ನಿವೇದಿತಾ ಎಚ್‌ ನೋಡಿದ ʻಲೀಲಾವತಿʼ

ನಿವೇದಿತಾ ಎಚ್‌

ನಾಟಕಗಳು ʻಮನರಂಜನೆʼ ಎಂಬ ತಮ್ಮ ಆರ್ಷೇಯ ಸೀಮಿತ ಗುರಿಯಿಂದ ದೂರ ಸರಿದು ಬಹಳ ಕಾಲವಾಗಿದೆ. ಹೊಸ ಅಲೆಗಳು, ಹೊಸ ನಿರ್ದೇಶಕರು, ಹೊಸ ಪರಿಕಲ್ಪನೆಗಳ ಅಲ್ಲದೆ, ಹೊಸ ಹೊಸ ಪ್ರೇಕ್ಷಕರು ನಾಟಕ ರಂಗವನ್ನು ಸಕ್ರಿಯವಾಗಿ, ಆವಿಷ್ಕಾರಗಳ ತಾಣವನ್ನಾಗಿಸಿವೆ. ಇತ್ತೀಚೆಗೆ ಹಳೆಯ ಕಾವ್ಯಗಳ ಭಾಗಗಳು, ಕಾದಂಬರಿಗಳು, ಸಂಸ್ಕೃತ ನಾಟಕಗಳ ಭಾಗಗಳನ್ನು ರಂಗದ ಮೇಲೆ ವಿನೂತನವಾಗಿ ತಂದು, ಅವನ್ನು ಪ್ರೇಕ್ಷಕರಿಗೆ ಹತ್ತಿರವಾಗಿಸುತ್ತಿರುವುದಲ್ಲದೆ, ಹಳೆಯ ಅನರ್ಘ್ಯ ಕೃತಿಗಳು ಮತ್ತೊಮ್ಮೆ ನೆನಪಿನ ಬುತ್ತಿಯಿಂದ ಹೊರ ಬರುತ್ತಿವೆ. ಅಭಿನಂದನಾರ್ಹವಾದ ಕೆಲಸವಿದು. 

ಇತಿಹಾಸದತ್ತ ಹೊಸ ಬೆಳಕು ಬೀರುವ ಮತ್ತೊಂದು ಹೊಸ ಪ್ರಕಾರ ಈಗೀಗ ಹೆಚ್ಚಾಗುತ್ತಿದೆ. ಇತಿಹಾಸ ಹೇಳದ, ಮುಚ್ಚಿಟ್ಟ, ಮರೆಮಾಚಿರುವ ಸತ್ಯಗಳನ್ನು, ಕಾಲದ ಗರ್ಭದಿಂದ ಹೊರಗೆಳೆದು ತಂದು, ಅದಕ್ಕಿಷ್ಟು ಕಲ್ಪನೆಯ ಕುಲಾವಿ ತೊಡಿಸಿ, ಪ್ರೇಕ್ಷಕರ ಮುಂದೆ ಸಾದರ ಪಡಿಸಿ ಅವರನ್ನು ಚಿಂತನೆಗೆ ಹಚ್ಚುವ ಕೆಲಸವನ್ನು ಈ ಹೊಸ ಪ್ರಕಾರ ಮಾಡುತ್ತಿದೆ. 

ಅಂತಹುದೇ ಒಂದು ಪ್ರಯೋಗ, ಜೂನ್‌ ೨೫ರಂದು ಮೈಸೂರಿನ ಕಲಾಸುರುಚಿ ಪ್ರಸ್ತುತ ಪಡಿಸಿದ ನಾಟಕ, ʻಲೀಲಾವತಿʼ. ಪ್ರೊ.ಎಚ್‌.ಎಸ್.ಉಮೇಶ್‌ ನಿರ್ದೇಶಿಸಿರುವ ʻಲೀಲಾವತಿʼ ನಾಟಕದ ರಚನೆ ಶಶಿಧರ ಡೋಂಗ್ರೆ ಅವರದು. ಭಾರತ ಕಂಡ ಶ್ರೇಷ್ಠ ಗಣಿತಜ್ಞ ಎರಡನೆಯ ಭಾಸ್ಕರಾಚಾರ್ಯನ ಜೀವನದ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ರಚಿತವಾಗಿರುವ ನಾಟಕ ವಿಶಿಷ್ಟ ಶೈಲಿಯಲ್ಲಿದೆ. ಎರಡನೇ ಭಾಸ್ಕರಾಚಾರ್ಯ ಗಣಿತ ಕ್ಷೇತ್ರಕ್ಕೆ ಎಂತಹ ಮಹತ್ತರ ಕೊಡುಗೆ ನೀಡಿದ್ದಾನೆ, ಅವನ ಗ್ರಂಥಗಳು ಎಷ್ಟು ಪ್ರಮುಖವೆಂಬ ಅಂಶಗಳನ್ನು ನಾಟಕಕಾರರು ಸವಿಸ್ತಾರವಾಗಿಯೇ ತಿಳಿಸಿಕೊಡುತ್ತಾರೆ.

ವರ್ತಮಾನದ ಪಾತ್ರಗಳ ಮೂಲಕ ಭೂತಕಾಲದ ಘಟನಾವಳಿಗಳನ್ನು ನಿರೂಪಿಸುತ್ತಾರಾದರೂ, ಇತಿಹಾಸದಿಂದ ಪಾತ್ರಗಳೇ ಎದ್ದುಬರುವ ಪರಿಕಲ್ಪನೆ ಚಕಿತಗೊಳಿಸುತ್ತದೆ. ಲೀಲಾವತಿಯ ಪರ್ಷಿಯನ್‌ ಮತ್ತು ಇಂಗ್ಲಿಷ್‌ ಅನುವಾದಕರಾದ ಫೈಜೀ ಮತ್ತು ಕೋಲ್ ಬ್ರೂಕ್   ಭಾಸ್ಕರಾಚಾರ್ಯರೊಂದಿಗೆ ತಮ್ಮ ಅನುವಾದದ ಅನುಭವದ ಕುರಿತಾಗಿ ನಡೆಸುವ ಸಂಭಾಷಣೆ, ನಮ್ಮ ಕಲ್ಪನೆ ಕುತೂಹಲಗಳನ್ನು ರಂಗದಮೇಲೆ ತಂದಂತಿದೆ. ನಾಟಕವನ್ನು ಮರೆತುಹೋದ ವಿಷಯಗಳನ್ನು ನೆನಪಿಸಲೇ ಬರೆದಂತಿದೆ ಎನಿಸಿದರೂ, ನವಿರಾದ ಹಾಸ್ಯ ನಾಟಕವನ್ನು ಕೇವಲ ಮಾಹಿತಿಪೂರ್ಣ ಎನಿಸಲು ಬಿಡುವುದಿಲ್ಲ.

ಲೀಲಾವತಿಯಲ್ಲಿ ಹೇಳಲಾಗಿರುವ ಸೂತ್ರಗಳನ್ನು, ರಸಿಕ ನಲ್ಲನಲ್ಲೆಯರ ಪಾತ್ರಗಳ ಮೂಲಕ ರಂಗದ ಮೇಲೆ ತಂದಿರುವುದು ನಾಟಕಕ್ಕೆ ಒಂದು ರಸಮಯ ಪ್ರಭಾವಳಿಯನ್ನು ಸೃಷ್ಟಿಸಿದೆ.‌ ಮಧ್ಯೆ ಮಧ್ಯೆ ಸಾಮಾಜಿಕ ಅಂಕುಡೊಂಕುಗಳನ್ನು ಎತ್ತಿ ಆಡುವುದನ್ನೂ ಮರೆತಿಲ್ಲ. ಎಲ್ಲ ಪಾತ್ರಧಾರಿಗಳೂ ಲವಲವಿಕೆಯಿಂದ ಸಮರ್ಪಕವಾಗಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಭಾಸ್ಕರಾಚಾರ್ಯನ ಪಾತ್ರಕ್ಕೆ ಇನ್ನಷ್ಟು ಗಾಂಭಿರ್ಯ ತುಂಬಿದ್ದರೆ ಒಳ್ಳೆಯದಿತ್ತೇನೋ ಎನಿಸಿದರೂ, ಸಾವಿರ ವರ್ಷಗಳ ನಂತರ ಆಧುನಿಕ ಜಗತ್ತಿಗೆ ಬಂದಿರುವವನ ಪಾತ್ರ ಹಾಗೆಯೇ ವರ್ತಿಸುತ್ತದೇನೋ ಎನಿಸಿಬಿಡುತ್ತದೆ. 

ಮೊದಲ ಪ್ರಯೋಗದಲ್ಲಿ ಧ್ವನಿ ಮತ್ತು ಕೆಲ ಸಣ್ಣ ಪುಟ್ಟ ವ್ಯತ್ಯಾಸಗಳು ಆಗಲೇ ಬೇಕು, ಮುಂದಿನ ಪ್ರಯೋಗದಲ್ಲಿ ಪರಿಪೂರ್ಣತೆ ಸಾಧಿಸಲು ಅವೇ ಮೆಟ್ಟಿಲುಗಳು! 

ಇಡೀ ನಾಟಕ ನೋಡುಗರಲ್ಲಿ ಹಲವಾರು ವಿಚಾರಗಳನ್ನು ಉದ್ದೀಪಿಸಿ, ಮತ್ತೊಮ್ಮೆ ಇತಿಹಾಸದ ಕಡೆಗೆ ತಿರುಗಿ, ಕನ್ನಡಕ ಹಾಕಿ ಸತ್ಯ ಮತ್ತು ತಥ್ಯಗಳನ್ನು ವಿಶ್ಲೇಷಿಸುವ ಜಿಜ್ಞಾಸೆ ಮೂಡಿಸುತ್ತದೆ.   

‍ಲೇಖಕರು Admin

June 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: