ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕಿನ ಅಂತ:ಸತ್ವ ಶೋಧಿಸುವ ಕಥೆಗಳು

ಕಲ್ಲೇಶ್ ಕುಂಬಾರ್ ಅವರ ಕಥಾ ಸಂಕಲನ ‘ಗಗನಕ್ಕೆ ನಿಚ್ಚಣಿಕೆಯನಿಕ್ಕಿ’

ಸುಗಮ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಮೋದೂರು ತೇಜ ಅವರ ಬರಹ ಇಲ್ಲಿದೆ.

-ಮೋದೂರು ತೇಜ

ಕವಿ ಕಥೆಗಾರರಾದ ಕಲ್ಲೇಶ್ ಕುಂಬಾರ್ ಅವರ ‘ಗಗನಕ್ಕೆ ನಿಚ್ಚಣಿಕೆಯನಿಕ್ಕಿ’ ಕಥಾ ಸಂಕಲನದ ಕಥೆಗಳು, ದಾಟಿ ಬಂದ ತಮ್ಮ ಬದುಕಿನ ಅಂತ:ಸತ್ವವನ್ನು ಶೋಧಿಸುತ್ತವೆ. ದಾಟಬೇಕಾದ ದಾರಿಯನ್ನೂ ನಿಚ್ಚಳಗೊಳಿಸುತ್ತವೆ. ಹಾರೋಗೇರಿಯೆಂಬ ಗ್ರಾಮ ಜಗತ್ತು ಅಲ್ಲಿಗೆ ಮಾತ್ರ ಸೀಮಿತವಾಗದೆ ಎಲ್ಲರ ಜಗತ್ತಾಗಿಸುವಲ್ಲಿ ಇಲ್ಲಿನ ಪ್ರತಿಯೊಂದು ಕಥೆಯು ಯಶಸ್ವಿಯಾಗಿದೆ. ಆ ರೀತಿ ಎಲ್ಲರದಾಗುವ, ಎಲ್ಲರದಾಗಿಸುವ ಗುಣ ಕತೆಗಳಿಗಿದೆ. ಈ ಸಂಕಲನದ ಯಾವುದೇ ಕಥೆಯಾಗಲಿ, ಪಾತ್ರಗಳಾಗಲಿ ಕೃತಕತೆ ಎನಿಸುವುದಿಲ್ಲ. ನಾಟಕೀಯತೆ ಮೊದಲೇ ಇಲ್ಲ. ಅದು ತನ್ನ ಸಹಜತೆಯಿಂದ ಓದುಗನ ಎದೆಯೊಳಗಿಳಿದು  ತಣ್ಣಗೆ ಆವರಿಸಿಕೊಳ್ಳುತ್ತದೆ. ಬದುಕಿನ ವೈರುಧ್ಯಗಳನ್ನು ಎದುರಿಸುವ ಗಟ್ಟಿಗುಂಡಿಗೆಯ ಪಾತ್ರಗಳು ಕಥೆ ಓದಿ ಮುಗಿಸಿದ ಮೇಲೂ ನಮ್ಮನ್ನು ಕಾಡುತ್ತವೆ. 

ಮನುಷ್ಯ ಸಂಬಂಧಗಳೇ ಕಾಗದದ ಹೂವಿನಂತಿರುವ ಈ ಕಾಲಘಟ್ಟದಲ್ಲಿ ‘ಕಪಿಲೆ’ಎಂಬ ಮೂಕ ಪ್ರಾಣಿಯ ಅಪ್ಪಟ ಪ್ರೇಮ, ಕಪಟತನದಲ್ಲಿ ಬಾಳುವ ನಮ್ಮ ಕಪಾಳಕ್ಕೆ ಬಾರಿಸುತ್ತದೆ. ಎಲ್ಲವನ್ನು ಲಾಭದ ಲೆಕ್ಕಾಚಾರದ ದೃಷ್ಟಿಯಿಂದ ನೋಡುವ ಮನುಷ್ಯನಿಗೆ ಮೂಕ ಜೀವಿಯ ವರ್ತನೆ ಕಂಡು ‘ಹೀಗೂ ಉಂಟೆ’ ಎನಿಸಿದರು ಆಶ್ಚರ್ಯ ಪಡುವಂತಿಲ್ಲ. ಆದರೆ ಪೂಜಾರಿ ಸಂಗಪ್ಪನನ್ನು ಕಪಿಲೆ ಹಚ್ಚಿಕೊಂಡ ಪರಿಯನ್ನು ಓದುತ್ತಾ ಹೋದಂತೆಲ್ಲ ನಮ್ಮೊಳಗಿನ ಸಣ್ಣತನವನ್ನು, ಪ್ರೀತಿಯಲ್ಲಿ ಬೆರೆತಿರುವ ಕಲ್ಮಶವನ್ನು ಸೋಸಿ ಹೊರ ಹಾಕುವ ಸತ್ವ, ಸಾಮರ್ಥ್ಯ ‘ಕಪಿಲೆ’ ಕತೆಗಿದೆ.

ಸೇವೆಯ ಹೆಸರಿನಲ್ಲಿ ಸುಲಿಗೆ ಮಾಡುವ ಆಸ್ಪತ್ರೆ ಕಟ್ಟಲು ಜಾಗ ಕೊಡಲು ನಿರಾಕರಿಸುವ ಸಿದಗಿರಿಯು ಒಂದು ತಲೆಮಾರನ್ನು ಪ್ರತಿನಿಧಿಸಿದರೆ, ಹಣದ ಆಸೆಗೆ ಅರ್ಧ ಎಕರೆ ಹೊಲ ಮಾರಬೇಕೆನ್ನುವ ಬೀರಪ್ಪ ಇನ್ನೊಂದು ತಲೆಮಾರನ್ನು ಪ್ರತಿನಿಧಿಸುತ್ತಾನೆ. ಇವರಿಬ್ಬರ ತಾಕಲಾಟಗಳು, ಮನದ ಸಂಘರ್ಷಗಳು, ಲೆಕ್ಕಾಚಾರಗಳನ್ನು ಕಥೆಗಾರರು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಕೊನೆಗೆ ಸಿದಗಿರಿಯ ಮಣ್ಣಿನ ಮಮತೆಗೆ, ಮಗ ತಲೆ ಬಾಗುವುದರೊಂದಿಗೆ ಕೊನೆಗೊಳ್ಳುವ ಕಥೆ, ಇವತ್ತಿನ ಬಹುಪಾಲು ಒಕ್ಕಲು ಕುಟುಂಬಗಳ ತಳಮಳವನ್ನು ಸೂಚಿಸುತ್ತದೆ. ಹಣದಾಸೆಗೆ ಗಗನಕ್ಕೆ ಏಣಿ ಹಾಕಲು ಹಂಬಲಿಸುವ ನಾವು, ನಿಂತ ನೆಲವನ್ನೇ ಮರೆಯುತ್ತಿರುವುದನ್ನು ತುಂಬಾ ಮಾರ್ಮಿಕವಾಗಿ ಈ ಕಥೆ ಧ್ವನಿಸುತ್ತದೆ.

ದೊಡ್ಡ ದೊಡ್ಡ ಕಾರ್ಖಾನೆಗಳು ಸ್ಥಾಪನೆಯಾದರೆ ಉದ್ಯೋಗಗಳು ಸೃಷ್ಟಿಯಾಗುತ್ತವೆ, ನಮ್ಮ ಬದುಕು ಹಸನಾಗುತ್ತದೆಂದು ಏನೇನೋ ಕನಸು ಕಟ್ಟಿಕೊಳ್ಳುವ ಹಳ್ಳಿ ಜನರಿಗೆ ನಿಧಾನಕ್ಕೆ ಅವುಗಳ ದಗಲ್ಬಾಜಿತನ ತಿಳಿಯುತ್ತದೆ. ಅಷ್ಟೊತ್ತಿಗಾಗಲೇ ಸ್ವಾವಲಂಬನೆ ಬದುಕಿಗೆ ಆಧಾರವಾಗಿದ್ದ ಗುಡಿಕೈಗಾರಿಕೆಗಳನ್ನು ನುಂಗಿ ನೀರು ಕುಡಿಯುವುದರ ಮೂಲಕ ರೈತರ ಬದುಕು, ಮೂರಾಬಟ್ಟೆ ಮಾಡುವುದನ್ನು ‘ಒಳಗಣ ಜ್ಯೋತಿ’ಯಲ್ಲಿ ಕಾಣುತ್ತೇವೆ. ಬೆಳೆದ ಕಬ್ಬನ್ನ ಬೆಲ್ಲದ ತಯಾರಿಕೆಯಲ್ಲಿ ಬಳಸಿ ನೆಮ್ಮದಿ ಜೀವನ ನಡೆಸುತ್ತಿದ್ದ ಸಂಗಪ್ಪನಂತ ಸಣ್ಣ ಹಿಡುವಳಿದಾರರಿಗೆ ಸಕ್ಕರೆ ಕಾರ್ಖಾನೆ ಮೊದಮೊದಲು ಆಸೆ ಹುಟ್ಟಿಸಿ, ನಂತರ ಕಬ್ಬು ಖರೀದಿಗೆ ಹಿಂದೇಟು ಹಾಕುವುದರ ಮೂಲಕ ಅವರ ಬದುಕನ್ನು ಅತಂತ್ರ ಸ್ಥಿತಿಗೆ ತಳ್ಳುವುದನ್ನು ಈ ಕಥೆಯಲ್ಲಿ ಕಾಣುತ್ತೇವೆ. ಕೊನೆಗೆ ನಮ್ಮ ನೆಮ್ಮದಿಯ ಬದುಕಿಗೆ ಗುಡಿ ಕೈಗಾರಿಕೆಯೆ ಸೂಕ್ತ ಎನ್ನುವ ನಿರ್ಧಾರಕ್ಕೆ ಬರುವ ಸಂಗಪ್ಪ ಬೆಲ್ಲ ತಯಾರಿಕೆಗೆ ಮುಂದಾಗುವುದರಲ್ಲಿ, ನಾವು ನಡೆಯಬೇಕಾದ ದಾರಿಯ ನಿಚ್ಚಳವನ್ನು ಕಾಣುತ್ತೇವೆ. ಇವತ್ತಿನ ಜಾಗತೀಕರಣ ತಂದೊಡ್ಡಿದ ಅಪಾಯಕ್ಕೆ ಪರ್ಯಾಯ ಎಂಬಂತೆ ದುಡಿಯುವ ವರ್ಗಕ್ಕೆ ಆ ಸ್ಪಷ್ಟತೆ ಬರದ ಹೊರತು ನಾವು ಬಂಡವಾಳಶಾಹಿಗಳು ಒಡ್ಡಿದ ಬಲೆಯಲ್ಲಿ ಸಿಲುಕಿ ಒದ್ದಾಡುವ ಮಿಕಗಳಾಗುತ್ತವೆ ಎನ್ನುವ ಎಚ್ಚರ ಈ ಕತೆಯ ಒಡಲಾಳದ ದನಿಯಾಗಿದೆ.

ತನ್ನ ನೆಲದ ಸಂಕಟಗಳನ್ನು ಕಂಡು, ಕೇಳಿದ ಮೇಲೆ ಸೂಕ್ಷ್ಮ ಸಂವೇದನೆಯ ಬರಹಗಾರ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಅಂತಹ ಚಡಪಡಿಕೆಯೊಂದಿಗೆ ಇಲ್ಲಿನ ಕಥೆಗಳು ಮೈದಾಳಿರುವುದನ್ನು ಕಾಣುತ್ತೇವೆ.

ಜನಸಾಮಾನ್ಯರ ಖಾಸಗಿ ಬದುಕನ್ನು ಸಾರ್ವಜನಿಕಗೊಳಿಸಿ, ಅದಕ್ಕೆ ರಾಜಕೀಯ ಬಣ್ಣ ಬಳಿದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹಂಬಲಿಸುವ ಮಾನಗೇಡಿ ಮನುಷ್ಯರ ಸಣ್ಣತನವನ್ನು ಬಯಲು ಮಾಡುವ ರಜಿಯಾ ಕತೆ ಮನುಷ್ಯತ್ವದ ಹುಡುಕಾಟ ನಡೆಸುತ್ತದೆ.

ತನ್ನ ಪ್ರೇಮ ವಿಫಲವಾಯಿತೆಂದು, ತಾನು ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂಬ ಆಘಾತಕ್ಕೊಳಗಾದ ಶಿವರಾಜ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಧರ್ಮದ ಹೆಸರಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ಬಿಂಬಿಸುತ್ತ ಹಿಂದೂ ಮುಸ್ಲಿಂ ಕೋಮುಗಲಭೆಗೆ ದಾರಿ ಮಾಡಿ ಕೊಡುವ ಅದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಹುನ್ನಾರವನ್ನು ರಜಿಯಾ ಕಥೆ ಧ್ವನಿಪೂರ್ಣವಾಗಿ ಪ್ರತಿಪಾದಿಸುತ್ತದೆ. ಆ ಕತೆಯನ್ನು ಓದುವಾಗ ವರ್ತಮಾನದ ಚಿತ್ರಣ ನಮ್ಮ ಕಣ್ಣ ಮುಂದೆ ಸುಳಿದಾಡುತ್ತದೆ. “ಮನುಷ್ಯ ಮನುಷ್ಯರ ನಡುವೆ ಗೋಡೆಯನ್ನು ನಿರ್ಮಿಸಿರುವ ಈ ಜಾತಿ ಧರ್ಮಗಳಿಲ್ಲದೆಯೇ ಬದುಕಲು ಸಾಧ್ಯವಿಲ್ಲವೇ?” ಎಂದು ತನಗೆ ತಾನೇ ಕೇಳಿಕೊಳ್ಳುವ ಕಥೆಯ ನಿರೂಪಕನ ಪ್ರಶ್ನೆ, ಎಲ್ಲರದೂ ಆದಾಗ ಮಾತ್ರ ಮನುಷ್ಯತ್ವ ನೆಲೆಗೊಳ್ಳಲು ಸಾಧ್ಯ ಎನಿಸುತ್ತದೆ. 

 ಇಲ್ಲಿನ ಪ್ರತಿಯೊಂದು ಕಥೆಯೂ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ, ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಬದುಕು ಎಷ್ಟೇ ಕಠಿಣವಾದರೂ ಅದನ್ನು ಎದುರಿಸಿ ಜೀವನ ನಡೆಸಬೇಕು, ಎಲ್ಲದಕ್ಕಿಂತ ಬಾಳು ದೊಡ್ಡದು ಎನ್ನುವ ಕಲ್ಲವ್ವನಂಥ ವ್ಯಕ್ತಿತ್ವ ನಮಗೆ ಸ್ಪೂರ್ತಿ ನೀಡುತ್ತದೆ. ಕಾವಿ ಎನ್ನುವ ಕೆಂಡ ಧರಿಸಿದ ಮೇಲೆ ಮನದೊಳಗಿನ ಕಾಮ ಕೊನೆಯಾಗಬೇಕು. ಅದಿನ್ನು ಬಯಕೆಯ ಬೆನ್ನೇರಿ ಹೊರಟಿದೆಯೆಂದರೆ ಆಸ್ಥಾನದಲ್ಲಿ ಕೂರುವುದು ತಕ್ಕನಾದುದಲ್ಲ ಎನ್ನುವಂತೆ ಆತ್ಮವಿಮರ್ಶೆ ಮಾಡಿಕೊಂಡು ಮತ್ತೆ ಸಾಂಸಾರಿಕ ಬದುಕಿನ ಕಡೆ ಹೆಜ್ಜೆ ಹಾಕುವ ವಿರಕ್ತಮಠದ ಪಂಚಯ್ಯಸ್ವಾಮಿಗಳ ನಡೆ ನಿಜಕ್ಕೂ ಮೆಚ್ಚುವಂಥದ್ದು. ಕಾವಿ ಮುಸುಕಿನಲ್ಲಿ ಅಮಾಯಕ ಹೆಣ್ಣು ಮಕ್ಕಳ ಬಾಳನ್ನೇ ಹಾಳು ಮಾಡುವ ಸ್ವಾಮೀಜಿಗಳಿಗಿಂತ ಪಂಚಯ್ಯಸ್ವಾಮಿಗಳ ಈ ನಿರ್ಧಾರ ಇತರೆಯವರಿಗೂ ಮಾದರಿ ಎನ್ನುವಂತಿದೆ.

 ಹೀಗೆ ಈ ಸಂಕಲನದ ಒಂದೊಂದು ಕಥೆಯು ನಮ್ಮನ್ನು ನಿಕಷಕ್ಕೆ ಒಡ್ಡುತ್ತವೆ. ಅಲ್ಲಿನ ಪಾತ್ರಗಳು ಬೆರಗುಗೊಳಿಸುತ್ತಲೇ ಕಾಡುತ್ತವೆ. ಇದಕ್ಕೆ ಪೂರಕವಾಗಿ ಕಥೆಗಾರರು ಬಳಸಿರುವ ನಿರೂಪಣಾ ತಂತ್ರ, ಭಾಷೆಯನ್ನು ದುಡಿಸಿಕೊಂಡಿರುವ ರೀತಿ, ಕಥನ ಶೈಲಿಯು ಕಥೆಗಳ ಒಟ್ಟಂದಕ್ಕೆ ಪೂರಕವಾಗಿದೆ. ಬೆಳಗಾವಿ ಜಿಲ್ಲೆಯ ಹಾರೋಗೇರಿ ಭಾಗದ ನೆಲದ ಸೊಗಡುಳ್ಳ ಜವಾರಿ ಭಾಷೆ ಕಥೆಗಳಿಗೆ ಮತ್ತಷ್ಟು ಕಸುವು ತುಂಬಿದೆ. ಒಟ್ಟಾರೆಯಾಗಿ ಕಲ್ಲೇಶ್ ಕುಂಬಾರ್ ಅವರ ಕಥೆಗಳು ಎಲ್ಲದಕ್ಕಿಂತ ಬದುಕು ದೊಡ್ಡದು ಎನ್ನುವ ಜೀವನ ಪ್ರೀತಿಯನ್ನು ಪ್ರತಿಪಾದಿಸುತ್ತವೆ.

 ಇಂತಹ ಕಥೆಗಳನ್ನ ಒಟ್ಟುಗೂಡಿಸಿ ಸಂಕಲನದ ರೂಪದಲ್ಲಿ ಪ್ರಕಟಿಸಿದ ಸುಗಮ ಪುಸ್ತಕದ ಸುಮಿತ್ ಮೇತ್ರಿ ಅವರಿಗೂ ನಮ್ಮ ವಾರಿಗೆಯವರಿಗೆಲ್ಲ ಹಿರಿಯ ಅಣ್ಣನಂತಿರುವ ಕಲ್ಲೇಶ್ ಕುಂಬಾರ್ ಅವರಿಗೂ ಅಭಿನಂದನೆಗಳು.

 ಕೃತಿ: ಗಗನಕ್ಕೆ ನಿಚ್ಚಣಿಕೆಯನಿಕ್ಕಿ ಲೇಖಕರು: ಕಲ್ಲೇಶ್ ಕುಂಬಾರ್ ಪ್ರಕಾಶನ: ಸುಗಮ ಪುಸ್ತಕ

ಬೆಲೆ: 100

 ಸಂಪರ್ಕ: 9980845630

‍ಲೇಖಕರು Admin

9 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading