ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಕವಿತೆ- ಕೊನೆಯಿಲ್ಲದ ಅಜ್ಜಿಯ ಹಾದಿ…

ಬಿದಲೋಟಿ ರಂಗನಾಥ್

ಅಜ್ಜಿ ಬೀದಿಗೆ ಬಿದ್ದಿದ್ದಾಳೆ
ಅವಳು ತಿರುಗಿದ ರೈಲ್ವೆ ನಿಲ್ದಾಣ
ಬಸ್ ನಿಲ್ಧಾಣ
ನಡೆದ ಪುಟ್ಬಾತುಗಳ ಮೇಲೆ
ಅವಳ ನಿಟ್ಟುಸಿರು ಹೆಪ್ಪುಗಟ್ಟಿದೆ

ಎಲ್ಲಿ ಹೋದರಲ್ಲಿ
ಅವರಿರವರು ಕೊಡುವ ಬಿಸ್ಕೇಟು ಬಾಳೆ ಹಣ್ಣು
ಪುಡಿಕಾಸು ತಿಂದು ಮಿಗಿಲಿದ ಹಿಡಿ ಅನ್ನ
ಮಡಿಲು ತುಂಬಿಕೊಂಡಿದ್ದಾಳೆ
ಯಾರು ಕೇಳಿದರು ಬಿಲ್ಕುಲ್ ಕೊಡುವುದಿಲ್ಲ
ಅವಳ ಬ್ರಾಂತು ಅದು ತನ್ನ ಮೊಮ್ಮಕ್ಕಳಿಗೆ ಮೀಸಲು

ಸುಕ್ಕುಗಟ್ಟಿದ ಮುಖ ಮೈ
ತೊಗಲು ಹೊತ್ತ ಜೀವ
ನೂರು ವರುಷದ ಆಸುಪಾಸಿನಲ್ಲಿದೆ
ಕಣ್ಣು ಬದುಕಿನ ಅನುಭವ ಹೊತ್ತು ನಿಂತಿದೆ
ಅದು ಊರುಗೋಲು ಇಲ್ಲದೆ ನಡೆಯುತ್ತಿದೆ

ಮಾಗಿದ ಮುಖದಲಿ ದಟೈಸಿದ
ಮುಗ್ಧ ಮಗುವಿನ ನಗು
ನನ್ನವರು ಯಾರು ?
ನನ್ನವರಲ್ಲದವರು ಯಾರು ?
ಗೊತ್ತಿಲ್ಲದ ಅಜ್ಜಿ
ಎಲ್ಲರಲ್ಲೂ ಮಗ ಮೊಮ್ಮಕ್ಕಳನ್ನು ಕಾಣುತ್ತಾಳೆ ಬೊಗಸೆ ತುಂಬಿದ ಕೆನ್ನೆಗೆ ಮುತ್ತಿಡುತ್ತಾಳೆ

ನಿದ್ದೆ ಬರದ ಆ ಅಜ್ಜಿ
ರಾತ್ರಿ ಅಲ್ಲೆಲ್ಲೋ ಬೀದಿಯಲಿ ಕೂತು
ನಕ್ಷತ್ರಗಳನ್ನು ಎಣಿಸುತ್ತಾ
ಒಂದೊಂದೆ ಬಿಡಿಸಿ
ಕಣ್ಣಿಗೆ ತುಂಬಿಕೊಂಡು ನಡೆಯುತ್ತಾಳೆ
ಕೊನೆಯಿಲ್ಲದ ಅವಳ ದಾರಿ ತೆರೆದುಕೊಳ್ಳುತ್ತಲೇ ಇದೆ..

ಮಡಿಲು ತುಂಬಿದ ಹಿಡಿ ಅನ್ನ
ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ
ತನ್ನ ತಾನೇ ಹೊರಲಾರದ ಅಜ್ಜಿ
ಮಡಿಲು ತುಂಬಿದ ತೂಕವ ಹೊರುತ್ತಿದೆ

ಅಲ್ಲೆಲ್ಲೋ ಸನಿಹದಲ್ಲಿ
ಸ್ಮಶಾನದ ಸಮಾಧಿಯೊಂದರ
ತಲೆಯಕಡೆ ಇಟ್ಟ ಕಲ್ಲು
ನಗುವ ಸದ್ದು ಕೇಳುತ್ತಿದೆ !
ಅಜ್ಜಿ ನಡೆಯುತ್ತಲೇ ಇದ್ದಾಳೆ.

‍ಲೇಖಕರು Admin

28 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading