ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾವ ಗೆರೆಯಲ್ಲೂ ನನ್ನ ಚಿತ್ರ ಮೂಡುವುದಿಲ್ಲ…

ಶ್ರೀವಿಭಾವನ

ನನ್ನದೆನ್ನುವ  ಒಂದೇ ಒಂದು ಚಿತ್ರ ನನ್ನ ಸ್ಮೃತಿಪಟದಲ್ಲಿಲ್ಲ
ಅವರಿವರೆಲ್ಲರೂ ಬಿಡಿಸಿದ ಚಿತ್ರಗಳೆಲ್ಲವೂ ಹರಡಿಕೊಂಡಿವೆ.

ಎಲ್ಲಿಂದಲೋ ಬಂದವರು ಗೀಚಿದ ಗೆರೆಗಳವು
ಬಣ್ಣ ಹಚ್ಚಿ, ಸಂಭ್ರಮಿಸುತ್ತೇನೆ, ಒಂದಿಷ್ಟು ಭ್ರಮೆಗಳ ಜೊತೆಗೆ.
ಅವುಗಳಲ್ಲೇ  ಕಳೆದುಹೋಗುತ್ತೇನೆ, ಬಣ್ಣ ಮಾಸುವವರೆಗೆ.

ಒಮ್ಮೊಮ್ಮೆ ಈ ಚಿತ್ರಗಳನ್ನು ತಿರುವಿ ಹಾಕುತ್ತೇನೆ
ನನ್ನನ್ನು ಅರ್ಥಮಾಡಿಕೊಳ್ಳಲು ಆಗಬಹುದೇನೋ ಎನ್ನೋ ಕಾತರದಲ್ಲಿ
ಎಲ್ಲಾ ಚಿತ್ರಗಳು ಮುಸುಕಾಗಿವೆ ಎನ್ನುವುದು ಮನದಟ್ಟಾಗುವವರೆಗೆ.

ಬಣ್ಣ ಮಾಸಿದ ಚಿತ್ರಗಳೇ ಅವೆಲ್ಲ
ಆದರೂ ಒಪ್ಪವಾಗಿ ಜೋಡಿಸಿಟ್ಟಿದ್ದೇನೆ.
ಸಮಯ ಸಿಕ್ಕಾಗಲೆಲ್ಲ ಧೂಳು ಹೊಡೆದು ಜತನವಾಗಿ ಕಾಪಿಟ್ಟಿದ್ದೇನೆ. 

ನನ್ನ ನೆನಪಿನ ಪುಟಗಳಲ್ಲಿ ಒಂದಿಷ್ಟು ಜಾಗ ಹುಡುಕುತ್ತೆನೆ
ನನ್ನ ಚಿತ್ರಗಳು ಇವಲ್ಲ ಎಂದೆನಿಸಿದಾಗಲೆಲ್ಲ
ನನ್ನದೆನ್ನುವ ಒಂದು ಚಿತ್ರ ಗೀಚಬಹುದೇನೋ ಎನ್ನುವ ಕಾತುರದಲ್ಲಿ

ನೆನಪುಗಳ ಹಂಗೋ ಏನೋ…
ನಾನು ಎಳೆದ ಗೆರೆಗಳು ಬರಿ ಗೆರೆಗಳಾಗಿಯೇ ಉಳಿಯುತ್ತವೆ
ಮತ್ತೆ ಸ್ಮೃತಿಪಟದಲ್ಲಿ ಹರಡಿಕೊಡಿರುವ
ಚಿತ್ರಗಳಲ್ಲಿ ನನ್ನನ್ನು ಹುಡುಕುತ್ತೇನೆ.
ಹುಡುಕುತ್ತಲೇ ಇರುತ್ತೇನೆ ಪ್ರತಿಕ್ಷಣವೂ.

‍ಲೇಖಕರು Admin

7 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading