ಆಹಾ… ‘ರಂಗ ಕೈರಳಿ’

ಡಾ. ಪಾರ್ವತಿ ಜಿ.ಐತಾಳ್

ನಾಟಕಾಸಕ್ತರನ್ನು ರೋಮಾಂಚನಗೊಳಿಸುವ ಕಿರಣ್ ಭಟ್ ಅವರ ಕೃತಿ ‘ರಂಗ ಕೈರಳಿ’ ಅವರು ಕಂಡ ಕೇರಳದ ಸಾಂಸ್ಕೃತಿಕ ಲೋಕದ ಜೀವ ಸತ್ವವನ್ನು ಅಚ್ಚರಿಗೊಳಿಸುವ ಚಿತ್ರಕ ಶಕ್ತಿಯೊಂದಿಗೆ ನಮ್ಮ ಮುಂದೆ ತಂದು ನಿಲ್ಲಿಸುತ್ತದೆ.

ಕೇರಳವು ನಮ್ಮ ಪಕ್ಕದ ರಾಜ್ಯವೇ ಆದರೂ ಅಲ್ಲಿನ ಭಿನ್ನ ಭಾಷೆ ಮತ್ತು ಭಿನ್ನ ಸಂಸ್ಕೃತಿಗಳಿಂದಾಗಿ ದೂರ ಉಳಿದಿರುವುದರಿಂದ ಅಲ್ಲಿನ ರಂಗ ಚಟುವಟಿಕೆಗಳಿಗೆ ಸಂಬಂಧಿಸಿದ ನೂರಾರು ವೈಶಿಷ್ಟ್ಯಗಳು ನಮಗೆ ಅಪರಿಚಿತವಾಗಿಯೇ ಉಳಿದಿವೆ. ಈ ದೃಷ್ಟಿಯಿಂದ ಕಿರಣ್ ಅವರು ಇಲ್ಲಿ ದಾಖಲಿಸಿದಂತಹ ವಿಚಾರಗಳು ಕನ್ನಡದ ರಂಗಾಸಕ್ತರಿಗೆ ಬಹಳ ಮುಖ್ಯವಾಗುತ್ತವೆ.

ಬಿ ಎಸ್ ಎನ್ ಎಲ್ ಉದ್ಯೋಗಿಯಾಗಿದ್ದು ತಂತಿಗಳ ಮಧ್ಯೆಯೇ ಸದಾ ಇರುವವರಾಗಿದ್ದರೂ ಓದುಗರಿಗೆ ಮುದ ನೀಡುವ ಮತ್ತು ಹಿತವೆನ್ನಿಸುವ ಭಾಷೆಯಲ್ಲಿ ಸಾಹಿತ್ಯ ಸಂಸ್ಕೃತಿ-ಕಲೆ-ನಾಟಕಗಳ ಬಗ್ಗೆ ಈ ಕೃತಿಯನ್ನು ಬರೆದಿರುವುದು ಅವರ ಹಿರಿಮೆ.

ದಕ್ಷಿಣ ಕೇರಳದ ಆಲುವಾಕ್ಕೆ ಉದ್ಯೋಗದಲ್ಲಿ ಭಡ್ತಿಯಾಗಿ ಹೋಗುವ ಲೇಖಕರು 30 ವರ್ಷಗಳ ಹಿಂದೆ ತರಬೇತಿಗಾಗಿ ತಿರುವನಂತಪುರಕ್ಕೆ ಹೋಗಿದ್ದ ಸಂದರ್ಭವನ್ನು ನೆನಪಿಸಿಕೊಳ್ಳುತ್ತ ತಮ್ಮ ಕಥನಕ್ಕೆ ನಾಂದಿ ಹಾಡುತ್ತಾರೆ. ‘ಮಾಟ ಮಂತ್ರ ಮಾಡೋರ ರಾಜ್ಯ’ವೆಂದು ಅಮ್ಮ ಆತಂಕ ವ್ಯಕ್ತ ಪಡಿಸಿದರೂ ಹೊರಡದೆ ನಿರ್ವಾಹವಿಲ್ಲ. ಅಂದು ಮಂಗಳೂರಿನಲ್ಲಿ ರೈಲು ಹತ್ತಿ ಕುಳಿತಾಗ ಬಳಿಗೆ ಬಂದು ಹೂಂಕರಿಸತೊಡಗಿದ ಬಾವಾಜಿಯ ಮೂಲಕ ತಮ್ಮ ಕೇರಳದ ಸಂದರ್ಶನ ಹೇಗೆ ನಾಟಕೀಯ ರೀತಿಯಲ್ಲಿ ತೆರೆದುಕೊಂಡಿತ್ತು ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಅಂದು ತರಬೇತಿ ಕಾಲೇಜಿನಲ್ಲಿದ್ದಾಗ ಆಗಾಗ ಭೇಟಿ ಕೊಡುತ್ತಿದ್ದ ತಟ್ಟಿಯಂಗಡಿಯಲ್ಲಿ ಅವರಿಗೆ ಸಿಗುತ್ತಿದ್ದ ‘ಚಾಯ’ದ ತಯಾರಿಯಲ್ಲೂ ಒಂದು ರೀತಿಯ ನಾಟಕೀಯತೆಯಿದ್ದುದನ್ನು ತಿಳಿಹಾಸ್ಯದೊಂದಿಗೆ ನಿರೂಪಿಸುತ್ತಾರೆ. ನಮ್ಮೂರಿಗಿಂತ ತೀರಾ ಭಿನ್ನವಾದ ರೀತಿಯಲ್ಲಿ ಮಾಡಿಕೊಡುತ್ತಿದ್ದ ತಾಜಾ ಟೀಯನ್ನು ಅಂಗಡಿಯವನು ಎರಡೂ ಕೈಗಳಲ್ಲಿ ಹಿಡಿದ ಲೋಟಗಳಲ್ಲಿ ಮೇಲೆ ಕೆಳಗೆ ಮಾಡಿ ಬೆರೆಸುತ್ತಿದ್ದ ರೀತಿಗೆ ಬೆರಗಾಗಿ ಅವರ ಗೆಳೆಯರೆಲ್ಲ ಸೇರಿ ‘ಎರಡು ಮೀಟರ್ ಚಾಯ’ ಎಂದು ಹೆಸರಿಟ್ಟಿದ್ದರ ಬಗ್ಗೆ ಲೇಖಕರು ಹೇಳುವಾಗ ಆ ದೃಶ್ಯ ಕಣ್ಣ ಮುಂದೆ ಬಂದು ನಿಂತು ತುಟಿಯಂಚಿನಲ್ಲಿ ನಗು ನಿಲ್ಲುತ್ತದೆ.

ಎನಾರ್ಕುಲಂ ಸಮೀಪದ ಪೆರಿಯಾರ್ ನದೀ ತೀರದ ಆಲುವಾ ಅನ್ನುವ ಪುಟ್ಟ ಊರಿನಲ್ಲಿ ಲೇಖಕರ ಅದೃಷ್ಟವೋ ಎಂಬಂತೆ ಅವರು ಉಳಿದುಕೊಂಡಿದ್ದ ಬಾಡಿಗೆ ಮನೆಯ ಸಮೀಪವೇ ಒಂದು ಪುಟ್ಟ ನಾಟಕ ಥಿಯೇಟರ್ ಸಿಕ್ಕಿ ಅನೇಕ ನಾಟಕಗಳನ್ನು ನೋಡುವ ಅವಕಾಶ ಅವರದಾಯಿತು. ಆಫ್ರಿಕಾದ ವರ್ಣಭೇದದ ವಿರುದ್ಧ ಹೋರಾಡಿದವರ ಜೈಲುವಾಸದ ಕುರಿತಾದ ‘ದಿ ಐಲ್ಯಾಂಡ್’ ಎಂಬ ನಾಟಕದಲ್ಲಿ ಕೇರಳದ ರಂಗಭೂಮಿಯ ನಟ-ನಿರ್ಮಾಪಕ-ವ್ಯವಸ್ಥಾಪಕರ ನಿರ್ವಹಣಾ ಸಾಮರ್ಥ್ಯದ ಮೊದಲ ಪರಿಚಯ ಅವರಿಗಾಗುತ್ತದೆ.

ಇಲ್ಲಿಂದ ಆರಂಭವಾಗುವ ಅವರ ಥಿಯೇಟರ್ ಜರ್ನಿಯು ಎರಡು ವರ್ಷಗಳ ಕಾಲ ಅವ್ಯಾಹತವಾಗಿ ಸಾಗುತ್ತದೆ. ಹರುಕು ಮುರುಕು ಮಲೆಯಾಳದಲ್ಲೇ ಮಾತನಾಡುತ್ತ ಅನೇಕ ರಂಗಾಸಕ್ತರ ಜತೆಗೆ, ಮಾತ್ರವಲ್ಲದೆ ಸ್ವತಃ ಉನ್ನತ ದರ್ಜೆಯ ಅಧಿಕಾರಿಯಾಗಿದ್ದರೂ ಜನಸಾಮಾನ್ಯರ ಜತೆಗೆ ಮುಕ್ತವಾಗಿ ಬೆರೆತು ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳ್ಳುತ್ತ ಅವರಿಂದ ಅಲ್ಲಿ ಸಂಸ್ಕೃತಿ-ಜೀವನ ಕ್ರಮಗಳ ಜತೆಗೆ ಲೇಖಕರು ತಿಳಿದುಕೊಳ್ಳುತ್ತಾರೆ. ಹೀಗೆ ಅವರಿಗೆ ಸಿಕ್ಕಿದ ಮೊದಲ ರಂಗ ಸಂಗಾತಿ ಉಣ್ಣಿ ಕೃಷ್ಣನ್ – ಅವರು ತಿಂಡಿ ತಿನ್ನುವ ಹೋಟೆಲಿನಲ್ಲಿ ಕೆಲಸ ಮಾಡುವ ಹುಡುಗ. ಉಣ್ಣಿಯ ಜತೆಗೆ ಅವರು ಹಲವಾರು ವೈಶಿಷ್ಟ್ಯಪೂರ್ಣ ನಾಟಕಗಳನ್ನು ನೋಡುತ್ತಾರೆ.

ಕೇರಳದ ಪ್ರೊಫೆಶನಲ್ ನಾಟಕಗಳ ಸಭ್ಯ ಕ್ರಮಗಳು, ಅವರು ಸಣ್ಣ ಸಣ್ಣ ಸೂಕ್ಷ್ಮಗಳ ಕಡೆಗೂ ಹರಿಸುವ ಶ್ರಮ, ತೆಗೆದುಕೊಳ್ಳುವ ಎಚ್ಚರಿಕೆ, ರಂಗ ಪರಿಕರಗಳನ್ನು ಅವರು ಜೋಡಿಸುವ ರೀತಿ, ಅವರಲ್ಲಿ ಮೆಚ್ಚುಗೆ ಮೂಡಿಸುತ್ತವೆ ಮಾತ್ರವಲ್ಲದೆ ಕನ್ನಡದ ಕಂಪೆನಿ ನಾಟಕಗಳೊಂದಿಗೆ ಹೋಲಿಸಿದಾಗ ಅವು ಎಷ್ಟೊಂದು ಮೇಲ್ದರ್ಜೆಯವು ಎಂದು ಅನ್ನಿಸುತ್ತದೆ. ‘ಚವಿಟ್ಟು ನಾಟಕಂ’ ಎಂಬ ಪಾಶ್ಚಾತ್ಯ ಶೈಲಿಯ ರಂಗ ಪ್ರಕಾರವನ್ನು ಕೇರಳದವರು ತಮ್ಮ ನಾಟಕಗಳಿಗೆ ಅಳವಡಿಸಿಕೊಂಡ ಚಾಕಚಕ್ಯತೆಯ ಬಗ್ಗೆಯೂ ಕಿರಣ್ ಇಲ್ಲಿ ಉಲ್ಲೇಖಿಸುತ್ತಾರೆ.

ಪಕ್ಕದ ‘ಮನಪ್ಪುರಂ’ ಎಂಬ ಊರಿನಲ್ಲಿ ನೋಡಿದ ‘ವೈಶಾಲಿ’, ‘ವ್ಯವಸ್ಥೆಯ ಒಳಗಿದ್ದುಕೊಂಡೇ ಸುಧಾರಣೆ ಮಾಡಬೇಕು’ ಎಂಬ ತತ್ವದ ಮೇಲೆ ನಿಂತ ಹಾಗೂ ನಂಬೂದಿರಿ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಪ್ರತಿಭಟಿಸುವ ‘ಅಡುಗೆ ಮನೆಯಿಂದ ವೇದಿಕೆಗೆ’, ಹೆಮಿಂಗ್ ವೇಯ ‘ ಮುದುಕ ಮತ್ತು ಕಡಲು’ ಕೇರಳ ಸಂಗೀತ ನಾಟಕ ಅಕಾಡೆಮಿಯವರು ಹಮ್ಮಿಕೊಂಡ ‘ದಿನಕ್ಕೊಂದು ನಾಟಕ’ ಎಂಬ ಯೋಜನೆಯಲ್ಲಿ ನೋಡಿದ ‘ಉತ್ತರ ರಾಮಾಯಣಂ’, ‘ಪದ್ಮಶ್ರೀ ಅಂಬಾಡಿ’ , ರಾಬಿನ್ ಹುಡ್ ನಂಥ ಪರೋಪಕಾರಿ ಕಳ್ಳ ‘ಕಾಯಂಕುಳಂ ಕೊಚ್ಚುಣ್ಣಿ’, ಕಾಳಿದಾಸ ಕಲಾಕೇಂದ್ರದವರು ಆಡಿದ ಭರ್ಜರ ಖರ್ಚಿನ ‘ಮ್ಯಾಕ್ ಬೆತ್’, ಕೇರಳದ ಸಾಂಸ್ಕೃತಿಕ ರಾಜಧಾನಿಯೆನಿಸಿದ ತ್ರಿಶ್ಶೂರಿನಲಿರುವ ‘ಕೇರಳ ಕಲಾಮಂಡಲಂ’ ನಲ್ಲಿ ನಡೆದ ‘ಇಟ್ ಫೋಕ್ ( ಕೇರಳದ ಅಂತಾರಾಷ್ಟ್ರೀಯ ರಂಗಹಬ್ಬ) ದಲ್ಲಿ ಬೇರೆ ಬೇರೆ ದೇಶಗಳ ತಂಡಗಳು ಆಡಿದ ನಾಟಕಗಳು, ಕಪ್ಪು ಪೆಟ್ಟಿಗೆ’ಯೊಳಗಿನ ಗೊಂಬೆಯಾಟಗಳು, ಬಯಲು ರಂಗಸ್ಥಳದಲ್ಲಿ ನೋಡಿದ ಬಂಗಾಳಿ ನಾಟಕ ‘ಅಂಧಯುಗ’ ಮತ್ತು ಜರ್ಮನಿಯ ತಂಡದ ‘ಕ್ಲೌನ್ ಶೋ’-ಹೀಗೆ ಅವರು ನೋಡೊದ ನಾಟಕಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಆಲುವದಲ್ಲಿ ಅವರಿದ್ದ ಮನೆಯಲ್ಲೇ ಪರಿಚಯವಾದ ಬಾಬು ಎಂಬ ಕಲಾವಿದನ ಮೂಲಕ ‘ಓಟ್ಟಂ ತುಳ್ಳಲ್’ ಎಂಬ ವೈಶಿಷ್ಟ್ಯತನ ಕಲಾಪ್ರಕಾರದ ಬಗ್ಗೆ ಕೇಳಿದ ಲೇಖಕರಿಗೆ ಅದನ್ನು ನೋಡುವ ಅವಕಾಶವೂ ಸಿಗುತ್ತದೆ. ಮುಂದೆ ಕೇರಳದ ಐಕಾನ್ ಎನ್ನಿಸಿದ ಕಥಕಳಿಯ ‘ಅಟ್ಟಕಥಾ’ ವನ್ನೂ ನೋಡಿ ಕಣ್ಣು ತುಂಬಿಸಿಕೊಳ್ಳತ್ತಾರೆ. ಮುಂದೆ ಉತ್ತರ ಕೇರಳದ ಕಣ್ಣೂರಿಗೆ ವರ್ಗವಾದ ನಂತರ ಕಾಞ್ಞಂಗಾಡು ಮತ್ತು ಕಲ್ಲಿಕೋಟೆಗಳಲ್ಲಿ ವಾರಾಂತ್ಯಗಳಂದು ಇನ್ನಷ್ಟು ವೈವಿಧ್ಯಗಳನ್ನು ನೋಡುತ್ತಾರೆ.

ಅಲ್ಲಿನ ಪ್ರಾದೇಶಿಕ ವೈಶಿಷ್ಟ್ಯದ ತೆಯ್ಯಂ ಕಥೆಯಿರುವ ‘ತೀ ಪೋಟ್ಟನ್’ ಎಂಬ ನಾಟಕವನ್ನು ತಂಡವು ಆಧುನಿಕ ವಿದ್ಯಮಾನಗಳೊಂದಿಗೆ ಬೆಸೆದು ಹೇಳುವ ರೀತಿ ಅವರಿಗೆ ಆಕರ್ಷಣೀಯವಾಗಿ ಕಾಣುತ್ತದೆ. ಕರ್ನಾಟಕದ ಜನತೆಗೆ ಚಿರಪರಿಚಿತರಾಗಿರುವ ಸ್ಯಾಂಕುಟ್ಟಿ ಪಟ್ಟಾಂಕರಿ ನಿರ್ದೇಶನ ‘ಮಲಾಲಾ’ ನಾಟಕದಲ್ಲಿ ಒಂಬತ್ತನೆಯ ತರಗತಿಯ ಚಿಕ್ಕ ಹುಡುಗಿಯ ಅದ್ಭುತ ನಟನೆ, ಪ್ರಸಿದ್ಧ ಕಥೆಗಾರ ವೈಕ್ಕಂ ಮೊಹಮ್ಮದ್ ಬಷೀರರ ‘ಪ್ರೇಮ ಪತ್ರ’ ಎಂಬ ಕಥೆಯ ನಾಟಕ ರೂಪದ ಪ್ರಸ್ತುತಿಗಳು ಅವರ ಮನಸೆಳೆಯುತ್ತವೆ.

ಮಕ್ಕಳ ನಾಟಕ ಕ್ಷೇತ್ರದಲ್ಲಿ ತಾವು ಕಟ್ಟಿಕೊಂಡ ತಂಡದ ಮೂಲಕ ಬಹಳಷ್ಟು ದುಡಿದಿರುವ ಕಿರಣ್ ಅವರಿಗೆ ಕೇರಳದಲ್ಲಿ ಮಕ್ಕಳ ನಾಟಕ ನೋಡಲು ಸಿಗುವುದಿಲ್ಲವೇನೋ ಎಂದು ನಿರಾಶೆ ಪಡುತ್ತಿದ್ದಂತೆ ಅವರು ಹಿಂದಿರುಗುವುದಕ್ಕೆ ಒಂದು ತಿಂಗಳಿರುವಾಗ ಕಲಿಕೋಟೆಯಲ್ಲಿ ಶಾಲಾ ಮಕ್ಕಳಿಗಾಗಿ ನಡೆದ ‘ಕಲೋತ್ಸವ’ದ ಸಮೃದ್ಧ ಔತಣ ಸಿಗುತ್ತದೆ. ಪ್ರತಿವರ್ಷವೂ ಶಿಕ್ಷಣ ಇಲಾಖೆಯು ನಡೆಸುವ ಈ ಹಬ್ಬದಲ್ಲಿ ಕಲಾವಿದ ಮಕ್ಕಳ ಸಂಭ್ರಮ, ಸಡಗರ, ಉತ್ಸಾಹದ ಓಡಾಟ, ನಾಟಕಗಳ ನಿರ್ವಹಣೆಯ ನೈಪುಣ್ಯ, ಅಚ್ಚುಕಟ್ಟುತನ, ಪ್ರತಿಭೆಗಳನ್ನು ಲೇಖಕರು ಅಷ್ಟೇ ಸಂಭ್ರಮದಿಂದ ಕೃತಿಯಲ್ಲಿ ಚಿತ್ರಿಸುತ್ತಾರೆ. ಅಲ್ಲಿ ಮಕ್ಕಳ ನಾಟಕಗಳನ್ನು ನೊಡುವುದು ಮಾತ್ರವಲ್ಲದೆ ಮಕ್ಕಳೇ ಸಕ್ರಿಯವಾಗಿ ಭಾಗವಹಿಸುವ ಚರ್ಚೆಯಲ್ಲಿ ಪಾಲ್ಗೊಂಡು ಅವರೊಂದಿಗೆ ಬೆರೆಯುವ ಅವಕಾಶವೂ ಲೇಖಕರಿಗೆ ಬೋನಸ್ ಆಗಿ ಸಿಗುತ್ತದೆ.

ಇಡೀ ಕೃತಿಯ ಆಕರ್ಷಣೆಯಿರುವುದ ಕಿರಣ್ ಅವರ ಸುಲಭ -ಸುಂದರ ಕಥನ ಶೈಲಿಯಲ್ಲಿ. ಕೇರಳದಲ್ಲಿ ಅವರ ಇರುವಿಕೆಯ ದೇಶ-ಕಾಲಗಳಿಗೆ ಅವುಗಳದ್ದೇ ಆದ ಪರಿಮಿತಿಯಿದ್ದರೂ ಸಿಕ್ಕಿದ ಅವಕಾಶಗಳನ್ನು ಇಡಿಯಾಗಿ ಬಳಸಿಕೊಂಡದ್ದು ಮಾತ್ರವಲ್ಲದೆ ಎಲ್ಲವನ್ನೂ ಸೂಕ್ಷ್ಮ ವಿವರಗಳೊಂದಿಗೆ ಓದುಗರಿಗೆ ಒದಗಿಸಿಕೊಟ್ಟದ್ದು ಅವರ ಹೆಗ್ಗಳಿಕೆ. ಸ್ವತಃ ಯಕ್ಷಗಾನದ ದಿಗ್ಗಜರ ನಾಡಿನಲ್ಲಿ ಬೆಳೆದು ಬಂದವರಾಗಿ, ನಾಟಕ ನಿರ್ದೇಶಕರಾಗಿ , ಸಾಹಿತ್ಯ-ರಂಗಭೂಮಿ-ಮತ್ತು ಸಾಂಸ್ಕೃತಿಕ ಲೋಕದೊಳಗಿನ ಎಲ್ಲ ಹಾಸು-ಹೊಕ್ಕುಗಳನ್ನು ಬಲ್ಲವರಾಗಿ, ಕೇರಳದಲ್ಲಿ ಪಡೆದದ್ದನ್ನು ಸಮಗ್ರವಾಗಿ ಗ್ರಹಿಸಲು ಮತ್ತು ಸಂಗ್ರಹಿಸಲು ಅವರಿಗೆ ಸಾಧ್ಯವಾಗಿದೆ. ಆದ್ದರಿಂದಲೇ ಅವರು ನೋಡಿದ ಅಷ್ಟೂ ಪ್ರದರ್ಶನಗಳ ಮೂಲೆ-ಮೊಡಕುಗಳಿಂದ ವಿವರಗಳನ್ನತ್ತಿ ತಂದು ರಂಗವನ್ನು ಅವರು ಬಳಸಿಕೊಳ್ಳುವ ವಿಧಾನವನ್ನು ನಮ್ಮ ಮುಂದಿಡುವುದು ಸಾಧ್ಯವಾಗಿದೆ.

ಓರ್ವ ಉತ್ತಮ ಅಧ್ಯಾಪಕರಂತೆ ಪ್ರತಿಯೊಂದಕ್ಕೂ ಉದಾಹರಣೆಗಳನ್ನು ಕೊಡುತ್ತ, ಕನ್ನಡದ ಸಂದರ್ಭಗಳೊಂದಿಗೆ ಮತ್ತು ಸಂಸ್ಕೃತಿಯೊಂದಿಗೆ ಹೋಲಿಸಿ ನೋಡುತ್ತ ವಿಷಯಗಳನ್ನು ಕಣ್ಣಿಗೆ ಕಟ್ಟುವಂತೆ ಕಿರಣ್ ವಿವರಿಸಬಲ್ಲರು. ಸಂಬಂಧಗಳನ್ನಿಟ್ಟುಕೊಳ್ಳುವ ವಿಚಾರದಲ್ಲಿ ಕೇರಳಿಗರ ಸಹೃದಯ ಸ್ಪಂದನ, ಸರಳತೆಗಳ ಬಗ್ಗೆ ಮಾತನಾಡುತ್ತ, ನಾಟಕದ ಪ್ರದರ್ಶನ ಭವನಗಳಲ್ಲಿ ವಿಐಪಿ ಸೀಟುಗಳನ್ನು ಕಾದಿರಿಸುವ ಕ್ರಮವೇ ಇಲ್ಲವೆಂಬ ಕೇರಳದವರ ಸಮತಾವಾದಿ ಧೋರಣೆಗೆ ತಾವು ಮನಸೋತದ್ದನ್ನು ಅವರು ಹೇಳುವಾಗ ಆ ಮಾತು ಹೃದಯಸ್ಪರ್ಶಿಯಾಗಿ ನಮ್ಮನ್ನು ತಟ್ಟುತ್ತದೆ.

ಕೇರಳದಲ್ಲಿ ಜಲಪ್ರಳಯವಾದ ಸಂದರ್ಭದಲ್ಲಿ ಲೇಖಕರ ಹೃದಯ ಮಿಡಿದು ಅವರು ಬರೆದ ಕವನ ‘ದೇವರ ನಾಡಿನಲ್ಲಿ ಎಲ್ಲವೂ ಸರಿಯಾಗಿದ್ದರೆ..’ ಲೇಖಕರ ಹೃದಯವಂತಿಕೆಗೆ ಸಾಕ್ಷಿಯಾಗುತ್ತದೆ. ಕೃತಿಯ ಕೊನೆಯ ಭಾಗದಲ್ಲಿ ಬರುವ ಲೇಖಕರ ಸಂಬಂಧಿಯಾದ ಅಜ್ಜಿ ತನ್ನ ತೌರು ಮನೆಗೆ ನಲುವತ್ತು ವರ್ಷಗಳಿಂದ ಹೋಗಲಾಗದೆ ಮರೆತೇ ಬಿಟ್ಟ ವಿಚಾರ ಕೇಳಿ ಲೇಖಕರು ಪಯ್ಯನ್ನೂರಿಗೆ ಹೋಗಿ ಅಜ್ಜಿಯ ತೌರಿನ ಬಂಧುಗಳನ್ನುಪತ್ತೆ ಹಚ್ಚಿ ಎಲ್ಲರ್ರನ್ನೂ ಒಂದು ಮಾಡಿದ ಕಥೆ ಅತ್ಯಂತ ಹೃದ್ಯವಾಗಿದ್ದು ನಾಟಕೀಯ ಗುಣಗಳನ್ನು ಹೊಂದಿದೆ.

‘ರಂಗಕೈರಳಿ’ 25 ಅಧ್ಯಾಯಗಳನ್ನೊಳಗೊಂದ 120 ಪುಟಗಳ ಒಂದು ಕೃತಿ. ಪ್ರತಿಯೊಂದು ಅಧ್ಯಾಯಕ್ಕೂ ಅವರು ಕೊಡುವ ಶೀರ್ಷಿಕೆ ಒಳಗಿನದನ್ನು ಓದಲು ನಮ್ಮನ್ನು ಪ್ರೇರೇಪಿಸುವಂತಿದೆ. ‘ಡ್ರಮಾಟಿಕ್ ಚಾಯ’ ‘ಪದ್ಮಶ್ರೀ ತಂದ ಆನೆ,’ ‘ಕೊಚ್ಚುಣ್ಣಿಗೊಂದು ಟೆಂಪಲ್,’ ‘ಬಯಲಲಿ ಬೆರಗಾದೆ,’ ‘ಪೆಟ್ಟಿಗೆಯಲ್ಲಿ ಪಪೆಟ್ರಿ,’ ‘ಅಪರೇಷನ್ ಅಜ್ಜಿಮನೆ’ ಇತ್ಯಾದಿ. ಕೇರಳದ ಕಲೆ-ಸಂಸ್ಕೃತಿಗಳಿಗೆ ಸಂಬಂಧ ಪಟ್ಟ ಯಾವುದೇ ವಿಚಾರ ಪ್ರಸ್ತಾಪವಾದಾಗಲೂ- ಕಥಕಳಿ, ಓಟ್ಟಂ ತುಳ್ಳಲ್, ಕಾಯಂಕುಳಂ ಕೊಚ್ಚುಣ್ಣಿ, ತ್ರಿಶ್ಶೂರು ಪೂರಂ, ವೈಕ್ಕಂ ಮೊಹಮ್ಮದ್ ಬಷೀರ್ ಹೀಗೆ- ಅವುಗಳ ಹಿನ್ನೆಲೆಯ ಕಥೆ ಹಾಗೂ ವಿವರಣೆಗಳನ್ನು ಕೇಳಿ ತಿಳಿದು ವಿವರಿಸಿರುವುದು ಲೇಖಕರ ಶ್ರದ್ಧೆ-ಪರಿಶ್ರಮಗಳನ್ನು ತೋರಿಸುತ್ತದೆ.

ಕೃತಿಯ ಉದ್ದಕ್ಕೂ ಗಂಭೀರ ಶೈಲಿಯ ಗ್ರಾಂಥಿಕ ಕನ್ನಡವನ್ನು ಉಪಯೋಗಿಸದೆ ನಾವು-ನೀವು ಸರಳವಾಗಿ ಮಾತನಾಡುವಂತೆ ಪದಗಳನ್ನು ‘ಕಟ್’ ಶೈಲಿಯಲ್ಲಿ- ಹಾಗೂ ನಡುನಡುವೆ ಇಂಗ್ಲಿಷ್ ಪದಗಳನ್ನೂ ಯಾವುದೇ ಮಡಿವಂತಿಕೆಯಿಲ್ಲದೆ ಬಳಸುತ್ತ ಹೋಗುವ ಲೇಖಕರ ‘ನ್ಯಾರೇಟಿವ್’ ಶೈಲಿ ತುಂಬಾ ಆಪ್ತವಾಗುತ್ತದೆ.

ಸಾಂದರ್ಭಿಕವಾಗಿ ಅಲ್ಲಲ್ಲಿ ನೀಡಿರುವ ಚಿತ್ರಗಳು ಕೃತಿಯ ಅಂದವನ್ನು ಹೆಚ್ಚಿಸಿವೆ. ಹೀಗೆ ಮೊದಲ ಪುಟದಲ್ಲಿ ಜಿ.ಎನ್.ಮೋಹನ್ ಎಸೆದ ‘ರಂಗ ಪ್ರೀತಿ ಹೆಚ್ಚಾಗದಿದ್ದರೆ ಹೇಳಿ’ ಎಂಬ ಸವಾಲಿನಲ್ಲಿ ಈ ಕೃತಿ ಖಂಡಿತಾ ಗೆಲ್ಲುತ್ತದೆ.

‍ಲೇಖಕರು Avadhi

September 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಕಿರಣ್ ಭಟ್

    ಥ್ಯಾಂಕ್ಯೂ ಅವಧಿ.
    ಥ್ಯಾಂಕ್ಯೂ ಪಾರ್ವತಿ ಐತಾಳ್ ಮೇಡಮ್.
    ಥ್ಯಾಂಕ್ಯೂ ‘ಬಹುರೂಪಿ’

    ಪ್ರತಿಕ್ರಿಯೆ
  2. ರೇಣುಕಾ ರಮಾನಂದ

    ಪಾರ್ವತಿ ಮೇಡಂ ತುಂಬ ಚಂದ ಬರೆದಿರುವಿರಿ.ಕೈರಳಿ ಒಳ್ಳೆಯ ಚಿತ್ರಕ ಶಕ್ತಿಯ ಪುಸ್ತಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: