ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಸಿಲನಾಡಿನ ಬಂಡಾಯಗಾರ;ಎಸ್ ಎಸ್ ಹಿರೇಮಠ ಒಂದು ನೆನಪು;

-ಕೆ.ಮಹಾಂತೇಶ್

ಮಧ್ಯಪ್ರಾಚ್ಯದಲ್ಲಿ ಅಮೇರಿಕಾ‌ ಹಾಗೂ ‌ಇಸ್ರೇಲ್ ಇರಾನ್‌ ಹಾಗೂ ಪ್ಯಾಲಿಸ್ಟೈನ್ ‌ಮೇಲೆ ಹರಿಯಬಿಟ್ಟಿರುವ ಯುದ್ದದ ಪರಿಣಾಮ ಜಗತ್ತು ಹಾಗೂ ಭಾರತೀಯರ ಬದುಕಿನ ಮೇಲೆ‌ ಗಾಢವಾಗಿ ಪ್ರಭಾವ  ‌ಬೀರುತ್ತಿರುವ ಈ ಹೊತ್ತಿನಲ್ಲಿ ಬಿಸಿಲ ನಾಡಿನಲಿ ಬಂಡಾಯ ಬಾವುಟ ಹಾರಿಸಿ ವೈಚಾರಿಕ ಪ್ರಜ್ಞೆಯ ಬಡಿದೆಬ್ಬಿಸಿದ ಎಸ್.ಎಸ್.ಹಿರೇಮಠ ಅವರ  ಯುದ್ದ ವಿರೋಧಿ ಹಾಡು ನನಗೆ ಮತ್ತೆ ಮತ್ತೆ ‌ನೆನಪಾಗುತ್ತಿದೆ…

“ನೂರು ಅಡಿಗಳಣ್ಣಾ
ಇದು‌ ಬಣ್ಣದ‌ ನಡೆಯಣ್ಣಾ
ಅಣು‌ ಸಮರಕ್ಕೆ ತಡೆಯೋ
ನಮ್ಮ‌ ಸಮುದಾಯದ‌ ಈ ಕರೆಯು”…

ದಾವಣಗೆರೆ ಸಮುದಾಯದ ಚಿತ್ರಕಲಾ ಶಾಲೆಯ ಅಧ್ಯಾಪಕರು ಹಾಗೂ ಕಲಾವಿದರಾದ ಪ್ರೊ; ಟಿ.ಬಿ.ಸೊಲಬಕ್ಕನವರ್ ಹಾಗೂ ಕರಿರಾಜು ಅವರಿಂದ ರಚಿಸಲ್ಪಟ್ಟ “ನೂರಾ ಇಪ್ಪತ್ತು ಅಡಿಗಳ  ಬಣ್ಣದ ನಡೆ  ಅಣು ಸಮರಕೆ ತಡೆ” ಯುದ್ದ ವಿರೋಧಿ ಚಿತ್ರಪ್ರದರ್ಶನ ರಾಜ್ಯಾದ್ಯಂತ ‌ದೇಶಾದ್ಯಾಂತ‌
ಎಂಬತ್ತರ‌ ದಶಕದ‌ ಮಧ್ಯಭಾಗದಲ್ಲಿ ಸಂಚರಿಸಿತು. ಅದಕ್ಕೆ ಮುನ್ನುಡಿ ಎಂಬಂತೆ ಪ್ರೊ; ಎಸ್.ಎಸ್. ಹಿರೇಮಠ ಅವರು ರಚಿಸಿದ ಈ ಹಾಡು ಸಮುದಾಯ ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ ಎಲ್ಲ ಜಾಥಾಗಳು, ಕಾರ್ಯಕ್ರಮಗಳಲ್ಲೂ ಅತ್ಯಂತ ಜನಪ್ರಿಯ ಗೀತೆಯಾಗಿತ್ತು. ನಾನು 89-90 ರಲ್ಲಿ ದಾವಣಗೆರೆ ‌ಸಮುದಾಯ ಸಂಘಟನೆ‌ ಕಾರ್ಯಕರ್ತ ನಾಗಿ ಕೆಲಸ ಮಾಡಲು ಶುರುಮಾಡಿದಾಗ ಸಮುದಾಯ ನಡೆಸಿದ ಎಲ್ಲ ಜಾತಾಗಳಲ್ಲಿ, ನಾಟಕಗಳ ಪ್ರದರ್ಶನಗಳಲ್ಲಿ  ಈ ಹಾಡನ್ನು ಸಂಗಾತಿಗಳೊಡಗೂಡಿ  ಹಾಡಿದ ಹೆಮ್ಮೆ ಈಗಲೂ ಇದೆ.

“ಮನುಕುಲ ಉಳಿದರೆ
ಹೂಗಳು ಅರಳಿ
ನದಿಯು ಹರಿಯುವುದು
ನಿರಂತರ..
ಹಕ್ಕಿ ಹಾರುವುದು ನವಿಲು ಓಡುವುದು
ಬದುಕು ನುಗ್ಗುವುದು
ಬಾನೆತ್ತರ…
ಯುದ್ದಕೆ ಕರೆಯುವ ಬಿಳಿಯ ಹದ್ದುಗಳ
ಸೆಳೆವ ಜಾಲಕೆ ಬೀಳದಿರಿ
ಅವರಾಡುವ ಪರಿಪರಿ ಆಟದಲ್ಲಿ
ಗಂಡಾಂತರವನು
ಮರೆಯದಿರಿ…”
       
ಎನ್ನುವ ಸಾಲುಗಳಂತೂ ಈಗಲೂ ಜಾಗತಿಕ ಕಾರ್ಪೋರೇಟ್ ಬಂಡವಾಳ, ಸಾಮ್ರಾಜ್ಯಶಾಹಿ ದೇಶಗಳೊಂದಿಗೆ ಸೇರಿ ಬಡ‌ ಹಾಗೂ ಅಭಿವೃಧ್ದಿಶೀಲ ಸಾರ್ವಭೌಮ ದೇಶಗಳ‌ ಮೇಲೆ ಭೌಗೋಳಿಕ ,ಆರ್ಥಿಕ ಮಿಲಿಟರಿ ಅಕ್ರಮಣ ಹಲವು ಆರ್ಥಿಕ ನಿರ್ಬಂಧಗಳ ಮೂಲಕ ಆ‌ ದೇಶಗಳನ್ನು ಇಡೀಯಾಗಿ ಹೇಗೆ ತಮ್ಮ‌ಕಪಿಮುಷ್ಠಿಗೆ, ಅವರ ಸೆಳವಿನ ಜಾಲಕ್ಕೆ ಸೆಳೆದುಕೊಳ್ಳುತ್ತವೆ ಎನ್ನುವ ಸಮಕಾಲೀನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿವೆ. ಯದ್ದದಾಹಿ ಅಮೇರಿಕಾದ ಅಪಾಯಕಾರಿ ಗುಂಡಿಗೆ ಬೀಳದಿರಿ ಎನ್ನುವ ಎಚ್ಚರಿಕೆಯನ್ನು ಆ ಹಾಡಿನ‌ ಮೂಲಕ ಹಿರೇಮಠ ಅವರು ಸುಮಾರು 40. ವರ್ಷಗಳ ಹಿಂದೆಯೇ ತಮ್ಮ ಎಚ್ಚರಿಕೆಯನ್ನು ಹೀಗೆ ಕಟ್ಟಿಕೊಟ್ಟಿದ್ದರು. ಪ್ರೊ; ಎಸ್.ಎಸ್. ಹಿರೇಮಠ ಅವರದ್ದು ಹಸಿವಿಲ್ಲದ,ಯುದ್ದರಹಿತ‌ ದೌರ್ಜನ್ಯ ಇಲ್ಲದ ಜಗತ್ತು ಮತ್ತು ಶಾಂತಿಗಾಗಿ ಹಂಬಲಿಸುವ ಆಶಯ ಮತ್ತು ಕನಸ್ಸಾಗಿತ್ತು.

ಹಿರೇಮಠ ಅವರ ‌ಕೊಡುಗೆ ಅದು ಕರ್ನಾಟಕದ ‌ಸಾಂಸ್ಕೃತಿಕ ಚಳವಳಿಗೆ ಸಂಬಂಧಿಸಿ ಅತ್ಯಂತ ‌ಮಹತ್ವದ್ದು. ವಿಶೇಷವಾಗಿ ಸಮುದಾಯ ಹಾಗೂ ಬಂಡಾಯ ಸಾಹಿತ್ಯ ಚಳವಳಿ ಹಾಗೂ ‌ಸಂಘಟನೆ ಸ್ಥಾಪನೆಯಲ್ಲಿ ಅದರ ಬೆಳೆವಣಿಗೆಗೆ ಅವರು ಅವಿಶ್ರಾಂತ ‌ಶ್ರಮಿಸಿದ್ದರು. ಎಪ್ಪತ್ತು ಹಾಗೂ ಎಂಬತ್ತರ ದಶಕದಲ್ಲಿ ಸಮುದಾಯ ಸಂಘಟಿಸಿದ ಯುದ್ದವಿರೋಧಿ ಹಾಗೂ ಬರವಿರೋಧಿ‌ ಹಾಗೂ ನರಗುಂದ ನವಲಗುಂದ ರೈತರ ಸಾಂಸ್ಕೃತಿಕ ‌ಜಾತಾಗಳ ಪ್ರಮುಖ ಕಾರ್ಯಕರ್ತರಾಗಿ ಬಳಿಕ ವಿಜ್ಞಾನ ಹಾಗೂ ಸಾಕ್ಷರತಾ ಚಳವಳಿಗಳ ಕಾರ್ಯಕರ್ತರಾಗಿ ಅಜ್ಞಾನ‌,ಅಂಧಕಾರ,ಮೌಢ್ಯತೆ ಹೊಗಲಾಡಿಸಲು  ಮತ್ತು ವೈಚಾರಿಕತೆ ವೈಜ್ಞಾನಿಕ ಸಮಾಜ ನಿರ್ಮಿಸಲು ಅವರು ನಿರಂತರವಾಗಿ ದುಡಿದ ಶ್ರಮವನ್ನು ಈಗಲೂ ಅವರ ಜತೆ ಕೆಲಸ ಮಾಡಿದ ಅನೇಕರು ನೆನಪು ಮಾಡಿಕೊಳ್ಳುತ್ತಾರೆ.

ಮೊದಲ ಬೇಟಿಯ‌ ನೆನಪು;
ಅದು‌1987 ಡಿಸೆಂಬರ್ 31;  ಪ್ರೊ; ಎಸ್‌ಎಸ್. ಹಿರೇಮಠ ಅವರನ್ನು ನಾನು ಮೊದಲು ನೋಡಿದ ದಿನ. ಹರಿಹರದಲ್ಲಿ ನಡೆದ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಎಸ್.ಎಫ್.ಐ  ಸಮ್ಮೇಳನದ ಉದ್ಘಾಟನೆಗಾಗಿ ಅವರು ಆಗಮಿಸಿದ್ದರು. ಕೆಂಪಾದ ಮುಖ ಉದ್ದವಾದ‌ ಮೂಗು ಅದರ‌ ಮೇಲ್ಗಡೆ ದಪ್ಪನೆಯ‌ ಕನ್ನಡಕ, ಸ್ವಲ್ಪ ಉದ್ದವಾದ ನೀಳ ಕೂದಲು.ತೆಳುವಾದ ದೇಹ ತೊಳಿಗೆ ಇಳಿಬಿದ್ದ ಬಟ್ಟೆಯ ಬ್ಯಾಗು ಅದರ ತುಂಬಾ ಪುಸ್ತಕಗಳು ಬಡಕಲು ಒಂದು ರೀತಿಯ ಸದಾ ಹೊಯ್ದಾಡುತ್ತಿದ್ದ ದೇಹ ಇದು ಅವರು‌ ಮೊದಲ ನೋಟದಲ್ಲಿ‌ ನನಗೆ ಕಂಡ ಪರಿ.

ನಾನಾಗ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ. ಸಮ್ಮೆಳನಕ್ಕೆ ನನ್ನನ್ನು ಪ್ರತಿನಿಧಿಯಾಗಿ  ಆಗ ನನ್ನ ಸೋದರ ಸಂಬಂಧಿ‌ ಹಾಗೂ ಎಸ್.ಎಫ್.ಐ ಜಿಲ್ಲಾಧ್ಯಕ್ಷನಾಗಿದ್ದ ಅಣ್ಣಪ್ಪ ಹಾಗೂ ಹರಪನಹಳ್ಳಿಯವರೆ ಆದ ದಾವಣಗೆರೆ ಕಾನೂನು ಕಾಲೇಜಿನ  ವಿದ್ಯಾರ್ಥಿ ಹಾಗೂ ನನ್ನನ್ನು ಸಂಘಟನೆಗೆ ಕರೆತರಲು ಶ್ರಮಿಸಿದ  ಕೃಷ್ಣಾಜಿ ಕಲಾಲ್ ಮುತುವರ್ಜಿ ವಹಿಸಿ ಕರೆ ತಂದಿದ್ದರು.

ಅಂದಿನ ಸಮ್ಮೇಳನವನ್ನು ಪ್ರೊ.ಎಸ್.ಎಸ್.ಹಿರೇಮಠ ಉದ್ಘಾಟಿಸಿ ಮಾತನಾಡಿದರು. ಬಳಿಕ ಸಮ್ಮೇಳನದಲ್ಲಿ   ಭಾಗವಹಿಸಿದ ನಮಗೆ ಅವರ “ಮನುಷ್ಯನೆಲ್ಲಿ..? ಎನ್ನುವ ಹಸಿರು ಬಣ್ಣದ ಕವರ್ ಪೇಜಿನ ಸೈಕ್ಲೋಸ್ಟೈಲಾದ ಚಿಕ್ಕದಾದ ಕವನ ಸಂಕಲವನ್ನು ಕೊಡುಗೆಯಾಗಿ ನೀಡಿದ್ದ ನೆನಪು ಈಗಲೂ ನನಗೆ ಅಚ್ಚಹಸಿರಾಗಿದೆ.

ಬಿಸಿಲ ನೆಲದಲಿ ಬಂಡಾಯದ ಉಳುಮೆ!
ಎಪ್ಪತ್ತರ ದಶಕದ ಕೊನೆಯಲ್ಲಿ  ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ವಿಶೇಷವಾಗಿ ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ ಬೆಳೆದ ವಿದ್ಯಾರ್ಥಿ ಚಳವಳಿಯು ಮುಂದೆ ಇಡೀ ಜಿಲ್ಲೆಯಲ್ಲೇ ಕಮ್ಯೂನಿಸ್ಟ್‌ ಚಳವಳಿಗೆ‌ ಉತ್ತಮ ಭೂಮಿಕೆ ಒದಗಿಸಿತು.ಇದಕ್ಕೆ ಬೆನ್ನೆಲುಬಾಗಿ ನಿಂತವರು ಹಿರೇಮಠ ‌ಹಾಗೂ ಇನ್ನೊರ್ವ ಮೇಷ್ಟ್ರು ಭೀಮಸೇನಾಚಾರ್ ಎನ್ನುತ್ತಾರೆ ಆಗ ಪಿಯುಸಿ ವಿದ್ಯಾರ್ಥಿ ಆಗಿದ್ದ ಎಸ್.ವೈ ಗುರುಶಾಂತ್ ರವರು. ಮುಂದೆ ಹಿರೇಮಠ ಅವರು ಹಡಗಲಿ, ಹರಪನಹಳ್ಳಿಯ ಕಾಲೇಜುಗಳಲ್ಲಿ ಕೆಲಸ‌ ಮಾಡುವಾಗಲೂ  ಬರೇ ಅಧ್ಯಾಪಕರಾಗಿ ಕೆಲಸ‌ ಮಾಡಿದ್ದಲ್ಲ ವೈಚಾರಿಕತೆ ಹಾಗೂ ವೈಜ್ಞಾನಿಕ ಆಂದೋಲದನ ಕೆಂದೂಳನ್ನೇ ಎಬ್ಬಿಸಿದ್ದರು. ಮತ್ತು ಅಂತಹ ಶಿಷ್ಯರ ಪಡೆಯನ್ನು ಕಟ್ಟಿದರು. ಕಾಲೇಜಿನ ಶಾಸ್ತ್ರೀಯ ಪಠ್ಯಕ್ರಮದಾಚೆ ದ್ವಂದಮಾನ‌ ಭೌತವಾದ ಚಾರಿತ್ರಿಕ ಭೌತವಾದಗಳನ್ನು ಭೋದಿಸುತ್ತಾ ದಲಿತ ಪ್ರಜ್ಞೆ,ಸಮಷ್ಠೀ ಪ್ರಜ್ಣೆ, ಸ್ತ್ರೀ ಸಮಾನತೆ, ಸಮಾಜವಾದಿ ಆಶಯಗಳನ್ನು ಅದನ್ನು ಸಾಧಿಸಲು ಇರುವ ದಾರಿಗಳನ್ನು ಪ್ರತಿಪಾದಿಸುತ್ತಾ ವಿಶೇಷವಾಗಿ ಅಸಮಾನತೆಯ ಬುನಾದಿ‌ಮೇಲೆ ನಿರ್ಮಿಸಿದ ಅಮಾನವೀಯ ‌ಶೋಷಣಾ ವ್ಯವಸ್ಥೆ ಬದಲಾಯಿಸಲು ಕ್ರಾಂತಿಕಾರಿ ಚಳವಳಿಯ ಅಗತ್ಯವನ್ನು ಅದಕ್ಕೆ ಅಗತ್ಯವಾದ ಮಾರ್ಕ್ಸ್ ವಾದ, ಸಮಾಜವಾದಿ ಸಿದ್ದಾಂತವನ್ನು ಯುವಜನರ ಮನಸ್ಸಿನಲ್ಲಿ ತುಂಬಲು ತನ್ನ ಇಡೀ ದುಡಿಮೆ, ಬದುಕು ಸಮಯವನ್ನು ಮೀಸಲಿಟ್ಟು ಓರ್ವ‌ ಕ್ರಾಂತಿಕಾರಿ ಯೋಧನಂತೆ ದುಡಿದರು. ಇದರ ಪರಿಣಾಮ ಬಳ್ಳಾರಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ ‌ಹಾಗೂ ಹರಪನಹಳ್ಳಿ ಗಳಲ್ಲಿ ವಿದ್ಯಾರ್ಥಿ ಚಳವಳಿ ಬಲಿಷ್ಟವಾಗಿ ಬೆಳೆದು ಸಾಕಷ್ಟು ಪೊಲೀಸ್ ‌ದೌರ್ಜನ್ಯವನ್ನು ಎದುರಿಸಿತ್ತು ಮಾತ್ರವಲ್ಲ ಈ ಚಳವಳಿಯ ಮೂಲಕ ಒಡಮೂಡಿದ ಹತ್ತಾರು ಜನರು ಇಂದೂ ಬಳ್ಳಾರಿ, ವಿಜಯನಗರ ‌ಮಾತ್ರವಲ್ಲ ಇಡೀ ರಾಜ್ಯದ ಜನ‌ಚಳವಳಿಯಲ್ಲಿ, ಸಾಂಸ್ಕೃತಿಕ, ಸಾಹಿತ್ಯಿಕ, ಮಾಧ್ಯಮ ಕ್ಷೇತ್ರಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಆಡಳಿತ ಸೇವೆಗಳಲ್ಲಿ ಇಂದಿಗೂ ಅದೇ ವೈಚಾರಿಕತೆ, ವೈಜ್ಞಾನಿಕ ಅರಿವಿನ ಕಾಯಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಂದಿನ ಬಳ್ಳಾರಿ ಜಿಲ್ಲೆಯ ಆ ವಿದ್ಯಾರ್ಥಿ ಚಳವಳಿ ಪ್ರಬಾವ ಎಷ್ಟಿತ್ತೆಂದರೆ ಆಗಷ್ಟೇ ಕ್ರಿಶ್ಚಿಯನ್ ‌ಮಠ ತೊರೆದು ಜನಚಳವಳಿಗೆ‌ ಬಂದಿದ್ದ ನಿತ್ಯಾನಂದಸ್ವಾಮಿ ಸ್ವತಃ ಇದರಿಂದ  ಸ್ಪೂರ್ತಿಗೊಂಡು‌‌ ಅದೆಷ್ಟೋ ಭಾರಿ  ಈ ವಿದ್ಯಾರ್ಥಿ ಚಳವಳಿಯಲ್ಲಿ ಸ್ವಾಮೀಜಿಯಾಗಿಯೇ ಅವರಿದ್ದ ಸೌದತ್ತಿಯಿಂದ  ಹೊಸಪೇಟೆಗೆ ಬಂದು ಭಾಗವಹಿಸಿದ್ದನ್ನು ಹಿಂದೆ ಹಲವು ಬಾರಿ ನೆನಪು‌ ಮಾಡಿಕೊಂಡಿದ್ದರು. ಇಂತಹ ವಿದ್ಯಾರ್ಥಿ ಚಳವಳಿಗೆ‌ ಸದಾ ಬೆನ್ನೆಲುಬಾಗಿದ್ದವರು ಪ್ರೊ; ಹಿರೇಮಠರು ಎಂದರೆ ತಪ್ಪಲ್ಲ.

ಬಂಡಾಯ ಪುಸ್ತಕ‌ ಜಾತಾ
ಹಿರೇಮಠರನ್ನು ನಾನು ಬಹುಶಃ ಕೊನೆ ಬಾರಿ ‌ನೋಡಿದ್ದು‌ ಬೇಟಿ‌ ಮಾಡಿದ್ದು ಬಂಡಾಯ‌ ಸಾಹಿತ್ಯ ‌ಸಂಘಟನೆ ರಾಜ್ಯಾದ್ಯಂತ ಬಹುಶಃ 92 ಅಥವಾ 93 ರಲ್ಲಿ ಸಂಘಟಿಸಿದ್ದ ಪುಸ್ತಕ‌ ಜಾತಾ ಸಮಯದಲ್ಲಿ. ಆಗ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಈ‌‌ ಜಾತಾ ಜವಾಬ್ದಾರಿ ವಹಿಸಿಕೊಂಡಿದ್ದವರು ಅಂದಿನ ಪ್ರಜಾವಾಣಿ ಜಿಲ್ಲಾ ವರದಿಗಾರರು ಹಾಗೂ ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕರೊಬ್ಬರರಾಗಿದ್ದ ಗುಡಿಹಳ್ಳಿ ನಾಗರಾಜ್ ಅವರು. ಜಿಲ್ಲೆಯ ಕೊನೆಯ ಪ್ರದರ್ಶನ ಹರಿಹರದಲ್ಲಿ ನಡೆದಾಗ‌ ಅಲ್ಲಿಗೆ ಆ‌ ಪುಸ್ತಕ ಜಾತಾವನ್ನು ಹರಪನಹಳ್ಳಿ ಗೆ ಕೊಂಡೊಯ್ಯಲು ಪ್ರೊ ಹಿರೇಮಠರು ಅಲ್ಲಿಗೆ‌ ಬಂದಿದ್ದರು. ಆಗ  ನಾನು ಅವರನ್ನು ಬೇಟಿ ಮಾಡಿದ್ದೆ.ಗುಡಿಹಳ್ಳಿ ಯವರು ವಿದ್ಯಾರ್ಥಿ ಆಗಿದ್ದ ನನಗೆ ಸುಮಾರು ‌ಐನೂರು ರುಪಾಯಿಗಳಿಗಿಂತ ಅಧಿಕ ಮೊತ್ತದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದನ್ನು  ಇಂದಿಗೂ ನಾನು ಸ್ಮರಿಸುವೆ. ಈ ಪುಸ್ತಕ ಜಾತಾದ ಹೊಣೆ ಹೊತ್ತಿದ್ದವರು ಗುಡಿಹಳ್ಳಿ ಹಾಗೂ ಹಿರೇಮಠ ಅವರು. ಪುಸ್ತಕ‌ಜಾತಾ ಯಶಸ್ವಿಯಾಗೆನೋ ನಡೆಯಿತು. ಆದರೆ ಆ ಬಳಿಕ ಸಾಕಷ್ಟು ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ  ‌ಹಿರೇಮಠ ಅವರು ಕಷ್ಟ ಅನುಭವಿಸಿದರು ಎಂದು‌ ಕೇಳಲ್ಪಟ್ಟೆ.

ಹಾಗೆ ನೋಡಿದರೆ ‌ನಾನು ಎಸ್.ಎಸ್.ಹಿರೇಮಠ ಅವರನ್ನು ತೀರ ಹತ್ತಿರದಿಂದ ಬಲ್ಲವನಲ್ಲ.ಆದರೆ ಅವರ ಕೆಲಸವನ್ನು ಅವರು ಚಳವಳಿಗೆ ನೀಡಿದ ಸ್ಪೂರ್ತಿಯನ್ನು ಅವರ ಒಡನಾಡಿಗಳಿಂದ ತಿಳಿದುಕೊಂಡಿರುವೆ ಸ್ವಲ್ಪ ಪ್ರಮಾಣದಲ್ಲಿ ಅವರ‌ ಕವಿತೆ,ಹಾಡು, ಹಾಗೂ ಜನಪದ,ದಲಿತ ಹಾಗೂ ವೈಚಾರಿಕ ಬರವಣಿಗೆ ಓದಲು ಪ್ರಯತ್ನಿಸಿರುವೆ ನನಗೆ ವಿಶೇಷವಾಗಿ ಅವರೊಬ್ಬ ಅದ್ಬುತ ಸಂಘಟಕ ಹಾಗೂ ಕಾರ್ಯಕರ್ತನಾಗಿ ಮಾಡಿದ ಕೇಳಿದ ಕೆಲಸಗಳಿಂದಾಗಿ ನಾನೂ ಕಮ್ಯೂನಿಸ್ಟರು ಚಳವಳಿಯ ಕಾರ್ಯಕರ್ತನಾಗಿ ಪ್ರೇರಣೆ‌ ಪಡೆದಿರುವೆ. ಅಂತಹ ಹಿರೇಮಠರು ತದನಂತರ ಎಲ್ಲ‌ ಚಳವಳಿಗಳಿಂದ ವಿಮುಖರಾದರು.ಆದರೆ ಒಬ್ಬ ಸಂಶೋಧಕರಾಗಿ ತನ್ನ ನಿರಂತರವಾದ ಕೆಲಸವನ್ನು ಹಂಪಿ ವಿವಿಯಲ್ಲಿ ಬಳಿಕ ಕೊಟ್ಟೂರಿನಲ್ಲಿ ಮುಂದುವರೆಸಿದ್ದರು.‌

ಅದಾದ ಬಳಿಕ ದೂರದ ಬೆಳಗಾವಿಯ ಬೈಲಹೊಂಗಲ ಅವರ ಹುಟ್ಟೂರಿನಲ್ಲಿ ಅನಾರೋಗ್ಯಪೀಡಿತರಾಗಿ ಕೊನೆದಿನಗಳನ್ನು ಕಳೆದಿದ್ದು ಅತ್ಯಂತ ನೋವಿನ ಸುದ್ದಿಯಾಗಿತ್ತು. ಹೀಗೆ ತಮ್ಮ ಜೀವಿತದ ಕೊನೆಗಾಲದಲ್ಲಿ  ಜನಚಳವಳಿ ಸೇರಿ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ವಿದ್ವತ್ತ ವಲಯಗಳಿಂದ ದೂರವಾಗಿ ಹೋಗಿದ್ದ ಎಸ್.ಎಸ್. ಹಿರೇಮಠ ಅವರ ಕೆಲಸವನ್ನು  ಕನ್ನಡ ಪುಸ್ತಕ ಪ್ರಾಧಿಕಾರ ಅವರ ಸಮಗ್ರ‌ ಸಾಹಿತ್ಯ, ಕೃತಿಗಳನ್ನಾಗಿ ಪ್ರಕಟಿಸುವ ಕೆಲಸವನ್ನು ತಡವಾಗಿಯಾದರೂ  ಕೈಗೆತ್ತಿಕೊಂಡಿದ್ದು ಅತ್ಯಂತ ಸ್ವಾಗತಾರ್ಹ .ಅಲ್ಲದೆ  ಅವರೇ ಪಾಠ ಮಾಡಿದ ಎಡ ಚಳವಳಿಗೆ ಬೀಜಹಾಕಿದ್ದ  ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲೇ ಹಮ್ಮಿಕೊಂಡಿರುವುದು ನಿಜಕ್ಕೂ ಅಭಿನಂದನಾರ್ಹ ಕೆಲಸ.

ಎಸ್.ಎಸ್.ಹಿರೇಮಠ ಅವರ ವೈಚಾರಿಕ ಚಿಂತನೆಗಳು ಹಾಗೂ ತಳಸ್ಪರ್ಶಿ ಆಲೋಚನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ , ಡಿಜಿಟಲ್‌ ಲೋಕದಲ್ಲಿ ತಲ್ಲೀನರಾಗಿರುವ ಇಂದಿನ ಯುವ ಸಮುದಾಯಕ್ಕೆ ತಲುಪಿಸುವ ಕೆಲಸ ಅತ್ಯಂತ ತ್ರಾಸದಾಯಕ.‌‌ ಅವರ ಈ ಸಮಗ್ರ ಸಂಶೋಧನಾ ಸಾಹಿತವನ್ನು  ಆ‌ ನಿಟ್ಟಿನಲ್ಲೂ ಪ್ರಕಟ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳಲಿ ಎನ್ನುವ ಆಶಯ ನನ್ನದು.

ಪ್ರೊ; ಎಸ್.ಎಸ್.ಹಿರೇಮಠ ಅವರ ವೈಚಾರಿಕ ವೈಜ್ಞಾನಿಕ ಚಿಂತನೆಗಳನ್ನು ಮತ್ತೆ‌ ಅವರು ಪ್ರೀತಿಸಿದ ಕೆಲಸ‌ ಮಾಡಿದ ಜನರ ಬಳಿಕ ಕೊಂಡೊಯ್ಯುವ ಮಹತ್ತರ ಜವಾಬ್ದಾರಿಯನ್ನು ನಾವೆಲ್ಲ ಕೈಗೆತ್ತಿಕೊಳ್ಳೋಣ….

‍ಲೇಖಕರು Admin

23 May, 2026

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ

    ಉತ್ತಮವಾದ ನುಡಿ ಸ್ಮರಣೆ.
    ಹಿರೇಮಠ ಅವರ ಅನಾರೋಗ್ಯದ ಕಿನೆಯ ದಿನಗಳಲ್ಲಿ ಸಾರಸ್ವತ ಲೋಕ ಅವರನ್ನು ನಿರ್ಲಕ್ಷಿಸಿದ್ದು ವಿಷಾದಕರ ಸಂಗತಿ.
    ಪುಸ್ತಕ ಪ್ರಾಧಿಕಾರ ಹಿರೇಮಠ ಅವರಿಗೆ ನಿಜದ ಗೌರವ ಸಲ್ಲಿಸಿದೆ.

    Reply

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading