ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾ ಮಳೆಯೇ…

 ಸಹನಾ ಹೆಗಡೆ     

ಬೀಳು ಬಾ ಮಳೆಯೇ

ಇಳೆ ಕೊಚ್ಚಿ ಹೋಗುವ ಹಾಗೆ

ನೆಟ್ಟಗಳ ಉಟ್ಟ ಬಟ್ಟೆ

ಉಳಿಸಿದ ಹಣ ಉರುಳಿದ ಹೆಣ

ಕೆತ್ತಿಸಿದ ಹೆಸರು ಮೆತ್ತಿರುವ ಕೆಸರು

ನುಚ್ಚು ನೂರಾಗುವ ಹಾಗೆ

ಹಚ್ಚಿಕೊಂಡಿದುದನೆಲ್ಲ ಮಚ್ಚಿಂದ

ಕೊಚ್ಚಿ ತುಂಡರಿಸುವ ಹಾಗೆ

ಬಚ್ಚಿಟ್ಟಿದುದನೆಲ್ಲ ಬಿಚ್ಚಿ ಬಯಲಾಗಿಸಲು

ಬಾ ಮಳೆಯೇ ಕಳೆ

-ದುಬಿಡು ಕಳೆಯ ಕಳೆ

ಸುರುವಿ ಸುರಲೋಕದ ಧಾರೆ

ಮರೆವು ಸರಿಸಲಾಗದ ತೆರೆಯ ನೀನೆಳೆ

-ದುಬಿಡು ಮಳೆಯೇ

ಎಳೆದೆಳೆದು ಬಾಳ ಪರದೆ

ಬಳಲಿ ಬೆಂಡಾಗಿ

ಕಾದಿರುವುದು ಜೀವ ತೇಲಲು

ತೇಲುಗಣ್ಣಾಗಿ ಮಾಗಿ ಹಣ್ಣಾಗಿ

ಬಿದ್ದ ಬೀಜ ಇದ್ದಲ್ಲೇ ಇದ್ದು

ಗೆದ್ದಲು ಹಿಡಿಯುವ ಮುನ್ನ

ಬಿದ್ದಲ್ಲೇ ಬಿದ್ದು ಮಣ್ಣಾಗುವ ಮೊದಲು

ಬಾ ಮಳೆಯೇ

ನೆಚ್ಚಿಕೊಂಡಿದ್ದೆಲ್ಲ ಮೆಚ್ಚಿಕೆಯದೇನಲ್ಲ

ಮುಚ್ಚುಮರೆಯಿಲ್ಲದ ಬದುಕು

ಏಳು ಬೀಳಿಲ್ಲ ಜಾಳು

ಜೊಳ್ಳಿಲ್ಲ ಬಾ ಮಳೆಯೇ

ಹೊಗಳಿ ಹೊರಿಸಿದುದನೆಲ್ಲ

ತೆಗಳಿ ತಿರಿದು ತುಳಿದುದನೆಲ್ಲ

ಉಗುಳಿ ಬೊಗಳಿ ಉಮ್ಮಳಿಸಿದುದನೆಲ್ಲ

ಅಳೆದು ಮತ್ತೆ ಕೈಯೊಳಗಿಡಲು ಬಾ

ಮಳೆಯೇ

ಮನೆಮಾರು ಗಿಡಗಂಟಿ ಪಶು

ಪಕ್ಷಿ ಜೀವಗಳ ಸೆಳೆದು

ಕೊಂಡೊಯ್ದರೇನು ಬಂತೆ

ಎದೆಯಾಳಕಿಳಿದು ಹನಿ

-ಯೊಂದು ಒಸರಿದರೆ

ಚಿಮ್ಮಲಾರದೆ ಮತ್ತೆ ಭಾವದೊರತೆ

ಇಲ್ಲವಾಗಿಸಿ ಕೊರತೆ

ಕೊನರಿಸಿಯೇ ಬಿಡು ಕೊರಡು

ಬರಡು ಬದುಕಿನಲಿ ಮೊಳೆಯಿಸಿಯೇ ಬಿಡು

ಭಾವಚಿಗುರು

ಹುಚ್ಚು ಹಿಡಿದ ಹಾಗೊಮ್ಮೆ

ಕೊಚ್ಚಿಕೊಂಡೊಯ್ದುಬಿಡು

ಸರಿತಪ್ಪುಗಳಿರದ ಆ

ಗಡಿಯ ದಾಟಿಸಿಬಿಡು

‍ಲೇಖಕರು nalike

9 June, 2020

1 Comment

  1. Chaitra Shivayogimath

    ತುಂಬಾ ಚಂದದ ಪದ್ಯ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading