ಮೂರು ತಲೆಮಾರು ವೈವಿಧ್ಯಮಯ ಅಭಿವ್ಯಕ್ತಿಗಳ ದೃಶ್ಯಲೋಕ…

ಕೆ ವಿ ಸುಬ್ರಹ್ಮಣ್ಯಂ

ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |
ಸಂದಿಹುದು ಚಿರನವತೆಯಶ್ವತ್ಥಮರಕೆ ||
ಎಂದೆಂದುಮಂತಿರುವುದೀ ವಿಶ್ವವೃಕ್ಷವದ |
ರೊಂದು ರೆಂಬೆಯೊ ನೀನು – ಮಂಕುತಿಮ್ಮ ||ಡಿ.ವಿ.ಜಿ. ಮಂಕುತಿಮ್ಮನ ಕಗ್ಗ, ಪು. ೨೫೨, ೧೯೪೩.

ಡಿ.ವಿ.ಜಿ. ಮಂಕುತಿಮ್ಮನ ಕಗ್ಗ, ಪು. ೨೫೨, ೧೯೪೩.

ನಮ್ಮ ಬದುಕೇ ಒಂದು ಕ್ಷಣಚಿತ್ರ';ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು’೧ ಅಲ್ಲವೆ! ನಮ್ಮ ಸಮಕಾಲೀನ, ಆತಂಕ, ಹಲವು ಪಲ್ಲಟಗಳ ಸಾಮಾಜಿಕ ಸಂದರ್ಭದಲ್ಲಿಯೂ ನೋಡಬೇಕೆಂಬ ಬಯಕೆಯ ಕಣ್ಣುಗಳಿಗೆ ಹಲವು ಆಹ್ಲಾದಕರ ದೃಶ್ಯಸಂಗತಿಗಳು ಕಾಣಿಸಿಕೊಳ್ಳಬಲ್ಲವು. ಪ್ರಸ್ತುತ ಪ್ರದರ್ಶನದ ಈ ಮೂರು ತಲೆಮಾರು ಅಂದರೆ ತಂದೆ, ಮಗ ಮತ್ತು ಮೊಮ್ಮಗನ ಚಿತ್ರಕಲೆಯ ಅಭಿವ್ಯಕ್ತಿಯ ವೈವಿಧ್ಯಮಯ ಸೃಷ್ಟಿಗಳು ಅನನ್ಯ ರೀತಿಯಲ್ಲಿ ನಮ್ಮ ನಡುವೆ ಕಾಣಿಸಿಕೊಂಡಿವೆ.೨ ಹುಬ್ಬಳ್ಳಿಯ ವಿ.ಎಸ್. ಹೂಗಾರ್, ಎಸ್.ವಿ. ಹೂಗಾರ್ ಮತ್ತು ಕೆ.ಎಸ್. ಹೂಗಾರ್‌ರವರುಗಳ ಕೃತಿಗಳಿವು. ಇದೊಂದು ಅಪೂರ್ವ ಸಂದರ್ಭ. ಏಕೆಂದರೆ ಇಂತಹ ಪ್ರದರ್ಶನಗಳು ನಮ್ಮಲ್ಲಿ ಈ ಮೊದಲು ನಡೆದ ಯಾವುದೇ ಉಲ್ಲೇಖಗಳು ಇದ್ದಂತೆ ಇಲ್ಲ. ಇಂತಹ ಪ್ರದರ್ಶನ ಸಂದರ್ಭಗಳನ್ನು ಸೃಷ್ಟಿಸುವ ತುರ್ತು ಸೃಷ್ಟಿಕಾರರಿಗೂ ಇರಬೇಕು. ಪ್ರಸ್ತುತ ಈ ಪ್ರದರ್ಶನವೊಂದು ತೋರಿಸುವ ಮತ್ತು ನೋಡುವ' ಪರಸ್ಪರದ ವಿಶಿಷ್ಟ ಸಂಭವ. ಇಂದಿನ ಈಪರಸ್ಪರ’ವು ನಮ್ಮ ಆದಿಮ ಪರಂಪರೆಯೇ ಆಗಿದ್ದು, ಇತಿಹಾಸ ಸಂದರ್ಭದಲ್ಲಿಯೂ ಇದ್ದಿತು. ತಂದೆ, ಮಗ ಮತ್ತು ಮೊಮ್ಮಗನ೩ ಚಿತ್ರಕಲಾಕೃತಿಗಳ ಆಳದ ಜೀವಧ್ವನಿಯಾಗಿ ಆದಿಮಪ್ರಜ್ಞೆಯ ಹೊಳಹುಗಳು ಆವರಿಸಿಕೊಂಡಿವೆ: ಜತೆಜತೆಗೇ ದೈವೀಕ ದೃಶ್ಯಧ್ಯಾನವೂ ಸೂಚ್ಯವಾಗಿ ಇದೆ.

ಮೊದಲ ತಲೆಮಾರಿನ ವಿಠಲಪ್ಪ ಹೂಗಾರರು ಸ್ವಾತಂತ್ರö್ಯಪೂರ್ವದಲ್ಲಿ ಹುಟ್ಟಿ, ಮಹಾತ್ಮ ಗಾಂಧೀ ಸಂದರ್ಭದ ಹಿನ್ನೆಲೆಯ ಬದುಕಿನ ಸೌಂದರ್ಯ ಅನುಭವಿಸಿದವರು. ಸುತ್ತಲಿನ ಎಲ್ಲದರಲ್ಲೂ ಸೌಂದರ್ಯವನ್ನು ಕಾಣುವ ವಿಶಿಷ್ಟ ಸೌಂದರ್ಯ ದೃಷ್ಟಿಯ ವಿಠಲಪ್ಪ ಹೂಗಾರರು ವಿಶಿಷ್ಟ ವಿಕೃತಿ ಸೌಂದರ್ಯ' ಪ್ರಜ್ಞೆಯನ್ನು ಅರಗಿಸಿಕೊಂಡವರು. ಬಹುತೇಕ ಅವರ ಎಲ್ಲ ರೇಖಾ ಚಿತ್ರಗಳು, ತಮ್ಮ ಇಳಿವಯಸ್ಸಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಅಭಿವ್ಯಕ್ತಿಸಿದ ರವೀಂದ್ರನಾಥ ಠಾಕೂರರ ಸೃಷ್ಟಿಶೀಲತೆಯನ್ನು ನೆನಪು ಮಾಡಬಲ್ಲವು. ಸುತ್ತಲಿನ ಅಲಂಕೃತ ವಸ್ತು ವೈವಿಧ್ಯದಲ್ಲಿ ಈ ಮೊದಲೇ ಸೂಚಿಸಿರುವ ಆದಿಮಸತ್ವಗಳ ಜತೆಜತೆಗೇ೪ ಜಾನಪದೀಯ ಸತ್ವಗಳು ಕಾಣಿಸಿಕೊಂಡಿವೆ. ವೃಕ್ಷದ ರೇಖಾಚಿತ್ರ ಕಲ್ಪನೆ ವಿಶಿಷ್ಟವಾಗಿದೆ.

ಹೊಲದ ಬಿತ್ತನೆಯ ಸಂದರ್ಭದ ರೇಖಾಚಿತ್ರವೂ ಬೃಹತ್ ಶಿಲಾಯುಗದ ನಮ್ಮ ಆದಿಮ ಚಿತ್ರಕಾರರ ಶಿಲಾಶ್ರಯ ಚಿತ್ರಗಳಲ್ಲಿ ಕೃಷಿಯ ಪರಿಕರ, ಎತ್ತುಗಳು ಇತ್ಯಾದಿಗಳನ್ನು ಸಚಿತ್ರವಾಗಿ ದಾಖಲಿಸಿಟ್ಟಿರುವುದನ್ನು ನೆನಪಿಸುತ್ತದೆ.೫ ಹಾಗೆಯೇ ವಿಠಲಪ್ಪ ಹೂಗಾರರು ವಸಾಹತು ಸಂದರ್ಭದ, ಪ್ರಭಾವಿತ ನಮ್ಮ ಜನರನ್ನು ಸಾಂಕೇತಿಕವಾಗಿ ರೇಖಿಸಿರುವುದು ಗಮನಾರ್ಹ. ಚಿತ್ರಿಸುವಿಕೆಯು ಹೇಗೆ ದೇಶ-ಕಾಲಗಳನ್ನು ಮೀರಿ ಎಲ್ಲರಲ್ಲಿಯೂ ಒಂದು ಮೂಲ ಪ್ರವೃತ್ತಿಯಾಗಿ ಕಾಣಿಸಿಕೊಳ್ಳುತ್ತದೆ ಎಂಬುದೊಂದು ಸೋಜಿಗವೇ ಸರಿ. ದೃಶ್ಯಕಲಾ ವ್ಯಾಕರಣದ ಹಂಗು ಇಲ್ಲದ ತಾನೇ ತಾನಾಗಿ ಅಭಿವ್ಯಕ್ತಗೊಂಡ ವಿಶ್ವಾತ್ಮಕ ರೂಪಕಲ್ಪನೆಗಳಾಗಿವೆ. ಇವುಗಳಲ್ಲಿ ಕೆಲವು ಚಿತ್ರಕೃತಿಗಳ ರೂಪಕಲ್ಪನೆ ಮತ್ತು ದೃಶ್ಯಸಂಯೋಜನೆಗಳು ಸುಂದರವಾಗಿವೆ.

ವಿಠಲಪ್ಪ ಹೂಗಾರರ ಮಗ. ಅಂದರೆ ಎರಡನೆಯ ತಲೆಮಾರಿನ ಎಸ್.ವಿ. ಹೂಗಾರ್ ಕಲೆಯ ವ್ಯಾಕರಣ ಕಲಿತವರು. ಆದರೆ ದೃಶ್ಯಕಲಾಸೃಷಿö್ಟಯ ಸೂಕ್ಷö್ಮಗಳನ್ನು ಅರಗಿಸಿಕೊಂಡಿರುವಂತೆ ಕಾಣುವ ವೈವಿಧ್ಯಮಯ ಗ್ರಹಿಕೆಗಳನ್ನು ತೀವ್ರತೆಯಿಂದ ಅಭಿವ್ಯಕ್ತಿಸಿದ್ದಾರೆ. ಅವರು ಇತ್ತೀಚೆಗೆ, ಕಲಿತ ವ್ಯಾಕರಣ ಮೀರಿ ಚಿತ್ರಿಸಲು ಪ್ರಯತ್ನಿಸುತ್ತಿರುವುದು ಗಮನಾರ್ಹ. ಹಾಗಾಗಿಯೇ ಸಮಕಾಲೀನವಾಗಿ ಗ್ರಹಿಸಿ ಚಿತ್ರಿಸಿರುವ ಹಲವು ಕೃತಿಗಳು ತೀವ್ರತೆಯಿಂದ ಕೂಡಿವೆ. ದೂರದರ್ಶನದಲ್ಲಿ ಲೈವ್‌ಯುದ್ಧಗಳನ್ನು ನೋಡುವಂತಹ ಇಂದಿನ ಸಂದರ್ಭದಲ್ಲಿ ಇಡೀ ವಿಶ್ವವು ಅನಗತ್ಯ ವಾದಗಳಲ್ಲಿ ತೊಡಗಿದೆ.

ಗಾಯಗೊಂಡ ಭೂಮಿಯ ಜತೆಜತೆಗೇ ಬಾಹ್ಯಾಕಾಶವೂ ಸೇರಿದಂತೆ ಎಲ್ಲವೂ ಕಲುಷಿತಗೊಂಡ ರಾಜಕಾರಣ; ಯುದ್ಧ-ಉದ್ಯಮ-ಅಭವೃದ್ಧಿಯ; ಉನ್ಮಾದ, ಉಸಿರುಗಟ್ಟಿಸುವ ವಾತಾವರಣ. ಬಂಡಾವಾಳಶಾಹಿ ಅಧಿಕಾರ ಭ್ರಷ್ಟತೆ, ಆಮೆ ವೇಗದ ಆರ್ಥಿಕತೆಗಳ ನಡುವೆ ಪಾರಂಪರಿಕ ಕೃಷಿಯು ಕುಸಿತ ಕಂಡರೂ ಆರ್ಥಿಕತೆಯು ಮಹಾಕುಸಿತದತ್ತ ಸಾಗುತ್ತಿದ್ದರೂ ಷೇರುಪೇಟೆಗಳಲ್ಲಿ ದಾಖಲೆಯ ಖರೀದಿ ಉತ್ಸಾಹದ ಗೂಳಿಯು ಮೇರೆ ಮೀರಿದ ಓಟದ ಒಗಟಿನಂತಹ ರಾಜಕಾರಣ. ೬ ಬುದ್ಧ, ಬಸವ, ಗಾಂಧಿಯವರುಗಳ ಜಾತ್ಯಾತೀತ ಸತ್ವಗಳು ಮುಳುಗುತ್ತಿರುವ ಸಮಕಾಲೀನ ಸಾಮಾಜಿಕ ಸಂದರ್ಭ. ಹಾಗೆಯೇ ನವದೆಹಲಿಯ ಸೈಕಲ್ ರಿಕ್ಷಾವಾಲ ಒಬ್ಬರ ಭಾವಚಿತ್ರಗಳು ಭಾವಪೂರ್ಣವಾಗಿರುವಂತೆಯೇ ವಿಕೃತಿ ಸೌಂದರ್ಯದ ತಾತ್ವಿಕತೆಯನ್ನು ಅರಗಿಸಿಕೊಂಡಿವೆ. ರೈತರ ಆತಂಕಗಳೂ ಸಂವೇದನಾಶೀಲವಾಗಿ ಕಾಣಿಸಿಕೊಂಡಿವೆ. ಇವೆಲ್ಲವುಗಳ ನಡುವೆ ಈ ಬರಹದ ಪ್ರಾರಂಭದಲ್ಲಿಯೇ ಹೇಳಿರುವಂತೆ ಆದಿಮ ಪ್ರಜ್ಞೆಯ ಗೂಳಿಗಳು ಎಸ್.ವಿ. ಹೂಗಾರರಿಂದ ಮೂಡಿಬಂದಿವೆ.

ಈ ಕೆಲವು ರೇಖಾ ಮತ್ತು ವರ್ಣಚಿತ್ರಗಳಲ್ಲಿ ಆ ಪ್ರಜ್ಞೆಯ ವೈಭವವು ಅನುಭವಕ್ಕೆ ಬರುತ್ತದೆ. ವಿಠಲಪ್ಪ ಹೂಗಾರರ ಮೊಮ್ಮಗ, ಅಂದರೆ ಮೂರನೆಯ ತಲೆಮಾರಿನ ಕೆ.ಎಸ್. ಹೂಗಾರ್ ೧೩ ವರ್ಷಗಳ ಹುಡುಗ. ಎಲ್ಲರೂ ಊಹಿಸುವಂತೆಯೇ ಸಹಜವಾಗಿ ಬಾಲ್ಯದ ಮುಗ್ಧತೆಯ ಹಂತ ದಾಟಿ ಸುತ್ತಲಿನ ಪರಿಸರ ಮತ್ತು ಸಮಾಜದತ್ತ ಕೌತುಕದ ಕಣ್ಣು ಹಾಯಿಸುವ ತವಕದ ಹಂತಕ್ಕೆ ಕಾಲಿಟ್ಟವ. ಆದರೆ ಈ ಕೌತುಕದ ನೋಟಗಳಲ್ಲಿ ಪ್ರೌಢ-ಮುಗ್ಧತೆಯ ಜತೆಜತೆಗೇ ವಿಭಿನ್ನ ದೃಶ್ಯ ಲೋಕದ ಗ್ರಹಿಕೆಯಿದೆ. ಆದರೂ ಆದಿಮ ಪ್ರಜ್ಞೆಯ ಹಾಜರಿಯಾಗಿ ಗೂಳಿ, ಜಿಂಕೆಗಳ ರೇಖಾ ಗ್ರಹಿಕೆಗಳು ಇವೆ! ಆದಿಮ ಸತ್ವವೂ ಇವುಗಳಲ್ಲಿದೆ. ಆದರೆ ಬಹುಮುಖ್ಯವಾಗಿ ಆತನ ರೇಖಾಚಿತ್ರಗಳಲ್ಲಿ ವಾಸ್ತುಶಿಲ್ಪೀಯ ರೂಪಗಳು ಮಹತ್ವಾಕಾಂಕ್ಷೆಯಿಂದ ಕಾಣಿಸಿಕೊಂಡಿವೆ.

ಪಾಲ್‌ಕ್ಲೇನಂತಹ ಹಲವು ಪಕ್ವ ಕಲಾವಿದರ ಸೃಷಿö್ಟಸೀಲತೆಯಲ್ಲಿ ಮಕ್ಕಳ ಮುಗ್ಧತೆಯು ತನ್ನ ಹಾಜರಿಯನ್ನು ದಾಖಲಿಸಿಕೊಂಡುಸರಳ ಮತ್ತು ಸುಂದರ’ ರೂಪಗಳ ಆಟವು ಮೂಡಿಬಂದಿದೆಯಲ್ಲವೆ? ಪ್ರಸ್ತುತ ಕೆ.ಎಸ್. ಹೂಗಾರ್ ರೇಖಿಸಿದ ಇತ್ತೀಚಿನ ರೇಖಾಚಿತ್ರಗಳಲ್ಲಿ ಹುಬ್ಬಳ್ಳಿ, ಬೆಂಗಳೂರುಗಳ ಬೃಹತ್ ಮತ್ತು ಕೆಲವೊಮ್ಮೆ ಗಗನ ಚುಂಬಿಸುವ ಕಟ್ಟಡಗಳು ಪ್ರಭಾವಬೀರಿರುವಂತಿವೆ. ಹಾಗೆಯೇ ದೃಶ್ಯ ಮಾಧ್ಯಮಗಳಲ್ಲಿ ಕಾಣುವ ವಿಶ್ವದ ವಿಶಿಷ್ಟ ವಾಸ್ತುಶಿಲ್ಪಗಳೂ ಪರೋಕ್ಷವಾಗಿ ಕಾಡಿರುವಂತೆಯೂ ಈ ರೇಖಾಚಿತ್ರಗಳು ಮೂಡಿಬಂದಿವೆ. ವಿಶೇಷವೆಂದರೆ ಈ ಪುಟ್ಟ ಚಿತ್ರಗಳಲ್ಲಿ ವಿಶ್ವಾತ್ಮಕ (Universal) ಮತ್ತು ಮುಖ್ಯವಾಗಿ ಬೃಹದಾಕಾರದ ವಾಸ್ತುಶಿಲ್ಪ ರೂಪಗಳಿಗೆ ಮೂಲವಾಗಬಲ್ಲ ನೋಟಗಳು ಇವೆ; ಬೃಹತ್ ವೃಕ್ಷಕ್ಕೆ ಮೂಲವಾಗುವ ಪುಟ್ಟ ಪುಟ್ಟ ಬೀಜಗಳಂತೆ. ಈ ಗಗನಚುಂಬಿ ವಾಸ್ತುಶಿಲ್ಪೀಯ ರೇಖಾ ಕಲ್ಪನೆಗಳು ವಿಠಲಪ್ಪ ಹೂಗಾರರ ಮೊಮ್ಮಗನ ನಾಳೆಗಳ ಬಗ್ಗೆ ರೇಖಿಸಿಕೊಂಡಂತಿವೆ. ಇದೊಂದು ನಮ್ಮ ಸಂದರ್ಭದ ಮೂರು ತಲೆಮಾರುಗಳ ಅನನ್ಯ ಪ್ರದರ್ಶನ.

೨೦೨೦ – ಕೆ.ವಿ. ಸುಬ್ರಹ್ಮಣ್ಯಂ
ಬೆಂಗಳೂರು ದೃಶ್ಯಕಲಾ ಇತಿಹಾಸಕಾರರು

ಅಡಿಟಿಪ್ಪಣಿಗಳು:
೧. ನೋಡಿ: ಡಿ.ವಿ.ಜಿ., ಮಂಕುತಿಮ್ಮನ ಕಗ್ಗ', ಪುಟ ೧೨೧, ಪದ್ಯ ೫೨೨, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ೨೦೧೭.

೨. ಕಲಬುರ್ಗಿ ಜಿಲ್ಲೆಯ (ಕಣಗನಹಳ್ಳಿ) ಸನ್ನತಿಯ ಮಹಾಸ್ತೂಪದ ಶಾತವಾಹನ ಶಾತಕರ್ಣಿಯ ಸಂದರ್ಭವನ್ನು ಕ್ರಿ.ಶ. ೨-೩ನೆಯ ಶತಮಾನವೆಂದು ಪ್ರಾಚ್ಯ ಸಂಶೋಧಕರು ದಾಖಲಿಸಿದ್ದಾರೆ. ಅಲ್ಲಿ ಮೌರ್ಯರ ಅಶೋಕನ ಶಿಲಾಶಾಸನ ದೋರೆತ ನಂತರವಂತೂ ಅದರ ಕಾಲವು ಕ್ರಿ.ಪೂ. ೩ನೆಯ ಶತಮಾನಕ್ಕೆ ಜಿಗಿದಿದೆ! ಅಲ್ಲಿಯ ನೂರಾರು ಶಿಲ್ಪಗಳಲ್ಲಿ ಒಂದರಲ್ಲಿ ಮಹಾಪ್ರಬೋಧಕ ಸಿಖಿನ್ ಶಿಲ್ಪವನ್ನುವಾಕಾಟಿಚದ ವಿಶಾಖನು ತನ್ನ ಮಗನೊಂದಿಗೆ ಶಿಲ್ಪಿ ನಾಗಬೋಧಿ, ಮಾಧವನ ಮಗನು, ಸ್ವಾಮಿನಾಗನ ಮೊಮ್ಮಗನು, ವಾಸುದೇವನ ಮರಿಮಗನು ಕೆತ್ತಿದ್ದಾನೆ’ ಎಂದಿದೆ. ಹಾಗೆಯೇ ಹಲವಾರು ಶಿಲ್ಪಗಳ ಬರಹದಲ್ಲಿ ಸ್ವಾಮಿನಾಗನ ಮೊಮ್ಮಗನು, ವಾಸುದೇವನ ಮರಿಮಗನು ಕೆತ್ತಿದ್ದಾನೆ. ಅಂದರೆ, ತಂದೆ ಮಕ್ಕಳು, ಅವರ ಮಕ್ಕಳು ಶಿಲ್ಪಸೃಷ್ಟಿಯಲ್ಲಿ ತೊಡಗಿದ್ದ ಪರಂಪರೆಯೂ ನಮ್ಮಲ್ಲಿದ್ದಿತು.

೩. ಮೂರು ತಲೆಮಾರು' ಎಂಬುದೊಂದು ಸಂಗತಿಯಾಗಿ ನಮ್ಮಲ್ಲಿ ನೋಡಲ್ಪಟ್ಟಿದೆ. ಕನ್ನಡದ ಚಲನಚಿತ್ರರಂಗದ ವರನಟ ರಾಜ್‌ಕುಮಾರ್‌ರವರ ಅಭಿನಯದ ಹಸಿವಿನ ವೈವಿಧ್ಯತೆಯಲ್ಲಿ ತಂದೆ ಮಗ ಮೊಮ್ಮಗನ ಪಾತ್ರಗಳ ಪೋಷಣೆಯೂಕುಲಗೌರವ’ ಚಿತ್ರದಲ್ಲಿದೆ. (ನನ್ನ ನೆನಪಿಗೆ ಸ್ಪಷ್ಟತೆ ನೀಡಿದವರು ರಘುನಾಥ ಚ.ಹ.)

೪. ಕರ್ನಾಟಕ ಅಥವಾ ಭಾರತದ ಬಹುತೇಕ ಇತಿಹಾಸಪೂರ್ವ ಆದಿಮ ಶಿಲಾಶ್ರಯಗಳಲ್ಲಿ ಇಂದಿಗೂ ನೋಡಬಹುದಾದ ರೀತಿಯಲ್ಲಿ ಪ್ರಾಣಿಗಳ ರೇಖಾಚಿತ್ರ ಗ್ರಹಿಕೆಗಳು ಇವೆ. ಹಾಗೆ ನೋಡಿದರೆ ಈ ಪ್ರದರ್ಶನದ ತಂದೆ ಮಗ ಮತ್ತು ಮೊಮ್ಮಗನ ಅಭಿವ್ಯಕ್ತಿಗಳಲ್ಲಿ ಪ್ರಾಣಿಗಳು ಚಿತ್ರಿಸಿಕೊಂಡಿರುವ ರೀತಿಗಳಲ್ಲಿ ವಿಶಿಷ್ಟ ಆದಿಮತೆ ಇದೆ.

೫. ಹಂಪೆಯ ಮಸಲಯ್ಯನ ಗುಡ್ಡದ ಬೃಹತ್ ಶಿಲಾಯುಗ ಸಂದರ್ಭದ ಕೃಷಿಯ ಪರಿಕರಗಳ ರೇಖಾಚಿತ್ರಗಳು ಇಲ್ಲಿ ನೆನಪಾಗುತ್ತವೆ.

೬. ಹೆಚ್ಚಿನ ವಿವರಗಳಿಗಾಗಿ ಓದಿ: ದಿನವೂ ಹೊಸ ದಾಖಲೆ'.ಒಂದು ವೇಳೆ ನೀವು ನನಗಾಗಿ ಈ ಒಗಟು ಬಿಡಿಸಿದರೆ ನಾನು ಅದನ್ನು ಅರ್ಥೈಸಿಕೊಳ್ಳಲು ಅಮೆರಿಕದಿಂದ ಇಲ್ಲಿಗೆ ಹಾರಿ ಬರುವೆ’ ಎಂದು ಹೇಳಿದ ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲೆಗಾರ ಅರವಿಂದ ಸುಬ್ರಹಮಣಿಯನ್‌ಗೆ ಕಾಡಿದ ಒಗಟು.

ಪ್ರಜಾವಾಣಿ, ವಾಣಿಜ್ಯ ಪ್ರಭ, ಪುಟ ೮, ಡಿಸೆಂಬರ್ ೨೦, ೨೦೧೯.

‍ಲೇಖಕರು Admin

June 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: