ಬಹುಮುಖಿ: ವರ್ತಮಾನದ ಕನ್ನಡಿಯಲ್ಲಿ ಪರಂಪರೆ

ಎಚ್.ಆರ್. ರಮೇಶ

ಪ್ರತಿ ಕಾಲಘಟ್ಟವೂ, ತನ್ನ ಸಮಕಾಲೀನ ಸಂದರ್ಭವನ್ನು ಟೀಕೆ, ವಿಮರ್ಶೆ ಮಾಡುತ್ತಲೇ, ಕಾಲದ ನದಿಯನ್ನು ಮುಂದಕೆ ಹರಿಯಲು ಬಿಟ್ಟು, ಪರಂಪರೆಗೆ ಸೇರಿಕೊಳ್ಳುತ್ತದೆ. ಸಮಕಾಲೀನತೆಯೆನ್ನುವುದು ನಮಗೆ ಅರಿವಾಗುವುದು ಬಹಳ ಸಲ ಪರಂಪರೆಯ ಮೂಲಕವೇ. ನಿನ್ನೆಯ ಮೂಲಕವೇ ನಾವು ಇಂದು ಬದುಕುತ್ತ ನಾಳೆಯನ್ನು ಕಟ್ಟಬೇಕು. ಬದುಕು ಮತ್ತು ಕಾಲ ಜೊತೆಗೇ ಸಾಗುವಂತಹವು. ಒಂದನು ಬಿಟ್ಟು ಒಂದಿಲ್ಲ.

ಕಾಲವನ್ನು ಅರಿಯುವುದೇ ಜ್ಞಾನ. ಅಂದರೆ ಕಾಲವೆನ್ನುವುದು ತತ್ವ, ಸಿದ್ದಾಂತ ಮತ್ತು ಸೃಷ್ಟಿಯ ರಹಸ್ಯ. ಇದನ್ನು ವಿಜ್ಞಾನಿಗಳೂ, ರಸವಾದಿಗಳೂ, ತತ್ವಮೀಮಾಂಸಕರು ಮತ್ತು ಕವಿ-ಕಲಾವಿದರು ಭಿನ್ನ ನೆಲೆಯಲ್ಲಿ ಮಾಡುತ್ತ ಬಂದಿದ್ದಾರೆ.

ಅಮೇರಿಕಾದ ಪ್ರಸಿದ್ಧ ಸಾಹಿತ್ಯ ಚಿಂತಕ ಹೆರಾಲ್ಡ್ ಬ್ಲೂಮ್, ಷೇಕ್ಸ್ ಪಿಯರ್ ನ ಕೃತಿಗಳಿಗೆ ಪರಂಪರೆಯಲ್ಲಿ ಈಗಾಗಲೇ ರಚಿಸಲ್ಪಟ್ಟ ಕೃತಿಗಳು ಹೇಗೆ ಪ್ರಭಾವಿಸಿದವು. ಮತ್ತು ಸ್ವತಃ ಷೇಕ್ಸ್ ಪಿಯರ್ ಅವುಗಳಿಂದ ಹೇಗೆ ಪ್ರೇರೇಪಿತವಾಗಿ ತನ್ನ ಕೃತಿಗಳಲ್ಲಿ ಸ್ವಪೋಜ್ಞತೆಯನ್ನು ಮೆರೆದ ಎಂಬುದನ್ನು ಮನಗಂಡು ಮತ್ತು ಇದರಿಂದ ಪ್ರಭಾವಗೊಂಡು ತನ್ನ ‘ಆಂಕ್ಸಿಟಿ ಆಫ್ ಇನ್ ಫ್ಲುಯೆಂಜಾ’ ಬರೆದು, ಪರಂಪರೆ ಮತ್ತು ವರ್ತಮಾನಗಳನ್ನು ಬೆರೆಸಿ ಕೃತಿಗಳನ್ನು ಅಧ್ಯಯನ ಮಾಡಲು ಹೊಸ ದಾರಿಯನ್ನು ಆವಿಷ್ಕರಿಸಿದ.

ಇಂದಿನ ನಮ್ಮ ಸಂವೇದನೆಗೆ ಹಿಂದಿನ ಯಾವುದಾದರೂ ಒಂದು ಚೂರು ಬೆರೆತೆ ಇರುತ್ತದೆ. ಹಾಗಾಗಿ ಸದ್ಯವನ್ನು ನೋಡಲು ಕೊನೇ ಪಕ್ಷವನ್ನು ಹಿಂದಿನದನ್ನು ಇಣುಕಿಯಾದರೂ ನೋಡಬೇಕು. ಜೆ.ಕರಿಯಪ್ಪ ಮಾಳಿಗೆ ಅವರ ಹೊಸ ಕೃತಿ ‘ಬಹುಮುಖಿ’ ಸಮಕಾಲೀನ ಸ್ಪಂದನೆಗಳಿಗೆ ಜನಪದ, ತತ್ವಪದ, ಶಾಸನಗಳಿಂದ ಹಿಡಿದು ವಚನ, ಕೀರ್ತನೆ ಹಾಗೂ ಸದ್ಯದ ಕೃತಿಗಳಲ್ಲಿ ಹೊಳಪನ್ನು ಬೆರೆಸಿದ್ದಾರೆ.

ಇದು ಪರಿಶುದ್ಧವಾದ ಅಕಾಡೆಮೆಕ್ ಶಿಸ್ತನ್ನು ಮೀರಿ ಹೊಸ ವಸ್ತುವಿಷಯಗಳ ಕಡೆ ಗಮನ ಹರಿಸಿ ಅವುಗಳ ಮೇಲೆ ಬೆಳಕನ್ನು ಚೆಲ್ಲುವ ಪ್ರಯತ್ನ ಮಾಡುತ್ತದೆ. ವಸಾಹತೋತ್ತರ ಕಾಲಘಟ್ಟದಲ್ಲಿ ಮುಖ್ಯವಾಗಿ ಚರ್ಚಿತವಾಗುವ ‘ತಳಸಮುದಾಯ ಮತ್ತು ನಿರ್ಲಕ್ಷಿತ ಸಮುದಾಯಗಳ ಹಾಗೂ ಮೌಖಿಕ ಸಂಪ್ರದಾಯಗಳನ್ನು ಕುರಿತು ಈ ಕೃತಿಯಲ್ಲಿ ಮಾಳಿಗೆ ಅವರು ಚಿರ್ಚಿಸುತ್ತ, ಅನುಸಂಧಾನ ಮಾಡುತ್ತಾರೆ.

ಪ್ರಸ್ತಾಪಿಸಿದಂತೆ ಈಗಾಗಲೇ, ಇದರ ಹರಹು ತುಂಬಾ ವಿಶಾಲವಾದುದು. ಇನ್ನೂ ಗಮನಸಿಬೇಕಾದ ಅಂಶವೆಂದರೆ ಭಕ್ತಿ ಪರಂಪರೆಯಲ್ಲಿ ವೈಚಾರಿಕ ನೆಲೆಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿದ್ದಾರೆ.

ಈ ಕೃತಿಯಲ್ಲಿನ ಮುಖ್ಯ ಬರಹಗಳಲ್ಲಿ ಒಂದಾದ ‘ಚಿತ್ರದುರ್ಗ ಪರಿಸರ ಬುಡಕಟ್ಟು ಸಮುದಾಯದ ಬಯಲಾಟ ಕಲಾವಿದರು’ ಎನ್ನುವುದು ನಿರ್ಲಕ್ಷ್ಯಕ್ಕೆ ಒಳಗಾದ  ಮೌಖಿಕ ಕಲಾವಿದರ ಬದುಕು ಹೇಗಿದೆ ಮತ್ತು ತಮ್ಮ ಕಲೆಯ ಮೂಲಕ ಬದುಕನ್ನು ಹೇಗೆ ಹಸನುಮಾಡಿಕೊಂಡರು ಎನ್ನುವುದನ್ನು ಅವರಿಂದಲೇ ಕೇಳಿ ನಿರೂಪಿಸಲಾಗಿದೆ.

ಇಲ್ಲಿನ ಅನೇಕ ಕಲಾವಿದರಿಗೆ ಒಳ್ಳೆಯ ಅವಕಾಗಳು ಸಿಕ್ಕಿದ್ದಲ್ಲಿ ಅನೇಕ ಷೇಕ್ಸ್ ಪಿಯರ್ ನಂಥಹ ನಾಟಕಕಾರರು ಹೊಮ್ಮುತ್ತಿದ್ದರು ಎನ್ನಿಸುತ್ತದೆ. ಜೊತೆಗೆ ಅವರು ಮಾತುಗಳನ್ನು ಕೇಳುತ್ತ ಹೋದರೆ ಪುರಾಣ ಮತ್ತು ಮಹಾಕಾವ್ಯಗಳು ಜಾತ್ಯಾತೀತ ಮತ್ತು ಧರ್ಮನಿರಪೇಕ್ಷ ನಿಲುವು ಜನಪದರಲ್ಲಿ ಬೆರೆತಿರುವುದನ್ನು ಮತ್ತು ಸಾಮರಸ್ಯದ ಬದುಕನ್ನು ಕಟ್ಟಿಕೊಂಡಿರುವುದನ್ನು ಕಾಣಬಹುದು.

ಇಲ್ಲಿನ ಪ್ರತಿ ಕಲಾವಿದರು ಜಾಗತೀಕರಣದ ಜೊತೆಗೆ ಕಾದಾಡಿಕೊಂಡೇ ಕಲೆಯ ಮೂಲಕ ಬದುಕನ್ನು ಕಟ್ಟಿಕೊಂಡಿರುವವರು. ಜೆ.ಕರಿಯಪ್ಪ ಅವರು ಹೇಳುವಂತೆ ‘ ಇಂದಿನ ಕಾಲಮಾನದಲ್ಲಿ ವ್ಯವಹಾರಿಕ ಜಗತ್ತಿನಿಂದ ದೂರವೇ ಉಳಿದು ನೆಲವನ್ನ, ಕಲೆಯನ್ನ, ಜನವನ್ನ ನಂಬಿ ಜೀವಿಸುತ್ತಿರುವ ಅಪರೂಪದ ಕಲಾವಿದರಿದ್ದಾರೆ.’ ಇಲ್ಲಿ ದಾಖಲಾಗಿರುವ ಕಲಾವಿದರು ನಟರಷ್ಟೇ ಅಲ್ಲ, ನಿರ್ದೇಶಕರು ಕೂಡ ಆಗಿದ್ದಾರೆ.

ಎಂಬತ್ತ ಮೂರು ವರ್ಷದ ಕಲಾವಿದ ಮದ್ದಳೆ ಬೋರಯ್ಯ ಅರವತ್ತೆಂಟು ವರ್ಷಗಳ ಕಾಲ ನಿರಂತರ ಬಯಲಾಟಗಳನ್ನು ಅಭಿನಯಿಸುತ್ತಲೇ ಬಂದಿದ್ದಾರೆ. ಬಯಲಾಟದಲ್ಲಿ ಕರಿಭಂಟನ ಕಾಳಗ ತುಂಬಾ ಪ್ರಸಿದ್ಧಿ ಪಡೆದಿದೆ. ಕರಿಭಂಟನ ಪಾತ್ರವನ್ನು ಇಬ್ಬರು ನಿರ್ವಹಿಸುವುದು ವಾಡಿಕೆ. ಆದರೆ ಬೋರಯ್ಯ ಅವರು ಒಬ್ಬರೇ ಇಬ್ಬರು ನಿರ್ವಹಿಸುವ ಪಾತ್ರವನ್ನು ನಟಿಸುತ್ತಿದ್ದರು.

ಅದೂ ರಾತ್ರಿ ಪೂರಾ. ಇದನ್ನು ಕೇಳಿದರೆ ಮೈ ಜುಮ್ಮೆನ್ನದೆ ಇರದು. ಅಂದರೆ ಸಂಭಾಷಣೆಯನ್ನು ಪ್ರಸ್ತುತಪಡಿಸುವ ಅವರ ಅದ್ಭುತ ಜ್ಞಾಪಕ ಶಕ್ತಿ, ದೇಹದಲ್ಲಿನ ಚೈತನ್ಯ ಎಂತಹದ್ದು ಎನ್ನುವುದನ್ನು ಅರಿತರೆ ಗೊತ್ತಾಗುತ್ತದೆ. ಇಂತಹವರು ಷೇಕ್ಸ್ ಪಿಯರ್ ಗೆ ಏನಾದರೂ ಸಿಕ್ಕಿದ್ದಿದ್ದರೆ ಮತ್ತೊಬ್ಬ ರಿಚರ್ಡ್ ಬರ್ಬೇಜ್ ಅಗುತ್ತಿದ್ದರು.

ಇಂತಹ ಅನೇಕ ಪ್ರಸಂಗಗಳು ಇಲ್ಲಿ ದಾಖಲು ಮಾಡಿ ಕನ್ನಡದ ಅಜ್ಞಾತ ಪ್ರತಿಭೆಗಳನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ ಮಾಳಿಗೆಯವರು. ಮತ್ತೊಬ್ಬ ಚಿತ್ರಲಿಂಗಯ್ಯ ಎನ್ನುವ ಕಲಾವಿದ ‘ಬಯಲಾಟ ಆಡೋದ್ರಿಂದ ದಮ್ಮು ಕೆಮ್ಮು ಬರಲ್ಲ’ ಎನ್ನುತ್ತಾರೆ. ಅಂದರೆ ಕಲೆ ಕಲಾವಿದರ ಆರೋಗ್ಯವನ್ನು ಕಾಪಾಡುವಲ್ಲಿ ಪಾತ್ರ ವಹಿಸುತ್ತದೆ ಎನ್ನುವುದುನ್ನು ನೋಡಬಹುದು.

ಭಾರತದಂತಹ ಹಳ್ಳಿಗಾಡಿನ ದೇಶದಲ್ಲಿ ಬಯಲಾಟ, ಯಕ್ಷಗಾನ ಮತ್ತಿತರೆ ಕಲಾಪ್ರಕಾರಗಳು ಜನರ ಅರಿವನ್ನು ವಿಸ್ತರಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಮಾಳಿಗೆಯವರು ಅನಾವರಣ ಗೊಳಿಸುತ್ತಾರೆ.

ತಲೆಕೆಡಿಸುವಂತಹ, ಅರ್ಥವಿಲ್ಲದ, ವೈಚಾರಿಕತೆಯಿಲ್ಲದ ಮತ್ತು ಭಾಷಾದಾರಿದ್ರ್ಯಗಳಿಂದ ತುಂಬಿತುಳುಕುವ ಇಂದಿನ ದೃಶ್ಯಮಾಧ್ಯಮ ಹಾವಳಿಯಿಂದ ಪಾರಾಗಬೇಕೆಂದರೆ ಪರಂಪರೆಯಲ್ಲಿನ ಜನಪದ ಕಲೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಅವುಗಳನ್ನು ಹೊಸ ತಲೆಮಾರಿನ ಸ್ಪಂದನೆಗಳಿಗೆ ಅನುಗುಣವಾಗಿ ಕಟ್ಟುವ ಅನಿವಾರ್ಯತೆ ಇದೆ.

ಈ ಭಾಗದ ಕಲಾವಿದರನ್ನು ಸಂದರ್ಶಿಸಿ ಮಾಳಿಗೆಯವರು ಅಲಕ್ಷಿತ ಸಮುದಾಯಗಳಿಗೆ ಚೈತನ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುವಂತಹ ಕೆಲಸಮಾಡಿದ್ದಾರೆ. ವಚನ ಚಳವಳಿಯ ತತ್ವ ಸಿದ್ಧಾಂತ ಮತ್ತು ವಚನಗಳು ಬಹುಮುಖಿ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.

ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯ, ಸಿದ್ದರಾಮ ಮುಂತಾದವರು ಕುರಿತು ಬರೆಯುತ್ತ ಅವರಲ್ಲಿನ ವೈಚಾರಿಕ ನೆಲೆಗಳನ್ನು ಗುರುತಿಸಿ, ಅವರ ವಚನಗಳು ತತ್ವಪದಗಳ ಮೂಲಕ ಜನಮಾನಸದಲ್ಲಿ ಉಳಿದಿರುವುದನ್ನು ನೆನಪಿಸಿಕೊಳ್ಳುತ್ತಾರೆ.

ಅಂಬಿಗರ ಚೌಡಯ್ಯರ ಬಗ್ಗೆ ಹೀಗೆ ಬರೆಯುತ್ತಾರೆ: ‘ವಚನ ಚಳವಳಿಯ ಕಾಲದಲ್ಲಿ ಎಚ್ಚೆತ್ತ ಕೆಳವರ್ಗದ ಅದ್ಭುತ ಪ್ರತಿಭೆ ಅಂಬಿಗರ ಚೌಡಯ್ಯ, ನೇರ ಸ್ವಭಾವದವನು. ಸ್ವಾಭಿಮಾನಿಯಾಗಿ ಬದುಕಿನುದ್ದಕ್ಕೂ ನಡೆದವನು. ತಾನು ಬದುಕಿದ ಕಾಲದ ಆಡಂಬರ, ಬೂಟಾಟಿಕೆಯನ್ನು ನೇರವಾಗಿ ಪ್ರಶ್ನಿಸುವುದರ ಜೊತೆಗೆ ಸಮಕಾಲೀನ ಶರಣ ಚಿಂತನೆಗಳನ್ನು, ವಿಚಾರಗಳನ್ನು ಅವರ ಕೆಲ ಪರಿಕಲ್ಪನೆಗಳನ್ನು ನೇರವಾಗಿ ಪ್ರಶ್ನಿಸಿದವರು.

ದಿಟ್ಟ ಸ್ವಭಾವದ ಅಂಬಿಗರ ಚೌಡಯ್ಯ’. ಮತ್ತೆ ಮುಂದುವರೆದು, ‘ಅನೇಕ ಶರಣರು ತಮ್ಮ ಇಷ್ಟದ ದೈವವನ್ನು ಅಂಕಿತವಾನ್ನಾಗಿ ಇಟ್ಟುಕೊಂಡು ವಚನಗಳನ್ನು ರಚಿಸಿದರೆ, ಅಂಬಿಗರ ಚೌಡಯ್ಯ, ಕುಲ ಕಸುಬಿನ ಜೊತೆ ತನ್ನ ಹೆಸರನ್ನು ಇಟ್ಟುಕೊಂಡು ವಚನಗಳನ್ನು ರಚಿಸಿದರು’ ಎನ್ನುತ್ತಾರೆ.

ರಾಮಾಯಣವನ್ನು ಧರ್ಮಕ್ಕೆ ಅಂಟಿಸಿಕೊಂಡು ರಾಜಕಾರಣ ಮಾಡುತ್ತ ರಾಮನನ್ನು ಅವತಾರ ಪುರುಷನೆಂದು ನಂಬಿಸಿ ಆತ್ಮವಂಚಕ ರಾಜಕಾರಣವನ್ನು ಮಾಡುವ ಈ ಹೊತ್ತಿನಲ್ಲಿ , ವಾಲ್ಮೀಕಿಯ ರಾಮಾಯಣವನ್ನು ಬೇರೆಯದೇ ನೆಲೆಯಲ್ಲಿ ನೋಡುತ್ತಾರೆ: ‘ವಾಲ್ಮೀಕಿಯ ರಾಮಾಯಣ ದೇವರ ಕತೆಯಲ್ಲ; ದೇವರ ಚರಿತ್ರೆಯೂ ಅಲ್ಲ, ಅದು ಮಾನವರ ಚರಿತ್ರೆ, ಮಾನವನ ಮನೋವಿಕಾಸದ ಕಥನ.

ಇಡೀ ಕಾವ್ಯದ ಜೀವ ದ್ರವ್ಯ ಆದರ್ಶ, ಸತ್ಯ, ಪ್ರಾಮಾಣಿಕತೆ, ಪ್ರೀತಿ ಮತ್ತು ಮಾನವೀಯ ಸಂಬಂಧಗಳ ಆದರ್ಶ. ಅದನ್ನು ವಾಲ್ಮೀಕಿ ಎಲ್ಲರಿಗೂ ಆಪ್ಯಾಯಮಾನವಾದ ಕರುಣಾರಸದ ಮೂಲಕ ಕಟ್ಟಿಕೊಟ್ಟಿದ್ದಾರೆ.’ ಈ ಕೃತಿಯ ಮುಖಪುಟವನ್ನು ಗಮನಸಿದರೆ ಥಟ್ಟನೆ ನೆನಪಾಗುವುದು ಬುದ್ಧ. ಅವನ ಚಿಂತನೆಗಳು ಮತ್ತು ಅವನು ಎತ್ತಿಹಿಡಿಯುವ ಪ್ರಜಾಸತ್ತಾತ್ಮಕ ನಿಲುವುಗಳು ಇಡೀ ಕೃತಿಯ ಉದ್ದಕ್ಕೂ ಕಾಣಬಹುದು.

ಮಾಳಿಗೆ ಅವರು ‘ಇಂದು ನಾವು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವದ ಕಲ್ಪನೆ ಬುದ್ಧನ ಸಂಘದ ಪರಿಕಲ್ಪನೆ. ಬುದ್ಧನ ಚಿಂತನೆಯೇ ಸಂವಿಧಾನಕ್ಕೆ ಮೂಲ ಪ್ರೇರಕ ಶಕ್ತಿ. ಹನ್ನೆರಡನೇ ಶತಮಾನದ ಬಸವಣ್ಣನವರ ಕಲ್ಪನೆಯ ಅನುಭವ ಮಂಟಪ ಕೂಡ ಸಂಘದ ಆಶಯಗಳನ್ನು ಒಳಗೊಂಡಿದೆ.

ಬುದ್ಧ, ಬಸವ ಮತ್ತು ಅಂಬೇಡ್ಕರ್ ಕಾಲದ ದೃಷ್ಟಿಯಿಂದ ಬಹು ಅಂತರ ಇದ್ದರೂ, ಚಿಂತನೆಯ ದೃಷ್ಟಿಯಿಂದ ಜೀವಪರ ಕಾಳಜಿಯಿಂದ ಈ ಮೂವರೂ ಭಿನ್ನರಾಗಿಲ್ಲ. ದುರಾದೃಷ್ಟವೆಂದರೆ ಅಪಕ್ವ ಮನಸುಗಳು ಅವರನ್ನು ಅವತಾರ ಪುರುಷರೆಂದು ಹೇಳುತ್ತ ಒಂದು ಚೌಕಟ್ಟಿನಲ್ಲಿ ಬಂಧಿಸುವ ಪ್ರಯತ್ನಗಳನ್ನು ಮಾಡಿವೆ’ ಎಂದು ಖಡಕ್ಕಾಗಿ ಹೇಳುತ್ತಾರೆ.

ವಚನಕಾರ ಸಿದ್ದರಾಮನ ಕುರಿತು ಬರೆಯುತ್ತ ಅನುಭಾವ ವನ್ನು ಕುರಿತು ಚರ್ಚಿಸುತ್ತಾರೆ. ಅನುಭಾವ ಎಂದರೆ ಅದೊಂದು ನಿರ್ಲಿಪ್ತವಾದಂತಹ ಸ್ಥಿತಿ ಎನ್ನುತ್ತಾರೆ. ಆರ್ನಾಲ್ಡ್ ಹೇಳುತ್ತಾನಲ್ಲ ಡಿಸ್ ಇಂಟರೆಸ್ಟೆಡ್ ನೆಸ್ ಆಥರ. ಪ್ರಾಪಂಚಿಕ ಆಸೆಯಷ್ಟೇ ಅಲ್ಲ ಎಲ್ಲ ಜಾತಿ, ಧರ್ಮ ಮತಗಳನ್ನು ಮೀರಿ ಕೇವಲ ಮನುಷ್ಯನೆನ್ನುವ ಸ್ಥಿತಿ.

ಮಾರ್ಮಿಕವಾಗಿ ಮತ್ತು ಸೂಕ್ಷ್ಮ ಒಳನೋಟಗಳಿಂದ ಅನುಭಾವವನ್ನು ಹೀಗೆ ಅರ್ಥೈಸುತ್ತಾರೆ, ‘ಅನುಭಾವಿಗಳ ಪುರ್ಣತತ್ವ, ಅನುಭಾವಿಗಳ ನಿರ್ಮಲ ಪ್ರೇಮ, ಉದಾರತೆ, ಸಹಿಷ್ಣುತೆಗಳು ಮೂಲಭೂತ ಧರ್ಮವಾದಿಗಳಿಗೆ ಅರ್ಥವಾಗುವುದಿಲ್ಲ’ ಎಂದು. ಮತ್ತು ಮುಂದಕ್ಕೆ, ‘ಮೂಲತಃ ಧರ್ಮ ಇನ್ನೂ ಸಾಂಸ್ಥೀಕರಣಗೊಂಡಿರದಿದ್ದಾಗ ಅನುಭಾವದ ಅಂಶಗಳು ಧರ್ಮದಲ್ಲಿ ಅಡಗಿದ್ದಿರಬೇಕು.

ಆ ಅಂಶಗಳೆ ಅನುಭಾವದ ಜೀವನಾಡಿ. ಕ್ರಮೇಣ ಸಾಂಸ್ಥೀಕರಣಗೊಂಡ ಧರ್ಮ ಸಹಜತೆ ಕಳೆದುಕೊಂಡು ಕರ್ಮಠವಾದಾಗ ಅನುಭಾವ ಎಂಬ ಜೀವಸಹಜ ಮೂಲವಸ್ತು ಅದರಿಂದ ಬೇರ್ಪಟ್ಟಿರಬೇಕು’ ಎಂದು ಹೇಳುತ್ತಾರೆ. ದಲಿತ ಸಾಹಿತ್ಯ ಕನ್ನಡ ಮತ್ತು ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ‘ಪ್ಯಾರಡಿಮ್ ಶಿಫ್ಟ್’ ಎಂದು ಹೇಳಬಹುದು.

ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರೇರೇಪಿತ ಗೊಂಡ ಮನಸುಗಳು ಶತಮಾನಗಳಿಂದ ವಂಚಿಸಲ್ಪಟ್ಟ ಹಾಗೂ ಶೋಷಿಸಲ್ಪಟ್ಟ ತಮ್ಮ ಸಮುದಾಯಗಳಿಗೆ ಬರವಣಿಗೆಯ ಮೂಲಕ ಚೈತನ್ಯವನ್ನು ತುಂಬಿದವು. ಒಂದೇ ಬಗೆಯ ಅನುಭವ ದಾಖಲಾಗುತ್ತಿದ್ದ ಸಾಹಿತ್ಯದಲ್ಲಿ ಹೊಸ ಮೆರುಗು ಮೂಡಿದ್ದಷ್ಟೇ ಅಲ್ಲ ವ್ಯವಸ್ಥೆ ಮತ್ತು ಪಟ್ಟಭದ್ರಹಿತಾಸಕ್ತಿಗಳು ತೀವ್ರವಾಗಿ ಟೀಕೆಗೆ ಒಳಪಟ್ಟವು.

ಪಿತೃಪ್ರಧಾನ ಸಮಾಜದ ದಬ್ಬಾಳಿಕೆ, ಹಿಪಕ್ರಸಿಗಳನ್ನು ಕತ್ತಿಯ ಮೊನಚಿನಂತಹ ಪರಿಭಾಷೆಗಳ ಮೂಲಕ ವಿಮರ್ಶಿಸುತ್ತ ವಸಾಹತೋತ್ತರ ಚಿಂತನ ಕ್ರಮಕ್ಕೆ ಸೈದ್ಧಾಂತಿಕ ನೆಲೆಯನ್ನು ಒದಗಿಸಿದವು.

ದಲಿತ ಸಂವೇದನೆ ಎನ್ನುವ ಬರಹದಲ್ಲಿ ಕನ್ನಡದ ದಲಿತ ಸಾಹಿತ್ಯವನ್ನು ಚಿರ್ಚಿಸುತ್ತ ‘ದಲಿತ ಸಂಸ್ಕøತಿ ಎಂದರೆ ಅವ್ವ ಸಂಸ್ಕøತಿ’ ಯನ್ನು ಕಟ್ಟಿಕೊಡುವುದು ಎಂದು ಹೇಳುತ್ತ ಮೂಲತಃ ಈ ದೇಶವನ್ನು ಮಾತೃ ಸಂಸ್ಕøತಿಯೇ ಕಾಪಾಡಿರುವುದು. ಆದರೆ ಚರಿತ್ರೆಯಲ್ಲಿನ ಕೆಲವು ಪೂರ್ವಯೋಜಿತ ಮತ್ತು ಸೋ ಕಾಲ್ಡ್ ಶಿಷ್ಟ ಪರಂಪರೆಯು ಅದನ್ನು ವಿಸ್ಮøತಿಗೆ ತಳ್ಳಿ ದಬ್ಬಾಳಿಕೆ ಪಿತೃ ಸಂಸ್ಕøತಿಯನ್ನು ಮೆರೆಸಿದರು ಎನ್ನುವ ಅಂಶವನ್ನು ಇಟ್ಟುಕೊಂಡು ದಲಿತ ಸಾಹಿತ್ಯವನ್ನು ಚರ್ಚಿಸಿದ್ದಾರೆ.

ಈ ನೆಲದ ತತ್ವಪದಕಾರರು ಮತ್ತು ಅವಧೂತರ ಬಗ್ಗೆ ಕರಿಯಪ್ಪ ಮಾಳಿಗೆಯವರಿಗೆ ಎಲ್ಲಿಲ್ಲದ ಉತ್ಸಾಹ, ಹುಮ್ಮಸ್ಸು. ಬದುಕಿನ ಸಂಕಷ್ಟಗಳಿಗೆ ತತ್ವಪದಕಾರರು ವೈಚಾರಿಕತೆ ಮತ್ತು ಭಕ್ತಿಯನ್ನು ಮಿಶ್ರಗೊಳಿಸಿ ತಮ್ಮದೇ ರೀತಿಯಲ್ಲಿ ಮುಖಾಮುಖಯಾಗಿದ್ದಾರೆ. ಶಿಷ್ಟ ಮತ್ತು ವೈದಿಕ ಸಾಹಿತ್ಯ ಪರಂಪರೆ ಹಾಗೂ ಜನಪದ ಮತ್ತು ಅವೈದಿಕ ಸಾಹಿತ್ಯ ಪರಂಪರೆ ಈ ಬೈನರಿಗಳನ್ನು ಅಳಿಸಿಹಾಕದಿದ್ದರೆ ಒಂದು ವರ್ಗಕ್ಕೆ ಅನ್ಯಾಯವಷ್ಟೇ ಅಲ್ಲ ಘೋರ ಅಪರಾಧವನ್ನು ಮಾಡಿದಂತೆ ಆಗುತ್ತದೆ. ಜ್ಞಾನ ಮನುಷ್ಯನ ಅರಿವಿನಿಂದ ಹಾಗೂ ಜನರ ನಡುವೆ ಬದುಕುತ್ತ ಕಂಡುಕೊಳ್ಳುವಂತಹದ್ದು. ಆದರೆ ಭಾರತದಂತಹ ಸಂದರ್ಭದಲ್ಲಿ ಇದೊಂದು ಹೀನ ರಾಜಕಾರಣವೇ ಆಗಿ ಅನೇಕ ಅಲಕ್ಷಿತ ಸಮುದಾಯಗಳು ಮುನ್ನಲೆಗೆ ಬರುತ್ತಿಲ್ಲ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾಕ್ರ್ವೆಜ್ ನಂತಹ ಮೇರು ಲೇಖಕ ತನ್ನ ಕೃತಿಗಳಿಗೆ ಜನಪದ ಮತ್ತು ತನ್ನ ನೆಲದ ಮೌಖಿಕ ಪರಂಪರೆಗಳಿಂದ ಪ್ರೇರಣೆಗಳನ್ನು ಪಡೆದು ವಿಶ್ವಮಾನ್ಯ ಹೆಸರನ್ನು ಪಡೆದಯುತ್ತಾನೆ ಎಂದರೆ ಜನಪದ ಸಾಹಿತ್ಯದ ಸತ್ವ ಎಂತಹದ್ದು ಎನ್ನುವುದನ್ನು ನಾವು ಅರಿಯಬೇಕು. ಈ ನಿಟ್ಟಿನಲ್ಲಿ ಮಾಳಿಗೆಯವರ ಈ ಕೃತಿ ತಳಸಮುದಾಯದ ಶರಣರು, ಅವಧೂರ ಕುರಿತು ಬರೆದು , ಅವರಿಗೆ ನ್ಯಾಯವನ್ನು ಸಲ್ಲಿಸಿದೆ.

ಈ ಕೃತಿಯ ಹೆಸರಿಗೆ ತಕ್ಕಂತೆ ಇಲ್ಲಿ ಬಹುಮುಖಿ ನೆಲೆಯಲ್ಲಿ ಅನೇಕ ವಿಭಿನ್ನ ಸಂಗತಿಗಳ ಮೂಲಕ ಸಮಕಾಲೀನ ತಲ್ಲಣಗಳಿಗೆ ತಮ್ಮದೇ ನೆಲೆಯಲ್ಲಿ ಸ್ಪಂದಿಸಿದ್ದಾರೆ. ಕೆಲವು ಲೇಖನಗಳು, ಕೇವಲ ಪರಿಚಯಾತ್ಮಕವಾಗಿದ್ದರೂ, ಲೇಖಕರ ಬದ್ಧತೆ ಮತ್ತು ಕಾಳಜಿಗಳಿಂದಾಗಿ ಗಮನಸೆಳೆಯುತ್ತವೆ.

ಬರಗೂರು ರಾಮಚಂದ್ರಪ್ಪನವರು ಇದನ್ನು ಗುರುತಿಸಿ ಹೀಗೆ ಹೇಳುತ್ತಾರೆ-‘ಜನಪದ ಪದ್ಧತಿಗಳು, ಕಲಾಪ್ರಕಾರಗಳು, ತತ್ವಪದಕಾರರು, ಅವಧೂತರು ಹೀಗೆ ಹಿಂದಿನದನ್ನು ಇಂದಿನ ಅರಿವಿನಲ್ಲಿ ಎರಕಹೊಯ್ಯುವ ನೇರ ನಿರೂಪಣೆ ಇವರಿಗೆ ಸಿದ್ಧಸಿದೆ. ಬಹುಮುಖಿ ಕೃತಿಯ ಬಹುಪಾಲು ಲೇಖನಗಳು ಸ್ಥಳೀಯ ಸಂಸ್ಕøತಿಗಳ ಸಾತತ್ಯವನ್ನು ಕಟ್ಟಿಕೊಡುತ್ತವೆ’ ಎಂದು.

ಅಂತರ್ಜಾಲಯುಗದ ಇಂದಿನ ಯುವ ಪೀಳಿಗೆ ಈ ಮಣ್ಣಿನ ಸಂಸ್ಕøತಿಯನ್ನು ಅದರ ಬನಿ, ವಾಸನೆಯನ್ನು ಅನುಭವಿಸಬೇಕೆಂದರೆ ಮತ್ತು ‘ಥಿಂಕ್ ಲೋಕಲಿ; ಆಕ್ಟ್ ಗ್ಲೋಬಲಿ’ ಎನ್ನುವ ಧೋರಣೆಯನ್ನು  ತಮ್ಮ ನೆಲದ ಭಾಷೆ, ಕಲೆಗಳಿಗೆ ತಾವು ಉಣ್ಣುವ ಆಹಾರ, ಬಟ್ಟೆ, ಉಸಿರಿನಷ್ಟೇ ಪ್ರಾಮುಖ್ಯತೆ ಕೊಡಬೇಕೆಂದರೆ ಇಂತಹ ಕೃತಿಗಳಿಂದ ಪ್ರೇರೇಪಿತಗೊಳ್ಳಬೇಕಾದ ಅನಿವಾರ್ಯತೆ ಇದೆ.

‍ಲೇಖಕರು Avadhi

November 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: