ಬನ್ನಿ, ಕಾಫಿ ತಗೊಳ್ಳಿ!..

ಕೆ ಆರ್ ಉಮಾದೇವಿ ಉರಾಳ

ನಿವೃತ್ತ ಉಪನ್ಯಾಸಕಿ. ಹಲವಾರು ವರ್ಷಗಳಿಂದ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿವೆ. ಪ್ರಕಟಿತ ಕೃತಿಗಳು-‘ಮುಂಬೆಳಕಿನ ಮಿಂಚು’ ಹಾಗೂ ‘ಮಕ್ಕಳಿಗಿದು ಕಥಾ ಸಮಯ’

ಆಗಷ್ಟೇ ಭಟ್ಟಿ ಇಳಿಸಿದ ತಾಜಾ ಡಿಕಾಕ್ಷನ್, ತಾಜಾ ಹಾಲು, ತುಸುವೇ ಸಕ್ಕರೆ ಬೆರೆಸಿದ ಹೊಗೆಯಾಡುವ ಸ್ಟ್ರಾಂಗ್ ಕಾಫಿ ಕಪ್ ಕೈಲಿ ಹಿಡಿದಾಗಿನ ಮನಃಸ್ಥಿತಿ ಇದೆಯಲ್ಲ, ಅದೊಂದು ಬೇರೆಯದೇ ಅನುಭೂತಿ. ಬದುಕಿನ ಆಸ್ವಾದವೆಲ್ಲ ಆ ಕಾಫಿ ಕಪ್‌ನಲ್ಲಿ ಮಡುಗಟ್ಟಿದೆ. ಇದನ್ನು ಎಲ್ಲೆಂದರಲ್ಲಿ ಕುಳಿತು ಕುಡಿವಂತಿಲ್ಲ. ವೆರಾಂಡಾದ ಕಿಟಕಿ ಪಕ್ಕದ ಸೋಫಾವೇ ಆಗಬೇಕು. ನೀಲಿಯ ಆಕಾಶ, ದೂರದ ಗುಡ್ಡ ಬೆಟ್ಟಗಳು, ಮರಗಳು, ಹಕ್ಕಿಗಳ ಚಿಲಿಪಿಲಿ, ಮನೆಯಂಗಳದ ಗಿಡಗಳು, ಹೂಗಳು, ರಸ್ತೆಯಲ್ಲಿ ವಾಕಿಂಗ್‌ಗೆ ಹೋಗುತ್ತಿರುವವರು, ಇವನ್ನೆಲ್ಲ ಮನಸ್ಸಿನೊಳಗೆ ಇಳಿಬಿಟ್ಟುಕೊಳ್ಳುತ್ತಲೇ ಕಪ್‌ನಿಂದ ಒಂದೊಂದೇ ಗುಟುಕು ತುಟಿಗಳೆಡೆಯಿಂದ ನಾಲಗೆಯ ರಂಗಸ್ಥಳಕ್ಕೆ ಮೆಲ್ಲನೆ ಜಾರಬೇಕು. ಅಲ್ಲಿ ಅದು ನಲಿದು ನರ್ತಿಸಿ, ಮೆಲ್ಲ ಗಂಟಲೆಡೆಗಿನ ಗ್ರೀನ್ ರೂಂಗೆ ಸರಿದು ಸಾಗಿ ಜಠರ ಸೇರುವವರೆಗಿನ ಧನ್ಯತೆಯ ಭಾವ ಅನನ್ಯವಾದುದು. ಇದೊಂದು ಆರಾಧನಾ ಕ್ಷಣ.

ಈ ಕ್ಷಣದಲ್ಲಿ ಯಾವುದೇ ಜಂಜಾಟ, ಕಿರಿಕಿರಿ ಮನದಲ್ಲಿ ತಲೆಯೆತ್ತುವಂತಿಲ್ಲ. ಇಲ್ಲಿ ಆನಂದಾನುಭವಕ್ಕೆ ಮಾತ್ರ ಜಾಗ. ಅಂತೂ ಒಂದೊಂದೇ ಸಿಪ್ ನಿಧಾನವಾಗಿ ಹೀರುತ್ತಾ ಕಾಫಿ ಕಪ್ ಬರಿದಾಗಿಯಾಯ್ತು. ‘ನಾ ಹೋದರೇನಾಯ್ತು, ಇಗೋ, ನನ್ನ ನೆನಪು’ ಎಂಬಂತೆ ನಾಲಗೆಯ ಮೇಲೆ ನೆಲೆ ನಿಂತ ಕಾಫಿಯ ಸೊಗಡನ್ನು ಆಸ್ವಾದಿಸುವ ಸಂಭ್ರಮ ಮನಸ್ಸಿಗೆ. ಪಾಲಿಗೆ ಬಂದ ವರದಾನವಾದ ಇಂದಿನ ದಿನವನ್ನು ಒಳ್ಳೆಯ ಮನಸ್ಸು, ಮಾತು, ಕಾರ್ಯದಿಂದ ಸಂಪನ್ನಗೊಳಿಸಿಕೊಳ್ಳಲು ದಿನದ ಆರಂಭದಲ್ಲಿ ಸೊಗಸಾದ ಮುನ್ನುಡಿ ಬರೆದು ನಡೆಮಡಿ ಹಾಸಿಕೊಟ್ಟಿದೆ ಬೆಳಗಿನ ಮೊದಲ ಕಾಫಿ. ಆಹ್ಲಾದಮಯ ಶಾಂತ ಮನಸ್ಸು, ಸ್ವಚ್ಛ ಸುಂದರ ಪರಿಸರವು ವಸ್ತುವೊಂದರ ಅನುಭೋಗದ ಮೌಲ್ಯ ಹೆಚ್ಚಿಸಿ ಸಂತೃಪ್ತಿಯನ್ನೀಯುತ್ತದೆ ಎಂಬ ಪಾಠವನ್ನು ಹೇಳಿದೆ ಎದುರಿಗಿರುವ ಖಾಲಿಯಾದ ಕಾಫಿ ಕಪ್.

ಅದೂ ಬೇಕು ಇದೂ ಬೇಕು ಇನ್ನೊಂದೂ ಮತ್ತೊಂದೂ ಬೇಕೇಬೇಕು ಎಂಬ ಬೇಕುಬೇಕೆಂಬ ಜಪವ ನಿಲ್ಲಿಸಿ ಸಾಕುಸಾಕೆಂಬ ಜಪವ ಆರಂಭಿಸು ಎಂದು ಕೂಡ ಖಾಲಿ ಕಾಫಿ ಕಪ್ ಸಂದೇಶ ನೀಡುತ್ತಿದೆ. ಕಾಫಿ ಸಾಕೆಂಬ ಜಪವ ಅಳವಡಿಸಿಕೊಳ್ಳಲು ಮಾತ್ರ ನನಗೆ ವರ್ಷಗಳೇ ಬೇಕಾದವು. ಕಾಫಿಯ ಮಾಯೆಗೆ ಮನಸೋತು ಮತ್ತೆಮತ್ತೆ ಕುಡಿಯುತ್ತಿದ್ದವಳಿಗೆ ‘ಸದಾ ಕುಡಿವವನಾವನವನು, ರುಚಿಯನೆಂದೂ ಗ್ರಹಿಸನು’ ಎಂಬರ್ಥದ ಇಂಗ್ಲಿಷ್‌ನ ಗಾದೆ ನೆನಪಾಗುತ್ತಿರುತ್ತಿತ್ತು. ಮಿತಿಮೀರಿದ ಕಾಫಿ ಸೇವನೆ ಆರೋಗ್ಯಕ್ಕೆ ಸಂಚಕಾರ ತಂದರೆ ಎಂಬ ಚಿಂತೆ, ಕುಡಿದ ಸಂತಸಕ್ಕೆ ಚುಟುಕುಮುಳ್ಳಾಡಿಸುತ್ತಿತ್ತು. ಸಂಕ್ಷಿಪ್ತತೆಯಲ್ಲೇ ಸ್ವಾರಸ್ಯವಿರುವುದು ಎಂಬುದನ್ನು ಕಾಫಿಗಾಗಿ ಕಂಡುಕೊಳ್ಳಲು ಮಾತ್ರ ಸುದೀರ್ಘ ಕಾಲವೇ ಬೇಕಾಯ್ತು.

ಕಾಫಿಯೊಲವಿನ ಹೊರತಾಗಿಯೂ ಕಾಫಿ ಮೇಕರ್, ಪರ್ಕೊಲೇಟರ್ ಇಂಥವಕ್ಕೆ ಮಾತ್ರ ನನ್ನ ಮನೆಯಲ್ಲಿ ಜಾಗ ಬೇಡ ಎಂದು ನಿರ್ಧರಿಸಿದ್ದೆ. ‘ಎಳೆ ಎಂಬ ರಾಜನಿಗೆ ತುಳಿ ಎಂಬ ಮಂತ್ರಿ’ ಎಂಬಂತೆ ಇವು ನನ್ನ ಕಾಫಿ ಸೇವನೆಯನ್ನು ಮತ್ತಷ್ಟು ಹೆಚ್ಚಿಸಿಯಾವು ಎಂಬ ಅಳುಕು. ಇಂದಿಗೂ ಡಿಕಾಕ್ಷನ್ ಇಳಿಸಿಕೊಡುವುದು ನಾಲ್ಕು ದಶಕಗಳಿಗೂ ಹಿಂದಿನ ಅದೇ ಸ್ಟೀಲ್ ಕಾಫಿ ಫಿಲ್ಟರ್. ಇದು ಮಮತೆಯ ಅನುಬಂಧವೊಂದಕ್ಕೂ ಸಾಕ್ಷಿಯಾಗಿದೆ. ಎಪ್ಪತ್ತರ ದಶಕದ ಆರಂಭದಲ್ಲಿ ಶಿಕ್ಷಕಿಯಾಗಿ ವೃತ್ತಿ ಪ್ರಾರಂಭಿಸುವಾಗ ಒಂಬತ್ತು ಕಿ.ಮೀ. ದೂರದ ಊರಿಗೆ ಬೆಳಿಗ್ಗೆ ತಿಂಡಿ ತಿಂದು ಏಳರ ಬಸ್ಸಿಗೆ ಹೊರಡಬೇಕಿತ್ತು. ಏಳೂವರೆಗೆಲ್ಲಾ ಅಲ್ಲಿರುತ್ತಿದ್ದೆ. ಶಾಲೆ ಪ್ರಾರಂಭ ಹತ್ತೂವರೆಗೆ. ಅದುವರೆಗೆ ಸಮಯ ಕಳೆಯಲು ಆ ಊರಲ್ಲಿದ್ದ ನಮ್ಮ ಕೆಲವರು ಬಂಧುಗಳ ಮನೆಗೆ ಹೋಗಿರುತ್ತಿದ್ದೆ.

ದಿನವೂ ಬಸ್ಸಿಳಿದು ಹೋಗುತ್ತಿದ್ದ ಬಂಧುಗಳೊಬ್ಬರ ಮನೆಯೊಡತಿ ಇಂದ್ರತ್ತೆ ನನ್ನ ಕಾಫಿ ಪ್ರೀತಿಗಾಗಿ ಶಾಲೆಗೆ ಹೊರಡುವಾಗ ಮಂದಗಿನ ಎಮ್ಮೆ ಹಾಲಿನ ಗಟ್ಟಿ ಕಾಫಿ ಕೈಗಿಡುತ್ತಿದ್ದರು. ಆ ಊರಲ್ಲಿ ಎರಡು ವರ್ಷಗಳು ಕೆಲಸ ಮಾಡುತ್ತಲೇ ನಮ್ಮೂರಿಗೆ ತನ್ನಿಂತಾನೇ ಎಂಬಂತೆ ವರ್ಗವಾಯಿತು. ಅಲ್ಲಿಂದ ಹೊರಟು ಬರುವಾಗ ನನ್ನೊಲವಿಗನುಗುಣವಾಗಿರುತ್ತದೆ ಎಂದು ಅವರು ಕೊಟ್ಟ ಕಾಫಿ ಫಿಲ್ಟರನ್ನೇ ಇಂದಿಗೂ ಬಳಸುತ್ತಿರುವೆನೆಂದರೆ, ಇಂದಿನ ಜಮಾನಾದ ಜನರು ಮೂಗಿನ ಮೇಲೆ ಬೆರಳಿಟ್ಟಾರು. ವಿನಾಕಾರಣ ಮೂಲೆಗೆ ಸರಿಸುವುದೆಂದರೆ ಅದನ್ನು ನೀಡಿದವರ ಮಮತೆಯನ್ನು ಮುಕ್ಕಾಗಿಸಿದಂತಲ್ಲವೇ ಎಂಬುದು ನನ್ನ ಮನದಿಂಗಿತ.

ಕಾಫಿಯ ಘಮಲನ್ನು ಆಸ್ವಾದಿಸುತ್ತಲೇ ಬೆಳೆದ ಬಾಲ್ಯ ನನ್ನದು. ಪುಟ್ಟ ಪೇಟೆಯ ಊರಲ್ಲಿ ಅಂಗಡಿಯಿಟ್ಟಿದ್ದ ನಮ್ಮ ತಂದೆ ಕಾಫಿ ಪುಡಿ ವ್ಯಾಪಾರವನ್ನೂ ಜೊತೆಗೇ ಕೈಗೆತ್ತಿಕೊಂಡಾಗ ನಾಲ್ಕು ಕಾಲಿನ ಎತ್ತರದ ಕಬ್ಬಿಣದ ಸ್ಟ್ಯಾಂಡ್, ಸಿಲಿಂಡರಿನಾಕಾರದ ರೋಸ್ಟರ್, ದೊಡ್ಡ ಚಕ್ರ ಹಾಗೂ ಕೋನಾಕೃತಿಯ ಟಿನ್ ಹೊಂದಿದ್ದ ಆಳೆತ್ತರದ ಗ್ರೈಂಡರ್ ಮನೆಗೆ ಬಂದಿದ್ದವು. ರೋಸ್ಟರ್‌ಗೆ ಬೀಜ ತುಂಬಿ, ಸ್ಟ್ಯಾಂಡ್ ಮೇಲಿನ ಕಬ್ಬಿಣದ ಸರಳುಗಳ ಮೇಲೆ ನಿಗಿನಿಗಿ ಕೆಂಡದುಂಡೆಗಳನ್ನಿರಿಸಿ ರೋಸ್ಟರನ್ನು ತಿರುಗಿಸುತ್ತಾ ಬೀಜಗಳು ಹೊಂಬಣ್ಣಕ್ಕೆ ಬಂದಾಗ ಕೆಳಗೆ ಸುರಿಯಬೇಕಿತ್ತು. ಇವೆಲ್ಲದರ ನಿರ್ವಹಣೆ ಮನೆಯ ಆಪ್ತ ಸಹಾಯಕ ರಮೇಶನದು. ಅವನಿಗೆ ಬೀಜ ಹುರಿವಾಗ ಕಿಂಚಿತ್ತೂ ಹದ ತಪ್ಪಬಾರದೆಂಬುದರಿಂದಾಗಿ ಗಹನವಾದ ಹೊಣೆ ನಿರ್ವಹಿಸುತ್ತಿರುವ ಗಾಂಭೀರ್ಯ. ಹುರಿದಾಗ ಮನೆಯೆಲ್ಲಾ ಅಡರುತ್ತಿದ್ದ ಘಮಲು ಮೂಗಿನ ಹೊರಳೆಗಳನ್ನರಳಿಸುತ್ತಾ ಮನದಾಳದಲ್ಲಿ ಕಾಫಿ ಬಯಕೆಯ ಬೀಜ ಬಿತ್ತಿದ್ದವೇನೋ. ಅಪ್ಪ, ಕರಾರುವಾಕ್ಕಾದ ಸಮಯಕ್ಕೆ ಅಡುಗೆಮನೆಗೆ ಕಾಫಿಗಾಗಿ ಬರುತ್ತಿದ್ದರು.

ಈ ಹಿರಿಮಗಳ ಉಪಸ್ಥಿತಿ ಅಲ್ಲಿದ್ದಲ್ಲಿ ಇವಳಿಗೂ ಒಮ್ಮೊಮ್ಮೆ ಅಷ್ಟಿಷ್ಟು ಪಾಲು ಸಿಗುತ್ತಿದ್ದುದು ಕಾಫಿಯ ಬಂಧವನ್ನು ಬೆಸೆದಿದ್ದೀತು. ರಜೆಗೆ ಸೋದರಮಾವನ ಮನೆಗೆ ಹೋದಾಗ ಅಲ್ಲಿ ಗೋಡೆಗೆ ಅಳವಡಿಸಿದ್ದ ಕೈಮೆಷಿನ್‌ಗೆ ತೋಟದಲ್ಲಿ ಬೆಳೆದ ಕಾಫಿ ಬೀಜ ಇಷ್ಟಿಷ್ಟೇ ಹಾಕುತ್ತಾ ಪುಡಿ ಮಾಡುತ್ತಿದ್ದರು ದೊಡ್ಡಮ್ಮ. ತಲೆಯ ಮೇಲೆ ಸೆರಗು ಹೊದ್ದಿರುತ್ತಿದ್ದ ಅವರ ಶಾಂತವಾದ ದೊಡ್ಡ ಕಣ್ಣುಗಳು, ವಾತ್ಸಲ್ಯಭರಿತ ಹಸನ್ಮುಖ ಆಪ್ಯಾಯಮಾನವಾಗಿರುತ್ತಿತ್ತು.

ಬಾಲ್ಯದಲ್ಲಿ ಊರವರು ಆತ್ಮೀಯರು ಎಂದು ಒಬ್ಬರಿನ್ನೊಬ್ಬರ ಮನೆಗಳಿಗೆ ಹೋಗಿಬರುವುದು ಸಾಮಾನ್ಯದ ಸಂಗತಿ. ಮನೆಯಲ್ಲಿ ಬೆಳೆದ ಹೂವನ್ನೋ ತರಕಾರಿಯನ್ನೋ ಕೊಟ್ಟುಬರುವುದಕ್ಕಿರಬಹುದು ಅಥವಾ ಯಾವುದೋ ನಾರುಬೇರು ಸೊಪ್ಪುಸದೆ ತರಲು ಇರಬಹುದು ಅಥವಾ ಸುಮ್ಮನೇ ಬೇಜಾರು ಕಳೆಯಲೆಂದೂ ಇರಬಹುದು. ಭೇಟಿಗೆ ಪೂರ್ವ ಪೀಠಿಕೆಯ ಅಗತ್ಯವಿರದ ದಿನಗಳವು. ಹಾಗೆ ಹೋದಾಗ ಆತ್ಮೀಯರ ಮನೆಗಳಲ್ಲಿ ಕೊಡುತ್ತಿದ್ದ ಅರೆ ಬೆಚ್ಚಗಿನ ಬೆಲ್ಲದ ನೀರಿನ ಲೈಟ್ ಕಾಫಿಯಲ್ಲಿ ಬಿಸಿಯ ಲೋಪ ಕಂಡುಬರುತ್ತಿದ್ದರೂ, ಅದರೊಂದಿಗೆ ಬೆರೆತಿರುತ್ತಿದ್ದ ಆ ಆತ್ಮೀಯತೆಯ ಮುಂದೆ ಆ ಲೋಪ ಗೌಣವಾಗಿ ಲೋಟ ಬರಿದಾಗುತ್ತಿತ್ತು. ಆದರೆ ನಾವು ಬೆಳೆದಂತೆ? ಊಂಹೂ.

ಆ ಸುಖಾಸುಮ್ಮನೆಯ ಭೇಟಿಗಳು ಮಾಯವಾದಂತೇ ನಮಗೂ ತಾಜಾ ಕಾಫಿಯೇ ಸದಾ ಬೇಕು. ಯಾರ ಮನೆಗೆ ಹೋದರೂ ಅಲ್ಲಿ ಹಳೆಯ ಡಿಕಾಕ್ಷನ್ನಿನ ಕಾಫಿ ಬರುತ್ತದೆಂದು ‘ಕಾಫಿ ಬೇಡ, ಅರ್ಧ ಕಪ್ ಹಾಲು ಬಿಸ್ನೀರು ಕೊಡಿ’ ಎನ್ನುವುದು. ಹಾಗೆ ಒಬ್ಬರ ಮನೆಯಲ್ಲಿ ಇದೇ ಡೈಲಾಗ್ ಉದುರಿಸಿದೆನಾದರೂ ಅವರು ಒತ್ತಾಯಿಸಿ ಕಾಫಿ ತಂದಿಟ್ಟರು. ಆಹಾ! ಅದರ ಅದ್ಭುತ ಘಮವೇ! ಹಾಲು ಡಿಕಾಕ್ಷನ್ ಸಕ್ಕರೆ ಬಿಸಿ ತಾಳಮೇಳವಾಗಿ ಬೆರೆತ ಅದರ ರುಚಿಯೇ! ‘ಕಾಫಿ ಪ್ರಿಯೆ ನಿನಗೆ ಇಷ್ಟು ಚೆನ್ನಾಗಿ ಕಾಫಿ ಮಾಡಲು ಬರುವುದೇ’ ಎಂದು ಆ ಕಾಫಿ ಕಪ್ ಹಂಗಿಸಿತು. ಇನ್ನು ಮುಂದೆ ಇವರ ಮನೆಗೆ ಬಂದರೆ ‘ಕಾಫಿ ಬೇಡ’ ಎಂಬ ಬಡಿವಾರ ಇವರ ಮನೆಯಲ್ಲಿ ಬೇಡ ಎಂದುಕೊಂಡೆ.

ಮಲೆನಾಡಿನ ಮನೆಗಳಲ್ಲಿ ದಿನವಿಡೀ ಕಾಫಿ ಸದಾ ಸಿದ್ಧವಾಗಿರುವುದೊಂದು ಸಾಮಾನ್ಯ ಸಂಗತಿ. ಮನೆಗೆ ಯಾರೇ ಎಷ್ಟೊತ್ತಿಗೇ ಬರಲಿ, ಅವರಿಗೆ ಕಾಫಿ ಕುಡಿಸುವುದು ಕಡ್ಡಾಯ. ಸ್ಟ್ರಾಂಗು ಲೈಟು ಲೆಸ್ಸು ಪ್ಲಸ್ಸು ಎಂದು ಎಷ್ಟು ಜನರೋ ಅಷ್ಟು ಬಗೆಯ ಕಾಫಿ ಏಕಕಾಲದಲ್ಲಿ ಕೊಡಬಲ್ಲ ಪರಿಣತಿ ಗೃಹಿಣಿಯರಿಗೆ. ಅಂದಿನ ದಿನಗಳಲ್ಲಿ ನನ್ನ ಅಮ್ಮನ ಕುರಿತು ಸಮೀಪದ ಬಂಧುಗಳು ಹೇಳುತ್ತಿದ್ದುದಿತ್ತು, ‘ಸರಸ್ವತತ್ತಿಗೆ ಅರ್ಧರಾತ್ರಿಯಲ್ಲಿ ನಿದ್ದೆಯಿಂದೆಬ್ಬಿಸಿ ಹತ್ತು ಜನ ಊಟಕ್ಕಿದ್ದಾರೆ ಎಂದರೂ ಅರ್ಧ ಗಂಟೆಯಲ್ಲಿ ಅಡುಗೆ ಮಾಡಿ ಬಡಿಸಬಲ್ಲ ನಿಪುಣೆ’ ಎಂದು. ಇಂತಹ ಖ್ಯಾತಿಯ ಅಮ್ಮನಿಗೆ ಕಾಫಿ ಸರಬರಾಜಿನದ್ಯಾವ ಲೆಕ್ಕ. ಕಂಚಿನ ತಪ್ಪಲೆಯಲ್ಲಿ ಕುದಿಸಿದ ಬೆಲ್ಲದ ನೀರನ್ನು ಕಾಫಿ ಪುಡಿ ಹಾಕಿದ ಸ್ಟೀಲಿನ ಕೌಳಿಗೆಗೆ ಸುರಿದು, ಒಲೆ ಹತ್ತಿರ ಇರಿಸಿರುತ್ತಿದ್ದುದು ಸದಾ ಕಾಫಿ ಸಮಾರಾಧನೆಗೆ ಸಿದ್ಧವಿರುತ್ತಿತ್ತು. ತಮ್ಮ ಎಂಬತ್ತಾರರ ಈ ಇಳಿ ವಯಸ್ಸಲ್ಲೂ ಬಂದವರಿಗೆ ಕಾಫಿ ಕೊಡಬೇಕೆಂಬ ಅಂದಿನದೇ ತಹತಹ ಅಮ್ಮನಿಗೆ ಇಂದಿಗೂ.

ನಮ್ಮ ಹಿರಿಯ ಗೌರವಾನ್ವಿತ ಬಂಧುವೊಬ್ಬರು ಮನೆಗೆ ಬಂದಾಗ ನಾನು ಕಾಫಿ ಮಾಡಲು ಹೊರಡುತ್ತಿದ್ದಂತೆ ‘ಹಾಲು ತುಂಬ ಹಾಕಬೇಡ, ಕಮ್ಮಿ ಹಾಕು’ ಎಂದು ಪ್ರತಿ ಬಾರಿಯೂ ಎಚ್ಚರಿಸುತ್ತಿದ್ದುದು ಆಗ ನನಗೆ ವಿಚಿತ್ರವೆನ್ನಿಸುತ್ತಿತ್ತು. ವಿದೇಶ ಪ್ರವಾಸಗಳಲ್ಲಿ ಬರಿಯ ಡಿಕಾಕ್ಷನ್ ಕುಡಿಯುವುದು, ಎಸ್‌ಪ್ರೆಸ್ಸೋ ಕಾಫಿಗೆ ಹಾಲನ್ನು ಹದನಾಗಿ ಬೆರೆಸುವ ವಿಧಾನ ನೋಡುವಾಗ ಈ ಬಂಧು ನೆನಪಾಗಿದ್ದರು. ಇನ್ನೊಬ್ಬ ಹಿರಿಯ ಆತ್ಮೀಯರು ಸ್ವಾತಂತ್ರ್ಯ ಹೋರಾಟಗಾರರು, ಪತ್ರಿಕಾ ಕ್ಷೇತ್ರದ ಸಾಧಕರಾಗಿ ಸಮಾಜವಾದಿ ಸಿದ್ಧಾಂತಕ್ಕೆ ಒಲಿದವರು ಆಗಾಗ ಮನೆಗೆ ಬರುವುದುಂಟು.

ನೇರ ನಡೆನುಡಿಯ ಇವರ ಬಳಿ ಒಣ ಶಿಷ್ಟಾಚಾರ, ಕೃತಕ ಔಪಚಾರಿಕತೆ ಹತ್ತಿರವೂ ಸುಳಿಯದು. ಇವರು ಬಂದಾಗ ನಾನು ಅಡುಗೆ ಕೋಣೆಯಲ್ಲಿದ್ದರೆ ಬಂದವರೇ ಬಾಗಿಲಲ್ಲಿ ನಿಂತು ‘ನೀನು ನನಗೆ ಬೇರೇನೂ ಕೊಡುವುದು ಬೇಡ, ಉದ್ದ ಲೋಟ ತುಂಬ ಕಾಫಿ ಕೊಡು, ಸ್ಟ್ರಾಂಗ್ ಇರಲಿʼ ಎಂದು ಘೋಷಿಸುತ್ತಾರೆ. ಬಿಸಿಬಿಸಿ ಸ್ಟ್ರಾಂಗ್ ಕಾಫಿ ಕೊಟ್ಟಾಗ ಪರಮ ಪ್ರೀತಿಯಿಂದ ಕುಡಿದು ಸಂತೃಪ್ತಿ ವ್ಯಕ್ತಪಡಿಸುತ್ತಿದ್ದರೆ ಕಾಫಿ ಮಾಡಿದ ಕೊಟ್ಟ ಕೈಗಳಿಗೆ ಸಾರ್ಥಕತೆಯ ಭಾವ.

ಚಳಿಯಿದ್ದಾಗ ಮಳೆಯಿದ್ದಾಗ ಬೇಸರವಾದಾಗ ಸಂತಸವಾದಾಗ ಎಂದೆಲ್ಲಾ ಸದಾ ಒಡನಾಡಿಯಾಗಿದ್ದ ಈ ಕಾಫಿಯ ಕುರಿತು ಚಿಂತೆ ಪ್ರಾರಂಭವಾಗಿದ್ದು ನಿವೃತ್ತಿಯ ಸಮಯದಲ್ಲಿ. ಗ್ರಾಮೀಣ ಭಾಗದ ಕಾಲೇಜಿನಲ್ಲಿ ಅಲ್ಲಿ ಇದ್ದಷ್ಟು ಸಮಯ ಕಾಫಿ ಕುಡಿತಕ್ಕೆ ಕಡಿತ. ಇನ್ನು ಮುಂದೆ ದಿನವಿಡೀ ಮನೆಯಲ್ಲಿರುವಾಗ ನನ್ನ ಕಾಫಿ ಸೇವನೆ ಮಿತಿಮೀರಿ ಇದುವರೆಗಿನ ಆರೋಗ್ಯದ ಭದ್ರ ಕೋಟೆಯಲ್ಲಿ ಬಿರುಕು ಬಿಟ್ಟರೆ ಎಂಬ ಭಯ ಪ್ರಾರಂಭವಾಯಿತು. ಹಿಂದೆಲ್ಲಾ ಪತಿ ಅದೆಷ್ಟೋ ಬಾರಿ ನಿನಗೆ ಬಿಸಿಬಿಸಿ ಕುಡಿಯಬೇಕೆಂದಿದ್ದರೆ ಹಾಲೋ ಹಾರ್ಲಿಕ್ಸೋ ಕುಡಿ, ಕಾಫಿ ಒಳ್ಳೆಯದಲ್ಲ ಎಂದು ಕಳಕಳಿಯಿಂದ ಹೇಳಿದ್ದರು. ಮಕ್ಕಳೂ ಸೂಕ್ಷ್ಮವಾಗಿ ಹೇಳಿಯಾಗಿತ್ತು. ತಲೆ ಗಟ್ಟಿಯಿದೆಯೆಂದು ಕಲ್ಲಿಗೆ ಕುಟ್ಟಬಾರದು, ಕಾಫಿ ಕಮ್ಮಿ ಮಾಡೆಂದು ಗೆಳತಿ ಆದೇಶಿಸಿದ್ದಾಗಿತ್ತು. ಇವೆಲ್ಲದಕ್ಕೂ ಕಿವಿಗೊಡುವ ಸಮಯ ಇದೇ ನಿವೃತ್ತಳಾದ ಸಮಯ ಎಂದು ಗಟ್ಟಿ ಮನಸ್ಸು ಮಾಡಿದೆ.

ಮೊದಲನೆಯದಾಗಿ ಕಾಫಿ ಕುಡಿಯಲು ಪುಟ್ಟ ಗಾತ್ರದ ಲೋಟಗಳನ್ನು ಸಿದ್ಧ ಮಾಡಿಕೊಂಡೆ. ಮುಂದಿನ ಹಂತವಾಗಿ ಕಾಫಿ ಸೇವನೆಗೆ ಕಾಲೇಜಿನ ತರಗತಿಗಳಂತೆ ನಿರ್ದಿಷ್ಟವಾದ ಸಮಯದ, ಕಾಫಿ ಪ್ರಮಾಣದ ವೇಳಾಪಟ್ಟಿ ಹಾಕಿಕೊಂಡೆ. ನಿವೃತ್ತಿಯಿಂದಾಗಿ ವಿದ್ಯಾರ್ಥಿಗಳ ಒಡನಾಟ ತಪ್ಪಿತಲ್ಲ ಎಂಬ ಬೇಸರವೂ ಬಾಧಿಸುತ್ತಿತ್ತು. ಈಗ ಕಾಲೇಜಿನ ಕ್ಲಾಸಿನ ಟೈಂಟೇಬಲ್ ತಪ್ಪಿದರೇನಂತೆ, ಮನೆಯಲ್ಲಿ ಕಾಫಿಯ ಟೈಂಟೇಬಲ್ ಸಿದ್ಧವಾಗಿತ್ತು. ಇಷ್ಟಕ್ಕೆ ಕಾಫಿ ನನ್ನ ನಿಯಂತ್ರಣಕ್ಕೆ ಬಂದು ಮತ್ತಷ್ಟು ಅರ್ಥಗಳನ್ನು ಹೊಳೆಯಿಸಿತು.

ಕಾಫಿಯ ಸಮುದ್ರದಲ್ಲಿ ಮುಳುಗೇಳುತ್ತಿದ್ದವಳಿಗೆ ದೊರೆತ ಕೆಲವಾದರೂ ಮುತ್ತುರತ್ನಗಳ ಕುರಿತು ಹೇಳದಿದ್ದರಾದೀತೇ. ನನ್ನ ಅತ್ತೆಯದು ಅಡುಗೆ ತಿಂಡಿ ತೀರ್ಥಗಳ ತಯಾರಿಯಲ್ಲಿ ಮಾಂತ್ರಿಕ ಕೈ. ಆದರೆ ಅವರು ಕೊಡುತ್ತಿದ್ದ ಕಾಫಿ ಮಾತ್ರ ಲೈಟಾಗಿರುತ್ತಿದ್ದುದರಿಂದ ಅದು ಕುಡಿದಂತಾಗುತ್ತಿರಲಿಲ್ಲ. ಪತಿಗೆ ಯಾವುದೂ ಹೀಗೆಯೇ ಆಗಬೇಕೆಂದಿಲ್ಲ. ಇಲ್ಲದ್ದನ್ನು ಬಯಸುವವರಲ್ಲ. ಸಣ್ಣಪುಟ್ಟದ್ದಕ್ಕೆ ತಲೆಹಾಕುವವರಲ್ಲ. ನನಗೆ ಮಾತ್ರ ಆಡುವಂತಿಲ್ಲ ಅನುಭವಿಸುವಂತಿಲ್ಲದ ಪರಿಸ್ಥಿತಿ.

ಎರಡನೆಯ ಹೆರಿಗೆ ಸಂದರ್ಭದಲ್ಲಿ ಮನೆಯಲ್ಲಿ ಅತ್ತೆ ಇದ್ದರು. ಬೇನೆ ಪ್ರಾರಂಭವಾಗಿ ಬೆಳಗಿನ ನಾಲ್ಕು ಗಂಟೆಗೆ ಆಸ್ಪತ್ರೆಗೆ ಹೊರಡಬೇಕಿತ್ತು. ಸ್ನಾನಕ್ಕೆ ಹೊರಟಾಗ ಅಳುಕು ಬದಿಗೊತ್ತಿ ಅತ್ತೆಗೆ ಹೇಳಿದೆ, ‘ನನಗೆ ಸ್ಟ್ರಾಂಗಾದ ಬಿಸಿ ಕಾಫಿ ಬೇಕು.’ ಸ್ನಾನ ಮಾಡಿ ಬಂದ ನನಗೆ ಅತ್ತೆ ಕೈಗಿತ್ತ ಹೊಗೆಯಾಡುವ ಕಾಫಿ ತುಟಿಗಿಟ್ಟಾಗ, ಸೊಗಸಾದ ಸ್ವಾದದಿಂದಾಗಿನ ಆಶ್ಚರ್ಯ ಆನಂದ ಈಗಲೂ ಅನುಭವಕ್ಕೆ ಬರುತ್ತಿದೆ. ಮತ್ತೊಮ್ಮೆ ಆಗಷ್ಟೇ ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದೆ. ತಕ್ಷಣವೇ ನನ್ನನ್ನು ನೋಡಲು ಬಂದಿದ್ದ ಸಹೋದ್ಯೋಗಿ ಸೋದರಿ ನನಗೆ ತರಿಸಿಕೊಟ್ಟ ಕಾಫಿ ತನ್ನಲ್ಲಿ ಬೆರೆತ ಪ್ರೀತಿಯಿಂದಾಗಿ ನನ್ನ ಅರ್ಧ ನೋವನ್ನು ಕಡಿಮೆ ಮಾಡಿತ್ತು.

ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಪ್ರಬಂಧ ಮಂಡಿಸಬೇಕಿದ್ದಾಗ, ಮೊದಲು ನೀವೊಂದು ಕಾಫಿ ಕುಡಿದುಬಿಡಿ ಎಂದು ಹಳೆಯ ಶಿಷ್ಯ ಕುಡಿಸಿದ್ದ ಕಾಫಿ ಮರೆಯಲಾಗದ್ದು. ವಿದೇಶ ಪ್ರವಾಸ ಮುಗಿಸಿ ಹಿಂದಿರುಗಿದಾಗ ಮನೆಗೆ ಕರೆದೊಯ್ಯಲು ಪತಿಯೊಂದಿಗೆ ಏರ್‌ಪೋರ್ಟ್ ತಮ್ಮ ಕಾರಲ್ಲಿ ಬಂದಿದ್ದ ಸೋದರಿ ಸುಧಾ, ಕಾಫಿ ಪ್ರಿಯೆ ನಾನು ಮನೆಯ ಕಾಫಿಗೆ ಹಪಹಪಿಸುತ್ತಿರುತ್ತೇನೆಂದು ಫ್ಲಾಸ್ಕ್ ತುಂಬ ತಂದಿದ್ದ ಕಾಫಿಯ ಸ್ವಾದ ಅವಳ ಪ್ರೀತಿಯಿಂದಾಗಿ ಅವಳ ಹೆಸರಿನಂತೆಯೇ ಅಮೃತೋಪಮವೆನಿಸಿತ್ತು. ಕಾಫಿ ಕಡಿತಗೊಳಿಸೆಂದು ಕಾಳಜಿ ತೋರುವ ಪತಿ, ಪ್ರವಾಸದಲ್ಲಿ ಒಳ್ಳೆಯ ಕಾಫಿ ಸಿಕ್ಕರೆ ಇನ್ನೊಂದು ಕಪ್ ಬೇಕಿದ್ದರೆ ಕುಡಿ ಎನ್ನುವಾಗ ಮನ ಆರ್ದ್ರವಾಗುತ್ತದೆ.

ಕೆಲವೊಂದು ಪ್ರವಾಸಗಳಲ್ಲಿ ಕಾಫಿ ಸೇವನೆಗೆ ಕುತ್ತು ಬಂದದ್ದಿದೆ. ಮೂರು ದಶಕಗಳ ಹಿಂದಿನ ಉತ್ತರ ಭಾರತ ಪ್ರವಾಸದಲ್ಲಿ ಸಿಗುತ್ತಿದ್ದುದು ಬರಿಯ ಟೀ. ಕಾಶಿಯ ಓಣಿಯೊಂದರಲ್ಲಿ ಅತಿ ರುಚಿಕರವಾದ ಕಾಫಿ ಕುಡಿಯಲು ಸಿಕ್ಕಿ ನಮ್ಮ ಕಾಫಿಯ ಬರ ನೀಗಿತ್ತು. ಶಿವರಾಮ ಕಾರಂತರೇನೋ ‘ಕಾಶಿ ಸುತ್ತಿದೆವಯ್ಯ, ಕಾಶಿ ಪೀತಾಂಬರವ ಕೊಂಡೆವಯ್ಯ, ಕಾಫಿ ಕೊಡದಿಹ ಕಾಶಿ ಬಲು ಘಾಸಿ ಕಾಣಯ್ಯ’ ಎಂದು ನಿಂದಿಸಿರಬಹುದಾದರೂ ನಮಗೆ ಮಾತ್ರ ಕಾಶಿಯ ಕಾಫಿ ಖುಷಿ ಕೊಟ್ಟಿತ್ತು.

ಯೂರೋಪ್ ಪ್ರವಾಸದ ಕೊನೆಯ ದಿನ ರೋಂನ ಹೋಟೆಲ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಹೊರಟ ಸಂದರ್ಭದಲ್ಲಿ ಕುಡಿದ ಕಾಫಿಯೂ ರೋಮಾಂಚನಕಾರಿ. ನನ್ನ ಬಳಿ ಉಳಿದಿದ್ದ ಯೂರೋ ನಾಣ್ಯಗಳನ್ನ ಕಾಫಿ ಮೆಷಿನ್‌ಗೆ ಹಾಕಿ ಕಾಫಿ ಕುಡಿಯೋಣ ಎಂದು ಹೋಟೆಲ್‌ನ ಸ್ವಾಗತಕಾರಿಣಿಗೆ ‘ಕಾಫಿ ಮೆಷಿನ್ ಎಲ್ಲಿದೆ?’ ಎಂದೆ. ‘ನಿಮಗೆ ಕಾಫಿ ಬೇಕು ತಾನೇ. ಮೇಲಿನ ಡೈನಿಂಗ್ ರೂಮಿಗೆ ಹೋಗಿ ಕುಡಿದು ಬನ್ನಿ’ ಎಂದಳು. ಮೇಲೆ ಹೋದಾಗ ಅದಾಗಲೇ ಫೋನಿಂದ ಮಾಹಿತಿ ಪಡೆದಿದ್ದ ತರುಣ ಎರಡು ಕಪ್‌ಗಳಲ್ಲಿ ನಮ್ಮಿಬ್ಬರಿಗೂ ತಂದಿತ್ತ ಅದ್ಭುತ ರುಚಿಯ ಕಾಫಿ ಸಂಸ್ಕೃತಿ ಸಂಪನ್ನ ರೋಮಿನ ಮಲೆನಾಡ ಆತಿಥ್ಯದಂತೆನಿಸಿತು.

ಚೀನಾದ ಗ್ಯುಲಿನ್‌ನಿಂದ ಬೀಜಿಂಗ್‌ಗೆ ಸುದೀರ್ಘ ಬುಲೆಟ್ ಟ್ರೈನ್ ಯಾನ ಇದ್ದಾಗ ಸಂಜೆ ನನ್ನ ಮನಸ್ಸು ಕಾಫಿಗಾಗಿ ಚಡಪಡಿಸುತ್ತಿತ್ತು. ಟೀ ಸಾಮ್ರಾಜ್ಯದ ಚೀನಾ ಪ್ರವಾಸದಲ್ಲಿ ನಮಗೆ ಕಾಫಿಗೆ ಟೋಪಿ. ಸ್ಟಾರ್‌ಬಕ್ಸ್ ಕಾಫಿ ಕೂಡ ಅರೆಬೆಚ್ಚಗಿತ್ತು. ಇಲ್ಲಿ ನಮ್ಮ ತಂಡದ ಮಹಿಳೆಯರು ಟ್ರೈನಿನಲ್ಲಿ ಸಿಗುವ ಕುಡಿವ ಕಡು ಸುಡು ನೀರು ಬಳಸಿ ಸಿದ್ಧ ಮಾಡಿದ ಕಾಫಿ ನನ್ನ ಮುಂದೆ ಹಿಡಿದಾಗ ಬದುಕಿದೆಯಾ ಬಡಜೀವವೇ ಎನಿಸಿತ್ತು. ಯೂರೋಪ್ ದೇಶಗಳಲ್ಲಿ ಸೊಗಸಾದ ಕಾಫಿ. ಸ್ಕಾಂಡಿನೇವಿಯಾ ದೇಶಗಳಲ್ಲಿ ತಕ್ಕಮಟ್ಟಿಗೆ ಚೆನ್ನಾಗಿರುವ ಕಾಫಿ. ಪ್ರವಾಸದ ವಿಭಿನ್ನ ನೋಟಗಳಂತೇ ಕಾಫಿಯ ಕೆಫೆಲಾತ್ತೆ, ಕ್ಯಾಪುಚಿನೋ, ಎಸ್‌ಪ್ರೆಸ್ಸೋ ಕಾಫಿಗೆ ಸ್ವಲ್ಪವೇ ಹಾಲು ಬೆರೆಸಿ ತಾಜಾ ಘಮವನ್ನಾಸ್ವಾದಿಸುತ್ತಾ ಕುಡಿವುದು ಮುಂತಾದ ವೈವಿಧ್ಯಗಳೂ ಮುದ ನೀಡಿವೆ.

ನಮ್ಮೆಲ್ಲರ ಭಾವನಾ ಲೋಕದೊಂದಿಗೆ ಅವಿನಾಭಾವದ ಸಂಗಾತಿಯಾಗಿರುವ ಈ ಕಾಫಿ ನಮ್ಮ ಸಂತೋಷದಲ್ಲಿ ದುಃಖದಲ್ಲಿ ಬಾಂಧವ್ಯದಲ್ಲಿ ಬೇಸರದಲ್ಲಿ ಎಂತೋ, ಉತ್ಸಾಹದಲ್ಲೂ ಅಂತೇ ಭಾಗಿಯಾಗುತ್ತಾ ‘ನಿಮ್ಮ ಭಾವಕೋಶಕ್ಕೆ ಮೆರುಗೀಯಲು ನಾನಿಲ್ಲವೇ’ ಎನ್ನುವಾಗ ಬದುಕಿನ ಭಾಗ್ಯಗಳಲ್ಲಿ ಕಾಫಿಯೂ ಒಂದಲ್ಲವೇ ಎನಿಸದಿರದು. ಎಷ್ಟೇ ಕಾಫಿ ಸೇವನೆ ನಿಯಂತ್ರಿಸಿಕೊಂಡಿರುವೆ, ಈಗದು ನನ್ನ ಕೈಯ್ಯಾಳು ಎಂದೆಲ್ಲಾ ಬೀಗಿದರೂ, ಅನುದಿನದ ಸಂಗಾತಿ ಕಾಫಿ ‘ನಾನೆಂದರೆ, ನಾನು ನಾನೇ’ ಎನ್ನುತ್ತಾ ನನ್ನೆಡೆ ಹೆಮ್ಮೆಯ ನಗು ಬೀರುವಾಗ ನಾನು ಕೂಡ ತುಸುವಾದರೂ ಹುಸಿನಗದೆ ನಿರ್ವಾಹವಿಲ್ಲ. ಅಂದಹಾಗೆ, ಅಕ್ಟೋಬರ್ ಒಂದು ಅಂತಾರಾಷ್ಟ್ರೀಯ ಕಾಫಿ ದಿನ. ತನ್ನದೇ ಪರಂಪರೆ ಹೊಂದಿದ್ದು, ದೇಶವಿದೇಶಗಳಲ್ಲೂ ಜೀವನದ ಸುಂದರ ಅನುಭೂತಿಗಳಲ್ಲಿ ಮೇಲ್ಮಟ್ಟದ ಪ್ರಾಧಾನ್ಯತೆ ಹೊಂದಿರುವ ಪೇಯ ಈ ಕಾಫಿಗೆ ಜೈ ಎನ್ನಲೇ ಬೇಕು.

‍ಲೇಖಕರು Admin

November 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: