ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ

ಸುಮಾವೀಣಾ 

ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ಇದೇ ದಿನ ಜನಿಸಿದವರು ಕನ್ನಡ ನಾಡಿನ ಖ್ಯಾತ ವಿಮರ್ಶಕರು, ಬರಹಗಾರರು, ಅಂಕಣಕಾರರು, ಬಹುಮುಖಿ ಚಿಂತಕರೂ ಆಗಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ ಸರ್.  ಇವರ  ಅಭಿಮಾನಿಯಾಗಿ   ಈ ಬರಹ ಬರೆಯುತ್ತಿರುವುದು  ನನಗೆ ಸಂತೋಷದ ವಿಚಾರವಾಗಿದೆ.

‘ಇಹದ ಪರಿಮಳದ ಹಾದಿ’ ಇವರ ಸಂಶೋಧನಾ ಪ್ರಬಂಧ ಈ ಕೃತಿಗೆ 1992ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ ಪದವಿ ಲಭಿಸಿದೆ. ಸಾಹಿತ್ಯ ಸಂಸ್ಕೃತಿ,’ಕುವೆಂಪು ನಾಟಕಗಳ ಅಧ್ಯಯನ, ಕುವೆಂಪು ಕಾವ್ಯ; ಸಂಸ್ಕೃತಿ ಚರಿತ್ರೆಯ ರೂಪಕ,  ‘ಹಣತೆಯ ಹಾಡು’, ಇವರ ವಿಮರ್ಶಾ ಕೃತಿಗಳು. ಅಂತರಂಗದ ಮೃದಂಗ’, ‘ಜೀವದಾಯಿನಿ’ ಪ್ರಬಂಧ ಸಂಕಲನಗಳು, ‘ಕನ್ನಡ ವಿಮರ್ಶಾ ವಿವೇಕ’, ’ನೆಲದನಿ’ ಇವರಿಗೆ ಅರ್ಪಿಸಿರುವ ಗೌರವ ಗ್ರಂಥಗಳು. ಉತ್ತಮ ಪ್ರಬಂಧಕಾರರೂ ಆಗಿರುವ ಇವರು ವಿಜಯವಾಣಿ ಪತ್ರಿಕೆಯ ಭಾನುವಾರದ ಅಂಕಣ ಸಾಮಯಿಕದ ಮೂಲಕ ನಮಗೆಲ್ಲಾ  ಹೆಚ್ಚು ಪರಿಚಿತರು.   

 “ಓದುವ ಸಂಸ್ಕೃತಿ ಇಂದಿನ ಅಗತ್ಯ” ಎಂಬುದು ಇವರ ಸಾರ್ವಕಾಲಿಕ ಮಾತು. ಚೆನ್ನವೀರಕಣವಿಯವರು ಇವರ ಶೈಲಿಯನ್ನು “ಸ್ಫಟಿಕದಂತೆ ಸ್ವಚ್ಛವಾಗಿದೆ” ಎಂದಿದ್ದಾರೆ. ಏಕತಾನತೆ ಇಲ್ಲದೆ ಸಂಕೀರ್ಣ ವಸ್ತುಗಳನ್ನು ಒಳಗೊಂಡ ಇವರ ಸಾಮಯಿಕ ಬರಹಗಳು ಓದುಗರ  ಭಾವಭಿತ್ತಿಯನ್ನು ನೇರವಾಗಿ ಪ್ರವೇಶಿಸುತ್ತವೆ. ಸಾಹಿತ್ಯದ ವಿದ್ಯಾರ್ಥಿಗಳಿಗಂತೂ ಇವರ  ಬರಹ ವಿಶೇಷ ಉಪಹಾರ ಎಂದರೂ ಉತ್ಪ್ರೇಕ್ಷವಲ್ಲ. ಅಂತಹ ಟಿಪ್ಪಣಿಗಳು ಇವರ ಸಾಮಯಿಕದಲ್ಲಿ ಇರುತ್ತವೆ. ಇಲ್ಲಿನ  ಬರೆಹಗಳಿಗೆ ಇವರು ಕೊಡುವ ಶೀರ್ಷಿಕೆಗಳೆ  ಓದುಗರನ್ನು ಸುಲಭವಾಗಿ ಆಹ್ವಾನಿಸುತ್ತವೆ. ಶೀರ್ಷಿಕೆಗಳನ್ನು ನೋಡಿದ ಕೂಡಲೆ ಬರಹದಲ್ಲಿ ಇದೇ ವಿಚಾರವಿದೆ ಅನ್ನಿಸುವುದಿಲ್ಲ.

ಓದುಗರು ಬರಹವನ್ನು ಸಂಪೂರ್ಣ ಓದಿದ ನಂತರ ಒಂದು ರೀತಿಯ ಸಂತೃಪ್ತ ಭಾವ ಆವರಿಸಿ ಚಪ್ಪಾಳೆಯನ್ನೋ,,ಥಮ್ಸಪ್ ಅನ್ನೋ ಕೊಟ್ಟು ಕೊಳ್ಳುವಂತೆ ಇರುತ್ತವೆ.  ಪ್ರಸ್ತುತ ವಿದ್ಯಾಮಾನಗಳಿಗೆ ಅನ್ವಯವಾಗುವ ವಿಷಯ ವೈವಿಧ್ಯತೆ, ಸೃಜನಶೀಲತೆ, ಐತಿಹಾಸಿಕತೆ, ಸಮಕಾಲೀನತೆ, ಸಾಂದರ್ಭಿಕತೆ ಎಲ್ಲವೂ ಇವರ ಬರಹಗಳಲ್ಲಿರುತ್ತವೆ. 

 ‘ದೇಶ ಸುತ್ತು ಕೋಶ ಓದು’ ಎಂಬ ಮಾತಿಗೆ ನರಹಳ್ಳಿಯವರು ಅನ್ವರ್ಥ. ಜಾಗತಿಕ ಸಾಹಿತ್ಯವನ್ನು ಅಧ್ಯಯನ ಮಾಡಿರುವ ಇವರು  ಪ್ರವಾಸಾಸಕ್ತರೂ ಹೌದು. ತಾವು ಪ್ರವಾಸ ಕೈಗೊಂಡಾಗ ಆದ ಅನುಭವಗಳನ್ನು, ಕಂಡ ವಿಚಾರಗಳನ್ನು, ಅಲ್ಲಿಯ ಕಲೆ ಸಂಸ್ಕೃತಿ  ಭಾಷಾ ಸೊಗಸು ಇತ್ಯಾದಿಗಳನ್ನು ತಮ್ಮ ಪ್ರಬಂದಗಳಲ್ಲಿ ತಂದಿದ್ದಾರೆ. ಕನ್ನಡದಲ್ಲಿ ಪಂಪನಿಂದ ಮೊದಲುಗೊಂಡು, ವಚನಗಳ ಸಾಲುಗಳು, ನಡು ಸಾಹಿತ್ಯದ ಪದ್ಯದ ಸಾಲುಗಳು, ಕೀರ್ತನೆಗಳ ತುಣುಕುಗಳು, ಗೋಪಾಲಕೃಷ್ಣ ಅಡಿಗ, ಕುವೆಂಪು, ಜಿ.ಎಸ್ ಶಿವರುದ್ರಪ್ಪ, ಕೆಎಸ್.ನ ಅವರ ಸಾಲುಗಳು, ಜಾನಪದ ತ್ರಿಪದಿಗಳ ಸಾಲುಗಳು ಇವರ ಬರಹದಲ್ಲಿ ಇರುತ್ತವೆ. ಭಕ್ತಿ ಸಾಹಿತ್ಯ, ತಮಿಳಿನ ತಿರುಪ್ಪಾವೈ, ತೇವರಮ್ಗಳನ್ನು, ಹರಿದಾಸರ ಕೀರ್ತನೆಗಳನ್ನು ದೋಹೆಗಳನ್ನು ತಮ್ಮ ಬರಹದಲ್ಲಿ ಉಲ್ಲೇಖಿಸುತ್ತಾರೆ.  ಗ್ರೀಕಿನ ನುಡಿಗಟ್ಟುಗಳು,  ರೂಮಿಯ ಪದ್ಯಗಳು, ಎಲಿಯಟ್, ಕೀಟ್ಸ್,  ವರ್ಡ್ಸ್ವರ್ತ್ ಮೊದಲಾದವರ ಪ್ರಸ್ತಾಪಗಳು ಕಲಿಕಾಸಕ್ತರಿಗೆ ಇವುಗಳ ಬಗ್ಗೆ ತಿಳಿಯಬೇಕೆಂಬ ಉತ್ಸಾಹ ಮೂಡುತ್ತದೆ. ಎಲ್ಲವನ್ನು ಒಂದೇ ಚೌಕಟ್ಟಿನಲ್ಲಿ ತಂದ ಸಂದರ್ಭವನ್ನು ಸರಿಯಾಗಿ ವಿವರಿಸಿರುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ‘ಒಪೆರಾ’  ಹೋಗೊಂದು ಚಿಂತನ ಎನ್ನುವ ಬರಹ. ವಾರ್ ಮೆಮೋರಿಯಲ್  ಒಪೇರ ಹೌಸ್ ರಂಗಮಂದಿರದ ಕುರಿತು ಹೇಳುತ್ತಾ  ಶೇಕ್ಸ್ ಪಿಯರನ ನಾಟಕಗಳಾದ ‘ರೋಮಿಯೊ ಜೂಲಿಯೆಟ್’, ‘ಹ್ಯಾಮ್ಲೆಟ್’, ‘ಮ್ಯಾಕ್ಬೆತ್’, ‘ಜೂಲಿಯಸ್ ಸೀಸರ್’, ‘ಕಿಂಗ್ಲಿಯರ’ಗಳನ್ನು  ಹೇಳಿ ಬೆಂಗಳೂರಿನ ಎ ಡಿ ಎ ರಂಗಮಂದಿರವನ್ನೂ ನೆನಪಿಸಿಕೊಂಡು ನಮ್ಮಲ್ಲಿನ  ಗೀತ ನಾಟಕಗಳ ಪರಂಪರೆಯನ್ನೂ ಹೇಳಿ ತಮ್ಮೂರು ನರಹಳ್ಳಿಯ ಜಾನಪದ ವಾದ್ಯವನ್ನು ಉಲ್ಲೇಖಿಸುತ್ತಾರೆ.    ಹೀಗೆ ಒಂದೇ ಒಂದು ಚೌಕಟ್ಟಿನಲ್ಲಿ  ಅನೇಕ ಪರಿಪ್ರೇಕ್ಷಗಳನ್ನು ನೀಡಿ ಓದುಗರನ್ನು ವಿಷಯ ಕುತೂಹಲಿಗಳನ್ನಾಗಿ ಮಾಡಿ ಅರಿವನ್ನು ಹೆಚ್ಚಿಸಿಕೊಳ್ಳಲು ಪ್ರೇರೇಪಿಸುತ್ತಾರೆ.

 ‘ಪ್ರಾಚೀನ ಸಂಸ್ಕೃತಿ  ಸಂಪತ್ತಿನ  ಈಜಿಪ್ಟ್’ ಲೇಖನದಲ್ಲಿ  ಈಜಿಪ್ಟ್  ಹಾಗೂ  ಕನ್ನಡ ಕರಾವಳಿ ನಂಟಿನ ಕುರಿತು ಹೇಳಿದ್ದಾರೆ. ಕಾಶ್ಮೀರದ ಪ್ರವಾಸದ ಕುರಿತು ಬರೆಯುವಾಗ  ಸಾಂಸ್ಕೃತಿಕ ವೈವಿಧ್ಯವನ್ನೂ, ಭಾಷಾ ಸೊಗಸಿನ ದ್ಯೋತಕ ನುಡಿಗಟ್ಟುಗಳನ್ನು ಉದಾಹರಿಸಿದ್ದಾರೆ. ಆಲಸ್ಕ ಟೂರಿನ ಬಗ್ಗೆ ಬರೆದ್ದ ಸಾಲುಗಳನ್ನು ಓದಿದಾಗಂತೂ ನಾವೂ ಅಲ್ಲಲ್ಲಿ ಅಡ್ಡಾಡಿ ಬಂದೆವೇನೋ ಅನ್ನುವ ಭಾವನೆ ಆವರಿಸುತ್ತದೆ.  ಕಾಡ್ಗಿಚ್ಚಿನ ಸಂದರ್ಭದಲ್ಲಿ ಕುಟುಂಬದವರಿಗೆ ಅಲ್ಲೆ ವಾಹನದಲ್ಲೇ ಕಾಯಬೇಕಾದ ಸಂದರ್ಭವನ್ನು ವಿವರಿಸುತ್ತಾ ಅಲ್ಲಿಯ ಪೋಲಿಸ್ ವ್ಯವಸ್ಥೆಯನ್ನು ವಿವರಿಸಿಬಿಡುತ್ತಾರೆ.  ಭೂತಾನ್ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ಜನರು ತೊಡುವ ವಿಶೇಷ ಉಡುಗೆಗಳ ಬಗ್ಗೆ ಹೇಳುತ್ತಾರೆ. ನಮ್ಮ ಪದ್ಮಸಂಭವ ಅಲ್ಲಿ ಗುರು ರಿಂಫೋಚಿ ಅಗಿರುವುದನ್ನು ಹೇಳುತ್ತಲೇ ಅಲ್ಲಿನ ಆಡಳಿತ ವ್ಯವಸ್ಥೆ, ಅಬ್ಬರವಿಲ್ಲದ ಚುನಾವಣಾ ಪ್ರಕ್ರಿಯೆ,  ಪ್ರಚಾರಗಳು,  ಭಿತ್ತಿ ಪತ್ರಗಳನ್ನು ನಿಗದಿತ ಸ್ಥಳಗಳಲ್ಲಿ ಮಾತ್ರವೇ ಬಳಸುವ ಅಲ್ಲಿನ ಶಿಸ್ತಿನ ಬಗ್ಗೆ ತಿಳಿಸುತ್ತಾರೆ. ವಿದೇಶಿ ಪ್ರವಾಸವನ್ನು ವಿವರಿಸುತ್ತಲೆ ವಿದೇಶಿಸಾಹಿತ್ಯದ, ಅನುವಾದ ಸಾಹಿತ್ಯದ ಅಗತ್ಯತೆಯನ್ನು ಕುರಿತು ‘ಅನುವಾದ ಸಾಹಿತ್ಯ ಅನ್ಯ ಜಗತ್ತುಗಳ ಜೊತೆ ಅನುಸಂಧಾನ’ ಎಂಬ ಶೀರ್ಷಿಕೆಯಡಿ  ಇನ್ನೊಂದು ಅನನ್ಯ ಬರಹವನ್ನು ಬರೆದು ಅನುವಾದ ಸಾಹಿತ್ಯವೂ ಬೇರೊಂದು ಭಾಷೆಯ ಬೇರೊಂದು ನಾಡಿನ ಜನರ ಭಾವನೆಗಳನ್ನು ಸ್ಪರ್ಶಿಸಿವಂತಾಗಿಸುತ್ತದೆ ಎಂದಿದ್ದಾರೆ. ಇವುಗಳು ನಮ್ಮಲ್ಲಿ ಹೊಸ ಬಗೆಯ ಸಂಚಲನಕ್ಕೆ ಕಾರಣವಾಗಬಹುದು ಅದರಿಂದ ಉತ್ತಮ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

ಯುದ್ಧೋನ್ಮಾದದ, ಯುದ್ಧ ಭೀತಿಯ ಸನ್ನಿವೇಶಗಳನ್ನು ಹೇಳುವ ಬದಲು ಯುದ್ದಾ ನಂತರ ಹಾಗೂ ಭೀಕರ ಪರಿಣಾಮಗಳ ಬಗ್ಗೆ ಆಲೋಚಿಸುವುದು ಉತ್ತಮ ಎಂದು ಕದನ ಕುತೂಹಲವನ್ನು ಧಿಕ್ಕರಿಸುತ್ತಾರೆ. ಮನುಷ್ಯ ಮನೆಯೊಳಗೆ ಬಂಧಿಯಾಗಿ ಸಾಮಾಜಿಕ ಸಂಬಂಧ ಕಡಿದುಕೊಂಡಿರುವುದು ವಿಷಾದ ಎಂಬುದನ್ನು   “ಮನೆಯೊಳಗೆ ನಾವೆ ಬಂಧಿಗಳು ಕೊಠಡಿ ಮಾತ್ರ ನಮ್ಮದು” ಎಂದು ವಿಡಂಬನೆ ಮಾಡುತ್ತಾರೆ.

“ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ” ಎಂದು ಅಕ್ಕನ ವಚನದ ಸಾಲುಗಳನ್ನು ಉಲ್ಲೇಖಿಸಿ  ಕೊರೊನಾ ಬಂದಿರುವ  ಈ ಕಾಲದಲ್ಲಿ ‘ಬೆದರುವೆನೆ ನಾನು  ಬೆಚ್ಚುವೆನೆ ನಾನು’  ಎಂದು ಬರೆದು ‘ಕೊರೊನಾ’ಕ್ಕೆ ಮಂಡಿಯೂರುವುದರ ಬದಲು ಮನಸ್ಸನ್ನು ಅಣಿಗೊಳಿಸಿಕೊಳ್ಳೋಣ ಎಂದಿದ್ದಾರೆ. ಕೊರೊನಾ ಕಾಲದ ಪರಿಭಾಷೆಗಳಲ್ಲಿ  ಖಿನ್ನತೆ ಸೇರಿದೆ ಅದರ ಬಗ್ಗೆಯೂ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಉತ್ತಮ ಸಲಹೆ ನೀಡಿದ್ದಾರೆ. ಭಾವ ತಲ್ಲಣಗಳಿಂದ ಹೊರಬರಲು ಸಾಹಿತ್ಯ ಪರಿಹಾರ ಎಂದಿರುವುದು ಸಾಮಾಜಿಕರಿಗಿರುವ ಸಾಹಿತ್ಯದ ಓದಿನ ಅವಶ್ಯಕತೆಯನ್ನು ಹೇಳುತ್ತದೆ.

ಇದನ್ನು ಅವಲೋಕಿಸುವಾಗ  “ನರಹಳ್ಳಿಯವರ ಚಿಂತನೆ ಈ ಹೊತ್ತಿಗೆ ಸಾಂಸ್ಕೃತಿಕ ಅಗತ್ಯವಾಗಿದೆ” ಎಂಬ ಜಿ. ಎಸ್. ಎಸ್. ಅವರ ಮಾತುಗಳು  ನೆನಪಾಗುತ್ತವೆ. “ಉತ್ಸಾಹವಿರಲಿ ವಿವೇಕ ಮಂಕಾಗದಿರಲಿ” ಎನ್ನುತ್ತಾ ವಿವೇಕ ಮತ್ತು  ಜ್ಞಾನ ಸಂಪಾದನೆಗೆ ಆದ್ಯತೆ ನೀಡುವ  ಇವರು ಬಹಳ ಸೀರಿಯಸ್ ಆದ ವಿಚಾರಗಳನ್ನು ಸರಳವಾಗಿ  ಸುಂದರವಾಗಿ ಕನ್ವಿನ್ಸ್ ಆಗಿ  ಬರೆಯುತ್ತಾರೆ.  ನಾಗರಿಕ  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಬದುಕುತ್ತಿರುವ ನಮಗೆ ಅನೇಕ ಅಪಸವ್ಯಗಳು, ಬ್ಯೂಟಿ ಆಫ್ ದ ಡೆಮಾಕ್ರಸಿ  ಎನ್ನಬಹುದಾದ ಸನ್ನಿವೇಶಗಳು ಎದುರಾಗುತ್ತವೆ. ಅವುಗಳನ್ನು ನರಹಳ್ಳಿಯವರು  ಪ್ರಜಾಪ್ರಭುತ್ವ ಆರಾಧನೆ, ವಿಮರ್ಶಾಪ್ರಜ್ಞೆ, ಕುಟುಂಬಕಾರಣ, ಪ್ರಜಾಭುತ್ವದ ಅಣಕ, ಪ್ರಜಾಪ್ರಭುತ್ವ ಸತ್ವ ಎಂಬ ಮಾತುಗಳಲ್ಲಿ ತರುತ್ತಾರೆ. ಅದರಂತೆ “ಹಿಂಸೆ ರಾಕ್ಷಸೀ ಪ್ರವೃತ್ತಿ” ಎಂದು ನಾಗರಿಕ ಸಮಾಜದಲ್ಲಿ ಅಗತ್ಯವಾಗಿರುವ ಸಹಬಾಳುವೆಯನ್ನೂ, ಸಾಮಾಜಿಕ ಬದ್ಧತೆಯ ಕುರಿತು  ಬರೆಯುತ್ತಾರೆ, ಹಾಗೆ ಸಿನಿಮಾ ಜತ್ತಿನಲ್ಲಿರುವ ಕ್ಯಾಸ್ಟಿಂಗ್ ಕೌಚ್ನ ವಿರುದ್ಧವೂ  ಧ್ವನಿಯೆತ್ತಿದ್ದಾರೆ.

ಯುವಜನತೆಯನ್ನು ಕುರಿತು  ‘ಯೌವ್ವನ ಬಂದಾಗ ಉತ್ಸಾಹ ಉನ್ಮತ್ತತೆಯ ಅಪಾಯ’ ಎಂಬ ಬರಹದಲ್ಲಿ ಹರೆಯದ ಗುಣಾವಗುಣಗಳು, ದುಡುಕು ಉತ್ಸಾಹ,  ಇತ್ಯಾದಿಗಳನ್ನು ಕೋತಿಗೆ ಹೋಲಿಸಿ ಅದಕ್ಕೆ ಹೆಂಡ ಕುಡಿಸಿ ಅದರಲ್ಲೂ ಅದರ ಬಾಲಕ್ಕೆ ಬೆಂಕಿ ಹಚ್ಚಿದರೆ ಆಗುವ ಅನಾಹುತಗಳಂತೆ ಯುವಕರಲ್ಲಿನ ತಾರುಣ್ಯದ ಶಕ್ತಿ, ಅಪ್ಪಂದಿರು ಮಾಡಿಟ್ಟ ಹಣ, ಪರರಿಗಿಲ್ಲ ಎನಿಸುವ ಸೌಂದರ್ಯ ಇವುಗಳು ಇದ್ದರೆ  ಹೇಗಾಡುತ್ತಾರೆ, ಹೇಗಾಗಬೇಕು ಎಂಬುದನ್ನು ಅಡಿಗರ ಪದ್ಯದಲ್ಲಿ ಬರುವ ‘ಹನುಮದ್ವಿಲಾಸ’ ಆಗಬಾರದು ‘ಹನುಮದ್ವಿಕಾಸ’ ಆಗಬೇಕು  ಎಂಬ ಪದಗಳ ಉದಾಹರಣೆಯೊಂದಿಗೆ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.

ಬಹುಶ್ರುತ ವಿದ್ವಾಂಸರಲ್ಲಿ ಒಬ್ಬರಾಗಿರುವ ನರಹಳ್ಳಿಯವರ ಮಡದಿ ರಜನಿ ನರಹಳ್ಳಿಯವರೂ ಕೂಡ ನಾಡಿನ ಪ್ರಮುಖ ಲೇಖಕಿಯರ ಸಾಲಿನಲ್ಲಿದ್ದಾರೆ. “ನಮಗೆ ಬೇಕಾಗಿರುವುದು ಅನಾಥಪ್ರಜ್ಞೆಯಲ್ಲ, ಅಖಂಡಪ್ರಜ್ಞೆ”  ಎನ್ನುವ ಇವರ ಲೇಖನಗಳು ಓದುಗರನ್ನು ಹಾಗೂ ಸಾಹಿತ್ಯದ ವಿದ್ಯಾರ್ಥಿಗಳನ್ನು ಮರು ಓದಿಗೆ  ಪ್ರೇರೇಪಿಸಿ ಮನೋಲ್ಲಾಸ ನೀಡುತ್ತವೆ. ನರಹಳ್ಳಿಯವರ ಕುರಿತು ಅವರ ಬರಹಗಳನ್ನು ಕುರಿತಾಗಿ ಏನೇ ಹೇಳಿದರೂ “ಕರಿಯಂ ಕನ್ನಡಿಯಲ್ಲಿ ಸರೆಹಿಡಿದಂತೆ ಸರಿ” ಎಂಬಂತಾಗುತ್ತದೆ.  “ಅರಿತರೆ ಶರಣ ಮರೆತರೆ ಮಾನವ”  ಎಂಬುದನ್ನು ಪುನರುಚ್ಛರಿಸುವ ಇವರ ಚಿಂತನೆಗಳು ಇನ್ನಷ್ಟು ಸಾಹಿತ್ಯಸಾಕ್ತ ಮನಸ್ಸುಗಳನ್ನು ಪ್ರಫುಲ್ಲಗೊಳಿಸಲಿ.

‍ಲೇಖಕರು Avadhi

September 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಮೂರ್ತಿ

    ನಮ್ಮ ಬಾಲು ಸರ್ ಕುರಿತ ಬರಹ ಬಹಳ ಇಷ್ಟ ವಾಯಿತು ಸುಮಾ ಮೇಡಂ. ಧನ್ಯವಾದಗಳು. ಹಾಗೇ ನಮ್ಮೆಲ್ಲರ ಪ್ರಿಯ ಬಾಲು ಸರ್ ಗೆ ಹುಟ್ಟುಹಬ್ಬದ ಹಾಗೂ ಶಿಕ್ಷಕರ ದಿನದ ಶುಭಾಶಯಗಳು.

    ಪ್ರತಿಕ್ರಿಯೆ
  2. Shyamala Madhav

    ನೆಚ್ಚಿನ ನರಹಳ್ಳಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು! ಲೇಖನ ನಮ್ಮ ಪ್ರೀತಿ, ಗೌರವವನ್ನು ಇಮ್ಮಡಿಸಿದೆ.

    ಪ್ರತಿಕ್ರಿಯೆ
  3. Shyamala Madhav

    ನೆಚ್ಚಿನ ನರಹಳ್ಳಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಲೇಖನ ನಮ್ಮ ಪ್ರೀತಿ, ಗೌರವಗಳನ್ನು ಇಮ್ಮಡಿಸಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: