ತೇರೀನ ಮೈಮೇನಿನ ಗಿಣಿಯಲ್ಲ ಗರ‌್ ತೇರೆ|ಇದು ನಾ ಬರ್ದ ಒಂದು ಕೈಕುಸುಲು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ತೊಂಭತ್ತೆರಡು ವಯಸ್ಸಿನ ಗಂಗಜ್ಜಿ ಈಗೊಂದಾರು ವರ್ಷದ ಹಿಂದಿನವರೆಗೂ ಮ್ಯಾಂಗನೀಸ್ ದಂಧೆಗೆ ಕರ್ಮಚಾರಿಗಳಾಗಿ ಬಂದಿರುವ ತಮಿಳಿಗರಿಗೆ ಹಾಲುಕೊಡಲು ಎಡಗೈಯಲ್ಲೊಂದು ಬಲಗೈಯಲ್ಲೊಂದು ಐದೈದು ಲೀಟರ್ ಬಾಸ್ಕೆಟ್ ಹಿಡಿದು ಮುಂಜಾನೆ ಐದು, ಐದೂವರೆಗೆಲ್ಲ ಸವೆದ ಹವಾಯ್ ಚಪ್ಪಲಿ ಹಾಕಿಕೊಂಡು ಚರಕ್ ಪರಕ್ ಎಂದು ರಸ್ತೆಯಲ್ಲಿ ಹೊರಟರೆ ಆ ಸದ್ದು ರಸ್ತೆಯ ಅಕ್ಕ ಪಕ್ಕದ ಮನೆಯವರಿಗೆ ಮಲಗಿದಲ್ಲೂ ಕೇಳಿಸಿ “ಗಂಟೆ ಐದರ ಮೇಲಾಯ್ತು.. ಗಂಗಕ್ಕನ ಹಾಲು ಹೊಂಟ್ತು…” ಎಂದು ಗುರುತು ಮಾಡುತ್ತಿತ್ತು. ಇಲ್ಲಾ ವಾಕಿಂಗ್ ಹೊರಟವರಿಗೆ ಕಟ್ಟು ಹಾಕಿ ಮೊಣಕಾಲ ತನಕ ಉಟ್ಟ ಅವಳ ಕಪಡ, ಎರಡೂ ಕೈಯಲ್ಲಿ ಸ್ಟೀಲ್ ಬಾಸ್ಕೆಟ್ಟು.. ಅಷ್ಟು ಕಪ್ಪು ಬೆಳಗಿನಲ್ಲೂ ದೂರದಿಂದ ಕಾಣಿಸಿ “ಗಂಗಕ್ಕ ಬತ್ತೇ ಈದ್” ಎಂದು ತೋರಿಸುತ್ತಿತ್ತು.

ಉಕ್ಕು, ಬಣ್ಣಗಳು, ರಸಗೊಬ್ಬರ ಎಲ್ಲದಕ್ಕೂ ಮೂಲಧಾತುವಾದ ಮ್ಯಾಂಗನೀಸ್ ಅದಿರು ಬಹಳ ಮೊದಲು ಅಂಕೋಲೆಯ ಕಡಲತೀರದಿಂದ ಜಪಾನ್ ಚೀನಾದೇಶಗಳಿಗೆ ಮುಷ್ಟಿ ಗಾತ್ರದ ಶಿಲೆಯ ರೂಪದಲ್ಲಿ ರಫ್ತಾಗುತ್ತಿತ್ತು. ಇದರ ಏರಿಕೆ ಇಳಿಕೆಯ ಶ್ರಮದ ಕೆಲಸಕ್ಕೆ ದೂರದ ರಾಜ್ಯದಿಂದ ಬಂದು ಸಮುದ್ರಧಕ್ಕೆಯಲ್ಲಿ ತಗಡಿನ ಬಿಡಾರ ಕಟ್ಟಿಕೊಂಡು ಇರುವ ತಮಿಳಿಗರ ಹತ್ರ ಐದು ಹತ್ತು ರೂಪಾಯಿ ತಗೊಂಡು ಬೆಳ್ಬೆಳಿಗ್ಗೆ ಚಾ ಅಥವಾ ಕಾಫಿ ಕಾಸಲು ಒಳ್ಳೆಯ ದಪ್ಪ ಹಾಲನ್ನು ಬಹಳ ವರ್ಷಗಳವರೆಗೂ ಕೊಡುತ್ತಿದ್ದ ಗಂಗಾಪಾಟಿ ಇತ್ತೀಚೆಗೆ ವಯಸ್ಸಾದ ಕಾರಣಕ್ಕೆ ಹಾಲು ಕೊಡಲು ಅಲ್ಲಿಗೆ ಹೋಗುವುದನ್ನು ಅವಳ ಮಗಳು ಅಳಿಯ ಮನಾ ಮಾಡಿದ್ದಾರೆ. ಅವರ ಬದಲು ಅವರ ಮಗಳು ರಾಧಾ ಈಗ ಅಲ್ಲಿಗೆ ಹೋಗುತ್ತಿದ್ದಾಳೆ.

ಕಥೆ ಬಹಳ ದೊಡ್ಡದೇ ಇರುವ ಗಂಗಜ್ಜಿ ಹಲವಾರು ಕಾರಣಕ್ಕಾಗಿ ನನಗೆ ಇಷ್ಟ. ಸಂಜೆ ವೇಳೆಗೆ ಖಾಲಿ ಇದ್ದರೆ ವಾಕಿಂಗ್ ಮಾಡುವ ಹೆಳೆಯಲ್ಲಿ ಹೋಗಿ ನಾನು ಅವರ ಮನೆಯ ದಣಪೆ ದಾಟಿ ಅಂಗಳದ ತೆಂಗಿನಮರದ ಬುಡದ ದಿಡಿಯ ಮೇಲೆ ಕುಳ್ಳುತ್ತೇನೆ. ಸಣ್ಣಗೆ ವಾಲಾಡುವ ಮರದ ಗರಿಗಳು.., ಸಂಜೆಯ ಸೌಮ್ಯ ನೆರಳು.., ಮಣ್ಣು ಒರೆದ ನೆಲ.., ಈಗಷ್ಟೆ ನೀರು ಹಾಕಿ ಒಜ್ಜೆಯಾಗಿ ಹಸಿರು ಎಲೆ, ಹಳದಿ ಒತ್ತೊತ್ತು ಹೂವು ತುಂಬಿಕೊಂಡು ತಂಪಾಗಿ ನಿಂತ ಗಮಗುಡುವ ಸೇವಂತಿ ಓಳಿಯ ಆಪ್ತ ಸ್ಪರ್ಶ.., ಅಲ್ಲಿ ಕುಳಿತರೆ ನನಗೆ ಹಿತವಾಗಿ ದಕ್ಕುತ್ತದೆ.

ಒಂದು ಹಸಿಸೇವಂತಿ ಎಲೆಯನ್ನು ಚಿವುಟಿ ಬೆರಳಲ್ಲಿ ತಿಕ್ಕಿ ಮೂಗಿಗಿಟ್ಟು ಅದರ ಗಮತ ತಕ್ಕೊಳ್ಳುತ್ತ ತಾಸೆರಡು ತಾಸಾದರೂ ಅಲ್ಲಿ ಕುಳ್ಳಬಲ್ಲೆ ನಾನು. “ಎಷ್ಟು ಸಲ ಹೇಳೂದು ನಿನಗೆ ಅಲ್ಲಿ ಕೂತರೆ ಕಾಯಿ, ಹೆಡೆ, ಮಿಳ್ಳಿ ಎಲ್ಲ ಬೀಳ್ತದೆ ತಲೆಮೇಲೆ ಅಂತ.. ಈಕಡೆ ತೆಣೆಗೆ ಬಾ ಅಂದರೆ ನೀನು ಕೇಳುವುದಿಲ್ಲ” ಎನ್ನುತ್ತ ಮಾಮೂಲಿಯಂತೆ ಮೇಲೆ ಮರದ ಚಂಡನ್ನೊಮ್ಮೆ ನಿರುಕಿಸಿ ನೋಡಿ ನನ್ನೊಂದಿಗೆ ಮಾತು ಮುಂದುವರಿಸುತ್ತಲೇ ತಾನು ಮಾಡುವ ಕೆಲಸವನ್ನು ಮುಂದುವರೆಸುತ್ತಾಳೆ ಗಂಗಜ್ಜಿ.

ನಾನು ಹೋದ ಹೊತ್ತಿಗಂತ ಅಲ್ಲ. ಸದಾ ಏನಾದರೊಂದು ಕೆಲಸ ಮಾಡುತ್ತಿರುವ ಅವಳು ಖಾಲಿಫುಕ್ಕಟ್ ಕೂತದ್ದನ್ನು ನಾನು ಇದುವರೆಗೆ ನೋಡಿದ್ದಿಲ್ಲ. ಉಮಿಯಲ್ಲಿ ಸೆಗಣಿ ಕಲಸಿ ಕೊಟ್ಟಿಗೆ ಗೋಡೆಗೆ ಬೆರಣಿ ಬಡಿಯುತ್ತಲೋ, ಹಸಿ ಹೆಡೆಮಟ್ಟೆ ಸಣ್ಣಗೆ ಸಿಗಿದು ಬಿಸಿಲಿಗೆ ಹಾಕುತ್ತಲೋ, ಮೆಟ್ಟು ಗತ್ತಿಯ ಮೇಲೆ ಕುಳಿತು ಹಿಡಿಕಡ್ಡಿ ಸುಗಿಯುತ್ತಲೋ ಇರುವ ಗಂಗಜ್ಜಿ ಮನೆಯ ಎರಡೂ ಬದಿಗೆ ಅರ್ಧರ್ಧ ಗುಂಟೆ ಜಾಗದಲ್ಲಿ ಬಟಣ್ ಸೇವಂತಿ ಮತ್ತು ಅಬ್ಬಲಿಗೆ ಓಳಿ ಮಾಡಿದ್ದಾರೆ.

ರಸ್ತೆದಾಟಿದರೆ ಸಿಗುವ ಕೆಳಗಿನ ಗದ್ದೆಯಲ್ಲಿ ಬೇಲಿ ಹಾಕಿ ಮೂಲಂಗಿ, ಹರಿವೆ, ಪಾಲಕ್, ಮೆಣಸು, ಈರುಳ್ಳಿ ಮುಂತಾದ ಹಿತ್ಲೋಳಿಯನ್ನೂ ಚೂರು ದೊಡ್ಡ ಪ್ರಮಾಣದಲ್ಲಿಯೇ ಮಾಡಿದ್ದಾರೆ. ರಾತ್ರಿ ಚೆನ್ನಾಗಿ ನೀರು ಹೀರುತ್ತದೆ ಗಿಡ ಎಂಬ ಕಾರಣಕ್ಕೆ ಇವೆಲ್ಲವುಗಳಿಗೆ ಅವರು ಸಂಜೆಯ ಹೊತ್ತಿಗೇ ನೀರು ಹಾಕೋದು. ಮನೆಯ ಹತ್ತಿರವೇ ಬರುವ ತರಕಾರಿ ಮತ್ತು ಹೂವಿನ ಗುತ್ತಿಗೆದಾರರಿಗೆ ಗುಪ್ಪೆಯ ಲೆಕ್ಕದಲ್ಲೋ ಕಟ್ಟಿನ ಲೆಕ್ಕದಲ್ಲೋ ಬುಟ್ಟಿಯ ಲೆಕ್ಕದಲ್ಲೋ ಅವನ್ನು ಲೆಕ್ಕಹಾಕಿ ಕೊಡುತ್ತಾರೆ.

ಹಾಲು ಕಾಸೂ ನಾರೀ
ಬ್ವಾನಾ ಬಾಗೂ ನಾರೀ
ಈಗಿದ್ದ ನಾರೀ ಒಳಗಿಲ್ಲ…
ಹೆರಗಾದ ನಾರೀ.. ನಮ್ಮನೆ ನಾರೀ..
ಇಂಬೆ ಮರಸೇರಿ ಮೀಯ್ನೆರದಾಳೋ
ಬಣ್ಣನಾರು ಕೊಟ್ಟು ಕರೆತಾರೋ..
ಮನೆನೆಲ್ಲ ಚಿನ್ನಾನಾದ್ರೂ ಕೊಟ್ಟು ಕರೆತಾರೋ..
ಮನೆನೆಲ್ಲ ಹೂವಾರು ಕೊಟ್ಟು ಕರೆತಾರೋ..

ದನಿ ಉದ್ದಕ್ಕೆ ಎಳೆದು ಹಾಡು ಹಾಡುತ್ತ ಗಂಗಜ್ಜಿ ರಾಗಿ ಬೀಸುವ ಹೊತ್ತಿನಲ್ಲಿ ನಾನು ಅಲ್ಲಿಗೆ ಹೋದರೆ ಸದ್ದು ಮಾಡದೇ ಕುಳಿತೆದ್ದು ಬರುತ್ತೇನೆ. ಮರುಬೆಳಿಗ್ಗೆ ಜಡೆಕಟ್ಟಿ ಮಾರಬೇಕಾದ ಹೂವನ್ನು ಕೊಯ್ಯಲು ಇಂದು ಸಂಜೆಯೇ ಬಂದ ಹಮ್ಮಿ ಕೂಡ ಕೊಯ್ಯುವ ಕೆಲಸ ಬಿಟ್ಟು ಗೂನುಬೆನ್ನು ನೆಟ್ಟಗೆ ಮಾಡಿಕೊಂಡು ನನ್ನ ಕಡೆ ತಿರುಗಿ ಬಾಯಿ ಮೇಲೆ ಶ್ಯ!! ಎಂಬಂತೆ ಬೆರಳಿಟ್ಟು ಅಜ್ಜಿ ಹಾಡುತ್ತಿರುವ ಸೂಚನೆ ಕೊಡುತ್ತಾಳೆ.

ಬಲಿರಾಯ್ನ ರಾಜೀದಲ್ಲಿ ಏನೆಲ್ಲಾ ಬೆಳುವಾದು
ಭತ್ತಬಿತ್ತಕ್ಕೀ ಬೆಳದೀರೋ…
ದ್ಯಾವರೆ ರಾಗೀಬಿತ್‌ರಾಗೀ ಬೆಳದೀರೋ..

ದಾಸಯ್ಯ ಬರುತನೆ ಬೀಸೀರೆ ಚವಲವ
ದಾಸಯ್ಯ ನಲ್ಲ ತಿರುಮಲ್ಲ|ತಿಮ್ಮಪ್ಪಗೆ
ಹಾಸೀರೊಜ್ರದ ಹಲೋಗಿಯ|

ಯಾವಾಗಲೂ ಒಯ್ಯೋಂ ಅಂತ ಒರೆಕೊಳ್ಳುವ ಸಣ್ಣ ಎಮ್ಮೆಕರ ಕೂಡ ಅಜ್ಜಿ ಹಾಡುವಷ್ಟು ಹೊತ್ತು ನಿಂತಲ್ಲಿ ನಿಂತು ಕಿವಿ ಹಾಲೆ ನೆಟ್ಟಗೆ ಮಾಡಿಕೊಂಡು ಕಣ್ಣು ಮಾತ್ರ ಅಲಗಿಸುತ್ತಿರುತ್ತದೆ. ಮತ್ತದೇ ಮರದ ಬುಡಕ್ಕೆ ಕುಳಿತು ಹಾಡು ಕೇಳುತ್ತ ಮೌನವಾಗುವ ನನಗೆ ಅಜ್ಜಿ ಆಗೀಗ ಮನಸ್ಸು ಬಂದಾಗ ಮಾತ್ರ ರಾಗಿಕಲ್ಲಿನ ಮುಂದೆ ಹಾಡುವ ಹಾಡು ನಿಲ್ಲಿಸಿಕೊಂಡು ಹೇಳಿದ ಅವಳದ್ದೇ ಆದ ಬದುಕಿನ ಸಂಗತಿಗಳು ನೆನಪಾಗುತ್ತವೆ.

ಇಪ್ಪತ್ತು ಎಕರೆ ಗದ್ದೆ ಹಾಗೂ ಅರ್ಧ ಎಕರೆ ತೆಂಗು ಬಾಳೆ ಅಡಿಕೆಯ ವಗಾತೆ ಇರುವ ಜಾಗದ ನಡುಮಧ್ಯದಲ್ಲಿರುವ ದೊಡ್ಡ ಮನೆಯ ಒಬ್ಬನೇ ಮಗನ ನೆಂಟಸ್ತನ ತಂಗಿಗಾಗಿ ಹುಡುಕಿ ಬಂದರೆ ಬಿಡುವುದುಂಟೇ ಯಾರಾದರೂ.. ಬಿಡಲಿಲ್ಲ ಗಂಗೆಯ ಅಣ್ಣಂದಿರೂ.. ಹೀಗಾಗಿ ತೆಳ್ಳಗೆ ಬೆಳ್ಳಗಿನ ಉದ್ದಮಂಡೆಯ ಗಂಗೆ ಹದಿನೇಳನೇ ವಯಸ್ಸಿಗೆ ಪಕ್ಕದೂರಿನ ಗೋವಿಂದನ ಹೆಂಡತಿಯಾಗಿ ಹೋದಳು.

ಅಪ್ಪ ಜೆರಗೆಂಡಿಯಾಗಿ ಸತ್ತು ಮನೆ ಯಜಮಾನ್ಕಿ ಇಪ್ಪತ್ತೆಂಟರ ಗೋವಿಂದನಿಗೆ ಸಿಕ್ಕಿ ನಾಕು ವರ್ಷವಾಗಿತ್ತು. ಅವ್ವಿಯಂತೂ ಹಾವು ಕಚ್ಚಿ ಅವನ ಹತ್ತನೇ ವಯಸ್ಸಿಗೇ ಇಲ್ಲವಾಗಿದ್ದಳು. ನಾಲ್ಕು ಅಕ್ಕಂದಿರು ಮದುವೆಯಾಗಿ ಅಲ್ಲಲ್ಲಿ ಹೋಗಿದ್ದರೂ ಒಂದಿಬ್ಬರು ಇಲ್ಲೇ ಬಂದು ತಿಂಗಳಾನುಗಟ್ಟಲೆ ಉಳಿಯುತ್ತಿದ್ದರು.ಈ ನಾಕು ವರ್ಷದಲ್ಲಿ ಗೋವಿಂದನಿಗೆ ನಾಕು ಹತ್ತರ ಮೇಲೆಯೇ ಚಟಗಳು ಅಂಟಿಕೊಂಡಿದ್ದವು. ಇವೆಲ್ಲವೂ ಗಂಗೆಯ ಅಣ್ಣಂದಿರಿಗೆ ಮೊದಲು ಗೊತ್ತಾಗದೇ ಪರಮಸಿಯಾಗಿ ಹೋಗಿತ್ತು..

ಕೋಳಿ ಅಂಕ, ಇಸ್ಪೀಟು, ಕುಟಕುಟಿ, ಹೆಂಡ ಮತ್ತು ಅಲ್ಲಲ್ಲಿ ಇದ್ದ ಗೆಣಗಾರ್ತಿಯರು ಗೋವಿಂದನನ್ನು ಒಂದು ಹೊತ್ತೂ ಮನೆಯಲ್ಲಿರಲು ಬಿಡುತ್ತಿರಲಿಲ್ಲ. ಇದ್ದರೂ ಉಂಡು ಮಲಗಿ ಕಾಲಕಳೆವ ಅವನಿಂದ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಇರುವ ಆರ್ಭಟದ ಪೌರುಷದ ಹೊಡೆತ ಬಡಿತದ ಪ್ರದರ್ಶನದ ಹೊರತು ಬೇರೇನೂ ಲಾಭವೂ ಇರಲಿಲ್ಲ.

ಚಿಕ್ಕ ಹುಡುಗಿ ಗಂಗೆ ಬಡತನದಲ್ಲೂ ಅಣ್ಣತಮ್ಮಂದಿರ ಪ್ರೀತಿಯಲ್ಲಿ ಬೆಳೆದವಳು. ಆರಂಭದಲ್ಲಿ ಇವೆಲ್ಲ ನೋಡಿ ಮುರುಟಿಬಿದ್ದಳು. ಎಲ್ಲ ಮಾಡಿಯೂ ಜೊತೆಗೆ ದುಡಿಯುತ್ತ, ಹೆಂಡತಿಯನ್ನು ಕಾಳಜಿ ಮಾಡುವ ಪ್ರೀತಿ ಮಾಡುವ ಗಂಡನಾದರೆ ಸಹಿಸಿಕೊಂಡು ಸುಮ್ಮನಿರುತ್ತಿದ್ದಳೇನೋ.. ಆದರೆ ಹಾಗಾಗಲಿಲ್ಲ.. ಮದುವೆಗೂ ಮೊದಲೇ ಹತ್ತಾರು ಹೆಣ್ಣು ರುಚಿನೋಡಿದ್ದ ಗೋವಿಂದನಿಗೆ ಗಂಗೆ ಮೊದಲ ದಿನದಿಂದಲೇ ಮುಗಿಸಿ ಮಲಗುವ ಹೆಣ್ಣಾದಳು.

ಹತ್ತರಲ್ಲಿ ಹನ್ನೊಂದನೆಯವಳೋ ಎಂದರೆ ಅದೂ ಅಲ್ಲ. ಆ ಹತ್ತು ಹೆಂಗಸರಿಗೆ ತೆರ ಕೊಟ್ಟು ಚೂರು ಕಿಮ್ಮತ್ತು ಕೊಟ್ಟು ಆ ಸಮಯಕ್ಕೆ ಒಲಿಸಿಕೊಂಡವರಾಗಿದ್ದರೆ ಇವಳು ಹಕ್ಕಿನವಳಾಗಿದ್ದಳು. ಹಾಗಾಗಿ ಮೆಟ್ಟಿ, ತಲೆಗೂದಲು ಬಗ್ಗಿಸಿ ಬಡಿದಾದರೂ ಭೋಗಿಸಬಲ್ಲ, ಉಪಯೋಗಿಸಿಕೊಳ್ಳಬಲ್ಲ ಹೆಂಡತಿಯಾದಳು. ಬೇರೆ ಎಲ್ಲ ಉಪಭೋಗ ಮಾಡಿಕೊಂಡಿದ್ದವನಿಗೆ ದುಂಡಾವರ್ತಿಯ ಹಕ್ಕು ಚಲಾವಣೆ ಮಾಡಿದ್ದನ್ನು ಸಹಿಸಲು ಒಂದು ಜೀವ ಬೇಕಿತ್ತು.

ಒಂದೊಂದೇ ಅಡಮಾನ ಇಡುತ್ತ ಹೋಗಿ ಬಾಕಿ ಇರುವ ಅರ್ಧಾಂಶ ಗದ್ದೆ ತೋಟದಲ್ಲಿ ಕತ್ತೆಯಂತೆ ದುಡಿಯಲು, ನೀರು ಹಾಕಲು ಹೆಣ್ಣಾಳು ಬೇಕಿತ್ತು. ಇರುವಷ್ಟೂ ನೆದರನ್ನೂ.. ಕಡಿವಾಣವನ್ನೂ ಗಂಗೆಯ ಮೇಲಿಟ್ಟುಕೊಂಡು ಸಮಾ ದುಡಿಸಿಕೊಳ್ಳತೊಡಗಿದರು ಗೋವಿಂದ ಮತ್ತು ಅವನ ಅಕ್ಕ ತಂಗಿಯರು ಅವಳನ್ನು.

“ಇದ್ದದ್ದು ಎರಡೇ ವರ್ಷ ಅಲ್ಲಿ. ಏಳೇಳು ಜನ್ಮಕ್ಕೆ ಸಾಕಾಗುವಷ್ಟು ಪಾಡು ಪಟ್ಟೆ. ಬೆಳ್ಳಿ ಮೂಡಿದಾಗ ಎದ್ದು ದನಕರದ ಕೆಲಸ ಮಾಡಿ ಹುಲ್ಲು ಸೊಪ್ಪುನ್ನೂ ಮುಗಿಸಿ ಉಪವಾಸ ಗದ್ದೆಗೆ ಹೊರಟರೆ ಸೂರ್ಯ ಮುಳುಗಿದ ಮೇಲೆ ಮನೆಗೆ ಬರುತ್ತಿದ್ದೆ. ಚಳಿ ಗಾಳಿ ಮಳೆಯಲ್ಲೂ ಹೊರಗಿನ ಜಗುಲಿಯೇ ಗತಿ. ಹಸಿವೆ ತಡೆಯದೇ ಅಮಟೆ, ಮುರಗಲು ಸೊಪ್ಪು, ಮಾವಿನ ಚಿಗುರು, ಎಳೆ ಹುಲ್ಲು ಎಲ್ಲವನ್ನೂ ತಿಂತಿದ್ದೆ. ಹೇಳುವಾಗ ಗಂಟಲಿಗೆ ದುಃಖದ ತಿದಿ ಒತ್ತಿ ಆಗಾಗ ಮೌನವಾಗಿ ಬಿಡುತ್ತಾಳೆ ಗಂಗಜ್ಜಿ. ಮಳೆಗಾಲದ ಗದ್ದೆಕೆಲಸದಲ್ಲಿ ಒದ್ದೆಯಾದ ಕಂಬಳಿ ರಾತ್ರಿ ಸ್ವಲ್ಪ ಬಾಡಲಿ ಎಂದು ಒಲೆಯ ಮೇಲೆ ನೇತು ಹಾಕಿ ಹೊರಗೆ ಬಂದು ಮಲಗಿದರೆ ಅದನ್ನು ಅವನ ಅಕ್ಕತಂಗೇರು ಒಯ್ದು ಹಂಡೆಯ ತಣ್ಣೀರಿನಲ್ಲಿ ಅದ್ದಿಸಿಡುತ್ತಿದ್ದರು. ಮದುವೆಯಾದಾಗ ನನ್ನ ಅಣ್ಣಂದಿರು ಮಾಡಿಸಿಕೊಟ್ಟ ಸಾಗವಾನಿ ಪೆಟ್ಟಿಗೆ ಮುರಿದು ನನ್ನಜ್ಜಿ ಮಾಡಿಸಿಕೊಟ್ಟ ಬುಗುಡಿ, ಕಾಸಿನಸರ, ಗೊಪಚೇನು, ಬೋರಮಾಳು, ಪಾಟಲಿ, ತೊಡೆ, ತೋಳಬಂಧಿ, ನಾಗ ಮುರಗಿ ಎಲ್ಲಾನೂ ದೋಚಿ ಧೂಳು ಮಾಡಿದ್ರು. ಮದುವೆ ದಿನ ಹಾಕಿಕೊಂಡದ್ದು ಬಿಟ್ರೆ ಮತ್ತವನ್ನು ನೋಡಲಿಲ್ಲ ನಾನು..”

“ನನ್ನ ಹೊಟ್ಟೆಗೂ ಕಷ್ಟದ ಪರಿಸ್ಥಿತಿ ಗೊತ್ತಾಗಿ ಆಗಾಗ ಕೊಟ್ಟೆರೊಟ್ಟಿ, ಹುರಿದಕ್ಕಿ ಉಂಡಿ, ಬೆಲ್ಲ, ಕೊಬ್ಬರಿಎಣ್ಣೆ ಮುಂತಾವನ್ನೆಲ್ಲ ಮುಟ್ಟಿಸುತ್ತಿದ್ದರು ಅಣ್ಣಂದಿರು. ಅವನ್ನು ಇಟ್ಟುಕೊಂಡು ತಿನ್ನಲು, ಬಳಸಲು ನನಗೆ ಯಾವ ಜಾಗವಿತ್ತು ಹೇಳು.? ಎಲ್ಲವೂ ಅವರ ಎದೆಗೇ ಆಗುತ್ತಿತ್ತು. ಒಂದೆರಡು ತಿಂಡಿತಿನಿಸು ಬಚಾವ್ ಮಾಡಿಕೊಂಡು ಹುಲ್ಲ ಕುತ್ರಿಗೋಣೆಯಲ್ಲಿ ಹೆಟ್ಟಿ ಬಚ್ಚಿಟ್ಟುಕೊಂಡು ಹಸಿವಾದಾಗ ತಿನ್ನೋಣವೆಂದುಕೊಂಡರೆ ಆ ಜಾಗವನ್ನೂ ಬಿಡದೇ ಶೋಧಿಸಿ ಅದನ್ನು ನಾಪತ್ತೆ ಮಾಡಿ ನಾನು ಅವನ್ನು ಹುಡುಕುವಾಗ ನಗುತ್ತಿದ್ದರು ಅವರು”.

“ಸಹಿಸುವವರಿದ್ದರೆ ಮನುಷ್ಯ ಮನುಷ್ಯನಿಗೆ ಎಷ್ಟೊಂದೆಲ್ಲ ಕಷ್ಟ ಕೊಡಬಲ್ಲ ಅಲ್ವಾ.? ಎಂಥಾ ಪಾಪಿಯಾಗಬಲ್ಲ ಅಲ್ವಾ.‌.? ನಾನೇನು ಮಾಡಿದ್ದೆ ಅಂಥದ್ದು ಅವರಿಗೆ. ಒಂದು ಹೆಣ್ಣು ಮನೆ ಮಠ, ಬೆಳೆದ ಊರು ಕೇರಿ, ಬಂಧುಬಳಗ ಎಲ್ಲವನ್ನೂ ಬಿಟ್ಟು ಬಂದು ಯಾರನ್ನೋ ಒಬ್ಬನನ್ನು ನಂಬಿ ಅವನ ಮನೆಯನ್ನು ತನ್ನದೆಂದುಕೊಂಡು ಇರೋದು ಇವೆಲ್ಲ ಸೌಭಾಗ್ಯಕ್ಕಾ…?”

“ಹಾಯ್ ಹಾಗೇ ಆಗಬೇಕು- ಎನ್ನುವವರದೇ.. ಗಂಡಸಿನ ಪರವಾಗಿರುವವರದೇ ಲೋಕ ಇದು.. ಯಾರಲ್ಲಿ ಹೇಳಿಕೊಳ್ಳಲಿ ಹೇಳು ನನ್ನ ದುಃಖ..? ಕೂಸೊಂದಾದರೆ ಎಲ್ಲ ಸರಿಯಾದೀತು ಎಂದು ಸಮಾಧಾನ ಮಾಡಿದರು ಅಣ್ಣಂದಿರು. ನಾನೂ ಹೊಟ್ಟೆಯಲ್ಲೊಂದು ಜೀವ ಮಿಸುಕಿ ಸುಮ್ಮನಾದೆ. ಮಗಳು ಹುಟ್ಟಿದ ಮೇಲೆ ಮತ್ತಷ್ಟೇ ಉಪಚಾರ, ಉಡುಗೊರೆ ಕೊಟ್ಟರೂ ನನ್ನ ಕಷ್ಟ ತಪ್ಪಲಿಲ್ಲ ನೋಡು. ಅವನ ಗೆಣೆಗಾರ್ತಿಯೊಬ್ಬಳು ಮನೆಗೇ ಬಂದು ಉಳಿದಳು. ಮನೆ, ಗದ್ದೆ, ಕೊಟ್ಟಿಗೆ, ತೋಟದ ಜೊತೆಗೆ ಸಣ್ಣಕೂಸನ್ನು ಕಟ್ಟಿಕೊಂಡು ಅವಳ ಆರೈಕೆಯನ್ನೂ ಮಾಡಬೇಕಾಯ್ತು ನಾನು..”

ಎಂದೋ ಒಂದು ದಿನ ಥೂ..!! ನನ್ನದೂ ಒಂದು ಜನ್ಮವಾ? ಅನ್ನಿಸಿ ಗಂಡನಿಲ್ಲದ ಒಂದು ರಾತ್ರಿ- ಸಮಾ ಹನ್ನೆರಡಕ್ಕೆ ನನ್ನ ಖಾಲಿ ಪೆಟ್ಟಿಗೆ ಹೊತ್ತು ಕಂಕುಳಲ್ಲಿ ಕೂಸು ಇಟ್ಟುಕೊಂಡು ಈ ಹದಿನಾರು ಮೈಲಿ ನಡೆದು ಬಂದುಬಿಟ್ಟೆ ನೋಡು ಇಲ್ಲಿಗೆ. ನನ್ನ ಅಣ್ಣಂದಿರು ನನ್ನ ಕೈ ಬಿಡರು ಎಂಬ ನಂಬಿಕೆ ಇತ್ತು. ಬಿಟ್ಟರೂ ಆ ಬದುಕಿಗಿಂತ ಕೂಲಿ ಮಾಡಿ ನುಚ್ಚು ತಂದು ಬೇಯಿಸಿ ಉಣ್ಣುವ ಸ್ವಾತಂತ್ರ್ಯವನ್ನಾದರೂ ಅನುಭವಿಸಬೇಕು ನಾನು ಎಂಬ ಬಾಯಾರಿಕೆಯಾಗಿಬಿಟ್ಟಿತ್ತು ನನಗೆ.

ಎಣಿಸಿದಂತೆ ಬಿಡಲಿಲ್ಲ ಅಣ್ಣಂದಿರು. ಒಂದಿಷ್ಟು ಜಾಗ ಕೊಟ್ಟು, ಎಮ್ಮೆಯೊಂದನ್ನು ಕಟ್ಟಿಕೊಟ್ಟು ಉಸಿರಾಟಕ್ಕೆ ಒಂದಿಷ್ಟು ಗಾಳಿ ಬೆಳಕು ಹಸಿರನ್ನಿತ್ತರು. ಬದುಕಿಕೊಂಡೆ. ಅದರ ನಂತರದ್ದೆಲ್ಲ ಈ ಊರಿನ ಕಥೆ. ಒಂದೆಮ್ಮೆ ಐದಾರೆಮ್ಮೆಯಾಗಿ, ಗದ್ದೆ ಭೂಮಿ ಮಾಡಿಕೊಂಡು ನನ್ನದೇ ಆದ ಗಂಜಿ, ಹಾಲು ಹೈನ ನಾನು ನೆಮ್ಮದಿಯಾಗಿ ಉಂಡ ಕಥೆ. ಹೂವು ತರಕಾರಿಗಾಗಿ ಜನ ನನ್ನ ಹುಡುಕಿ ಬಂದ ಕಥೆ. ಎನ್ನುತ್ತ ಗಂಗಜ್ಜಿ ಹಾಡಿನ ಗೂಡಿಗೆ ಮತ್ತೆ ಮರಳುತ್ತಾಳೆ.

ಬಂದ್ ಬಂದ್ ನೋಡೂಕೆ ಮಂಜ್ಗೂಣಿ ತೇರಲ್ಲ
ತೇರೀನ ಮೈಮೇನಿನ ಗಿಣಿಯಲ್ಲ
ತೇರಿನ ಮೈಮೇನಿನ ಗಿಣಿಯಲ್ಲ ಗರ್ತೇರೆ
ನಾ ಬರ‌್ದ ಒಂದು ಕೈಕುಸುಲು
ಇದು ನಾಬರ‌್ದ ಒಂದು ಕೈಕುಸುಲು

ಮಾಳಗೀ ಒಳ್ಗೇ ಸುಮ್ಮನಿರುವ ಬಾಲ
ಗ್ವಾಡೀಮ್ಯೆನೆ ನೋಡೋ ಗಿಳಿಗ್ವಾಲೇ| ಬಾಲಯ್ಯಾನೆ ಗುಡುಗಾರನ ಹಲಿಯಾ ಬರದಾರು..
ಗುಡುಗಾರನ ಹಲಿಯಾ ಬರಿಯೂಕೆ ಬಾಲಯ್ಯನೆ ಗುಡುಗಾರ ನಮ್ಮ ಬಳಗಲ್ಲವೋ..| ಬಾಲಯ್ಯನೆ ನಾ ಕಲ್ತದ್ದೆ ನಾನು ಬರದೀನೋ…

‍ಲೇಖಕರು Avadhi

November 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Vasudeva Sharma

    ಗಂಗಜ್ಜಿ ಮನಸ್ಸುನಲ್ಲಿ ಅಚ್ಚೊತ್ತಿ ಕೂತಳು. ಅದೆಷ್ಟು ಗಂಗಜ್ಜಿಯರ ಬದುಕು ಆಸರೆ ಸಿಗದೆ ಮುರುಟಿ ಹೋಗಿದೆಯೋ… ಗಂಗಜ್ಜಿ ಮತ್ತವಳ ಅಣ್ಣಂದರಿಗೊಂದು ಸಲಾಂ.

    ಪ್ರತಿಕ್ರಿಯೆ
  2. Kiran Bhat

    ಎಮ್ಮೆ ಕರ ಕೂಡ ಗಂಗಜ್ಜಿ ಹಾಡಿಗೆ ಕಿವಿಯಗಲಿಸಿ ಕಣ್ಣು ಪಿಳಿಪಿಳಿಸೋದು…..ಆಹಾ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: