ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲೆಲ್ಲೂ ಸೈಕಲ್ಲು

ಕಿರಣ ಭಟ್

ನಾವು ಶಾಲೆಗೆ ಹೋಗುವ ಹೊತ್ತಿಗೆ ಅತಿ ಜನಪ್ರಿಯವಾಗಿದ್ದ ಸರಳ ವಾಹನ ಎಂದರೆ ಸೈಕಲ್ಲು. ಆಗ ನಮ್ಮ ಊರಿನಂಥ ಸಣ್ಣ ಊರಿನಲ್ಲಿ ಬೈಕುಗಳೇ ಅಪರೂಪ. ಏರುಗಳಲ್ಲಿ ದೂಡಿಕೊಂಡು ಹೋಗುವ, ಇಳಿಜಾರಲ್ಲಿ ಸುಂಯನೆ ಇಳಿವ, ಸಮದಾರಿಯಲ್ಲಿ ಪೆಡಲ್‌ ತುಳಿವ ಸೈಕಲ್ಲುಗಳ ಜಗತ್ತೇ ಬೇರೆ. ಅಂತೆಯೇ ಸೈಕಲ್ಲಿನ ಕುರಿತು ಹಲವಾರು ಕತೆಗಳೂ ಇದ್ದವು.


ʼದೊಡ್ಡ ಹೊಟ್ಟೆ ದೊರೆ
ಸೈಕಲ್‌ ಹತ್ತಿ ಬರೆ…”
ಎಂದು ಬ್ರಿಟಿಷ್‌ ಸಾಹೇಬರನ್ನು ವ್ಯಂಗ್ಯ ಮಾಡುವ ಕವನವನ್ನೂ ಹೆಚ್ಚಿನವರು ಕೇಳಿರಬಹುದು.


ಆಗ ರಾತ್ರಿ ಸೈಕಲ್‌ ಹೊಡೆಯುವವರು ಡೈನಮೋ ಹಾಕಿಕೊಂಡೇ ಹೋಗಬೇಕಿತ್ತು. ಹಾಗೆ ಹೋಗದವರನ್ನು ಪೋಲೀಸರು ಹಿಡಿದು ದಂಡ ಹಾಕುತ್ತಿದ್ದರು. ಆ ಕುರಿತ ಮಜವಾದ ವೃತ್ತಾಂತಗಳಿವೆ.


ನಮ್ಮೂರ ಹುಡುಗನೊಬ್ಬ ಡೈನಮೋ ಇಲ್ಲದೆ ಸೈಕಲ್‌ ಹೊಡೆಯುವಾಗ ಸಿಕ್ಕಿ ಬಿದ್ದ. ಪೋಲೀಸ್‌ ಮಾಮ ಹಿಡಿದ. ಕಾರವಾರದಿಂದ ಹೊನ್ನಾವರಕ್ಕೆ ಆಗ ತಾನೇ ವರ್ಗವಾಗಿ ಬಂದ ಪೋಲೀಸ್‌ ಮಾಮ ಅವ. ಕೇಸ್‌ ಹಾಕೋದಕ್ಕೆ ಹುಡುಗನ ಅಡ್ರೆಸ್‌ ಕೇಳಿದ. ಆತ ಅಡ್ರೆಸ್‌ ಕೊಟ್ಟ. ಕೊಡುವಾಗ ʼ ಅಪ್ಪಾ ಭಟ್ಟʼ ಅಂತ ಹೆಸರು ಬರೆಸಿ, ಅಡ್ರೆಸ್‌ ಕೊಟ್ಟ. ಕೇಸ್‌ ಆಯ್ತು. ಸಾಹೇಬರಿಂದ ಬುಲಾವ್‌ ಬಂತು. ಅನಿವಾರ್ಯವಾಗಿ ಆಪಾದಿತ ಠಾಣೆಗೆ ಹೋದ. ಠಾಣೆಗೆ ಬಂದ ವ್ಯಕ್ತಿಯನ್ನು ನೋಡಿ ಸಾಹೇಬರಿಗೆ ನಗು ತಡೆಯಲಾಗಲಿಲ್ಲ. ಗಜ ಗಾತ್ರದ ವ್ಯಕ್ತಿಯೊಬ್ಬರು ಅವರೆದುರು ನಿಂತಿದ್ದರು. ʼ ಸಾಹೇಬ್ರೇ ನನ್ನ ನೋಡಿದ್ರೆ ಸೈಕಲ್‌ ಹೊಡೇವವ್ನ ಹಾಗೆ ಕಾಣ್ತದಾ?ʼ ಅಂತ ಅವರೇ ಸಾಹೇಬರನ್ನ ಪ್ರಶ್ನೆ ಮಾಡಿದ್ರು. ಮಹಾ ದೊಡ್ಡ ಗಾತ್ರದ ದೇಹದ, ನಡೆಯಲೂ ಕಷ್ಟಪಡುವ ಅಪ್ಪಾಭಟ್ಟರ ಹೆಸರನ್ನು ಆ ಹುಡುಗ ಕೊಟ್ಟುಬಿಟ್ಟಿದ್ದ.
ಇಂಥ ಕಥೆಗಳನ್ನು ಹುಟ್ಟುಹಾಕಿದ ಸೈಕಲ್ಲುಗಳು ಈಗ ಊರಲ್ಲೂ ಕಾಣಸಿಗುವದಿಲ್ಲ.ಎಲ್ಲೆಲ್ಲೂ ಬೈಕುಗಳು. ಹೊಗೆ. ಕುಲುಷಿತ ಪರಿಸರ.
ಇದಕ್ಕೆ ತೀರ ವಿರುದ್ಧವಾದುದನ್ನು ನಾನು ಯುರೋಪಿಯನ್‌ ದೇಶಗಳಲ್ಲಿ ಕಂಡೆ. ಅಲ್ಲಿ ನಾನು ಮೊದಲು ಕಂಡ ವ್ಯಕ್ತಿಯೇ ಸೈಕಲ್‌ ಮೇಲಿದ್ದರು. ಫ್ರಾಂಕ್‌ ಫರ್ಟ್‌ ನ ನಮ್ಮ ಹೊಟೆಲ್‌ ಹೊರಗಡೆ ಹಿರಿಯ ಮಹಿಳೆಯೊಬ್ಬರು ಸೈಕಲ್‌ ತುಳಿಯುತ್ತ ಬರುತ್ತಿದ್ದರು. ಕುತೂಹಲದಿಂದ ನೋಡಿದರೆ, ಅವರು ಸೈಕಲ್‌ ಗಳಿಗಾಗಿಯೇ ಇರುವ ವಿಶೇಷ ಪಥದಲ್ಲಿದ್ದರು.


ಊರು ಹೊಕ್ಕು ನೋಡಿದರೆ ಬರೇ ಸೈಕಲ್ಲುಗಳೇ. ಮುಖ್ಯ ರಸ್ತೆಗಳಲ್ಲೂ ಅವುಗಳಿಗಾಗಿ ವಿಶೇಷ ಪಥ. ಅದೆಷ್ಟು ಜನ ಸೈಕಲ್‌ ಉಪಯೋಗಿಸುವವರು. ಇಲ್ಲಿ ಸೈಕಲ್ಲಿನವರಿಗೇ ವಿಶೇಷ ಪ್ರಾಶಸ್ತ್ಯ. ಅವರಿಗೆ ಅಡ್ಡ ಬರುವ ಹಾಗೇ ಇಲ್ಲ. ಊರ ತುಂಬೆಲ್ಲ ಬಗೆ ಬಗೆಯ ಸೈಕಲ್ ಗಳು. ಪೆಡಲ್‌ ಸೈಕಲ್ಲಿಂದ ಹಿಡಿದು ಎಲೆಕ್ಟ್ರಿಕ್‌ ಸೈಕಲ್‌ ವರೆಗೆ ವಿವಿಧ ಗಾತ್ರಗಳಲ್ಲಿ ವಿವಿಧ ರೂಪಗಳಲ್ಲಿ.ಹಾಗಾಗಿ ಹೊಗೆಯ ಜಂಜಾಟವೇ ಇಲ್ಲ. ನಿರ್ಮಲ ಪರಿಸರ. ದೇಹಕ್ಕೂ ಒಳ್ಳೇ ವ್ಯಾಯಾಮ.
ಪ್ರವಾಸೋದ್ಯಮದಲ್ಲೂ ಸೈಕಲ್ಲಿನದು ಹಿರಿಯ ಪಾಲು ಇಲ್ಲಿ ʼಸೈಕಲ್‌ ಪ್ರವಾಸೋದ್ಯಮʼದ್ದೇ ಒಂದು ತೂಕ. ʼಸೈಕಲ್‌ ಪ್ರವಾಸೋದ್ಯಮʼ ಯುರೋಪ್‌ ನಲ್ಲಿ ಅದೆಷ್ಟು ಮುಖ್ಯ ಎಂದರೆ, ಇದಕ್ಕಾಗಿಯೇ ಇಡಿಯ ಯುರೋಪ್‌ ಖಂಡವನ್ನು ಜೋಡಿಸಬಲ್ಲ ಹದಿನೇಳು ಉದ್ದಾನುದ್ದ ರಸ್ತೆಗಳಿವೆ. ಯುರೋಪ್‌ ಖಂಡದ ತುಂಬೆಲ್ಲ ಒಂಬತ್ತು ಲಕ್ಷ ಕಿಲೋಮೀಟರ್‌ ಗಳ ಸೈಕಲ್‌ ರಸ್ತೆಗಳೇ ಇವೆ ಎಂದರೆ ಇದರ ಮಹತ್ವದ ಅರಿವಾದೀತು.


ವೇಲೋ ಟ್ಯಾಕ್ಸಿ
ಪ್ಯಾರಿಸ್ ನ ‘ಲೌವ್ರ ಮ್ಯೂಸಿಯಂ’ನಿಂದ ಹೊರಗೆ ಬರ್ತಿದ್ದ ಹಾಗೆ ತರುಣಿಯೊಬ್ಬಳು ಒಂದು ವಾಹನವನ್ನು ಸುಂಯನೆ ತಂದು ಎದುರು ನಿಲ್ಲಿಸಿದಳು.

ಆ ತರುಣಿಯೂ ವಾಹನವೂ ಅದೆಷ್ಟು ಚಂದ ಇದ್ದವೆಂದ್ರೆ ತಟ್ಟನೆ ಸೆಳೆಯೋ ಹಾಗೆ. ಹಾದಿಯ ಮೇಲೆ ಹಂಸ ಓಡಿದ ಹಾಗೆ.
ಅದು ‘ವೇಲೋ ಟ್ಯಾಕ್ಸಿ’. ಅತ್ಯಂತ ಪರಿಸರ ಸ್ನೇಹಿ ವಾಹನ.ಎಷ್ಟು ಚಂದವೋ ಅಷ್ಟೇ ಸರಳ.ಅದೊಂದು ಮೂರು ಚಕ್ರದ ಸೈಕಲ್ಲು.ಆರಾಮಾಗಿ ತುಳಿಯುವಂಥದ್ದು. ಹಿಂದುಗಡೆ ಇಬ್ಬರು ಪ್ರಯಾಣಿಕರು ಕುಳಿತುಕೊಳ್ಳೋದಕ್ಕೆ ಆಸನ. ಮಳೆ ಬಿಸಿಲಿಗೆ ಪ್ರಯಾಣಿಕರಿಗಾಗಿ ಒಂದು ಫೈಬರ್ ಆವರಣ. ಹಾಗಂತ ಏರಿನಲ್ಲಿ ಸಹಾಯ ಮಾಡುವ ಮೋಟಾರ್ ಕೂಡ ಇದ್ರಲ್ಲಿದೆ.

ಹತ್ತಿರದ ಪ್ರಯಾಣಕ್ಕೆ ಹೇಳಿ ಮಾಡಿಸಿದ ವಾಹನ. ಭಾಡಿಗೆಯೂ ಕಡಿಮೆ.
ಇಂತಿಪ್ಪ ಯೂರೋಪಿನ ಸೈಕಲ್ಲುಗಳ ಕೆಲವು ವಿಶಿಷ್ಟ ಚಿತ್ರಗಳು ಇಲ್ಲಿವೆ. ಜೊತೆಗೆ ಚಿತ್ರಶೀರ್ಷಿಕೆಗಳೂ ಇವೆ.

‍ಲೇಖಕರು Admin

9 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading