‘ಬಸವಣ್ಣ’ ಕೃತಿ ವಿಚಾರಕ್ರಾಂತಿಗೆ ಆಹ್ವಾನ

ಡಾ ಎಂ ವೇದಾಂತ ಏಳಂಜಿ

ವಿಶ್ವಕ್ಕೆ ಮಾದರಿಯಾಗಬೇಕಿದ್ದ ಬಸವಧರ್ಮವು ವೈದಿಕಶಾಹಿಗೆ ಸಿಲುಕಿ ಜಾತಿಯಾಗಿ ರೂಪಗೊಂಡಿದೆ. ಬಸವನ ಮೂಲ ಆಶಯವನ್ನು ಮರೆತು ಶೋಷಕ ಸನಾತನ ಪರಂಪರೆಯನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಬಸವತತ್ವದ ಪರಿಕಲ್ಪನೆಯನ್ನು, ಮಾನವೀಯ ಮೌಲ್ಯಗಳನ್ನು ಮತ್ತು ಆರೋಗ್ಯವಂತ ಸಮಾಜವನ್ನು ಕಾಣುವ ಸಲುವಾಗಿ ಕನ್ನಡದಲ್ಲಿ ಬಸವಣ್ಣನನ್ನು ಕುರಿತು ಅನೇಕ ಕೃತಿಗಳು ರಚನೆಯಾಗಿವೆ. ಅವುಗಳಲ್ಲಿ ಹಲವು ಕೃತಿಗಳು ವಚನಗಳ ವಿಶ್ಲೇಷಣೆ ಒತ್ತುಕೊಟ್ಟಿವೆ.

ಕೆಲವು ಅರ್ಥೈಸುವ ನೆಪದಲ್ಲಿ ಬಸವಧರ್ಮವನ್ನು ಮರೆಮಾಚುವ ಮತ್ತು ವೈದಿಕದ ಭಾಗವೆಂಬಂತೆ ಬಿಂಬಿಸಲಾಗಿದೆ. ಇಂತಹ ವಿಚಾರಗಳಿಂತಲೂ ಭಿನ್ನವಾಗಿ ಶರಣಕ್ರಾಂತಿಯ ಮೂಲ ಆಶಯಗಳನ್ನು ತಿಳಿಯಪಡಿಸುವ ಉದ್ದೇಶದಿಂದ ‘ಬಸವಣ್ಣ’ (ಆನು ಒಲಿದಂತೆ ಹಾಡುವೆ) ಎನ್ನುವ ಕೃತಿಯನ್ನು ಡಾ.ಅಮರೇಶ ನುಗಡೋಣಿ ಮತ್ತು ಡಾ.ನಂದೀಶ್ವರ ದಂಡೆ ಅವರು ಹೊರತಂದಿದ್ದಾರೆ.

ಕನ್ನಡದ ಸಾಕ್ಷಿಪ್ರಜ್ಞೆಯಂತಿರುವ ಲೇಖಕರಿಂದ ಬರೆಯಿಸಿದ ಇಲ್ಲಿನ ಬರಹಗಳು ವಚನಗಳ ವಿಶ್ಲೇಷಣೆಯನ್ನು ಹೊರತು ಪಡಿಸಿ, ವಚನಗಳ ಮೂಲಕ ಕಂಡುಕೊಂಡ ಬಸವತತ್ವದ ಆಶಯಗಳನ್ನು ಕಟ್ಟಿಕೊಟ್ಟಿವೆ. ಅಮರೇಶ ನುಗಡೋಣಿಯವರ ಮೌಲ್ವಿಕ ಮುನ್ನುಡಿಯೊಂದಿಗೆ ಆರಂಭವಾಗುವ ಈ ಕೃತಿಯಲ್ಲಿ ಒಟ್ಟು ೨೦ ಲೇಖನಗಳಿದ್ದು, ೩ ಸಂದರ್ಶನಗಳನ್ನು ಒಳಗೊಂಡಿದೆ. ಲೇಖನಗಳ ಸಂಗ್ರಹ ವಿಧಾನದಲ್ಲಿ ಹಲವು ವಿಶಿಷ್ಟತೆಗಳಿವೆ.

ಎನ್.ಜಿ.ಮಹಾದೇವಪ್ಪ, ಟಿ.ಆರ್.ಚಂದ್ರಶೇಖರ್, ಎಸ್.ಜಿ.ಸಿದ್ಧರಾಮಯ್ಯ, ವೀರಣ್ಣ ದಂಡೆ ಮತ್ತು ಬಸವರಾಜ ಕಲ್ಗುಡಿ ಅವರ ಲೇಖನಗಳು ಆಧುನಿಕ ಕಾಲದ ಬಸವ ಧರ್ಮವನ್ನು ಟೀಕಿಸುತ್ತಲೇ ಲಿಂಗಾಯತ ಧರ್ಮಕ್ಕೂ ವೀರಶೈವಕ್ಕೂ ನಡುವಿನ ವ್ಯತ್ಯಾಸಗಳನ್ನು ಗುರುತಿಸುತ್ತಾ ನೈಜ ಬಸವತತ್ವವನ್ನು ಪ್ರತಿಪಾದಿಸುತ್ತವೆ.

ಬಸವಣ್ಣನ ಆಶಯಗಳನ್ನು ಪ್ರಸ್ತುತ ಕಾಲಕ್ಕೆ ಗ್ರಹಿಸುವ ಮತ್ತು ಅವರ ಚಿಂತನೆಗಳನ್ನು ಗುರುತಿಸುವ ಬರಹಗಳಾಗಿ ಎಚ್.ಎಸ್.ಶಿವಪ್ರಕಾಶ್, ರಹಮತ್ ತರೀಕೆರೆ, ರಾಜೇಂದ್ರ ಚೆನ್ನಿ, ಮಲ್ಲಿಕಾಜುನ ಮೇಟಿ ಅವರದು ಕಂಡುಬರುತ್ತವೆ.

ವಚನಸಾಹಿತ್ಯದ ಅನುಭಾವಿಕ ನೆಲೆಯ ಬರಹವಾಗಿ ಜಯಶ್ರೀದಂಡೆ, ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಫ್ರಭು ಬೆಟ್ಟದೂರು, ಬಸವರಾಜ ಮಲಶೆಟ್ಟಿ ಅವರದು ಒಂದು ಆಯಾಮವಾದರೆ, ವಚನಯುಗದ ಚಾರಿತ್ರಿಕತೆಯನ್ನು ಎಚ್.ಟಿ.ಪೋತೆ, ಎನ್.ಜಿ.ಮಹಾದೇವಪ್ಪ ಮತ್ತು ವೀರಣ್ಣ ದಂಡೆ ಬರಹಗಳಲ್ಲಿ ಕಾಣಬಹುದು. ವಚನಗಳಲ್ಲಿ ಅಡಗಿರುವ ವೈಚಾರಿಕ ವಿಷಯಗಳು ವರ್ತಮಾನ ಕಾಲಕ್ಕೆ ಸಹಕಾರಿಯಾಗುವ ಬಗೆಯನ್ನು ಬಸವರಾಜ ಮಲಶೆಟ್ಟಿ, ಅಲ್ಲಮಪ್ರಭು ಬೆಟ್ಟದೂರು, ನಂದೀಶ್ವರ ದಂಡೆ ಅವರ ಬರಹಗಳು ಚರ್ಚಿಸುತ್ತವೆ.

ಮಾರ್ಕ್ಸ್ವಾದಿ, ಸ್ತ್ರೀವಾದಿ ನೆಲೆಯಲ್ಲಿ ಸಿ.ವೀರಣ್ಣ ಮತ್ತು ವಿನಯಾ ಒಕ್ಕುಂದ ಅವರ ಬರಹಗಳಿದ್ದರೆ, ಅಮರೇಶ ನುಗಡೋಣಿ ಮತ್ತು ಬಸವರಾಜ ಕಲ್ಗುಡಿ ಅವರದು ವಚನಯುಗದ ತಾತ್ವಿಕ ಪರಿಕಲ್ಪನೆಯನ್ನು ಒಳಗೊಂಡಂತೆ ಸಾಮಾಜಿಕ ಸಮಾನತೆಯ ತತ್ವಗಳನ್ನು ಪ್ರತಿನಿಧಿಸುವ ಬರಹಗಳಾಗಿವೆ. ಇಲ್ಲಿನ ಬಹುತೇಕ ಲೇಖನಗಳು ಬಸವಣ್ಣನನ್ನು ಸೀಮಿತ ಸಮುದಾಯಕ್ಕೆ ನೆಲೆಗೊಳಿಸಿರುವುದನ್ನು ಖಂಡಿಸುತ್ತವೆ. ಮಾನವೀಯ ಮೌಲ್ಯಗಳ ಬಸವಧರ್ಮದ ಸಂದೇಶಗಳನ್ನು ತಿಳಿಯಪಡಿಸುವ, ನೈಜ ಬಸವಧರ್ಮವನ್ನು ಜಾರಿಗೆ ತರುವ ತವಕನ್ನು ವ್ಯಕ್ತಪಡಿಸುತ್ತ ಸಮ ಸಮಾನತೆಯನ್ನು ಮರುಸ್ಥಾಪಿಸುವ ಸದಾಶಯಗಳಿಂದ ಕೂಡಿವೆ.

ಆನು ಒಲಿದಂತೆ ಹಾಡುವೆ ಎಂಬಂತೆ ವಚನಯುಗದ ಶರಣರು ಎತ್ತಿದ ಪ್ರಶ್ನೆಗಳು ಈಗಲೂ ಸಮಾಜದಲ್ಲಿ ಜೀವಂತವಿದ್ದು, ಅದರ ಮಾರ್ಗದ ಬೆನ್ನು ಹಿಡಿದು ಪಯಣಿಸಬೇಕಾದ ಧ್ಯೇಯವನ್ನು ಇಲ್ಲಿನ ಲೇಖಕರು ಚರ್ಚಿಸುತ್ತಾ, ಬಸವಣ್ಣನ ಆಶಯ, ತತ್ವ ಪ್ರಣಾಳಿಕೆಗಳ ಪ್ರಸ್ತುತತೆ, ಕಲ್ಯಾಣದ ಬೆಡಗು, ಚಳವಳಿಯಲ್ಲಿ ಬಸವನ ಪಾತ್ರ, ಮಹಾಮನೆಯ ಪರಿಕಲ್ಪನೆ, ವರ್ಣವ್ಯವಸ್ಥೆ, ಮನುಷ್ಯ ಸಂಸ್ಕೃತಿಯನ್ನು ಒಳಗೊಳ್ಳುವಿಕೆ, ವೈಚಾರಿಕ ಪ್ರಜ್ಞೆ, ಕಲ್ಯಾಣ ಸಮಾಜದ ತೊಡಕು, ಮೇಲು ಜಾತಿಯವರು ಕಲಿಯಬೇಕಾದ ಪಾಠಗಳು ಮತ್ತು ದಲಿತತ್ವದ ಚಿಂತನೆಗಳು ಮುಂತಾದ ವಿಚಾರಗಳನ್ನು ಒಟ್ಟುಗೂಡಿಸಿದಂತಿದೆ.

ಇಲ್ಲಿನ ಬಹುತೇಕ ಲೇಖನಗಳು ವಚನಗಳನ್ನು ಹಿನ್ನೆಲೆಗೆ ಸರಿಸಿ ಬಸವಧರ್ಮದ ತಳಮಟ್ಟದ ಸಂದೇಶಗಳಿಗೆ ಹೆಚ್ಚಿನ ಮಹತ್ವ ನೀಡುತ್ತವೆ. ಬಡವ-ಶ್ರೀಮಂತ, ಒಡೆಯರು-ಕೂಲಿಯರು, ಅಂತ್ಯಜರು-ವಿಪ್ರರು, ಗಂಡು-ಹೆಣ್ಣು, ದಲಿತರು-ಬಲ್ಲಿದರು ಮುಂತಾದ ಅಸಮಾನತೆಯ ನೆಲೆಗಳನ್ನು ಗುರುತಿಸಿ ಈ ತೊಡಕುಗಳನ್ನು ಚರ್ಚಿಸುತ್ತವೆ.

ದುಡಿದು ತಿನ್ನುವುದು ಜನಸಾಮಾನ್ಯರಿಗೆ ಮಾತ್ರ ಸೀಮಿತವಾಗದೆ, ಶರಣರಿಗೂ ಮತ್ತು ಅವರು ದೈವವೆಂದು ನಂಬುವ ಗುರು-ಲಿಂಗ-ಜಂಗಮಗರಿಗೂ ಕಾಯಕವೇ ಶ್ರೇಷ್ಠ ಎಂಬುದು ಬಸವಣ್ಣನ ಆಶಯವಾಗಿತ್ತು. ಈ ಆಶಯವು ವರ್ತಮಾನದ ಸಾರ್ವತ್ರಿಕವಾಗಿ ಧ್ಯೇಯವಾಗಬೇಕೆಂಬುದನ್ನು ಚರ್ಚಿಸುತ್ತವೆ.

ಬಸವಣ್ಣ ಈ ಕೃತಿಯ ಲೇಖನಗಳ ಆಶಯಗಳನ್ನು ಮತ್ತಷ್ಟು ವಿಸ್ತಾರವಾಗಿ ಗ್ರಹಿಸುವುದಕ್ಕೆ ಹೆಚ್.ಎಸ್.ರಾಘವೇಂದ್ರರಾವ್, ಓ.ಎಲ್.ನಾಗಭೂಷಣಸ್ವಾಮಿ ಮತ್ತು ಎಂ.ಎಸ್.ಆಶಾದೇವಿ ಹಿರಿಯ ವಿದ್ವಾಂಸರ ಸಂದರ್ಶನಗಳಿವೆ. ಇದನ್ನು ಬಸವರಾಜ ಸಾದರ ಅವರು ನಡೆಸಿದ್ದು, ಶರಣರ ಚಿಂತನೆಗಳು ಎಲ್ಲಾ ಕಾಲಕ್ಕೂ ಅನ್ವಯಿಸುವುದನ್ನು ಚರ್ಚಿಸಿವೆ.

ವಚನಧರ್ಮದ ತಾತ್ವಿಕತೆ, ಶರಣಯುಗದ ಪ್ರಸ್ತುತತೆ, ವರ್ತಮಾನದ ಭಾಷಾ ಗೊಂದಲಗಳಿಗೆ ವಚನ ಭಾಷೆಯ ಪರಿಹಾರ, ಶರಣ ಚಳುವಳಿ-ವಚನ ಸಾಹಿತ್ಯದ ಅಂತರಸಂಬಂಧ, ವಚನಗಳ ರಾಚನಿಕ ಸ್ವರೂಪ, ಶಬ್ಧ ಅರ್ಥಗಳ ನೆಲೆಯಲ್ಲಿ ವಚನಗಳ ನಿರ್ವಚನ ಕ್ರಮ, ಶರಣಕ್ರಾಂತಿ ಮತ್ತು ಅಂತರಾಷ್ಟ್ರೀಯ ಪ್ರಜಾತಂತ್ರದ ವ್ಯಾಪಕ ನೆಲೆ, ದಲಿತ ಚಳುವಳಿಗೆ ವಚನದ ಕೊಡುಗೆ, ವರ್ತಮಾನದ ಮಹಿಳಾ ಆಂದೋಲನಗಳು, ವಚನಯುಗದಲ್ಲಿ ಮಹಿಳೆಯರನ್ನು ಕುಟುಂಬಕ್ಕೆ, ಗಂಡಾಳ್ವಿಕೆಯ ನಿಷ್ಠೆಗೆ, ಪಾವಿತ್ರ್ಯತೆಗೆ ಸೀಮಿತಗೊಳಿಸುವ ನೆಲೆಯನ್ನು ಮತ್ತು ಮಹಿಳೆಯರಿಗೆ ನೀಡಿದ ಸ್ವಾತಂತ್ರ್ಯದ ಪರಿಕಲ್ಪನೆಯ ಅನೇಕ ಮಹತ್ವದ ಪ್ರಶ್ನೆಗಳಿಗೆ ಉತ್ತರ ಸಿಗಬಲ್ಲದು ಮತ್ತು ಬಸವತತ್ವವನ್ನು ಅರಿಯಲಿಕ್ಕೆ ಈ ಸಂದರ್ಶನಗಳು ಹೆಚ್ಚು ಸಹಕಾರಿಯಾಗುತ್ತವೆ.

ಬಸವಣ್ಣ ಕೃತಿಯು ಬಸವ ನಿರ್ಮಿತ ಲಿಂಗಾಯತ ಧರ್ಮವು ಕೇಡಿಲ್ಲದ, ಕಸುರಿಲ್ಲದ, ಹುಸಿಯಿಲ್ಲದ ವಿದ್ಯೆಯನ್ನು ಮತ್ತು ಮನುಷ್ಯರು ಒಳಗೊಳ್ಳಬೇಕಾದ ಜೀವನ ಶೈಲಿಯನ್ನು ರೂಪಿಸಿದ ಬಗೆಯನ್ನು. ಕಲ್ಯಾಣದ ಸಮಾನತೆಯ ತತ್ವವನ್ನು ಜಗದ/ಮನುಷ್ಯರ ತತ್ವಗಳನ್ನಾಗಿಸಬೇಕೆಂಬ ಹಂಬಲವನ್ನು ವ್ಯಕ್ತಪಡಿಸುತ್ತದೆ. ಆದರೆ ವರ್ತಮಾನದ ಸಂಗತಿಗಳಿಗೆ ಹೆಚ್ಚು ಮುಖಾಮುಖಿಯಾಗಿ ಸಾಗುವ ಇಲ್ಲಿನ ಲೇಖನಗಳಲ್ಲಿ ಬಸವ ಧರ್ಮದ ಆಶಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಿಳಿಸುವ ಸಾಧ್ಯತೆಯಿಂದ ತಪ್ಪಿಸಿಕೊಂಡಿದೆ. ವೈಚಾರಿಕ ಬರಹಗಳಲ್ಲಿ ಅದನ್ನು ತಪ್ಪಿಸುವುದು ಕಷ್ಟಸಾಧ್ಯ.

ಚಾರಿತ್ರಿಕ ಸಮಾನತೆಯ ಯುಗವೊಂದು ಕಲಬೆರಕೆ ಸ್ಥಿತಿಯಲ್ಲಿರುವ ಪ್ರಸ್ತುತ ಸಮಾಜವನ್ನು ಚರ್ಚಿಸುವುದು ಈ ಕಾಲದ ಅಗತ್ಯತೆಗಳಲ್ಲಿ ಒಂದು ಎಂದು ಅನಿಸದೆ ಇರದು. ಒಟ್ಟಿನಲ್ಲಿ ಶರಣರ ಸಮಾನತೆಯ ಮಹಾಮನೆಯನ್ನು ಕಾಣುವ ಮತ್ತು ಧರ್ಮ, ರಾಜಕೀಯ, ಸಂಸ್ಕೃತಿ, ಕಲೆ, ಕಾಯಕ, ಜಾತಿ ಮುಂತಾದ ಸಮಕಾಲೀನ ತೊಡಕುಗಳಿಗೆ ಬಸವಣ್ಣ ಕೃತಿಯೂ ಉತ್ತರವಾಗಬಲ್ಲ ಅಪರೂಪದ ಕೃತಿಯಾಗಿದೆ.

‍ಲೇಖಕರು Admin

June 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: