ಬಾಗಿಲು ಬಡಿದ ಸದ್ದಾಯಿತಲ್ಲ… ಯಾರಿರಬಹುದು?

ಕಡಲ ಕಂಬನಿ ಒರೆಸುವ ಕರಗಳೆಲ್ಲಿ?

ಸಂತೋಷ್ ಅನಂತಪುರ

ದುರಿತ ಕಾಲದಲ್ಲಿ ನಿಸ್ತೇಜಗೊಂಡ ಹೃದಯ-ಮನಸ್ಸುಗಳಿಗೆ ಬಹಳಷ್ಟನ್ನು ಹೇಳಿ ಹಗುರವಾಗಬೇಕೆಂದು ಅನ್ನಿಸುವುದು ಸಹಜವಷ್ಟೆ. ಕೆಲವೊಮ್ಮೆ ಹೇಳುವ, ಇನ್ನು ಕೆಲವೊಮ್ಮೆ ಕೇಳುವ.. ಅವೆರಡನ್ನೂ ಬಿಟ್ಟು ಕೇವಲ ಕಣ್ಬಿಟ್ಟು ನೋಡುವ ಅವಕಾಶಗಳಿಗೇನೂ ಕೊರತೆಯಿಲ್ಲ. ಹೇಳಿ ಯಾಕೆ ಭಾದೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಎಂದು ಸುಮ್ಮನಾಗುವುದೂ ಇದೆ. ಹೇಳದಿದ್ದರೆ ಕಳೆದುಕೊಳ್ಳುವಂತದ್ದೇನಿಲ್ಲ. ಹೇಳಿದರೆ ಪಡೆದುಕೊಳ್ಳುವ ಸತ್ಕಾರಗಳೋ ಮೊದಲೇ ಇಲ್ಲ. ಹೇಳಿಯೂ, ಹೇಳದೆಯೂ ಕೇಳಿಸಿ, ಒರೆಸಿಕೊಳ್ಳುವ ಭಾಗ್ಯಕ್ಕಂತೂ ಸದ್ಯಕ್ಕೆ ಯಾವುದೇ ಅಡ್ಡಿಯಿಲ್ಲ. ಮುಫತ್ತಾಗಿ ಸಿಗುವವುಗಳ ಪಟ್ಟಿ ದೊಡ್ಡದೇ ಇದೆ. ಆದರೆ ಒಳದನಿಗೆ ಸುಮ್ಮನಿರಲಾಗುವುದಿಲ್ಲವಲ್ಲ. ತೋಯಲು ಮನಸ್ಸುಗಳು ಕಾದಿರುವಾಗ ಹನಿಯದೇ ಹೋಗುವ ಹೃದಯಗಳನ್ನು ಕಂಡು ಸಂಕಟವಾಗುತ್ತದೆ.

ಎಡಕ್ಕೆ ವಾಲದ, ಬಲಕ್ಕೆ ಜಗ್ಗದ, ಮೇಲಕ್ಕೆ ಏರದ, ಕೆಳಕ್ಕೆ ಇಳಿಯದೆ ನಡುಮಾರ್ಗೀಯವಾಗಿ ನಡೆಯುವಾಗ ಹಲವಾರು ಉತ್ತಮ ಗುಣಗಳನ್ನು ಎಲ್ಲಾ ಕಡೆಯಿಂದಲೂ ಸ್ವೀಕರಿಸಿಕೊಳ್ಳಲು ಸಾಧ್ಯವಿದೆ. ಹಾಗಾಗಿ ನನಗೆ ಯಾವುದೇ ಸಿದ್ಧಾಂತಗಳಿಲ್ಲ, ವೈಚಾರಿಕ ಭಿನ್ನತೆಗಳಿಲ್ಲ. ಇರುವುದೊಂದೇ, ಅದು ಮಾನವೀಯತೆ. ಎಡ-ಬಲದ ಒಳಿತನ್ನು ಸಮಾನವಾಗಿ ಸ್ವೀಕರಿಸುವ ಜೊತೆಗೆ ಅವುಗಳ ಎಡಬಿಡಂಗಿತನವನ್ನು ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸುವ ಮನಸ್ಥಿತಿ ಹೊಂದಿರಬೇಕು.

ಸಮಾಜ, ರಾಜ್ಯ, ದೇಶದ ಒಳಿತಿಗೆ ಯಾರೇ ಮುಂದೆ ಬಂದರೂ ಅದಕ್ಕೆ ಸಹಮತವಿರಬೇಕಷ್ಟೆ. ಆದರೆ ಅವುಗಳು ಬಣ್ಣ, ವಾಸನೆ, ರುಚಿರಹಿತವಾಗಿ ಸಮೂಹದ ಒಳಿತನ್ನು ಬಯಸುವ ಏಕನಿಷ್ಠೆಯದ್ದಾಗಿರಬೇಕಷ್ಟೆ. ಹೀಗಿರುವುದರಿಂದಲೇ ವ್ಯವಸ್ಥೆಯನ್ನು ಟೀಕಿಸಲೂ, ಅದರ ಉತ್ತಮ ನಡೆಯನ್ನು ಮೆಚ್ಚಿ ಎರಡು ಮಾತನ್ನು ಆಡಲೂ ಸಾಧ್ಯವಾಗುವುದು. ಯಾವುದೇ ಪಕ್ಷದಪರ-ವಿರೋಧವಾಗಿ ಮಾತನಾಡುತ್ತಿಲ್ಲ. ದೇಶದ ಬಹುಪಾಲು ಜನರು ಅನುಭವಿಸುತ್ತಿರುವ ನೋವು, ಬೇನೆಗಳನ್ನು ನೋಡಿದ ಮೇಲೆ ಅವು ನನ್ನದೂ ಎಂಬ ಭಾವನೆಯಿಂದ ಹೇಳುತ್ತಿದ್ದೇನಷ್ಟೇ.

ಕೋವಿಡ್-19 ಜಗತ್ತಿಗೇ ಬಡಿದ ಮಹಾ ದುರಂತ. ಅದಕ್ಕೆ ಹೊರತಾದ ಯಾವುದೇ ರಾಷ್ಟ್ರ ಲೋಕದಲ್ಲಿಲ್ಲ. ಬಡವಬಲ್ಲಿದನೆಂದಿಲ್ಲದೆ, ಅಭಿವೃದ್ಧಿಶೀಲ, ಅಭಿವೃದ್ಧಿ ಹೊಂದುತ್ತಿರುವ ಹಾಗೂ ಹೊಂದದ ರಾಷ್ಟ್ರವೆಂದಿಲ್ಲದೆ ಮಹಾಮಾರಿ ವಕ್ಕರಿಸಿಕೊಂಡದ್ದನ್ನು ಕಂಡರೆ ಭೇದ-ಭಾವಗಳನ್ನು ಕೋವಿಡ್ ಹೊಂದಿಲ್ಲವೆಂದೇ ಹೇಳಬೇಕು. ಜಾಗತಿಕವಾಗಿ ಎಲ್ಲರ ಅಹಮಿಕೆಯನ್ನು, ದರ್ಪವನ್ನು, ಮದವನ್ನು ಒಂದೇಟಿಗೆ ಮಕಾಡೆ ಮಲಗಿಸಿದ್ದು ಒಂದೇ ಒಂದು ವೈರಸ್-ಕೊರೋನಾ.

ಈ ವೈರಸ್ ಹೊಡೆದೇಟಿಗೆ ಎಂತೆಂತೆಹ ಅತಿರಥ ಮಹಾರಥರೆಲ್ಲ ಪಥರಗುಟ್ಟಿ ಹೋಗಿದ್ದಾರೆ ಎನ್ನುವುದನ್ನು ಕಂಡಿದ್ದೇವೆ. ಮದವೇರಿಸಿಕೊಂಡ ದೇಶವನ್ನು ಬಗ್ಗುಬಡಿದ ಕತೆ ಮುಂದಿನ ಪೀಳಿಗೆಗಾಗಿ ಚರಿತ್ರೆಯಲ್ಲಿ ಭದ್ರ. ಭೂತದ ಅರಿವಿಲ್ಲದೆ ವರ್ತಮಾನದಲ್ಲಿ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಭೂತದ ಹಂಗಿಲ್ಲದೆ ಭಾವಿಯನ್ನು ಕಾಣಲೂ ಬರುವುದಿಲ್ಲ. ಆ ಕಾರಣದಿಂದ ಗತದ ನೆನಪು ಬದುಕಿಗೆ ಅತೀ ಅಗತ್ಯ. ಹಳ್ಳಿಪಟ್ಟಣ, ಶಹರೆನ್ನದೆ ಬೆಂಬತ್ತಿ ಹೋಗಿ ಜೀವ ಹಿಂಡುತ್ತಿರುವ ಈ ಮಾರಿಯ ಆಟ ಇನ್ನೂ ನಡೆಯುತ್ತಲೇ ಇದೆ.

ಆಯಾ ದೇಶ, ರಾಜ್ಯಗಳ ಆಡಳಿತವು ಸಮರ್ಪಕವಾಗಿ ತಂತಮ್ಮ ಪ್ರಜೆಗಳ ಆರೈಕೆಯಲ್ಲಿ ತೊಡಗಿಕೊಂಡಿವೆ. ‘ವೈದ್ಯೋ ನಾರಾಯಣೋ ಹರಿ’ ಎನ್ನುವಂತೆ ಪ್ರಪಂಚದ ವೈದ್ಯಕೀಯ ಪದ್ಧತಿ ಹಾಗೂ ಶುಶ್ರೂಷಕರು ಬಿಡುವಿಲ್ಲದೆ, ದಣಿವಾರಿಸಿಕೊಳ್ಳದೆ ತಮ್ಮ ಜೀವವನ್ನು ಒತ್ತೆಯಿಟ್ಟು ಕೋವಿಡ್ ರೋಗಿಗಳ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೆಷ್ಟೋ ವೈದ್ಯಕೀಯ ಸಿಬ್ಬಂದಿಗಳನ್ನು ಕಳಕೊಂಡಿದ್ದೇವೆ. ಹಾಗಿದ್ದರೂ ಅವರ ಛಲ, ಬದ್ಧತೆ ಒಂದಿಷ್ಟೂ ಮಾಸಿಲ್ಲ.

ಆಡಳಿತ ವ್ಯವಸ್ಥೆಯಡಿ ಬರುವ ಬಹಳಷ್ಟು ಪೊಲೀಸ್ ಸಿಬ್ಬಂದಿಗಳೂ ನಮಗಾಗಿ ತಮ್ಮ ಜೀವವನ್ನೇ ಅರ್ಪಿಸಿದ್ದಾರೆ. ಆದರೂ ಅವರ ನಿಷ್ಠೆ, ಬಲ ಕಡಿಮೆಯಾಗಿಲ್ಲ. ಅವರದ್ದೂ ಜೀವವಲ್ಲವೇನು? ಅವರ್ಯಾರಿಗೂ ಸಂಸಾರವಿಲ್ಲವೇನು? ಜೀವವನ್ನು ಪಣಕ್ಕಿಟ್ಟು ನಮ್ಮ ಉಸಿರ ಕಾಯುವ ಇಂತವರು ಪ್ರಾತಃಕಾಲ ಸ್ಮರಣೀಯರು. ಅಂತವರನ್ನೇ ನಾವು ಪ್ರಶ್ನಿಸುವ, ಎದುರಿಸುವ ಮಟ್ಟಕ್ಕೆ ಹೋಗುತ್ತೇವೆ-ವಿಪರ್ಯಾಸವೇ ಸರಿ. ಸಾರ್ವಜನಿಕರಿಗೂ ಜವಾಬ್ದಾರಿ ಬೇಡವೇ? ಅದೆಂತಹ ದುರವಸ್ಥೆಗೆ ನಮ್ಮನ್ನು ನಾವು ತಳ್ಳಿಬಿಟ್ಟಿದ್ದೇವೆ.

ಒಂದು ಚೂರೂ ಜವಾಬ್ದಾರಿ ಇಲ್ಲದ ಜನರನ್ನು ಕಂಡಾಗ ಸಿಟ್ಟಲ್ಲ ಕನಿಕರ ಹುಟ್ಟುತ್ತದೆ. ಅದೆಂತಹ ಅಸಡ್ಡೆ! ಜೀವವಿದ್ದರೆ ತಾನೇ ಸಂಪಾದನೆ ಮಾಡಲು ಸಾಧ್ಯ. ಹಾಗಿದ್ದೂ ಕೋವಿಡ್ ಸುವ್ಯವಸ್ಥೆಯ ಕಾನೂನನ್ನು ಪಾಲಿಸದೆ ರಸ್ತೆಗಿಳಿಯುವ ಮಂದಿಗೆ ಏನನ್ನಬೇಕು? ಅವರವರ ಮನೆಯವರೇ ಛಿಮಾರಿ ಹಾಕಬೇಕು. ನೆರೆಕರೆಯವರು, ಸ್ನೇಹಿತರ ಬಳಗ ಒಟ್ಟಾಗಿ ನಿಂತು ಕಿವಿ ಹಿಂಡಬೇಕು. ಅದೆಂತಹ ಧಾರ್ಷ್ಟತನ ಜನರದ್ದು. ನಿತ್ಯವೂ ಸಾವಿನ ಮನೆಯ ಬಾಗಿಲನ್ನು ಬಡಿದು ಬರುವ ತವಕ ಅವರಿಗೆ. ಕಾಲನಾದರೂ ಅದೆಷ್ಟು ಸಹಿಸಿಕೊಂಡಾನು? ಸಿನಿಕತವನ್ನು ಬದಿಗಿಟ್ಟರೆ ಒಳ್ಳೆಯದ್ದನ್ನು-ಕೆಟ್ಟದ್ದನ್ನು ನೋಡಲು ಸಾಧ್ಯವಿದೆ.

ಖಂಡಿಸಬೇಕೆಂದೇ ನಿರ್ಧರಿಸಿ ಭಾವನೆಯನ್ನು ತುಂಡುತುಂಡು ಮಾಡಿ ಬಿಸಾಕುವ ಮನಸ್ಥಿತಿಗೆ ನಮ್ಮನ್ನು ನಾವು ಒಡ್ಡಿಕೊಂಡೆವೆಂದಾದರೆ ಪ್ರಾಯಶಃ ನಮ್ಮನ್ನು ನಮಗೇ ಕ್ಷಮಿಸಲು ಸಾಧ್ಯವಾಗದ ದಿನಗಳು ಬರಲಿವೆ. ಎಚ್ಚರದ ಪ್ರಜ್ಞೆ ಮುಖ್ಯ. ದೇಶದಲ್ಲಿ ಹಿಂದೆಂದೂ ಕಾಣದ ಮೆಡಿಕಲ್ ಎಮರ್ಜನ್ಸಿಯನ್ನು ಇಂದು ಕಾಣುತ್ತಿದ್ದೇವೆ. ಆರೋಗ್ಯ ಸಂಬಂಧಿತ ಕಾಳಜಿಯನ್ನು ವಿಶೇಷವಾಗಿ ಭಾರತದಲ್ಲಿ ಇಂದು ಹೆಚ್ಛೇ ನೋಡುತ್ತಿದ್ದೇವೆ. ಅಂತಹದ್ದರೊಳಗೆ ಇಂದಿನ ಪರಿಸ್ಥಿತಿಯನ್ನು ವ್ಯವಸ್ಥೆಯು ಹೇಗೆ ನಿಭಾಯಿಸಬೇಕು ಎನ್ನವುದೊಂದು ಗಂಭೀರವಾದ ಪ್ರಶ್ನೆ.

ಇದು ಪ್ರಸ್ತುತದ ಅತ್ಯಂತ ಪ್ರಸಕ್ತ ವಿಚಾರವೂ ಹೌದು. ಹುಟ್ಟಲ್ಲೂ-ಸಾವಲ್ಲೂ ಪಡೆಯುವ ಅತಿಯಾದ ಪ್ರಚಾರದ ಮಹತ್ತು, ತನ್ನದೇ ಶ್ರೇಷ್ಠವೆಂಬ ಭಾವ, ಯಾಮಾರಿ ಹೋದ ದೂರದೃಷ್ಟಿ, ಬಳಸಿಕೊಳ್ಳದೇ ಬಿಟ್ಟ ಸಮಯ, ಅತಿಯಾದ ಸಂಭ್ರಮಾಚರಣೆ, ಏನೂ ಆಗಲಾರದೆಂಬ ಹುಂಬು ಧೈರ್ಯವು ಕೆಲವೊಂದಿಷ್ಟು ಎಡವಟ್ಟುಗಳನ್ನು ಸೃಷ್ಟಿಸಿದ್ದಿದೆ. ಈ ಮಧ್ಯೆ ತೂ..ತೂ.. ಮೈ..ಮೈ..ಗಳೂ ಹೆಚ್ಚಾಗಿ ವಾಸ್ತವ ಪರಿಸ್ಥಿತಿಯ ನಿರ್ವಹಣೆ ಯಾರಿಗೂ ಬೇಡವಾಗಿ ಕುಂತಿ ಮಕ್ಕಳಿಗೆ ವನವಾಸದ ಪಾಡು ತಪ್ಪಿದ್ದಲ್ಲ ಎನ್ನುವಂತ ಸ್ಥಿತಿ ಪ್ರಜೆಗಳದ್ದು. ಯಾರು ತಪ್ಪಿತಸ್ಥರು? ಅವರೆಲ್ಲಿ ಎಡವಿದರು? ಆಡಳಿತ ಯಂತ್ರವೇ ನಿಷ್ಕ್ರಿಯಗೊಂಡಿತೇ? ಯೋಚಿಸಬೇಕಾಗಿದೆ.

ಆಡಳಿತ ಪಕ್ಷವನ್ನು ತಪ್ಪಿದ್ದಲ್ಲಿ ಟೀಕಿಸಿ ಸರಿದಾರಿಗೆ ತರಬೇಕಿರುವುದು ಪ್ರತಿ ಪಕ್ಷದ ಕೆಲಸ. ವಿರೋಧಿಸಬೇಕು ಎಂಬ ಒಂದೇ ಕಾರಣಕ್ಕೆ ವಿರೋಧಿಸುವುದು ಪ್ರತಿಪಕ್ಷದ ಕೆಲಸವಾಗಬಾರದು. ಅದೇ ಸಮಯದಲ್ಲಿ ಆಡಿದ್ದೇ ಆಟ, ಹೂಡಿದ್ದೇ ಗೂಟ ಎಂಬ ಮನಸ್ಥಿತಿಯಿಂದ ಆಡಳಿತ ಪಕ್ಷವೂ ಹೊರಬರಬೇಕಿದೆ. ಯುದ್ಧದಂತಹ ವಾತಾವರಣದಲ್ಲಿ ದೇಶವಿರುವಾಗ ಹಮ್ಮು-ಬಿಮ್ಮು, ಕೊಂಕು-ಬಿಂಕಗಳನ್ನು ಬದಿಗಿಟ್ಟು ಎಲ್ಲರೂ ಕೈಜೋಡಿಸಿ ಜೀವ ಸಿದ್ಧಾಂತಕ್ಕೆಬದ್ಧರಾಗಿ ಕಾರ್ಯಪ್ರವೃತ್ತರಾಗಬೇಕಿರುವುದು ಈಗಿನ ಬಹುಮುಖ್ಯ ಅಗತ್ಯಗಳಲ್ಲಿ ಒಂದು. ಸದ್ಯಕ್ಕೆ ಅದೊಂದೇ ಮುಖ್ಯವಾಗಬೇಕಿರುವ ಕಾಲದಲ್ಲಿ ದೇಶ ಮತ್ತು ನಾವಿದ್ದೇವೆ.

ಸಾವಿನಲ್ಲೂ, ಚಿಕಿತ್ಸೆಯಲ್ಲೂ ರಾಜಕೀಯ ಬಣ್ಣ, ವಾಸನೆಗಳು ತೂರಿ ಬರುವುದನ್ನು ಕಂಡಾಗ-ನಿಜಕ್ಕೂ ನಾವು ಮನುಷ್ಯರೇ? ಎಂಬ ಪ್ರಶ್ನೆ ಸುಳಿದು ಹೋಗದೆ ಇರುವುದಿಲ್ಲ. ಇಷ್ಟಕ್ಕೂ ಸಿದ್ಧಾಂತ, ವೈಚಾರಿಕತೆಗಳು ಜೀವ ಉಳಿಸಿಕೊಳ್ಳಲು ಸಹಾಯವಾಗಲಾರದು ಎಂಬುದನ್ನು ಕೊರೋನಾ ದೃಢಪಡಿಸಿದೆ. ವೈಚಾರಿಕತೆ, ಸೈದ್ಧಾಂತಿಕತೆಗಳಿಗೆ ಹೆಚ್ಚಿನ ಆಯಸ್ಸಿರುವುದಿಲ್ಲ. ಕಾಲವುರುಳಿದ್ದೇ ಅವುಗಳೂ ಕಾಲದಡಿಯಲ್ಲಿ ಹುದುಗಿ ಹೋಗುತ್ತವೆ.

ಕೊನೆಗೂ ಉಳಿಯುವುದು ಜೀವ ಸಿದ್ಧಾಂತ ಎಂಬ ಮನುಕುಲದ ಮೂಲ ಧ್ಯೇಯ ಮಾತ್ರ. ಸಾಮೂಹಿಕತ್ವದ ನೆಲಗಟ್ಟಲ್ಲಿ ಜೀವ ಜೀವಗಳ ಅಳುವನ್ನು ಸಂತೈಸಲು ‘ಕೈ’ಗಳಿರಬೇಕು. ಮುದುಡಿದ ‘ತಾವರೆ’ಯೂ ಅರಳುವಂತಹ ಪ್ರಾರ್ಥನೆ ಎಲ್ಲರದ್ದಾಗಬೇಕು. ‘ಕತ್ತಿ-ಸುತ್ತಿಗೆ’ಯು ಕಾಣದ ಶತ್ರುವಿನ ಸಂಹಾರದಲ್ಲಿ ಮಿಂಚುವ ‘ತಾರೆ’ಯಾಗಬೇಕು. ನಿತ್ಯದ ಕೂಳಿನ ‘ಹೊರೆ’ಯನ್ನು ಹೊತ್ತು ಬರುವ ತಾಯಂದಿರ ಸಂಖ್ಯೆ ಹೆಚ್ಚಾಗಬೇಕು. ‘ಸೈಕಲ್, ಆನೆ, ಎರಡೆಲೆ, ಸೂರ್ಯೋದಯ, ಬಾಣ, ಏಣಿ, ಟಾರ್ಚು, ಲಾಟಾನು, ಜೋಡಿಹೂಗಳು..’ -ಮಿಕ್ಕ ಹಲವು ಚಿಹ್ನೆಗಳು ಪ್ರಸಕ್ತ ಕಾಲದ ನೋವಿನಲ್ಲಿ ಒಟ್ಟೊಟ್ಟಿಗೇ ಸಾಗುವ ಹೊತ್ತು ಇದೀಗ ಬಂದಿದೆ.

ಈಗ ಜೊತೆಯಲ್ಲಿ ನಡೆದಿಲ್ಲವೆಂದರೆ ಮುಂದೆಂದಿಗೂ ನಾವ್ಯಾರೂ ನಡೆಯಲಾರದೆ ಹೋಗಿಬಿಟ್ಟೇವು. ಪ್ರಸಕ್ತ ಸಮಯದಲ್ಲಿ ಮಾಡುವ ಅಂತಹ ಮಹಾತಪ್ಪಿಗೆ ನಾವು ಕಾರಣರಾಗಿ.. ಈಗಿರುವ ವರಶಾಪಕ್ಕೆನಾವು.. ಮುಂಬರುವ ಜನಾಂಗದ ಶಾಪಕ್ಕೆ ನಮ್ಮವರು ಉರಿದು ಬೂದಿಯಾಗುವುದರಲ್ಲಿ ಯಾವ ಪುರುಷಾರ್ಥವಿದೆ? ಮೂರೂ ಹೊತ್ತಿನ ಕೂಳು, ಕಣ್ಣು ತುಂಬಾ ನಿದ್ದೆ, ಕೈತುಂಬಾ ಕೆಲಸ ಯಾರಿಗೆ ಬೇಡದ್ದು? ಎಲ್ಲರೂ ಬಯಸುವ ಕನಿಷ್ಠ ಆಸೆಗಳವು. ಅಂತಹದ್ದರಲ್ಲಿ ತಂತಮ್ಮ ಮೂಗಿನ ನೇರಕ್ಕೆ ಅನುಕೂಲ ಶಾಸ್ತ್ರಗಳಡಿಯಲ್ಲಿ ಸಿದ್ಧಾಂತ, ವೈಚಾರಿಕತೆಗಳನ್ನು ಹಿಡಿದು ಬಡಿದು ಬಗ್ಗಿಸುವದರ್ದು ಯಾವ ಕರ್ಮಕ್ಕೆ ಕಣ್ರೀ.

ದೀಪಕ್ಕೆ ಮುತ್ತಿ ಸಾಯುವ ಹಾತೆಗಳಂತೆ ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿರುವಾಗ ಯಾರಿಗೆ ಬೇಕು ಕಣ್ರೀ ಈ ರಾಜಕೀಯ ದೊಂಬರಾಟ. ಥತ್… ಹೆಮ್ಮೆ ಎನಿಸುವಂತಹ ಕಾರ್ಯಗಳನ್ನು ದುರಿತ ಕಾಲದಲ್ಲಿ ರಾಜಕೀಯ ಪಕ್ಷಗಳು ನಡೆಸಿದ್ದಲ್ಲಿ ಮೆಚ್ಚುವ ಹೃದಯಗಳು ಅದೆಷ್ಟಿಲ್ಲ? ಇಲ್ಲ, ನಿಮ್ಮದೇ ದಾರಿ, ಸಿದ್ಧಾಂತ, ನಿಷ್ಠೆ, ಬದ್ಧತೆಗಳನ್ನೇ ಹಿಡಿದೆತ್ತಿ ನಡೆಯುತ್ತೀರಿ ಎಂದಾದರೆ ಚಚ್ಚಲೂ ಜನ ಹಿಂದೆ ಮುಂದೆ ನೋಡುವುದಿಲ್ಲ. ಮನುಷ್ಯನ ನಿರಾಶೆ, ಹತಾಶೆಗೂ ಮಿತಿಯಿದೆ. ಒಂದೊಮ್ಮೆ ಅದು ಕಡಿಯಿತು ಎಂದರೆ ಮುಂದಿನ ಅನಾಹುತಕ್ಕೆ ಯಾರು ಕಾರಣವಾಗುತ್ತಾರೆ? ಪ್ರಸಕ್ತ ಪರಿಸ್ಥಿತಿಯು ವಿಕೋಪಕ್ಕೆ ಹೋಗಲು ಸಣ್ಣದೊಂದು ಪ್ರಚೋದಕತೆಯೂ ಸಾಕಾಗಿ ಬಿಡುತ್ತದೆ. ಅಂತಹ ಸಮಯ ಬಾರದಿರಲಿ ಎನ್ನುವ ಪ್ರಾರ್ಥನೆಯಲ್ಲಿ…

ಆಸ್ಪತ್ರೆಗಳಲ್ಲಿ ಸೌಕರ್ಯಗಳಿಲ್ಲ, ಔಷಧಗಳೂ ಸರಿಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೂಳಲೂ-ಸುಡಲೂ ಜಾಗವಿಲ್ಲ. ಸುಟ್ಟು ಸುಟ್ಟು ದಣಿದು ಹೋಗಿದ್ದಾರೆ ‘ಹರಿಶ್ಚಂದ್ರ’ರು. ಎಂತಹ ಪರಿಸ್ಥಿತಿಗೆ ನಮ್ಮನ್ನು ನಾವು ತೆಗೆದುಕೊಂಡು ಹೋದೆವು. ಸಾಮಾನ್ಯರ ಜೀವ ಕಾಪಾಡಲು ಹತ್ತು ಹಲವು ಮಾರ್ಗಗಳು ವ್ಯವಸ್ಥೆಯಲ್ಲಿವೆ ಎನ್ನುವುದು ನಿಜವಷ್ಟೆ. ಆದರೂ ಅವ್ಯಾವುದನ್ನೂ ಅನುಷ್ಠಾನಿಸಲು ಸಾಧ್ಯವಾಗುತ್ತಿಲ್ಲ. ನಾವೆಲ್ಲಿ ತಪ್ಪಿದ್ದು? ಆತ್ಮಾವಲೋಕನಕ್ಕೆ ಇದು ಸಕಾಲ. ಕೊಡುವವರ ಮತ್ತು ಕೊಳ್ಳುವವರ ನಡುವಿನ ಸಮರಕ್ಕೆ ಕೊರೋನಾ ವೈರಸ್ ನಾಂದಿಯಾಯಿತೇ? ಇದು ಒಂದು ರಾಜ್ಯದ ಕತೆಯಲ್ಲ. ರಾಜ್ಯ ರಾಜ್ಯಗಳ ಎಂದೆಂದೂ ಮುಗಿಯದ ಕತೆ ಮತ್ತದರ ವ್ಯಥೆ.

ಎಂತೆಂತಹ ವೈಪರೀತ್ಯಗಳನ್ನು ದುರಿತ ಕಾಲದಲ್ಲಿ ಕಾಣಬೇಕಾಯಿತು-ಸಾವಿನಲ್ಲೂ ನೋಟೆಣಿಸುವ ಮಂದಿ, ಹಣಕ್ಕಾಗಿ ಹಾಸಿಗೆಯನ್ನು ಬ್ಲ್ಯಾಕ್ನಲ್ಲಿ ಹಿಡಿದಿಡುವವರು, ವ್ಯವಸ್ಥೆಯನ್ನೇ ಹಾಳು ಮಾಡುವ ವ್ಯವಸ್ಥೆಯದ್ದೇ ಒಳಗಿನ ಹುಳಗಳು, ದಾರುಣಾ ವಸ್ಥೆಯನ್ನು ಎನ್ಕ್ಯಾಷ್ ಮಾಡಿಕೊಳ್ಳುವ ಮಂದಿ, ವ್ಯವಸ್ಥೆಯನ್ನೇ ಬುಡಮೇಲಾಗಿಸುವ ರಾಜಕೀಯ ಮೇಲಾಟ, ಕೃತಕ ಅಭಾವದ ಸೃಷ್ಟಿ, ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪಕ್ಷಗಳು.. ಹೆಲ್ಪ್ಲೈನ್ ಎಂಬ ಹೆಲ್ಪ್ ಲೆಸ್ ಲೈನ್..

ಕಾಳದಂಧೆಯಲ್ಲಿ ಔಷಧ ಮಾರಾಟ.. ಅಷ್ಟೂ ಸಾಲದ್ದಕ್ಕೆ ಬರೀ ನೀರನ್ನು ಹಾಕಿ ‘ರೆಮ್ಡಿಸಿವರ್’ಎಂಬ ಜೀವ ಔಷಧವನ್ನು ಮಾರುವವರು.. ಇದೆಂತಹ ಅಧಃಪತನ. ಯಾರ್ಯಾರೂ ನಿರೀಕ್ಷಿಸದ ನೈತಿಕ ಅಧಃ ಪತನಕ್ಕೆಯಾರು ಕಾರಣ? ವ್ಯವಸ್ಥೆಯನ್ನೇ ದೂಷಿಸಬೇಡಿ. ಅದರ ಪಾಲೂ ಇದೆ ಇಲ್ಲವೆಂದಲ್ಲ. ಅದಕ್ಕಿಂತಲೂ ಮಿಗಿಲಾಗಿ ನಮ್ಮ-ನಿಮ್ಮ ಪಾಲು ಹೆಚ್ಛೇ ಇದೆ. ಶಾಂತ ಮನಸ್ಸಿನಿಂದ ನಮ್ಮ-ನಿಮ್ಮ ಒಳಗನ್ನು ಕೇಳಿ ನೋಡಿ. ಉತ್ತರ ಅಲ್ಲಿಯೇ ಇದೆ. ಆದರೆ ಅದನ್ನು ಹೊರಗೆಡಹಿ ಉತ್ತರಿಸುವ ಛಾತಿ ನಮ್ಮಲ್ಲಿಲ್ಲ. ಅಲ್ವೇ? ಮನಸ್ಸಾಕ್ಷಿಗಿಂತ ಮಿಗಿಲಾದದ್ದು ಪ್ರಪಂಚದಲ್ಲಿ ಯಾವುದೂ ಇಲ್ಲ. ಪಕ್ಷಭೇದ ಮರೆತು ಪರಿಸ್ಥಿತಿಯನ್ನು ನಿರ್ವಹಿಸುವ ಕಾರ್ಯ ನಡೆಯಬೇಕು.

ಹಂಚಿ ತಿನ್ನುವ ಮಟ್ಟಕ್ಕೆ ಕೋವಿಡ್ ಎಲ್ಲರನ್ನೂ ತಯಾರು ಮಾಡಿ ಬಿಟ್ಟಿದೆ. ಯಾರ ಚಿತೆಗೆ ಅದ್ಯಾರೋ ಅಗ್ನಿ ಸ್ಪರ್ಶ ಮಾಡಿದರೆ, ಇನ್ಯಾರದೋ ದೇಹವನ್ನು ಇನ್ಯಾರೋ ಧಫನ್ ಮಾಡಿ ಹಿಡಿಮಣ್ಣನ್ನು ಹಾಕುತ್ತಾರೆ. ಯಾವ ಮತ, ಯಾವ ಧರ್ಮ ಯಾವ ಜಾತಿ, ಎಲ್ಲಿಯ ಸಂಬಂಧ… ಒಂದಕ್ಕೊಂದು ಅರ್ಥವೇ ಆಗದ ಕೆಮಿಸ್ಟ್ರಿ 2020 ಮಾರ್ಚ್ ನಂತರ ದೇಶದಾದ್ಯಂತ ನಡೆಯುತ್ತಿರುವುದನ್ನು ಕಾಣುತ್ತೇವೆ. ಇದರ ಮಧ್ಯೆ ನನ್ನದೆಲ್ಲಿಡಲಿ ಎಂದು ನಡುವೆ ಬರುವವರಿಗೇನೂ ಕಡಿಮೆಯಿಲ್ಲ. ಅಂತಹವರನ್ನು ಅಲ್ಲಿಯೇ ಇರಲು ಬಿಟ್ಟು ಒಂದು ಹೆಜ್ಜೆ ಮುಂದೆ ಬಾರದಂತೆ ನೋಡಿಕೊಳ್ಳಬೇಕು.

ಒಂದಷ್ಟು ಒಣ ಚಿಂತನೆಗಳನ್ನು ಪೂರ್ವಾಗ್ರಹಪೀಡಿತರಾಗಿ ಕುಟುಕುತ್ತಲೇ ಹೋಗುವ ಅವರು ಮಾಡುವುದಿಷ್ಟೇ ಅಂತ ಇದೆ. ಆದರೂ ಬಿಟ್ಟಿರಲಾಗದ ಚಟ. ಏನೂ ಮಾಡಲಾಗದಿದ್ದರೆ ಕನಿಷ್ಠ ಧನಾತ್ಮಕ ಯೋಚನೆ, ಚಿಂತನೆಗಳನ್ನಾದರೂ ಹಂಚಬಹುದಲ್ಲವೇ? ಅದು ಬಿಟ್ಟು ಋಣಾತ್ಮಕ ಅಂಶಗಳನ್ನೇ ಮೂರೂ ಹೊತ್ತು ಕಲಸಿ ಉಣ್ಣುವ ಮಂದಿಗೆ ಏನು ಹೇಳುವುದು? ದುರಂತದಲ್ಲೂ ಸಂಭ್ರಮಿಸುವವವರಿದ್ದಾರೆ. ಜೊತೆಗೆ ದುರ್ನಾತದಲ್ಲೂ ಸುಗಂಧಕ್ಕಾಗಿ ಮೂಗರಳಿಸುವವರೂ. ಜೀವಂತ ಇದ್ದಾಗಲಂತೂ ಬದುಕಿಸಿಕೊಳ್ಳಲು, ಚೆನ್ನಾಗಿ ನೋಡಿಕೊಳ್ಳಲಾಗಲಿಲ್ಲ.

ಕನಿಷ್ಠ ಪಕ್ಷ ಸತ್ತಮೇಲಾದರೂ ಸರಿಯಾಗಿ ನಡೆಸಿಕೊಂಡಿದ್ದರೆ ನೊಂದ ಹೃದಯಗಳಿಗೆ ತುಸುವಾದರೂ ಸಮಾಧಾನವಾಗುತ್ತಿತ್ತು. ಟೋಲ್ಗೇಟ್ ಮುಂದೆ ನಿಂತ ವಾಹನಗಳಂತೆ ಉಸಿರ ಚೆಲ್ಲಿದ ದೇಹಗಳ ರಾಶಿ ಸಾಲು ಸಾಲಲ್ಲಿ ನಿಂತು ಕಾಯುತ್ತಿರುವಾಗ ಸುಡಲು-ಹೂಳಲು ಜಾಗವನ್ನು ಹುಡುಕಿಕೊಂಡು ಹೋಗುವ ವ್ಯವಸ್ಥೆ. ಆಮ್ಲಜನಕವಿದ್ದರೂ ಸರಿಯಾದ ಸಮಯಕ್ಕೆ ಪೂರೈಸಲಾಗದ ಕಾರಣಕ್ಕೆ ಉಸಿರನಿಲ್ಲಿಸಿದ ಜೀವಗಳು.. ರಾಜ್ಯರಾಜ್ಯಗಳ ನಡುವಿನ ಸೈದ್ಧಾಂತಿಕ ಸಂಘರ್ಷದ ಪರಿಣಾಮ ಚಾಚದೆ ಹೋದ ಸಹಾಯ ಹಸ್ತಗಳು.. ಅಂತಿಮ ಕ್ಷಣಗಳ ಇದಿರು ನೋಡುವ ದೇಹದ ಉಸಿರನ್ನು ಹಣದಾಸೆಗೆ ಬಲವಂತವಾಗಿಸಿ ನಿಲ್ಲಿಸುವ ಮನಸ್ಥಿತಿ.

ಇವೆಲ್ಲದರ ನಡುವೆಯೂ ಅಲ್ಲೊಂದು ಇಲ್ಲೊಂದು ಆಶಾದಾಯಕ ವಿಚಾರಗಳಿವೆ- ಚಿಗುರೆಲೆಗೆ ತನ್ನ ಹಾಸಿಗೆ ಕೊಟ್ಟು ಉಸಿರು ಬಿಟ್ಟ ಹಣ್ಣೆಲೆ, ಮನೆ ಮಠ ಬಿಟ್ಟು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ವೈದ್ಯಕೀಯ, ಪೊಲೀಸ್ ಸಿಬ್ಬಂದಿ, ಕೊರೋನಾ ಕಾರ್ಯಕರ್ತರ ಪಡೆ, ಹಸಿದ ಹೊಟ್ಟೆಯನ್ನು ತಣಿಸುವ ಕೈಗಳು, ಉಸಿರಿಗೆ ಬೇಕಾದ ಆಮ್ಲಜನಕವನ್ನು ಪೂರೈಸುವ ಹೃದಯಗಳು, ಶವದ ಹತ್ತಿರ ಸುಳಿಯಲೂ ಭಯ ಪಡುವಂತಹ ಸ್ಥಿತಿಯಲ್ಲಿ-ಎಲ್ಲವನ್ನೂಮರೆತು, ಇರುವದೆಲ್ಲವನ್ನೂ ತೊರೆದು ನಿಷ್ಕಲ್ಮಷವಾಗಿ ಅಂತ್ಯ ಕ್ರಿಯೆ ನಡೆಸುವ ಮನಸ್ಸುಗಳು… ಮಾನವೀಯತೆಯ ಜೀವಂತ ದಹನವಿನ್ನೂ ಆಗಿಲ್ಲ ಎನ್ನುವುದನ್ನು ತೋರಿಸುತ್ತದೆ.

ಇದೀಗ ನೆಮ್ಮದಿಗೂ ದುಡ್ಡು ತೆತ್ತಬೇಕಾದ ಕಾಲ. ಈ ಮಟ್ಟಕ್ಕೆಇಳಿಯಬೇಕಾಯಿತಲ್ಲ! ಯಾಕೆ ಹೀಗೆ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಚಿಮ್ಮುತ್ತಲೇ ಇವೆ. ಕಡಲಿನ ಕಂಬನಿಯನ್ನು ಒರೆಸುವವರು ಯಾರು? ಅಯ್ಯೋ.. ಅದ್ಯಾರೋ ಪಕ್ಕದ ಮನೆಯಲ್ಲಿ ಬೆನ್ನುಬೆನ್ನಿಗೆ ಸೀನಿ ಪರ ಪರನೆ ಮೂಗೊರೆಸಿಕೊಂಡ ಶಬ್ದ.. ಮೇಲಿನ ಮನೆಯಲ್ಲಿ ಇನ್ಯಾರೋ ಬಿಡದೇ ಕೆಮ್ಮುತ್ತಿದ್ದಾರೆ, ದೂರದಿಂದ ಕೇಳಿಬರುವ ಆಂಬುಲೆನ್ಸ್‌ ನ ಕೂಗು ಹತ್ತಿರ ಹತ್ತಿರ ಬಂದದ್ದೇ ಎದೆಗೂಡಿನ ಢಮರಿನ ಬಡಿತ ಒಂದೇ ಸಮನೆ ಹೆಚ್ಚುತ್ತಾ ಹೋಗುತ್ತಿದೆ… ಸೀನು, ಕೆಮ್ಮಿಗೂ ಬೆದರಿ ಕೂರುವ ಸ್ಥಿತಿಯ ನಿರ್ಮಾಣ… ಒಡಲೊಳಗೆ ಅಸಹಾಯಕತೆಯ ಕೂಗು.

ಹೆಜ್ಜೆಹೆಜ್ಜೆಗೂ, ನಿಮಿಷ ನಿಮಿಷಕ್ಕೂ ಜೀವ ಭಯ, ಪರದೆ ಸರಿಸಿ ಹೊರಕ್ಕೆ ಚಾಚಿ ಇದ್ದಾನೋ ಇಲ್ಲವೋ ಎಂದು ಹುಡುಕುವ ಕಣ್ಣುಗಳು-ದೇಹದಲ್ಲಿ ಕೊಂಚ ಬದಲಾವಣೆಯಾದರೂ ಸಂಶಯದ ಹುಳು ತನ್ನ ಕೆಲಸದಲ್ಲಿ ಮಗ್ನ. ಬಿಡುವ ಉಸಿರ ಸದ್ದನ್ನು ಕೇಳಿಸಿಕೊಂಡರೆ ಎಂದರಿತು ಮೆತ್ತಗೆ ಉಸಿರುಬಿಡುವ ಹೊತ್ತಲ್ಲಿ ಬಾಗಿಲು ಬಡಿದ ಸದ್ದಾಯಿತಲ್ಲ… ಯಾರಿರಬಹುದು?

‍ಲೇಖಕರು Avadhi

May 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. na da shetty

    ಸಂತೋಷ್ ಬರೆದದ್ದು ಸಕಾಲಿಕ ಲೇಖನ. ಹಲವು ಸೂಕ್ಷ್ಮಗಳನ್ನು ಬಿಡಿಸಿಟ್ಟಿದ್ದಾರೆ. ನಮ್ಮ ಜನರು ಮಾನವರಾಗುವುದು ಯಾವಾಗ? ಪರಿಸ್ಥಿತಿಯನ್ನು ಅರಿತು ನಿಸ್ವಾರ್ಥಿಗಳಾಗೋದು ಯಾವಾಗ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: