ಮುಂಬೈನಲ್ಲಿ ಲೋಕಲ್ ರೈಲ್ ಹತ್ತಿ..

ಕಾಡುತ್ತಿರುವ ಮುಂಬೈ ಲೋಕಲ್ ರೈಲುಗಳ ನೆನಪು

 ಶ್ರೀನಿವಾಸ ಜೋಕಟ್ಟೆ, ಮುಂಬೈ

ಮಾರ್ಚ್ 22ರ ಜನತಾ ಕರ್ಫ್ಯೂಗೆ ಮೊದಲು ಆಫೀಸ್ ನಿಂದ ಹೊರಟವ ಸಂಜೆಗೆ ದಾದರ್ ನಿಂದ ವಸಾಯಿರೋಡ್ ಸ್ಟೇಷನ್ ಗೆ  ಲೋಕಲ್ ರೈಲಲ್ಲಿ‌ ಕೂತಿದ್ದೆ. ಆ ದಿನ ರೈಲಲ್ಲಿ ಅರ್ಧಕ್ಕರ್ಧ ಪ್ರಯಾಣಿಕರು ಇರಲಿಲ್ಲ. ತುಂಬಾ ಕಡಿಮೆ ಸಂಖ್ಯೆಯ ಪ್ರಯಾಣಿಕರಿದ್ದರು. ವಸಾಯಿ ಸ್ಟೇಷನ್ ಇಳಿಯುವ ಮೊದಲು ಬೋಗಿಯೊಳಗೆ ಗೆಳೆಯ, ಖ್ಯಾತ ರಂಗನಟ, ಕಂಠದಾನ‌ ಕಲಾವಿದ ಅವಿನಾಶ್ ಕಾಮತ್ ನನ್ನ ಎದುರು ಕಂಡರು. ಮೊದಲೇ ಕಂಡಿದ್ದರೆ ಒಂದಷ್ಟು ಪಟ್ಟಾಂಗ ಹೊಡೆಯಬಹುದಿತ್ತು. ಇಳಿಯುವ ಮೊದಲು ನನ್ನದೊಂದು ಪೋಟೋ ಹೊಡೆದಿದ್ದು ನಂತರ ವಾಟ್ಸಪ್ ನಲ್ಲಿ ಕಳಿಸಿದ್ದರು. ಲೋಕಲ್ ರೈಲಿನಲ್ಲಿ ನಾನು ಕೂತಿದ್ದ ಆ ಫೋಟೋ ಇದೀಗ ಮತ್ತೆ ಕಾಣುತ್ತಿದ್ದಂತೆ ಲೋಕಲ್ ರೈಲು ಓಡಾಟದ ಆ ದಿನಗಳು  ಮರಳಿ ನೆನಪಾಗುತ್ತಿದೆ…

ಮುಂಬಯಿಯಿಂದ 71 ದಿನಗಳ ನಂತರ  ಜೂನ್ ಒಂದರಂದು ಸಾಮಾನ್ಯ ಪ್ರಯಾಣಿಕರ ಮೊದಲ ರೈಲು ಹೊರಟಿತ್ತು. ಸಾಮಾನ್ಯ ರೈಲುಗಳ ಓಡಾಟ ಆರಂಭ ಆದ್ದರಿಂದ ಮುಂಬಯಿಯಲ್ಲಿ ನಿಧಾನವಾಗಿ ಶ್ರಮಿಕ್ ರೈಲುಗಳ ಓಡಾಟ ನಿಲ್ಲುತ್ತಿದೆ. ಬಾಂಬೆ ಹೈಕೋರ್ಟ್ ನಲ್ಲಿ ರಾಜ್ಯ ಸರಕಾರವು ಜೂ.5ರಂದು “ಈವಾಗ ಒಂದೇ ಒಂದು ಶ್ರಮಿಕ್ ರೈಲಿನ ಬೇಡಿಕೆ ಪೆಂಡಿಂಗ್ ಇಲ್ಲ” ಎಂದು ತಿಳಿಸಿದೆ. ಜೂ.1ರಂದು 5 ಶ್ರಮಿಕ್ ರೈಲುಗಳು ಹೊರಟಿದ್ದವು. ಇದಕ್ಕಿಂತ ಮೊದಲು ಮುಂಬೈಯಲ್ಲಿ ಪ್ರತಿದಿನ ಸರಾಸರಿ 20 ಶ್ರಮಿಕ್ ರೈಲುಗಳು ಹೊರಡುತ್ತಿದ್ದವು. ಮಹಾರಾಷ್ಟ್ರ ಗೃಹಮಂತ್ರಿ ಅನಿಲ್ ದೇಶಮುಖ್ ಹೇಳಿದಂತೆ ಮೇ 1ರಿಂದ ಜೂನ್ 1ರ ತನಕ 822 ಶ್ರಮಿಕ್ ರೈಲುಗಳು ಮುಂಬಯಿಯಿಂದ ಹೊರಟಿತ್ತು. ಶ್ರಮಿಕ್ ರೈಲು, ಸಾಮಾನ್ಯ ರೈಲುಗಳ ಓಡಾಟದ ನಂತರ ಈಗ ನೆನಪಾಗುತ್ತಿರುವುದು ಮುಂಬಯಿಯ ಲೋಕಲ್ ರೈಲುಗಳ ಓಡಾಟದ ಆ ದಿನಗಳು…

ಮುಂಬೈ ಮಹಾನಗರದಲ್ಲಿ ದಿನವೊಂದಕ್ಕೆ ಸುಮಾರು 80 ಲಕ್ಷ ಪ್ರಯಾಣಿಕರನ್ನು ಒಯ್ಯುತ್ತಿದ್ದ,  ವರ್ಷಕ್ಕೆ ಸರಾಸರಿ ಮೂರು ಸಾವಿರದಷ್ಟು ಜನರ ಪ್ರಾಣ ತೆಗೆಯುತ್ತಿದ್ದ ಮುಂಬಯಿಯ ಜೀವನಾಡಿ ಲೋಕಲ್ ರೈಲುಗಳ ಓಡಾಟವು ಮಾರ್ಚ್ 23ರಿಂದ ಸ್ತಬ್ದಗೊಂಡಿದೆ. ಲೋಕಲ್ ರೈಲುಗಳು ಓಡಾಡುತ್ತಿದ್ದರೆ ಮಾತ್ರ ಮುಂಬೈ ಜೀವಂತ ಇದೆ ಎಂದು ನಂಬುತ್ತಿದ್ದ ದಿನಗಳಿದ್ದುವು. ಅರ್ಧಗಂಟೆಯ ಕಾಲ ಮುಂಬೈ ಲೋಕಲ್ ರೈಲು ಓಡಾಟ ನಿಂತರೂ ಸಾಕು, ಇಲ್ಲಿನ ಜೀವನ ನರಕವಾಗುವುದು ಎಂಬ ದೃಶ್ಯವನ್ನು ಎಲ್ಲರೂ ಕಾಣುತ್ತಿದ್ದರು. 80-90ರ ದಶಕದಲ್ಲಿ ಕಂಡುಬರುತ್ತಿದ್ದ ಮುಂಬಯಿ ಬಂದ್ ಸಂದರ್ಭದಲ್ಲೂ ಲೋಕಲ್ ರೈಲಿನಲ್ಲಿ ಓಡಾಡಿದವ ನಾನು. ಎಂತಹ ಬಂದ್ ಗೂ ಲೋಕಲ್ ರೈಲಿನ ಓಡಾಟ ನಿಂತಿರಲಿಲ್ಲ. ಮುಂಬಯಿಗೆ ಬಂದಿದ್ದ ಆರಂಭದ ಆ ಎಂಭತ್ತರ ದಶಕದಲ್ಲಿ ರಿಟರ್ನ್ ಟಿಕೇಟ್ ಪಡೆದು ಈ ತುದಿಯಿಂದ ಆ ತುದಿಗೆ ಸುಮ್ಮನೆ ಲೋಕಲ್ ರೈಲಿನಲ್ಲಿ ಪಯಣ ಮಾಡುತ್ತಾ ಒಬ್ಬಂಟಿಯಾಗಿ ತಿರುಗಿ ಮುಂಬಯಿಯನ್ನು ಪರಿಚಯಿಸಿ ಕೊಂಡವನು ನಾನು. ಕಾರಣವೆಂದರೆ ಯಾರೂ ಆ ದಿನಗಳಲ್ಲಿ ನನಗೆ ಮುಂಬಯಿಯನ್ನು ಪರಿಚಯಿಸುವವರಿದ್ದಿಲ್ಲ. ಲೋಕಲ್ ರೈಲು ಯಾವಾಗ ಓಡಾಟ ನಿಲ್ಲಿಸುತ್ತೆ ಅಂದರೆ ಮಳೆಗಾಲದಲ್ಲಿ. ಭಾರೀ ಮಳೆಗೆ ಕೆಲವೆಡೆ ಹಳಿಗಳು ನೀರಲ್ಲಿ ಮುಚ್ಚಿ ಹೋದಾಗ. ಅದೂ ಕೆಲವು ಗಂಟೆ ಕಾಲ ಮಾತ್ರ ರೈಲು ಓಡಾಟ ಸ್ಥಗಿತಗೊಂಡದ್ದು ಬಿಟ್ಟರೆ ಮತ್ತೆ ವರ್ಷವಿಡೀ ಓಡಾಟ ಕಾಣಿಸುವ ಲೋಕಲ್ ರೈಲುಗಳು ಕಳೆದ ಎರಡೂವರೆ ತಿಂಗಳಿಂದ ಓಡಾಟ ನಿಲ್ಲಿಸಿ ಬಂದ್ ಇವೆ ಎಂದರೆ ಯಾರೂ ಇದನ್ನು ಕನಸಲ್ಲೂ ಊಹಿಸಲು ಸಾಧ್ಯವಿರಲಿಲ್ಲ.

ಆದರೆ ಅದೂ ನಿಜ ಅನಿಸಿತಲ್ಲ!

ಮಾರ್ಚ್ 23ರಿಂದ ಲೋಕಲ್ ರೈಲುಗಳ ಓಡಾಟ ನಿಂತಿದೆ ಕೊರೊನಾ ಲಾಕ್ಡೌನ್ ಪ್ರಯುಕ್ತ. ಕೊನೆಗೂ ಈ ತನಕದ ಒಂದು ನಂಬಿಕೆ ಹುಸಿ ಆಗಿಬಿಟ್ಟಿದೆ. ಮುಂಬಯಿ ಕಭೀ ಸೋತೀ ನಹೀ… ಎಂಬ ಮಾತೂ ಸುಳ್ಳಾಗಿ ಬಿಟ್ಟಿತು. ‘ಸಂಯುಕ್ತ ಕರ್ನಾಟಕ’ದಲ್ಲಿ ದಶಕದ ಹಿಂದೆ ನಾನೇ ಬರೆದ ಈ ಶೀರ್ಷಿಕೆಯ ಅಂಕಣ ಬರಹ ಈ ಹೊತ್ತು ಮತ್ತೆ ನೆನಪಾಗ್ತಿದೆ. ಈವಾಗ ಮುಂಬಯಿ ಕೂಡಾ  ಸೋತೀ ಹೈ ಅನ್ನಬೇಕಾಗಿದೆ. ಮುಂಬಯಿಯಲ್ಲಿ ಲೋಕಲ್ ರೈಲು ಪ್ರಯಾಣ ಅಂದರೆ ಅದೊಂದು  ರೋಮಾಂಚನ. ಪೀಕ್ ಅವರ್ಸ್ ನಲ್ಲಿ ಲೋಕಲ್ ರೈಲು ಹತ್ತಿ ಇಳಿಯುವುದೆಂದರೆ ಅದೊಂದು ಮಹಾ ಪ್ರಯಾಸವೇ ಸರಿ. ಹೊಸಬರಿಗಂತೂ ಬಹಳ ಕಷ್ಟ ಈ ಸಮಯ ಹತ್ತಿ ಇಳಿಯುವುದು. ಅದು ಮುಂಬೈಕರ್ ಗೆ ಮಾತ್ರ ವಿಶೇಷವಾಗಿ ಸಿದ್ಧಿಸಿದ ತರಬೇತಿ!

ಕಳೆದ ಮೂರೂವರೆ ದಶಕಗಳಿಂದ ನಾನು ಮುಂಬೈಯಲ್ಲಿ ಲೋಕಲ್ ರೈಲಿನ ಖಾಯಂ ಪ್ರಯಾಣಿಕ. ನಾನಾ ಅನುಭವಗಳನ್ನು ಅದರಲ್ಲಿ ಪಡೆದಿದ್ದೇನೆ. ಫಸ್ಟ್ ಕ್ಲಾಸ್ ಪಾಸ್ ಇದ್ದರೂ ಆ ಡೀಸೆಂಟ್ ಪ್ರಯಾಣಿಕರ ನಡುವಿನ ಜಗಳವನ್ನೂ ಅನೇಕ ಬಾರಿ ಕಂಡಿದ್ದೇನೆ. ಅದರಲ್ಲೂ ಕಳೆದ ಹದಿಮೂರು ವರ್ಷಗಳಿಂದ ದೂರದ ಪಾಲ್ ಘರ್ ಜಿಲ್ಲೆಯ ವಸಾಯಿರೋಡ್ ನಲ್ಲಿ ವಾಸ್ತವ್ಯ ಇರುವ ನಾನು ಮುಂಬೈಯ ಲಾಲ್ಬಾಗ್ ನಲ್ಲಿರುವ ನನ್ನ ಪತ್ರಿಕಾ ಕಚೇರಿಗೆ ಬರಬೇಕೆಂದರೆ ಅತಿ ಹೆಚ್ಚು ಜನ ಓಡಾಡುವ ಪಶ್ಚಿಮ ರೈಲ್ವೆಯ ಚರ್ಚ್ ಗೇಟ್ – ವಿರಾರ್ ಟ್ರೈನ್ ಹತ್ತಬೇಕಾದ ಸ್ಥಿತಿ. ಅಷ್ಟೇ ಅಲ್ಲ, ದಾದರ್ ನಲ್ಲಿ ಇಳಿದು ಮಧ್ಯ ರೈಲ್ವೆಯ ಸಿಎಸ್ಎಂಟಿ ರೈಲನ್ನು ಮತ್ತೆ ಹತ್ತಿ ಮೂರು ಸ್ಟೇಷನ್ ಮುಂದಿನ ಚಿಂಚ್ ಪೋಕ್ಲಿ ಎಂಬ ಸ್ಟೇಷನ್ ನಲ್ಲಿ ಇಳಿಯಬೇಕು. ಸಂಜೆಗಂತು ಚಿಂಚ್ ಪೋಕ್ಲಿ ಸ್ಟೇಷನ್ ನಿಂದ ದಾದರ್ ಗೆ ಬರುವುದೆಂದರೆ ಯಮಯಾತನೆ. ದಾದರ್ ನಲ್ಲಿ ಇಳಿಯಲು ಅವಕಾಶವೇ ಸಿಗದಷ್ಟು ಹತ್ತುವವರ ನೂಕು ನುಗ್ಗಲು. ಕಷ್ಟಪಟ್ಟು ಇಳಿಯೋವಾಗಲೆಲ್ಲ ಮುಂಬಯಿ ಸಾಕು ಅನ್ನಿಸುವುದೂ ಇದೆ. ಇದು ದಿನನಿತ್ಯದ ಕತೆ.

 

ದಾದರ್ ನಲ್ಲಿ ಇಳಿದ ನಂತರ ಮತ್ತೆ ಪಶ್ಚಿಮ ರೈಲ್ವೆ ಯ ವಿರಾರ್ ಟ್ರೈನ್ ಹಿಡಿಯಬೇಕು. ಅದು ಚರ್ಚ್ ಗೇಟ್ ನಿಂದ ದಾದರ್ ಗೆ ಬರುವಾಗಲೇ ತುಂಬಿರುತ್ತದೆ ಹಾಗಾಗಿ ಮತ್ತೆ ಅರ್ಧಗಂಟೆ ಅಲ್ಲೇ ಕಾದು ದಾದರ್ ನಿಂದಲೇ ವಿರಾರ್ ಗೆ ಹೊರಡುವ  ಲೋಕಲ್ ರೈಲು ಹಿಡಿಯಬೇಕು. ಅದು ಬಾಂದ್ರಾ ದಾಟಿ ದಾದರ್ ಗೆ ಬರುವಾಗಲೇ ರಿಟರ್ನ್ ಪ್ರಯಾಣಿಕರಿಂದ ತುಂಬಿರುತ್ತದೆ. ಅಂತೂ ಪ್ರಥಮ ಶ್ರೇಣಿಯ ತಿಂಗಳ ಪಾಸ್ ಪಡೆದರೂ ಸಹ ವಿರಾರ್ – ಚರ್ಚ್ ಗೇಟ್ ರೈಲು ಪ್ರಯಾಣಿಕರ ಗೋಳು ಹೇಳಿ ಪ್ರಯೋಜನ ಇಲ್ಲ. ದಿನಕ್ಕೆ ಬೆಳಗ್ಗೆ ಮತ್ತು ಸಂಜೆ ಅಂತ ಐದಾರು ಗಂಟೆ ಪ್ರಯಾಣದಲ್ಲೇ ನನ್ನ ದಿನ ಕಳೆಯುತ್ತದೆ. ಕೇವಲ ರವಿವಾರ ಮಾತ್ರ ಇದಕ್ಕೆ ಅಪವಾದ. ಆದರೂ ಮುಂಬೈಕರ್ ಖುಷಿಯಿಂದಲೇ ಮುಂಬೈಯನ್ನು ಪ್ರೀತಿಸುತ್ತಾ ಹೊಗಳುತ್ತಾ ಇರುತ್ತಾರೆ! ಮುಂಬೈಯ ಲೋಕಲ್ ರೈಲುಗಳಲ್ಲಿ ಕಿಸೆಗಳ್ಳರ, ಮೊಬೈಲ್ ಕಳ್ಳರ, ಶಿಖಂಡಿಗಳ ಕಿರಿಕಿರಿ… ಇವುಗಳ ಕುರಿತಂತೆ ಅನೇಕ ಸಲ ಬರೆದಿದ್ದೆ. ಮದುವೆಯಾದ ಆರಂಭದಲ್ಲಿ ಊರಿನಿಂದ ಬಂದ ನನ್ನ ಪತ್ನಿಯೂ ಈ ಕಿಸೆಗಳ್ಳರ ಕೈಚಳಕವನ್ನು ಕಂಡವಳು. ಮಹಿಳಾ ಬೋಗಿಯಲ್ಲಿ ಪಯಣಿಸುವಾಗ ಒಮ್ಮೆ ಹೆಗಲಿಗೆ ಹಾಕಿದ್ದ ಅವಳ ಬ್ಯಾಗ್ ನ ಒಳಗೆ ಇದ್ದ ಇನ್ನೊಂದು ಚಿಕ್ಕ ಪರ್ಸ್ ನ ಜಿಪ್ ತೆರೆದು ಅದರೊಳಗಿನ‌ ಹಣ, ಮನೆಯ ಬೀಗದ ಕೀ… ಸಹಿತ ಯಾರೋ ಕಳ್ಳಿ ಅಪಹರಿಸಿದ್ದಳು. ಅದರಲ್ಲಿದ್ದ ಮನೆಯ ಬೀಗದ ಕೀ ಕೂಡಾ ಹೋಯ್ತಲ್ಲ. ಏನು ಮಾಡೋದು ನಾನು ಆಫೀಸ್ ನಿಂದ ರಾತ್ರಿ ಬರುವ ತನಕ ಅವಳಿಗೆ ನಮ್ಮ ಮನೆಯ ಎದುರು ರೂಮಿನವರಲ್ಲಿ ಕೂರಬೇಕಾಯ್ತು. ಮುಂಬೈಗೆ ಬಂದ ನಂತರ ನನ್ನ ಮೊದಲ ಕಥೆಯೂ ಮುಂಬೈಯ ಲೋಕಲ್ ರೈಲಿನೊಳಗಿನ ಘಟನೆಗೆ ಸಂಬಂಧಿಸಿಯೇ ಇತ್ತು.

ಕನ್ನಡದ ಪ್ರಸಿದ್ಧ ಸಾಹಿತಿಯೊಬ್ಬರು (ಈಗ ಬೆಂಗಳೂರಲ್ಲಿದ್ದಾರೆ) ತೊಂಭತ್ತರ ದಶಕದಲ್ಲಿ ಹೀಗೆ ಮಾಟುಂಗಾದಿಂದ ಬರುವಾಗ  ಪಟ್ಟಾಂಗದ ನಡುವೆ ಹೇಳಿದ ಮಾತು ಸತ್ಯ ಅನಿಸುತ್ತದೆ. “ಮನುಕುಲದ ಭವಿಷ್ಯ, ಇತಿಹಾಸ, ಸಾಹಿತ್ಯ, ವಿಮರ್ಶೆ, ಕಲಾತ್ಮಕತೆ… ಇಂತಹ ದೊಡ್ಡ ದೊಡ್ಡ ಮಾತುಗಳನ್ನಾಡುವ ನಮ್ಮ ಕೆಲವು ಸಾಹಿತ್ಯಲೋಕದ ಪಂಡಿತರನ್ನು ಮುಂಬಯಿಯ ಲೋಕಲ್ ರೈಲು ಒಳಗಡೆ ಒಮ್ಮೆ ಪೀಕ್ ಅವರ್ಸ್ ನಲ್ಲಿ ದೂಡಿ ಬಿಡಬೇಕು. ಆಗ ಅವರಿಗೆ ಬದುಕು ಅಂದರೆ ಏನು, ಸಾಹಿತ್ಯ ಅಂದರೆ ಏನು ಎಂದು ಸ್ಪಷ್ಟವಾಗಬಹುದು” ಎಂದದ್ದು ಈಗ ಮತ್ತೆ  ನೆನಪಾಗುವುದು. ಇದು ತಮಾಷೆಗೆ ಆಡಿದ್ದಿರಬಹುದಾದರೂ ಇದನ್ನು ತಳ್ಳಿ ಹಾಕುವಂತಿಲ್ಲ .

ಮುಂಬೈ ಜನ ದಿನನಿತ್ಯ ವಿರಾರ್ ಚರ್ಚ್ ಗೇಟ್ ರೈಲು ಅಥವಾ ಕಲ್ಯಾಣ್, ಪನ್ವೆಲ್ ನಿಂದ ಸಿಎಸ್ಎಂಟಿ ರೈಲು ಹತ್ತಿ ಕೆಲಸಕ್ಕೆ ಹೋಗಿ ಬರುತ್ತಾರಲ್ಲ… ಅವರು ಪಡುವ ಕಷ್ಟಗಳನ್ನು ಕಂಡಾಗ ಮನುಕುಲದ ಭವಿಷ್ಯ ಮಾತನಾಡುವವರು ಒಮ್ಮೆ ಈ ದೃಶ್ಯವನ್ನು ಅನುಭವಿಸಬೇಕು ಅನಿಸ್ತದೆ. ಮುಂಬೈ ಒಳಗಡೆ ಬೆಸ್ಟ್ ಬಸ್ಸುಗಳ ನಂತರ ಅತಿ ಹೆಚ್ಚು ಜನಪ್ರಿಯ ಲೋಕಲ್ ರೈಲುಗಳು. 90ರ ದಶಕದಲ್ಲಿ 55 ಲಕ್ಷ ಪ್ರಯಾಣಿಕರು ಇದ್ದರೆ ಈಗ ಎಂಬತ್ತು ಲಕ್ಷ ಪ್ರಯಾಣಿಕರು ದಿನನಿತ್ಯ ಲೋಕಲ್ ರೈಲುಗಳಲ್ಲಿ ಓಡಾಡುತ್ತಾರೆ. ಒಂದೊಮ್ಮೆ ಒಂಭತ್ತು ಬೋಗಿಗಳ ಲೋಕಲ್ ರೈಲುಗಳು ಓಡಾಡುತ್ತಿದ್ದರೆ ಇಂದು 12 ಬೋಗಿಗಳು, 15 ಬೋಗಿಗಳ ಲೋಕಲ್ ರೈಲುಗಳು ಓಡಾಡುತ್ತಿವೆ.

ಭಾರತದಲ್ಲಿ ಮೊದಲ ರೈಲು ಓಡಾಡಿದ್ದು ಆಗಿನ ವಿಟಿ ಸ್ಟೇಷನ್ನಿಂದ ಥಾಣೆ ನಡುವೆ. ಅದು ಎಪ್ರಿಲ್ 16, 1853ರಲ್ಲಿ. ವಿದ್ಯುತ್ ರೈಲುಗಳ ಮೊದಲ ಓಡಾಟ 3 ಫೆಬ್ರವರಿ 1925ರಂದು ಆರಂಭವಾಗಿತ್ತು. ಅಲ್ಲಿಂದ ಸಂಚಾರ ವ್ಯವಸ್ಥೆಯಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದಿವೆ. ಮೇ 5,  1992ರಲ್ಲಿ ವಿಶ್ವದ ಮೊದಲ ಮಹಿಳಾ ವಿಶೇಷ ರೈಲು ಚಲಿಸಿತು.

ಇಂದು ಹಲವು ಮಹಿಳಾ ವಿಶೇಷ ರೈಲುಗಳು ಚಲಿಸುತ್ತಿವೆ. ಇದರೊಳಗೆ ಆಫೀಸ್ ನ ಬಾಸ್ ನ ಕಿತಾಪತಿಯಿಂದ ಹಿಡಿದು  ಅಂದಿನ ಅಡುಗೆಯ ತನಕ ಮಾತನಾಡುತ್ತಾರೆ. ಕೆಲವರು ಅಲ್ಲೇ ಕೂತು ಬಟಾಣಿ ಸಿಪ್ಪೆ ಇತ್ಯಾದಿ ಸುಲಿಯುವುದು ಇದೆ.  ಆಫೀಸ್ ನ ಕೆಲವು ಫೈಲ್ ಗಳ ಕೆಲಸ ಈ ಪಯಣದಲ್ಲೇ ಮಾಡುವುದೂ ಇದೆ. ಕೆಲವರಿಗಂತೂ ಅದು ಪಿಕ್ನಿಕ್ ಪಾಯಿಂಟ್. ಬೆಳಗ್ಗೆ ಎಲ್ಲಿ ರೈಲು ತಪ್ಪಿ ಹೋಗುವುದೋ ಎಂದು ಅನೇಕ ಮಹಿಳೆಯರು ಬೆಳಗಿನ ತಿಂಡಿಯನ್ನು ಕಟ್ಟಿಕೊಂಡು ರೈಲಿನಲ್ಲಿ ಕೂತು ತಿನ್ನುವುದೂ ಇದೆ. ಕೆಲವು ಮಹಿಳೆಯರು ಹುಟ್ಟುಹಬ್ಬವನ್ನೂ ಇದರೊಳಗೆ ಆಚರಿಸಿದ ವರದಿಗಳು ಬಂದಿವೆ. ಮರಾಠಿ  ಮಹಿಳೆಯರ ಬಹು ಪ್ರಸಿದ್ಧ ಹಳದಿ ಕುಂಕುಮ ಕಾರ್ಯಕ್ರಮಗಳೂ ಮಹಿಳಾ ವಿಶೇಷ ರೈಲಿನ ಬೋಗಿಯೊಳಗೆ ಆಯೋಜಿಸಲಾಗುತ್ತದೆ. ಅದರ ವಿಶೇಷತೆಗಳನ್ನು ಪತ್ನಿ ಹೇಳುತ್ತಿರುತ್ತಾಳೆ.

ಇಂದಿನ ದಿನಗಳಲ್ಲಿ ಹವಾನಿಯಂತ್ರಿತ ಲೋಕಲ್ ರೈಲುಗಳು ಓಡಾಡುತ್ತಿವೆ. ಲೋಕಲ್ ರೈಲುಗಳಲ್ಲಿ  ಬೆಳಗ್ಗೆ ಮತ್ತು ಸಂಜೆ ಇನ್ನೊಂದು ವಿಶೇಷ ಆಕರ್ಷಣೆ ಅಂದರೆ ಹಲವು ಬೋಗಿಗಳಲ್ಲಿ ದಿನನಿತ್ಯ ಕಾಣುವ ಭಜನಾ ದೃಶ್ಯಗಳು. ಪ್ರಯಾಣಿಕರದ್ದೇ ಆದ ಹಲವಾರು ಭಜನಾ ಮಂಡಳಿಗಳಿವೆ. ಈ ಭಜನೆಯಿಂದ ಇತರ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತದೆ ಎಂದು ಕೆಲವು ಬಾರಿ ಇದನ್ನು ನಿಲ್ಲಿಸಲು ಪ್ರಯತ್ನ ನಡೆದಿತ್ತು. ಆದರೆ ಶಿವಸೇನೆ ಸಹಿತ ಅನೇಕರು ಇದನ್ನು ವಿರೋಧಿಸಿದ್ದರಿಂದ ಇಂದಿಗೂ  ಭಜನಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಾ ಬಂದಿದೆ. ವಿಜಯದಶಮಿ, ದೀಪಾವಳಿ ಸಂದರ್ಭಗಳಲ್ಲಿ ಇಡೀ ಬೋಗಿಯನ್ನು ಭಜನಾ ತಂಡಗಳು ಅಲಂಕರಿಸುವ ದೃಶ್ಯಗಳನ್ನು ಕಾಣಬಹುದು.

 

ಮುಂಬಯಿಗರಿಗೆ ಕೆಲಸದ ಸ್ಥಳಕ್ಕೆ ಮನೆಯ ಊಟವನ್ನು ಒದಗಿಸುವ ಟಿಫಿನ್ ವಾಲಾ ಮಾಮಾ ಅರ್ಥಾತ್ ಡಬ್ಬಾವಾಲಾರಿಗೆ ಬೆಳಗ್ಗೆ ಸಂಜೆ ಈ‌ ಲೋಕಲ್ ನಲ್ಲಿ ಪ್ರತ್ಯೇಕ ಲಗೇಜ್ ಕಂಪಾರ್ಟ್ಮೆಂಟ್ ಇದೆ. ತಿಂಗಳ ಸಂಬಳವಾಗುವ ದಿನಗಳಲ್ಲಿ ಲೋಕಲ್ ರೈಲು ಒಳಗಡೆ ಕಿಸೆಗಳ್ಳರ ಹಾವಳಿ ಜಾಸ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳ್ಳರೂ ಸಕ್ರಿಯರಾಗಿದ್ದಾರೆ.

ವರ್ಷಕ್ಕೆ ಈ ಲೋಕಲ್ ರೈಲುಗಾಡಿಗಳಿಗೆ ಬಿದ್ದು ಎರಡೂವರೆ ಸಾವಿರದಿಂದ 3,000ದಷ್ಟು ಜನರು ಸಾಯುತ್ತಾರೆ (ಈ ಬಾರಿಯ ಲಾಕ್ಡೌನ್ ನ ಕಾರಣ ಈ ಸಂಖ್ಯೆ ಕಡಿಮೆಯಾಗಿರುವುದು). ಇವರಲ್ಲಿ ಶೇಕಡ 20ಕ್ಕೂ ಹೆಚ್ಚು ಜನರ ಗುರುತು ಸಿಗುವುದಿಲ್ಲ. ಅನಂತರ ಆ ಶವದ ಕಿವಿಯ ಲಿಂಗ, ದೇಹದಲ್ಲಿನ ಗುರುತುಗಳ ಆಧಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.

ಮುಂಬೈ ರೈಲು ಹಳಿಗಳ ಪಕ್ಕದಲ್ಲಿ ಅನೇಕ ಕಡೆ ತರಕಾರಿಗಳನ್ನು, ಸೊಪ್ಪು ಇತ್ಯಾದಿ ಬೆಳೆಸುತ್ತಾರೆ. ಇಲ್ಲೆಲ್ಲ ಜೋಪಡಿಗಳನ್ನು ಕಟ್ಟುವುದು ಬೇಡವೆಂದು ರೈಲ್ವೆ ಆಡಳಿತ ಕೃಷಿ ಮಾಡಲು ಜಾಗ ಕೊಡುತ್ತದೆ. ಆದರೆ ಆ ಬೆಳೆಗಳಿಗೆ ಪಕ್ಕದ ಗಟಾರದ ನೀರನ್ನು ಸಿಂಪಡಿಸುವುದರಿಂದ ಅದು ಆರೋಗ್ಯಕ್ಕೆ ಹಾನಿಕರ ಆಗಿರುವುದು ಅನೇಕ  ಬಾರಿ ಚರ್ಚೆ ಹುಟ್ಟಿಸಿದೆ.

ರೈಲ್ವೆಗೆ ಅತಿಹೆಚ್ಚು ಕಷ್ಟ ಆಗೋದು ಮಳೆಗಾಲದಲ್ಲಿ. ಮುಂಬೈ ಮಹಾನಗರ ಪಾಲಿಕೆ ಮತ್ತು ರೈಲ್ವೆ ಆಡಳಿತ ಮಳೆಗಾಲದ ಮೊದಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು, ಸ್ವಚ್ಛತಾ ಕಾರ್ಯಕ್ರಮಗಳನ್ನು ಜಂಟಿ ಸಭೆ ನಡೆಸಿ ಆಯೋಜಿ ಸುತ್ತವೆ. ಈ ಬಾರಿ ಕರೋನಾ ಕಾರಣ ಮಳೆಗಾಲದ ತಯಾರಿ ಪೂರ್ಣಗೊಂಡಿಲ್ಲ.

ಮೂರು ನಿಮಿಷಕ್ಕೊಂದು ಲೋಕಲ್ ರೈಲು ಹೊರಡುವುದು ಅದು ಮುಂಬೈಯಲ್ಲಿ ಮಾತ್ರ ಸಾಧ್ಯ. ಆದರೂ ಅದು ಸಾಕಾಗುವುದಿಲ್ಲ ಈ ಜನಸಂಖ್ಯೆಗೆ. ದಿನದ 24 ಗಂಟೆಗಳಲ್ಲಿ ಮಧ್ಯರಾತ್ರಿಯ ಎರಡು ಗಂಟೆಗಳನ್ನು ಹೊರತುಪಡಿಸಿ ಸಾಧಾರಣ 22 ಗಂಟೆಗಳ ಕಾಲ ಈ ಲೋಕಲ್ ರೈಲುಗಳ ಓಡಾಟ ಇರುತ್ತವೆ. ಸಾರ್ವಜನಿಕ ಗಣೇಶೋತ್ಸವ ಸಂದರ್ಭಗಳಲ್ಲಿ, ಹೊಸ ವರ್ಷದ ಆಚರಣೆಯಲ್ಲಿ ಮಧ್ಯರಾತ್ರಿಗೆ ವಿಶೇಷ ಲೋಕಲ್ ರೈಲುಗಳನ್ನು ಕೂಡ ಓಡಿಸಲಾಗುತ್ತದೆ.

ಲೋಕಲ್ ರೈಲಿನ ಬಗ್ಗೆ ಒಂದು ಜೋಕಿದೆ – ನಮ್ಮ ಅಂಗಿಯಲ್ಲಿ ನಮ್ಮ ಬೆವರು ಎನ್ನುವ ಮಾತಿನ ಬದಲು ನಮ್ಮ ಅಂಗಿಯಲ್ಲಿ ಬೇರೆಯವರ ಬೆವರು ಎನ್ನುವುದು. ಅಂದರೆ ಅಲ್ಲಿನ ನೂಕು ನುಗ್ಗಲನ್ನು ಆ ಮಾತು ಹೇಳುತ್ತದೆ. ಏನೇ ಇರಲಿ, ಜೀವನದ ಸಮಗ್ರ ದರ್ಶನವನ್ನು ಮಾಡಿಸುವ ಲೋಕಲ್ ರೈಲುಗಳ ಓಡಾಟವನ್ನು ಮತ್ತೆ ಕಾಣುವ ದಿನ ಮೂಡಿ ಬರಬೇಕು. ಅದಕ್ಕಾಗಿ ಅವಸರ ಸಲ್ಲದು. ಆದರೆ, ದಿನಕ್ಕೆ ಸಾವಿರಕ್ಕಿಂತ ಹೆಚ್ಚು ಕೋವಿಡ್ 19ರ ರೋಗಿಗಳು ಕಂಡು ಬರುತ್ತಿರುವ ಮುಂಬಯಿಯಲ್ಲಿ ಈವಾಗ ಲೋಕಲ್ ರೈಲುಗಳ ಓಡಾಟ ಆರಂಭವಾಯಿತು ಅಂದರೆ ದೇವರೇ ಈ ಮುಂಬಯಿಯನ್ನು ಕಾಪಾಡಬೇಕಷ್ಟೆ.

ಪ್ರತೀ ಬೋಗಿಗಳ ದ್ವಾರದ ಬಳಿ ನಿಲ್ಲುವ ಗ್ರೂಪ್ ಜನರನ್ನು ಮೊದಲು ಒಳ ಕಳುಹಿಸಬೇಕು. ಆ ದೃಶ್ಯ ಮರುಕಳಿಸುವುದಾದರೆ  ಕೊರೊನಾ ಅಪ್ಪಿಕೊಂಡಂತೆ. ಸದ್ಯ ಯಾವ ಲೆಕ್ಕಾಚಾರದಲ್ಲೂ ಲೋಕಲ್ ರೈಲು ಆರಂಭವಾಗುವುದು ಕ್ಷೇಮಕರ ಅಲ್ಲ. ಇನ್ನು ಬರುವುದು ಮಳೆಗಾಲ. ಹೇಗೂ ರೈಲು ಸಂಚಾರ ಆಗಾಗ ಅಸ್ತವ್ಯಸ್ಥ ಇರುವುದು. ಮುಂಬಯಿಯಲ್ಲಿ ಜೂ.5ರಿಂದ ಬಜಾರ್  ತೆರೆದಿದೆ. ದಿನಕ್ಕೆ 1200ಕ್ಕೂ ಹೆಚ್ಚು ಕೊರೊನಾ ಪೊಸಿಟಿವ್ ರೋಗಿಗಳು ಸಿಗುತ್ತಿರುವಾಗ ಬಜಾರ್ ತೆರೆದಿರುವುದು ಯಾವ ಅಪಾಯ ಕಾಣಿಸುವುದೋ ಕಾಲವೇ ಹೇಳಬೇಕು.

ಹಾಗಾಗಿ ಸದ್ಯ ಲೋಕಲ್ ರೈಲುಗಳ ನೆನಪುಗಳನ್ನೇ ಮೆಲುಕು ಹಾಕುವುದು ಕ್ಷೇಮ!

‍ಲೇಖಕರು nalike

June 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: