ಬಾಳಿ ಬದುಕಲಿ ನನ್ನ ಕನ್ನಡ…

‘ಬಾಲ ಒಂದಿಲ್ಲ ಅಷ್ಟೇ…’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.

ಮಕ್ಕಳ ಕೇಂದ್ರಿತ ಪುಸ್ತಕಗಳ ಪ್ರತಿಷ್ಠಿತ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ.

‘ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ.

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ ಎಂದು ಮಾತು ಸೇರಿಸುತ್ತಾರೆ.  ಪ್ರತೀ ಗುರುವಾರ ತಮ್ಮನ್ನು ಕಾಡಿದ ಪುಸ್ತಕಗಳನ್ನು, ಪಾತ್ರಗಳನ್ನು ನಮ್ಮ ಎದುರು ನಿಲ್ಲಿಸಲಿದ್ದಾರೆ.

‘ಬಾಜಿರಾವ್ ಮಸ್ತಾನಿ’ ಸಿನೆಮಾದ ಹಾಡೊಂದರಲ್ಲಿ ‘ತುಜ್ಹೇ ಯಾದ್ ಕರ್ ಲಿಯಾ ಹೈ ಆಯತ್ ಕಿ ತರಹ್’ ಎನ್ನುವ ಸಾಲೊಂದು ಬರುತ್ತೆ. ಕುರಾನ್ ನಲ್ಲಿ ಬರುವ ಪದ್ಯಗಳನ್ನು ‘ಆಯತ್’ ಎನ್ನುತ್ತಾರೆ. ಹಿಂದಿಯನ್ನು ಪಠ್ಯವನ್ನಾಗಿ ಮಾತ್ರ ಓದಿದ ನನ್ನ ವಲಯದ ಅನೇಕರು ಇದನ್ನು ‘ಆಯತ’ ಎಂದೇ ಹಾಡಿಕೊಂಡು ಓಡಾಡಿದರು.

ಎಂಭತ್ತರ ದಶಕದ ಅನೇಕ ಕತೆ-ಕಾದಂಬರಿ-ಕವಿತೆಗಳಲ್ಲಿ ಪದೇ ಪದೇ ಸುಳಿದು, ಎಷ್ಟು ಚೆಂದ ಅನಿಸಿದ ಸಾಲು: “ಒಂದು ಸಂಬಂಧ ಅಥವಾ ಪರಿಸ್ಥಿತಿ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಅದಕ್ಕೊಂದು ಸುಂದರವಾದ ತಿರುವು ಕೊಟ್ಟು ಅದನ್ನು ಅಲ್ಲೇ ಬಿಟ್ಟುಬಿಡುವುದು,” ಇದು ಸಾಹಿರ್ ಲುಧಿಯಾನ್ವಿ ಅವರ ಕವಿತೆಯೊಂದರ ಸಾಲಿನ ಭಾವಾನುವಾದ. ಮೂಲ ಎಳೆಯನ್ನು ಹಾಗ್ಹಾಗೆ ಹಿಡಿದಿಟ್ಟವರಿಗೆ ನಮನಗಳು.

ಮೊನ್ನೆ ಅನುವಾದವೊಂದನ್ನು ಓದುತ್ತಿದ್ದೆ, ಅದರಲ್ಲಿ ಉಪಪ್ರಜ್ಞೆ ಎನ್ನುವ ಪದವೊಂದನ್ನು ಬಳಸಿದ್ದರು. ಏನಿರಬಹುದು ಇದು ಎಂದು ಹುಡುಕಿದಾಗ ಗೊತ್ತಾಯಿತು. ಅದು, Subconscious ಪದದ ಅನುವಾದವೆಂದು. ‘ಥಟ್ ಅಂತ ಹೇಳಿ’ ಶೈಲಿಯಲ್ಲಿ ಅನುವಾದಕರಿಗೆ ಅಭಿನಂದನೆಗಳು!

ಇಂಗ್ಲಿಷಿನ ‘A Forger’s Life’ ಕನ್ನಡದಲ್ಲಿ ‘ಇದು ಬಿಚ್ಚುಗತ್ತಿಯ ಭಂಟನ ಕಥೆಯಲ್ಲ’ ಆಗಿದ್ದು ‘A Jar of Relish – ಒಂದು ಜಾಡಿ ಗೊಜ್ಜು!’ ‘ವಿತ್ ನೋ ರಿಗ್ರೆಟ್ಸ್‌ – ನೆನಪು ಕಹಿಯಲ್ಲ’ ಎನ್ನುವುದಕ್ಕಿಂತ ಚೆಂದವಾಗಿ ಇನ್ನು ಹೇಗೆ ಹೇಳಲು ಸಾಧ್ಯ?

ಓದುತ್ತಿದ್ದಂತೆ “ಎಷ್ಟು ಚೆನ್ನ…” ಅನಿಸುವಂಥ ಈ ಭಾವ ಅನುಭವಿಸಲಾದರೂ ಬೇರೆ ಭಾಷೆ ಕಲಿಯುವಂತೆ ಪ್ರೇರೇಪಿಸಿದ ಕನ್ನಡಕ್ಕೆ ವಂದೇ…

ಯಾವತ್ತು ನಾವು ಭಾಷೆಗೆ ಮಡಿವಂತಿಕೆ ಆರೋಪಿಸಿ, ಮಾತೃಭಾಷೆ ಬಿಟ್ಟು ಬೇರೆ ಭಾಷೆ ಬೇಡ ಎಂದು ಒಂದು ವೃತ್ತದೊಳಗೆ ನಿಲ್ಲುತ್ತೇವೆಯೋ ಅಂದು ಈ ಯಾವುದೂ ನಮ್ಮ ಅಂತಃಪ್ರಜ್ಞೆಗೆ (ಉಪಪ್ರಜ್ಞೆ ಅಲ್ಲ) ನಿಲುಕುವುದಿಲ್ಲ.

‘ತತ್ತ್ವಜ್ಞಾನಿಯೊಡನೆ ಒಂದು ದಿನ’ ಓದುತ್ತಿದ್ದಾಗ ಗಮನಸೆಳೆದದ್ದು: ಒಮ್ಮೆ ವಿನ್ಸಂಟ್ ಚರ್ಚಿಲ್ ಮತ್ತು ಡಾ. ರಾಧಾಕೃಷ್ಣ ಟೀ ಕುಡಿಯುತ್ತ ಮಾತನಾಡುತ್ತಿದ್ದರಂತೆ. ಆಗ ಚರ್ಚಿಲ್, ಈ ‘ಶುಗರ್’ ಅಂತ ಉಚ್ಚಾರಣೆ ಮಾಡುವಾಗ ಮಾತ್ರ ಇಂಗ್ಲಿಷಿನ ‘ಎಸ್’ ಅನ್ನು ‘ಶ’ ಅಂತ ಉಚ್ಚಾರ ಮಾಡೋದು ನೋಡಿ ಎಂದರೆ, ರಾಧಾಕೃಷ್ಣ ಅವರು, “ಆರ್ ಯು ಶ್ಯೂರ್?” ಅಂತ ಕೇಳಿದ್ದರಂತೆ.

ಆಗ ನೆನಪಾಗಿದ್ದು, ‘ಮೃಚ್ಛಕಟಿಕ’ದ ‘ಶಕಾರ…’ ಯಾಕ್ಹೇಳಿ ನೋಡೋಣ, ಬರೆದಂತೆಯೇ ಓದಲು ಬರುವ ಏಕೈಕ ಭಾಷೆ ಕನ್ನಡ!

ಶಕಾರ: ನಿಲ್ಲು, ನಿಲ್ಲು ವಶಂತಶೇನೆ, ನಿಲ್ಲು. ಮೆತ್ತನೆಯ ರತ್ನ ಕಂಬಳಿಯ ಮೇಲೆ ನರ್ತಿಶುವ ಆ ನಿನ್ನ ಕೋಮನ ಪಾದಪದ್ಮಗಳನ್ನು ಈ ನಡುಬೀದಿಯ ಕಲ್ಲು ಮಣ್ಣುಗಳ ಮೇಲೇಕೆ ಓಡಿಶುತಿಹೆ, ಓ ನಾರಿ?- ಬಾವ, ನೀನು ಆ ಕಡೆ ನಿಲ್ಲು. ಚೇಟ ನೀನು ಈ ಕಡೆ… ಶುಂದರಿ, ಈಗ ನೀನು ಈ ಇಬ್ಬರ ನಡುವೆ, ನನ್ನ ಮುಂದೆ. ನನ್ನ ಮುಂದೆ ನೀನು, ನಿನ್ನ ಮುಂದೆ ನಾನು! ಬಾವ ಹುಂ-
ವಿಟ: ವಸಂತಸೇನೆ, ಈ ನಮ್ಮ ಶಕಾರನು ಯಾರೆಂದು ತಿಳಿದಿರುವೆ?
ಚೇಟ: ಪಾಲಕ ಮಹಾರಾಜನ ಹೆಂಡತಿಯ ಸಹೋದರ.
ಶಕಾರ: ಹೌದು.
ವಿಟ: ಶ್ರೀಮಂತ.
ಶಕಾರ: ಹೌದು.
ಚೇಟ: ರಸಿಕ.
ಶಕಾರ: ಹೌದು.
ವಿಟ: ಬ್ರಹ್ಮನ ಹೆಂಡತಿಯ ವರಕುವರ.
ಶಕಾರ: ಹೌದು, ಹೌದು.
ಚೇಟ: ಆದರೆ ಅಕ್ಷರ ಮಾಲೆಯ ‘ಸ’, ಇವನಿಗೆ ‘ಶ’,
ಶಕಾರ: ಹೌದು.
ವಿಟ: ನಮ್ಮ ಸರಸ್ವತಿ, ಇವನಿಗೆ ‘ಶರಶ್ವತಿ’,
ಶಕಾರ: ಹೌದು.
ವಿಟ: ಪುರಾಣ ಪಂಡಿತ.
ಶಕಾರ: ಹೌದು.
ಚೇಟ: ವಿಶೇಷವೆಂದರೆ, ರಾಮಾಯಣದಲ್ಲಿ ಭಾರತ ಬೆರೆಸಿ ಎರಡನ್ನೂ ಭಾಗವತದಲ್ಲಿ ಮುಳುಗಿಸಿ-
ಶಕಾರ: ಹೌದು, ಕಲಶು-ಕಲಶು ಮೇಲೋಗರ ಮಾಡುತ್ತೇನೆ.
ವಿಟ: ಪರಸ್ತ್ರೀ ಎಂದರೆ ಪ್ರಾಣ-
ಶಕಾರ: ಬಿಡುತ್ತೇನೆ ಎಂದು ಮಾತು ಪೂರ್ತಿ ಮಾಡೋ- ಪ್ರಾಣ, ಪಂಚಪ್ರಾಣ, ಬಿಟ್ಟುಬಿಡುತ್ತೇನೆ, ವಸಂತಶೇನೆ.
ಚೇಟ: ನಿನಗಾಗಿ ಇವನು ಸಂಪೂರ್ಣ ತಲೆ ಕೆಡಿಸಿಕೊಂಡಿದ್ದಾನೆ.
ಶಕಾರ: ಹೌದು, ಶಂಪೂರ್ಣ.
ಇನ್ನು ಕೇವಲ ಕೆಲವು ‘ಶಕಾರ’ನ ಶಂಭಾಷಣೆಗಳನ್ನು ಓದೋಣ.

ಶಕಾರ: ಬಾವ, ಚೇಟಾ, ನೋಡಿದಿರಾ, ನೋಡಿದಿರಾ ಇವಳ ಶೊಕ್ಕು? ನೀವು ಉಶಿರು ಕಟ್ಟಿ ಮುಂಗಾರು ಜಡಿಯಂತೆ ಮಾತಿನ ಮಳೇಯೇ ಶುರಿಶುತ್ತಿದ್ದರೂ, ಇವಳು ಕಾ-ಕೂ ಅನ್ನಲಿಲ್ಲವಲ್ಲ! ಲೇ ವಶಂತಶೇನೆ, ನಾನು ನಿನ್ನ ಕಾಲಿನ ಗೆಜ್ಜೆಯಾಣೆಗೂ ನಿನಗಾಗಿ ಶಾಯುತ್ತಿದ್ದೇನೆ. ಆ ಮನ್ಮಥ ನನ್ನನ್ನು ಶಾಯಿಶುತ್ತಿದ್ದಾನೆ. ನಡು ಬೀದಿಯಲ್ಲಿ ಯಾಕಮ್ಮ ಕಾಲಹರಣ? ಬಾ, ಬಾ, ಅಂತಃಪುರದಲ್ಲಿ ಮಾಡೋಣ ಕಾಮದಹನ! ನೋಡು, ನೀನು ಆಗ ನಮ್ಮಿಂದ ತಪ್ಪಿಶಿಕೊಳ್ಳಲಾರೆ. ರಾವಣೇಶ್ವರನ ಬಾಹುಗಳಲ್ಲಿ ಶಿಕ್ಕಿಕೊಂಡ ಕುಂತಿದೇವಿಯ ಹಾಗೆ ಶಿಕ್ಕಿಹಾಕಿಕೊಂಡಿರುವೆ. ಬಾ, ಹೋಗುವ.

ಶಕಾರ: ಶಹಾಯ! ನೆರವು? (ನಕ್ಕು) ವಶಂತಸೇನೆ, ನಮ್ಮಿಂದ ಆ ಹೆಂಗಶರು ನಿನ್ನನ್ನು ರಕ್ಷಿಶುತ್ತಾರೆಯೇ? ಅವರ ಗಂಡಂದಿರನ್ನೂ ಜೊತೆಗೆ ಕರೆತಂದರೂ ಶಾಧ್ಯವಿಲ್ಲ. ಶಕಾರ ಶೂರ. ಶೂರರ ಶೂರ. ಎಲ್ಲರನ್ನೂ ಶಂಹರಿಶಿ, ಶುಭದ್ರೆಯನ್ನು ಆಂಜನೇಯನು ಅಪಹರಿಶಿಕೊಂಡು ಹೋದಂತೆ ಹೋಗುವೆನು. ನೀನಾಗಿ ಬಂದೆಯೋ ಶರಿ. ಇಲ್ಲವೋ ದುಶ್ಯಾಶನನು ಶಕುಂತಲೆಯನ್ನು ಜುಟ್ಟು ಹಿಡಿದು ಎಳೆದಂತೆ ಎಳೆದೊಯ್ಯುವೆನು.

ಶಕಾರ: ಖೂಳ, ನಿನ್ನ ಆ ಚಾರುದತ್ತನಿಗೆ ನಾನು ಹೀಗೆ ಹೇಳಿದೆನೆಂದು ತಿಳಿಶು — “ಶೂಳೆ ವಸಂತಶೇನೆಯನ್ನು ನಾವು ಬಲತ್ಕಾರದಿಂದ ವಶಪಡಿಶಿಕೊಳ್ಳಲು ಪ್ರಯತ್ನಿಶುತ್ತಿದ್ದಾಗ, ನಿನ್ನ ಮೇಲಿನ ಪ್ರೀತಿಯಿಂದ ಅವಳು ನಮ್ಮಿಂದ ತಪ್ಪಿಶಿಕೊಂಡು ನಿನ್ನ ಮನೆ ಶೇರಿದ್ದಾಳೆ. ನೀನಾಗಿ ಅವಳನ್ನು ಒಪ್ಪಿಶಿದೆಯೋ, ನನಗೂ ನಿನಗೂ ಶ್ನೇಹ ಚಿರಂಜೀವಿಯಾಗಿರುತ್ತದೆ: ಇಲ್ಲವೋ ನಿನ್ನ ಮೇಲೆ ನ್ಯಾಯಾಶ್ಥಾನದಲ್ಲಿ ಕಟ್ಟಳೆ ಹಾಕುತ್ತೇನೆ; ಶಾಯುವತನಕ ನಿನ್ನ ನನ್ನ ಶತ್ರುವಾಗಿ ಉಳಿಯುತ್ತಿ. ಶಾಯುವವರೆಗೂ” — ಹೀಗೆಂದು ನಾನು ಹೇಳಿದೆನೆಂದು ಶರಿಯಾಗಿ ಅವನಿಗೆ ಹೇಳು, ಶರಿಯಾಗಿ.

ಓದುತ್ತಿದ್ದರೆ ಓದುತ್ತಲೇ ಇರಬೇಕು ಎನ್ನುವ ಶಕಾರನ ಮಾತುಗಳನ್ನು ಇಲ್ಲಿಗೆ ನಿಲ್ಲಿಸುತ್ತೇನೆ.

ಕೆಲವು ದಿನಗಳ ಹಿಂದೆ ಹಿರಿಯ ಸಾಹಿತಿಯೊಬ್ಬರ ಮನೆಗೆ ನಾನು ಬರೆದ ಪತ್ರ ವಾಪಸ್ ಬಂದಿತ್ತು. ಕಾರಣ, ಕೊರಿಯರ್ ಹುಡುಗರಿಗೆ ಕನ್ನಡದಲ್ಲಿ ಬರೆದಿದ್ದ ವಿಳಾಸ ಓದಲು ಬರುತ್ತಿರಲಿಲ್ಲವಂತೆ! ಅಯ್ಯೋ, ಹೌದಾ ಅಂತ ನೀವೇನೂ ‘ಉಪಪ್ರಜ್ಞೆ’ ಗಾಬರಿ ಮಾಡ್ಕೋಬೇಡಿ, ನನ್ನ ಕನ್ನಡ ಬಾಳಿ ಬದುಕುತ್ತೆ…

ಅನೇಕ ಕೆಲಸಗಳ ಮಧ್ಯೆ ಆ ಪತ್ರದ ವಿಳಾಸವನ್ನು ಇಂಗಿಷಿನಲ್ಲಿ ಬರೆದು, ಪೋಸ್ಟಿಗೆ ಹಾಕುವುದು ತಡವಾಯಿತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಲೇಖಕರ ಕೃತಿಗಳ ಹಕ್ಕು ರಕ್ಷಕರು ನನ್ನ ಪತ್ರ ತಲುಪುವ ವೇಳೆಗೆ unconscious ಆಗಿದ್ದರು.

ಹಾಗಾಗಿ ನಾವು ಮಾಡಬೇಕು ಎಂದಿದ್ದ ಪುಸ್ತಕ ಶುರುವಾಗುವುದಕ್ಕೂ ಮೊದಲೇ ಮುಗಿದು ಹೋಯಿತು. ಯಾವ ಕೆಲ’ಶ’ವನ್ನೂ ಎಂದೂ ತಡ ಮಾಡದ ನಾನು, ಈ ವಿಷಯದಲ್ಲಿ ಯಾಕೆ ಹೀಗೆ ಮಾಡಿದೆ ಎನ್ನುವ ಪಾಪಪ್ರಜ್ಞೆ ನನ್ನ ‘ಉಪಪ್ರಜ್ಞೆ’ಯನ್ನು ಚುಚ್ಚುತ್ತಿರುವುದರಿಂದ ಇದೆಲ್ಲ ಮತ್ತೆ ನೆನಪಾಯಿತು.

October 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಮತ್ತೆ ಮಣ್ಣಿನ ಬಂಡಿಯ ಕಡೆಗೆ…. ಸಂತಸವಾಯಿತು ಮೇಡಂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: