‘ಅರಸು’ಗಳಿಗಿದು ವೀರ.. ಪತ್ರಕರ್ತರಿಗೆ ತತ್ವ ವಿಚಾರ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ.

। ಕಳೆದ ವಾರದಿಂದ ।

ಅರವತ್ತರ ದಶಕದ ಕೊನೆ ಸಮೀಪಿಸಿತ್ತು. ಈ ಅವಧಿಯಲ್ಲಿ ನಾನು ಪತ್ರಕರ್ತನಾಗಿ ಸರ್ಕಾರದೊಡನೆ ಗುದ್ದಾಡುವ,  ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ಗೋಪಾಲ ಗೌಡರು, ದೇವರಾಜ ಅರಸು ಅವರುಗಳನ್ನು ಮೂರು ನಾಲ್ಕು ಬಾರಿ ಮೋಖ್ತ ಭೇಟಿಯಾಗಿ ವಾಗ್ವಾದ ನಡೆಸುವ ಪ್ರಸಂಗ ಒದಗಿ ಬಂದಿತ್ತು.

ನಾನು `ಪ್ರವಾ’ ಸೇರಿದ ಮರು ತಿಂಗಳೇ ಅಣ್ಣ ಸೇವೆಯಿಂದ ನಿವೃತ್ತಿ ಹೊಂದಿದರು. ಬೆಂಗಳೂರು ಜಿಲ್ಲೆಯ ಹಳ್ಳಿಗಳಲ್ಲಿ ಆಯುರ್ವೇದ ವೈದ್ಯರಾಗಿ ಮೂವತ್ನಾಲ್ಕು ವರ್ಷ ಸೇವೆ ಸಲ್ಲಿಸಿದ ಅವರನ್ನು ಸರ್ಕಾರ ಬರಿಗೈಯ್ಯಲ್ಲಿ ಮನೆಗೆ ಕಳುಹಿಸಿತ್ತು.

ಆಗೆಲ್ಲ ಲೋಕಲ್ ಫಂಡ್ ಆಸ್ಪತ್ರೆಗಳು ಎಂದು ಕರೆಯಲಾಗುತ್ತಿದ್ದ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ  ಸೇವೆ ಆರಂಭಿಸಿದ ಅಣ್ಣ ನಿವೃತ್ತಿ  ಹೊಂದಿದಾಗ ಮಾಗಡಿ ತಾಲ್ಲೂಕಿನ ತಾವರೆಕೆರೆಯ ತಾಲ್ಲೂಕು ಬೋರ್ಡ್ ಆಸ್ಪತ್ರೆಯಲ್ಲಿದ್ದರು. ಲೋಕಲ್ ಫಂಡ್ ಆಸ್ಪತ್ರೆಗಳು ಮೊದಲು ಜಿಲ್ಲಾ ಬೋರ್ಡ್ ಆಡಳಿತ ನಿರ್ವಹಣೆಯಲ್ಲಿದ್ದು ನಂತರ ತಾಲ್ಲೂಕು ಬೋರ್ಡ್ ಗಳ ಆಡಳಿತ  ನಿರ್ವಹಣೆಯಲ್ಲಿದ್ದವು. ಈ ಲೋಕಲ್ ಫಂಡ್ ಆಸ್ಪತ್ರೆಗಳ ವೈದ್ಯರ ಹುದ್ದೆಗಳು ಹಂಗಾಮಿ ಹುದ್ದೆಯಾಗಿದ್ದು ಅವು ಪೆನ್ಶನಬಲ್ ಹುದ್ದೆಗಳಲ್ಲವಾದ್ದರಿಂದ ಈ ವೈದ್ಯರು ಪಿಂಚಣಿ ಮತ್ತು ಗ್ರಾಚ್ಯುಯಿಟಿಗಳಿಗೆ ಅರ್ಹರಲ್ಲವೆಂದು ಸರ್ಕಾರದ ಹಣಕಾಸು ಇಲಾಖೆ ತೀರ್ಮಾನವಾಗಿತ್ತು.

ಆಗ ಶ್ರೀ ಭರತ್ ಎನ್ನುವರು ಹಣಕಾಸು ಇಲಾಖೆ ಕಾರ್ಯದರ್ಶಿ ಆಗಿದ್ದರು. ಅಣ್ಣನ ಜೊತೆ ಇನ್ನೂ ನಾಲ್ಕೈದು  ಮಂದಿ ನಿವೃತ್ತಿ ಹೊಂದಿದ್ದರು. ಹಿಂದಿನ ವರ್ಷಗಳಲ್ಲಿ ಸುಮಾರು ಮುವತ್ತು ನಲವತ್ತು ಮಂದಿ ರಾಜ್ಯ ವಿವಿಧೆಡೆಗಳಲ್ಲಿನ ತಾಲ್ಲೂಕು ಬೋರ್ಡ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿ ಬರಿಗೈಯ್ಯಲ್ಲಿ ನಿವೃತ್ತರಾಗಿ ಜೀವನದ ಸಂಧ್ಯಾಕಾಲದಲಿ ಬೇರಾವ ವರಮಾನವೂ ಇಲ್ಲದೆ  ಅಹನ್ಯಹನಿ ಕಾಲಕ್ಷೇಪ ಮಾಡುತ್ತಿದ್ದರು. ರಾಜ್ಯದಲ್ಲಿ ಇಂಥವರ ಸಂಖ್ಯೆ ನೂರನ್ನು ದಾಟಿತ್ತು.

ಮೈಸೂರು ಆಯರ್ವೇದಿಕ್ ಮೆಡಿಕಲ್ ಪ್ರಾಕ್ಟೀಶನರ‍್ಸ್ ಅಸೋಸಿಯೇಷನ್ ಎಂಬ ಸಂಘದ ಸದಸ್ಯರಾಗಿದ್ದ ಅಣ್ಣ ಸಂಘದ ಮೂಲಕ ಸರ್ಕಾರಕ್ಕೆ, ತಮ್ಮನ್ನು  ಎಲ್ಲ ಸರ್ಕಾರಿ ನೌಕರರಂತೆ ಪರಿಗಣಿಸಿ ಪಿಂಚಣಿ ಮತ್ತು ಗ್ರಾಚ್ಯುಯಿಟಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. ಅದಕ್ಕೆ ಹಣ ಕಾಸಯ ಇಲಾಖೆ ಮೇಲಿನಂತೆ ನಕಾರಾತ್ಮಕ ಉತ್ತರ ನೀಡಿತ್ತು. ಆಗ ರಾಜಕೀಯವಾಗಿಯೂ ಸಕ್ರಿಯರಾಗಿದ್ದ ಆಯುರ್ವೇದ ವೈದ್ಯ ಪಾರ್ಥನಾರಾಯಣ ಪಂಡಿತ್ ಕಾಂಗ್ರೆಸ್ ಪಕ್ಷದಲ್ಲಿದ್ದು ಮೇಲ್ಮನೆಗೆ ನಾಮಕರಣಗೊಂಡು ಶಾಸಕರಾಗಿದ್ದರು.

ಇವರು ಮತ್ತು ಶ್ರೀ ಗುಂಡಪ್ಪ ಎನ್ನುವ ಇನ್ನೊಬ್ಬರು ಆಯರ್ವೇದ ವೈದ್ಯರು ಸರ್ಕಾರದಲ್ಲಿ ಪ್ರಭಾವಶಾಲಿಗಳಾಗಿದ್ದರು. ಅಣ್ಣನ ಸಹಪಾಠಿಯೂ  ಆಪ್ತ ಮಿತ್ರರೂ ಆಗಿದ್ದ ಶ್ರೀ ಗುಂಡಪ್ಪನವರು (ದೂರದರ್ಶನದ ನಿವೃತ್ತ ನಿರ್ದೇಶಕ ಶ್ರೀ ಎನ್.ಜಿ. ಶ್ರೀನಿವಾಸ್ ಅವರ ತಂದೆ) ಸರ್ಕಾರದ ನೆರವಿನಿಂದ ಶ್ರೀರಾಂಪುರದಲ್ಲಿ (ಗೋಪಾಲಸ್ವಾಮಿ ಹಾಸ್ಟೆಲ್ ಸಮೀಪ) ಬಡವರಿಗಾಗಿ ಉಚಿತ ಆಯುರ್ವೇದ ಚಿಕಿತ್ಸಾಲಯ ನಡೆಸುತ್ತಿದ್ದರು.

ಇವರಿಬ್ಬರೂ ಮುಖ್ಯ ಮಂತ್ರಿ ನಿಜಲಿಂಗಪ್ಪ ಮತ್ತು ಆಗ ಆರೋಗ್ಯ ಸಚಿವರಾಗಿದ್ದ ನಾಗಪ್ಪ ಆಳ್ವ ಅವರಲ್ಲಿ ಬೀರಿದ ಪ್ರಭಾವವೂ ಫಲ ಕೊಡಲಿಲ್ಲ. ಆಗ ಗುಂಡಪ್ಪನವರು ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಬೇಕಾಗುತ್ತೆ, ಪತ್ರಿಕೆಗಳ ಬೆಂಬಲವೂ ಬೇಕಾಗುತ್ತೆ, ನಿನ್ನ ಮಗ ಪ್ರಜಾವಾಣೀಲಿದ್ದಾನೆ, ಅವನು ಮನಸ್ಸು ಮಾಡಿದರೆ ಆಗುತ್ತೆ ಎಂದು ಅಣ್ಣನಲ್ಲಿ ಹೇಳಿದರಂತೆ.

ಅಣ್ಣನಿಂದ ಇಷ್ಟೆಲ್ಲ ತಿಳಿದ ನಂತರ ನಾನು ಯೋಚಿಸುವಂತಾಯಿತು. ಸ್ವಂತಕ್ಕಾಗಿ ಪತ್ರಿಕೆಯ ಪ್ರಭಾವ ಬಳಸಿಕೊಳ್ಳುವುದು ಸರಿಯೇ ಎಂಬ ಪ್ರಶ್ನೆ ನನ್ನನ್ನು ಕಾಡಿತು. ಈ ಬಗ್ಗೆ ಮುಖ್ಯ ವರದಿಗಾರ ಜಯಶೀಲ ರಾವ್ ಅವರಲ್ಲಿ ಚರ್ಚಿಸಿದೆ. ಆಯುರ್ವೇದ ವೈದ್ಯರಿಗೆ ಆಗಿರುವ ಈ ಅನ್ಯಾಯ ಸರಿಪಡಿಸಬೇಕಾದ್ದು ವೆಲ್‌ಫೇರ್ ಸ್ಟೇಟಿನ ಕರ್ತವ್ಯವಲ್ಲವೆ? ಸರ್ಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡುವಂಥ ಒಂದು ಲೇಖನ ಬರೆದರೆ ಅದರಿಂದ ಪತ್ರಿಕೆಯನ್ನ ನನ್ನ ಸ್ವಾರ್ಥಕ್ಕೆ ಬಳಸಿಕೊಂಡಂತಾಗುತ್ತದೆಯೇ ಎಂದು ಕೇಳಿದೆ.

ಇದು ನಿಮ್ಮ ತಂದೆಯವರದೊಬ್ಬರದೇ ಆಗಿದ್ದರೆ ಪತ್ರಿಕೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡತಾಗುವುದು ಎನ್ನುವ ನಿಮ್ಮ ನೈತಿಕ ಆಲೋಚನೆ ಸರಿಯಾದುದೇ. ಅಂಥವರು ನೂರಕ್ಕು ಹೆಚ್ಚು ಮಂದಿ ಇದ್ದಾರೆ ಎನ್ನುತ್ತೀರಿ, ಅಂದ ಮೇಲೆ ಇದೊಂದು ನೂರಾರು ಕುಟುಂಬಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಹತ್ವದ ವಿಷಯವೇ ಸರಿ ಎಂದ ಜಯಶೀಲ ರಾಯರು ಯೋಚನೆ ಮಾಡೋಣ ಎಂದರು.

ಹಾಗೆಂದ ಜಯಶೀಲ ರಾಯರು ನಾಗಪ್ಪ ಆಳ್ವ ಅವರಲ್ಲಿ ಪ್ರಸ್ತಾಪಿಸಿದಾಗ ಅವರು ಇದು ಹಣಕಾಸಿನ ಹೊರೆಯಾದ್ದರಿಂದ ಸಚಿವ ಸಂಪುಟದಲ್ಲಿ ನೀತಿ ನಿರ್ಣಯವಾಗಬೇಕಾಗುತ್ತದೆ ಎಂದರಂತೆ. ಹೊರಗಿನಿಂದ, ಶಾಸಕರಿಂದ ಒತ್ತಡವಿಲ್ಲದೆ ಈ ಕೆಲಸ ಸಾಧ್ಯವಿರಲಿಲ್ಲ. ಒಂದೆರಡು ವಾರಗಳ ನಂತರ ಜಯಶೀಲ ರಾಯರು ಆಯರ್ವೇದ ವೈದ್ಯರು, ಅವರ ಸಂಘದ ಅಧ್ಯಕ್ಷರು, ಹಣಕಾಸು ಇಲಾಖೆ ಇವರೆಲ್ಲರ ಅಭಿಪ್ರಾಯಗಳನ್ನು ತಿಳಿದು ಒಂದು ವರದಿ ಮಾಡಲು ಹೇಳಿದರು.

ನಾನು ರಾತ್ರಿ ಪಾಳಿಯಲ್ಲಿದ್ದಾಗ ಹಗಲಿನ ಸಮಯದಲ್ಲಿ ಇವರೆಲ್ಲರನ್ನೂ ಭೇಟಿ ಮಾಡಿದೆ, ಭರತ್ ಅವರನ್ನು ಭೇಟಿ ಮಾಡಿದೆ. ಆಯುರ್ವೇದ ವೈದ್ಯರ ಹುದ್ದೆಗಳು ಪೆನ್ಷನಬಲ್ ಹುದ್ದೆಗಳಲ್ಲ, ನೇಮಕದ ಸಮಯದಲ್ಲೇ ಇದನ್ನು ಒಪ್ಪಿಕೊಂಡೇ ಅವರು ಕೆಲಸಕ್ಕೆ ಸೇರಿರುವುದರಿಂದ ಅವರು ಹಕ್ಕೊತ್ತಾಯ ಮಾಡುವಂತಿಲ್ಲ ಎಂದು ಭರತ್ ತಿಳಿಸಿದರು.

ನಿವೃತ್ತ ಆಯುರ್ವೇದ ವೈದ್ಯರುಗಳು ಸರ್ಕಾರಕ್ಕೆ ತಮ್ಮ ಅಹವಾಲನ್ನು ತೋಡಿಕೊಳ್ಳುವ ಪತ್ರವೊಂದನ್ನು ‘ವಾಚಕರ ವಾಣಿ’ಯಲ್ಲಿ ಪ್ರಕಟಿಸುವುದರ ಮೂಲಕ `ಪ್ರವಾ’ ಈ ಸಾರ್ವಜನಿಕ ಮಹತ್ವದ ವಿಷಯವನ್ನು ಕೈಗೆತ್ತಿಕೊಂಡಿತು.  ಸ್ವಲ್ಪ ದಿನಗಳ ನಂತರ ನನ್ನ ವರದಿ ಪ್ರಕಟವಾಯಿತು. ಹೀಗೆ `ಪ್ರವಾ’ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿತು. ನಂತರ ವೈದ್ಯರ ಸಂಘದ ನಿಯೋಗವೊಂದು ಶ್ರೀ ಗುಂಡಪ್ಪನವರ ನೇತೃತ್ವದಲ್ಲಿ ಮುಖ್ಯ ಮಂತ್ರಿ ನಿಜಲಿಂಗಪ್ಪನವರನ್ನು ಭೇಟಿ ಮಾಡಿತು.

ಮುಖ್ಯ ಮಂತ್ರಿಗಳು ನಿಯೋಗದ ಅಹವಾಲನ್ನು ಆಲಿಸಿ ಅವರ ಮನವಿಯನ್ನು ಹಣಕಾಸು ಇಲಾಖೆಗೆ ಕಳುಹಿಸಿದರು. ಹಣಕಾಸು ಇಲಾಖೆ ಮೊದಲಿನ ವಾದಕ್ಕೇ ಅಂಟಿಕೊಂಡು ನಕಾರಾತ್ಮಕ ಅಭಿಪ್ರಾಯ ನೀಡಿತು. ಜನತೆಗೆ ಸಾಮಾಜಿಕ ಭದ್ರತೆ ನೀಡುವುದು ವೆಲ್ಫೇರ್ ಸ್ಟೇಟಿನ ಜವಾಬ್ದಾರಿ. ಸರ್ಕಾರ ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು. ಆಯುರ್ವೇದ ವೈದ್ಯರ ಹುದ್ದೆಗಳು ನಾನ್ ಪೆನ್ಶನಬಲ್ ಎನ್ನುವ ಅಧಿಕಾರಷಾಹಿ ಮೊಂಡುವಾದಕ್ಕೆ ಕಿವಿಗೊಡದೆ, ಮಂತ್ರ‍್ರಿಮಂಡಲ ಇದನ್ನು ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ನೋಡಿ ಪಿಂಚಣಿ ಸೌಲಭ್ಯ ನೀಡಬೇಕು ಎನ್ನುವ ನಮ್ಮ ವಾದ ಎಸ್ಸೆನ್ ಅವರಿಗೆ ಮನವರಿಕೆಯಾದಂತೆ ತೋರಲಿಲ್ಲ.

ವಿಧಾನ ಮಂಡಲದ  ಅಧಿವೇಶನದ ಅವಧಿಯಲ್ಲಿ ಗೋಪಾಲ ಗೌಡರನ್ನು ಭೇಟಿಯಾಗಿ ಸಮಸ್ಯೆಯನ್ನು ಅವರ ಗಮನಕ್ಕೆ ತಂದೆ. ಪ್ರಜಾವಾಣಿಯಲ್ಲಿ ಪ್ರಕಟವಾದ ಪತ್ರಗಳು, ವಿಶೇಷ ವರದಿಯನ್ನು ತೋರಿಸಿದೆ. ಅಧಿಕಾರಷಾಹಿಯ `ರೂಲ್ ಬುಕ್’ ನಿಲುವಿನಿಂದಾಗಿ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲವೆಂದು ತಿಳಿಸಿದೆ. “ಇಂಥ ಅಧಿಕಾರಿಗಳಿಗೆಲ್ಲ ಚೂರಿ ಹಾಕಬೇಕಯ್ಯ” ಎಂದು ಗೌಡರು ಕೆರಳಿದರು.  

ಗೋಪಾಲ ಗೌಡರು ಆಯರ್ವೇದ ವೈದ್ಯರ ಬವಣೆಯನ್ನೂ, ಆಯುರ್ವೇದದ ಬಗೆಗಿನ ಸರ್ಕಾರದ ಮಲತಾಯಿ  ಧೋರಣೆಯನ್ನು ಖಂಡಿಸಿ ಪತ್ರ ಬರೆಯುವುದಾಗಿಯೂ ಅಸೆಂಬ್ಲಿಯಲ್ಲಿ ಪ್ರಸ್ತಾಪಿಸುವುದಾಗಿಯೂ ತಿಳಿಸಿದರು. ಅಸೆಂಬ್ಲಿಯಲ್ಲಿ ಪ್ರಶ್ನೆ ಕೇಳಿ ಸರ್ಕಾರ ಎಲ್ಲ ವೈದ್ಯರಂತೆ ಆಯುರ್ವೇದ ವೈದ್ಯರಿಗೂ ಪಿಂಚಣಿ ಸೌಲಭ್ಯ ನೀಡಬೇಕೆಂದು ಆಗ್ರಹಪಡಿಸಿದರು.

ರಾಮಕೃಷ್ಣ ಹೆಗಡೆ ಆಗ ಹಣಕಾಸು ಸಚಿವರಾಗಿದ್ದರು. ಅವರನ್ನು ಭೇಟಿಯಾಗಿ ನಾನು “ಇದೊಂದು ನೂರಾರು ಕುಟುಂಬಗಳ ಅನ್ನ ವಸನದ ಪ್ರಶ್ನೆ. ಹಂಗಾಮಿ ಹುದ್ದೆ ಎಂಬ ಪರಿಕಲ್ಪನೆಯಲ್ಲೇ ದೋಷವಿದೆ. ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ, ಸೌಲಭ್ಯ ಒದಗಿಸುವ ವ್ಯವಸ್ಥೆ ಹೇಗೆ ಹಂಗಾಮಿಯಾದೀತು? ಇಲ್ಲಿ ಸೇವೆ ಸಲ್ಲಿಸುವವರಿಗೆ ಸಾಮಾಜಿಕ ಭದ್ರತೆ ಎನ್ನುವುದು ಬೇಡವೆ? ಬರಿಗೈಯ್ಯಲ್ಲಿ ನಿವೃತ್ತರಾಗುವ ಇಂಥವರಿಗೆ ಸರ್ಕಾರ ಏನಾದಾರೂ ಅನ್ನಛತ್ರ ವ್ಯವಸ್ಥೆ ಮಾಡಿದೆಯೆ? ಇವರ ಗತಿ ಏನು? ಪತ್ರಿಕೆ ತನ್ನ ಕೆಲಸ ಮಾಡುತ್ತಿದೆ. ಸರ್ಕಾರ ಇನ್ನದರೂ ಎಚ್ಚೆತ್ತುಕೊಂಡು ತನ್ನ ಕರ್ತವ್ಯವನ್ನು ಮಾಡಬೇಕಿದೆ” ಎಂದೆಲ್ಲ ಹೆಗಡೆಯವರ ಮುಂದೆ ವಾದ ಮಂಡಿಸಿದೆ.

ಹೆಗಡೆಯವರು ನನ್ನೆದುರಿನಲ್ಲೇ ಭರತ್ ಅವರನ್ನು ಕರೆಸಿ ಚರ್ಚಿಸಿದರು. ಭರತ್ ತಮ್ಮ ವಾದಕ್ಕೆ ಅಂಟಿಕೊಂಡರು. ಪಿಂಚಣಿ ಹುದ್ದೆಗಳೆಂದು ಪರಿವರ್ತಿಸಬೆಕಾದರೆ ಮಂತ್ರಿ ಮಂಡಲದ ನಿರ್ಣಯ ಅಗತ್ಯ ಹಾಗೂ ಪೂರ್ವ ಹಣಕಾಸಿನ ಹೊರೆಯನ್ನು ಸರ್ಕಾರದ ಸಂಚಿತ ನಿಧಿಯಿಂದಲೇ ಭರಿಸಬೇಕಾಗುತ್ತದೆ ಅದಕ್ಕೊಂದು ನಿರ್ಣಯವಾಗಬೇಕಾಗುತ್ತದೆ” ಎಂದೆಲ್ಲ ಹೇಳಿದರು.

ಎಲ್ಲವನ್ನೂ ಕೇಳಿಸಿಕೊಂಡ ಹೆಗಡೆಯವರು, ಪಿಂಚಣಿ ಹೊಣೆಯನ್ನು ಸರ್ಕಾರ ಈ ಹಂತದಲ್ಲಿ ಹೊರಲಾಗದು. ಆದರೆ ಸಂಬಂಧಪಟ್ಟ ತಾಲ್ಲೂಕು ಬೋರ್ಡುಗಳು ಅಥವಾ ಮುನಿಸಿಪಾಲಿಟಿಗಳು ಈ ವೈದ್ಯರಿಗೆ ಗ್ರಾಚ್ಯುಯಿಟಿ ನೀಡಲು ತೊಂದರೆಯಾಗಬಾರದು” ಎಂದು ಅಭಿಪ್ರಾಯಪಟ್ಟರು. ಇದಾದ  ಎರಡು ವಾರಗಳಲ್ಲಿ ತಾಲುಕು ಬೋರ್ಡ್ ಅಥವಾ ಮುನಿಸಿಪಾಲಿಟಿ ಇತ್ಯಾದಿ ಲೋಕಲ್ ಫಂಡ್ ಆಸ್ಪತ್ರ‍್ರೆಗಳಲ್ಲಿ ಕೆಲಸ ನಿರ್ವಹಿಸಿದ/ನಿರ್ವಹಿಸುತ್ತಿರುವ ಆಯುರ್ವೇದ ವೈದೈರು ಸಲ್ಲಿಸಿದ ಸೇವೆಯಲ್ಲಿ ವರ್ಷಕ್ಕೆ ಹದಿನೈದು  ದಿನಗಳ ವೇತನವನ್ನು ಗ್ರಾಚ್ಯುಯಿಟಿಯಾಗಿ ನೀಡತಕ್ಕದ್ದೆಂದು ಆಜ್ಞೆ ಹೊರಡಿಸಿದರು.

ಎಪ್ಪತ್ತರ ದಶಕ ಅಡಿ ಇರಿಸಿತು. ಅಲ್ಲೋಲ ಕಲ್ಲೋಲಗಳನ್ನು ಸೃಷ್ಟಿಸಿದ ದಶಕವಿದು. ಕರ್ನಾಟಕದಲ್ಲಿ ದೇವರಾಜ ಅರಸು ಮುಖ್ಯ ಮಂತ್ರಿಯಾದರು. ಸದ್ದಿಲ್ಲದೆ ಸಾಮಾಜಿಕ ಕ್ರಾಂತಿಗೆ ಅಡಿಪಾಯ ಹಾಕಿದ ಸರದಾರ ದೇವರಾಜ ಅರಸು. ದೇವರಾಜ ಅರಸರಿಗೆ `ಪ್ರವಾ’ ಎಂದರೆ ಪ್ರೀತಿ ಮತ್ತು ಹೆದರಿಕೆ.

ಟಿಎಸ್ಸಾರ್ ಅವರಲ್ಲಿ ಗುರುಭಕ್ತಿ. ಈ ಮರ್ಮ ಅರಿತೋ ಏನೋ ಬಿ.ಟಿ.ಸೋಮಣ್ಣನಂಥವರು  ಟಿಎಸ್ಸಾರ್ ಹಿಂದೆಬಿದ್ದು ನನಗೊಂದು ಸ್ಥಾನವನ್ನು ನೀವು ಕರುಣಿಸದೆ, `ನಾ ನಿಮ್ಮ ಬಿಡೆ’ ಎಂದು ದಿನಬೆಳಗೂ `ಪ್ರವಾ’  ಸಂಪಾದಕೀಯ ವಿಭಾಗದಲ್ಲಿ ಬೈಠಕ್ ಮುಷ್ಕರ ಆರಂಭಿಸಿದರು. ಹೀಗೆ ಸೋಮಣ್ಣ ನಮಗೆಲ್ಲ ಚಿರಪರಿಚಿತರಾದರು. ಕೊನೆಗೂ ರಾಯರ ಪ್ರಭಾವದಿದಂದ ಸೋಮಣ್ಣ ಸಿಟಿ ಇಂಪ್ರೂವ್ ಮೆಂಟ್ ಟ್ರಸ್ಟ್ ಬೋರ್ಡಿನ (ಈಗಿನ ಬಿ.ಡಿ.ಎ) ಅಧ್ಯಕ್ಷರಾದರು. ಅಧ್ಯಕ್ಷರಾದ ಮರುದಿನವೇ `ಪ್ರವಾ’ಗೆ ಬಂದು ಟಿಎಸ್ಸಾರ್‌ಗೆ ಅಡ್ಡಬಿದ್ದು ಪತ್ರಕರ್ತರಿಗೆ ನಿವೇಶನ ನೀಡುವ ಭರವಸೆ ಇತ್ತರು.

ಮುಂದೆ ಕರ್ನಾಟಕ ಪತ್ರಕರ್ತರ ಸಂಘದ ಮೂಲಕ ಹೋದ ಪತ್ರಕರ್ತರಿಗೆ ನಿವೇಶನಗಳನ್ನು ಮಂಜೂರು ಮಾಡಿದರು. ಈ ಸೋಮಣ್ಣನಿಗೆ ಹತ್ತಿರದವನಾಗಿದ್ದವನು ನಮ್ಮ ಸಹೋದ್ಯೋಗಿ ಐ.ಕೆ. ಜಹಗೀರ್ ದಾರ್. ನನಗಿಂತ ಎರಡು ಮೂರು ತಿಂಗಳು ಮುಂಚೆ ಟ್ರೈನಿ ಆಗಿ ಸೇರಿದ್ದ ಜಹಗೀರ್‌ದಾರ್ ಪಾಟೀಲ್ ಪುಟ್ಟಪ್ಪನವರ ಗರಡಿಯಲ್ಲಿ ಬೆಳೆದ ಪತ್ರಕರ್ತ. ಈ ಜಾಗೀರ್ ದಾರ್ ಮಹಮದೀಯನೆಂದು ನಮಗೆ ಗೊತಾದದ್ದು ಆತ ನಮ್ಮನ್ನು ಈದ್ ಭೋಜನ ಕೂಟಕ್ಕೆ ತನ್ನ ಮನೆಗೆ ಆಹ್ವಾನಿಸಿದಾಗಲೇ.

ಐ.ಕೆ. ಜಾಗೀರದಾರನಿಗೆ ಟಿಎಸ್ಸಾರ್, ಇಳಕಲ್ ಕೃಷ್ಣಾಚಾರ್ ಜಾಗೀರ್‌ದಾರ್ ಎಂದು ನಾಮಕರಣ ಮಾಡಿದ್ದರು. ಹೀಗಾಗಿ ನಾನೂ ಸೇರಿದಂತೆ ಕೆಲವರು ಬಹಳ ದಿನಗಳ ಕಾಲ ಆತನನ್ನು ಮಾಧ್ವ ಬ್ರಾಹ್ಮಣ ಎಂದೇ ತಿಳಿದಿದ್ದೆವು. ಐ.ಪಿ.ಎಸ್. ಆಫೀಸರ್  ಒಬ್ಬರ ದತ್ತು ಪುತ್ರ. ಹೀಗಾಗಿ ಬೆಂಗಳೂರಿಗೆ ಬಂದು `ಪ್ರವಾ’ ಸೇರಿದ್ದೇ ಸಚಿವಾಲಯದಲ್ಲಿ ಬಲು ಬೇಗ ಪ್ರಭಾವ ಬೆಳೆಸಿಕೊಂಡ. ಮುಂದೆ `ಅರಸು ಆಡಳಿತ ರಂಗ’ ಪುಸ್ತಕ ಬರೆದು ಅರಸು ಅವರ ಆಡಳಿತ ವೈಖರಿ, ಜನಸಾಮಾನ್ಯರ ಬಗೆಗಿನ ಕಾಳಜಿ ಮತ್ತು ವ್ಯಕ್ತಿತ್ವಗಳನ್ನು ಬಿಂಬಿಸಿದವನು.

ಈ ಜಾಗೀರ್‌ದಾರನಲ್ಲಿ  ನಾನು “ಅರಸರ ಕಾಲದಲ್ಲಾದರೂ ಆಯುರ್ವೇದ ವೈದ್ಯರಿಗೆ ಸಾಮಾಜಿಕ ನ್ಯಾಯ ದೊರಕಬಹುದೆ” ಎಂದು ಚರ್ಚಿಸಿದೆ. ನೋಡೋಣ ಎಂದ ಜಾಗೀರ್‌ದಾರ್ ಆಗ ದೇವರಾಜ ಅರಸರ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಪಿ.ಕೆ. ಶ್ರೀನಿವಾಸನ್ (ಇವರು ಡೆಕ್ಕನ್ ಹೆರಾಲ್ಡ್ ನಲ್ಲಿದ್ದರು) ಅವರಿಗೆ ಹೇಳಿ ಒಂದು ಮುಂಜಾನೆ ಆಯುರ್ವೇದ ವೈದ್ಯರ ನಿಯೋಗದ ಭೇಟಿಗೆ ಅವಕಾಶ ಕಲ್ಪಿಸಿದ. ನಿಯೋಗದ ಮನವಿಯನ್ನು ಅರಸರು ಸಾವಧಾನವಾಗಿ ಆಲಿಸಿದರು.

ಆಯುರ್ವೇದ ವೈದ್ಯರ ಹುದ್ದೆ ನಾನ್ ಪೆನ್ಶನಬಲ್, ಪೆನ್ಶನ್ನ ಫಂಡಿಗೆ ಜಿಲ್ಲಾ ಬೋಡ್  /ತಾಲ್ಲೂಕ್ ಬೋರ್ಡ್‌ ಗಳಿಂದ ವಂತಿಗೆ ಪಾವತಿಯಾಗಿಲ್ಲ ಇತ್ಯಾದಿ ಬ್ಯರೊಕ್ರಾಟಿಕ್ ಕಾರಣಗಳನ್ನು ಬದಿಗಿರಿಸಿ ಎಲ್ಲ ಸರ್ಕಾರಿ ನೌಕರರಂತೆ ಈ ವೈದ್ಯರಿಗೂ ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಪಿಂಚಣಿ ನೀಡುವುದು ಪ್ರಜಾ ಕಲ್ಯಾಣ ರಾಜ್ಯದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ತಾಲ್ಲೂಕ್ ಬೋರ್ಡ್ ಗಳು, ಜಿಲ್ಲಾ ಬೋರ್ಡುಗಳ ಆಸ್ತಿಪಾಸ್ತಿ ಮತ್ತು ಸಂಪನ್ಮೂಲಗಳನ್ನು ವಾರಸುದಾರಿಕೆಯಿಂದ ಪಡೆದಿವೆ.

ಆದ್ದರಿಂದ ಪೆನ್ಶನ್ ಫಂಡಿಗೆ ವಂತಿಗೆ ಕಟ್ಟಬೇಕಾದ್ದು ಅವುಗಳ ಕರ್ತವ್ಯ. ಈಗಲೂ ಸರ್ಕಾರ ತಾಲ್ಲೂಕು ಬೋರ್ಡುಗಳಿಂದ ವಂತಿಗೆ ಪಡೆದು ಪಿಂಚಣಿ ನೀಡಬಹುದೆಂದು ಮನವಿಯಲ್ಲಿ ನಿರೂಪಿಸಲಾದ ವಾದವನ್ನು ಮಾತುಕತೆ ಸಮಯದಲ್ಲಿ ಎತ್ತಿ ತೋರಲಾಯಿತು. ಈ ಬಗ್ಗೆ ಹಣಕಾಸು ಇಲಾಖೆ, ಆರೋಗ್ಯ ಇಲಾಖೆ ಮತ್ತು ಪೌರಾಡಳಿತ ಇಲಾಖೆಯಿಂದ ಸಮಗ್ರ ವರದಿ ತರಿಸುವಂತೆ ಅರಸು ಅವರು ತಮ್ಮ ಕಚೇರಿಯ ವಿಶೇಷಾಧಿಕಾರಿಗೆ ತಿಳಿಸಿ ಮನವಿ ಮೇಲೆ ಷರಾ ಬರೆದು ಸಹಿ ಹಾಕಿದರು.

ನಾವು ಸಹನೆಯಿಂದ ಅಹವಾಲು ಕೇಳಿಸಿಕೊಂಡ ಅರಸರಿಗೆ ಕೃತಜ್ಞತೆ ಸಲ್ಲಿಸಿ ನಿರ್ಗಮಿಸಿದೆವು. ದೇವರಾಜ ಅರಸರು ಏನು ಪವಾಡ ಮಾಡಿದರೋ ತಿಳಿಯದು, ಸುಮಾರು ಎರಡು ಎರಡೂವರೆ ತಿಂಗಳ ನಂತರ  ತಾಲ್ಲೂಕು ಬೋರ್ಡ್ ಮತ್ತು ಇತರ ಲೋಕಲ್ ಫಂಡ್ ಆಸ್ಪತ್ರೆಗಳಲ್ಲಿನ  ಆಯುರ್ವೇದ ವೈದ್ಯರ ಹುದ್ದೆಗಳ ಪೆನ್ಶನಬಲ್ ಹುದ್ದೆಗಳೆಂದು ಸರ್ಕಾರ ಆಜ್ಞೆ ಹೊರಡಿಸಿತು ಈ ಆಜ್ಞೆಯು ಗ್ರಾಚುಯಿಟಿ ಆಜ್ಞೆಯಾದ ದಿನದಿಂದ ಪೂರ್ವಾನ್ವಯ  ಜಾರಿಗೆ ಬರಲಿದೆಯೆಂದು ಸ್ಪಷ್ಟಪಡಿಸಲಾಗಿತ್ತು. ಇದರಿಂದಾಗಿ ಹಲವಾರು ಕುಟುಂಬಗಳು ನೆಮ್ಮದಿ ಕಂಡವು.

ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ಸ್ ಸಂಸ್ಥೆಯಲ್ಲಿ ಕೆಲವು ಅಕ್ರಮಗಳು ಅನ್ಯಾಯಗಳು ನಡೆಯುತ್ತಿವೆಯೆಂದೂ ಅಲ್ಲಿ ಕನ್ನಡಿಗ ಉದ್ಯೋಗಿಗಳಿಗೆ ಕಿರುಕುಳ ಕೊಡಲಾಗುತ್ತಿದೆಯೆಂದೂ ಕೆಲವರು `ಪ್ರಜಾವಾಣಿ’ಗೆ ಪತ್ರ ಬರೆದಿದ್ದರು. ಪತ್ರವನ್ನು ಟಿಎಸ್ಸಾರ್ ಹೆಸರಿಗೆ ಬರೆದಿದ್ದರು. ಸಂಪಾದಕರು ಈ ಪತ್ರವನ್ನು ನನಗೆ ಕೊಟ್ಟು “ಒಂದು ತನಿಖಾ ವರದಿ ಮಾಡಲು ಸಾಧ್ಯವೇ ನೋಡು?’ ಎಂದು ತಾಕೀತು ಮಾಡಿದರು. ಪತ್ರಕ್ಕೆ ಸಹಿ ಹಾಕಿದವರಲ್ಲಿ ಪ್ರೊಫೆಸರಗಳೂ ಸೇರಿದ್ದರು.

ಅವರಲ್ಲಿ ಖ್ಯಾತ ಸಾಹಿತಿ ಮತ್ತು `ಕೊರವಂಜಿ’ಯ ಪತ್ರಕರ್ತ ರಾಶಿಯವರ ಅಳಿಯ ಶ್ರೀ ಮಿರ್ಲೆಯವರು ಸೇರಿದ್ದರು. ಇಂಥ ಕೆಲಸಗಳನ್ನು ನಾನು ಸುದ್ದಿ ಮೇಜಿನ ಕೆಲಸ ತಪ್ಪಿಸದೆ ಮಧ್ಯಾಹ್ನ ಮತ್ತು ರಾತ್ರಿ ಪಾಳಿಗಳಿದ್ದಾದಾಗ ಹಗಲು ಹೊತ್ತು ಮಾಡಬೇಕಿತ್ತು. ಆಗ ಬೆಂಗಳೂರು ಐ.ಐ.ಎಂ.ನ ನಿರ್ದೇಶಕರಾಗಿದ್ದವರು ರಾಮಸ್ವಾಮಿ ಅಂತ. ಕೇರಳದ ಪ್ರಭಾವಿ ವ್ಯಕ್ತಿ. ಈತ ಪುಣೆಯ ಐ.ಐ.ಎಂ ನಿರ್ದೇಶಕರೂ ಆಗಿದ್ದು ಏಕಕಾಲದಲ್ಲಿ ಎರಡು ಹುದೆಗಳನ್ನು ನಿರ್ವಹಿಸುತ್ತಾ ಎರಡೆರಡು ಸಂಬಳ  ಭತ್ಯೆಗಳನ್ನು ಪಡೆಯುತ್ತಿದ್ದರು. ಪುಣೆ ಬೆಂಗಳೂರಿನ  ಮಧ್ಯೆ ವಿಮಾನದಲ್ಲಿ ಪಯಣಿಸುತ್ತಾ ಹಾರಾಡುವ ನಿರ್ದೇಶಕ ಎಂದು ಖ್ಯಾತರಾಗಿದ್ದರು.

ರಾಶಿಯವರ ಅಳಿಯ ಶ್ರೀ ಮಿರ್ಲೆಯವರ ಭೇಟಿಯಿಂದಲೇ ನನ್ನ ತನಿಖಾ ವರದಿ ಕೆಲಸ ಶುರುವಾಯಿತು. ಮಿರ್ಲೆಯವರು ಅಲ್ಲಿನ ಇನ್ನಷ್ಟು ಮಂದಿ ಪ್ರೊಫೆಸರುಗಳು ಹಾಗೂ ಆಡಳಿತ ಮತ್ತು ಅಕೌಂಟ್ಸ್ ವಿಭಾಗದವರನ್ನು ಭೇಟಿ ಮಾಡಿಸಿದರು. ಹಲವಾರು ದೂರುಗಳು, ಅಕ್ರಮಗಳು ಕೇಳಿಬಂದವು. ಈ ಎಲ್ಲ ಮಾಹಿತಿಗಳಿಗೆ ಪೂರಕವಾದ ದಾಖಲೆ ಪ್ರತಿಗಳನ್ನು ಕೊಟ್ಟರು. ಇಷ್ಟೆಲ್ಲ ಸಿದ್ಧತೆಗಳೊಂದಿಗೆ ನಾನು ರಾಮಸ್ವಾಮಿಯವರನ್ನು ಭೇಟಿಮಾಡಲು ಹೋದೆ.

ನಾನು ಸಿಬ್ಬಂದಿಯನ್ನು ಭೇಟಿ ಮಾಡಿದ್ದು, ಅವರುಗಳಿಂದ ಮಾಹಿತಿ ಪಡೆದದ್ದು ಎಲ್ಲವನ್ನೂ ರಾಮಸ್ವಾಮಿಯವರಿಗೆ ಯಾರೋ ತಿಳಿಸಿದ್ದರು. ರಾಮಸ್ವಾಮಿಯವರು ತಮ್ಮ ಕಾರ್ಯದರ್ಶಿ ಮೂಲಕ ನನ್ನ ಭೇಟಿಯ ಉದ್ದೇಶ ತಿಳಿದವರೇ ಸಂದರ್ಶನ ನಿರಾಕರಿಸಿದರು. ನಿರ್ದೇಶಕರ ಹೇಳಿಕೆ ಇಲ್ಲದಿದ್ದರೆ ವರದಿ ಏಕಮುಖವಾಗುತ್ತಿತ್ತು. ನಿರ್ದೇಶಕರು ಈ ವರದಿಗಾರನನ್ನು ಭೇಟಿಯಾಗಲು ನಿರಾಕರಿಸಿದರು ಎಂದೇ ಬರೆಯಬೇಕಾದಿತು ಎನ್ನುವ ಅಸ್ತ್ರ ಬಿಟ್ಟಾಗ  ರಾಮಸ್ವಾಮಿಯವರು ಭೇಟಿಯಾಗಲು ಒಪ್ಪಿದರು.

“ಸಂಜೆ ಏಳಕ್ಕೆ ಮಹಾತ್ಮಾಗಾಂಧಿ ರಸ್ತೆಯ `ಬ್ಲೂಫಾಕ್ಸ್’ನಲ್ಲಿ ನಿರ್ದೇಶಕರನ್ನು ನೀವು ಭೇಟಿ ಮಾಡಬಹುದು ಎಂದು ಪಿ.ಎ. ತಿಳಿಸಿದರು. ನಾನು ಇದಕ್ಕೆ ಒಪ್ಪಲಿಲ್ಲ.”ನಿರ್ದೇಶಕರ ಕಚೇರಿಯಲ್ಲೇ ಸಂದರ್ಶನ ಬೇಕು” ಎಂದು ಪಟ್ಟು ಹಿಡಿದೆ. ಕೊನೆಗೆ ಮರುದಿನ ತಮ್ಮ ಕಚೇರಿಯಲ್ಲೇ ಸಂದರ್ಶನ ನೀಡಿ ಎಲ್ಲ ದೂರುಗಳನ್ನೂ ನಿರಾಕರಿಸಿದರು. ದಾಖಲೆ, ಸಾಕ್ಷ್ಯಗಳು  ನನ್ನಲ್ಲಿವೆ ಎಂದಾಗ ಅವೆಲ್ಲ ತನಗೆ ಆಗದವರು ಸೃಷ್ಟಿಸಿರುವ ನಕಲಿ ದಾಖಲೆಗಳು ಎಂದು ಜಾರಿಕೊಂಡರು. ತಮ್ಮ ವಿರುದ್ಧ ಏನಾದರೂ ಬರೆದಲ್ಲಿ ಪತ್ರಿಕೆ  ಮಾನನಷ್ಟ ಮೊಕದ್ದಮೆಯನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಸಿದರು.

ನಾನು ತನಿಖಾ ವರದಿ ಬರೆದು ಟಿಎಸ್ಸಾರ್ ಮುಂದಿಟ್ಟೆ. ವರದಿ ಪ್ರಜಾವಾಣಿ ಮುಖಪುಟದಲ್ಲಿ ಎರಡು ಕಂತುಗಳಲ್ಲಿ ಪ್ರಕಟವಾಯಿತು. ಇದು ನಮ್ಮ ಸಂಸದರ ಕಣ್ಣು ತೆರೆಸಿತು. ಲೋಕಸಭೆ, ರಾಜ್ಯಸಭೆಗಳಲ್ಲಿ ಪ್ರಶ್ನೆಗಳನ್ನು ಕೇಳಿದರು. ಬೆಂಗಳೂರಿನ ಐ.ಐ.ಎಂ. ವಿದ್ಯಮಾನಗಳ ಬಗ್ಗೆ ಚರ್ಚೆಯಾಯಿತು. ಕೇಂದ್ರ ಸರ್ಕಾರ ತನಿಖೆಗೆ ಆಜ್ಞೆ ಮಾಡಿತು. ರಾಮಸ್ವಾಮಿಯವರು ತಕ್ಷಣ ಪುಣೆಯ ಐ.ಐ.ಎಂ ಹುದ್ದೆ ತ್ಯಜಿಸಬೇಕಾಯಿತು. ನಂತರ ಬೆಂಗಳೂರು ಐ.ಐ.ಎಂ. ನಿಂದಲೂ ನಿರ್ಗಮಿಸಿದರು.

ಆಗ ವರದಿಗಾರರಿಗೆ  ಸುಖಾಸುಮ್ಮನೆ `ಬೈಲೈನ್’ ಕೊಡುತ್ತಿರಲಿಲ್ಲ. ನನ್ನ ಕೆಲವು ವರದಿಗಳು `ವಿಶೇಷ ವರದಿ’ಗಳಾಗಿ ಪ್ರಕಟಗೊಂಡದ್ದು  ಸಹೋದ್ಯೋಗಿಗಳು ಕೆಲವರಲ್ಲಿ (ಅದರಲ್ಲೂ ವರದಿಗಾರರಲ್ಲಿ) ಅಸಮಾಧಾನಕ್ಕೆಡೆ ಮಾಡಿಕೊಟ್ಟಿದ್ದವು. ಸಂಪಾದಕರು ಮೂರು ನಾಲ್ಕು ತಿಂಗಳಿಗೊಮ್ಮೆ ಸಂಪಾದಕೀಯ ಸಿಬ್ಬಂದಿಯ ಸಭೆ ಕರೆಯುತ್ತಿದ್ದರು. ಪತ್ರಿಕೆಯ ಗುಣಮಟ್ಟವನ್ನು ಮತ್ತಷ್ಟು ಮೇಲಕ್ಕೇರಿಸುವುದು ಹೇಗೆ ಇತ್ಯಾದಿ ವಿಷಯಗಳು ಈ ಸಭೆಯಲ್ಲಿ ಮುಕ್ತ ಚರ್ಚೆಗೆ ಬರುತ್ತಿದ್ದವು.

ಇಂಥ ಒಂದು ಸಭೆಯಲ್ಲಿ ವರದಿಗಾರರ ಅಸಮಾಧಾನಕ್ಕೆ ಜಯಶೀಲ ರಾವ್ ದನಿಯಾದರು. ವರದಿಗಾರರ ವಿಭಾಗವೊಂದಿರುವಾಗ ಅದರ ಕೆಲಸವನ್ನು ಡೆಸ್ಕಿನವರಿಗೆ ವಹಿಸುವುದು ಸರಿಯಲ್ಲ. ಇದು ವರದಿಗಾರರ ನೈತಿಕ ಸೈರ್ಯವನ್ನು ಕುಂದಿಸುತ್ತದೆ. ಬೇಕಾದರೆ ಅವರನ್ನು(ನನ್ನನ್ನು) ವರದಿಗಾರರ ವಿಭಾಗಕ್ಕೆ ವರ್ಗಾಯಿಸಬಹುದು ಎಂದು ಜಯಶೀಲ ರಾಯರು ಮಾತು ನಿಲ್ಲಿದರು. ಇನ್ನೊಬ್ಬ ಹಿರಿಯ ಉಪಸಂಪಾದಕರು “ಇಲ್ಲಿ ಕೆಲವರಿಗೇ ಅವಕಾಶಗಳು ಸಿಗುತ್ತಿವೆ. ಎಲ್ಲರಿಗೂ ಸಮಾನವಾಗಿ ಅವಕಾಶಗಳು ಸಿಗಬೇಕು” ಎಂದರು.

“ಯಾರಿಗೆ ಯಾವ ಕೆಲಸ ವಹಿಸಬೇಕು ಎನ್ನುವುದು ಸಂಪಾದಕನಾಗಿ ನನ್ನ ವಿಶೇಷಾಧಿಕಾರ (ಇಟೀಸ್ ಮೈ ಪ್ರೆರೊಗೆಟಿವ್). ಅಗತ್ಯ ಕಂಡುಬಂದಾಗ ವರ್ಗಾವಣೆಯನ್ನು ಮಾಡಲಾಗುವುದು, ಸಮರ್ಥರಿಗೆ ಅವಕಾಶಗಳು ಸಿಕ್ಕೇ ಸಿಗುತ್ತವೆ. ಈ ವೃತ್ತಿಯಲ್ಲಿ ಸಮಾನ ಅವಕಾಶಗಳ ಹಕ್ಕೊತ್ತಾಯವಮನ್ನು  ಮಾನ್ಯಮಾಡುವುದು ಕಷ್ಟಸಾಧ್ಯ, ಈಕ್ವಿಟಿಬಲ್  ಅವಕಾಶಗಳು ಸಿಗಬೇಕು, ಸಿಗುತ್ತವೆ” ಎಂದು ಟಿಎಸ್ಸಾರ್ ಗಂಭೀರ ದನಿಯಲ್ಲಿ ಹೇಳುತ್ತಿದ್ದಂತೆ ನಮ್ಮ ನಡುವೆ ಕುಳಿತಿದ್ದ ಗ್ರಾಮಾಂತರ ಮೇಜಿನ ಉಪ ಸಂಪಾದಕ ಶ್ರೀಕಂಠಯ್ಯನವರು (ಇವರನ್ನು ಟಿಎಸ್ಸಾರ್ `ವಿಶ್ರಾಂತ್ ಜೀ’,`ಏಕಾಂತ ಜೀ’  ಎಂದು ಕರೆಯುತ್ತಿದ್ದರು)-  “ನೀನು ಇನ್ನೂ ಎಷ್ಟು ದಿವಸ ಗೂಟ ಬಡ್ಕೊಂಡು ಈ ಕುರ್ಚೀಲಿ ಕೂತಿರ್ತಿ” ಎಂದು ಟಿಎಸ್ಸಾರ್ ಅವರನ್ನು ಕೇಳಿ ಬಿಟ್ಟರು.

ಒಂದು ಕ್ಷಣ ಸಭೆ ದಂಗಾಗಿ ಹೋಯಿತು. ಶ್ರೀಕಂಠಯ್ಯನವರು “ನಂಗೆ ಯಾರ ಸಹಾಯವೂ ಬೇಕಿಲ್ಲ” ಎಂದು ಹೊರಕ್ಕೆ ಹೋಗಿ ರಾಜೀನಾಮೆ ಪತ್ರ ಬರೆದು ಸಂಪಾದಕರ ಕೈಯ್ಯಲ್ಲಿಟ್ಟು ನಡೆದೇ ಬಿಟ್ಟರು. ನಾನಂತೂ ಈ ಎಲ್ಲ ನಡಾವಳಿಗಳಿಂದ ಸ್ತಂಬೀಭೂತನಾಗಿದ್ದೆ. `ವಿಶ್ರಾಂತ್ ಜೀ” ಎಂಬ ಅಡ್ಡ ನಾಮಾಂಕಿತ ಶ್ರೀಕಂಠಯ್ಯನವರು ರಾಜೀನಾಮೆ ಫಲವಾಗಿ ಬಂದ ಹಣವನ್ನೆಲ್ಲ ಶ್ರೀ ಜಿ.ವಿ. ಐಯ್ಯರ್ ಅವರ ಕೈಯ್ಯಲ್ಲಿಟ್ಟರು.

ಆಗ ಐಯ್ಯರ್ “ಆನೆ ಹುಡುಗ” (ಎಲಿಫೆಂಟ್ ಬಾಯ್) ಎನ್ನುವ ಚಿತ್ರ  ತಯಾರಿಸುವ ಉಮೇದಿನಲ್ಲಿದ್ದರು,. ‘ಸುಧಾ’ ಸಂಪಾದಕ ಸೇತೂರಾಂ, ಜಿ,ವಿ.ಐಯ್ಯರ್, ಶ್ರೀಕಂಠಯ್ಯ ಮತ್ತು ಬಿ.ವಿ.ಕೆ ಶಾಸ್ತ್ರಿ ಬಾಲ್ಯದಿಂದ ನಂಜನಗೂಡಿನಲ್ಲಿ ಸಹಪಾಠಿಗಳಾಗಿದ್ದರು. `ಏಕಾಂತ್‌ಜೀ-ವಿಶ್ರಾಂತ್ ಜೀ’ ಶ್ರೀಕಂಠಯ್ಯನವರು ತಮ್ಮ ಉಳಿತಾಯ ಧನವನ್ನೆಲ್ಲ ಮಿತ್ರ ಐಯ್ಯರರ ಕೈಯ್ಯಲ್ಲಿಟ್ಟರು. ಆದರೆ `ಆನೆ ಹುಡುಗ’ ಚಿತ್ರ ಬರಲೇ ಇಲ್ಲ. ಶ್ರೀಕಂಠಯ್ಯನವರು ಕೊನೆಗೆ ಮೈಸೂರು ರಸ್ತೆಯ ದೊಡ್ಡ ಆಲದ ಮರದ ಹತ್ತಿರ ಒಂದು ಆಶ್ರಮ ಸ್ಥಾಪಿಸಿಕೊಂಡು ತಮ್ಮ ಜೀವಿತದ ಕೊನೆಯನ್ನು ಕಳೆದರು.

ಮತ್ತೊಮ್ಮೆ ವೈ ಎನ್ ಕೆ ಸುದ್ದಿ ಸಂಪಾದಕರಾಗಿದ್ದಾಗ ನಡೆದದ್ದು. ಆಗ ಶ್ರೀ ವಡ್ಡರ್ಸೆ ರಘುರಾಮ ಶೆಟ್ಟರು ಮುಖ್ಯ ವರದಿಗಾರರಾಗಿದ್ದರು. ಯಾವುದೋ ಒಂದು ಸಾಂಸ್ಕೃತಿಕ ಸಮಾರಂಭ. ಮುಖ್ಯ ವರದಿಗಾರರು ಆ ಸಮಾರಂಭ ವರದಿಮಾಡಲು ಯಾರನ್ನೂ ನಿಯೋಜಿಸಿರಲಿಲ್ಲ. ಇದನ್ನು ತಿಳಿದ ವೈ ಎನ್ ಕೆ ಆ ಸಮಾರಂಭಕ್ಕೆ ಹೋಗಿ ವರದಿ ಮಾಡುವಂತೆ ನನಗೆ ಆದೇಶಿಸಿದರು. ಮರು ದಿನ ನನ್ನ ವರದಿ ಪ್ರಕಟವಾಯಿತು. ಅಂದು ಕಚೇರಿಗೆ ಬಂದ ರಘುರಾಮ ಶೆಟ್ಟರು ನನ್ನ ಕರೆದು “ಇದನ್ನು ವರದಿ ಮಾಡುವಂತೆ ನಿನಗೆ ಯಾರು ಹೇಳಿದ್ದು?” ಎಂದು ಕೇಳಿದರು. “ಸಂಪಾದಕರು” ಎಂದೆ.

“ವರದಿಯನ್ನು ನನಗೇಕೆ ತೋರಿಸಲಿಲ್ಲ?- ರಘುರಾಮ ಶೆಟ್ಟರು ಕೊಂಚ ಗಡುಸಾಗಿಯೇ ಕೇಳಿದರು.

“ಸಂಪಾದಕರು ಹೇಳಿದ್ದರಿಂದ ವರದಿಯನ್ನು ಅವರಿಗೇ ಕೊಟ್ಟೆ. ಇದರಲ್ಲಿ ತಪ್ಪೇನು?”

“ಹಾಗೋ, ಆಯಿತು, ಮಾಡುವೆನು ನಿನ್ನ ಬೊಜ್ಜ” -ಎಂದು ಶೆಟ್ಟರು ರೇಗಿದರು.

`ಬೊಜ್ಜ’ ಎಂದರೇನು ನನಗೆ ತಿಳಿಯಲಿಲ್ಲ. ಶ್ರೀಧರ ಆಚಾರ್ ಅವರನ್ನು ಕೇಳಿದೆ. ದ.ಕ. ಭಾಷೆಯಲ್ಲಿ `ಬೊಜ್ಜ’ ಎಂದರೆ ತಿಥಿಯಂತೆ!

ರಘುರಾಮ ಶೆಟ್ಟರ ಅಸಮಧಾನ ಸಹಜವೇ ಆಗಿತ್ತು. ಸಂಪಾದಕರು ಈ ಕೆಲಸವನ್ನು ನನಗೆ ವಹಿಸಿದಾಗ ಅವರಿಗೆ ತಿಳಿಸುವುದು, ವರದಿಯನ್ನು ಅವರ ಗಮನಕ್ಕೆ ತರಬೇಕಾದ್ದು ವೃತ್ತಿಯಲ್ಲಿನ ಒಂದು ಸೌಜನ್ಯದ ನಡೆಯಾಗಿತ್ತು. ನಾನೂ ಈ ಸೌಜನ್ಯದ ಎಲ್ಲೆ ಮೀರಿದ್ದೆ. ರಘುರಾಮ ಶೆಟ್ಟರು ಇದನ್ನೊಂದು ಪ್ರತಿಷ್ಠೆಯ ವಿಷಯ ಮಾಡಲಿಲ್ಲ ಎನ್ನುವುದು ಅವರ ಪ್ರಬುದ್ಧತೆ, ಹೃದಯ ವೈಶಾಲ್ಯತೆಗಳಿಗೆ ನಿದರ್ಶನ.

ಇದಾದ ಕೆಲವು ದಿನಗಳ ನಂತರ ಖ್ಯಾತ ಆಯರ್ವೇದ ತಜ್ಞ ವೈದ್ಯ ಕೆ.ಗೋಪಾಲಕೃಷ್ಣ ರಾಯರ ಎಪ್ಪತ್ತನೇ ಹುಟ್ಟು ಹಬ್ಬದ ಸಮಾರಂಭವೊಂದು ನಡೆಯಿತು. ಪಂಡಿತ ತಾರಾನಾಥರ ಕಟ್ಟಾ ಶಿಷ್ಯರಾಗಿದ್ದ ಗೋಪಾಲಕೃಷರಾಯರ ಅಲ್ಪಸ್ವಲ್ಪ ಪರಿಚಯ ನನಗಿತ್ತು- ಅಣ್ಣನ ಮೂಲಕ. ರೋಗನಿದಾನ ಮತ್ತು ಚಿಕಿತ್ಸೆಯಲಿ ಶಾಸ್ತ್ರಬದ್ಧರಾಗಿದ್ದ  ಗೋಪಾಲಕೃಷ್ಣರಾಯರು ಪಥ್ಯ  ವಿಷಯದಲ್ಲಿ ತುಂಬ  ಕಟ್ಟುನಿಟ್ಟಿನವರಾಗಿದ್ದು ಜನಪ್ರ‍್ರಿಯರೂ- ಅಪ್ರಿಯರೂ ಅಗಿದ್ದರು.

ಅವರನ್ನು ಸಂದರ್ಶಿಸಿ ನಾನು ಬರೆದ ಲೇಖನ ಭಾನುವಾರದ ಸಂಚಕೆಯಲ್ಲಿ ಪ್ರಕಟವಾಯಿತು. ಸೋಮವಾರ ಕಚೇರಿಗೆ ಬಂದವರೇ ರಘುರಾಮ ಶೆಟ್ಟರು ನಾನು ಕುಳಿತಿದ್ದ ಜಾಗಕ್ಕೇ ಬಂದು “ಗೋಪಾಲಕೃಷ್ಣರಾಯರ ಸಂದರ್ಶನ ಲೇಖನ ಚೆನ್ನಾಗಿದೆ. ಅವರ ನಿಷ್ಠುರ ವ್ಯಕ್ತಿತ್ವವನ್ನು ಚೆನ್ನಾಗಿ ಗ್ರಹಿಸಿ, ಬಿಡಿಸಿದ್ದೀಯ” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಇಂದಿಗೂ ನನ್ನ ಕಿವಿಗಳಲ್ಲಿ ನಿನದಿಸುತ್ತಿದೆ. 

। ಮುಂದಿನ ವಾರಕ್ಕೆ ।

October 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಪತ್ರಿಕಾ ರಂಗವು ಎಷ್ಟೊಂದು ಮುಳ್ಳುಗಳಿಂದ ತುಂಬಿದ ಹಾದಿಯಾಗಿದೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: