೃತ್ತಿಯವರಲ್ಲ. ವರ್ತಮಾನದ ಕುರಿತು ಅವರು ಬರೆದಿರುವ  ಕವಿತೆಗಳಲ್ಲಿ ಅವರ ಲೋಕ ಗ್ರಹಿಕೆಗಳು  ವ್ಯಕ್ತವಾಗುತ್ತವೆ.  ಈ ಕವಿಯ ಸಾಮಾಜಿಕ ಅರಿವು, ಲೋಕ ಅನುಸಂಧಾನಗಳು ಮೇಳೈಸಿದಾಗ ’ಹುಳ’ದಂಥ  ಕವಿತೆ ರಚನೆಯಾಗುತ್ತದೆ. ರಾಮಾಯಣ, ಭಾರತಗಳ ಕಾಲದಿಂದಲೂ ಸುಂದರ ವ್ಯವಸ್ಥೆಯೊಂದನ್ನು  ಹಾಳುಗೆಡವಲು ಹುಳಗಳು ಹುಟ್ಟುತ್ತಲೇ ಇವೆ. (“ಹುಳ/ಅದರ ಉಪಟಳ/ ಬಹಳ”). ಆಧುನಿಕ ದಿನಗಳಲ್ಲೂ ಮತಾಂಧತೆಯಾಗಿ, ದುರಹಂಕಾರವಾಗಿ, ಭ್ರಷ್ಟಾಚಾರವಾಗಿ ಅದು ನಮ್ಮ ಬಾಳನ್ನು ಪೀಡಿಸುತ್ತಿದೆ. ಅದರ ಸ್ವರೂಪ ಇನ್ನಷ್ಟು ಜಟಿಲ ಸ್ವರೂಪದ್ದಾಗಿಬಿಟ್ಟಿದೆ. ಹಾಗಾಗಿ ಕವಿಗೆ ಅನಿಸುವುದು:

ಒಟ್ಟಾರೆ

ಅಗೋಚರ ಚರಿಸುವ ನಿಷ್ಕರುಣಿ

ಕಾಲವೆಂಬ ಹುಳ

ತಿಂದು ಅಂದಗೆಡಿಸುತ್ತಿದೆ ನಮ್ಮ

ಚಿತ್ರಪಟಗಳ.

ನಮ್ಮ ನಾಡಿನ ಸದ್ಯದ ಸಾಮಾಜಿಕ, ರಾಜಕೀಯ ವಿದ್ಯಮಾನಗಳಿಗೆ ಅವರು ಪ್ರತಿಕ್ರಿಯಿಸಿರುವ ಇನ್ನೊಂದು ಪದ್ಯ ವಿ’ಭಜನೆ’. ಒಂದು ದೇಶದ ಜನತೆ ಜಾತಿ, ಧರ್ಮ, ಭಾಷೆಗಳ  ಹೆಸರಲ್ಲಿ ಬೇರೆಯಾಗುತ್ತಾ ಯರ್ರಾಬಿರ್ರಿ ವಿಭಜನೆಗೊಂಡರೆ, ಅದು ಕ್ಯಾನ್ಸರ್ ಲಕ್ಷಣ ಎಂದು ಕವಿ ಭಾವಿಸುತ್ತಾರೆ. ಅರ್ಬುದದ ಇಂಥ ಸ್ಥಿತಿ ತಲುಪಿದ್ದೇವೆಂದರೆ ಇನ್ನುಳಿದಿರುವುದು  ಕ್ಷಣಗಣನೆ ಮಾತ್ರ.  ಸಮಗ್ರತೆಗೆ ತುಡಿಯುತ್ತಿರುವ ಈ ಕವಿಯ ಈ ಕವಿತೆಯಲ್ಲಿ ಹೊರಟ ಒಂದು ಉದ್ಗಾರ  “ಅಣ್ಣಾ’ ನನಗಂತೂ ಅಣ್ಣ ಬಸವಣ್ಣನವರನ್ನು ನೆನಪಿಸಿತು.  ಕನ್ನಡ ಬದುಕಿಗೂ, ಕಾವ್ಯಕ್ಕೂ  ಬೆಳದಿಂಗಳ ಹಾದಿ ತೋರಿದ ಅಣ್ಣ  ನಾಡಿನ ಅನಾರೋಗ್ಯದ  ಕಾಲದಲ್ಲಿ ನೆನಪಿಗೆ ಬರುವುದು ಸಹಜ. 

ವ್ಯವಸ್ಥೆಯ ಅವ್ಯವಸ್ಥೆಯ ಅಣಕ ‘ಮೇಲಿನವರು’ ಕವಿತೆಯಲ್ಲಿದೆ. “ಮೇಲಿನವರು ಹೇಳಿದರೆಂದು” ಸಾಮಾಜಿಕ, ರಾಜಕೀಯ, ಆಡಳಿತದ ಸಂದರ್ಭಗಳಲ್ಲಿ ಏನೇನೋ ಘಟನೆಗಳು ನಡೆಯುತ್ತವೆ. ಅದರ ಅಸಂಗತತೆಯ ಒಂದು ಚಿತ್ರ ಈ ಪದ್ಯದಲ್ಲಿದೆ. ಇಡೀ ವಿಶ್ವವನ್ನೇ ನಾಶ ಮಾಡುವ ಜ್ವಾಲಾಮುಖಿಯೊಂದು ಶೀಘ್ರದಲ್ಲೇ  ಸಿಡಿಯಲಿದೆ ಎಂಬುದು ‘ಜ್ವಾಲಾಮುಖಿ’ ಕವಿತೆಯ ನೋಟ: “ಶತಶತಮಾನಗಳ ದ್ವೇಷಾಗ್ನಿಯನ್ನು ವೊಕ್ಕೆಂದು  ಕಕ್ಕಲು;ತನ್ನ ಕೆನ್ನಾಲಿಗೆಯಿಂದ ಇಡೀ ಭೂಗೋಳವನ್ನೇ ಇನ್ನೊಮ್ಮೆ ನೆಕ್ಕಲು”  ಜ್ವಾಲಾಮುಖಿ ಸಿಡಿಯಲಿದೆ. ಅದನ್ನು ಕುರಿತು ಬಣ್ಣಿಸಲೂ ಯಾರೂ ಉಳಿದಿರುವುದಿಲ್ಲ! ಅದೊಂದು ಸರ್ವಶೂನ್ಯ ಸ್ಥಿತಿ!

ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಪರಿವರ್ತನೆಗಳನ್ನು ವಿಷಾದ, ಬೆರಗು, ವ್ಯಂಗ್ಯ, ಕಳವಳ, ದಿಗ್ಭ್ರಮೆಯಿಂದ ಗಮನಿಸುವ ಸಾಕಷ್ಟು ಕವಿತೆಗಳು ಇಲ್ಲಿವೆ. ಅವು ಪುಟ್ಟ ಪ್ರತಿಕ್ರಿಯೆಗಳಂತೆ ಕಾಣಿಸಿಕೊಂಡರೂ ಪರಿಣಾಮದ ದೃಷ್ಟಿಯಿಂದ ತೀವ್ರತೆಯಿಂದಲೂ, ಕಳಕಳಿಯಿಂದಲೂ ಕೂಡಿದ ಮಾನವೀಯ ಸಂವೇದನೆಗಳು. ಮೊದಲಿಗೆ ‘ಪುಣ್ಯಕೋಟಿ’ ಕವಿತೆಯನ್ನು ಓದಬಹುದು.   ಈ ಕವಿತೆ ಹಳ್ಳಿಮನೆಯ ಆಕಳು ಕೆಂಚಿಗೂ, ಇವಳಿಗೂ (ಯಾವುದೇ ಗೃಹಿಣಿ ಇರಬಹುದು)  ಎಷ್ಟೊಂದು ಸಾಮ್ಯ ಎಂದು ಶುರುವಿನಲ್ಲಿ ಕೊಂಚ ತಮಾಷೆಯಾಗಿ ನೋಡುತ್ತ ಕಡೆಯಲ್ಲಿ ವರ್ತಮಾನದ ವಿಷಾದದ ಬಿಂದುವಿನಲ್ಲಿ ಅವರಿಬ್ಬರ ಹೋಲಿಕೆಯನ್ನು ಮಾಡಿ ಓದುಗ ನೋವಿನಲ್ಲಿ ತಲ್ಲಣಿಸುವಂತೆ ಮಾಡಿದೆ:


ಇನ್ನು, ತಿಳಿದೇ ಇದೆ ಅಂತ್ಯ:

ಮುದಿಗೊಡ್ಡುಕೆಂಚಿಗೆ
ಕಸಾಯಿಖಾನೆ;
ಮುದಿಯರಮನೆಗೆ
ಇವಳ ರವಾನೆ.

ಆಗಲೇ ದುಃಸ್ವಪ್ನದಂತೆ ಕೇಳುವ ವೃದ್ಧಾಶ್ರಮ ಎಂಬ ಪದಕ್ಕೆ ಕವಿ ಕೊಟ್ಟ ಪರ್ಯಾಯ ನಾಮ (ಮುದಿಯರ ಮನೆ) ಅದನ್ನಿಲ್ಲಿ ಇನ್ನಷ್ಟು ಕದಡುವ ಕನಸಾಗಿಸಿದೆ. ವರ್ತಮಾನದ ಇಂಥ  ವಿವಿಧ ವಿಹ್ವಲ ಚಿತ್ರಗಳು ಈ ಸಂಕಲನದಲ್ಲಿವೆ. ಈಗಾಗಲೇ ಗುರುತಿಸಿದಂತೆ  ಸಾಮಾಜಿಕ, ರಾಜಕೀಯ ಬದಲಾವಣೆಗಳ ಕುರಿತು ಅವರು ಪ್ರತಿಕ್ರಿಯಿಸುವ ಬಗೆ ಭಿನ್ನವಾಗಿದೆ. ಲೋಕಜೀವನದಲ್ಲಿ, ಸಾಮಾನ್ಯ ಮಧ್ಯಮವರ್ಗದವರ ಬದುಕಿಗೆ ಅಂಥ  ಹೊರಗಿನ  ಶಕ್ತಿಗಳು ತರುವ ಒತ್ತಡ, ಪರಿಣಾಮಗಳನ್ನು ಅವರ ಕಾವ್ಯ ವಿಭಿನ್ನ ಸಂದರ್ಭಗಳಲ್ಲಿ, ದೃಶ್ಯಗಳಲ್ಲಿ ಇಟ್ಟು  ಪರಿಶೀಲಿಸುತ್ತದೆ. ಹಾಗಾಗಿ ಅವರದು ಒಂದು ದೃಷ್ಟಿಯಿಂದ  ಪ್ರತಿಕ್ರಿಯೆ ಅನ್ನುವುದಕ್ಕಿಂತಲೂ ಪ್ರತಿಫಲನದ ಕ್ರಿಯೆ.   

ಅಂಥದೊಂದು  ದೃಶ್ಯ  ‘ಅಭಿನಂದನೆ’ ಕವಿತೆಯದು. ವಿವಾಹ ವಿಚ್ಛೇದನಗಳು ಇಂದು ಸಾಮಾನ್ಯವಾಗುತ್ತಿವೆಯಾದರೂ ಅದು ಹಾಗೆ ಅಷ್ಟು ಸಾಮಾನ್ಯ ಘಟನೆಯಲ್ಲ ಎನ್ನುತ್ತಾರೆ ಕವಿ. ಸಂಬಂಧಗಳು ಇಷ್ಟು ಅಸ್ಥಿರವಾಗಿರುವುದು ಕವಿಗೆ ಆತಂಕ ಹುಟ್ಟಿಸಿದೆ ಎಂಬುದು  ತಿಳಿಯುವಂತಿದೆ. ಆದರೆ ಕವಿತೆಯು  ವಿಚ್ಛೇದನಗೊಳ್ಳುವವರನ್ನು  ಅಭಿನಂದಿಸಲು  ಬಯಸುತ್ತದೆ – ಅದೊಂದು ವ್ಯಂಗ್ಯ: ಈ ಸಂದರ್ಭವನ್ನು  ಸಕಲ ಸಂಭ್ರಮದೊಡನೆ ಆಚರಿಸಬೇಕು. ಒಳ್ಳೇ ಛತ್ರವನ್ನು ಗೊತ್ತುಮಾಡಿ ಆಪ್ತರನ್ನು, ಬಂಧುಮಿತ್ರರನ್ನು ಆಚರಣೆಗೆ  ಆಹ್ವಾನಿಸಬೇಕು!”. “ಮೂರೇ  ತಿಂಗಳಲ್ಲಿ ಬೇರೆ ಆಗುತ್ತಿದ್ದಾರೆ ಎನ್ನಲಾಗದು, ತುಂಬ ಕಷ್ಟಪಟ್ಟು  ಇಷ್ಟು ದಿನ ಒಟ್ಟಿಗಿರಲು ಯತ್ನಿಸಿ ಈಗ ಅನಿವಾರ್ಯವಾಗಿ ಬೇರೆ ಆಗುತ್ತಿದ್ದಾರೆ. ಇಂದಿನ ಸಿನಿಮಾಗಳಂತೆ ಇಂದಿನ ಮದುವೆ ಕೂಡ. ಅದೊಂದು ತಾತ್ಕಾಲಿಕ ಪ್ರಯೋಗ”.  ಹೊಸಕಾಲದ ಆತುರಗಾರರ ತಾಳ್ಮೆಗೆಟ್ಟ ಬದುಕನ್ನು ಕವಿ ಆಕ್ಷೇಪಿಸುತ್ತಿದ್ದಾರೆ ಎಂಬುದೇನೋ ಸರಿ, ಆದರೆ ಅನಿವಾರ್ಯವೇ ಆದ ವಿಚ್ಛೇದನದ ಸಂದರ್ಭಗಳೂ ಇರುತ್ತವಲ್ಲವೇ? ಹಾಗೆ ನೋಡಿದಾಗ ಇಲ್ಲಿಯ ವ್ಯಂಗ್ಯವು  ಸಹಾನುಭೂತಿಯನ್ನು ಕಳೆದುಕೊಂಡಿತೇನೋ  ಅನಿಸುತ್ತದೆ.

“ಪದ್ಯವಂತರಿಗಿದು ಕಾಲವಲ್ಲ” ಪುರಂದರದಾಸರನ್ನು ಅನುಸರಿಸಿ ಬರೆದ ಈ ಪದ್ಯದಲ್ಲಿ ಅಸೂಕ್ಷ್ಮರಾಗಿ ಬರೆವ ಅವಸರದ ಸಾಹಿತ್ಯೋತ್ಪಾದಕರನ್ನು ಕವಿ  ಸದ್ಯೋಜಾತರೆಂದು ಕರೆದಿದ್ದಾರೆ. ಶಬ್ದಶಃ ಆ ಪದ “ಆಗತಾನೇ ಹುಟ್ಟಿದ” ಎಂಬ ಅರ್ಥ ಕೊಡುವುದಾದರೂ ‘ಸದ್ಯ’ ಎಂಬ ಪದಕ್ಕಿರುವ ‘ತಕ್ಷಣ’ ಅಥವಾ ‘ತತ್ ಕ್ಷಣ’ದ ಅವಸರದ ಪ್ರವೃತ್ತಿ ಇಲ್ಲಿ ವಿಡಂಬನೆಗೊಳಗಾಗಿರುವುದು. ಕೊಂಡಿಯಿಲ್ಲದ ಚೇಳಿನಂಥ ಹನಿಗವನಗಳು, ಚಿಳ್ಳೆಪಿಳ್ಳೆ ನೀರ್ಗುಳ್ಳೆಗಳಂಥ  ಪದ್ಯಗಳು.. ’ನಿಂತುಕೊಂಡೇ ಉಂಡೋಡುವ’ ಧಾವಂತ ಮತ್ತು ಧ್ಯಾನಸ್ಥ ಮನಸಿನ ಗಂಭೀರ ಕಾವ್ಯಕ್ಕೆ ಇಂಬೇ ಇರದಂತೆ  ಬರೆವ  ಹುಂಬತನ ಇವೆಲ್ಲವೂ ಒಂದೇ ಥರದವು ಅನಿಸಿದೆ ಅವರಿಗೆ. ಇದು “ಪರಂಪರೆ ಯಾರಿಗೂ ಬೇಕಿರದ ಹೊರೆಯಾಗಿ ಹಿರಿಯರೆಲ್ಲ ಮರೆಗೆ ಸರಿದ ಕಾಲ”.   ” ಗಾಳಿಯಲ್ಲೇ ಬೇರೂರಿ ಬೆಳೆವ ತುರುಸಿನ ಕಾಲ”.     ಕೊನೆಯ ಮಾತಿನ ವ್ಯಂಗ್ಯ ತೀಕ್ಷ್ಣವಾಗಿದೆ. ಗಾಳಿಯಲ್ಲಿ ಬೇರೂರುವುದು ಅಸಂಭವ. ಅಂದರೆ ಅತ್ಯಾಧುನಿಕರ  ಈ ತುರುಸು ಆರೋಗ್ಯಪೂರ್ಣ ಬದುಕಿನ ಲಕ್ಷಣವೇ ಅಲ್ಲ. ಒಂದು ಕಾಲದಲ್ಲಿ  ಸ್ವತಃ ಬಂಡಾಯಗಾರರಾಗಿ ಕಂಡ ಕವಿ ಇಂದು ಪರಂಪರೆ ಮತ್ತು ಹಿರಿಯರ ಕುರಿತು ಆದರದ  ಮಾತಾಡುತ್ತಿದ್ದಾರೆ, ಅದೇ ಹೊತ್ತಿಗೆ  ಹೊಸ ಕಾಲದ ಬಗೆಗೆ ಅವರೇನೂ  ಸಿನಿಕರಾಗಿ ಮಾತಾಡುತ್ತಿಲ್ಲ ಎಂಬುದನ್ನೂ  ಗಮನಿಸಬೇಕು.

‘ಹಲೋ ವಿಲಂಬಿ… !’ ಇಂದಿನ ಹಲವಾರು ಇಕ್ಕಟ್ಟು, ಬಿಕ್ಕಟ್ಟುಗಳ ಬಗೆಗೆ ಲಯಬದ್ಧವಾಗಿ ಚಿಂತಿಸುತ್ತ  ಅನಾರೋಗ್ಯಕರ ಧಾವಂತದ ಬಗೆಗೆ ದನಿ ಎತ್ತಿದೆ. 

ಏನೋ ಆತಂಕ! ಏಕೋ ಧಾವಂತ!
ಸಿಕ್ಕಿಸಿಕ್ಕಿದ್ದ ಗಪಗಪ ಮುಕ್ಕಿ
ಧಾವಿಸುತ್ತಿದೆ ಏದುಸುರಿಡುತ್ತ
ಮುಂದಿನವರನ್ನು ಹಿಂದಿಕ್ಕಿ
ಎಲ್ಲಿಗೊ ಗೊತ್ತಿಲ್ಲ!
ಇಕ್ಕಟ್ಟು,
ಇಂದಿನ ಎಲ್ಲರ ಬಿಕ್ಕಟ್ಟು!

ಇನ್ನೂ ಕೆಲವು ಕವಿತೆಗಳಲ್ಲೂ ಕವಿ ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ದೇಶ, ಕಾಲಗಳ ಅಮಾನುಷ ವೇಗ ಅವರಿಗೆ ದಿಗಿಲು ಹುಟ್ಟಿಸಿದಂತಿದೆ. ಇದಕ್ಕೆ ಪ್ರತಿಯಾಗಿ ಅವರು “ಹಿನ್ನೋಟದ ಕನ್ನಡಿ” ಕವಿತೆಯಲ್ಲಿ ಭಿನ್ನವಾದೊಂದು ದೃಶ್ಯ ಕಲ್ಪಿಸುತ್ತಾರೆ. ಎಲ್ಲ ಧಾವಂತದ ಓಟಗಳ ನಡುವೆ, ಯಾರೊಂದಿಗೂ ಸ್ಪರ್ಧೆಯಿಲ್ಲದೆ, ಯಾವುದೇ ಧಾವಂತವಿಲ್ಲದೆ, ಸಂಗೀತ ಆಲಿಸುತ್ತ, ಸುತ್ತಮುತ್ತ ಸುಮ್ಮನೆ ಅವಲೋಕಿಸುತ್ತ ತನ್ನದೇ ಗತಿಯಲ್ಲಿ ಕೇವಲ ಖುಷಿಗಾಗಿ ಸಾಗುವುದು.. ಸಾಗಿದ್ದೇ ಗುರಿಯಾಗಿ ಸಾಗುವ ಸಲುವಾಗಿ.                           

‘ಗುರುತು’ ತನ್ನ ಸ್ವಂತದ ವಿಶಿಷ್ಟ ಚಹರೆಗಳನ್ನು ಕಳೆದುಕೊಂಡು ಬದುಕಬೇಕಾಗಿರುವ ಆಧುನಿಕ ಮಾನವನ ಸ್ಥಿತಿಯನ್ನು ಕುರಿತು ಹೇಳುವ ಪದ್ಯ. ಇಲ್ಲಿಯೂ ಅರ್ಥಹೀನ ಓಟದಂತಿರುವ  ಜೀವನದ ಕುರಿತು ಮಾತಿದೆ.  ಭೂಮಿಯ ಒಂದು ದೀರ್ಘ ಪರಿಭ್ರಮಣದ ಬಳಿಕ ಇಲ್ಲಿಯ ನಿರೂಪಕ ಕಂಡುಕೊಂಡ  ಸತ್ಯ:

  ಎಲ್ಲೆಡೆಕಂಡದ್ದೊಂದೆ:
   ಎಲ್ಲರಿಗೂ ಏನೋ ತರಾತುರಿ,

   ಏನೋ ಪಿರಿಪಿರಿ;   

  ಭ್ರಮಾಧೀನ,ಮುಖಹೀನಜನ
    ಥೇಟ್ ನನ್ನ ಹಾಗೇ.

“ಅಯ್ಯಾ, ತಾವು ಯಾರು?” ಎಂದು ಜನರು ಇವನನ್ನು ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ಸರಳವಾಗುಳಿದಿಲ್ಲ. ಭ್ರಮಾಧೀನ, ಮುಖಹೀನ ಜನರಿಗೆ  ಗುರುತಿಸಲು ಉಳಿಯುವುದಾದರೂ ಏನು?                 

ಆಧುನಿಕ ಸ್ತ್ರೀ ಲೋಕದ ದ್ವಂದ್ವಗಳಿಗೆ “ಗೊಂದಲ” ಪದ್ಯ ಮುಖಾಮುಖಿಯಾಗಿದೆ. “ಗಂಡಿನ ಪ್ರೀತಿ ಉತ್ಸವಮೂರ್ತಿ, ಹೆಣ್ಣಿಗೆ ಗರ್ಭಗುಡಿ” ಎಂಬ ಮೊದಲ ಸಾಲನ್ನೇ ಗಮನಿಸಿ. ಸೃಷ್ಟಿಕ್ರಿಯೆಯಲ್ಲಿ ವಿಭಿನ್ನ ಪಾತ್ರಗಳು ಗಂಡು, ಹೆಣ್ಣಿನವು.  ಬೆಳೆ ನೋಡಿ ಹಿಗ್ಗುವ ರೈತ ಗಂಡು,   ಹೆಣ್ಣಿಗೆ ಕ್ಷೇತ್ರದ ಪಾತ್ರ. ಇವೆಲ್ಲ ಸರಿ, ಇತಿಹಾಸ, ಪುರಾಣದುದ್ದಕ್ಕೂ  ಸ್ತ್ರೀ  ದಾಸಿ, ಅಸಹಾಯಕಿ. ಬಿಕರಿಗಿದ್ದಾಳೆ. ಆದರಿಂದು ಕಾಲ ಬದಲಾಗಿದೆ, ಹಳೆಯ ಪ್ರತಿಮೆಗಳು ಉರುಳಿಬಿದ್ದಿವೆ, ಒಡ್ದುಗಳ ಕೆಡವಿ  ಇಂದಿನ ಸ್ತ್ರೀಲೋಕ ಮುನ್ನುಗ್ಗುತ್ತಿದೆ. ಇಷ್ಟಿದ್ದೂ ಅವಳ ಗೊಂದಲ ಇನ್ನೂ ಮುಂದುವರಿದಿದೆ. ‘ಮನೆಯೋ, ಮನವೋಯಾವುದರ ಕರೆಗೆ ಓಗೊಡಬೇಕು ಎಂಬುದು ಅಷ್ಟು ಸುಲಭವಾಗಿ ನಿರ್ಧಾರವಾಗುವಂತಿಲ್ಲ. ಈ ಗೊಂದಲ ಹೆಚ್ಚಿಸುವ ಬೇರೆ ಆಯಾಮಗಳೂ ಇವೆ. ಅದನ್ನು ತಿಳಿಯಲು  ಇದರೊಟ್ಟಿಗೆ  ‘ರಾಜತರಂಗಿಣಿ’ ಪದ್ಯವನ್ನೂ ನೋಡಬೇಕು. ( ಸಂಸ್ಕೃತ ಕಾವ್ಯ ‘ರಾಜತರಂಗಿಣಿ’ ಕಾಶ್ಮೀರದ ರಾಜರ ಇತಿಹಾಸ. ಈ ಕವಿಯದು ತರಂ‘ಗಿಣಿ’, ಇತಿಹಾಸವಲ್ಲ. ಈ ಗಿಣಿಗೆ ಭವಿಷ್ಯದ ಕಾತರ )

ರಾಜತರಂ’ಗಿಣಿ’ ಪದ್ಯದಲ್ಲಿ ಪಂಜರದಲ್ಲಿರುವ   ಅರಗಿಣಿ ಬಿಡುಗಡೆಗೆ ಗಡಬಡಿಸುತ್ತಿದೆ. ಹೊರಗೊಂದು ಮಾಳ ಬೆಕ್ಕು ಆ ಗಿಣಿಯನ್ನು  ತಿನ್ನಲು  ಹೊಂಚಿ ಕೂತಿದೆ. ಕವಿ “ಇದು ನಿನ್ನ ಒಳಿತಿಗಾಗಿ, ಸ್ವಲ್ಪ ದಿನ ಪಂಜರದಲ್ಲಿರು” ಎಂದರೂ ಅರಗಿಣಿ ಒಪ್ಪುತ್ತಿಲ್ಲ.  “ನಾನು ನಿಮ್ಮ ಈ ಪ್ರತಿಷ್ಠೆಯ ಆಟಕ್ಕೆ  ಒಂದು ದಾಳವಾಗಿಯೇ ಉಳಿಯಬೇಕೆನ್ನುವೆಯಾ? ” ಎಂದು  ಪಂಜರದೊಳಗಿಂದ ಅದು ಕಂಬನಿ ಸುರಿಸುತ್ತಲಿದೆ. ಬಿಡುಗಡೆ ಗಿಣಿಯ ಆಸೆ, ಭದ್ರತೆಯ ಚಿಂತೆ ರಕ್ಷಕನದು. ಇದಕ್ಕೆ  ಪರಿಹಾರ ಸುಲಭವಲ್ಲ. ಕವಿ ಸಮಸ್ಯೆಯತ್ತ ಬೆಳಕು ಚೆಲ್ಲಿದ್ದಾರೆ. ಗಿಣಿ, ಮಾಳಬೆಕ್ಕು  ಮತ್ತು ಯಜಮಾನನ ಈ ತ್ರಿಕೋನಕ್ಕೆ  ಪರಿಹಾರ ನಾಲ್ಕನೇ ಕೋನದಿಂದಲೇ ಬರಬೇಕೇನೋ!

ದೇವರ ಕುರಿತ ಒಂದು ಪದ್ಯ “ನಮಸ್ಕಾರ ಶ್ರೀಕೃಷ್ಣನಿಗೆ”. ಕವಿತೆಯಲ್ಲಿ ಅವರು ಅವನನ್ನು ದೇವರೆಂದೇನೂ ಕರೆದಿಲ್ಲ. ಆದರೆ  ಕವಿ ಕಂಡ, ಕಾಣಬಯಸುವ ಶ್ರೀಕೃಷ್ಣ  ಇತಿಹಾಸದಲ್ಲಿ ಆಗಿಹೋದ ಒಂದು ವ್ಯಕ್ತಿಯಂತೂ ಹೌದೆನ್ನುವಂತೆ ಇಲ್ಲಿದ್ದಾನೆ. ಎರೆಮಣ್ಣಿನ ಬಣ್ಣದ ಚೆಲುವ, ಪಿಳ್ಳಂಗೋವಿಯ ಜನಪದ ಕಲೆಗಾರ, ಪ್ರೇಮವೆಂಬ ಹುಚ್ಚುಹೊಳೆಯ ಸ್ಫೂರ್ತಿಯ ಸೆಲೆ,  ಚತುರ ತಂತ್ರಗಾರ, ಉಪದೇಶದ ಕೊನೆಗೆ,  ಶಿಷ್ಯನಿಗೇ ಆಯ್ಕೆಯ ಸ್ವಾತಂತ್ರ್ಯವನ್ನು  ಬಿಟ್ಟುಕೊಟ್ಟ ಅನನ್ಯ ಆಚಾರ್ಯ, ತಾನು ಕಟ್ಟಿದ್ದೆಲ್ಲವೂ ತನ್ನ ಕಣ್ಣ ಮುಂದೆಯೇ ಕುಸಿದು ಬಿದ್ದದ್ದನ್ನು ಕಂಡು ಕೈಚೆಲ್ಲಿದ, ಕಣ್ಮುಚ್ಚಿದ ವೃದ್ಧ ಮುತ್ಸದ್ದಿ, ಎಲ್ಲರಿಗೂ ಸಲ್ಲುವವ, ಎಲ್ಲರಲ್ಲೂ ಅಷ್ಟಿಷ್ಟಾದರೂ ಇರುವವ – ವಿಶ್ವರೂಪಿ! ಅಂಥ  “ನರೋತ್ತಮ”ನಿಗೆ ಕವಿಯ ನಮಸ್ಕಾರ ಸಂದಿದೆ. ಕವಿ ದೇವರನ್ನು ನರೋತ್ತಮನೆಂದು ತಿಳಿದರೆ ಭಕ್ತಸಮೂಹಕ್ಕೆ  ದೊಡ್ಡ ಸಮಸ್ಯೆಯೇನೂ ಇಲ್ಲ. ಅವರಾದರೂ ಅವನೊಂದು ಅವತಾರವೆಂದೇ ಅಂದುಕೊಂಡಿದ್ದಾರೆ. ಅವನ ವಿಶ್ವರೂಪವನ್ನು ಕವಿ ಗ್ರಹಿಸಿರುವ, ಸಂಗ್ರಹಿಸಿರುವ ಬಗೆ ಅಚ್ಚುಕಟ್ಟಾಗಿದೆ.

ಈ ಕವಿ ಕಾವ್ಯದ ಸ್ವರೂಪದ ಬಗೆಗೆ  ಕವಿತೆಗಳೊಳಗೇ ನಡೆಸಿರುವ ಚಿಂತನೆಗಳಿಗೂ ಈ ಸಂಗ್ರಹದಲ್ಲಿ ಉದಾಹರಣೆಗಳಿವೆ.  ‘ಮಾಯಾವಿ’ ಕವಿತೆಯಲ್ಲಿ  ಬರುವ   ಹೆಣ್ಣು ಮಹಾಚಾಲಾಕಿ! ಖೊಖೋ ಆಟದಲ್ಲಿ ಜಾಣೆ; ತಪ್ಪಿಸಿಕೊಳ್ಳುವುದರಲ್ಲಿ ಪ್ರವೀಣೆ. ಎಡಗಡೆಯವನಿಗೆ ಖೊಖ್ ಕೊಟ್ಟರೆ  ಬಲಗಡೆಗೆ ನುಸುಳುತ್ತಾಳೆ;  ಬಲಗಡೆಯವನಿಗೆ ಖೊಖ್  ಕೊಟ್ಟರೆ ಎಡಗಡೆಗೆ.  ಎಡಗಡೆಯವನು    ಬಲಗಡೆಯಾಗಿ,   ಬಲಗಡೆಯವನು ಎಡಗಡೆಯಾಗಿ, ಎಡವೇ? ಬಲವೇ? ನಡುವೆ ಇನ್ನೇನು ಸಿಕ್ಕೇಬಿಟ್ಟಳು ಎನ್ನುವಷ್ಟರಲ್ಲಿ ಮತ್ತೆ ಪರಾರಿ. ಈ ಮಾಯಾವಿಯನ್ನು ಹೇಗಾದರೂ ಮಾಡಿ   ಮುಟ್ಟಲು ಪಟ್ಟು ಬಿಡದೆ ಬೆನ್ನಟ್ಟುವ ಆಟ ನಡೆದೇ ಇದೆ. ಅವಳ ಆಟ ಕಣ್ಣಿಗೆ ಕಟ್ಟುವಂತೆ ಇದೆ ಈ ಕವಿತೆಯ ರಚನೆ. ಎಡ ಬಲ ಇಬ್ಬರಿಗೂ ಅವಳು ಸಿಕ್ಕಲಾರಳು ಮತ್ತು ಈ ಕವಿಗೆ ಸಿಕ್ಕಿರುವಳು! ಈ ಮಾಯಾವಿ ಕಾವ್ಯಕನ್ನಿಕೆಯೇ ಇರಬೇಕು!

 ಹಾಸ್ಯದಿಂದಲೇ ಆರಂಭವಾಗುವ “ನಿಜ” ಕವಿತೆ ಮುಂದೆ ಕಾವ್ಯದ ಕುರಿತ ವ್ಯಾಖ್ಯಾನವೂ ಆಗಿಬಿಡುತ್ತದೆ. ಎಲ್ಲೆಡೆಗಳಲ್ಲೂ  ನಿಜ ಹೇಳುವುದರಲ್ಲಿ ಅನೇಕ ಅಪಾಯಗಳಿವೆ. “ನಿಜಾ ಹೇಳೋದು ನಿಜವಾಗಲೂ ತುಂಬಾನೇ ಕಷ್ಟ.” ಆದರೆ ಕವಿ  ಪುಣ್ಯವಂತ. ಅವನು ಸತ್ಯವನ್ನು ಹೇಳಿಯೂ ಪಾರಾಗಬಲ್ಲ. ಕಾವ್ಯದಲ್ಲಿ ರೂಪಕವೆನ್ನುವುದು ಅಕ್ಷಯವಸ್ತ್ರದಂತೆ ಒಳಗಿನ ನಿಜವನ್ನು  ಕಾಪಾಡುವುದು ಎಂದು ಕವಿ ಕಾವ್ಯಮೀಮಾಂಸೆಯ ವಿಚಾರಗಳಿಗೆ ತಮ್ಮದೊಂದು ಅಲಂಕಾರ ಸೇರಿಸಿದ್ದಾರೆ! ಅದು ಯಥಾರ್ಥವಾಗಿದೆ.

 ‘ನಿಜ’ ಕವಿತೆಯ ಒಂದು ಭಿನ್ನ ವಿಸ್ತರಣೆ ‘ಕಂಡದ್ದು’ ಕವಿತೆಯಲ್ಲಿದೆ.    ‘ನಾವು ಕಂಡದ್ದೇ ನಿಜ’ ಅನ್ನೋದು ಹೊಂಡವನ್ನೇ ಬ್ರಹ್ಮಾಂಡವೆನ್ನುವ ನಿರರ್ಥಕ ಹಠ. ನಾವು ಕಂಡದ್ದಷ್ಟೂ   ನಿಜವೇ ಅಂದುಕೊಂಡರೂ ಕಂಡದ್ದಷ್ಟೇ ನಿಜವೇ?  ‘ನಿಜ’ಕ್ಕೆ ‘ತನ್ನ’ ಎಂಬ ಇನ್ನೊಂದರ್ಥವೂ ಇದೆ.   ಅಂದರೆ ನಾವು  ಕಂಡದ್ದು ಬಹುಶಃ   ನಮ್ಮ ನಮ್ಮ ನಿಜವನ್ನ! ಕಾಲದ ಒರೆಗಲ್ಲು ನಿಜದ ನಿಜತ್ವಕ್ಕಿರುವ ಅಂತಿಮ ಪರೀಕ್ಷೆ. ಕವಿತೆಯ ಪ್ರಕಾರ ತಮ್ಮ ನಿಲುವುಗಳಿಗೋ, ತಾವು ಕಂಡದ್ದಕ್ಕೋ ಅದೇ ಸತ್ಯವೆಂದು ಅಂಟಿಕೊಂಡು ಕೂತವರು ನಿಜವಾಗಿ ಬಿದ್ದಿರುವುದು ಇಂಥ ಹೊಂಡಗಳಲ್ಲಿ. ಇದು ಕಾವ್ಯದಲ್ಲೂ ಅಷ್ಟೇ ನಿಜವಷ್ಟೆ? ಹೊಸ ನೋಟಕ್ಕೂ, ತಿಳಿವಳಿಕೆಗೂ ಮುಕ್ತವಾದ ಮನಸ್ಸು ಯೋಚಿಸುವ ಕ್ರಮ ಇದು ಅನಿಸುತ್ತದೆ. 

  “ಹೀಗೊಬ್ಬ ಕವಿಯು…” ತಮಾಷೆಯಾಗಿ ಆರಂಭವಾದರೂ ಒಂದು ಬಗೆಯಲ್ಲಿ ಕವಿ ತನ್ನ ಥರದ ಕವಿಗಳ ಬಗೆಗೆ ಹೇಳಿಕೊಳ್ಳುತ್ತಿರುವ ಮಾತುಗಳು ಅನಿಸುವಂತಿದೆ.ಈ ಕವಿಯ ಕಾವ್ಯದ ಒಲವು ನಿಲುವುಗಳನ್ನೇ ಹೇಳುವ ಕವಿತೆ ಇದೆಂದು ತೋರುವ ಕೆಲವು  ಸಾಲುಗಳು ಹೀಗಿವೆ: “ಜನರ ನಲಿವು ನೋವಿಗೆ ನುಡಿ ಕೊಡುತ್ತಿದ್ದನು.ದೇವರ ದಿಂಡಿರ ತಮಾಷೆ ಮಾಡುತ್ತಿದ್ದನು.ಸೋಗಲಾಡಿಗಳ ಛೇಡಿಸಿ ಕಾಡುತ್ತಿದ್ದನು.”ನೀ ಎಡವೊ? ಬಲವೊ?” ಎಂದರವನು ನಗುತ್ತಿದ್ದನು. ಸಂದುಗೊಂದಿಗಳನು ಅವನು ಹೋಗುತ್ತಿದ್ದನು.”ಆದರೆ ಇವನೇನೂ ಸಾಧಾರಣ ಆಸಾಮಿಯಲ್ಲ. ಪಾತಾಳಗರಡಿಯಂತೆ ಲೋಕದೊಳಗನು ಹೊಕ್ಕು, ಸಿಕ್ಕಿದ್ದೆಲ್ಲ ಹೊರಗೆ ತೆರೆಯುತ್ತಿದ್ದನು”. ಇವನು  ಕರ್ಪುರದ ಹಾಗೆ ಗಳಿಗೆ ಬೆಳಗಿ ಉರಿದುಹೋದನು ಎನ್ನುತ್ತಾರೆ ಕವಿ. ಅವನ ಜೀವಿತ, ಸಾಧನೆಗಳು ತುಂಬಾ ಘನವೆಂದು ತೋರಲಿಕ್ಕಿಲ್ಲ, ಆದರೆ ಅವು ಕಡೆಗಣಿಸುವಂಥದ್ದಲ್ಲ ಎಂದು ಕವಿ ಸೂಚಿಸುತ್ತಿರುವಂತಿದೆ.  

“ಸಹಜಾತನಿಗೆ” ಕವಿತೆಯಲ್ಲಿ ಕವಿ ತನ್ನೊಳಗಿನ  ಗೆಳೆಯ, ಹಳೆಯ, ಅಂತಃಚೈತನ್ಯ, ಒಳಸೆಲೆಯ ಜೊತೆ ಸಂಭಾಷಿಸುತ್ತಿದ್ದಾರೆ. ಆದರೆ ನಿಜಕ್ಕೂ ಅವನು (ಅದು) ತನ್ನ ಮಿತ್ರನೋ, ಹಿತಶತ್ರುವೋ ಇಂದಿಗೂ ಕವಿಗೆ ಗೊಂದಲವೇ. ಕವಿಗೆ ಹೊಸದೇನೋ ಬೇಕಾಗಿದೆ, ಸಹಜಾತನ ಸಂಗ ಸಾಕಾಗಿದೆ.  ಅವನಿಗೆ  ವಿದಾಯ ಹೇಳದೆ  ಬೇರೆ ಗತಿಯಿಲ್ಲ, ಪ್ರಗತಿಯಿಲ್ಲ ಅನಿಸುತ್ತಿದೆ. ‘ಇನ್ನಾದರೂ ಬೇಕಿದೆ ನನಗೆ ಹೊಸ ಧ್ಯಾನ, ಹೊಸ ದೃಷ್ಟಿ’,- ಕಾಣಲು ಲೋಕ ಸಮಷ್ಟಿಯ ಇನ್ನಿತರ ಅಜ್ಞಾತ ಮಗ್ಗಲುಗಳನ್ನು. ಅದಕ್ಕಾಗಿ   ತನ್ನದೇ ಹಣೆಗಣ್ಣು ಪಡೆದಲ್ಲದೆ ಬಿಡುಗಡೆಯಿಲ್ಲ ಎಂಬ ಅರಿವೂ ಕವಿಗಿದೆ.

ಏಳು ಗೀತಗಳು ಸಂಕಲನದಲ್ಲಿವೆ. ಕನ್ನಡ ಕಾವ್ಯ ರಸಿಕರು ಸದಾ ನೆನಪಿಸಿಕೊಳ್ಳುವ ಹಾಡುಗಳನ್ನು ಬರೆದವರು ಲಕ್ಷ್ಮಣರಾವ್. ಇಲ್ಲಿರುವ  ಒಂದು ಹಾಡು ಕನ್ನಡದ ಕುರಿತಾದುದು. ಯಾರು ಎಷ್ಟು ತುಳಿದರೂ ಕನ್ನಡ  ಗರಿಕೆ ಹುಲ್ಲಿನಂತೆ ಎದ್ದು ನಿಲ್ಲುವುದು, ಅಗಸ್ತ್ಯನಂತೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯೂ  ಅದಕ್ಕಿದೆ ಎಂಬ ವಿಶ್ವಾಸ ಅಲ್ಲಿ ಪ್ರಕಟವಾಗಿದೆ. ಪ್ರೀತಿಯ ವಿವಿಧ ಭಾವ ಸಂಚಾರಗಳು ಕೆಲವು ಗೀತೆಗಳಲ್ಲಿವೆ. (ಆಗಲೇ ಪ್ರಸ್ತಾಪಿಸಿದೆ). ಅನುವಾದಿತ ಪದ್ಯಗಳು ಸೊಗಸಾಗಿವೆ. ಅನುವಾದಕ್ಕೆ ಅವರು ಆಯ್ದುಕೊಂಡಿರುವ ಪದ್ಯಗಳು ವಿಭಿನ್ನ ಧಾಟಿ, ಧೋರಣೆಯ ಕವಿಗಳವು. ಯೇಟ್ಸ್ ನ ಆಧ್ಯಾತ್ಮಿಕ ತುಯ್ದಾಟ  , ಎಮಿಲಿ ಡಿಕಿನ್ಸನ್ ರ ಅಮರತೆಯ ಶೋಧ, ಕ್ಯಾರಿಬೆಲ್ ಅಲೆಗ್ರಿಯರ ಕವಿತೆಯಲ್ಲಿ ಕಾಣುವ ದುಡಿವ ವರ್ಗದ  ಚಿತ್ರ  ಇವೆಲ್ಲ ಈ ಕವಿಗೆ ಆಗುಂತಕ ಎನ್ನುತ್ತಿಲ್ಲ, ಆದರೆ ಅವುಗಳ ಸ್ವರೂಪ ಬೇರೆ. ಆ ರೀತಿಯಲ್ಲಿ ಇವು ಅವರ ಜೀರ್ಣಾಗ್ನಿಯು ಒಳಗೊಳ್ಳಬಯಸುವ ವಿಸ್ತರಣೆಯ ಸಾಧ್ಯತೆಗಳು ಅಂದುಕೊಂಡಿದ್ದೇನೆ. 

                                                 ********

ಸೇಂದ್ರಿಯ ಜಗತ್ತಿನ ಅನುಭವಗಳಲ್ಲಿ ವಿಶ್ವಾಸವಿಟ್ಟವರು ಈ ಕವಿ. ಎಲ್ಲ ಅನುಭವಗಳಿಗೂ ತಮ್ಮನ್ನು ಒಪ್ಪಿಸಿಕೊಂಡು ಗ್ರಹಿಕೆಗಳನ್ನು ನೇರವಾಗಿ ಪಡೆಯುವ ತವಕ, ಪಟುತ್ವ ಉಳಿಸಿಕೊಂಡವರು. ಅವರ ಕಾವ್ಯ ಶೈಲಿಯ ಪ್ರಸನ್ನತೆ, ಸಾಂದ್ರತೆ, ಲಘು ಜಿಗಿತಗಳು, ಆಡುಮಾತಿನ ಲಯ ವೈವಿಧ್ಯಗಳನ್ನೊಳಗೊಂಡು ಬಾಗುತ್ತ, ಬಳುಕುತ್ತ ಬೆರಗಿನ ಹಾದಿಯಲ್ಲಿ ಬೆಳಕು ತೋರುತ್ತ ನಡೆಸುವ ಕ್ರಮ ಎಲ್ಲವೂ ಕಾವ್ಯರಸಿಕರ ಮೆಚ್ಚುಗೆ ಗಳಿಸಿವೆ. ಯಾವುದೇ ಪೂರ್ವಗ್ರಹಗಳಿಲ್ಲದ ಮುಕ್ತ ಮನಸು, ಪ್ರೀತಿ, ಸ್ನೇಹ ಮತ್ತು ಪ್ರಾಮಾಣಿಕತೆಯಂಥ ಮಾನವೀಯ ಮೌಲ್ಯಗಳಿಂದ ಜೀವನವೂ, ಕಾವ್ಯವೂ ಹಸನಾಗಬಲ್ಲುದು ಎಂಬುದು ಈ ಕವಿಯ ತಾತ್ವಿಕತೆಯಾಗಿದೆ. ಲೋಕದ ಸಂಪರ್ಕದಿಂದ ಅವರ ಕಾವ್ಯವು ಅರಳುವಂತೆ, ಅವರ ಕಾವ್ಯದಿಂದ ಲೋಕಜೀವನಕ್ಕೂ ಲವಲವಿಕೆ, ಉಲ್ಲಾಸ, ಸಂಭ್ರಮಗಳು ಲಭಿಸಿವೆ. ಕಾವ್ಯರಸಿಕರ ಬಾಳಿಗೆ ಚೆಲುವು ತರಬಲ್ಲ ಕಾವ್ಯ ಬರೆದವರು ಬಿ.ಆರ್.ಲಕ್ಷ್ಮಣರಾವ್. 

                                             *****

ನನ್ನ ಕಾವ್ಯದ ಆರಂಭದ ದಿನಗಳಿಂದಲೂ  ಬಿ.ಆರ್.ಲಕ್ಷ್ಮಣರಾವ್ ಅವರ ಕವಿತೆಗಳನ್ನು ಇಷ್ಟಪಟ್ಟಿದ್ದೆ. ಅವರ ಸಂಪರ್ಕ ನನ್ನನ್ನು ಬೆಳೆಸಿದೆ. ಅವರದೊಂದು ಕವನ ಸಂಕಲನಕ್ಕೆ ಮುನ್ನುಡಿ ಬರೆಯಲು ಹೇಳಿ ನನ್ನ ಮೇಲೆ ಅವರು ಕಲ್ಪನಾತೀತ ಪ್ರೀತಿ, ಅಭಿಮಾನ ತೋರಿದ್ದಾರೆ. ಅದರ ಮುಂದೆ ನನ್ನ ಕೃತಜ್ಞತೆ ತುಂಬಾ ಚಿಕ್ಕ ಪದವೆಂದು ಬಲ್ಲೆ. 

 

‍ಲೇಖಕರು Avadhi

September 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: