ಮಹಾಂತೇಶ ನವಲಕಲ್ ಕಂಡಂತೆ ‘ಬ್ರಾಹ್ಮಣ್ಯ’

‘ಬ್ರಾಹ್ಮಣ್ಯ’ವೆಂಬ ಅರಗಿನ ಮನೆಯೊಳಗೆ ಬ್ರಾಹ್ಮಣರು

ಮಹಾಂತೇಶ ನವಲಕಲ್

ನೀವು ಬ್ರಾಹ್ಮಣರ ಬಗ್ಗೆ ಬಹುವಾಗಿ ಮೃದುವಾಗಿದ್ದೀರಿ. ಇದು ನನ್ನ ಸ್ನೇಹಿತರನೇಕರು ಇನ್ ಬಾಕ್ಸಿಗೆ ಹಾಕಿದ ಕಮೆಂಟ್. ಇದರ ಬಗ್ಗೆ ಮೂರು ದಿನ ಮೌನವಾಗಿ ಮತ್ತೆ ಯೋಚಿಸಹತ್ತಿದೆ. ಇಲ್ಲಿ ಬ್ರಾಹ್ಮಣ್ಯ ಎನ್ನುವುದು ಒಂದು ಸಿದ್ದಾಂತ ಹಾಗು ಬ್ರಾಹ್ಮಣ ಎನ್ನುವದು ವ್ಯಕ್ತಿ. ಹೀಗೆ ಇದನು ವಿಂಗಡಿಸದೆ ನಾವು ಮುಂದೆ ಹೋಗಲು ಸಾಧ್ಯವಿಲ್ಲ ಎನ್ನಿಸುತ್ತದೆ, ಬ್ರಾಹ್ಮಣ್ಯ ಮನುಷ್ಯತ್ವದ ಅದಃಪತನದ ಸಂಕೇತ, ಚಾತುರ್ವರ್ಣವನ್ನು ಪೋಷಿಸುವ ಮಾಧ್ಯಮ ಇದನು ಇನ್ನೂ ಮುಂದೆ ಹೋಗಿ ವೈದಿಕ ಧರ್ಮಾಚರಣೆ ಎನ್ನಬಹುದು. ಆದರೆ ಬ್ರಾಹ್ಮಣ ವಯಕ್ತಿಕ.

ಕೆಲ ಬ್ರಾಹ್ಮಣರು ಬಲವಂತವಾಗಿ ತಮ್ಮ ಮೇಲೆ ಹೇರಿದ ಬ್ರಾಹ್ಮಣ್ಯದ ನೊಗವನು ಬೀಸಾಕಿ ಮುಂದೆ ಸಾಗಿದರೂ ಮತ್ತೆ ಅದು ಹೆಗಲೇರುತ್ತದೆ, ಬಸವ ಹೇಳಿದಂತೆ ಆನು ಹಾರುವನೆಂದರೆ ನಗುವ ನಮ್ಮ ಕೂಡಲ ಸಂಗಮದೇವ, ಬಸವನಿಗೂ ತಾನು ಹುಟ್ಟಿನಿಂದ ಬ್ರಾಹ್ಮಣನಾದರೂ ಪದೇ ಪದೇ ತಾನು ಬ್ರಾಹ್ಮಣ್ಯದಿಂದ ವಿಮುಕ್ತ ಎಂದು ಘೋಷಿಸಿಕೊಳ್ಳುವ ಅನಿವಾರ್ಯತೆಯೂ ಇದೆ, ಪ್ರಚಲಿತದಲಿ ಇಲ್ಲಿ ಮೂರು ಗುಂಪುಗಳಿವೆ.

ಒಂದು ಕರ್ಮಠರ ಗುಂಪು ಅದಕೆ ರಾಜಕೀಯದ ಬಲವೂ ಇದೆ, ಅದು ನಮ್ಮ ಭಾರತದಲ್ಲಿ ಮತ್ತೆ ಹಳೆಯ ವ್ಯವಸ್ಥೆಯನು ಪುನರುತ್ಥಾನ ಮಾಡಲು ಶ್ರಮಿಸುತ್ತದೆ. ಇದಕೆ ಈಗ ದೊಡ್ಡ ಶಕ್ತಿಯೂ ಇದೆ. ತಾತ್ಕಾಲಿಕವಾಗಿ ಅದರ ಅಜೆಂಡಾದಲ್ಲಿ ಕೆಲ ಸೂಕ್ಷ್ಮ ವಿಷಯಗಳನು ಹೊರಗಿಡಲಾಗಿದೆ.

ಇನ್ನು ಎರಡನೆ ಗುಂಪು ಇದಕ್ಕೆ ವಿರುದ್ಧವಾಗಿ ಇದೆ ಅಂದರೆ ಮೇಲಿನ ಗುಂಪಿನ ವಿರುದ್ದವಾಗಿ ಈಜುತ್ತದೆ. ಜಾತ್ಯಾತೀತ ನಿಲುವು ಪ್ರಗತಿಪರ ಚಿಂತನೆ ಇವರ ಪ್ರಮುಖ ಸಿದ್ದಾಂತ, ಮೂರನೆಯ ಗುಂಪು ಗಾಂಧೀ ಪ್ರಣೀತ ಸಮಾಜವನು ಒಪ್ಪಿಕೊಂಡು ಕಂದಾಚಾರ ಅಸಹಿಷ್ಣುತೆ ವಿರೋಧಿಸುತ್ತದೆ. ಉದಾಹರಣೆ ಮಾಸ್ತಿ, ಗೊರೂರು, ಪುತಿನ, ನಮ್ಮ ದೊರೆಸ್ವಾಮಿಗಳು ಇದರಲ್ಲಿ ಮಾಸ್ತಿ ಹಾಗು ಪುತಿನ ಅವರು ಹೊರ ಜಗತ್ತಿಗೆ ಕರ್ಮಠರಂತೆ ಗೋಚರಿಸಿದರೂ ಅದಮ್ಯ ಮಾನವೀಯ ಸಂಕೇತದ ಸೆಲೆಯಾಗಿದ್ದರು.

ಮಾಸ್ತಿಯವರು ಜಿಲ್ಲಾ ಕಲೆಕ್ಟರ್ ಆದಾಗ ಎಷ್ಟೋ ಜನ ದಲಿತರಿಗೆ ನೌಕರಿ, ಭೂಮಿ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು, ಇಂದು ಇದು ಮೂರು ವಿಭಾಗಗಳು ಭಾರತೀಯ ಜಾತಿ ಗುರುತಿಸುವಿಕೆಯ ಕಾಲಂನಲ್ಲಿ ಬ್ರಾಹ್ಮಣರೆ, ಇಲ್ಲಿ ಇಬ್ಬರು ಬ್ರಾಹ್ಮಣ್ಯದ ನೊಗದಿಂದ ದೂರ ಬಂದರೂ ವಿರೋಧಿಸಿದರೂ ಅವರು ಸಹ ಗೆಳೆಯ ಪೀರ್ ಭಾಷಾ ಕವನದ ಸಾರದಂತೆ ‘ಅಕ್ಕ ಸೀತೆ ನಿನ್ನ ಹಾಗೆ ನಾನೂ ಶಂಕಿತೆ’ಯ ಗಾಳಕ್ಕೆ ಸಿಕ್ಕವರೆ, ಇಂಥಹ ಅನುಭವವನ್ನು ಅನೇಕ ಬ್ರಾಹ್ಮಣರು ಹೇಳಿಕೊಂಡಿದ್ದಾರೆ.

ನಾವು ಎಷ್ಠು ಪ್ರಗತಿಪರರಾದರೂ ನಮ್ಮ ಮೇಲೆ ಅನುಮಾನವೆ ಎಂದು ಕೆಲವರ ಅಳಲು, ತನ್ನ ಎಂಟನೆ ವಯಸ್ಸಿನಿಂದಲೂ ಬ್ರಾಹ್ಮಣ್ಯವನ್ನು ವಿರೋಧಿಸಿ ಬ್ರಾಹ್ಮಣದ ಪ್ರಥಮ ಸಂಕೇತವಾದ ಜನಿವಾರ ಹರಿದು ತನ್ನ ಜೀವಿತದ ಕೊನೆಯವರೆಗೂ ಬ್ರಾಹ್ಮಣ್ಯದ ವಿರುದ್ದ ಹೋರಾಡಿದ ಬಸವ ತನ್ನ ಅನೇಕ ವಚನಗಳಲಿ ಬ್ರಾಹ್ಮಣ್ಯದ ವ್ಯವಸ್ಥೆಯನ್ನು ಕುಟುಕಿದ್ದಾನೆ.

ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಗೌತಮನ ಗೋವಧೆಯಾಯ್ತು
ಬಲಿಗೆ ಬಂಧನ ಕರ್ಣನ ಕವಚ ಹೋಯಿತು
ನಾಗಾರ್ಜುನನ ತಲೆ ಹೊಯಿತ್ತು
ದೇವ ಭಕ್ತನೆಂದು ನಂಬಿದ ಕಾರಣ
ಕೂಡಲ ಸಂಗಮ ದೇವನ ಶರಣರು
ಕೈಲಸವಾಸಿಗಳಾಗಿ ನಿತ್ಯ ಮುಕ್ತರಾದರು
ಇದು ಬಸವನ ನಿಲವು

ಬ್ರಾಹ್ಮಣ್ಯದ ಮೂಲ ಭಂಡಾರವಾಗಿದ್ದ ವೇದ ಶಾಸ್ತ್ರಗಳ ವಿರುದ್ದ ಸಮರವನ್ನೆ ಸಾರುತ್ತಾನೆ. ಮಾದಾರ ಚನ್ನಯ್ಯನ ಮನೆಯಲಿ ಕೂಡಲ ಸಂಗಮ ಉಂಡ ದಿನ ವೇದಗಳೆಲ್ಲವೂ ಗಡಗಡ ನಡುಗಿದವು ಎನ್ನುತ್ತಾನೆ. ಇವೆಲ್ಲವೂ ಬ್ರಾಹ್ಮಣ್ಯದ ವಿರುದ್ದ ಬಸವ ದಾಖಲಾಯಿಸಿದ ವಚನಗಳು ಮನುಷ್ಯನು ನಿತ್ಯಮುಕ್ತನಲ್ಲ ಬಸವನು ಮೂಲಗುಣಗಳಿಂದ ನಿತ್ಯಮುಕ್ತನೂ ಅಲ್ಲ. ಅದಮ್ಯ ಕರುಣಾಮಯಿಯಾಗಿದ್ದ ಬಸವ ಕಾರುಣ್ಯ ಮೂರ್ತಿಯಾಗಿದ್ದ ಬಸವ ಕೂಡ ಗೋತ್ರಪುರುಷ ಪದ್ದತಿಯನ್ನು ಅದೆ ಬ್ರಾಹ್ಮಣ್ಯದಿಂದ ಕಡತೆಗುಕೊಂಡು ಮಾದಾರ ಚನ್ನಯ್ಯ ನಮ್ಮ ಗೋತ್ರ ಪುರುಷ ಎಂದು ಸಾರುತ್ತಾನೆ.

ಹಾಗೆ ನೋಡಿದರೆ ಮಾದಾರ ಚನ್ನಯ್ಯನೆ ಶರಣ ಸಂಕುಲದ ಮೂಲಪುರುಷ, ಚಿಕ್ಕಂದಿನಿಂದಲೂ ಬಸವನಿಗೆ ಬಹುವಾಗಿ ಪ್ರಭಾವ ಬೀರಿದ ಮಾದಾರ ಚನ್ನಯಂಗಳು ಮೂಲಪುರುಷನಾಗಲು ಅಡ್ಡಿಯಲ್ಲ ಆದರೆ ಗೋತ್ರಪುರುಷನಾಗಲು ಸಾಧ್ಯವಿರಲಿಲ್ಲ. ಯಾಕಂದರೆ ಗೋತ್ರ ವೆನ್ನುವದು ಕುಲದಿಂದ ಹೊಡೆದು ಬಂದಿದ್ದು ಕುಲಗೋತ್ರ ಎಂದು ನಾವು ಸಾಮಾನ್ಯವಾಗಿ ಉಚ್ಚರಿಸುತ್ತೇವೆ ಅದರ ರೂಪ ಇದು. ಒಬ್ಬ ದಾರ್ಶನಿಕ ಒಂದು ಸಂವಿಧಾನವನು ರೂಪಗೊಳಿಸುವಾಗ ಅಥವಾ ವಾಖ್ಯವನು ರೂಪಿಸುವಾಗ ಬಹು ಎಚ್ಚರಿಕೆಯಿಂದ ಪದ ಬಳಿಕೆ ಮಾಡುತ್ತಾನೆ.

ಇಲ್ಲಿ ಬಸವನ ಭಾವುಕತೆ ಹಾಗು ಸವಾಲೆಸಿಯುವ ಗುಣದಿಂದ ಗೋತ್ರ ಎನ್ನುವ ಶಬ್ದ ಅಲ್ಲಿಂದಲೆ ತೆಗೆದುಕೊಳ್ಳುತ್ತಾನೆ. ಇಂಥಹ ಶಬ್ದಗಳನು ಅಲ್ಲಮ ನಂಜು ಎನ್ನುತ್ತಾನೆ, ನಿಮ್ಮ ಗೋತ್ರ ಸೂತ್ರಂಗಳನು ಅಗ್ನಿಗೆ ಎಸೆಯುವೆ ಎನ್ನುವ ವಚನಕಾರರ ಧ್ವನಿಗೆ ವಿರುದ್ಧವಾಗಿ ಇಲ್ಲಿ ಗೋತ್ರ ಪುರುಷ ಹುಟ್ಟಿಕೊಳ್ಳುತ್ತಾನೆ. ಅಲ್ಲಮ ಇದನ್ನೆ ಶಬ್ದ ಸೂತಕವೂ ಎನ್ನುತ್ತಾನೆ. ಇದು ಇಲ್ಲಿ ಅಲ್ಲಮನ ಪರಿಶಿಷ್ಠ ದೇಸಿ ಪರಂಪರೆ ಬಸವನ ಶಿಷ್ಠ ಪರದೇಸಿ ಪರಂಪರೆ ಭಿನ್ನವಾದುದ್ದು.

ಅಲ್ಲಮನಿಗೆ ಪಾಳಿ ಭಾಷೆಯ ಹಿನ್ನಲೆ ಇದೆ ಬಸವನಿಗೆ ಸಂಸ್ಕೃತದ ಹಿನ್ನಲೆ ಇದೆ. ಮುಂದೆ ಅವರು ಅವರೆಡನ್ನು ತಿರಸ್ಕರಿಸಿದರೂ ನಿತ್ಯ ಬಳಿಕೆಯಲ್ಲಿ ಅವೆರಡು ಅವಾಗಾವಾಗ ನುಸಳುತ್ತವೆ. ಅದಕ್ಕಾಗಿ ಅಲ್ಲಮನ ಬಯಲು ಶೂನ್ಯ ತತ್ವಗಳು ಬೌದ್ದ ಮೀಮಾಂಸೆಯಿಂದಲೆ ಬಂದಿರುವಂತಹದು. ಬಸವನ ಗೋತ್ರ ಪುರುಷ ತನ್ನ ಮೂಲ ಕುಲದಿಂದಲೆ ಬಂದಿದ್ದು.

ಇಂತಹ ಮುಜುಗರವನು ಬಸವ ಪದೆ ಪದೆ ಎದರಿಸುತ್ತಾನೆ. ಆದರೆ ಅಲ್ಲಮನಿಗೆ ಆ ಸಮಸ್ಯೆ ಇಲ್ಲ, ಅದು ಆತನಿಗೆ ಶೂನ್ಯ ಹಾಗು ಬಯಲು ಶಭ್ದಗಳು ಹೆಚ್ಚುವರಿ ಪ್ರಯೋಜನಾತ್ಮಕ ಶಬ್ದಗಳೆ. ಆದರೆ ಇದರಿಂದ ಬಸವ ಬ್ರಾಹ್ಮಣ್ಯದ ಪರವಾಗಿದ್ದನೆಂದು ಹೇಳುವ ಅವಸರ ಈ ಶಬ್ದ ಕೊಡಲಾರದು. ಆತನ ಜೀವನವೆ ವೈದಿಕ ಜಾತಿ ವ್ಯವಸ್ಥೆಯನು ವಿರೋಧಿಸುವದಾಗಿತ್ತು. ಅಂತಹದರಲಿ ಪಾಂಡಿತ್ಯದ ಮೊಸೆಯ ನಿರ್ಧಾರ ಘನಘೋರ ತಪ್ಪಾಗುತ್ತದೆ.

ಬಸವನ ನಂತರದ ಕಾಲಘಟ್ಟದ ನೂರು ವರುಷದ ನಂತರ ಅಂದರೆ ೧೩ ನೇ ಶತಮಾನದಲಿ ಬಂದ ಶಿವ ಕವಿ ಹರಿಹರನ ರಗಳೆಯಲಿ ಬರುವ ಉರಳಿ ಪರವು ಒಂದು ಆಸಕ್ತಿಕರ ರಗಳೆ, ಇದು ಸಹ ಗೋತ್ರ ಶಬ್ದದ ದಾರಿಯಲ್ಲೆ ಸಾಗುತ್ತದೆ. ಬ್ರಾಹ್ಮಣರ ಆಹಾರ ಪದ್ದತಿಯಲಿ ಉಳ್ಳಾಗಡ್ಡಿ ಹಾಗು ಬೆಳ್ಳೊಳ್ಳಿ ನಿಷೇಧ ಈ ಎರಡು ಆಹಾರಗಳನು ಅವರು ತಾಮಸ ಪದಾರ್ಥಗಳೆಂದೆ ತೀರ್ಮಾನಿಸಿ ಈ ಎರಡು ಪದಾರ್ಥಗಳನು ಯಾರಾದರೂ ಸೇವನೆ ಮಾಡಿದರೆ ಅವರನು ಭಹಿಷ್ಕರಿಸುತ್ತಾರೆ, ಉರಳಿ ಪರವಿನಲ್ಲೂ ಸಹ ಬಸವಣ್ಣ ಮಹಾಮನೆಯಲಿ ಉಳ್ಳಾಗಡ್ಡಿ ತಿನ್ನುವದನು ನಿಷೇಧಿಸುತ್ತಾನೆ.

ಆಗ ಮಹಾಮನೆಯ ಪರಿವೀಕ್ಷನಾಗಿದ್ದ ಕಿನ್ನರಿ ಬೊಮ್ಮಯ್ಯಗಳು ಇದನು ಒಪ್ಪಿಕೊಳ್ಳುವದಿಲ್ಲ, ಪ್ರತಿಯೊಂದು ಆಹಾರದಲ್ಲೂ ಉಳ್ಳಾಗಡ್ಡಿಯನು ಬಳಸುವ ಕೆಳವರ್ಗದ ವಚನಕಾರರು ಸಹಜವಾಗೆ ಉಳ್ಳಾಗಡ್ಡೆಯ ನಿಷೇಧದಿಂದ ಸಿಟ್ಟಿಗೆದ್ದು ಕಲ್ಯಾಣ ತೊರೆಯುತ್ತಾರೆ. ಆಗ ಬಸವನಿಗೆ ಜ್ಞಾನೋದಯವಾಗಿ ಅವರನ್ನೆಲ್ಲ ಉಳ್ಳಾಗಡ್ಡಿ ತುಂಬಿದ ಬಂಡಿಯಲ್ಲಿ ಕೂಡ್ರಿಸಿಕೊಂಡು ಮೆರವಣಿಗೆ ಮಾಡಿ ಕಲ್ಯಾಣಕ್ಕೆ ಕರೆ ತರುತ್ತಾನೆ. ಇದು ತಾತ್ಪರ್ಯ ಅದರ ಬಗ್ಗೆ ನಿಕಷ ಎನ್ನುವ ನಾಟಕವನ್ನು ನಾನು ಬರೆದಿದ್ದೇನೆ.

ಆ ನಾಟಕದಲಿ ನೀಲಾಂಬಿಕೆ, ಕೆಳರ್ಗದ ವಚನಕಾರರು ಕಿನ್ನರಿ ಬೊಮ್ಮಯ್ಯ ಬಸವನನು ಕಟಕಟೆಯಲಿ ನಿಲ್ಲಿಸಿ ಪ್ರಶ್ನಿಸುತ್ತಾರೆ. ಬಸವನನು ಕಾಡುತ್ತಾರೆ ಜಂಕಿಸುತ್ತಾರೆ ಆಮೇಲೆ ನನಗೆ ಬಸವನ ಬಗ್ಗೆ ಕಾಡಿದ್ದು ಅದಮ್ಯ ಪಾಪಪ್ರಜ್ಞೆ, ಇಡೀ ಜಗತ್ತಿನ ಮೊದಲ ಕ್ರಾಂತಿಯ ದಣ್ಣಾಯಕನಾಗಿದ್ದ ಬಸವ ತಾನು ಬ್ರಾಹ್ಮಣ ಕುಲದಲ್ಲೆ ಹುಟ್ಟಿದ್ದು ತಪ್ಪಾಯ್ತಲ್ಲ, ಎಂದೆನಿಸುತ್ತದೆ ಇದನು ಒಂದು ವಚನದಲಿ ಹೇಳಿಕೊಂಡಿದ್ದಾನೆ,
ಶಿವ ಪ್ರಕಾಶರ ಮಹಾ ಚೈತ್ರ ನಾಟಕದ ಬಸವ ಒಬ್ಬ ಹೇಡಿಯಾಗಿ ಚಿತ್ರಿತವಾಗಿದ್ದಾನೆ.

ಎಲ್ಲಾ ಕೆಳವರ್ಗದ ವಚನಕಾರರನು ಸಂಘಟಿಸಿ ತನಗೆ ಅಪಾಯದ ಅರಿವು ಸಿಕ್ಕೊಡನೆ ಸಂಗಮಕೆ ಪಲಾಯನ ಮಾಡುತ್ತಾನೆ ಎಂದು ನಾಟಕದಲಿ ಶಿವ ಪ್ರಕಾಶರು ಹೇಳುತ್ತಾರೆ, ಆದರೆ ಈ ಮಾತು ತಾರ್ಕಿಕವಾಗಿ ಸರಿ ಅನ್ನಿಸಬಹುದು ಯಾಕಂದರೆ ಕಲ್ಯಾಣದ ಕೊನೆಯ ಘಟ್ಟದಲಿ ಬಸವ ಸಂಗಮದಲಿದ್ದ. ಆದರೆ ಆತನ ವಚನಗಳು ಜಾತಿರಹಿತಸಮಾಜ ಕಾಯಕ ದಾಸೋಹ ಏನು ಹೇಳುತ್ತವೆ ಎನ್ನುವದು ಬಹಾಳ ಮುಖ್ಯವಾಗುತ್ತದೆ, ಆತ ಹೇಡಿಯಾಗಲು ಸಾದ್ಯವೆ ಇಲ್ಲ. ಅಲ್ಲಿಂದ ಇಲ್ಲಿಯವರಿಗೆ ಬಸವನ ಬೆಳಕೆ ಉಳದಿದೆ ಆದರೆ ಬಸವ ಬ್ರಾಹ್ಮಣನಾದುದಕ್ಕೆ ಬ್ರಾಹ್ಮಣನೆಂಬ ಕಾರಣಕ್ಕೆ ಕಾಲ ಕಾಲಕ್ಕೆ ಕಟಕಟೆಯಲ್ಲಿ ನಿಂತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ.

ಬೇಡವೆಂದರೂ ಬೆನ್ನತ್ತುವ ಬ್ರಾಹ್ಮಣಿಕೆಯ ದೆವ್ವದಿಂದ ಕೆಲವರು ನಿಜವಾಗಿಯೂ ಬೇಜಾರಾಗಿದ್ದಾರೆ, ತಮಿಳುನಾಡಿನಲಿ ಪೆರಿಯಾರ್ ಕಾಲಘಟ್ಟದಲ್ಲಿ ಬ್ರಾಹ್ಮಣ ದ್ವೇಷ ತೀರ್ವಗೋಂಡಿತು, ಅಲ್ಲಿಯ ಬ್ರಾಹ್ಮಣ ಜನಾಂಗ ಶೂದ್ರರ ಹೆಸರುಗಳನು ಮಕ್ಕಳಿಗೆ ಇಡುವ ಸಂಪ್ರದಾಯ ಆರಂಭವಾಯಿತು, ಪೆರಿಯಾರ್ ಎಂಥಹ ಬ್ರಾಹ್ಮಣ ದ್ವೇಷಿಗಳಾಗಿದ್ದರೆಂದರೆ ಅವರ ನಾಗರ ಹಾವು ಹಾಗು ಬ್ರಾಹ್ಮಣ ಕತೆ ಬಹು ಪ್ರಸಿದ್ದವಾಗಿದೆ, ಅವರ ಅನುಯಾಯಿಯಿಗಳ ಬ್ರಾಹ್ಮಣ ದ್ವೇಷ ಎಷ್ಠು ತೀರ್ವವಾಯಿತು ಎಂದರೆ ಪ್ರಗತಿಪರ ಬ್ರಾಹ್ಮಣರನು ಗಾಂಧೀವಾದಿಗಳನು ಸಂಶಯಿಸಿದರು ಹಿಡಿದು ಚಚ್ಚಿದರು, ಮುಖ್ಯಮಂತ್ರಿಯಾಗಿದ್ದ ರಾಜಗೋಪಾಲಚಾರ್ ಬ್ರಾಹ್ಮಣರಿಗೆ ರಕ್ಷಣೆ ಕೊಡುವ ಆಶ್ವಾಸನೆ ಕೊಟ್ಟರು, ದ್ರಾವೀಡ ಚಳುವಳಿ ಜನಾಂಗೀಯ ದ್ವೇಷಕ್ಕೆ ತಿರಗುವ ಅಪಾಯದಲ್ಲಿದ್ದಾಗ ಪೆರಿಯಾರ್ ಅವರನು ಜೈಲಿಗೆ ಕಳುಹಿಸಲಾಯಿತು.

ಆಮೇಲೆ ಬಂದ ಕಾಮರಾಜ ನಾಡರ್ ಸಹ ದ್ರಾವೀಡ ಚಳುವಳಿಯನು ಹತ್ತಿಕ್ಕಲು ಪ್ರಯತ್ನ ಮಾಡಿದಂತೆಲ್ಲ ಅದು ಬಲಿಷ್ಠವಾಗುತ್ತಾ ಹೋಯಿತು. ಪೆರಿಯಾರ್ ಅವರು ನಾಲ್ಕು ದ್ರಾವೀಡ ರಾಜ್ಯಗಳನು ಪಾಕಿಸ್ತಾನದಂತೆ ಭಾರತದ ಒಕ್ಕೂಟದಿಂದ ಬೇರ್ಪಡಿಸುವ ಕನಸು ಕಂಡು ಅಣ್ಣಾದೊರೈ, ಕರುಣಾನಿಧಿ, ಎಮ್ ಜಿ ಆರ್ ಅವರಂತಹ ಶಿಷ್ಯರನು ತಯ್ಯಾರು ಮಾಡಿದರು, ಅವರ ಆಶಯ ಬ್ರಾಹ್ಮಣರನ್ನು ಈ ದ್ರಾವೀಡ ನಾಡಿನಿಂದ ಹೊರ ಹಾಕುವದೆ ಆಗಿತ್ತು.

ಆಮೇಲೆ ಡಿ ಎಮ್ ಕೆ ಅಧಿಕಾರಕೆ ಬಂದು ಅಣ್ಣಾದೊರೈ ಅವರು ಮುಖ್ಯಮಂತ್ರಿಯಾದರು. ಆದರೆ ಅಣ್ಣಾದೊರೈ ಪೆರಿಯಾರ ಅವರ ಅತ್ಯುಗ್ರ ಬ್ರಹ್ಮಾಣ್ಯದ ವಿರೋಧಕೆ ವಿರೋಧ ವ್ಯಕ್ತಪಡಿಸಿದರು. ಅವರ ಮಧ್ಯೆಯೆ ಭಿನ್ನಾಭಿಪ್ರಾಯ ಬಂದು ಅನೇಕ ಯೋಜನೆಗಳು ಹಿಂದಕೆ ಸರಿದವು, ಬ್ರಾಹ್ಮಣರು ಇಂದು ಅರಗಿನ ಮನೆಯಲಿ ವಾಸಿಸುತ್ತಾರೆ. ಎಲ್ಲಾ ನದಿಗಳು ಸಮುದ್ರ ಸೇರುವಂತೆ ಎಲ್ಲಾ ಕಿಡಿಗಳು ಬ್ರಾಹ್ಮಣ್ಯದ ಮನೆಯ ಮೇಲೆಯೇ ಬೀಳುತ್ತವೆ, ಇದರಿಂದ ಬ್ರಾಹ್ಮಣರು ಹೊರಬಂದು ಅರಗಿನ ಮನೆಯನು ಸುಟ್ಟು ಹಾಕುವ ಕೆಲಸ ಮಾಡಬೇಕಾಗಿದೆ ಅಷ್ಟೆ.

‍ಲೇಖಕರು Admin

June 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು

    ಕನ್ನಡ ಸಾಹಿತ್ಯ ಇತಿಹಾಸ ನಡೆ ನುಡಿ ಜೀವನ ಪ್ರಗತಿ ಬಾಳಬಳ್ಳಿ ಬೆಳಕು ಜೀವನ ಸರಳ ಬದುಕಿನ ಯಾತ್ರೆ ಕಥೆ ಸತ್ಯ ಹೇಳಿದರು ಪರಿಪೂರ್ಣ ಅರಿವು ಜಾಗೃತಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: