ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂಬತ್ತರ ಭೀಷ್ಮನಿಗೆ ಎಂಟ್ನೂರರ ಭೀಷ್ಮನ ನಮನ..

-ಅಶೋಕ ವರ್ದನ

ಪೂರ್ವ ರಂಗ

ಮಹೋಪಾಧ್ಯಾಯ ವಿವೇಕರೈಯವರನ್ನು ಶಿಷ್ಯದ್ವಯರಾದ ರಾಧಾಕೃಷ್ಣ ಕಲ್ಚಾರ್ ಮತ್ತು ಸುಬ್ರಾಯ ಸಂಪಾಜೆಯವರು ಈಚೆಗೆ ಕೇವಲ ಕುಶಲ ವಿಚಾರಣೆಗೆ ಭೇಟಿ ಮಾಡಿದ್ದರು. ಆಗ ರೈಯವರ ರೂಢಿಮಾತಿನಲ್ಲಿ ವರ್ಷ ಎಂಬತ್ತು ಕಳೆದದ್ದರ ಉಲ್ಲೇಖ ಬಂದಾಗ, ಶಿಷ್ಯರು ಸಮ್ಮಾನದ ಮಾತೆತ್ತಿದರಂತೆ. ಆದರೆ ಅಧಿಕಾರ ಮತ್ತು ಸಾಧನೆಗಳ ಹಿರಿತನದಲ್ಲಿ ಸಾಕಷ್ಟು ಸಮ್ಮಾನಗಳನ್ನು ಕಂಡ ರೈಗಳು ಸೂಚನೆಯನ್ನೇ ಹಿಂದುಮುಂದಾಗಿಸಿದರು. ವೇದಿಕೆಯನ್ನಷ್ಟೇ ಮಂಗಳೂರು ವಿವಿ ನಿಲಯದ ಯಕ್ಷಗಾನ ಕೇಂದ್ರ ಒದಗಿಸಿತು. ಅಂದರೆ, ಕಾರ್ಯಕ್ರಮದ ಪೀಠಿಕೆಯಾಗಿ ನಡೆದ ಕಿರು ಸಭಾ ಕಲಾಪದಲ್ಲಿ, ವಿವೇಕ ರೈಗಳು ಕಲಾನಮನ ಸಲ್ಲಿಸಲಿದ್ದ, ಶಿಷ್ಯ ಬಳಗವನ್ನೇ ವೇದಿಕೆಯ ಮೇಲೆ ಸಮ್ಮಾನಿಸಿದರು. [ಭಾಗವತರಾಗಿ ಸುಬ್ರಾಯ ಸಂಪಾಜೆ, ಭೀಷ್ಮನಾಗಿ ರಾಧಾಕೃಷ್ಣ ಕಲ್ಚಾರ್, ಕೃಷ್ಣನಾಗಿ ಗಣರಾಜ ಕುಂಬಳೆ ಮತ್ತು ಅರ್ಜುನನಾಗಿ ನಾಗವೇಣಿ ಮಂಚಿ – ಶಿಷ್ಯ ಚತುಷ್ಟಯರು. ಪೂರಕವಾಗಿ ಮದ್ದಳೆ ವಾದನದಲ್ಲಿ ಸಹಕರಿಸಿದ ಹಿರಿಯ ಮದ್ಲೆಗಾರ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಚಂಡೆಯ ಮೇಲೆ ಕೈಯಾಡಿಸಿದ ಮುರಳೀಧರ ಕಲ್ಲೂರಾಯರಿಗೂ ಸಮ್ಮಾನ ಸಂದಿತು].

ಹಿಂಬಾಲಿಸಿದಂತೆ ಆ ಬಳಗ, ಕಲಾನಮನದಲ್ಲಿ ಭೀಷ್ಮಾರ್ಜುನ ಕಾಳಗದ ಒಂದು ತುಣುಕನ್ನು ತಾಳಮದ್ದಳೆಯಾಗಿ ಪ್ರಸ್ತುತಪಡಿಸಿದರು. ಹೀಗೆ ಸಾಂಸ್ಥಿಕವಾಗಿ ಒಂದು ಬಳಗದ (ವಿದ್ಯಾರ್ಥಿಗಳೋ ವಿವಿ ನಿಲಯವೋ) ಅಭಿಮಾನ, ವೈಯಕ್ತಿಕ ಪುರಸ್ಕಾರದಲ್ಲಿ ಮುಗಿದು ಹೋಗದೆ, ಕಲಾನಮನದ ರೂಪು ಪಡೆದು ಲೋಕಸಮ್ಮಾನವೇ ಆಗಿತ್ತು.

ಕಲಾನಮನದ ಪೂರ್ವರಂಗದ ಕುರಿತು ಸ್ವತಃ ರಾಧಾಕೃಷ್ಣ ಕಲ್ಚಾರ್, ಆರೆಂಟು ದಿನ ಮೊದಲೇ ತನ್ನ ಫೇಸ್ ಬುಕ್ಕಿನ ಗೋಡೆಯಲ್ಲಿ ಬರೆದುಕೊಂಡು, ಆಮಂತ್ರಣ ಪತ್ರಿಕೆಯನ್ನೇ ಪ್ರಕಟಿಸಿದ್ದರು. ದಿನ ಮುಂಚಿತವಾಗಿ, ವಿವಿನಿಲಯದ ಕನ್ನಡ/ ಯಕ್ಷಗಾನ ವಿಭಾಗಗಳ ಪ್ರತಿನಿಧಿಯಾಗಿ, ಪ್ರಾಧ್ಯಾಪಕ ಧನಂಜಯ ಕುಂಬಳೆ, ನನಗೆ ಫೋನ್ ಕರೆಯನ್ನೂ ಮಾಡಿದ್ದರು. ಆದರೆ (ದೇವಕಿ ಸಹಿತ) ನಾವು ಅನ್ಯ ಜವಾಬ್ದಾರಿಯ ಒತ್ತಡ ಮುಗಿಸಿ, ಕಡೇ ಗಳಿಗೆಗೆನ್ನುವಂತೆ ಸಭಾಭವನವನ್ನು ತಲಪಿದ್ದೆವು. ಸರಿಯಾಗಿಯೇ ತುಂಬಿದ ಭವನದ ಲಭ್ಯ ಹಿಮ್ಮೂಲೆಗೇ ಹೊಂದಿಕೊಳ್ಳುವವರಿದ್ದೆವು. ಆದರೆ ಆಗ ಇನ್ನೊಂದೇ ಮೂಲೆಯಿಂದ ಸಾಕ್ಷಾತ್ ವಿವೇಕರೈ, ಒಂದು ಲೆಕ್ಕದಲ್ಲಿ ಆತಿಥೇಯರೇ ಬಂದು, ಕೈ ಹಿಡಿದು ಮುಂದಿನ ಸಾಲಿನ ಅವರ ಕುರ್ಚಿಗೇ ಕರೆದೊಯ್ದರು. ನಾವು ಮುಜುಗರದಿಂದ “ಛೆ, ನಿಮ್ಮ ಸ್ಥಾನ…” ಎನ್ನುತ್ತ ತಪ್ಪಿಸಿಕೊಳ್ಳಲು ನೋಡಿದ್ದೆವು. ಅವರು ಕಿರು ನಗೆ ಸೂಸಿ “ಇಲ್ಲಾ… ನಾನು ಬೇಗನೇ ಮೇಲೆ ಹೋಗ್ತೇನೆ..” ಎಂದಿದ್ದರು.

ಸಭಾ ಕಲಾಪ ಶುರುವಾಗುವಾಗ ಅವರ ಸ್ಥಾನ ವೇದಿಕೆಯ ಮೇಲೆ ಇದ್ದದ್ದು ನಿಜ. ಆದರೆ ಪ್ರಾಯದ ಹಿರಿತನದೊಡನೆ ತನ್ನ ‘ಇನ್ನೊಂದು ಲೋಕ’ದ ಸಾಮೀಪ್ಯವನ್ನು ಧ್ವನಿಸಿದ್ದು ನನಗರ್ಥವಾಗಿತ್ತು. ಹಾಗೆಂದು ಪ್ರಕಟವಾಗಿ “ಸರದಿ ಸಾಲಿನಲ್ಲಿ ನಾನು (೭೪ ವರ್ಷ) ನಿಮ್ಮ ಹಿಂದೇ ಇದ್ದೇನೆ” ಎನ್ನಲು ಆ ಕ್ಷಣದಲ್ಲಿ ಮಾತು ಬರಲಿಲ್ಲ! [ಧನಂಜಯರು ಪ್ರಾಸ್ತಾವಿಕದಲ್ಲಿ ರೈಗಳ ವ್ಯಕ್ತಿತ್ವದ ಕುರಿತು ಕೊಟ್ಟ ಮತ್ತು ಕಲ್ಚಾರ್ ಕೂಡಾ ಅನುಮೋದಿಸಿದ ನುಡಿಗಟ್ಟು – ಧ್ವನಿರಮ್ಯ, ಅನ್ವಯಿಸಿಕೊಳ್ಳಿ]

ಸಾಯಿಸುಮಾ ನಾವುಡ ತುಂಬ ಸ್ಪಷ್ಟ ಮತ್ತು ಚೊಕ್ಕವಾಗಿ ಸಭಾ ಕಲಾಪಗಳನ್ನು ನಿರೂಪಿಸಿದರು. ಪ್ರಾರ್ಥನೆಯ ಅಂಗವಾದ ಕುಮಾರವ್ಯಾಸ ಭಾರತದ ಗಮಕ, ಕೇಳುಗರಿಗೂ ಹೃದ್ಯವಾಗುವಂತೆ ಹರಿಸಿದ ಮೇಧಾ ನಾಯರ್ ಪಳ್ಳರಿಗೆ ಒಳ್ಳೆಯ ಭವಿಷ್ಯವಿದೆ. ಅದನ್ನು ದಾಖಲಿಸಿಕೊಳ್ಳುವಲ್ಲಿ ನಾನು ನಿಧಾನಿಯಾದ್ದಕ್ಕೆ ಕ್ಷಮೆಯಿರಲಿ. ಪ್ರಾಸ್ತಾವಿಕ ನುಡಿಗಿಳಿದ ಧನಂಜಯ ಕುಂಬಳೆಯವರು ಪಾತ್ರೌಚಿತ್ಯದ ಕಡಿವಾಣ ಬಿಗಿಹಿಡಿದಿದ್ದರು. ಇಲ್ಲವಾದರೆ ವಿವೇಕರೈಯವರ ಕುರಿತ ಅವರ ಗೌರವದ ಗಡಿಗೆ ಉಕ್ಕಿ, ನಿಯೋಜಿತ ನುಡಿನಮನಕಾರನಿಗೇ ಸಂಚಕಾರ ತರುವ ಅಪಾಯವಿತ್ತು. ಕಲಾನಮನದಲ್ಲಿ ಮುಖ್ಯ ಪಾತ್ರವೇ ಇದ್ದ ರಾಧಾಕೃಷ್ಣ ಕಲ್ಚಾರ್, ನುಡಿನಮನದಲ್ಲಿ ಒಟ್ಟು ಕಲಾಪ ರೂಪು ಪಡೆದ ಬಗೆಯನ್ನು ಸೂಕ್ಷ್ಮವಾಗಿ ಹೇಳಿದರು. ವಿದ್ಯಾರ್ಥಿ ದೆಸೆಯಲ್ಲಿ ಭಯ ಮೂಲವಾಗಿ ಕಂಡ ಗುರುವನ್ನು, ಸಂದ ಮೂರು ದಶಕಗಳಿಗೂ ಮಿಕ್ಕ ಕಾಣ್ಕೆಯಲ್ಲಿ (ಭಯರಹಿತ) ಗೌರವೈಕ ಮೂರ್ತಿಯಾಗಿ ಬದಲಿದ್ದನ್ನು ಚಂದಕ್ಕೆ ನಿರೂಪಿಸಿದರು.

ಈ ನೆಪದಲ್ಲೂ ವಿವೇಕ ರೈಗಳನ್ನು ಚಿಕ್ಕದಾಗಿಯಾದರೂ ಸಮ್ಮಾನಿಸಬೇಕೆಂದಿದ್ದವರ ‘ಹುನ್ನಾರ’ವನ್ನು ನಿರಸ್ತ್ರಗೊಳಿಸಿ, ರೈಗಳು ಒಪ್ಪಿ ನಡೆಯುತ್ತಿರುವ ವ್ಯವಸ್ಥೆಗೆ ಧನ್ಯತೆಯನ್ನಷ್ಟೇ ಹೇಳಿದರು. ಸಭಾಧ್ಯಕ್ಷರಾಗಿದ್ದ ಮಂಗಳೂರು ವಿವಿ ನಿಲಯದ ಕುಲಪತಿ ಪಿ.ಎಲ್ ಧರ್ಮ, ವಾಸ್ತವದಲ್ಲಿ ಇದೇ ವಿವಿ ನಿಲಯದ ವಿದ್ಯಾರ್ಥಿಯಾಗಿಯೇ (ಕಲ್ಚಾರ್ ಬಳಗದಿಂದ ಒಂದು ವರ್ಷ ಹಿರಿಯ) ಬೆಳೆದವರು. ಅವರ ವಿಷಯಕ ಆಯ್ಕೆ ಭಿನ್ನವಾಗಿತ್ತು (ರಾಜಕೀಯ ಶಾಸ್ತ್ರ). ಆದರೆ ಅಂದಿನಿಂದ ಇಂದಿನವರೆಗೂ ಅವರ ಮೇಲಾದ ವಿವೇಕ ರೈಗಳ ಪ್ರಭಾವವನ್ನು ನೆನಪಿಸಿಕೊಳ್ಳುವಾಗ ತತ್ಕಾಲೀನವಾಗಿ ಕುಲಪತಿ ಸ್ಥಾನವನ್ನೇ ಮರೆತಿದ್ದರು ಎಂದರೆ ತಪ್ಪಾಗದು.

‍ಲೇಖಕರು Admin

23 May, 2026

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. pbilimale

    ಡಾ. ವಿವೇಕ ರೈ ಅವರು ದೊಡ್ಡ ಆಲದ ಮರದ ಹಾಗೆ. ಆ ಬೃಹತ್‌ ಮರದ ಅಡಿಯಲ್ಲಿ ಅನೇಕರು ಕಲಿತರು. ಅವರೆಲ್ಲ ಒಟ್ಟು ಸೇರಿ ಗುರುಗಳನ್ನು ಅಭಿಮಾನ ಪೂರ್ವಕವಾಗಿ ಸ್ಮರಿಸಿಕೊಂಡದ್ದು ಸಂತೋಷದ ಸಂಗತಿ. ಕರಾವಳಿಯ ಹೊರಗಡೆಗೆ ಜಿ ಎನ್‌ ಮೋಹನ್‌ ಪ್ರೊ. ರೈ ಅವರ ಸದಾ ನಿಂತದ್ದು ಕೂಡಾ ವಿಶೇಷವೇ. ಈ ವರದಿಯೇ ಅದಕ್ಕೆ ಸಾಕ್ಷಿ.

    Reply

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading