ದಿಲ್ಲಿಯೆಂಬ ಮಾಯಾಂಗನೆ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಅದೊಂದು ಕಾಲವಿತ್ತು.

ಆಗ ನನ್ನ ಮಟ್ಟಿಗೆ ದಿಲ್ಲಿಯೆಂದರೆ ಕೇವಲ ರಾಷ್ಟ್ರ ರಾಜಧಾನಿಯಾಗಿತ್ತು. ಭಾರತದ ರಾಜಧಾನಿ ಯಾವುದು ಅಂದರೆ ದೆಹಲಿ. ಅಷ್ಟೇ! ಸಾಮಾನ್ಯಜ್ಞಾನದ ಪ್ರಶ್ನೆಯೊಂದಕ್ಕೆ ಒಂದೇ ಒಂದು ಪದದ ಯಕಃಶ್ಚಿತ್ ಉತ್ತರ. ಆ ದಿನಗಳಲ್ಲಿ ದಿಲ್ಲಿಯೆಂದರೆ ನನಗೆ ನಿಜಕ್ಕೂ ಅಷ್ಟೇ ಆಗಿತ್ತೇ ಎಂದು ಸ್ವತಃ ಹಲವು ಬಾರಿ ಕೇಳಿಕೊಂಡಿದ್ದೂ ಇದೆ. ಇದಕ್ಕುತ್ತರವಾಗಿ ‘ಹೌದು ಎಂದರೆ ಹೌದು, ಅಲ್ಲ ಎಂದರೆ ಅಲ್ಲ’ ಎನ್ನಬಹುದಷ್ಟೇ. ಇರಲಿ. ಅದೇನೇ ಇದ್ದರೂ ನನಗೂ, ಈ ದಿಲ್ಲಿಗೂ ಅದ್ಯಾವುದೋ ಪರಿಯ ಅವಿನಾಭಾವ ಸಂಬಂಧವಿರುವುದಂತೂ ಸತ್ಯ.

ಬಾಲ್ಯದಲ್ಲಿ ಕೇಬಲ್ ಟಿವಿಯೆಂಬುದು ಸಾಕಷ್ಟು ಜನಪ್ರಿಯವಾಗಿದ್ದರೂ ಅದು ಇನ್ನೂ ನಮ್ಮ ಮನೆಯಂಗಳಕ್ಕೆ ಕಾಲಿಟ್ಟಿರಲಿಲ್ಲ. ಓದಿಗೆ ತೊಡಕಾಗುವುದೆಂಬ ಕಾರಣಕ್ಕೆ ಅದು ಕೊನೆಯವರೆಗೂ ಮರೀಚಿಕೆಯಾಗಿಯೇ ಉಳಿದಿತ್ತು. ಹೀಗಾಗಿ ಆಗ ಹಿಡಿಯಷ್ಟು ಮನರಂಜನೆಗೆಂದು ನನ್ನ ಪಾಲಿಗಿದ್ದಿದ್ದು ದೂರದರ್ಶನವೊಂದೇ. ಅದರಲ್ಲೂ ದಕ್ಕುತ್ತಿದ್ದಿದ್ದು ಸಂಜೆಯ ಏಳಕ್ಕೆ ಪ್ರಸಾರವಾಗುತ್ತಿದ್ದ ವಾರ್ತೆ, ಪ್ರತೀ ಬುಧವಾರ ಸಂಜೆ ಏಳೂ ಹದಿನೈದಕ್ಕೆ ಪ್ರಸಾರವಾಗುತ್ತಿದ್ದ ಪೋಲೀಸ್ ಸಂಚಿಕೆ ಮತ್ತು ಪ್ರತೀ ಭಾನುವಾರ ನಾಲ್ಕಕ್ಕೆ ಪ್ರಸಾರವಾಗುತ್ತಿದ್ದ ಕನ್ನಡ ಚಲನಚಿತ್ರ ಮಾತ್ರ.

ಈ ನಡುವೆ ದಿಲ್ಲಿಯೆಂಬುದು ನಮಗೆ ವರ್ಷಕ್ಕೆರಡು ಬಾರಿ ಬರುತ್ತಿದ್ದ ಹಬ್ಬದ ಅತಿಥಿಯಾಗಿತ್ತು. ವರ್ಷಂಪ್ರತಿ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ದಿನದಂದು ದಿಲ್ಲಿಯಲ್ಲಿ ಸಾಗುತ್ತಿದ್ದ ಪರೇಡ್ ವೈಭವವನ್ನು ನಾನು ಆಸಕ್ತಿಯಿಂದ ನೋಡುತ್ತಿದ್ದೆ. ಈ ವರ್ಷ ಕರ್ನಾಟಕದ ಕಡೆಯಿಂದ ಯಾವ ಟ್ಯಾಬ್ಲೋ ಇರಬಹುದು ಎಂದು ನೋಡುವುದೇ ಆಗೆಲ್ಲಾ ಒಂದು ಕುತೂಹಲ.

ದೊಡ್ಡದಾದ ವಾಹನವೊಂದರಲ್ಲಿ ನಿಧಾನವಾಗಿ ಸಾಗುತ್ತಿದ್ದ ಆ ದೈತ್ಯ ಟ್ಯಾಬ್ಲೋದಲ್ಲಿ ಯಕ್ಷಗಾನದ ಪ್ರತಿಕೃತಿಯೊಂದು ಕಂಡರಂತೂ ಮುಗೀತು. ನಾನೇ ಖುದ್ದು ದಿಲ್ಲಿಯ ಪರೇಡಿನಲ್ಲಿ ಭಾಗವಹಿಸಿದ್ದೆ ಎಂಬಷ್ಟಿನ ಖುಷಿ. ತೊಂಭತ್ತರ ದಶಕದ ಮಕ್ಕಳಿಗೆ ದಿಲ್ಲಿ ಬೆರಳೆಣಿಕೆಯಷ್ಟು ಬಾರಿ ದಕ್ಕುತ್ತಿದ್ದಿದ್ದು ಹೀಗೆ.

ಮುಂದೆ ಅದ್ಹೇಗೋ ಲೋಕಸಭಾ ಮತ್ತು ರಾಜ್ಯಸಭಾ ಅಧಿವೇಶನಗಳು ನನ್ನನ್ನು ಆಕರ್ಷಿಸತೊಡಗಿದ್ದವು. ಶಾಲಾ ದಿನಗಳಲ್ಲೇ ಈ ಅಧಿವೇಶನಗಳನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದಿದ್ದು ನನ್ನ ವಿಚಿತ್ರ ಖಯಾಲಿಗಳಲ್ಲಿ ಒಂದಾಗಿತ್ತು. ಬಹುಷಃ ಆವತ್ತಿಗೂ, ಇವತ್ತಿಗೂ ಸಾಮಾನ್ಯವಾಗಿ ಇದೊಂದು ಬಲು ‘ಬೋರಿಂಗ್’ ಅನ್ನಿಸಬಹುದಾದ ಟ್ರೆಂಡ್.

ಬಹಳಷ್ಟು ಬಾರಿ ನಾನು ಲೋಕಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದಿದ್ದೇ ಲಾಲೂ ಪ್ರಸಾದರ ಭಾಷಣಕ್ಕಾಗಿ. ಲಾಲೂ ಆಗ ಸಂಸತ್ತಿನಲ್ಲಿ ಬಲು ಸೊಗಸಾಗಿ ಮಾತನಾಡುತ್ತಿದ್ದರು. ಅವರ ಹಾಸ್ಯಪ್ರಜ್ಞೆ, ತಮಾಷೆಯ ಆಂಗಿಕ ಅಭಿನಯಗಳು, ಮಾತಿನ ಮಧ್ಯೆ ಅಲ್ಲಲ್ಲಿ ಇಣುಕುತ್ತಿದ್ದ ಕಿಲಾಡಿ ಶಾಯರಿಗಳು, ನೀರಸ ಚರ್ಚೆಗಳಲ್ಲೂ ಅವರು ಉಕ್ಕಿಸುತ್ತಿದ್ದ ನಗೆಬುಗ್ಗೆಗಳು… ಹೀಗೆ ಸಮರ್ಥಿಸಿಕೊಳ್ಳಲು ಕಾರಣಗಳು ಹಲವಿದ್ದವು.

ಅಸಲಿಗೆ ದಿಲ್ಲಿ ಮತ್ತು ಕವಿತೆಗಳ ಲೋಕದಲ್ಲಿ ನನಗೆ ಮಿರ್ಜಾ ಗಾಲಿಬ್ ಪರಿಚಯವಾಗಿದ್ದೇ ದಶಕಗಳ ನಂತರ. ನನ್ನ ಮಟ್ಟಿಗೆ ದಿಲ್ಲಿ ಮತ್ತು ಶಾಯರೀಗಳ ವಿಚಾರದಲ್ಲಿ ಮೊದಲ ಕ್ರೆಡಿಟ್ ಸಲ್ಲುವುದು ಲಲ್ಲೂ ಮಹೋದಯರಿಗೆ. ಇಂದಿಗೆ ಇದು ಕೊಂಚ ಬಾಲಿಶ ಮತ್ತು ತಮಾಷೆಯೆನ್ನಿಸಿದರೂ ಒಪ್ಪಿಕೊಳ್ಳಲೇಬೇಕಾದ ಸತ್ಯ.

ಇನ್ನು ಲಾಲೂ ಹೊರತುಪಡಿಸಿದರೆ ನನ್ನನ್ನು ಸಂಸತ್ತಿನ ಅಂಗಳದಲ್ಲಿ ಬಹುವಾಗಿ ಆಕರ್ಷಿಸುತ್ತಿದ್ದಿದ್ದು ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಮೋದ್ ಮಹಾಜನ್. ವಿಪರ್ಯಾಸವೆಂದರೆ ಈ ಈರ್ವರೂ ಇಂದು ನಮ್ಮೊಂದಿಗಿಲ್ಲ. ಇನ್ನು ಸಂಸತ್ತಿನ ಅಧಿವೇಶನಗಳನ್ನು ಅಷ್ಟು ಆಸಕ್ತಿಯಿಂದ ನೋಡಲು ಬೇರೇನು ಕಾರಣಗಳಿವೆ ಎಂದು ಕೇಳಿದರೆ ಸಹಜವಾಗಿ ನೀಡುತ್ತಿದ್ದ ಬೇರೊಂದು ಉತ್ತರವೂ ಇತ್ತು. ಅದೇನೆಂದರೆ ಇಂಗ್ಲಿಷ್ ಕಲಿಕೆ. ಆಗಿನ ದಿನಗಳಲ್ಲಿ ನನ್ನಂತಹ ಶುದ್ಧ ಕನ್ನಡ ಮಾಧ್ಯಮದ ವಿದ್ಯಾರ್ಥಿಯೊಬ್ಬ ಸುಲಭವಾಗಿ ಹೇಳಿ ನುಣುಚಿಕೊಳ್ಳಬಹುದಾಗಿದ್ದ ಕಾರಣವೆಂದರೆ ಇದೊಂದೇ.

ದಿಲ್ಲಿಯ ಘನತೆವೆತ್ತ ಸಂಸತ್ತಿನಿಂದ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಪುಢಾರಿಗಳ ಭಾಷಣಗಳನ್ನು ತಾಸುಗಟ್ಟಲೆ ಕೇಳಿ ಅದೇನು ಇಂಗ್ಲಿಷ್ ಕಲಿತೆನೋ ಗೊತ್ತಿಲ್ಲ. ಆದರೆ ಹಿಂದಿಯನ್ನಂತೂ ಚೆನ್ನಾಗಿ ಕಲಿತುಬಿಟ್ಟಿದ್ದೆ. ಇದು ಸಾಲದ್ದೆಂಬಂತೆ ಆಗಿನ ದಿನಗಳಲ್ಲಿ ಜನಪ್ರಿಯವಾಗಿದ್ದ ಏಕತಾ ಕಪೂರರ ಧಾರಾವಾಹಿಗಳೂ ವಯಸ್ಸಿಗೆ ಮೀರಿದ ಹಿಂದಿಯನ್ನು ನನಗೆ ಕಲಿಸಿದ್ದಾಯಿತು. ಇತ್ತ ಸಂಸತ್ ಅಧಿವೇಶನಗಳನ್ನು ನೋಡುತ್ತಾ ನಾನು ಕಲಿತ ಮತ್ತು ಒಂದಷ್ಟು ನೆನಪಿರುವ ಆರಂಭದ ಅಚ್ಚರಿಯೆಂದರೆ ‘ಇನ್ ದ ಚೇರ್’ ಎಂಬ ಪದಬಳಕೆಯೂ ಆಂಗ್ಲ ಭಾಷೆಯಲ್ಲಿ ಇದೆ ಎಂಬುದು.

” ‘ಆನ್ ದ ಚೇರ್’ ಎಂದರೆ ಕುರ್ಚಿಯ ಮೇಲೆ. ‘ಇನ್ ದ ಚೇರ್’ ಎಂದರೆ ಕುರ್ಚಿಯ ಒಳಗೆ. ಕೂರುವುದಾದರೆ ಕುರ್ಚಿಯ ಮೇಲೆ ಕೂರಬೇಕು. ಕುರ್ಚಿಯೊಳಗೆ ಎಂಥದ್ದು ಕೂರುವುದು?”, ಎಂದೆಲ್ಲಾ ನಾವು ಬಹಳ ತಲೆಕೆಡಿಸಿಕೊಂಡಿದ್ದ ದಿನಗಳಿದ್ದವು. ಮೊದಲೇ ಗಗನಕುಸುಮವಾಗಿದ್ದ ಆಂಗ್ಲಭಾಷೆಯು ಆಗ ಮತ್ತಷ್ಟು ಕ್ಲಿಷ್ಟವೆನಿಸುತ್ತಿತ್ತು.

ಇತ್ತ ವಿದ್ಯಾರ್ಥಿಗಳು ತಲೆ ಚಚ್ಚಿಕೊಂಡರೂ ಪರವಾಗಿಲ್ಲ. ಆದರೆ ತಾನು ಮಾತ್ರ ನೊಣಂಪ್ರತಿ ನೋಟ್ಸ್ ತಯಾರಿಸಿ ಕೊಟ್ಟು ಮಕ್ಕಳನ್ನು ಆಲಸಿಗಳನ್ನಾಗಿಸುವುದಿಲ್ಲ ಎಂಬ ಕಟ್ಟುನಿಟ್ಟಿನ ಇಂಗ್ಲಿಷ್ ಶಿಕ್ಷಕರೊಬ್ಬರು ಹೈಸ್ಕೂಲಿನ ದಿನಗಳಲ್ಲಿ ನನಗೆ ಸಿಕ್ಕಿದ್ದರಿಂದ ಇವೆಲ್ಲಾ ಕ್ರಮೇಣ ಮಾಯವಾದವು. ಆ ಮಹನೀಯರಿಗೆ ನಾನು ಇಂದಿಗೂ ಋಣಿ.

ಮತ್ತೆ ದಿಲ್ಲಿಗೆ ಮರಳಿ ಬರೋಣ. ಮೊದಲೇ ಹೇಳಿದಂತೆ ನನ್ನ ದಿಲ್ಲಿಯು ಆಗ ಟಿವಿ ಪರದೆಗಷ್ಟೇ ಸೀಮಿತವಾಗಿತ್ತು. ಹೀಗಿರುವಾಗ ಭಾನುವಾರದ ಸಂಜೆಯೊಂದರಲ್ಲಿ ಮೂಡಿಬಂದಿತ್ತು ನೋಡಿ ಎಂಭತ್ತರ ದಶಕದ ಸೂಪರ್ ಹಿಟ್ ಚಲನಚಿತ್ರ ‘ಹೊಸಬೆಳಕು’. ಚಿತ್ರದಲ್ಲಿ ಅಣ್ಣಾವ್ರು ”ಹೊಸಬೆಳಕು ಮೂಡುತಿದೆ…” ಎಂದು ಭರ್ಜರಿಯಾಗಿ ಹಾಡುತ್ತಿದ್ದರು.

ಆ ಚಿತ್ರದಲ್ಲಿಯ ಅವರ ಪಾತ್ರವು ಅರಳುವುದು ದಿಲ್ಲಿಯಲ್ಲೇ. ಒಟ್ಟಿನಲ್ಲಿ ಅಣ್ಣಾವ್ರನ್ನು ಕಂಡಷ್ಟೇ ಬೆರಗಿನಲ್ಲಿ ದಿಲ್ಲಿಯನ್ನೂ ಟಿವಿ ಪರದೆಯಲ್ಲಿ ಕಂಡು ನಾನು ಖುಷಿಪಟ್ಟಿದ್ದೆ. ದಿಲ್ಲಿಯೆಂದರೆ ಆಗ ದೂರದ ಮರೀಚಿಕೆ. ಅದೇನಿದ್ದರೂ ‘ದಿಲ್ಲಿ ದೂರ್ ಹೈ’ ಎಂದು ಉದ್ಗರಿಸುತ್ತಿದ್ದ ಕಾಲ. 

ಈಚೆಗೆ ಮಿತ್ರರೊಬ್ಬರೊಂದಿಗೆ ಮಾತನಾಡುತ್ತಾ ದಿಲ್ಲಿಯೆಂಬುದು ಚಲನಚಿತ್ರ ಲೋಕಕ್ಕೆ ಅದೆಷ್ಟು ಪ್ರಿಯವಾದ ಲೊಕೇಷನ್ ಅಲ್ವಾ ಎಂದೆಲ್ಲಾ ಹರಟುತ್ತಿದ್ದೆವು. ದಿಲ್ಲಿಯ ವಾಸ್ತುಶಿಲ್ಪ ವೈಭವವನ್ನು ನೋಡಲು ‘ವೀರ್ ಝಾರಾ’, ‘ಲವ್ ಆಜ್ ಕಲ್’, ‘ಪಿಕೆ’, ‘ಫನಾ’ ಇತ್ಯಾದಿ ಚಿತ್ರಗಳನ್ನು ನೋಡಬೇಕು. ಇಷ್ಟೇ ಇಷ್ಟು ಮೈಮುರಿದರೆ ತನ್ನ ಪಾಡಿಗೆ ಸಾಗುತ್ತಿರುವ ದಾರಿಹೋಕನೊಬ್ಬನಿಗೆ ಎಡತಾಕುತ್ತೇನೋ ಎಂಬಷ್ಟು ಇಕ್ಕಟ್ಟಿನ ಹಳೇದಿಲ್ಲಿಯ ಸೊಬಗನ್ನು ನೋಡಬೇಕಾದರೆ ‘ದಿಲ್ಲಿ 6’ ವೀಕ್ಷಿಸಬೇಕು.

ಹಾಗೆ ನೋಡಿದರೆ ನಮ್ಮ ಕಾಲೇಜಿನ ದಿನಗಳಲ್ಲಿ ಈ ಚಿತ್ರದ ‘ಮಸಕ್ಕಲಿ, ಉಡ್ ಮಸಕ್ಕಲೀ…’ ಹಾಡನ್ನು ಲೆಕ್ಕವಿಲ್ಲದಷ್ಟು ಬಾರಿ ಕೇಳಿರಬಹುದೇನೋ. ಆದರೆ ದಿಲ್ಲಿಯ ‘ಚಾಂದನೀಚೌಕ್’ ಪ್ರದೇಶವನ್ನು ‘ದಿಲ್ಲಿ 6’ ಅಂತಲೂ ಕರೆಯುತ್ತಾರೆ ಎಂಬುದು ಮನದಟ್ಟಾಗಿದ್ದು ನಾನು ಖುದ್ದು ದಿಲ್ಲಿಗೆ ಬಂದ ನಂತರವೇ!

ಈಗ ದಿಲ್ಲಿಯ ಹೃದಯಸ್ಥಾನವೆಂಬಂತಿರುವ ಕನಾಟ್ ಪ್ಲೇಸ್ (ಸಿ.ಪಿ) ಅನ್ನೇ ನೋಡಿ. ಚಿತ್ರೀಕರಣದ ವಿಚಾರಕ್ಕೆ ಬಂದರೆ ಬಹಳಷ್ಟು ಬಾಲಿವುಡ್ ಚಿತ್ರಗಳಿಗೆ ಅದೊಂದು ನೆಚ್ಚಿನ ತಾಣ. ಖಳನೊಬ್ಬನನ್ನು ಬೆನ್ನಟ್ಟುವ ಚೇಸಿಂಗ್ ದೃಶ್ಯಕ್ಕೂ ಇದು ಸೈ. ಕೈ-ಕೈ ಹಿಡಿದು ಸಾಗುವ ಪ್ರಣಯಪಕ್ಷಿಗಳ ದೃಶ್ಯಕ್ಕೂ ಈ ತಾಣ ಸೈ. ಅವರಿವರೇಕೆ, ಸ್ವತಃ ದಿಲ್ಲಿ ನಿವಾಸಿಗರಿಗೆ ಕನಾಟ್ ಪ್ಲೇಸಿನ ಸುಂದರ ಕಂಬಗಳೂ ಬೋರೆನ್ನಿಸುವ ಮಟ್ಟಿಗೆ ಇವುಗಳು ತೆರೆಯ ಮೇಲೆ ಬಂದುಹೋಗಿವೆ.

ಇಷ್ಟಿದ್ದರೂ ಕಾಲದ ಹಂಗಿಲ್ಲದೆ ಕ್ಯಾಮೆರಾದ ಪ್ರತೀ ಫ್ರೇಮಿನಲ್ಲೂ ಶಹರವು ಹೊಸ ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ. ಹೀಗಾಗಿ ದಿಲ್ಲಿಯ ಕಮಾನುಗಳಲ್ಲಿರುವ ಕಾಮನಬಿಲ್ಲಿನ ಸೊಗಸು ಮಾಸಿಲ್ಲ. ಅಷ್ಟು ಬಾರಿ ನೋಡಿರುವ ಕನಾಟ್ ಪ್ಲೇಸ್ ತಾಣದ ಕಂಬಗಳೂ ಸುಮ್ಮನೆ ಕಾಡುವುದು ನಿಲ್ಲಿಸಿಲ್ಲ.  

ಶಹರದ ಸೊಬಗನ್ನು ಸೃಜನಶೀಲ ನೆಲೆಯಲ್ಲಿ, ಕಾವ್ಯಾತ್ಮಕವಾಗಿ ತೆರೆಯ ಮೇಲೆ ತಂದ ಕೆಲ ಉದಾಹರಣೆಗಳೂ ಇವೆ. ಶ್ರೀಜಿತ್ ಮುಖರ್ಜಿ ನಿರ್ದೇಶನದ ‘ಬೇಗಂ ಜಾನ್’ ಚಿತ್ರದಲ್ಲೊಂದು ಸನ್ನಿವೇಶ ಬರುತ್ತದೆ. ಅಸಲಿಗೆ ಚಿತ್ರ ಆರಂಭವಾಗುವುದೇ ದಿಲ್ಲಿಯ ಕನಾಟ್ ಪ್ಲೇಸ್ ಪ್ರದೇಶದಿಂದ.

ಬಸ್ಸಿನಲ್ಲಿ ತಮ್ಮ ಪಾಡಿಗೆ ಸಾಗುತ್ತಿರುವ ಒಂದು ಯುವಜೋಡಿಯ ಮೇಲೆ ಕೆಲ ಕಿಡಿಗೇಡಿಗಳು ದಾಳಿ ನಡೆಸಿ, ಯುವತಿಯ ಮೇಲೆ ಅತ್ಯಾಚಾರವನ್ನೆಸಗಲು ಪ್ರಯತ್ನಿಸುತ್ತಾರೆ. ಆಗ ಬಸ್ಸಿನಿಂದ ಇಳಿದು ಪರಾರಿಯಾಗುವ ಆಕೆ ಕನಾಟ್ ಪ್ಲೇಸಿನ ಕಂಬಗಳ ಬಳಿ ಬಂದು ಓಡತೊಡಗಿದಾಗ, ಆಕೆಯನ್ನು ರಕ್ಷಿಸಲೋ ಎಂಬಂತೆ ಧೈರ್ಯವಾಗಿ ಪುಂಡರೆದುರು ಬಂದು ನಿಲ್ಲುವುದು ಓರ್ವ ಆಗಂತುಕ ಮುದುಕಿ.

ಹೀಗೆ ಪುಂಡರೆದುರು ಏಕಾಏಕಿ ಕಲ್ಲಿನ ಮೂರ್ತಿಯಂತೆ ನಿಲ್ಲುವ ಮುದುಕಿ ಒಂದೊಂದಾಗಿಯೇ ತನ್ನ ಬಟ್ಟೆಗಳನ್ನು ಕಳಚಿ ನಗ್ನಳಾಗಿಬಿಡುತ್ತಾಳೆ. ಇತ್ತ ಕಾಮಾತುರರಾಗಿ ಯುವತಿಯೋರ್ವಳ ದೇಹಕ್ಕಾಗಿ ಹಾತೊರೆಯುತ್ತಿದ್ದ ಯುವಕರನ್ನು ಬಟಾಬಯಲಿನಲ್ಲಿ ನಿಂತ ಮುದುಕಿಯ ನಗ್ನದೇಹವು ಮುಖಭಂಗಕ್ಕೀಡಾಗಿಸುತ್ತದೆ. ಈ ತಲೆಕೆಟ್ಟ ಮುದುಕಿ ಇದೇನು ಮಾಡುತ್ತಿದ್ದಾಳಪ್ಪಾ ಎಂದು ಬೆಚ್ಚಿಬೀಳಿಸುತ್ತದೆ.

ಲಜ್ಜೆಗೇಡಿತನದ ಕ್ಷಣಿಕ ಕಾಮಕ್ಕೂ, ಅಲ್ಪ ಆಯಸ್ಸುಳ್ಳ ದೈಹಿಕ ಸೌಂದರ್ಯಕ್ಕೂ ಇರುವ ಪೊಳ್ಳುತನವು ಅಜ್ಜಿಯ ಒಂದೊಂದೇ ಬಟ್ಟೆಗಳೊಂದಿಗೆ ಕಳಚಿ ಬೀಳುವುದನ್ನು ಇಲ್ಲಿ ಮಾರ್ಮಿಕವಾಗಿ ತೋರಿಸಿರುವುದು ವಿಶೇಷ. ದಿಲ್ಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣವನ್ನು ಥಟ್ಟನೆ ನೆನಪಿಸುವ ಈ ದೃಶ್ಯವು ಕನಾಟ್ ಪ್ಲೇಸಿನ ರಂಗಸ್ಥಳವನ್ನು ಬಳಸಿಕೊಂಡು ಮಹಾನಗರಗಳಲ್ಲಿರುವ ಮಹಿಳೆಯರ ಸುರಕ್ಷತೆಯ ವಿಚಾರವನ್ನೂ, ಮನುಷ್ಯನ ಒಟ್ಟಾರೆ ಕ್ರೌರ್ಯವನ್ನೂ ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿದೆ.     

ಹೀಗೆ ದಿಲ್ಲಿಯೆಂದರೆ ನನಗೆ ಬಹುರೂಪಿ. ನಾನು ಅಂದು ಟಿವಿ ಪರದೆಯಲ್ಲಿ ಕಂಡಿದ್ದ ದಿಲ್ಲಿಗೂ, ಇಂದು ಟಿವಿ ಪರದೆಯಲ್ಲಿ ಕಾಣುವ ದಿಲ್ಲಿಗೂ, ಒಂದಾನೊಂದು ಕಾಲದಲ್ಲಿ ನನ್ನ ಕಲ್ಪನೆಯಲ್ಲಿದ್ದ ದಿಲ್ಲಿಗೂ, ನಾನೀಗ ಖುದ್ದು ಇರುವ ದಿಲ್ಲಿಗೂ ಸಾಕಷ್ಟು ಅವತಾರಗಳಿವೆ. ಇದೊಂಥರಾ ಗೋಜಲು. ಶಹರದ ಇಡಿಯ ವಿಶ್ವರೂಪವನ್ನು ನೋಡುವ ಹುಕಿಗೆ ಬಿದ್ದುಬಿಟ್ಟರೆ ಬಿಡಿ ಅವತಾರಗಳು ತಪ್ಪಿಹೋಗುತ್ತವೆ. ಹಾಗೆಂದು ಬಿಡಿಬಿಡಿಯಾಗಿರುವ ಅವತಾರಗಳನ್ನು ಕಡೆಗಣಿಸುವ ಹಾಗೂ ಇಲ್ಲ.

ಶಹರವು ದಕ್ಕಿದಷ್ಟು ನನ್ನದು ಎಂದು ಸದ್ಯ ಹೇಳಬಹುದಷ್ಟೇ!

November 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: