ಮಂತ್ರಿಗಿರಿಗೆ ಅಡ್ಡಗಾಲು ಹಾಕಿದವರೇ ಸಿಎಂ ಖುರ್ಚಿಯ ಮೇಲೆ ಕೂರಿಸಿದರು..

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ.

ಅವತ್ತು ಹೈಗ್ರೌಂಡ್ಸ್‌ನ ಕಾವೇರಿ ಬಂಗಲೆಯಲ್ಲಿ ಕುಳಿತಿದ್ದ ಸಚಿವ ಜಗದೀಶ್‌ ಶೆಟ್ಟರ್‌ ಅವರಿಗೆ ದೂರವಾಣಿ ಕರೆಬಂತು.

ಫೋನೆತ್ತಿದರೆ ಅತ್ತ ಕಡೆಯಿಂದ ಮಾತನಾಡುತ್ತಿದ್ದವರು: ಶೆಟ್ಟರ್‌ ಅವರೇ, ಸದಾನಂದಗೌಡರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲು ನಿರ್ಧರಿಸಿದ್ದೇವೆ. ಇನ್ನೆರಡು, ಮೂರು ದಿನಗಳಲ್ಲಿ ಆ ಪ್ರೊಸೆಸ್‌ ಮುಗಿಯಲಿದೆ. ನೀವು ಆ ಜಾಗಕ್ಕೆ ಬರಬೇಕು ಎಂಬುದು ನಮ್ಮಿಚ್ಚೆ, ಬಿ ರೆಡಿ ಎಂದರು.

ಅಂದ ಹಾಗೆ ಅವತ್ತು ಜಗದೀಶ್‌ ಶೆಟ್ಟರ್‌ ಅವರಿಗೆ ಕರೆ ಮಾಡಿ,ಮುಂದಿನ ಮುಖ್ಯಮಂತ್ರಿಯಾಗಲು ರೆಡಿ ಆಗಿ ಎಂದವರು ರಾಜ್ಯ ಬಿಜೆಪಿ ಕಂಡ ಅತ್ಯಂತ ಪವರ್‌ಫುಲ್‌ ನಾಯಕ ಯಡಿಯೂರಪ್ಪ.

ಕೇವಲ ನಾಲ್ಕು ವರ್ಷಗಳ ಹಿಂದೆ ಅವರು ಇದೇ ಜಗದೀಶ್‌ ಶೆಟ್ಟರ್‌ ಮುಖ ಕಂಡರೆ ಚಿಟ, ಚಿಟ ಅಂತ ಸಿಡಿಯುತ್ತಿದ್ದರು. ೨೦೦೮ ರಲ್ಲಿ ಅಸ್ತಿತ್ವಕ್ಕೆ ಬಂದ ತಮ್ಮ ನೇತೃತ್ವದ ಸರ್ಕಾರದಲ್ಲಿ ಮಂತ್ರಿಗಿರಿ ಕೊಡದೆ ಅವಮಾನಿಸಿದ್ದರು.

ಅಂದ ಹಾಗೆ ೨೦೦೮ ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಜಗದೀಶ್‌ ಶೆಟ್ಟರ್‌ ಅವರನ್ನು ಕಂಡರೆ ಇಷ್ಟಪಡುತ್ತಿದ್ದ ಯಡಿಯೂರಪ್ಪ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶೆಟ್ಟರ್‌ ಅವರನ್ನು ಕಂಡರೆ ಕಣ್ಣು ಕೆಂಪಗೆ ಮಾಡಿಕೊಳ್ಳತೊಡಗಿದ್ದರು.

ಕಾರಣ? ಎಷ್ಟೇ ಆದರೂ ಜಗದೀಶ್‌ ಶೆಟ್ಟರ್‌ ಲಿಂಗಾಯತ ಸಮುದಾಯಕ್ಕೆ ಸೇರಿದವರು, ಉತ್ತರ ಕರ್ನಾಟಕ ಭಾಗದವರು. ಮುಂದೆ ಪಕ್ಷದ ಹೈಕಮಾಂಡ್‌ ಪರ್ಯಾಯ ನಾಯಕನ ಹುಡುಕಾಟಕ್ಕಿಳಿದರೆ ಅದರ ಕಣ್ಣಿಗೆ ತಕ್ಷಣ ಕಾಣುವವರು ಜಗದೀಶ್‌ ಶೆಟ್ಟರ್.‌

ಹೀಗಾಗಿ ಭವಿಷ್ಯದಲ್ಲಿ ನಿಮ್ಮ ನಾಯಕತ್ವಕ್ಕೆ ಕಿರಿಕಿರಿಯಾಗಬಲ್ಲ ನಾಯಕನನ್ನು ಈಗಿನಿಂದಲೇ ಸೈಡ್‌ಲೈನಿಗೆ ಸರಿಸಿಬಿಡಿ.

ಇವತ್ತು ಜಗದೀಶ್‌ ಶೆಟ್ಟರ್‌ ತುಂಬ ಅಪಾಯಕಾರಿಯಂತೆ ಕಾಣದೇ ಇರಬಹುದು. ಆದರೆ ನಿಮ್ಮ ಖುರ್ಚಿ ಒಂದು ಸಲ ಅಲುಗಾಡಿದರೆ ಅವರು ತನ್ನಿಂತಾನೇ ಪವರ್‌ಫುಲ್‌ ಆಗುತ್ತಾರೆ. ಹೀಗಾಗಿ ಅದಕ್ಕೆ ಅವಕಾಶವನ್ನೇ ನೀಡಬೇಡಿ ಎಂದು ಅತ್ಯಾಪ್ತರು ಯಡಿಯೂರಪ್ಪ ಅವರ ಕಿವಿ ಕಚ್ಚಿದ್ದರು.

ಯಡಿಯೂರಪ್ಪ ಕೂಡಾ ಅತ್ಯಾಪ್ತರ ಮಾತನ್ನು ಕೇಳಿ ಶೆಟ್ಟರ್‌ ವಿಷಯದಲ್ಲಿ ಉಲ್ಟಾ ಹೊಡೆದರು.ಯಾವ ಕಾರಣಕ್ಕೂ ಅವರನ್ನು ನನ್ನ ಸಚಿವ ಸಂಪುಟದಲ್ಲಿರುವುದು ಬೇಡ ಎಂಬ ನಿರ್ಧಾರಕ್ಕೆ ಬಂದರು.

ಹೀಗಾಗಿ ಪಕ್ಷದ ನಾಯಕರ ಬಳಿ: ಶೆಟ್ಟರ್‌ ಅಸೆಂಬ್ಲಿ ಸ್ಪೀಕರ್‌ ಆಗಲಿ, ಮಂತ್ರಿ ಮಂಡಲಕ್ಕೆ ಸೇರುವುದು ಬೇಡ ಎಂದುಬಿಟ್ಟರು. ಅವತ್ತಿನ ಸ್ಥಿತಿಯಲ್ಲಿ ಯಡಿಯೂರಪ್ಪ ಎಷ್ಟು ಪವರ್‌ಫುಲ್‌ ಆಗಿದ್ದರೆಂದರೆ ಅವರ ಮಾತನ್ನು ತಳ್ಳಿ ಹಾಕಿ ಶೆಟ್ಟರ್‌ ಅವರಿಗೆ ಮಂತ್ರಿಗಿರಿ ಕೊಡಿ ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.

ಅಂದ ಹಾಗೆ ಇದ್ದಕ್ಕಿದ್ದಂತೆ ಶುರುವಾದ ಯಡಿಯೂರಪ್ಪ ಅವರ ವರಸೆಯಿಂದ ಶೆಟ್ಟರ್‌ ಆಘಾತಗೊಂಡರು. ಅಷ್ಟೇ ಅಲ್ಲ, ಮಂತ್ರಿಯಾಗದಿದ್ದರೆ ಪರವಾಗಿಲ್ಲ. ಆದರೆ ಜನರ ನಡುವೆ ಬೆರೆಯದೆ ನಾಲ್ಕು ಗೋಡೆಗಳ ಮಧ್ಯೆ ಅಡಗಿಕೂರುವ ಸ್ಪೀಕರ್‌ ಹುದ್ದೆ ಬೇಡ ಎಂಬ ತೀರ್ಮಾನಕ್ಕೆ ಬಂದರು.

ಶೆಟ್ಟರ್‌ ಅವರ ಈ ತೀರ್ಮಾನ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಯಿತು. ಯಾಕೆಂದರೆ ಅಧಿಕಾರದ ಬೌಂಡರಿಯೊಳಗಿರುವ ಶೆಟ್ಟರ್‌ಗಿಂತ ಹೊರಗಿರುವ ಶೆಟ್ಟರ್‌ ಅಪಾಯಕಾರಿ ಎಂಬುದು ಅವರಿಗೆ ಗೊತ್ತಿತ್ತು.

ಹೀಗಾಗಿ ಖುದ್ದು ಅನಂತಕುಮಾರ್‌ ಅವರೇ ಅರುಣ್‌ ಜೇಟ್ಲಿ ಜತೆಗೂಡಿ ಶೆಟ್ಟರ್‌ ಅವರ ಮನವೊಲಿಸಲು ಯತ್ನಿಸಿದರು. ಬಹುಮತವಿಲ್ಲದೆ ಪಕ್ಷೇತರರ ಬೆಂಬಲದಿಂದ ಅಸ್ತಿತ್ವಕ್ಕೆ ಬಂದ ಈ ಸರ್ಕಾರ ಯಾವ ಟೈಮಿನಲ್ಲೂ ಅಲುಗಾಡಬಹುದು. ಇಂತಹ ಸೂಕ್ಷ್ಮ ಸ್ಥಿತಿಯಲ್ಲಿ ನಿಮ್ಮಂತಹ ಹಿರಿಯರು ಸ್ಪೀಕರ್‌ ಆಗಿರಬೇಕು ಅಂತ ಫೇರ್‌ನೆಸ್‌ ಕ್ರಿಮ್‌ ತಿಕ್ಕಿದರು.

ಆದರೆ ಅವರ ಮಾತಿಗೆ ಶೆಟ್ಟರ್‌ ಬಿಲ್‌ಕುಲ್‌ ಒಪ್ಪಲಿಲ್ಲ.ಹೀಗಾಗಿ ಪಕ್ಷದ ಉಕ್ಕಿನ ಮನುಷ್ಯ ಲಾಲ್‌ಕೃಷ್ಣ ಅಡ್ವಾಣಿ ಅವರೇ ಎಂಟ್ರಿಯಾದರು.ನೀವೇನೂ ಈ ಹುದ್ದೆಯಲ್ಲಿ ಐದು ವರ್ಷ ಕೂರಬೇಕಿಲ್ಲ. ಇದು ತತ್ಕಾಲದ ಪೋಸ್ಟು. ಬೇಡ ಅನ್ನಬೇಡಿ ಎಂದರು.

ಯಾವಾಗ ಅಡ್ವಾಣಿಯವರು ಈ ಮಾತು ಹೇಳಿದರೋ? ಆಗ ಶೆಟ್ಟರ್‌ ಒಪ್ಪಿಕೊಂಡರು. ಹೀಗೆ ಇಷ್ಟವಿಲ್ಲದ ಜಾಗಕ್ಕೆ ಬಂದು ಕುಳಿತರೂ ಅವರು ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ಅಪಸ್ವರ ಎತ್ತಲಿಲ್ಲ. ಅದವರ ಗುಣವೂ ಆಗಿರಲಿಲ್ಲ.

ಆದರೆ ಶೆಟ್ಟರ್‌ ಮೌನಿಯಾಗಿದ್ದರೂ ಯಡಿಯೂರಪ್ಪ ಸರ್ಕಾರದ ವಿರುದ್ಧ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಅಂಡ್‌ ಗ್ಯಾಂಗ್‌ ತಿರುಗಿ ಬಿತ್ತು. ಅದೇ ಕಾಲಕ್ಕೆ ಸರ್ಕಾರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಮಿತಿ ಮೀರಿದ ಪ್ರಾಮಿನೆನ್ಸು ಸಿಗುತ್ತಿದೆ ಎಂಬ ಕಾರಣಕ್ಕಾಗಿ ಹಲವರು ಕುದಿಯುತ್ತಿದ್ದರು.

ಪರಿಣಾಮ?ಯಡಿಯೂರಪ್ಪ ಅವರ ವಿರುದ್ಧ ದೊಡ್ಡ ಬಂಡಾಯ ಶುರುವಾಯಿತು. ಹೀಗೆ ಬಂಡಾಯ ಎದ್ದವರು ಶಕ್ತಿಶಾಲಿಗಳಾಗಿದ್ದರು.

ಈ ಪೈಕಿ ಗಣಿಧಣಿಗಳ ಗ್ಯಾಂಗಿಗೆ ಸುಷ್ಮಾ ಸ್ವರಾಜ್‌ ಅವರೇ ಗಾಡ್‌ ಮದರ್‌ ಆಗಿದ್ದರಲ್ಲ? ಹೀಗಾಗಿ ದಿಲ್ಲಿ ಮಟ್ಟದಲ್ಲಿ ಅದರ ಬಾವುಟ ಪಟಪಟಿಸತೊಡಗಿತು.

ಅಂತಿಮವಾಗಿ ಇದು ಯಾವ ಲೆವೆಲ್ಲಿಗೆ ಹೋಯಿತೆಂದರೆ: ಶತಾಯ ಗತಾಯ ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿಯಲೇಬೇಕು ಎಂಬ ಹಂತಕ್ಕೆ ಹೋಯಿತು.

ಯಡಿಯೂರಪ್ಪ ಅವರ ವಿರುದ್ಧದ ಬಂಡಾಯವೇನೋ ದಿಲ್ಲಿ ಲೆವೆಲ್ಲಿನಲ್ಲಿ ಪ್ರಜ್ವಲಿಸಿದ್ದು ನಿಜ. ಆದರೆ ಪರ್ಯಾಯ ನಾಯಕತ್ವಕ್ಕೆ ಯಾರಾದರೂ ಬೇಕಲ್ಲ? ಈ ಪ್ರಶ್ನೆ ಬಂದಾಗ ರೆಡ್ಡಿ ಗ್ಯಾಂಗಿಗೆ ಮತ್ತು ಶೋಭಾ ವಿರೋಧಿ ಗ್ಯಾಂಗಿನ ಕಣ್ಣಿಗೆ ಕಾಣಿಸಿದ್ದು ಜಗದೀಶ್‌ ಶೆಟ್ಟರ್.‌

ಇದೇ ಕಾರಣಕ್ಕಾಗಿ : ನನ್ನ ಪಾಡಿಗೆ ನನ್ನನ್ನು ಬಿಡಿ ಎಂದು ಶೆಟ್ಟರ್‌ ಹೇಳಿದರೂ ಕೇಳದ ಈ ಟೀಮು ಅವರನ್ನು ಫ್ರಂಟ್‌ಲೈನಿನಲ್ಲಿ ತಂದು ನಿಲ್ಲಿಸಿಕೊಂಡಿತು. ಯಡಿಯೂರಪ್ಪ ಹೋಗಲಿ, ಶೆಟ್ಟರ್‌ ಸಿಎಂ ಆಗಲಿ ಎಂದು ಪಟ್ಟು ಹಿಡಿಯಿತು.

ಅದರ ಬಿಗಿಪಟ್ಟು ಹೇಗಿತ್ತೆಂದರೆ ಕೊನೆಗೆ ಯಡಿಯೂರಪ್ಪ ತಮ್ಮ ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ಟಿಪ್ಪು ಸುಲ್ತಾನ್‌ ಗೆಟಪ್ಪು ಧರಿಸುವ ಅನಿವಾರ್ಯತೆ ಎದುರಾಯಿತು.

ಬ್ರಿಟಿಷರೊಂದಿಗಿನ ಯುದ್ದದಲ್ಲಿ ಸೋತ ಟಿಪ್ಪು ತನ್ನ ಮಕ್ಕಳಿಬ್ಬರನ್ನು ಅಡವಿಡುವ ಅವಮಾನಕ್ಕೆ ಗುರಿಯಾಗಿದ್ದರೆ , ಇಲ್ಲಿ ಯಡಿಯೂರಪ್ಪ ತಮ್ಮ ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ತಮ್ಮ ಆಪ್ತರಾದ ಶೋಭಾ ಕರಂದ್ಲಾಜೆ ಅವರನ್ನು ಮಂತ್ರಿಗಿರಿಯಿಂದ ಕೆಳಗಿಳಿಸಲು, ಶೆಟ್ಟರ್‌ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಬೇಕಾಯಿತು.

ಇದಾದ ನಂತರ ಜಗದೀಶ್‌ ಶೆಟ್ಟರ್‌ ಎಷ್ಟೋ ಸಲ: ಸಾರ್‌, ನಾನು ಸಿಎಂ ಹುದ್ದೆಯ ಆಕಾಂಕ್ಷಿಯಲ್ಲ. ಎಲ್ಲಿಯವರೆಗೆ ನೀವು ಆ ಹುದ್ದೆಯಲ್ಲಿರುತ್ತೀರೋ? ಅಲ್ಲಿಯವರೆಗೂ ನಾನು ನಿಮ್ಮ ನಾಯಕತ್ವದಡಿ ಕೆಲಸ ಮಾಡುತ್ತೇನೆ ಎಂದರೂ ಯಡಿಯೂರಪ್ಪ ಮಾತ್ರ ನಂಬಲಿಲ್ಲ.

ಇದೇ ಕಾರಣಕ್ಕಾಗಿ ಆಕ್ರಮ ಗಣಿ ಆರೋಪದಡಿ ಸಿಎಂ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬಂದಾಗ ತಮ್ಮ ಜಾಗಕ್ಕೆ ಡಿ.ವಿ.ಸದಾನಂದಗೌಡರು ಬರಲಿ ಅಂತ ಯಡಿಯೂರಪ್ಪ ಬಯಸಿದ್ದು.

ಅಷ್ಟೇ ಅಲ್ಲ, ಶೆಟ್ಟರ್‌ ಮತ್ತು ಗೌಡರ ನಡುವೆ ಹಣಾಹಣಿ ನಿಶ್ಚಿತ ಎಂದಾದಾಗ ಪಕ್ಷದ ಶಾಸಕರನ್ನು ಹೋಟೆಲ್ಲಿನಲ್ಲಿಟ್ಟ ಯಡಿಯೂರಪ್ಪ ಸಮರೋಪಾದಿಯಲ್ಲಿ ಕೆಲಸ ಮಾಡಿದರು.

ಯಡಿಯೂರಪ್ಪ ಅವರ ಈ ಶ್ರಮದ ಪರಿಣಾಮವಾಗಿ ಸದಾನಂದಗೌಡ ನಿರಾಯಾಸವಾಗಿ ಸಿಎಂ ಆದರು. ಆದರೆ ಸಿಎಂ ಆದ ನಂತರ ಅವರ ಹೆಜ್ಜೆಗಳು ಯಡಿಯೂರಪ್ಪ ಅವರ ಬೆಂಬಲಿಗರ ಕಣ್ಣು ಕೆಂಪಾಗುವಂತೆ ಮಾಡಿದವು.

ರೀ, ಸಿಎಂ ಹುದ್ದೆಯಲ್ಲಿ ಕುಳಿತು ಯಡಿಯೂರಪ್ಪ ಸರ್ಕಾರದ ಆರ್ಥಿಕ ಶಿಸ್ತನ್ನು ಹಾಳು ಮಾಡಿದ್ದಾರೆ. ಅವರು ಮಾಡಿಟ್ಟ ಕೊಳೆಯನ್ನು ತೊಳೆಯಲು ನನಗೆ ಟೈಮು ಬೇಕು ಎನ್ನುವುದರಿಂದ ಹಿಡಿದು ಹಲ ಬಗೆಯಲ್ಲಿ ದೂರುತ್ತಿದ್ದಾರೆ ಅಂತ ಬೆಂಬಲಿಗರು ಯಡಿಯೂರಪ್ಪ ಅವರ ಮನೆ ಬಾಗಿಲಿಗೆ ಕಂಪ್ಲೇಂಟ್‌ ರಿಜಿಸ್ಟರ್‌ ತೆಗೆದುಕೊಂಡು ಹೋದರು.

ಸಿಎಂ ಆದ ನಂತರ ಆರೆಸ್ಸೆಸ್‌ ನಾಯಕರೊಬ್ಬರು ತಮಗೆ ಗೈಡ್‌ ಆಗಿದ್ದರಿಂದ ಮತ್ತು ಮಾಜಿ ಪ್ರಧಾನಿ ದೇವೇಗೌಡರು: ನೀವು ಒಕ್ಕಲಿಗರ ಲೀಡರ್‌, ಯಾವ ಕಾರಣಕ್ಕೂ ಅಳುಕಬೇಕಿಲ್ಲ ಎಂದು ನೀಡಿದ್ದ ಭರವಸೆ ಸದಾನಂದಗೌಡರ ಫೇಸ್‌ ಕಟ್ಟೇ ಬದಲಾಗುವಂತೆ ಮಾಡಿವೆ ಎಂಬುದು ಈ ಕಂಪ್ಲೇಂಟ್‌ ರಿಜಿಸ್ಟರಿನಲ್ಲಿತ್ತು.

ಯಾವಾಗ ರಿಜಿಸ್ಟರಿನಲ್ಲಿದ್ದ ಕಂಪ್ಲೇಂಟುಗಳ ಸಂಖ್ಯೆ ಹೆಚ್ಚತೊಡಗಿತೋ? ಆಗ ಯಡಿಯೂರಪ್ಪ ಕನಲಿ ಕೆಂಡವಾದರು. ಅಷ್ಟೇ ಅಲ್ಲ, ತಮ್ಮ ಬೆಂಬಲಿಗರ ಸಭೆ ಕರೆದು, ಯಾರನ್ನು ಮುಂದಿನ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸೋಣ? ಎಂದು ಕೇಳಿದರು.

ಈ ಟೈಮಿನಲ್ಲಿ ಯಡಿಯೂರಪ್ಪ ಅವರ ಬೆಂಬಲಿಗರು ಜಗದೀಶ್‌ ಶೆಟ್ಟರ್‌ ಅವರೇ ಸಿಎಂ ಆಗಲಿ ಎಂದು ವಾದಿಸಿದರು. ಅಷ್ಟೇ ಅಲ್ಲ, ಅವರೇನೂ ನಿಮ್ಮ ವಿರೋಧಿಯಲ್ಲ. ಪರಮಾಪ್ತ ಎಂದು ನೀವು ತಂದು ಕೂರಿಸಿದವರು ಈಗ ಬೇರೆಯವರ ಕಂಟ್ರೋಲಿನಲ್ಲಿದ್ದಾರೆ, ನಮ್ಮನ್ನು ಹೆಜ್ಜೆ ಹೆಜ್ಜೆಗೂ ಅವಮಾನಕ್ಕೀಡು ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕೆಳಗಿಳಿಸಿದ ಮೇಲೆ ಶೆಟ್ಟರ್‌ ಸಿಎಂ ಆಗಲಿ ಎಂದರು.

ಯಾವಾಗ ತಮ್ಮ ಬೆಂಬಲಿಗರ ಪಡೆ ಜಗದೀಶ್‌ ಶೆಟ್ಟರ್‌ ಅವರ ಹೆಸರನ್ನು ಫ್ರಂಟ್‌ಲೈನಿಗೆ ತಂದು ನಿಲ್ಲಿಸಿತೋ? ಆಗ ಯಡಿಯೂರಪ್ಪ ಕೂಡಾ ತಮ್ಮ ವೈಮನಸ್ಯ ತೊರೆದರು, ಅನುಮಾನದ ಹುತ್ತದಿಂದ ಹೊರಬಂದರು..

ಪರಿಣಾಮ? ಕೆಲವೇ ಕಾಲದ ಹಿಂದೆ ಯಾರನ್ನು ತಮ್ಮ ಪಾಲಿನ ಕಂಟಕ ಎಂದು ಭಾವಿಸಿದ್ದರೋ? ಅದೇ ಶೆಟ್ಟರ್‌ ಅವರ ಕೈ ಹಿಡಿದು ಸಿಎಂ ಹುದ್ದೆಯ ಮೇಲೆ ತಂದು ಕೂರಿಸಿದರು ಯಡಿಯೂರಪ್ಪ.

ಅಂದ ಹಾಗೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ತಮ್ಮ ಪಾಲಿನ ಕಂಟಕ ಎಂದು ಭಾವಿಸಿದವರನ್ನು ಯಾವ ನಾಯಕರೂ ಹೀಗೆ ಸಿಎಂ ಹುದ್ದೆಯ ಮೇಲೆ ತಂದು ಕೂರಿಸಿದ ಉದಾಹರಣೆ ಇಲ್ಲ.

November 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: