ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಣ್ಣ ಮಾಸುವ ಮುನ್ನ 

ಚಾಂದ್ ಪಾಷ ಎನ್ ಎಸ್ 

ಪರದೆಗಳಾಚೆ ಕಡಲ ಚಿತ್ರ ಬರೆದು,
ಹೊನ್ನ ಕಿರಣವ ಹೊದಿಸಿದರು ಚಳಿಗಾಲ ಕಳೆಯಲೆ ಇಲ್ಲ,
ಅದೋ ಆ ಕಣ್ಣೊಳಗೆ ಕೋಟಿ ಕವಿತೆಯ ದೋಣಿ ತೇಲುತ್ತಲೇ ಇದೆ
ಅಲೆಗಳು ಮಾತ್ರ ಆಕಳಿಸುತ್ತಿದೆ.
ನೀ ಇರದ ರಾತ್ರಿ ಅದೇಕೆ ಅಷ್ಟು ಸುದೀರ್ಘ

ನಿನ್ನ ಪಾದಗಳ ಹುಡುಕುತ್ತಾ ಬೀದಿಗೆ ಬಿದ್ದಿದ್ದೇನೆ,
ನೀ ಎಲ್ಲೋ ಕಳೆದು ಹೋದ ಸಂಗತಿ ಈಗಷ್ಟೇ ಗಾಳಿ ತಿಳಿಸಿದೆ.
ನೀರೋಳಗೆ ದಾರಿಯ ಕೊರೆದು ನಿಲ್ಲದೇ ಓಡುವ ಮೀನ ಮೈಯವಳೆ!
ಹೊಳೆ ಹೊಳೆವ ಕಣ್ಣ ಕನ್ನಡಿಯಲಿ ನನ್ನ ಮುಖ ನೋಡಲು ಅನುಮತಿಸು,
ಅರೆ ನಿಮಿಷವಾದರೂ ಜೀವ ಪಡೆವೆ!

ರೆಪ್ಪೆಗಳಾಚೆ ಆಕಾಶವು ಅಂಬೆಗಾಲಿಡಲು
ತಾರೆಗಳಿಗೆ ಕುಣಿತ ಕಲಿಸಿದ ನಿನ್ನ ನೆನಪಾಗುತಿದೆ.
ನಿನ್ನ ಕಣ್ಣ ನಂಬಿ ಕಾಡಿಗೆ ಕದಿಯ ಹೊರಟ ನನ್ನ ದೃಷ್ಟಿಯ ಬಂಧಿಯಾಗಿಸು,
ಇರುಳಿಳಿದು ಹಗಲು ಹುಟ್ಟುವ ಮೊದಲೆ ಕೂಸಾಗಿ ನಿನ್ನ ಕೆನ್ನೆ ಕಚ್ಚುವೆ, ನಿನಗೂ ತಿಳಿಸದೆ…

ಹೀಗೆಲ್ಲ ಬರೆದಾಗ ಪದಗಳಿಗೂ ಬಿಗುಮಾನ
ನಿನ್ನೊಲವ ಹೆಣೆದು ಕಣ್ಣು ಮುಚ್ಚಿರುವೆ,
ಚಂದ್ರ ಸೂರ್ಯರೂ ಕೂಡ ಇದ್ದಿಲಾಗುವ ಹೊತ್ತು,
ಕತ್ತಲು ಕಳೆವ ಮುನ್ನ ಮುಡಿಗೇರಿಸು ನನ್ನ.
ನವಿಲ ಗರಿ ಬಣ್ಣ ಮಾಸುವ ಮುನ್ನ!!

‍ಲೇಖಕರು avadhi

15 January, 2020

3 Comments

  1. ಸಚಿನ್‌ಕುಮಾರ ಬ.ಹಿರೇಮಠ

    ‘ನಿನ್ನೊಲವ ಹೆಣೆದು ಕಣ್ಣು ಮುಚ್ಚಿರುವೆ’ ವಾಹ್… ಇಂಥ ಕವಿತೆ ಕವಿಚಂದ್ರನಿಂದ ಮಾತ್ರ ಸಾಧ್ಯ…
    ಅದ್ಭುತ ಕವಿತೆ…

  2. T S SHRAVANA KUMARI

    ಸುಂದರ ಕವಿತೆ

  3. Ravi Raichurkar

    ಸುಂದರವಾದ ಸಾಲುಗಳು… ‘ಚಂದ್ರ ಸೂರ್ಯರೂ ಇದ್ದಿಲಾಗುವ ಹೊತ್ತು’

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading