ಎಸ್‌ ಸಾಯಿಲಕ್ಷ್ಮಿ ಸರಣಿ 2: ಬಾನುಲಿಯ ಮಕ್ಕಳ ಮೋಹಕ ಲೋಕ

ಎಸ್ ಸಾಯಿಲಕ್ಷ್ಮಿ

ಕಥನಕವನ ಸ್ನೇಹಗಾನದ ಜನನ

ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ ಕೈಸೇರಿ ಮೆಚ್ಚುಗೆ ಗಳಿಸಿದೆ‌.

ಬಾನುಲಿ ಮಾಧ್ಯಮದಲ್ಲಿ ಅನೇಕ ಬಗೆಯ ನುಡಿ ಪ್ರಯೋಗ, ಮಕ್ಕಳ ಅತ್ಯದ್ಬುತ ರಂಗಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಸಾಯಿಲಕ್ಷ್ಮಿ. ಎಸ್ ಇವರು ತಮ್ಮ ರಚನೆ ಮತ್ತು‌ ಪ್ರಸ್ತುತಿಯ ಮಕ್ಕಳ ಗೀತರೂಪಕ “ಸರ್ಕಸ್ ಆನೆನಲ್ಲಿ” ಇದಕ್ಕಾಗಿ ಆಕಾಶವಾಣಿ ಕೊಡಮಾಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಬಾನುಲಿಯ ತಮ್ಮ ಆಸಕ್ತಿದಾಯಕ ವೃತ್ತಿಕಾಯಕದಲ್ಲಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪೂರೈಸಿರುವ ಸಾಯಿಲಕ್ಷ್ಮಿ ಇವರಿಗೆ ಸಂಗೀತ, ಸಾಹಿತ್ಯ ಹಾಗೂ ತೋಟಗಾರಿಕೆ ಪ್ರಿಯ ಕ್ಷೇತ್ರಗಳು. ಅಪಾರ ಮನ್ನಣೆ ಪಡೆದ “ಹೂಬತ್ತಿ” ಇವರ ಮೊದಲ‌ ಕಾದಂಬರಿ.

| ಕಳೆದ ಸಂಚಿಕೆಯಿಂದ |

ಆಕಾಶವಾಣಿಯಲ್ಲಿ ಸದಾ ನನ್ನ ಸುತ್ತ‌ ಮಕ್ಕಳೇ. ಅವರ ಲವಲವಿಕೆಯ ಉತ್ಸಾಹಭರಿತ ಖುಷಿಯ ಸಾಮ್ರಾಜ್ಯದಲ್ಲಿ ನನ್ನ ವಿಹಾರ. ಮಕ್ಕಳೊಡನಿದ್ದು ಅವರಿಗಾಗಿ‌ ಬರೆಯುವುದು ಅವರ‌ ಮನಸ್ಸಿನ ಹದಮುದ ನೋಡಿ ಕಾರ್ಯಕ್ರಮ ರೂಪಿಸುವುದು ನಿಜಕ್ಕೂ ಸವಾಲೇ ಸರಿ. ಅವರಿಗೆ ಅರ್ಥವಾಗುವಂತೆ ಅವರಿಗೆ ಎಟುಕುವ ಭಾಷೆಯನ್ನು ಅವರ ಭಾವಲೋಕದ ವಿಷಯಕ್ಕೆ ಒಗ್ಗುವಂತೆ ಬಳಸಬೇಕು.

ಪದಗಳು ಸರಳವಾಗಿದ್ದು ಪ್ರಾಸಬದ್ದವಾಗಿದ್ದರೆ ಅವರಲ್ಲೊಂದು ಬಗೆಯ ಹಿಗ್ಗು, ಬೆರಗು ಮೂಡುತ್ತದೆ. ಬಹುಕಾಲ ಅವರ ಕೇಳ್ಮೆಯ ಗಮನ ಹಿಡಿದಿಟ್ಟುಕೊಳ್ಳುವುದು ಸಾಹಸವೇ. ದಿನವಿಡೀ ಬಾನುಲಿಯಲ್ಲಿ ಮಕ್ಕಳ ಕಾರ್ಯಕ್ರಮ ನಿರ್ಮಾಪಕಿಯಾಗಿ ಅವರೊಡನ ವ್ಯವಹರಿಸಿ ಅವರ ಮನೋ ಪ್ರಪಂಚ ಆತ್ಮೀಯವಾಯಿತು. 

ಮನೆಯಲ್ಲೂ ಇಬ್ಬರು ಪುಟ್ಟ ಪುತ್ರಿಯರು. ಅವರಿಗಾಗಿ ಬರೆದು ಮೊದಲ‌ ಪ್ರಯೋಗ ಮಕ್ಕಳ ಗೆಳೆಯ ಗೆಳತಿಯರ ಗುಂಪಿನಲ್ಲೇ ಯಶಸ್ವಿಯಾಗಿ ಪರಿಷ್ಕಾರ ಕಂಡು ನಂತರ ಆಕಾಶವಾಣಿಯ ಕಾರ್ಯಕ್ರಮದ ರೂಪ ಧರಿಸುವುದು. ನಾನು ಹೆಚ್ಚು ಬರೆಯುತ್ತಿದ್ದುದೇ ಗೀತರೂಪಕದಲ್ಲಿ ಚಿಕ್ಕ ಚಿಕ್ಕ ಪದ್ಯಗಳ ಮೂಲಕ ಕತೆಕಟ್ಟುವಿಕೆ. 

ಮುದ್ದಾಗಿ ಹಾಡುವ ಚಿಣ್ಣರ ಗುಂಪು, ನಿಲಯದ ಹಿರಿಯ ಕಲಾವಿದರ ವಾದ್ಯ ಸಹಕಾರ, ಸಂಗೀತ ಸಂಯೋಜಕರ ಕಲ್ಪನೆ ಎಲ್ಲ ಬೆರೆತ ಮೇಲೆ ಕೇಳಬೇಕೇ?  ಕೆಲವೊಮ್ಮೆ ಮಗುವಿನ ಪ್ರತಿಭೆ ಧ್ವನಿಯ ಏರಿಳಿತ‌, ಆಕರ್ಷಕ ಅಭಿವ್ಯಕ್ತಿ ಮಧುರ ಭಾವ ಸಂಚಾರಕ್ಕೆ ಹೊಂದುವಂತೆ ನನ್ನ ಬರವಣಿಗೆ ಯೋಜಿಸುತ್ತಿದ್ದೆ. ಒಂದು ದಿನ ಮನೆಯ ಮಕ್ಕಳಿಗೆ ಪಾರಿವಾಳದ ಸ್ನೇಹದ ಹಸಿವಿನ ಕತೆ ಕಟ್ಟಿ ಹೇಳುತ್ತಿದ್ದೆ. ಅದರ ಒಟ್ಟು ಸಾರಾಂಶ ಹೀಗಿದೆ.

ಅಮ್ಮ ಪಾರಿವಾಳ ತನ್ನ ಚಿನ್ನಿಮರಿಯನ್ನು ಗೂಡಲ್ಲಿ ಬಿಟ್ಟು ಆಹಾರ ಹುಡುಕುತ್ತ ಹಾರುತ್ತಿರುತ್ತದೆ. ಅಲ್ಲೊಂದು ಶಾಲೆ. ಅಲ್ಲಿ ಮಕ್ಕಳ ಗುಂಪು ಆನಂದದಿಂದ ಕಲೆತು‌ ಆಟವಾಡುತ್ತಿರುತ್ತದೆ. ಒಂದು ಮಗು ಮಾತ್ರ ಮಂಕಾಗಿ ತಿಂಡಿಯ ಡಬ್ಬ ತೆರೆದು ಏನೋ ಯೋಚಿಸುತ್ತ ಕೂತಿರುತ್ತದೆ. ಹಾರುತ್ತಿದ್ದ ಅಮ್ಮ ಹಕ್ಕಿ ಮಗುವಿನ ಬಳಿ ತನ್ನ ಮಗುವಿಗೆ ಏನಾದರೂ ಸಿಗಬಹುದೆಂಬ ಆಸೆಯಿಂದ ಬರುತ್ತದೆ. ಮಗುವಿಗೂ ಅದನ್ನು ಕಾಣುತ್ತಿದ್ದಂತೆ ಮನದಲ್ಲಿ ಹರುಷದ ಅಲೆ. ಅದು ಕೂಗಿ ಕರೆಯುತ್ತದೆ.

“ಬಾ ಹಕ್ಕಿ ಬಳಿ ಬಾ ಹಕ್ಕಿ
ಕೇಳು ಮನದ‌ ಮಾತಾ ಹಕ್ಕಿ
ನಾನು ಕರೆವೆ ಹರುಷ‌ ಉಕ್ಕಿ
ಕೊಡುವೆ ನಿನಗೆ ಕಾಳು ಹೆಕ್ಕಿ
ಬಾ ಹಕ್ಕಿ ಬಳಿ ಬಾ ಹಕ್ಕಿ”
ಹೀಗೆ ಮಗು ಮತ್ತು ಹಕ್ಕಿಯ ನಡುವಿನ ಸ್ನೇಹ ದಿನೇದಿನೇ ಚಿಗುರುತ್ತದೆ

ಮಗು ತಪ್ಪದೆ ದಿನ ಚಿನ್ನಿಮರಿಗಾಗಿ ಒಂದಲ್ಲ ಒಂದು ತಿಂಡಿ ತಂದು ಅಮ್ಮ ಹಕ್ಕಿಯ ಮೂಲಕ ಕಳಿಸುವ ರೂಢಿ. ಅದು ಪಾಪ ಮನೆಯಲ್ಲಿ ಒಂದೇ ಮಗು. ಅಕ್ಕಪಕ್ಕದ ಮನೆಗಳಿಗೆ ಆಡಲು ಹೋಗಲು ಪೋಷಕರು ಒಪ್ಪರು. ಮಗು ಒಂಟಿ. ಅದರ ಸ್ನೇಹದ ಹಂಬಲ ಆ ತಾಯಿಹಕ್ಕಿ ಪೂರೈಸುವುದು. ಎರಡರ ನಡುವೆ ಮಧುರ ಬಾಂಧವ್ಯದ ಬೆಸುಗೆ. ಮರಿಹಕ್ಕಿಗೂ ಮಗು‌ ಮಯೂರಿಗು ಮುಂದೆ ಸ್ನೇಹ ಬೆಳೆದು ಗಾಢವಾಗುತ್ತದೆ.

ಒಂದು ರಜೆಯ ದಿನ ಮರಿಹಕ್ಕಿ ಮಯೂರಿಗೆ ಹತ್ತಿರದ ಉದ್ಯಾನವನದಲ್ಲಿ ನಿನ್ನೊಡನೆ ಸಂಜೆ ಆಟವಾಡಲು ಬರುತ್ತೇನೆ ಎಂದು ಹೇಳಿ ಬೇಗ‌ ಬಂದು ಒಂದು ಪೊದೆಯಲ್ಲಿ ಅಡಗಿ ಕೂತಿರುತ್ತದೆ. ಮಯೂರಿ ಸಂಭ್ರಮದಿಂದ ಅಮ್ಮ‌ಮಾಡಿದ ತಿಂಡಿ, ಕೊಬ್ಬರಿ ಮಿಠಾಯಿ ತುಂಬಿಸಿಕೊಂಡು ಪಾರ್ಕ್ ಗೆ ಬರುತ್ತಾಳೆ. ಕಾಯುತ್ತಾಳೆ ಹುಡುಕಾಡುತ್ತಾಳೆ ಅಡಗಿ‌ಕೂತ‌ ಚಿನ್ನಿಮರಿ ಮಯೂರಿಯ ಚಡಪಡಿಕೆ ಕಾಯುವಿಕೆ ಚಲನವಲನ ಎಲ್ಲವನ್ನು ಖುಷಿಯಿಂದ ನೋಡುತ್ತಿರುತ್ತದೆ.

ಆ ಪುಟ್ಟದಕ್ಕೆ ತುಂಟ ಮನಸ್ಸು‌ ನಿಜವಾಗಲೂ ಮಯೂರಿ  ತನ್ನನ್ನು ಅಷ್ಟು ಹಚ್ಚಿಕೊಂಡಿರುವಳೇ ಎಂಬ ಅನುಮಾನ. ಪರೀಕ್ಷಿಸುವ ಆಸೆ. ಕಾದು ಕಾದು‌ ಮಯೂರಿಗೆ ನಿರಾಸೆಯಿಂದ‌ ಕಣ್ಣಾಲಿ ತುಂಬಿಬಂದು ಕೆನ್ನೆಯ ಮೇಲೆ ಕಣ್ಣ ಹನಿಗಳು ಧಾರೆ ಧಾರೆಯಾಗಿ ಇಳಿಯಲಾರಂಭಿಸುವುದು. ಆ ವೇಳೆಗೆ ಆಗಸದಲ್ಲೂ ದಟ್ಟ ಕರಿಯ ಮೋಡ ಆವರಿಸಿ ಹನಿಯಾಗಿ‌ ಇಳೆಗೆ ಮಳೆ ಇಳಿಯುವುದು. ಜೋರಾಗುತ್ತಿದ್ದಂತೆ ನೆನೆಯುವ ಮಯೂರಿ ಮನೆ ಕಡೆ ಓಡತೊಡಗುತ್ತಾಳೆ.

ಚಿನ್ನಿಮರಿಗೆ ಈಗ ಪಾಪ ಎನಿಸಿ ಪೊದೆಯಿಂದ ಹೊರಬಂದು ಕೂಗುವುದು “ಮಯೂರಿ ಮಯೂರಿ” ಎಂದು. ಆ ಮಳೆ ಗುಡುಗು ಸಿಡಿಲು ಇವುಗಳ‌ ಆರ್ಭಟದಲ್ಲಿ ಮಗುವಿಗೆ ಏನೂ ಕೇಳುವುದಿಲ್ಲ. ಚಿನ್ನಿಮರಿ ಮಳೆಯಲ್ಲೇ ತನ್ನ‌ ಪುಟ್ಟ ರೆಕ್ಕೆಗಳನ್ನು ಪಟಪಟ ಬಡಿಯುತ್ತ ಗೂಡಿಗೆ ಮರಳುತ್ತದೆ. ಅಮ್ಮಹಕ್ಕಿಗೆ ಮಯೂರಿಯ ಸ್ನೇಹವನ್ನು ತಾನು ಪರೀಕ್ಷಿಸಲು ‌ಹೋಗಿದ್ದು ಕಡೆಗೆ ಮಳೆಯಲ್ಲಿ ತೋಯ್ದು ಅವಳು ಮನಯ ದಿಕ್ಕುಹಿಡಿದು ಓಡಿದ್ದು ಸಂಕಟದಿಂದ ಕಣ್ಣೀರು‌ ಮಿಡಿಯುತ್ತ ನಿವೇದಿಸುವುದು. 

 ಅಮ್ಮ‌ಮಗುವನ್ನು‌ ತಬ್ಬಿ ಸಂತೈಸಿ ಅವೆರಡನ್ನು ಒಂದು ಮಾಡುವ ಸಂಕಲ್ಪ ತೊಡುತ್ತದೆ ಚಿನ್ನಿಮರಿಗೆ ಬುದ್ದಿಯೂ‌ ಹೇಳುತ್ತದೆ.
“ಪುಟ್ಟಾ ಸ್ನೇಹ ಪ್ರೀತಿ ಎಂದೂ ನಂಬಿಕೆಯ ಮೇಲೆ‌ ನಿಲ್ಲುವುದು. ಪರೀಕ್ಷೆ ಮಾಡಬಾರದು. ತಿಳೀತಾ”
ಅಮ್ಮಹಕ್ಕಿಗೀಗ ಮಯೂರಿಯ ಮನೆ ಹುಡುಕುವ ಕೆಲಸ. ಶಾಲೆ ಮುಗಿಯುವ ಹೊತ್ತಿಗೆ ಅದು ಅಲ್ಲಿ ಬಂದು ಕಾಯುತ್ತಿರುವುದು.‌ 

ಮಯೂರಿ ದಿನ ಒಂದೆರಡು ಗೆಳತಿಯರೊಡನೆ ಮನೆಯ ಹಾದಿ ಹಿಡಿಯುವುದು ಈ ಹಿಂದೆ ಅದು ನೋಡಿರುವುದು ಹಾಗಾಗಿ ಆ ಬಾಲೆಯರನ್ನು‌ ಹಿಂಬಾಲಿಸಿ‌ ಮಯೂರಿಯ‌‌ ಮನೆಯ ತೆರೆದ ಕಿಟಕಿಯ ಬಳಿ ಬಂದು ಕೂತು‌ ಇಣುಕಿನೋಡುವುದು. ಅದಕ್ಕೆ‌ ನರಳುವ ಸದ್ದು ಕಿವಿಗೆ ಬೀಳುವುದು. ಮಂಚದ ಮೇಲೆ ‌ಮುದುರಿ ಮಲಗಿ ಜ್ವರದಿಂದ ಮುಲುಗುತ್ತಿರುವ‌ ಮಯೂರಿಯು ಕಾಣುವಳು.

ತಡಮಾಡದೆ ಒಳಗಿಳಿದ ಅಮ್ಮಹಕ್ಕಿ ಮಯೂರಿಯ ಬಳಿ ಬಂದು ಕಳವಳದಿಂದ ಅವಳ ಮೈಮುಟ್ಟಿ ವಿಚಾರಿಸಿ ಚಿನ್ನಿಮರಿಯ ತಪ್ಪಿನಿಂದ ಉಂಟಾದ ತೊಂದರೆಗೆ ಕ್ಷಮೆ ಕೇಳುವುದು. ಮಯೂರಿ ಬೇಸರವಿಲ್ಲದೆ ಚಿನ್ನಿಮರಿಗೆ ತನ್ನ ಆತ್ಮೀಯತೆಯ ಸಂಕೇತವಾಗಿ ಹಣ್ಣು ಕಳಿಸುತ್ತಾಳೆ.

ಈ ಕತೆಯ ತಿರುಳು ಮನೆಯಲ್ಲಿ ಒಂದೇ ಮಗುವಾಗಿ ಬೆಳೆಯಬಾರದು ಅವುಗಳ ಸಹಜೀವಿಗಳಾಗಿ ಗಿಡಮರಗಳೋ ಇಲ್ಲ ಪ್ರಾಣಿ ಪಕ್ಷಿಗಳೋ ಮನೆಯಲ್ಲಿ ಇರಬೇಕು. ಈ ಸತ್ಯ ಮನಗಂಡ ಮಯೂರಿಯ ಪೋಷಕರು ಹಕ್ಕಿಸಂಸಾರವನ್ನು‌ ಮನೆಗೆ ಬರಮಾಡಿಕೊಳ್ಳುತ್ತಾರೆ. ಮಯೂರಿ ಇವುಗಳ ಸಾಂಗತ್ಯದಲ್ಲಿ ವಿಕಸಿಸಲಾರಂಭಿಸುತ್ತಾಳೆ. ಅವಳ ಜೀವ ಹಾಯಾದ ಭಾವದಲ್ಲಿ ಹೂವಿನಂತೆ‌ ಅರಳುವುದು.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು Avadhi

November 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಮುದ್ದಾದ ಚಿನ್ನಿ ಮಯೂರಿ ಕಥೆ ತುಂಬಾ ಸಿಹಿ.

    ಪ್ರತಿಕ್ರಿಯೆ
  2. ತಿರು ಶ್ರೀಧರ

    ತುಂಬಾ ಆಪ್ತವಾಗಿದೆ. ಹೃದಯ ತಂಪಾಗಿಸಿತು. ಹಲವು ವರ್ಷಗಳ ನಂತರದಲ್ಲಿ ನಿಜ ಶಿಶುಸಾಹಿತ್ಯ ಓದಿದ ಸಂತಸ ದಕ್ಕಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: