ಜಿ.ಪಿ.ಬಸವರಾಜು ಹೊಸ ಕವಿತೆ ‘ಮಳೆಯ ಹಾಡು’

 ಜಿ.ಪಿ.ಬಸವರಾಜು

ಮಳೆಗಾಗಿ ನೂರು ವಾದ್ಯಗಳು ಮೊಳಗಿದವು

ಕುಣಿದರು ನೂರಾರು ಮಂದಿ ನೂರು ಭಂಗಿ

ಎದೆ ತುಂಬಿ ಬಂದ ಭಾವಗಳು ಹರಿದವು

ನೀರಾಗಿ, ಧಾರೆಯಾಗಿ, ತೊರೆಯಾಗಿ ಹೊಳೆ-

ಯಾಗಿ ಹೊಳೆಹೊಳೆದು ಸೇರಿದವು ಸಾಗರವ;

 

ಹರಿದ ಬೆವರನ್ನು ಒರೆಸುತ್ತ, ನುಗ್ಗುವ ಜನರನ್ನು

ತಳ್ಳುತ್ತ ವೇದಿಕೆಯಿಂದ ಸರಿದು ಹೋದರು ವಾದ್ಯ-

ಗಾರರು, ಗಾಯಕರು, ನೃತ್ಯಗಾರರು, ಬೆಳಕು ಬಿಟ್ಟವರು

ವೇದಿಕೆಯ ಸಜ್ಜುಗೊಳಿಸಿದವರು, ಜನ ಹುಚ್ಚೆದ್ದು ಕೂಗಿ-

ದರು, ಮುಗಿಲು ಹನಿಯಲಿಲ್ಲ, ಉರಿವ ಬೆಂಕಿ ಆರಲಿಲ್ಲ

 

ನಗರದ ದೀಪಗಳು ಹೊತ್ತಿ, ಬೀದಿಯಲ್ಲಾಡುವ ಮಕ್ಕಳು

ಮನೆ ಸೇರಿ, ದಣಿದ ದೇಹಗಳ ಸಂತೈಸಿ, ಉಂಡು ಮಲಗಿದರು

ಊರು ಧಗೆಯಲ್ಲಿ ಬೇಯುತ್ತ ತಂಗಾಳಿಗೆ ಕಾಯುತ್ತ ಕತ್ತಲೆಯಲ್ಲಿ

ಮುಖ ಮರೆಸಿಕೊಂಡಿತು

 

ನಡುರಾತ್ರಿ ಕರಗಿರಬೇಕು, ಚುಕ್ಕೆಗಳು ಮೋಡಗಳ ಹೊದ್ದು ಮಲಗಿರಬೇಕು

ಆಗ ಬಂದ ಗುಡುಗುಡು ರಾಯ, ಮೋಡಗಳ ತಿವಿಯುತ್ತ, ಏಳಿಸುತ್ತ

ಚಾಟಿ ಬೀಸುತ್ತ, ಛಟಿಲ್ ಎಂದು ಹೊಡೆಯುತ್ತ ಅಬ್ಬರಿಸುತ್ತ ಬಂದ

ಬಂದೇ ಬಿಟ್ಟ , ಮಲಗಿದವರೆಲ್ಲ ಧಡಕ್ಕೆನೆದ್ದು ಕುಳಿತರು, ಮಕ್ಕಳು ಬೆಚ್ಚಿ

ತಬ್ಬಿದವು ತಾಯಂದಿರ, ಥಟ್ಟನೆ ದೀಪಗಳು ಆರಿ, ಕವಿಯಿತು ಕಗ್ಗತ್ತಲು

ಮೊದಲು ಹನಿ, ಮತ್ತೆ ಹನಿಹನಿ, ಧಾರೆ ಧಾರೆ, ಧೋ ಎಂದು ಇಟ್ಟಿತು

ಮುಗಿಲಿಂದ ನೆಲಕ್ಕೆ ಜಲದ ದಾಳಿ, ಅಪ್ಪಳಿಸಿ, ಕುಣಿದು ಕುಪ್ಪಳಿಸಿ, ಫಟಾರನೆ

ನೆಲದ ಕೆನ್ನೆಗೆ ಹೊಡೆದು ನೆಗೆಯಿತು ನೀರು, ಧುಮುಧುಮುಗುಟ್ಟುತ, ಕುಟ್ಟುತ

ಕೆನೆಯುತ, ಚಂಡೆಯ ಸದ್ದಿನ ಜೊತೆಗೆ ಇಳಿದರು ರಕ್ಕಸರು; ಅವರ ಅಬ್ಬರ-

ವೇನು, ಆರ್ಭಟವೇನು, ನಡುಗಿತು ಊರು, ನಡುಗಿತು ಭೂಮಿ ಎಷ್ಟೋ

ಹೊತ್ತು, ಮತ್ತಿಳಿದ ಮೇಲೆ ಮತ್ತೆ ಮಧುರ ಗಾನ, ಸಮ ಶ್ರುತಿಯಲ್ಲಿ,

ಆಳದಾಳಕ್ಕೆ ಇಳಿದು ಒಳಗೆಲ್ಲ ನುಡಿವಂತೆ, ಹಾಡು ಹಬ್ಬಿತು ಲೋಕವನೆ

ತಬ್ಬತು ತಂಪು ತಂಪಾಗಿ, ಅಗೊ ಹಾಡು, ಇಗೊ ಹಾಡು, ಹಿಮ್ಮೇಳಕ್ಕುಂಟು

ನೂರು ವಾದ್ಯ, ಸ್ವರಕ್ಕೆ ಸ್ವರ, ಹಾಡು ಹಾಡೆ ತುಂಬಿತು ಇರುಳ ಬೆಳಕಾಗಿ, ಧರೆಯ

ಧಗೆಯಲ್ಲ ಹಾರಿ ಹೋಯಿತು, ನೀರು ಇಳಿದಂತೆ ಆಳದಾಳಕ್ಕೆ, ಮನವು ಅರಳಿ

ಮುಗಿಲು ಕರಗಿ ಮೂಡಣವು ರಂಗಾಯಿತು, ಬಿದ್ದ ಗಿಡಗಂಟೆಗಳೆಲ್ಲ

ಎದ್ದು ನಿಂತವು ನಗುನಗುತ, ಮಣ್ಣವಾಸನೆಗೆ ಮೂಗ ಅರಳಿಸುತ

‍ಲೇಖಕರು nalike

June 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: