`ದೇಶ ಕಾಲ’ ಕೊಟ್ಟ ತಿರುವು

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

`ದೇಶ ಕಾಲ’ ಎಂದೊಡನೆ ಎಲ್ಲರ ಮನದಲ್ಲಿ ಒಂದು ಸದಭಿರುಚಿಯ ಭಾವ ಮೂಡುವುದರಲ್ಲಿ ಸಂದೇಹವೇ ಇಲ್ಲ. ಹೊಸದಾಗಿ ನಿಯತಕಾಲಿಕೆಗಳನ್ನು ಪ್ರಾರಂಭಿಸುವವರಿಗೆ ಆದರ್ಶ ಕೃತಿಯಾಗಿ ಇತಿಹಾಸ ನಿರ್ಮಿಸಿದ `ದೇಶ ಕಾಲ’ದ ಪ್ರತಿ ಸಂಚಿಕೆ ಮುದ್ರಣವಾಗಿ ಹೊರಬರುವುದರ ಹಿಂದೆ ನಿಜವಾಗಿ ಒಂದು ಶ್ರಮ ಮತ್ತು ಸವಾಲು ಇರುತ್ತಿತ್ತು.

ಒಂದು ದಿನ ಕೆ.ವಿ. ಅಕ್ಷರ ಅವರು ವಿವೇಕ ಶಾನ್‍ಭಾಗ್ ಅವರನ್ನು ಮುದ್ರಣಾಲಯಕ್ಕೆ ಕರೆತಂದು, ಪರಿಚಯಿಸಿ “ನಾವು ಒಂದು ವಿಶೇಷ ಮತ್ತು ವಿಭಿನ್ನ ಅಳತೆಯ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯನ್ನು ತರಲು ಯೋಜಿಸಿದ್ದೇವೆ. ಅದರ ಕುರಿತು ಚರ್ಚಿಸಬೇಕು ಹಾಗೂ ಅಂದಾಜು ವೆಚ್ಚ ಬೇಕು” ಎಂದರು.

ವಿವೇಕ್ ಅವರ ಪುಸ್ತಕಗಳನ್ನು ಮುದ್ರಿಸಿದ್ದೆವು ಹಾಗೂ ಅವರ ಬಗ್ಗೆ ಕೇಳಿದ್ದೆ. ಆದರೆ ಅವರನ್ನು ಮುಖತಃ ಭೇಟಿಯಾಗಿದ್ದು ಅದೇ ಮೊದಲು. ನಮ್ಮ ಚರ್ಚೆಯ ಮುಂದುವರಿದ ಭಾಗವಾಗಿ ಮೊದಲ ಸಂಚಿಕೆಯ ಕೆಲಸ ಪ್ರಾರಂಭವಾಗಿಯೇ ಬಿಟ್ಟಿತು. ವಿವೇಕ್ ಅವರು ಕೆಲಸದ ನಿಮಿತ್ತ ದೇಶ ವಿದೇಶಗಳನ್ನು ಸುತ್ತುತ್ತಾ, ಅವರ ದೈನಂದಿನ ಚಟುವಟಿಕೆಗಳ ಜೊತೆ ಸಾಕಷ್ಟು ಕಾಲವನ್ನು ಈ ಸಂಚಿಕೆಗಾಗಿ ಮೀಸಲಿಟ್ಟು, ಹಿರಿಯ-ಕಿರಿಯ ಲೇಖಕರಿಂದ ಉತ್ತಮ ಬರಹಗಳನ್ನು ಸಿದ್ಧಪಡಿಸಿಕೊಂಡಿದ್ದರು.

ಅವರದು ಕೇವಲ ಹೂರಣದ ಜೊತೆಯ ಸಂಬಂಧ ಮಾತ್ರವಲ್ಲ ಸ್ಪರ್ಶ, ಬಣ್ಣ, ವಿನ್ಯಾಸ, ಕಾಗದ, ಮುದ್ರಣ ಹೀಗೆ ಪ್ರತಿಯೊಂದಕ್ಕೂ ಬರಹಗಳಿಗೆ ಕೊಡುತ್ತಿದ್ದ ಮಹತ್ವವನ್ನೇ ಕೊಡುತ್ತಿದ್ದರು. ಪುಸ್ತಕ ಹೊದಿಕೆಯಿಂದ ಹಿಡಿದು ಒಳಗಿನ ವಿವರಗಳವರೆಗೆ, ಕಾಗದದಿಂದ ಹಿಡಿದು ಉಪಯೋಗಿಸುವ ಬಣ್ಣದವರೆಗೆ ಪ್ರತಿಯೊಂದೂ ಅದರಲ್ಲಿ ಮುಖ್ಯವೇ ಎಂದು ಭಾವಿಸಿ ಕೌತುಕದ ಅನುಭವವನ್ನು ಕೊಡುವಂತೆ ಸಂಚಿಕೆಯನ್ನು ಸಿದ್ಧಪಡಿಸಿದ್ದರು. ಸಂಚಿಕೆಯ ಮುಖಪುಟ ಮತ್ತು ಒಳಪುಟ ವಿನ್ಯಾಸದ  ಜವಾಬ್ದಾರಿಯನ್ನು ಸಾಂಸ್ಕೃತಿಕ ಕಾಳಜಿ, ಅಪಾರ ತಾಂತ್ರಿಕ ನೈಪುಣ್ಯ ಹಾಗೂ ಸ್ನೇಹಶೀಲ ಮನೋಭಾವದ ಚನ್ನಕೇಶವ ಹೊತ್ತಿದ್ದರು.

ಮುಂದೆ ಮುದ್ರಣ ವಿಷಯಕ್ಕೆ ಬಂದಾಗ – ಬಳಸುವ ಕಾಗದ, ಮುಖಪುಟಕ್ಕೆ ವಿಶೇಷವಾದ ಬೋರ್ಡ್ ಬೇಕೆಂಬುದು ಅವರ ಬಯಕೆಯಾಗಿತ್ತು. ನಾವೇ ಕಾಗದದ ಮಾದರಿಗಳನ್ನು ಮಾರುಕಟ್ಟೆಯಿಂದ ತಂದು ತೋರಿಸುತ್ತೇವೆ ಎಂದರೂ ಕೇಳಲಿಲ್ಲ.

“ನೀವು ತರುವ ಮಾದರಿ ನಮಗೆ ಇಷ್ಟವಾಗದೇ ಇದ್ದರೆ ಮತ್ತೆ ಹೋಗಿ ಹುಡುಕಿ ತರುವುದರಲ್ಲಿ ಸಮಯ ಹಾಳಾಗಿಬಿಡುತ್ತದೆ” ಎಂದು ಕಾಗದ ಹುಡುಕಲು ಜನದಟ್ಟಣೆಯ ನಡುವಿನ ರಸ್ತೆಗಳಲ್ಲಿ ಅಡ್ಡಾದಿಡ್ಡಿ ನಿಂತ ಲಾರಿ, ಆಟೋಗಳಿಂದ ಹೊರಹೊಮ್ಮುತ್ತಿದ್ದ ಉಸಿರು ಕಟ್ಟಿಸುವಂಥ ಹೊಗೆ, ಧೂಳು ಹಾಗೂ ಮಳೆಯಿಂದ ಕಾಲಿಡಲು ಅಸಹ್ಯವಾಗುವಂತಿದ್ದ ಕೊಚ್ಚೆ ನೆಲವನ್ನು ಲೆಕ್ಕಿಸದೆ, ವಿವೇಕ್ ಮತ್ತು ಚನ್ನಕೇಶವ ಅವರೇ ನಮ್ಮ ಜೊತೆ ಕಾಟನ್‍ಪೇಟೆ, ಶಿವಾಜಿನಗರದ ಗಲ್ಲಿ ಗಲ್ಲಿಗಳ ಕಾಗದ ಅಂಗಡಿಗಳಿಗೆ ಎಡತಾಕುತ್ತಿದ್ದರು. ಕಾಗದ ಹುಡುಕುವಲ್ಲೇ ಒಂದೆರಡು ದಿನ ವ್ಯಯಿಸಿ, ಅಂತಿಮವಾಗಿ ಒಂದು ಒಳ್ಳೆಯ ಗುಣಮಟ್ಟದ ಕಾಗದವನ್ನು ತಂದದ್ದಾಯಿತು.

ಮುದ್ರಣ ಸಮಯದಲ್ಲಂತೂ ವಿವೇಕ್ ಮತ್ತು ಚನ್ನಕೇಶವ ಇಬ್ಬರೂ ಮುದ್ರಣ ಯಂತ್ರಗಳ ಮುಂದೆ ಮೈ ಕೈಗಳಿಗೆ ಮಸಿ ಹತ್ತುವುದನ್ನೂ ಲೆಕ್ಕಿಸದೆ ನಿಂತುಬಿಡುತ್ತಿದ್ದರು. ಕೆಲಸದ ನಿಮಿತ್ತ ಬಹುತೇಕ ಸಮಯ ವಿದೇಶಗಳಲ್ಲಿಯೇ ಕಳೆಯುತ್ತಾ ಇಂಗ್ಲಿಷ್ ಪುಸ್ತಕಗಳ ಗುಣಮಟ್ಟವನ್ನು ಚೆನ್ನಾಗಿ ಬಲ್ಲವರಾಗಿದ್ದ ವಿವೇಕ್ ಅವರನ್ನು ಮುದ್ರಣ ಸಂಬಂಧಿ ವಿಚಾರಗಳಲ್ಲಿ ಸಮಾಧಾನಪಡಿಸುವುದು ಒಂದು ಸವಾಲಾಗಿಬಿಡುತ್ತಿತ್ತು.

ಸ್ವಲ್ಪ ಹೆಚ್ಚು ಕಡಿಮೆಯಾದರೂ ತಿರಸ್ಕರಿಸಿಬಿಡುತ್ತಿದ್ದರು. ಹೇಗೋ ಮಾಡಿ ಅವರನ್ನು ಒಪ್ಪಿಸಿದರೆ, ಇನ್ನೊಂದು ಕಡೆ ಚನ್ನಕೇಶವ ಒಪ್ಪುತ್ತಿರಲಿಲ್ಲ. ಕಲಾವಿದರು ವಿನ್ಯಾಸ ಮಾಡುವಾಗ ಬಳಸಿದ ಬಣ್ಣಗಳನ್ನು ಯಥಾವತ್ ಮುದ್ರಣಮಾಡಿ ಅವರನ್ನು ಒಪ್ಪಿಸುವುದು ತುಸು ಕಷ್ಟದ ಕೆಲಸ. ಅಂತಿಮವಾಗಿ ಮುದ್ರಣಕ್ಕೆ ಸಿದ್ಧ ಮಾಡಲು ಬಣ್ಣಗಳನ್ನು ಆರ್.ಜಿ.ಬಿ.ಯಿಂದ ಸಿ.ಎಂ.ವೈ.ಕೆ. ಗೆ ಅಳವಡಿಸಿ ಬಿಟ್‍ಮ್ಯಾಪ್ ಮಾಡಿ ಪ್ಲೇಟ್‍ಮಾಡಿ ಮುದ್ರಣ ಮಾಡುವಾಗ ಕಂಪ್ಯೂಟರ್ ಪರದೆಯ ಮೇಲೆ ನೋಡಿದ ಬಣ್ಣಕ್ಕಿಂತ ಶೇಕಡ 20 ವ್ಯತ್ಯಾಸ ಬಂದೇ ಬರುತ್ತದೆ.

ಇಂತಹುದರಲ್ಲಿ ಕಲಾವಿದರಾದ ಚನ್ನಕೇಶವ ಅವರೇ ಮುದ್ರಣ ಯಂತ್ರದ ಮುಂದೆ ನಿಂತು “ಅಯ್ಯೋ, ಮುಖಪುಟದಲ್ಲಿ ಬಣ್ಣ ಹೆಚ್ಚಾಗಿದೆ, ಸ್ವಲ್ಪ ಬ್ಲಾಕ್ ಬಣ್ಣ ಕಮ್ಮಿ ಮಾಡಿ, ಯೆಲ್ಲೋ ಬಣ್ಣ ಸ್ವಲ್ಪ ಹೆಚ್ಚು ಮಾಡಿ” ಎಂದು ತಲೆ ಕೆಡಿಸಿಕೊಂಡುಬಿಡುತ್ತಿದ್ದರು. ಒಂದು ಬಾರಿಯಂತು ಬೆಳಗ್ಗೆ ಹತ್ತು ಗಂಟೆಗೆ ಮುಖಪುಟ ಮುದ್ರಣ ಪ್ರಾರಂಭಿಸಿ ಅವರು ಒಪ್ಪುವಂತೆ ಮುದ್ರಿಸುವ ಹೊತ್ತಿಗೆ ಸಂಜೆಯಾಗಿತ್ತು. ಹೀಗೆ ಎರಡು ಮೂರು ದಿನ ನಮ್ಮೊಂದಿಗೆ ಮುದ್ರಣಾಲಯದಲ್ಲಿ ಕಳೆದುಬಿಡುತ್ತಿದ್ದರು.

ಕೊನೆಯ ಹಂತವಾದ ಬೈಂಡಿಂಗ್ ಸಮಯದಲ್ಲಂತೂ ಇನ್ನೂ ಕಷ್ಟ. ಮುಖಪುಟ ಫ್ಲಾಪ್ ಮಾದರಿಯಾದ್ದರಿಂದ ಆ ಮಾದರಿ ನಮಗೆ ಹೊಸದು. ನನಗೆ ತಿಳಿದಿರುವ ಹಾಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಪುಸ್ತಕಗಳ ಮುಖಪುಟದ ಮುಂದೆ ಮತ್ತು ಹಿಂದೆ ಫ್ಲಾಪ್ ಒಳಗೆ ಮಡಚುವ ಮುಖಪುಟ ಶುರುವಾಗಿದ್ದು `ದೇಶ ಕಾಲ’ದಿಂದಲೇ ಎನ್ನಬಹುದು.

ಮುಖಪುಟದ ಫ್ಲಾಪ್‍ಗಳನ್ನು ಮಡಚಿ ಬೈಂಡ್ ಮಾಡುವಾಗ ಒಂದು ಚೂರು ಹಿಂದೆ ಮುಂದೆಯಾದರೂ ವಿವೇಕ್ ಅವರು ಒಪ್ಪುತ್ತಲೇ ಇರಲಿಲ್ಲ. ಮೊದಲು ಎರಡು ಮೂರು ಸಂಚಿಕೆಗಳ ಮುದ್ರಣಕ್ಕಾಗಿ `ದೇಶ ಕಾಲ’ದ ಸಿ.ಡಿ. ಹಿಡಿದು ವಿವೇಕ್ ಅವರು ಮುದ್ರಣಾಲಯದ ಬಾಗಿಲ ಬಳಿ ಬಂದು ನಿಂತಾಗ, ನಮಗೆ ಏನು ಮಾಡಿದರೂ ತಲೆಗೆ ಹೋಗದೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲಿಷ್ ಬೋಧಿಸುವ ಮಾಸ್ಟರ್ ಕೈಯಲ್ಲೊಂದು ರೂಲುಕಟ್ಟಿಗೆ ಹಿಡಿದುಕೊಂಡು ಶಾಲಾ ಕೊಠಡಿಯನ್ನು ಪ್ರವೇಶಿಸಿದಂತೆ ಭಾಸವಾಗುತ್ತಿತ್ತು.

ಒಳಗೆ ಪ್ರವೇಶಿಸಿ ನಮಗರಿಯದ ವಿಭಿನ್ನ ಪ್ರಯೋಗದ ಸವಾಲನ್ನು ಒಡ್ಡುತ್ತಾರೆಂಬ ಭಯ ಮೂಡುತ್ತಿತ್ತು. ಹೀಗೆ ಪ್ರತಿ ಸಂಚಿಕೆಯಲ್ಲೂ ಹೊಸ ಬಗೆಯ ಕಾಗದ, ವಿನ್ಯಾಸ, ಬಣ್ಣಗಳ ಬಳಕೆ ಬಗ್ಗೆ ಅವರಿಬ್ಬರೂ ತಲೆ ಕೆಡಿಸಿಕೊಂಡು ನಮ್ಮ ತಲೆಗೂ ಹುಳ ಬಿಡುತ್ತಿದ್ದರು. ಸಂಚಿಕೆ ಮುದ್ರಣವಾಗಿ ಹೊರಬಂದ ಮೇಲೂ ಅವರ ಕೆಲಸ ಮುಗಿಯುತ್ತಿರಲಿಲ್ಲ.

ಅವರಿಬ್ಬರೇ ಕೂತು ಪ್ರತಿ ಸಂಚಿಕೆಯನ್ನು ಒಮ್ಮೆ ಪರೀಕ್ಷಿಸಿ, ಲಕೋಟೆಗೆ ತುಂಬಿ, ವಿಳಾಸ ಮೆತ್ತಿ, ಅಂಚೆ ಕಛೇರಿಯ ಮೇಜಿನ ಮೇಲೆ ಇಟ್ಟ ಕ್ಷಣ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು. ಒಟ್ಟಿನಲ್ಲಿ `ದೇಶ ಕಾಲ’ದ ಒಂದೊಂದು ಸಂಚಿಕೆಯ ಮುದ್ರಣದಿಂದಲೂ ನಮಗೆ ಹೊಸ ಹೊಸ ರೀತಿಯ ಪಾಠಗಳನ್ನು ಕಲಿಯುವಂತಾಯಿತು.

ಪ್ರತಿ ಸಂಚಿಕೆಯಲ್ಲೂ ಮುಂದಿನ ಸಂಚಿಕೆಯ ಬಿಡುಗಡೆ ದಿನಾಂಕವನ್ನು ಪ್ರಕಟಿಸಿ ಅವರನ್ನೊಳಗೊಂಡಂತೆ ನಮ್ಮನ್ನೂ ಸಮಯ ಪರೀಕ್ಷೆಯ ಪ್ರಯೋಗಕ್ಕೆ ಒಡ್ಡುತ್ತಿದ್ದರು. ಪ್ರತಿ ಸಂಚಿಕೆಯನ್ನೂ ಒಂದು ಸವಾಲಾಗಿ ಸ್ವೀಕರಿಸುತ್ತಾ ಹಲವು ಅಪರೂಪದ ವಿನ್ಯಾಸ, ಕಾಗದ, ಬಣ್ಣ ಹೀಗೆ ಮುದ್ರಣಗಳಲ್ಲಿ ನಾವೀನ್ಯತೆಯ ಸೊಗಸು ತರಲು ಎಷ್ಟೊಂದು ಬಗೆಯ ಪ್ರಯೋಗಗಳನ್ನು ನಮ್ಮಿಂದ ಮಾಡಿಸಿ, ಪ್ರತಿ ಸಂಚಿಕೆಯಲ್ಲೂ ಹೊಸದೇನನ್ನಾದರೂ ಕಲಿಯುವಂತೆ, ಹೊಸ ಹೊಸ ಅನುಭವ ದಕ್ಕಿಸಿಕೊಳ್ಳುವಂತೆ ಮಾಡುತ್ತಿದ್ದರೆಂಬುದು ಈಗ ಹಿಂದಿನ ಸಂಚಿಕೆಗಳತ್ತ ಕಣ್ಣು ಹಾಯಿಸಿದರೆ ಹೊಳೆಯುತ್ತದೆ.

ಪುಸ್ತಕ ಮುಖಪುಟದ ನಂತರ ಬರುವ ಮೊದಲ ಪುಟದಲ್ಲಿ ಸಂಪಾದಕರ ಹೆಸರಿನ ಕೆಳಗೆ ವಿನ್ಯಾಸಗಾರರ ಹೆಸರು ಹಾಕಲು ಪ್ರಾರಂಭಿಸಿದ ಕನ್ನಡದ ಮೊದಲ ಸಾಹಿತ್ಯ ಪತ್ರಿಕೆ `ದೇಶ ಕಾಲ’. ಮಿತ ಸ್ಥಳಾವಕಾಶದಲ್ಲಿ ಬರಹವನ್ನು ಚಿತ್ರಗಳೊಂದಿಗೆ ಅಚ್ಚುಕಟ್ಟಾಗಿಯೂ ಕಲಾತ್ಮಕವಾಗಿಯೂ ಪುಟ ವಿನ್ಯಾಸಗೊಳಿಸುವಲ್ಲಿ ಪಳಗಿದ್ದರು ಚನ್ನಕೇಶವ.

ಹಸ್ತಪ್ರತಿಯ ತಿದ್ದುಪಡಿಗಳೆಲ್ಲ ಮುಗಿದು ಅಂತಿಮವಾಗಿ ಸಿದ್ಧಗೊಂಡ ಡಿ.ಟಿ.ಪಿ. ಬರಹವನ್ನು ಆರಂಭದಿಂದ ಅಂತ್ಯದವರೆಗೂ ಚಿತ್ರಗಳೊಂದಿಗೆ ಒಪ್ಪವಾಗಿ ಸಂಯೋಜಿಸುವ ಅಭಿರುಚಿ, ತಾಳ್ಮೆಯ ಕೌಶಲ್ಯವನ್ನು ಅವರು ಸಿದ್ಧಿಸಿಕೊಂಡಿದ್ದರು. ಬಾಕ್ಸ್ ಬರಹಗಳ ನಡುವೆ ಸ್ಕ್ರೀನ್ ಎಷ್ಟು ದಟ್ಟವಾಗಿರಬೇಕು ಎಂದು ತಾಳೆ ಹಾಕುವ ಲೆಕ್ಕಾಚಾರದಲ್ಲೂ ಪುಟಗಳಲ್ಲಿ ಇವನ್ನೆಲ್ಲ ಸರಿದೂಗಿಸುವ ಕಲಾವಂತಿಕೆಯಲ್ಲೂ ನುರಿತ ಚಾಣಾಕ್ಷತೆ ಅವರದಾಗಿತ್ತು.

ಕೆಲವು ಬಾರಿ ವರ್ಣದ ರಗಳೆಯೇ ಇಲ್ಲದೆ ಕಪ್ಪು ಬಿಳುಪಿನಲ್ಲಿಯೇ ಕೊಂಚ ತಾಂತ್ರಿಕ ನೈಪುಣ್ಯತೆಯಿಂದ ಪುಟ ವಿನ್ಯಾಸ ಮಾಡಿಯೋ ಅಥವಾ ಎರಡು ಬಣ್ಣಗಳನ್ನು ಬಳಸಿ ನಾಲ್ಕು ಬಣ್ಣದ ಪರಿಣಾಮ ತಂದೋ ಒಳಪುಟಗಳಲ್ಲಿ ಚೆಲುವೊಡೆಯುವಂತೆ ಮಾಡುವ ಕೌಶಲ ಅವರಿಗಿತ್ತು.

ಹಲವಾರು ಅಂಶಗಳಲ್ಲಿ ಹೊಸ ತನವನ್ನು ರೂಢಿಸಿಕೊಂಡು ಒಳ ಹೂರಣ ಹಾಗೂ ಹೊರನೋಟದ ಚೆಲುವನ್ನು ಅನುಪಮವಾಗಿ ತುಂಬಿಕೊಂಡು ಅಚ್ಚಾದ `ದೇಶಕಾಲ’ ವಿಶೇಷಾಂಕವು ಉತ್ತಮ ಬರೆಹ, ಅಪರೂಪವಾದ ವಿನ್ಯಾಸ, ವಿಭಿನ್ನ ಬಣ್ಣಗಳ ಬಳಕೆ, ಹೊಸ ಬಗೆಯ ಕಾಗದ, ವಿಶೇಷ ಹೊದಿಕೆಯಿಂದ ಕೂಡಿತ್ತು.

ಒಂದು ಪುಸ್ತಕದ ಮೇಲೆ ಎಷ್ಟು ಬಗೆಯ ನಾವೀನ್ಯತೆಯ ಪ್ರಯೋಗಗಳನ್ನು ಮಾಡಬಹುದೋ ಅಷ್ಟೆಲ್ಲ ಮುದ್ರಣ ಪ್ರಯೋಗಗಳನ್ನು ಈ ವಿಶೇಷ ಸಂಚಿಕೆಯ ಮೇಲೆ ಮಾಡಲಾಗಿತ್ತು. ವೈವಿಧ್ಯಮಯವೂ ವಿಸ್ಮಯಜನಕವೂ ಆಗಿ ಹೊರಹೊಮ್ಮಿದ ವಿಶೇಷ ಸಂಚಿಕೆ ಎಲ್ಲಾ ಸಾಹಿತ್ಯಾಸಕ್ತರ, ಮೆಚ್ಚುಗೆಗೆ ಪಾತ್ರವಾಗಿ, ಸಂಗ್ರಹಯೋಗ್ಯ ಮೌಲಿಕ ಕೃತಿಯಾಗಿ ಇತಿಹಾಸವನ್ನು ನಿರ್ಮಿಸಿತು.

`ದೇಶ ಕಾಲ’ ಪ್ರಕಟಣೆ ನಿಲ್ಲಿಸಿತಲ್ಲ ಎಂದು ಬೇಸರಪಟ್ಟುಕೊಂಡವರು ಇರುವಂತೆಯೇ ಅದರ ಹಳೆಯ ಸಂಚಿಕೆಗಳಿಗಾಗಿ ಗ್ರಂಥಾಲಯದಲ್ಲಿ ಹುಡುಕಾಡುವವರೂ ಇದ್ದಾರೆ ಎನ್ನುವುದೇ ಅದರ ಶ್ರೇಷ್ಠತೆಗೆ ನಿದರ್ಶನವಾಗಿದೆ.

`ದೇಶ ಕಾಲ’ದ ಮುದ್ರಣ ನಮಗೆ ಅಪರಿಮಿತವಾದ ಸಂತೋಷವನ್ನು ಕೊಟ್ಟಿದ್ದಲ್ಲದೆ ನಮ್ಮಲ್ಲಿಯ ಕ್ರಿಯಾಶೀಲತೆಯನ್ನು ಹುರಿದುಂಬಿಸುತ್ತಿತ್ತು. ಮುದ್ರಣದ ಬಗ್ಗೆ ತಿಳುವಳಿಕೆ ಇರುವ ಪ್ರತಿಭಾವಂತ ವಿನ್ಯಾಸಕಾರ ಮತ್ತು ಮುದ್ರಕ ಒಟ್ಟಿಗೆ ಸೇರಿದರೆ ಒಂದು ಪುಸ್ತಕವನ್ನು ಅದ್ಭುತವಾಗಿ ಮುದ್ರಿಸುವುದಕ್ಕೆ ತುಂಬಾ ಹೆಚ್ಚಿನ ಹಣದ ಅಗತ್ಯವಿಲ್ಲ ಎಂಬ ನಮಗೆ, ಅರಿವಿಲ್ಲದ ಅಂಶವನ್ನು ತೋರಿಸಿಕೊಟ್ಟವರು ವಿವೇಕ್ ಶಾನ್‍ಭಾಗ್. ಕಾಲಕಾಲಕ್ಕೆ ಅಮೂಲ್ಯ ಸಲಹೆ ಸೂಚನೆಗಳನ್ನು ಕೊಡುತ್ತಾ ಕಾಳಜಿಪೂರ್ವಕವಾಗಿ ನಮ್ಮನ್ನು ಬೆಳೆಸುತ್ತಿರುವ ವಿವೇಕ್ ಅವರಿಗೆ ನಮ್ಮ ಕೃತಜ್ಞತೆಗಳು.

November 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಈಗ ಅರ್ಜೆಂಟಾಗಿ ದೇಶ ಕಾಲದ ಒಂದು ಸಂಚಿಕೆಯನ್ನಾದರೂ ಮುಟ್ಟಿ ನೋಡಬೇಕಲ್ಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: