ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಹೊಸ ಕವಿತೆ – ಆ ಮೋಹಕ ಚಿಟ್ಟೆ ನಗು…

ಬಿದಲೋಟಿ ರಂಗನಾಥ್

ಮಾತಾಡಲಿಲ್ಲ
ಮೌನ ಕಡಿದು
ಎದೆಗೂಡ ಬಯಕೆಗೆ ಬುತ್ತಿ ಕಟ್ಟಲಿಲ್ಲ
ಜೇನು ನೋಣದ ಹೆಜ್ಜೆ ಮುಂಗೈ ಚಿತ್ರವಾಗಿದೆ

ಇರುವೆಗೂಡಿನಲ್ಲೊಂದು ಇರುವೆ
ಮೋಜಣಿ ಮಾಡಿದೆ ನಾವು ಸುತ್ತಿದ ನೆಲವ
ಪೋಡಿ ಮಾಡುವ ಮೊದಲೇ
ಮಾತು ನಿಲ್ಲಿಸಿದರೇ ಹೇಗೆ ?
ಚಂದಿರನ ಬೆಳಕಲ್ಲಿ
ರಂಗೋಲಿ ಬಿಡುವುದಾದರೂ ಹೇಗೆ ?

ಅಸಲಿ ಮುಖದ ಗೆರೆಗಳು ಕಮರಿ
ಸ್ಯಾನೆ ವಸಂತಗಳೇ ಕಳೆದವು
ಮತ್ತೆ ಚಿಗುರಿಸಿ ಉಸಿರಾಡುತ್ತಿದ್ದ ಪ್ರೇಮವ
ಶವ ಸುಡುವ ಸೌದೆ ಮೇಲಿಟ್ಟು
ಮೌನದ ಕಡಲಿಗೆ ಶರಣಾದವಳ
ಎಲ್ಲಂತ ಹುಡುಕಲಿ…?
ಮಾನ ದುಬಾರಿ ನೆಲದ ಮೇಲೆ ನಡೆಯುತ್ತಿದೆ

ಕರುಳು ಕೊರೆವ ಚಳಿಯಲ್ಲಿ
ತಂಬಿಗೆ ನೀರು ಎರಚಿದ
ನಿನ್ನ ಆ ಮೋಹಕ ನಗು ಚಿಟ್ಟೆಯಾಗಿದೆ
ಹಿಡಿಯಲು ಹೋದಷ್ಟು ಹಾರುತ..

ಅಂದು ತುರುಬಿಗೆ ತೊಡಿಸಿದ ಗುಲಾಬಿಯು
ಇಂದು ಕವಿತೆಯಾಗಿದೆ
ಓದಿದಷ್ಟೂ ಮತ್ತೆ ಮತ್ತೆ ಹೊಸ ಹೊಳಹು
ಸೃಜಿಸುವ ಕಣ್ಣರಸದ ಭಾವ
ಕವಲೊಡೆಯುತ್ತಿದೆ

ಇಣುಕಿದ ಬಸ್ಸಿನ ಸರಳುಗಳ ಹಿಂದೆ
ಬದುಕಿನ ಚಕ್ರ ಓಡುತ್ತಿದೆ
ನಮ್ಮಿಬ್ಬರ ಚಿತ್ರ ಕಲಾವಿದನ ಕುಂಚದ
ಬಣ್ಣ ಬಣ್ಣದ ಗರಿಗಳು ಉದುರಿ
ಈ ನೆಲದ ಮಣ್ಣ ಕಚ್ಚಿವೆ

ಮತ್ತೆ ಕಲಾವಿದನ ಹೊಸ ಕುಂಚದಲಿ
ಬೆಳಗು ನೋಡುವ ಆಸೆ
ನಿನ್ನ ಮೌನಕ ಗೆಜ್ಜೆ ಕಟ್ಟಿದರೆ.!

‍ಲೇಖಕರು Admin

26 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading