ದಿಲೀಪ್ ಎನ್ಕೆ ಅವರ ‘ತಿತ್ತಿಬ್ವಾಸನ ಟೈಟಾನ್ ವಾಚು’
ಈ ಕೃತಿಯ ಕುರಿತು ಸುಮಿತ್ ಮೇತ್ರಿ ಬರೆದ ಬರಹ ಇಲ್ಲಿದೆ.
–ಸುಮಿತ್ ಮೇತ್ರಿ
ಒಂದು ಕಥಾ ಸಂಕಲನವು ಕೇವಲ ಕಥೆಗಳ ಗುಚ್ಛವಲ್ಲ; ಅದು ಬದುಕಿನ ಅನೇಕ ಮುಖಗಳನ್ನು ಅನಾವರಣಗೊಳಿಸುವ ಸಾಹಿತ್ಯಯಾನ. ಅದರಲ್ಲಿರುವ ಪ್ರತಿಯೊಂದು ಕಥೆಯೂ ತನ್ನದೇ ಆದ ಅನುಭವ, ಭಾವನೆ ಮತ್ತು ಚಿಂತನೆಗಳನ್ನು ಹೊತ್ತು ಓದುಗನ ಮನಸ್ಸಿನಲ್ಲಿ ಹೊಸ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಕಥೆಗಳು ವಿಭಿನ್ನ ವಿಷಯಗಳನ್ನು ಒಳಗೊಂಡಿದ್ದರೂ ಅವುಗಳ ನಡುವೆ ಒಂದು ಕಲಾತ್ಮಕ ಏಕತೆ, ಭಾಷೆ, ಜೀವಂತ ಪಾತ್ರಗಳ ಚಲನೆ, ಸಹಜ ಸಂಭಾಷಣೆಯ ಓಘ ಮತ್ತು ಓದುಗರನ್ನು ಆಳವಾಗಿ ತಟ್ಟುವ ನಿರೂಪಣೆ. ಓದು ಕೇವಲ ಮನರಂಜನೆಯಷ್ಟೇ ಅಲ್ಲ, ಬದುಕನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡುವ, ಸಮಾಜದ ವಾಸ್ತವತೆ, ಮಾನವ ಸಂಬಂಧಗಳು, ಪ್ರೀತಿ, ಪ್ರೇಮ ಪ್ರಣಯ, ಕಾಮ, ನೋವು, ಹೋರಾಟ, ಕನಸುಗಳು ಮತ್ತು ಆಶಾವಾದವನ್ನು ಸೂಕ್ಷ್ಮವಾಗಿ ಚಿತ್ರಿಸುವ ಕಥೆಗಳು ಓದುಗರ ನೆನಪಿನಲ್ಲಿ ದೀರ್ಘಕಾಲ ಉಳಿಯುತ್ತವೆ.
ಈ ಸಂಕಲನದ ಕಥೆಗಳನ್ನು ತಾಳ್ಮೆಯಿಂದ ಓದುವಾಗ “ಸುಟ್ಟಿರದೇ ಮೂರ್ ದ್ವಾಸ” ಕಥೆಯಲ್ಲಿ ಬಡವರ ಕನಸುಗಳು ಅರಳುವ ಬಗೆ ಚೆನ್ನಾಗಿ ಮೂಡಿಬಂದಿದೆ. “ದೊಡ್ಡ ಸಂಪಿಗೆಯ ತಿರುವು” ಕಾಯುವ ಮತ್ತು ಹುಡುಕಾಟದ ಬಗೆ, ಅತೀವವಾದ ಪ್ರೀತಿ ತರುವ ಖಿನ್ನತೆ, ತಪ್ಪೇ ಮಾಡಿದವನಿಗೆ ಆಗುವ ಶಿಕ್ಷೆ, ಸಾಮಾಜಿಕ ನ್ಯಾಯದ ಲೋಪವನ್ನು ತಿಳಿಸುತ್ತದೆ. “ಕಾಕ್ಟೇಲ್” ಘಾಸಿ ಮಾಡುವ ವ್ಯಥೆಯ ಕಥೆ. “ಕುಂಟು ಸೇತುವೆ” ಮುರಿದು ಬೀಳುವ ಪ್ರೇಮ ಕಥೆ. “ಅಂಬಾಸಿಡರ್ ಕಾರು” ಆಘಾತಕ್ಕೆ ಒಳಗಾದ ಮನುಷ್ಯನ ಅತಿಯಾದ ಶಾಂತತೆ ಮತ್ತು ತಾಳ್ಮೆಯ ಸ್ವಭಾವ. “ಭೈರೂಪ” ಹೆಣ್ಣು-ಗಂಡಾಗುವ, ಗಂಡು-ಹೆಣ್ಣಾಗುವ ಟ್ರಾನ್ಸ್. ಹೆಣ್ಣು-ಹೆಣ್ಣು, ಗಂಡು-ಗಂಡು ಕೂಡುವ ರೂಪಕ. “ವಿಕಾರಿ” ಕಥೆಯಲ್ಲಿನ ಕುಲ ಕಸುಬಿನ ಚಿತ್ರಣ ಜೊತೆಗೆ ಸಂಕಲನದ ಶೀರ್ಷಿಕೆಯ ಕಥೆಯಾದ “ತಿತ್ತಿಬ್ವಾಸನ ಟೈಟಾನ್ ವಾಚು” ಒಂದು ಪ್ರಯೋಗದ ದೃಷ್ಟಿಯಿಂದ ನೋಡಿದಾಗ ಮತ್ತು ನೀವು ಕವಿಯೂ ಹೌದು ಎಂದು ತೋರುತ್ತದೆ. ಹೀಗಾಗಿ, ಇಲ್ಲಿ ದಟ್ಟವಾದ ಪ್ರಾದೇಶಿಕ ಭಾಷಾ ಸೌಂದರ್ಯವನ್ನು ಅನುಭವಿಸುವುದರ ಜೊತೆಗೆ ಬದುಕಿನ ಅರ್ಥವನ್ನು ಮತ್ತಷ್ಟು ಆಳವಾಗಿ ಅರಿಯುವ ಅವಕಾಶವನ್ನು ಓದುಗರಿಗೆ ನೀಡಿದ್ದೀರಿ. ಅಭಿನಂದನೆಗಳು ನಿಮಗೆ.






0 Comments