ರೇಷ್ಮೆ ಎಳೆಗಳ ಮಧ್ಯೆ..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ʼಏಯ್!‌ಓಗಯ್ಯಾ… ಬಂದ್ಬಿಟ್ಟಾ… ನೀನೇನ್‌ದೊಡ್ಡ ಆಪೀಸರ್ರಾ… ಕೆಲ್ಸಕ್ಕಿಟ್ಕಳ್ಬಾರ್ದಂತೆ… ಇಲ್ದಿದ್ರೆ ಏನ್‌ಈ ಮಕ್ಳಿಗೆಲ್ಲಾ ನೀವೂಟ ಆಕ್ತೀರಾ… ಅವ್ರಪ್ಪ ಮಾಡಿರೋ ಸಾಲ ನೀನ್‌ತೀರಿಸ್ತೀಯಾ… ಬಂದ್ಬಿಟ್ಟಾ.. ನಡ್ಯಯ್ಯಾ ಆಚೆಗೆ… ಓಗಿ ಓಗಿ ಕೆಲ್ಸ ನೋಡಿʼ

ಅಲ್ಲಿ ಸೇರಿದ್ದ ನಾವೆಲ್ಲಾ ಒಂದು ಕ್ಷಣ ಅವಾಕ್ಕಾದೆವು. ಅದು ೧೩ ಅಕ್ಟೋಬರ್‌೧೯೯೮. ಸ್ಥಳ : ಬೆಂಗಳೂರು ಸಮೀಪದ ಮಾಗಡಿ ನಗರದಲ್ಲಿನ ಒಂದಾನೊಂದು ರೇಷ್ಮೆ ನೂಲು/ದಾರ ಹುರಿಗುಟ್ಟಿಸುವ ಯಂತ್ರಗಳ ಕಾರ್ಖಾನೆ.

ಅಲ್ಲಿ ಚಿಕ್ಕ ಚಿಕ್ಕ ಮಕ್ಕಳ ದುಡಿಮೆ. ಅದನ್ನು ಪ್ರತ್ಯಕ್ಷ ನೋಡಿ ಅರಿತುಕೊಳ್ಳಲು ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ಮುಂಚೂಣಿಯಲ್ಲಿದ್ದ ನಮ್ಮೊಡನೆ ತಮ್ಮ ಇತರ ಅಧಿಕಾರಿಗಳೊಡನೆ ಬಂದಿದ್ದವರು ಹಿರಿಯ ಐ.ಎ.ಎಸ್.‌ಅಧಿಕಾರಿ ಲೂಕೋಸ್‌ ವಲ್ಲತರೈ. ಆಗ್ಗೆ (೧೯೯೮) ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಆಯುಕ್ತರು. ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಬೇಕೆಂಬ ನಿಜವಾದ ಕಾಳಜಿ ಅವರ ನಡೆನುಡಿಯಲ್ಲಿ ಅನುಭವಕ್ಕೆ ಬರುತ್ತಿತ್ತು.

ಅವರಿಗಿಂತ ಮೊದಲು ಆಯುಕ್ತರಾಗಿದ್ದವರಿಗೆ ನಾವೆಷ್ಟು ಅಹವಾಲುಗಳನ್ನು ಕೊಟ್ಟರೂ, ಮಾಹಿತಿ ಸಮೇತ ಅವರೆದುರು ಬಾಲಕಾರ್ಮಿಕರ ದಾರುಣ ಪರಿಸ್ಥಿತಿ ವಿವರಿಸಿದರೂ ಜಪ್ಪಯ್ಯ ಎನ್ನುತ್ತಿರಲಿಲ್ಲ. ಅಷ್ಟೇಕೆ ಒಮ್ಮೆ ಕಾರ್ಮಿಕ ಇಲಾಖೆಯ ಒಬ್ಬ ಆಯುಕ್ತರನ್ನು ಭೇಟಿ ಮಾಡಲು, ಒಂದು ಸಭೆ ನಡೆಸಲು ಅನುಮತಿ ಕೋರಲು ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ಪ್ರತಿನಿಧಿಗಳು ಹೋದಾಗ ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ್ದಲ್ಲದೆ, ಅಲ್ಲೇ ಕುಳಿತವರನ್ನು ಹೊರ ಹಾಕಲು ಪೊಲೀಸರನ್ನ ಕರೆಸಿದ್ದರು!

ಜೊತೆಗೆ ಕರ್ನಾಟಕ ವೃತ್ತಿ ನಿರತ ಸಮಾಜಕಾರ್ಯಕರ್ತರು ಏರ್ಪಡಿಸಿದ್ದ ಬಾಲಕಾರ್ಮಿಕ ಪದ್ಧತಿ ಕೊನೆಗಾಣಿಸುವ ಕುರಿತು ವಿಚಾರ ಸಂಕಿರಣದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರಾಗಿದ್ದ ಹಿರಿಯ ಐ.ಎ.ಎಸ್‌. ಅಧಿಕಾರಿಯೊಬ್ಬರು ತಮ್ಮ ಶಿಷ್ಟ ಇಂಗ್ಲಿಷ್‌ಭಾಷಣದಲ್ಲಿ ಬಾಲಕಾರ್ಮಿಕರಿದ್ದಾರೆ ಎಂಬುದೆಲ್ಲಾ ಸ್ವಯಂಸೇವಾ ಸಂಘಟನೆಗಳ ಸೃಷ್ಟಿ ಎಂದು ಹೇಳಿದ್ದರು (೧೯೯೪-೯೫). ಹೊಟೆಲ್‌ರಾಮಾದಲ್ಲಿ ನಡೆದಿದ್ದ ಆ ಕಾರ್ಯಕ್ರಮದಲ್ಲಿ ನಾನವರನ್ನು ಅಟಕಾಯಿಸಿಕೊಂಡಿದ್ದೆ.

ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆಯಲ್ಲಿರುವ ವಿ.ಐ.ಎಸ್‌.ಎಲ್‌. ಕಟ್ಟಡದಲ್ಲಿರುವ ಅವರ ಕಛೇರಿಯ ಹಿಂಬಾಗದತ್ತ ಎಂದಾದರೂ ಕಣ್ಣು ಹಾಯಿಸಿದ್ದೀರಾ, ರಾಜ್ಯದ ಯಾವುದಾದರೂ ಬಾಲಕಾರ್ಮಿಕರಿರುವ ಪ್ರದೇಶದಲ್ಲಿ ಓಡಾಡಿದ್ದೀರಾ, ಹತ್ತಿರದಲ್ಲಿರುವ ಮಾಗಡಿಯಲ್ಲಿ ನೋಡಿದ್ದೀರಾ ಎಂದು ಗಟ್ಟಿಯಾಗಿಯೇ ಪ್ರಶ್ನಿಸಿದ್ದೆ.

ಇಂತಹವರನ್ನೆಲ್ಲಾ ಯಾಕೆ ಸಭೆಗೆ ಕರೆಯುತ್ತೀರಿ, ಸುಮ್ಮನೆ ಗಲಾಟೆ ಮಾಡುವವರು ಎಂದು ಆ ಅಧಿಕಾರಿ ಸಂಘಟಕರನ್ನು ಕೇಳಿದ್ದೇ ತಡ, ಡಾ.ಶೇಖರ್‌ಶೇಷಾದ್ರಿ, ಪ್ರೊ.ಎಚ್.ಎಂ. ಮರುಳಸಿದ್ದಯ್ಯ ಮತ್ತಿತರರು ಆ ಅಧಿಕಾರಿಯನ್ನು ತಾವು ಆಹ್ವಾನಿಸಿರುವುದು ಎನ್ನುವ ಶಿಷ್ಟಾಚಾರವನ್ನು ಬದಿಗಿಟ್ಟು ದಬಾಯಿಸಿದ್ದರು.  

ಬೆಂಗಳೂರಿಗೆ ಅತ್ಯಂತ ಸಮೀಪದಲ್ಲಿರುವ ಮಾಗಡಿ ೧೯೮೦-೯೦ರ ದಶಕದಲ್ಲಿ ರೇಷ್ಮೆ ಉದ್ದಿಮೆಗೆ ಹೆಸರುವಾಸಿಯಾಗಿತ್ತು. ವಿವಿಧ ಕಡೆಗಳಿಂದ ರೇಷ್ಮೆ ಗೂಡುಗಳನ್ನು ಬಿಚ್ಚಿ ನೂಲು ತೆಗೆದು ಅವನ್ನು ಹುರಿಗಟ್ಟಿಸಲು ಮಾಗಡಿಗೆ ತರುತ್ತಿದ್ದರು. ವಿವಿಧ ವಸ್ತ್ರಗಳ ತಯ್ಯಾರಿಗೆ ಅನುಗುಣವಾಗಿ ಎರಡು, ಮೂರು, ಅಥವಾ ನಾಲ್ಕು ಇನ್ನೂ ಹೆಚ್ಚಿನ ನೂಲು/ದಾರಗಳನ್ನು ಒಂದಕ್ಕೊಂದು ಹೆಣೆದು ಗಟ್ಟಿಗೊಳಿಸುವ ಯಾಂತ್ರಿಕ ಕೆಲಸ.

ರೇಷ್ಮೆಯ ನೂಲುಗಳ ಚಕ್ರಗಳಿಂದ ಎರಡು ಮೂರು ಎಳೆಗಳನ್ನು ತಂದು ವೇಗವಾಗಿ ಹೆಣೆದುಕೊಂಡು ಸುತ್ತುವ ಬಾಬಿನ್‌ಗಳಿಗೆ ಸಂಪರ್ಕಿಸುವುದು. ಆಗಾಗ್ಗೆ ಈ ನೂಲಿನೆಳೆಗಳು ತುಂಡಾಗುವುದು ಸಾಮಾನ್ಯ. ಅದರ ಮೇಲೆ ಗಮನವಿಟ್ಟುಕೊಂಡು ಮತ್ತೆ ದಾರಗಳಿಗೆ ನಾಜೂಕಾಗಿ ಗಂಟು ಹಾಕಿ ಸುತ್ತುವಿಕೆ ಮುಂದುವರೆಸುವುದು. ಈ ಕೆಲಸಗಳನ್ನು ಮಾಡುತ್ತಿದ್ದವರು ಮಕ್ಕಳು.

ಪ್ರತಿಯೊಂದು ಮಗುವೂ ಸದಾ ಅತ್ತ ಇತ್ತ ಓಡಾಡುತ್ತ ಹದಿನೈದು ಇಪ್ಪತ್ತು ಬಾಬಿನ್‌ಗಳ ಮೇಲೆ ಗಮನವಿಟ್ಟಿರಬೇಕು. ಕೂರಲು ಅವಕಾಶವೇ ಇಲ್ಲ. ರಾಟೆಗಳ ಶಬ್ದದ ನಡುವೆ ಕೆಲಸಗಾರರ ಮೇಲಿನ ಉಸ್ತುವಾರಿ ಮಾಡುವವನ ಕೂಗು, ʼಬೇಗ ಬೇಗ, ಅಲ್ಲಿ ಕಟ್‌ಆಗಿದೆ, ಸರಿ ಮಾಡು, ಯಾವನೋ ಅವನು ತೂಕಡಿಸೋನು, ಕೂತ್ಕೋಬೇಡಿ. ಅಲ್ಲಿ ನೂಲು ಮುಗ್ದೋಗಿದೆ. ತೆಗೆದು ಬೇರೇದು ಹಾಕಿ. ಇಲ್ಲಿ ನೋಡು… ಏಯ್!‌ಓಗಿ ಬೇಗ ಬೀಡಿ ತಕ್ಕೊಂಬಾರೇ…ʼ ಜೊತೆಗೆ ಕಿವಿಗಡಚಿಕ್ಕುವಂತೆ ಸಿನೆಮಾ ಹಾಡುಗಳೆಂಬ ಗದ್ದಲ.

ಇಂತಹ, ಅತ್ತ ಕಾರ್ಖಾನೆಗಳೂ ಅನ್ನಲಾಗದ, ಇತ್ತ ಗೃಹ ಕೈಗಾರಿಕೆಯೂ ಅಲ್ಲದ ಚಿಕ್ಕ ಚಿಕ್ಕ ಗೂಡುಗಳು. ಹೊರಗಿನವರಿಗೆ ಸ್ಪಷ್ಟ ಏನೂ ಕಾಣಬಾರದೆಂದು ಸದಾಕಾಲ ಕಿಟಕಿ ಬಾಗಿಲು ಹಾಕಿರುವುದು. ಒಳಗೆ ಮಸುಕು ಮಸುಕು. ಗಾಳಿಯೂ ಸರಿಯಾಗಿ ಆಡದು. ಇಂತಹ ಪರಿಸ್ಥಿತಿಯಲ್ಲಿ ಒಂದೊಂದು ಘಟಕದಲ್ಲಿ ಐದಾರು ಮಕ್ಕಳಿಂದ ಹಿಡಿದು ಇಪ್ಪತ್ತೈದು ಮಕ್ಕಳು ದಿನಕ್ಕೆ ಕನಿಷ್ಟ ಹತ್ತು ಗಂಟೆಗಳ ಸತತ ದುಡಿಮೆ.  ಒಮ್ಮೊಮ್ಮೆ ಹೆಚ್ಚಿನ ಮಾಲು ಬಂದರೆ ಅಥವಾ ಬೇಡಿಕೆ ಹೆಚ್ಚಿದ್ದರೆ ರಾತ್ರಿಯಲ್ಲೂ ಕೆಲಸ.

ಮಕ್ಕಳೆಂದರೆ ಎಷ್ಟು ಚಿಕ್ಕವರಿರಬಹುದು. ಐದಾರು ವರ್ಷದವರು? ಖಂಡಿತಾ. ನಾನು ಮಾಗಡಿಯಲ್ಲಿ ಭೇಟಿಯಾಗಿದ್ದ ಅತ್ಯಂತ ಚಿಕ್ಕವಯಸ್ಸಿನ ಬಾಲಕಾರ್ಮಿಕ ಐದೂವರೆ ವರ್ಷದವನು. ಅಷ್ಟು ಚಿಕ್ಕವನಿಂದ ಏನು ಸಾಧ್ಯ ಎನ್ನಬಹುದೇನೋ. ಹುರಿಯಂತ್ರಗಳ ಮಾಲೀಕರು ಅದನ್ನು ಸಾಧ್ಯ ಮಾಡಿದ್ದರು! ಹುರಿ ಯಂತ್ರ ಅಥವಾ ಸ್ಥಳೀಯರ ಭಾಷೆಯಲ್ಲಿ ʼಉರಿ ಮೆಷೀನ್‌ʼ (ಸರಿಯಾಗಿಯೇ ಇದೆ. ಮಕ್ಕಳನ್ನು ಉರಿಯಲ್ಲಿ ಹಾಕಿದಂತೆ), ಮಕ್ಕಳು ನಿಂತು ಕೆಲಸ ಮಾಡುವ ಎತ್ತರಕ್ಕೆ ಸರಿಹೊಂದುವಂತೆ ಅಥವಾ ವಯಸ್ಕರಿಗೆ ಸರಿಯಲ್ಲ ಎನ್ನುವಂತೆ ಉದ್ದೇಶಪೂರ್ವಕವಾಗಿ ವಿನ್ಯಾಸ ಮಾಡಿದ್ದಾರೇನೋ ಎನ್ನುವ ಅನುಮಾನ ಬರುತ್ತಿತ್ತು.

ಯಾವುದೋ ಸಾಕ್ಷ್ಯ ಚಿತ್ರ ತೆಗೆಯುವ ಸಂಬಂಧ ವಿಚಾರ ಸಂಗ್ರಹಿಸಲು ಸೇತುಮಾಧವ ಜೋಡಿದಾರ್‌ಸ್ನೇಹಿತರೊಡನೆ ೧೯೯೨-೯೩ರ ಅವಧಿಯಲ್ಲಿ ಮಾಗಡಿಗೆ ಹೋಗಿದ್ದರಂತೆ. ಅಲ್ಲಿನ ಕೆಲವು ಸ್ಥಳಗಳಲ್ಲಿ ಗಡಚಿಕ್ಕುವ ಶಬ್ದ ಬರುವ ಶೆಡ್‌ಗಳಲ್ಲಿ ಮಕ್ಕಳು ಕೆಲಸ ಮಾಡುವುದು, ಅದು ರೇಷ್ಮೆ ಹುರಿ ಯಂತ್ರಗಳು ಎಂದು ತಿಳಿದಾಗ ಅತೀವ ಕುತೂಹಲದಿಂದ ಒಂದಷ್ಟು ಜನರೊಂದಿಗೆ ಮಾತನಾಡಿದಾಗ ಅಲ್ಲಿನ ಪರಿಸ್ಥಿತಿ ಅವರಿಗೆ ಸ್ಪಷ್ಟವಾಗತೊಡಗಿತು.

ಬೆಂಗಳೂರಿಗೆ ಹಿಂದಿರುಗಿದ ಮೇಲೆ ಸೇತುಮಾಧವ ಜೋಡಿದಾರ್‌ಮಕ್ಕಳ ಹಕ್ಕುಗಳನ್ನು ಕುರಿತು ಮಾತನಾಡುವ, ಕೆಲಸ ಮಾಡುವ ಗೆಳೆಯರೊಡನೆ ಸಮಾಲೋಚಿಸತೊಡಗಿದರು. ಕೆಲವರು ಅಲ್ಲಿಗೆ ಹೋಗಿ ಪರಿಸ್ಥಿತಿ ಅವಲೋಕಿಸಿದೆವು. ಅದರ ಫಲವಾಗಿ ಟೆರ್ರೆಡೆಸ್‌ಹೋಮ್ಸ್‌, ಜರ್ಮನಿ ಎನ್ನುವ ಸಂಸ್ಥೆ ಮಾಗಡಿಯಲ್ಲಿನ ಬಾಲಕಾರ್ಮಿಕರ ಪರಿಸ್ಥಿತಿ ಕುರಿತು ಅಧ್ಯಯನ ಮಾಡಲು ನೆರವು ನೀಡಿತು.

ಆಗ ಸೇತು ಅವರು ಆರಂಭಿಸಿದ್ದ ʼಸಮಷ್ಟಿʼ ಸಂಸ್ಥೆಯೊಂದಿಗೆ ಅಧ್ಯಯನ ಮಾಡಲು ಸೇರಿದವರು  ಕೆ.ಎಸ್.‌ಸರೋಜಮ್ಮ. ೧೯೯೪ರಿಂದ ಒಂದೆರಡು ವರುಷ ಅವರು ಹುರಿಮೆಷೀನ್‌ಗಳ ಕಾರ್ಖಾನೆಗಳಲ್ಲಿ ಓಡಾಡಿ, ಮಕ್ಕಳೊಡನೆ ಮಾತನಾಡಿ, ಕುಟುಂಬಗಳನ್ನು ಭೇಟಿ ಮಾಡಿ, ಅಲ್ಲಿನ ಸರ್ಕಾರೀ ಅಕಾರಿಗಳು, ಸ್ಥಳೀಯ ಗ್ರಾಮಪಂಚಾಯತಿಗಳು, ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರಗಳನ್ನೆಲ್ಲಾ ತಡಕಾಡಿದಾಗ ಭಯಂಕರವಾದ ವಿಚಾರಗಳು ಹೊರಬಿದ್ದವು.

“ಮಾಗಡಿ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ೧೪ ವರ್ಷದೊಳಗಿನ ಮಕ್ಕಳು ರೇಷ್ಮೆ ಹುರಿ ಯಂತ್ರಗಳಲ್ಲಿ ದುಡಿಯುತ್ತಿದ್ದಾರೆ. ಜೊತೆಗೆ ೧೪ ದಾಟಿರುವ ಆದರೆ ಇನ್ನೂ ೧೮ ದಾಟದವರೂ ಕೆಲಸದಲ್ಲಿದ್ದಾರೆ. ಬಹುತೇಕರು ಹಿಂದುಳಿದ ಜಾತಿ ವರ್ಗಗಳು ಮತ್ತು ಅಲ್ಪಸಂಖ್ಯಾತ ಕುಟುಂಬಗಳ ಮಕ್ಕಳು.

ಇದು ಮುಖ್ಯವಾಗಿ ಭಾರತ ಸಂವಿಧಾನದ ಶೋಷಣೆಯ ವಿರುದ್ಧದ ಹಕ್ಕುಗಳಲ್ಲಿನ ಪರಿಚ್ಛೇದ ೨೪ರ ಉಲ್ಲಂಘನೆ (ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳು ಹಾಗೂ ಕ್ಷೇತ್ರಗಳಲ್ಲಿ ದುಡಿಸುವುದಕ್ಕೆ ನಿಷೇಧ); ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ೧೯೮೬ರ ನೇರ ಉಲ್ಲಂಘನೆ. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೩೨ (ಮಕ್ಕಳ ಆರ್ಥಿಕ ಶೋಷಣೆ) ಉಲ್ಲಂಘನೆ.

ಅಲ್ಲೆಲ್ಲಾ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವವವರು ಹೆಣ್ಣು ಮಕ್ಕಳು. ಬಹುತೇಕ ಕಾರ್ಖಾನೆಗಳ ಮಾಲೀಕರು ಮಕ್ಕಳ ಪೋಷಕರಿಗೆ ತಾವೇ ಮುಂದಾಗಿ ಬಲವಂತವಾಗಿ ಮುಂಗಡ/ಅಡ್ವಾನ್ಸ್‌ ಹಣ ಕೊಟ್ಟು ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುತ್ತಾರೆ. ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಹುರಿಮೆಷೀನ್‌ ಶೆಡ್‌ಗಳಲ್ಲೇ ವಾಸ ಮಾಡುತ್ತಾರೆ. ಮಕ್ಕಳ ದುಡಿಮೆಗೆ ದಿನಕ್ಕೆ ಹತ್ತರಿಂದ ಇಪ್ಪತ್ತೈದು ರೂಪಾಯಿಯಷ್ಟು ಮಾತ್ರ ಸಂಪಾದನೆಯ ಲೆಕ್ಕ.

ಎಲ್ಲ ಹಣ ಮುಂಗಡವಾಗಿ ಕೊಟ್ಟಿದ್ದ ಹಣದ ಬಡ್ಡಿಗೆ ಹೋಗುತ್ತದೆ. ಸಾಲ ಕರಗುವುದೇಯಿಲ್ಲ. ಇದು ಸ್ಪಷ್ಟವಾಗಿ ʼಜೀತʼವೇ ಆಗಿದೆ. ಎಲ್ಲ ಮಕ್ಕಳ ಹೆಸರು ಶಾಲಾ ದಾಖಲಾತಿಯಲ್ಲಿ ಇರುತ್ತದೆ. ಆದರೆ ಅವರು ಶಾಲೆಗೆ ಹೋಗದಿರುವುದು / ಬಾರದಿರುವ ಬಗ್ಗೆ ಯಾರೂ ದನಿ ಎತ್ತುವುದಿಲ್ಲ. ಸ್ಥಳೀಯ ರೇಷ್ಮೆಗಿಂತಲೂ ಹೆಚ್ಚಾಗಿ ಚೈನಾದಿಂದ ಬರುವ ಕಚ್ಚಾ ರೇಷ್ಮೆ ನೂಲು ಇಲ್ಲಿ ಹೆಚ್ಚು ಚಾಲ್ತಿಯಲ್ಲಿರುವುದು. ಅದರಲ್ಲೂ ಬಹಳಷ್ಟು ಕಳ್ಳ ವ್ಯಾಪಾರವಿದೆ.

ಕಾರ್ಖಾನೆಗಳಲ್ಲಿ ದುಡಿಯುವ ವಯಸ್ಕರ ಸಂಖ್ಯೆ ಬಹಳ ಕಡಿಮೆ. ವಿದ್ಯುತ್‌ಚಾಲಿತ ಯಂತ್ರಗಳಾದರೂ ಯಾವುದೇ ಹುರಿಯಂತ್ರಗಳ ಘಟಕಗಳನ್ನು ʼಕಾರ್ಖಾನೆʼ ಎಂದು ದಾಖಲಿಸಿರಲಿಲ್ಲ, ಲೈಸೆನ್ಸ್‌ಪಡೆದಿಲ್ಲ ಮತ್ತು ವಿದ್ಯುತ್‌ಸರಬರಾಜು ಇಲಾಖೆ ಇಂತಹದೊಂದು ಪ್ರಮಾಣಪತ್ರವನ್ನು ಪಡೆಯದೇ ವಿದ್ಯುತ್‌ಸರಬರಾಜು ಮಾಡುತ್ತಿದೆ. ಬಹುತೇಕರು ವಿದ್ಯುತ್‌ಕಳ್ಳತನ ಮಾಡುವುದು ಊರಿನ ಎಲ್ಲರಿಗೂ ತಿಳಿದಿದೆ. ಹಗಲೂ ರಾತ್ರಿ ಊರ ತುಂಬಾ ರಾಟೆಗಳ ಶಬ್ದಕ್ಕೆ ಜನ ಹೊಂದಿಕೊಂಡುಬಿಟ್ಟಿದ್ದಾರೆ.

“ಹುರಿಯಂತ್ರಗಳಲ್ಲಿ ಕೆಲಸ ಮಾಡುವಾಗ ಅನೇಕ ದುರಂತಗಳಾಗಿವೆ. ಬೆರಳು ಕತ್ತರಿಸುವುದು ಸಾಮಾನ್ಯ. ವಿದ್ಯುದಾಘಾತ, ಅದರಿಂದ ಅಂಗವಿಕಲತೆ, ಸಾವು ಸರ್ವೇಸಾಮಾನ್ಯ. ಹೆಣ್ಣುಮಕ್ಕಳ ಕೂದಲು ರಾಟೆಗೆ ಸಿಲುಕಿ ಸಾವಾಗಿರುವುದು ಇಲ್ಲವೇ ಶಾಶ್ವತ ಅಂಗವಿಕಲತೆ. ಆದರೆ ಇದಾವುದೂ ಪೊಲೀಸ್‌ದೂರಾಗುವುದಿಲ್ಲ.

ಜೊತೆಗೆ ನಿಂತೂ ನಿಂತೂ ಕೆಲಸ ಮಾಡುವುದರಿಂದ ಗರ್ಭಕೋಶದ ಮೇಲೆ ಒತ್ತಡ ಬಿದ್ದು ಋತುಚಕ್ರದ ಏರುಪೇರು, ರಕ್ತಸ್ರಾವ ಸಾಮಾನ್ಯ. [ʼರಾಟೆ ಹುಡುಗೀನಾ? ಮದುವೆಗೆ ಅವಳು ಬೇಡ. ಮಕ್ಕಳಾಗಲ್ಲʼ ಎನ್ನುವ ಮಾತು ಅಲ್ಲೆಲ್ಲಾ ಸಾಮಾನ್ಯವಾಗಿತ್ತು]. ಕೆಟ್ಟ ಮಾತು, ಮೇಲ್ವಿಚಾರಕರಿಂದಲೋ, ಮಾಲೀಕರಿಂದಲೋ ಅಥವಾ ಜೊತೆ ಕೆಲಸಗಾರ ಹುಡುಗರಿಂದಲೋ ಲೈಂಗಿಕ ಶೋಷಣೆ ಬಹಳ ಸಾಮಾನ್ಯ.

ಕೆಲಸದ ಹಿಂಸೆ ತಾಳಲಾರದೆ ಕೆಲವು ಮಕ್ಕಳು ಓಡಿ ಹೋಗಿದ್ದರು. ಅನೇಕ ಹುರಿಮೆಷೀನ್‌ಯಂತ್ರಗಳ ಮಾಲೀಕರು ಗ್ರಾಮಪಂಚಾಯತಿ ಚುನಾಯಿತ ಪ್ರತಿನಿಧಿಗಳೂ ಇದ್ದರು. ಬೆಂಗಳೂರಿನಲ್ಲಿದ್ದು ಇಲ್ಲಿನ ಉದ್ದಿಮೆಗೆ ಹಣ ಹೂಡುವವರೂ ಇದ್ದರು.”

ಸರೋಜಮ್ಮನವರು ಕೇವಲ ವರದಿ ತಯಾರಿಸಲಿಲ್ಲ. ಮಕ್ಕಳನ್ನು ದುಡಿಮೆಗಿಟ್ಟುಕೊಂಡಿದ್ದ ಮಾಲೀಕರಿಗೆ ಅವರು ಕಾನೂನು ಉಲ್ಲಂಘಿಸುತ್ತಿರುವ ಕುರಿತು ಅರಿವು ಮೂಡಿಸಿದರು. ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ಅಪಾಯಕಾರಿ ಉದ್ದಿಮೆಗಳಲ್ಲಿ ಮಕ್ಕಳನ್ನು ದುಡಿಸಬಾರದು ಎಂದಿದೆ ಮತ್ತು ಸರ್ವೋಚ್ಚ ನ್ಯಾಯಾಲಯ ಶಿಕ್ಷಣ ಹಕ್ಕು ಸಾರ್ವತ್ರೀಕರಿಸಿರುವುದು ಮತ್ತು ಬಾಲಕಾರ್ಮಿಕ ಪದ್ಧತಿ ನಿಲ್ಲಿಸಲು ನೀಡಿರುವ ಸೂಚನೆಗಳ ವಿಚಾರಗಳನ್ನು ಪ್ರಚುರಪಡಿಸುತ್ತಿದ್ದರು.

ಅನೇಕ ಕುಟುಂಬಗಳಿಗೆ ವಿಚಾರದ ಅರಿವಾಗಿ, ಮಕ್ಕಳನ್ನು ದುಡಿಮೆಗೆ ಕಳುಹಿಸುವುದನ್ನು ನಿಲ್ಲಿಸಲು ಯತ್ನಿಸಿದ್ದರು. ಕಾರ್ಖಾನೆಗಳ ಮಾಲೀಕರಿಗೆ ಅಷ್ಟು ಹೊತ್ತಿಗೆ ಅಲ್ಪಸ್ವಲ್ಪ ಭಯ ಆತಂಕ ಶುರುವಾಗಿದ್ದು ಎಲ್ಲರಿಗೂ ತಿಳಿದಿತ್ತು. 

ʼಎಳೆಗಳೊಂದಿಗೆ ಎಳೆಯರುʼ ಎನ್ನುವ ಹೆಸರಿನಲ್ಲಿ ಸರೋಜಮ್ಮನವರು ಸಿದ್ಧಪಡಿಸಿದ ವರದಿಯನ್ನು ೧೯೯೬ರ ಡಿಸೆಂಬರ್‌೩೦ರಂದು ಮಾಗಡಿಯಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನ ನಡೆಸಿದ ಸಾರ್ವಜನಿಕ ಫಿರ್ಯಾದು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ರೇಷ್ಮೆ ಕಾರ್ಖಾನೆಗಳಲ್ಲಿ ದುಡಿಯುವ ಮಕ್ಕಳು, ಪೋಷಕರ ಹೇಳಿಕೆಗಳನ್ನು ಆಧರಿಸಿ ಪ್ರಕರಣಾಧ್ಯಯನಗಳನ್ನು ಮಂಡಿಸಿದೆವು. ಸರ್ಕಾರವು ಈ ಪರಿಸ್ಥಿತಿಯನ್ನು ತಕ್ಷಣವೇ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಒಕ್ಕೊರಳಿನಲ್ಲಿ ಆಗ್ರಹಿಸಿ ಮನವಿ ಪತ್ರವನ್ನು ಪ್ರಕಟಿಸಿದೆವು.

ಗೆಳೆಯ ಮುರಳೀಧರ ಖಜಾನೆ ಪ್ರಜಾವಾಣಿಯಲ್ಲಿ ಈ ಕಾರ್ಯಕ್ರಮ ಕುರಿತು ವಿವರವಾಗಿ ವರದಿ ಬರೆದಿದ್ದರು (೧.೧.೧೯೯೭). ಈ ವರದಿ ಆಧರಿಸಿ ‍ಶ್ರೀರಾಂಬಾಬು ಎನ್ನುವ ವಕೀಲರು ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮ್ಮೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹೂಡಿಬಿಟ್ಟರು. ಸರ್ಕಾರವನ್ನಷ್ಟೇ ಅಲ್ಲದೆ ತಮ್ಮ ಅಹವಾಲಿನಲ್ಲಿ ತಪ್ಪಾಗಿ ʼಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನʼವನ್ನೇ ಪ್ರತಿವಾದಿಯನ್ನಾಗಿಸಿದ್ದರು! ಮಕ್ಕಳ ಹಕ್ಕುಗಳ ವಿಚಾರವಾಗಿ ವಕೀಲಿ ನಡೆಸಲು ಸಿಕ್ಕ ಅವಕಾಶವನ್ನು ನಾವು ಕೈಚೆಲ್ಲಲಿಲ್ಲ. ಆಂದೋಲನದ ಸದಸ್ಯರು ಹಿರಿಯ ವಕೀಲರಾದ ರವಿವರ್ಮ ಕುಮಾರ್‌ಅವರನ್ನು ನಮ್ಮ ಪರವಾಗಿ ನ್ಯಾಯಾಲಯದಲ್ಲಿ ಅಹವಾಲು ಮಂಡಿಸಲು ಕೋರಿದೆವು.

ಈ ಮಧ್ಯೆ ಒಂದು ತಪ್ಪಾಗಿ ಹೋಯಿತು! ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಬಂದಿದ್ದ ಕಾರ್ಮಿಕ ಇಲಾಖೆಯ ಜಂಟಿ ಕಾರ್ಮಿಕ ಆಯುಕ್ತ ಸಿಟಿಮನಿಯವರು, ತಮ್ಮ ಭಾಷಣದ ಭರದಲ್ಲಿ ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಅಪಾಯಕಾರಿ ಉದ್ದಿಮೆಗಳ ಪಟ್ಟಿಯಲ್ಲಿ ರೇಷ್ಮೆ ಉದ್ದಿಮೆ ಇಲ್ಲ ಎಂದು ಹೇಳಿದ್ದರು.

ಅಷ್ಟೇ ಸಾಕಾಗಿತ್ತು ಹುರಿ ಮೆಷೀನ್‌ಕಾರ್ಖಾನೆಗಳ ಮಾಲೀಕರಿಗೆ. ೧೯೯೭ರ ಜನವರಿಯ ಮೊದಲ ವಾರದಲ್ಲೇ ಆಟೋಗೆ ಮೈಕ್‌ಕಟ್ಟಿಕೊಂಡು ಹಳ್ಳಿ ಹಳ್ಳಿ ಸುತ್ತಿ ಪ್ರಚಾರ ಮಾಡಿಯೇ ಬಿಟ್ಟರು, ʼ… ಯಾರೂ ಹೆದರಬೇಕಿಲ್ಲ. ಹುರಿ ಮೆಷೀನ್‌ನಲ್ಲಿ ಮಕ್ಕಳು ಕೆಲಸ ಮಾಡಬಾರದು ಎಂದು ಕಾನೂನು ಹೇಳಿಲ್ಲ… ಎಲ್ಲರೂ ಮಕ್ಕಳನ್ನು ಕೆಲಸಕ್ಕೆ ಕಳಿಸಬಹುದು”.  ಸರೋಜಮ್ಮನವರು ಮತ್ತು ಗೆಳೆಯರು ಅಷ್ಟು ದಿನ ಮಾಡಿದ್ದ ಕೆಲಸ ತಲೆಕೆಳಗಾಗಿತ್ತು!

ನ್ಯಾಯಾಧೀಶ ವಿ.ಎಂ. ಕುಮಾರ್‌ಅವರಿಂದ ಪ್ರಕರಣದ ತೀರ್ಪು ೧೯೯೭ ಜೂನ್‌೬ರಂದು ಹೊರಬಿತ್ತು. ವಿಶಾಲವಾದ ತಳಹದಿಯಲ್ಲಿ ಮಕ್ಕಳ ದುಡಿಮೆಯನ್ನು ಅವಗಾಹನೆಗೆ ತೆಗೆದುಕೊಂಡ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಸಮುದಾಯ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಹಲವಾರು ಲೋಪದೋಷಗಳನ್ನು ಪಟ್ಟಿ ಮಾಡಿತು.

ಮುಖ್ಯವಾಗಿ ೧೯೯೬ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪನ್ನು ಜಾರಿ ಮಾಡದಿರುವುದು, ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ೧೯೮೬, ಮಕ್ಕಳನ್ನು ಅಡವಿಡುವುದರ ನಿಷೇಧ ಕಾಯಿದೆ ಹಾಗೂ ೧೯೯೩ರ ಶಿಕ್ಷಣ ಹಕ್ಕು ಕುರಿತು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ಉಲ್ಲಂಘನೆ ಎಂದೇ ನ್ಯಾಯಾಲಯ ಹೇಳಿತು.

ʼರೇಷ್ಮೆ ಉದ್ದಿಮೆಯ ಎಲ್ಲ ಹಂತಗಳ ಕೆಲಸಗಳಲ್ಲಿ ಮಕ್ಕಳನ್ನು ದುಡಿಸುವುದನ್ನು ನಿಷೇಧಿಸಿ, ಈ ಉದ್ದಿಮೆಯಲ್ಲಿರುವ ಮಕ್ಕಳ ಸಮೀಕ್ಷೆ ನಡೆಸಿ ಅವರನ್ನೆಲ್ಲಾ ಮುಖ್ಯವಾಹಿನಿ ಶಿಕ್ಷಣದಲ್ಲಿ ತೊಡಗಿಸಬೇಕುʼ ಎಂದು ನಿರ್ದೇಶನ ನೀಡಿದರು. ಜೊತೆಗೆ ವಿದ್ಯುತ್‌ಇಲಾಖೆಗೆ ಚಾಟಿ ಏಟು ಬೀಸಿದ ಅವರು, ವಿದ್ಯುತ್‌ಉಪಯೋಗಿಸಿ ನಡೆಸುವ ರಾಟೆಗಳನ್ನು ಕಾರ್ಖಾನೆ ಎನ್ನದೆ ಇನ್ನೇನು ಅನ್ನಬೇಕು, ಅಲ್ಲಿ ಎಷ್ಟು ಪ್ರಮಾಣದಲ್ಲಿ ಸರ್ಕಾರಕ್ಕೆ ಮೋಸವಾಗುತ್ತಿದೆ ಎಂದು ನಿಮಗೆ ತಿಳಿದಿದೆಯೆ ಎಂದೂ ಪ್ರಶ್ನೆ ಮಾಡಿದರು.

೧೯೯೭ರ ಆರಂಭದ ಹೊತ್ತಿಗೆ ಮಾಗಡಿಯಲ್ಲಿ ದುಡಿಯುವ ಮಕ್ಕಳ ಶಿಕ್ಷಣ, ಪುನರ್ವಸತಿ, ಬಾಲಕಾರ್ಮಿಕ ಪದ್ಧತಿ ವಿರುದ್ಧವಾಗಿ ಜನರಲ್ಲಿ ಅರಿವು ಮೂಡಿಸುವ ಕೆಲಸಗಳಿಗೆ ಸಮಷ್ಟಿ /ನಂತರ ಸರೋಜಮ್ಮನರು ಆರಂಭಿಸಿದ ʼಚಿಗುರುʼ ಸಂಸ್ಥೆಗೆ ನಾನು ಪ್ರತಿನಿಧಿಸುತ್ತಿದ್ದ ಕ್ರೈ ಸಂಸ್ಥೆ ಮೂಲಕ ನೆರವು ಆರಂಭಿಸಿದೆವು.

ಅಧ್ಯಯನದ ಕಾಲದಲ್ಲಿ ಪ್ರಾಯಶಃ ಅದರ ಪರಿಣಾಮಗಳ ಬಗ್ಗೆ ಅಷ್ಟು ಗೊತ್ತಿಲ್ಲದೆ ಮಾಹಿತಿ ನೀಡಿದ್ದ ಕಾರ್ಖಾನೆಗಳ ಮಾಲೀಕರು, ಕುಟುಂಬಗಳು, ಸ್ಥಳೀಯ ಮುಖಂಡರು, ಶಿಕ್ಷಕರು, ಸರ್ಕಾರದ ಅಧಿಕಾರಿಗಳಿಗೆ ಸರೋಜಮ್ಮನವರ ವರದಿ, ನ್ಯಾಯಾಲಯದ ತೀರ್ಪು ಬಿಸಿ ತುಪ್ಪವಾಗಿತ್ತು. ಮಕ್ಕಳನ್ನು ಶಾಲೆಗೆ ತರುವ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಕೆಲಸಗಳಿಗೆ ನೂರೆಂಟು ಅಡ್ಡಿ.

ಬೆಳೆದ ಗಂಡು ಮಕ್ಕಳಿಂದ ಗಟ್ಟಿಯಾಗಿ ಪ್ರತಿರೋಧ. ಹತ್ತು ಸಾವಿರಕ್ಕೂ ಹೆಚ್ಚು ದುಡಿಯುವ ಮಕ್ಕಳಿದ್ದ ಪ್ರದೇಶದಲ್ಲಿ ಒಂದೆರೆಡು ಸಂಸ್ಥೆಗಳಿಂದ ದೊಡ್ಡ ಪ್ರಮಾಣದ ಕೆಲಸ ಸಾಧ್ಯವಿರಲಿಲ್ಲ. ಎಷ್ಟೇ ಅಹವಾಲುಗಳನ್ನಿತ್ತರೂ ಕಾರ್ಖಾನೆ ಮಾಲೀಕರ ಬಿಗಿಮುಷ್ಠಿ ಯಾವುದೇ ಮಕ್ಕಳ ಪರ ಕೆಲಸಗಳನ್ನು ಸಂಪೂರ್ಣವಾಗಿ ಮುಂದುವರೆಸಲು ಬಿಡುತ್ತಿರಲಿಲ್ಲ. ನ್ಯಾಯಾಲಯದ ನಿರ್ದೇಶನವನ್ನು ಸ್ಥಳೀಯ ಅಧಿಕಾರಿಗಳು ಜಾರಿ ಮಾಡಲು ಮುಂದಾಗಲೇಯಿಲ್ಲ.

ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರ ಭೇಟಿ ಮಾಗಡಿಗೆ. ಅಲ್ಲಿಗೆ ಅವರನ್ನು, ಅವರ ಸಹ ಸಿಬ್ಬಂದಿಯನ್ನು ಕರೆದೊಯ್ಯುವ ಜವಾಬ್ದಾರಿ ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ನಮ್ಮದಾಗಿತ್ತು. ಇದು ಯಾವುದೇ ರಹಸ್ಯ ಕಾರ್ಯಾಚರಣೆಗೆ ಕಡಿಮೆಯಿರಲಿಲ್ಲ. ಲೂಕೋಸ್‌ವಲ್ಲತ್‌ರೈ ಅವರೊಡನೆ ನಡೆಸಿದ ಮಾತುಕತೆಯಂತೆ ಎರಡು ಮೂರು ದಿನಾಂಕಗಳು ನಿಗದಿಯಾಯಿತು.

ಮಾಗಡಿಗೆ ಕರೆದೊಯ್ಯಬೇಕಾದ ಅಧಿಕಾರಿಗಳಿಗೆ ಮಾಗಡಿಗೆ ಹೋಗುವ ಹಿಂದಿನ ರಾತ್ರಿ ತಿಳಿಸುವುದು, ಆದರೆ ಎಲ್ಲಿಗೆ ಎಂಬುದು ಅವರಿಗೆ ಗೊತ್ತಿರಬಾರದು. ನಿಗಧಿಯಾದ ದಿನ ಎಲ್ಲ ಆಹ್ವಾನಿತ ಅಧಿಕಾರಿಗಳಿಗೆ ತಾವೊಂದು ರೈಡ್‌/ ದಾಳಿಗೆ ಹೋಗುತ್ತಿರುವುದು ಮಾತ್ರ ತಿಳಿದಿತ್ತು. ಎಲ್ಲಿಗೆ? ಗೊತ್ತಿರಲಿಲ್ಲ. ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆ (ಜೆ.ಸಿ. ರಸ್ತೆ)ಯಲ್ಲಿರುವ ವಿ.ಐ.ಎಸ್‌.ಎಲ್‌. ಕಟ್ಠಡದ ಎದುರು ಸುಮಾರು ಆರು ವಾಹನಗಳು ಸಿದ್ಧವಾಗಿದ್ದವು. 

ಲೂಕೋಸ್ ‌ಅವರಲ್ಲದೆ, ಜಂಟಿ ಕಾರ್ಮಿಕ ಆಯುಕ್ತ ಸಿ.ಸಿಟಿಮನಿ, ಅಧೀನ ಕಾರ್ಮಿಕ ಆಯುಕ್ತರುಗಳಾದ ಗೋವಿಂದ ಗೌಡ, ಎಚ್.ಎಸ್‌. ಉತ್ತಪ್ಪ, ಗುರುದಾಸ್‌ಎಂ. ಭಟ್‌, ಸಹಾಯಕ ಕಾರ್ಮಿಕ ಆಯುಕ್ತ ಟಿ. ಶ್ರೀನಿವಾಸ್‌, ಸಹಾಯಕ ಕಾರ್ಮಿಕ ಆಯುಕ್ತ ಎಸ್.ಎಸ್.‌ಶರೀಫ್‌ಹಾಗೂ ಬಾಲಕಾರ್ಮಿಕರ ಕೋಶದ ವಿಶೇಷಾಧಿಕಾರಿ ಎಸ್.‌ಮಂಜುನಾಥ ಶಾಸ್ತ್ರಿ ಇದ್ದರು.

ಇವರೊಂದಿಗೆ ಕೆಲವು ಕಾರ್ಮಿಕ ಅಧಿಕಾರಿಗಳೂ ಜೊತೆ ಸೇರಿದ್ದರು. ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ಪರವಾಗಿ ನಾನು, ಮಾಥ್ಯೂ ಫಿಲಿಪ್ಸ್‌, ಶ್ರೀಜಾ, ಜಾಯ್‌ಮಲೈಕಲ್‌, ಲಕ್ಷಾಪತಿ, ರಾಘವೇಂದ್ರ ಭಟ್‌, ಅಸ್ಲಂಬೇಗ್‌, ವರ್ಗೀಸ್‌ಪಳ್ಳಿಪುರಂ, ಪ್ರಸನ್ನ ಮತ್ತಿತರರು ಇದ್ದೆವು.

ಹಿರಿಯ ಅಧಿಕಾರಿಗಳಾಗಿದ್ದ ಎಸ್‌. ಮಂಜುನಾಥ ಶಾಸ್ತ್ರಿಯವರೊಡನೆ ನಾನೊಂದು ವಾಹನದಲ್ಲಿದ್ದೆ. ಹಾಗೆಯೇ ಉಳಿದ ಗೆಳೆಯರೆಲ್ಲರೂ ಮೊದಲೇ ಮಾತನಾಡಿಕೊಂಡಿದ್ದಂತೆ ವಿವಿಧ ಅಧಿಕಾರಿಗಳೊಡನೆ ಹೊರಟೆವು. ವಾಹನಗಳು ಬೆಂಗಳೂರು ಬಿಟ್ಟು, ತಿಪ್ಪಗೊಂಡನಹಳ್ಳಿ ಜಲಾಶಯ ದಾಟಿದ ಮೇಲೆ ವಾಹನಗಳು ಮಾಗಡಿಯತ್ತ ಸಾಗುತ್ತಿರುವುದು ಎಂದು ತಿಳಿಸಲಾಯಿತು. ಮಾಗಡಿ ತಲುಪಿದ ಮೇಲೆ ಮೊದಲೇ ನಿಶ್ಚಯಿಸಿಕೊಂಡಿದ್ದಂತೆ (‍ಸ್ಥಳೀಯ ಕಾರ್ಮಿಕ ಅಧಿಕಾರಿ ಮಂಜುನಾಥ್‌ಅವರಿಗೆ ಯಾವುದೇ ಸುಳಿವು ನೀಡದಂತೆ) ನಾವೆಲ್ಲಾ ವಿವಿಧ ಕಾರ್ಖಾನೆಗಳನ್ನು ತಲುಪಿದೆವು.

ಬಹುತೇಕ ಕಾರ್ಖಾನೆಗಳು ಅಧಿಕಾರಿಗಳ ಭೇಟಿಗೆ ಬಾಗಿಲು ತೆರೆಯಲೇಯಿಲ್ಲ. ಯಾರು ಏನು ಯಾಕೆ ಎಂದು ಗಟ್ಟಿಯಾಗೇ ಪ್ರಶ್ನೆ ಇಟ್ಟರು. ಸ್ಥಳೀಯ ಅಧಿಕಾರಿಗಳು ತಮಗೆ ಚೆನ್ನಾಗಿ ಗೊತ್ತು, ಅವರಿಗೆ ದೂರು ಹೇಳಬೇಕಾಗುತ್ತದೆ ಎಂದು ದಬಾಯಿಸಿದರು. ಮಾಗಡಿಯ ಕಾರ್ಮಿಕ ಅಧಿಕಾರಿ ಮಂಜುನಾಥ್‌ವಿಚಾರ ತಿಳಿದು ಬರುವಷ್ಟರಲ್ಲಿ ೧೪ ಕಾರ್ಖಾನೆಗಳ ಮೇಲೆ ದಾಳಿ/ಭೇಟಿ ಮುಗಿದಿತ್ತು.

ಅಂತಹದ್ದೊಂದು ಕಾರ್ಖಾನೆಯ ಮಾಲೀಕನೇ ʼಯಾವೋನಯ್ಯ ನೀನುʼ ಎಂದು ಲೂಕೋಸ್‌ ಅವರನ್ನು ದಬಾಯಿಸಿದ್ದು. ಯಾರನ್ನೂ ಕಾರ್ಖಾನೆಯ ಬಾಗಿಲು ದಾಟಲೂ ಬಿಡದೆ ಅಡ್ಡ ನಿಂತಿದ್ದ ಆ ಮನುಷ್ಯ. ಸುಮಾರು ಅರ್ಧ ಘಂಟೆಯ ನಂತರ ಒಳಗೆ ಹೋದರೆ, ಯಾರೂ ಮಕ್ಕಳಿಲ್ಲ! ಕೆಲವರು ಅಲ್ಲಲ್ಲಿ ಅಡಗಿ ಕುಳಿತಿದ್ದರು ಅಥವಾ ಹೇಗೋ ಏನೋ ಹಿಂಬಾಗಿಲೋ ಕಿಟಕಿಯಿಂದಲೋ ಓಡಿ ಹೋಗಿದ್ದರು.

ಮುಖ್ಯ ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಅವರೇ ಏನೋ ತಪ್ಪು ಮಾಡುತ್ತಿದ್ದಾರೆ. ಅದಕ್ಕೆ ಅವರನ್ನ ಹಿಡಿಯಲಿಕ್ಕೆ ಜನ ಬಂದಿದ್ದಾರೆ ಎಂಬ ಚಿತ್ರಣ ಕೊಟ್ಟಿರುವುದು ಸ್ಪಷ್ಟವಾಗುತ್ತಿತ್ತು.  ಬಹುತೇಕ ಮಕ್ಕಳು ತಾವಲ್ಲಿ ದುಡಿಯುತ್ತಿರುವುದು, ತಮ್ಮ ಪೋಷಕರಿಗೆ ಮಾಲೀಕರು ಮುಂಗಡ/ಅಡ್ವಾನ್ಸ್‌ಅಥವಾ ಸಾಲ ಕೊಟ್ಟಿರುವುದು ಹಾಗೂ ತಮ್ಮ ಕೆಲಸ ಸಮಯ, ಲೆಕ್ಕಕ್ಕೆ ಬರುವ ಕೂಲಿ ವಿವರಗಳನ್ನು ನೀಡಿದ್ದರು.

ಲೂಕೋಸ್‌ವಲ್ಲತ್‌ರೈ ಅವರು ವಿವರವಾದ ವರದಿಯನ್ನು ಸರ್ಕಾರಕ್ಕೆ ಮಂಡಿಸಿದರು. ತಕ್ಷಣವೇ ಮಾಗಡಿಯಲ್ಲಿ ಪುನರ್ವಸತಿ ಕೆಲಸವನ್ನು ಸರ್ಕಾರ ಮತ್ತು ಸ್ವಯಂಸೇವಾ ಸಂಘಟನೆಗಳ ಜೊತೆಯಲ್ಲಿ ನಡೆಸಬೇಕೆಂದು ಸಲಹೆ ನೀಡಿದರು.  ಕೆಲಸದಿಂದ ಬಿಡಿಸುವ ಮಕ್ಕಳಿಗೆ ಪುನರ್ವಸತಿ ಹೇಗೆ ಎನ್ನುವ ಪ್ರಶ್ನೆ ಎದ್ದಿತ್ತು.

ಆಗ ಜಿಲ್ಲಾಧಿಕಾರಿಗಳಾಗಿದ್ದ ನಾರಾಯಣ ಸ್ವಾಮಿಯವರೊಡನೆ ಸಮಾಲೋಚನೆಗಳು ನಡೆದವು. ಮಾಗಡಿಯಲ್ಲಿ ಒಂದೆರೆಡು ತಂಗುದಾಣಗಳನ್ನು ಒದಗಿಸಲು ಅವರು ಮುಂದೆ ಬಂದರು. ಆದರೆ ಸಾವಿರಾರು ಮಕ್ಕಳ ಪುನರ್ವಸತಿಗೆ ಅದು ಏನೇನೂ ಸಾಲದಾಗಿತ್ತು.

ಮಕ್ಕಳನ್ನು ಕೆಲಸದಿಂದ ಬಿಡಿಸಲು, ಕುಟುಂಬಗಳೊಡನೆ, ಕಾರ್ಖಾನೆಗಳ ಮಾಲೀಕರೊಡನೆ ಸಮಾಲೋಚನೆ ಮಾಡಲು, ಮಕ್ಕಳೊಡನೆ ನಿಲಯಗಳಲ್ಲಿ ಇರಲು, ಅವರಿಗೆ ಅನೌಪಚಾರಿಕ ವಿಧಾನಗಳಿಂದ ಕಲಿಸಲು, ಮುಂದೆ ಶಾಲೆಗೆ ಸೇರಿಸಲು, ಸಮುದಾಯದ ಮಧ್ಯ ವಿವಿಧ ಮಾಧ್ಯಮಗಳ ಮೂಲಕ ಅರಿವು ಮೂಡಿಸಲು ಇವೇ ಮೊದಲಾದ ಕೆಲಸಗಳಿಗೆ ಸಿಬ್ಬಂದಿ ಬೇಕಿತ್ತು. ಅವರಿಗೆ ತರಬೇತಿ, ಸಂಬಳ, ನಿಲಯಗಳ ನಿರ್ವಹಣೆ – ದೊಡ್ಡ ಮೊತ್ತದ ಧನ ಸಹಾಯವಿಲ್ಲದೆ ಕೆಲಸ ಸಾಧ್ಯವಿರಲಿಲ್ಲ.  

ಆಗ ಬಂದ ಆಶಾಕಿರಣ ಯುನಿಸೆಫ್‌ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದ ಸುಧಾ ಮುರಳಿ. ೧೯೯೯ರ ಯುಗಾದಿ ಹಬ್ಬದ ದಿನ ಗೆಳೆಯ ಪ್ರಸನ್ನ ನಡೆಸುವ ʼವಿಕಾಸʼ ಸಂಸ್ಥೆಯ ಜೆಪಿ ನಗರದಲ್ಲಿನ ಕಛೇರಿಯಲ್ಲಿ ನಾವೊಂದಷ್ಟು ಜನ ಸೇರಿ ಯುನಿಸೆಫ್‌ಸಂಸ್ಥೆಗೆ ಬೆಂಬಲ ಅಪೇಕ್ಷಿಸಿ ಪ್ರಸ್ತಾವನೆ ಸಿದ್ಧಮಾಡಿದೆವು. ಅದರ ಫಲವಾಗಿ ನಾಲ್ಕು ಸಂಸ್ಥೆಗಳ ಒಕ್ಕೂಟ ಸಿದ್ಧವಾಯಿತು.

ಚಿಗುರು, ವಿಕಾಸ, ಬಾಸ್ಕೋ ಮತ್ತು ಐ.ಸಿ.ಡಿ.ಎಸ್‌. ಯುನಿಸೆಫ್‌ನಿಂದ ಕ್ಷೇತ್ರಕಾರ್ಯಕ್ಕೆ ಸ್ವಯಂಸೇವಾ ಸಂಘಟನೆಗಳಿಗೆ ನೇರವಾಗಿ ಸಿಕ್ಕಿದ ಮೊದಲ ಬೆಂಬಲ ಎಂದೂ ಇದು ದಾಖಲಾಯಿತು. ಜೊತೆಗೆ ಬೆಂಬಲ ನೀಡಲು ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನ ಹಾಗೂ ಕ್ರೈ ಮತ್ತು ಟಿಡಿ.ಎಚ್‌. ಜರ್ಮನಿ ಸಂಸ್ಥೆಗಳು. ದುಡಿಮೆಯಿಂದ ಬಿಡಿಸಲಾದ ಮಕ್ಕಳಿಗೆ ವಸತಿ ಸಹಿತ ಶಾಲೆ, ಶಿಕ್ಷಣ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳು, ಕಾನೂನು ಕ್ರಮ, ಆರೋಗ್ಯ ರಕ್ಷಣೆಗೆ ವ್ಯವಸ್ಥೆಗಳು ಇತ್ಯಾದಿ ಸಮರೋಪಾದಿಯಲ್ಲಿ ಆರಂಭವಾಯಿತು.

೨೦೦೦ದ ಹೊತ್ತಿಗೆ ನಮ್ಮೆಲ್ಲರ ಜೊತೆ ಯುನಿಸೆಫ್ ‌ಪರವಾಗಿ ಸೇರಿದವರು ಸುಚಿತ್ರಾ ರಾವ್. ಸ್ವಯಂಸೇವಾ ಸಂಘಟನೆಗಳೊಡನೆ ವಿವಿಧ ಇಲಾಖೆಗಳನ್ನೂ ಕೆಲಸಗಳಲ್ಲಿ ತೊಡಗುವಂತೆ ಮಾಡುವಲ್ಲಿ ಸುಚಿತ್ರಾ ಅವರ ಕೊಡುಗೆ ಮಹತ್ತರವಾದುದು. ಜೊತೆಗೆ ವಿವಿಧ ಸಂಘಟನೆಗಳ ಸಿಬ್ಬಂದಿಗಳಿಗೆ ನಾವು ತರಬೇತಿಗಳನ್ನು ನಡೆಸಿದೆವು.

ಗೆಳೆಯರಾದ ವಿಶ್ವವಿನ್ಯಾಸ್‌, ನಾಗಸಿಂಹ ಜಿ. ರಾವ್‌, ಮತ್ತಿತರರು ಸ್ವಯಂಸೇವಕ ಶಿಕ್ಷಕರ ತರಬೇತಿಗಳನ್ನು ನಡೆಸಿಕೊಟ್ಟಿದ್ದರು. ರವಿ, ವೆಂಕಟೇಶ್‌, ನರಸಿಂಹಮೂರ್ತಿ, ನಾಗೇಂದ್ರ, ಮೋಹನಚಂದ್ರ ಇತ್ಯಾದಿ ಗೆಳೆಯರು ಆಂದೋಲನ ಸಕ್ರಿಯವಾಗಿ ಸಾಗಲು ಸಹಾಯಕರಾದರು. ಮಂಜು ಕೊಡಗು ಮತ್ತು ರಾಜೇಶ್ವರಿ ಮಕ್ಕಳೊಂದಿಗೆ ಇದ್ದು ನಾಟಕ ಮಾಧ್ಯಮ ಮೂಲಕ ಕಲಿಸುವ ಪ್ರಯೋಗಗಳನ್ನು ಮಾಡಿದ್ದರು.

ನೋಡುನೋಡುತ್ತಿದ್ದಂತೆಯೇ ಮಾಗಡಿಯಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಕಾರ್ಮಿಕ ಇಲಾಖೆ, ವಿದ್ಯುತ್‌ಇಲಾಖೆ, ಶಿಕ್ಷಣ ಇಲಾಖೆ, ಸಮಾಜಕಲ್ಯಾಣ ಇಲಾಖೆ ಮತ್ತು ಮುಖ್ಯವಾಗಿ ಪೊಲೀಸ್‌ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ಇಲಾಖೆಯ ಕೆಲಸಗಳು ಚುರುಕುಗೊಂಡವು. ಮೇಲಿಂದ ಮೇಲೆ ಕಾರ್ಖಾನೆಗಳ ಮಾಲೀಕರನ್ನು ಸೇರಿಸಿ ಕಾಯಿದೆ ಜಾರಿ ಮತ್ತು ನ್ಯಾಯಾಲಯದ ನಿರ್ದೇಶನ ಕುರಿತು ಅರಿವು ಮೂಡಿಸಲಾಯಿತು. ‌

ಲೂಕೋಸ್‌ವಲ್ಲತ್‌ರೈ ತಾವೇ ಸ್ವತಃ ಮಾಗಡಿಯವರೆಗೆ ಬಂದು ಕಾರ್ಯಕ್ರಮಗಳ ನೇತೃತ್ವ ವಹಿಸುತ್ತಿದ್ದರು. ಬೀದಿನಾಟಕ, ಭಿತ್ತಿಪತ್ರಗಳು, ಚಲನಚಿತ್ರ ಮಂದಿರಗಳಲ್ಲಿ ಸ್ಲೈಡ್‌, ಆಟೋಗೆ ಮೈಕ್‌ಕಟ್ಟಿಕೊಂಡು ಮಾಹಿತಿ ಪ್ರಸರಣ, ಶಾಲೆಗಳಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯಿದೆ, ಜೀತ ಪದ್ಧತಿ ನಿಷೇಧ ಕಾಯಿದೆ, ಹಿಂದುಳಿದ ಜಾತಿ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ, ಮಕ್ಕಳ ಹಕ್ಕುಗಳನ್ನು ಕುರಿತು ಮಾಹಿತಿ ವಿತರಣೆ, ಕೆಲವು ಮಾಲೀಕರ ಮೇಲೆ ಪೊಲೀಸ್‌ದೂರು ದಾಖಲು ಇತ್ಯಾದಿ ಜೊತೆಜೊತೆಯಲ್ಲಿ ನಡೆಯಿತು.

ಈ ಮಧ್ಯೆ ೨೦೦೦ದ ಕೊನೆಯಲ್ಲಿ ಲೂಕೋಸ್‌ವಲ್ಲತ್‌ರೈ ಅವರಿಗೆ ವರ್ಗವಾಯಿತು. ಆ ಸಮಯದಲ್ಲಿ ಅವರು ನಮ್ಮೆಲ್ಲರನ್ನೂ ಸೇರಿಸಿಕೊಂಡು ʼಕರ್ನಾಟಕವನ್ನು ಬಾಲಕಾರ್ಮಿಕ ಮುಕ್ತ ರಾಜ್ಯವನ್ನಾಗಿಸಲು ಕ್ರಿಯಾಯೋಜನೆʼ ಸಿದ್ಧಪಡಿಸುತ್ತಿದ್ದರು. ಆ ಯೋಜನೆ ಮುಗಿಯುವ ಮೊದಲೇ ಅವರು ವರ್ಗವಾದರು. ಯೋಜನೆಯೇನೋ ಬಿಡುಗಡೆಯಾಯಿತು. ಆದರೆ ಅದರಲ್ಲಿ ಲೂಕೋಸ್‌ಅವರು ನೀಡಿದ್ದ ಮುನ್ನೋಟ, ಮೊನಚಾದ ದೃಷ್ಟಿ ಇರಲಿಲ್ಲ ಎನ್ನುವುದೇ ವಿಷಾದ.

೨೦೦೨ರಲ್ಲಿ ಕಾರ್ಮಿಕ ಆಯುಕ್ತರಾಗಿದ್ದ ಇ. ವೆಂಕಟಯ್ಯ ಅವರನ್ನು ಮಾಗಡಿಯ ಜೀತ ಬಾಲಕಾರ್ಮಿಕರನ್ನು ಕುರಿತು ಪತ್ರಿಕೆಯೊಂದರ ಪ್ರತಿನಿಧಿ ಕೇಳಿದಾಗ ಅವರು ಹೇಳಿದ್ದು, ʼಅವರಪ್ಪ ಅಮ್ಮ ಮಾಡಿರುವ ಸಾಲಕ್ಕೆ ನಾವೇನು ಮಾಡೋಣ?ʼ ಆಗ ನಮಗೆ ಬಂದ ಪ್ರಶ್ನೆ, ಅವರಿಗೆ ಜೀತ ಪದ್ಧತಿ ನಿಷೇಧ ಕಾಯಿದೆಯ ಪರಿಚಯವಿರಲಿಲ್ಲವೆ? ಅವರಂತೂ ಸ್ವಯಂಸೇವಾ ಸಂಘಟನೆಗಳನ್ನು, ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದವರನ್ನು ದೂರದಲ್ಲೇ ಇಟ್ಟಿದ್ದರು!

ಮಾಗಡಿಯಲ್ಲಿ ಯುನಿಸೆಫ್‌ಮತ್ತು ರಾಜ್ಯ ಸರ್ಕಾರದ ಜಂಟಿ ನೆರವಿನೊಂದಿಗೆ ಯೋಜನೆ ಮುಂದಿನ ನಾಲ್ಕು ವರ್ಷಗಳ ಕಾಲ ನಡೆಯಿತು.  ಜೊತೆಗೆ ಚೈನಾ ರೇಷ್ಮೆ ಆಮದು, ಅದರ ಕಳ್ಳ ವ್ಯಾಪಾರ ಕಡಿಮೆಯಾಗುತ್ತಾ ಹೋಯಿತು.  ಸಾವಿರಾರು ಮಕ್ಕಳು ಹುರಿ ಮೆಷೀನ್ ‌ಸಹವಾಸದಿಂದ ಹೊರಬಂದರು. ಮಕ್ಕಳು ತಮ್ಮತಮ್ಮ ಮನೆಗಳಿಂದಲೇ ಅಥವಾ ಸೇತು ಶಾಲೆಗಳ ಮೂಲಕ ಶಿಕ್ಷಣದಲ್ಲಿ ತೊಡಗಿದರು.

ಮಾಗಡಿಯ ರೇಷ್ಮೆ ಹುರಿಯಂತ್ರಗಳ ಕಾರ್ಖಾನೆಗಳಲ್ಲಿ ಕ್ರಮೇಣವಾಗಿ ಬಾಲಕಾರ್ಮಿಕ ಪದ್ಧತಿ ಕೊನೆಯಾಯಿತು. ಆದರೆ ಅವರಲ್ಲಿ ಒಂದಷ್ಟು ೧೪ ವರ್ಷ ದಾಟಿದ ಮಕ್ಕಳು ಬೇರೆ ಉದ್ದಿಮೆಗಳತ್ತ – ಇಟ್ಟಿಗೆ ಭಟ್ಟಿ, ಕೃಷಿ, ಕಟ್ಟಡ ಕೆಲಸಗಳಿಗೆ ಹೊರಳಿದರು. ಮುಖ್ಯವಾಗಿ ಮಕ್ಕಳು ಶಿಕ್ಷಣದಲ್ಲಿ ತೊಡಗುವ ಪ್ರಮಾಣ ನಿಧಾನವಾಗಿ ಏರತೊಡಗಿತು.  ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳತ್ತ ವಯಸ್ಕರ ಗಮನ ಹೊರಳಿತು.

ಇತ್ತೀಚೆಗೆ ಕಾನೂನು ಕಾರ್ಯಕ್ರಮಗಳಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ಶಿಕ್ಷಣ ಹಕ್ಕು ಕಾಯಿದೆ ೨೦೦೯ರಿಂದ ಜಾರಿಯಲ್ಲಿದೆ. ೧೪ ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳಬಾರದು ಎನ್ನುವ ಕಾಯಿದೆ ೧೮ ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಮೆಗೆ ತೆಗೆದುಕೊಳ್ಳಬಾರದು ಎಂದು ಬದಲಾಗಿದೆ. ಮಕ್ಕಳ ನ್ಯಾಯ ಕಾಯಿದೆಯಂತೆ ದುಡಿಯುವ ಪರಿಸ್ಥಿತಿಗೆ ಬಿದ್ದಿರುವ ಮಕ್ಕಳನ್ನು ಪೋಷಣೆ ಮತ್ತು ರಕ್ಷಣೆ ಆವಶ್ಯಕತೆ ಇರುವ ಮಕ್ಕಳು ಎಂದು ಪರಿಗಣಿಸಿ ವಿಶೇಷ ರಕ್ಷಣೆ ನೀಡಲಾಗುತ್ತದೆ.

ಆದರೆ ರೇಷ್ಮೆ ನೂಲು ಹುರಿ ಮಾಡುವ ತಂತ್ರಜ್ಞಾನದಲ್ಲಿ ಏನಾದರೂ ಬದಲಾವಣೆಯಾಗಿದೆಯೋ ಏನೋ ಗೊತ್ತಿಲ್ಲ. ಆ ಉದ್ಯೋಗಗಳು ಈಗ ಯಾರ ಪಾಲಾಗಿದೆಯೋ ಏನೋ ಗೊತ್ತಿಲ್ಲ!

‍ಲೇಖಕರು ವಾಸುದೇವ ಶರ್ಮ

October 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Kamalakar

    ಅಬ್ಬಾ! Such adventures Vasu. How tough to negotiate with such characters! But for committed people and organisations, situation would be horrendous.

    ಪ್ರತಿಕ್ರಿಯೆ
  2. ANJALI Ramanna

    ಕಣ್ಣಿಗೆ ಕಟ್ಟುವ ಬರಹ. ಆಗಿದ್ದ ಕಾನೂನಿನ ಗೊಂದಲ ಕೆಲವು ವಿಷಯಗಳಲ್ಲಿ ಈಗಲೂ ಇರುವುದು ವಿಪರ್ಯಾಸ.
    CWC ಮತ್ತು JJB ಯ ಸದಸ್ಯತ್ವಕ್ಕೆ ಅರ್ಜಿ ಹಾಕುವವರು ನೀವು ಮಾಡಿರುವುದರಲ್ಲಿ ಕನಿಷ್ಠ 20% ಕೆಲಸ ಆದರೂ ಮಾಡಿರಬೇಕು ಎನ್ನುವುದನ್ನು ಕಡ್ಡಾಯ ಗೊಳಿಸಿದರೆ ಗುಣಮಟ್ಟದ ಸೇವೆ ಸಿಗುತ್ತದೆ. ಈ ಲೇಖನವನ್ನು ಮಕ್ಕಳ ಕ್ಷೇತ್ರದಲ್ಲಿ ತೊಡಗಿಕೊಂಡವರು ಮಾತ್ರವಲ್ಲ , ಎಲ್ಲರೂ ಓದಬೇಕು. ಜ್ಞಾನಕ್ಕಾಗಿ ಅಲ್ಲದಿದ್ದರೂ ಒಬ್ಬ ಮನುಷ್ಯ ಇಷ್ಟು ಕರಾರುವಕ್ಕಾಗಿ ಇರಬಲ್ಲನು ಎನ್ನುವುದನ್ನು ತಿಳಿಯಲು!
    ಅಂಜಲಿ ರಾಮಣ್ಣ

    ಪ್ರತಿಕ್ರಿಯೆ
  3. T S SHRAVANA KUMARI

    ಬೇರೂರಿದ ವ್ಯವಸ್ಥೆಯನ್ನು ಬದಲಾಯಿಸುವುದು ಎಷ್ಟೊಂದು ಕಷ್ಟ

    ಪ್ರತಿಕ್ರಿಯೆ
  4. Sarojamma

    ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಮಕ್ಕಳಿಗೆ ಸಂರಕ್ಷಣೆ ಮತ್ತು ಸಮೃದ್ಧ ವಾತಾವರಣದ ಆವಶ್ಯಕತೆಯ ಪ್ರತಿಪಾದಕರ ಸಾಲಿನಲ್ಲಿ ಮುಂಚೂಣಿಯಲ್ಲಿ ವಾಸುದೇವ ಶರ್ಮ ರವರನ್ನು ಕಾಣುತ್ತೇವೆ. ರೇಷ್ಮೆ ಎಳೆಗಳಲ್ಲಿ ಮುರುಟಿ ಹೋಗುತ್ತಿದ್ದ ಮಕ್ಕಳನ್ನು ಬಂಧ ಮುಕ್ತ ಗೊಳಿಸಿ ಶಾಲಾಮುಖ್ಯವಾಹಿನಿಗೆ ಸೇರಿಸುವ ನಮ್ಮ ಪ್ರಯತ್ನದಲ್ಲಿ ಸಾಕಷ್ಟು ಸಂಘರ್ಷ, ಸವಾಲುಗಳು ಮತ್ತು ಅಪಾಯಗಳು ಎದುರಾದವು. ಆದರೂ ಎದೆಗುಂದದ ನಮ್ಮ ಸಾಂಘಿಕ ಪ್ರಯತ್ನಕ್ಕೆ ಯಶಸ್ಸು ಕಾಣಲು ಸಾಧ್ಯವಾಯಿತು ಇದನ್ನೆಲ್ಲ ಮತ್ತೊಮ್ಮೆ ನೆನಪು ಮಾಡಿಸಿದಿರಿ. ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: