‘ತೇಜೋ-ತುಂಗಭದ್ರಾ’ ಎಂಬ ಒಂದು ರಮ್ಯ ಕಥಾನಕ

ತೇಜೋ – ತುಂಗಭದ್ರ

ಸಂಯುಕ್ತ ಪುಲಿಗಲ್ 

ಬಿಡುಗಡೆಯ ಮುನ್ನವೇ ಮೊದಲ ಮುದ್ರಣ ಮುಗಿದು, ಇದೀಗ ಕೆಲವೇ ದಿನಗಳಲ್ಲಿ ಮೂರನೆಯ ಮುದ್ರಣ ಕಂಡು ದಾಖಲೆಯ ಪಟ್ಟಿಗೆ ಸೇರಿದ ‘ತೇಜೋ-ತುಂಗಭದ್ರ’ದ ವಸುಧೇಂದ್ರರಿಗೆ ಅಭಿನಂದನೆಗಳು.

ಈ ಕಾದಂಬರಿ ಕನ್ನಡದ ಅತ್ಯುತ್ತಮ ಕೃತಿಗಳ ಸಾಲಿಗೆ ಸೇರುವ ಎಲ್ಲಾ ಗುಣ ಲಕ್ಷಣಗಳನ್ನೂ ಹೊಂದಿದೆ. ಇದೊಂದು ಐತಿಹಾಸಿಕ ಕಾದಂಬರಿ, ಅಂದರೆ ಇಲ್ಲಿ ವಾಸ್ತವ ಮತ್ತು ಕಲ್ಪನೆ ಎರಡೂ ಸೇರಿರುವಂತಹ ಜಗತ್ತಿದೆ. ವಾಸ್ತವ ಬದುಕಿನ ಪ್ರತಿಬಿಂಬವಾಗಿ ಕಲ್ಪನೆಯು ಕಥೆಯಾಗಿದೆ. ಎರಡೂ ಒಂದಕ್ಕೊಂದು ಪೂರಕವಾಗಿ ಅತ್ಯದ್ಭುತವಾಗಿ ಹೊಂದಿಕೊಂಡಿದೆ.

ಕಥೆ ಕಟ್ಟೋಣ ವಸುಧೇಂದ್ರರಿಗೆ ಸುಲಿದ ಬಾಳೆಯ ಹಣ್ಣು ಎಂಬುದು ಈಗಾಗಲೇ ನಿರೂಪಿತವಾದ ಸತ್ಯ. ಆದರೆ ಈ ಕಾದಂಬರಿಯಲ್ಲಿ ಕಥೆಗಾರ ವಸುಧೇಂದ್ರರ ವಿರಾಟ್ ಸ್ವರೂಪವೇ ಕಾಣುತ್ತದೆ. ಇಲ್ಲಿ ಇತಿಹಾಸದ ಅಗಾಧ ಅಧ್ಯಯನವು ನಿಖರವಾಗಿ ಕಾಣುತ್ತದೆ. ವಿವಿಧ ಧರ್ಮ, ಸಂಪ್ರದಾಯ, ಕಟ್ಟುಪಾಡುಗಳ ಬಗ್ಗೆ ಗಾಢವಾದ ವಿವರಗಳಿವೆ. ಸಾಮಾಜಿಕ ಜನಜೀವನವು ಕಣ್ಣಿಗೆ ಕಟ್ಟುವಂತೆ ರೂಪುಗೊಂಡಿದೆ. ಗತಕಾಲದ ಸಾಹಿತ್ಯ ಕೃತಿಗಳ ಪರಿಚಯವಿದೆ. ಸಾಮಾನ್ಯ ಮನುಷ್ಯರ ತೊಳಲಾಟಗಳಲ್ಲಿ ಧರ್ಮ, ರಾಜಕೀಯಗಳಿಗಿಂತ ಬದುಕು ಮುಖ್ಯ, ಮನುಷ್ಯತ್ವ ಅಗತ್ಯ ಎಂಬ ತಿಳಿ ಸತ್ಯಗಳ ಸುಂದರವಾದ ಚಿತ್ರಣವಿದೆ. ಶತಮಾನಗಳ ಹಿಂದೆಯೇ ಭವ್ಯವಾಗಿ ನಡೆದುಹೋದ ಜಾಗತೀಕರಣದ ಕುರುಹುಗಳಿವೆ.

ನನ್ನ ಇತ್ತೀಚಿನ ಅನುವಾದಿತ ಪುಸ್ತಕವಾದ “ರೆಬೆಲ್ ಸುಲ್ತಾನರು” ಪುಸ್ತಕಕ್ಕೆ ಪೂರಕವಾಗಿ, ಆ ಪುಸ್ತಕದಲ್ಲಿ ಕಂಡು ಬರುವ ಕರಾಳ ಇತಿಹಾಸದ ಪುಟಗಳಿಗೆ ಸಾಕ್ಷಿಯಾಗಿ ಜನಸಾಮಾನ್ಯರ ಬದುಕನ್ನು ಈ ಕಾದಂಬರಿಯು ಕಟ್ಟಿಕೊಡುತ್ತದೆ. ರೆಬೆಲ್ ಸುಲ್ತಾನರು ಪುಸ್ತಕವು ಕೃಷ್ಣದೇವರಾಯ ಮತ್ತು ಆದಿಲ್ ಷಾರ ನಡುವಿನ ವೈಮನಸ್ಯಗಳು ವಿಭಿನ್ನ ರೀತಿಗಳಲ್ಲಿ ವಿವರಿಸಿದರೆ, ತೇಜೋ-ತುಂಗಭದ್ರ ಆ ಎಲ್ಲಾ ರೀತಿಗಳು ಜನಸಾಮಾನ್ಯರ ಮೇಲೆ ಬೀರಿದ ಘೋರ ಪರಿಣಾಮಗಳ ವಿವರಗಳನ್ನು ಅತ್ಯಂತ ವಿವರವಾಗಿ ಚಿತ್ರಿಸುತ್ತದೆ. ಬಹುಶಃ ಈ ಕಾರಣದಿಂದ ನಾನು ಈ ಕಾದಂಬರಿಯೊಳಕ್ಕೆ ಇನ್ನೂ ಆಳವಾಗಿ ಇಳಿಯಲು ಸಾಧ್ಯವಾಗಿದೆ ಅನ್ನಿಸುತ್ತದೆ.

“ಧರ್ಮಗಳ ವಿಷಯ ಗೇಬ್ರಿಯಲ್ ಗೆ ಯಾವತ್ತೂ ಸಂಕೀರ್ಣವೆನ್ನಿಸುತ್ತೆ. ಇಡೀ ಜಗತ್ತಿಗೆ ಒಂದೇ ಧರ್ಮವಿದ್ದರೆ ಚೆನ್ನಾಗಿತ್ತು. ಹೀಗೆ ಒಬ್ಬರನ್ನೊಬ್ಬರು ಅಧರ್ಮಿಗಳೆಂದು ಜರಿದು ಬಡಿದಾಡುವ ಸಂದರ್ಭ ಇರುತ್ತಿರಲಿಲ್ಲ ಎಂದು ಕೆಲವೊಮ್ಮೆ ಅನ್ನಿಸುತ್ತದೆ” – ಎಂಬ ಈ ವಾಕ್ಯವೇ ತೇಜೋ-ತುಂಗಭದ್ರಾದ ಕೇಂದ್ರವಾಗಿ ಕಾಣುತ್ತದೆ. ಪ್ರಭುತ್ವವು, ಬಂಡವಾಳಶಾಹಿ ಧರ್ಮ, ನೀತಿ, ನಿಯಮಗಳು, ರಾಜಕೀಯ ಎಂದು ದಾಳಗಳನ್ನು ಎಸೆದಾಗ ಜರಿದು ನುಣ್ಣಗಾಗಿಹೋಗುವುದು ಮಾತ್ರ ಸಾಮಾನ್ಯ ಜನರ ಬದುಕುಗಳು. ಯಾವುದೇ ಧರ್ಮ ಸಿದ್ಧಾಂತಗಳಿಗಿಂತ ಬದುಕು ಮುಖ್ಯ ಎಂದು ಕಂಡುಕೊಳ್ಳುವ ಪಾತ್ರಗಳು ಇಂದಿನ ವರ್ತಮಾನ ಅಥವಾ ಮುಂದಿನ ಭವಿಷ್ಯವಾಣಿಯನ್ನು ನುಡಿಯುತ್ತಿರಬಹುದೇ ಎನಿಸುತ್ತದೆ.

ವಾಸ್ಕೋಡಗಾಮ, ಆಲ್ಬುಕರ್ಕನ ಸಾಹಸಗಾಥೆಗಳಷ್ಟೇ ತಿಳಿದ ನಮಗೆ ಅವರ ಇತರ ರಾಕ್ಷಸೀ ಸ್ವಭಾವಗಳನ್ನು ಪರಿಚಯಿಸುತ್ತದೆ. ಕ್ರಿಸ್ತ, ಯಹೂದಿ, ಹಿಂದೂ, ಮುಸಲ್ಮಾನರ ಜನಜೀವನದ, ಪ್ರಭುತ್ವದ ಪರಿಯ ವಿವರಗಳು ಯಥೇಚ್ಛವಾಗಿ ಸಿಗುತ್ತವೆ. ನೌಕಾಯಾನದ ವಿವರಗಳಂತೂ ನಮ್ಮನ್ನು ಅಲುಗಾಡಿಸಿಬಿಡುತ್ತದೆ.

ರಾಜ್ಯಗಳಿಗೆ ಒಡೆಯನಾದ ಕೃಷ್ಣದೇವರಾಯನು ಒಬ್ಬ ಸಾಧಾರಣ ಹೆಣ್ಣನ್ನು ತನ್ನ ಕೃತಿ “ಅಮುಕ್ತಮಾಲ್ಯದ” ಬಗೆಗೆ ಅನಿಸಿಕೆ ಕೇಳುವುದು ಮತ್ತು ಪುರಂದರ ದಾಸರು ಪಾತ್ರವಾಗಿ ಬರುವುದು ನನಗೆ ವಿಶೇಷವೆನಿಸಿದವು. ಗೇಬ್ರಿಯಲ್, ಅಹಮದ್ ಖಾನ್ ಆಗಿ, ಕಣ್ಣನಾಗಿ ಕೃಷ್ಣನಾಗುವ ರೂಪಕ ಮೆಚ್ಚುಗೆಯಾಯಿತು.

ಸ್ತ್ರೀ ಪಾತ್ರ, ಪ್ರಪಂಚಗಳಿಗೂ ಈ ಕಾದಂಬರಿಯಲ್ಲಿ ವಿಶೇಷ ಸ್ಥಾನವಿದೆ. ಬೆಲ್ಲಾ, ಹಂಪಕ್ಕ, ತೆಂಕಮ್ಮ, ಈಶ್ವರಿ, ಗುಣಸುಂದರಿ ಹೀಗೆ ಎಲ್ಲ ಪಾತ್ರಗಳೂ ತನ್ನದೇ ಆದ ವಿಶಿಷ್ಟತೆಗಳನ್ನು ಮೆರೆದಿವೆ. ಖೊಜ್ಜಾ ಆದ ಚಂಪಕ್ಕನ ಪಾತ್ರದ ಹೆಣ್ಮನಸ್ಸೂ ಸಹ ಅತ್ಯಂತ ಆಪ್ತವೆನಿಸುತ್ತದೆ.

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಈ ಕಾದಂಬರಿಯ ಓದಿನ ಪಯಣ. ಪ್ರತಿ ಅಧ್ಯಾಯಕ್ಕೂ ನಿಗದಿಯಾಗುವ ನಮ್ಮ ಮಾನಸಿಕ ಚೌಕಟ್ಟನ್ನು ಹದವಾಗಿ ಮುರಿದು ಇನ್ನೊಂದು ಹೊಸ ಫ್ರೇಮ್ ಅನ್ನು ಪ್ರಾರಂಭಿಸುತ್ತಾರೆ. ಬ್ರೆಡ್ಡು, ಕ್ರಿಸ್ತ, ಯಹೂದಿ, ಕಾಗದ, ಪಾದ್ರಿ, ರಬ್ಬಿ, ಮುದ್ರಣ, ಶುಕ್ರವಾದರ ಒಕ್ಕೂಟ, ಯಹೂದಿಗಳ ಶ್ರೀಮಂತಿಕೆ, ಲಿಸ್ಬನ್ನಿನ ದೈನಂದಿನ ಬದುಕನ್ನು ಓದುತ್ತಾ ಒಂದು ಚಿತ್ರಣವು ಕಟ್ಟಿಕೊಂಡ ಓದುಗ ಇದ್ದಕ್ಕಿದ್ದಂತೆ, ಎರಡನೆಯ ಅಧ್ಯಾಯದಲ್ಲಿ “ನಮಃ ಪಾರ್ವತಿ ಪತಯೇ ಹರಹರ ಮಹಾದೇವ” ಎಂದು ಓದಲು ಪ್ರಾರಂಭಿಸುತ್ತಾನೆ. ಅಣ್ಣಂಭಟ್ಟರು, ತೆಂಬಕಪುರ, ಹಂಪಮ್ಮ, ದೇವಸ್ತಾನ, ಸಂಪ್ರದಾಯ ಎಂದು ಪ್ರಾರಂಭಿಸಿದ ಎರಡನೆಯ ಅಧ್ಯಾಯವು ಮತ್ತೆ ಸಶೇಷವಾಗಿ ಲಿಸ್ಬನ್ನಿನಿಂದ ಹೊರಟ ನೌಕೆ ಅಲ್ಬುಕರ್ಕ್, ಗೇಬ್ರಿಯಲ್ ಎಂದು ಪ್ರಾರಂಭವಾಗುತ್ತದೆ. ಈ ರೀತಿಯಾದ ಭಿನ್ನ ಸಂಸ್ಕೃತಿಗಳ ಒಟ್ಟೊಟ್ಟಿಗಿನ ಓದು ಒಂದು ವಿಶೇಷ ಪ್ರಯೋಗವಾಗಿ ಓದನ್ನು ಮುದಗೊಳಿಸುತ್ತದೆ.

ಕೆಲವೊಂದು ಕಡೆ ವಿವರಗಳು ಸ್ವಲ್ಪ ಭಾರವಾಗಿರುವ ಸಂದರ್ಭವೂ ಇದೆ. ಪುರಂದರ ದಾಸರ ಪಾತ್ರಾಗಮನದಿಂದ ಮುಖ್ಯಕಥೆಯು ಒಂಚೂರು ಆಚೀಚೆಯಾದಂತೆ ಭಾಸವಾಗುತ್ತದೆ. ಆದರೆ ಈ ಅಭಿಪ್ರಾಯವು ಕಥೆಯು ನಮ್ಮನ್ನು ಸೆಳೆದುಕೊಳ್ಳುವ ಆಳದ ಪ್ರಭಾವವೇ ಆಗಿದೆ ಎಂದು ನನಗೆ ಅನ್ನಿಸುತ್ತದೆ. “ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ” ಎಂಬ ನಿರ್ಣಾಯಕ ನುಡಿಗಳಂತೂ ಇಡೀ ಕಾದಂಬರಿಯ ಆಶಯವನ್ನು ಧ್ವನಿಸುತ್ತದೆ.

ಮನೆಯ ಹಿರಿಯರೊಬ್ಬರು ಮಕ್ಕಳನ್ನು ಕೂರಿಸಿಕೊಂಡು “ಒಂದು ಕಥೆ ಹೇಳ್ತೀನಿ ಕೇಳು” ಎಂದು ಮುದ್ದಾಗಿ ರಮಿಸುತ್ತಾ ಸುಂದರ ಕಥೆಯೊಂದಿಗೆ ನೀತಿಪಾಠಗಳನ್ನು ಹೇಳುತ್ತಾರಲ್ಲಾ, ಆ ರೀತಿಯಾದ ಅನೇಕ ಆಳವಾದ ಹೊಳಹುಗಳನ್ನುಳ್ಳ ಒಂದು ರಮ್ಯ ಕಥಾನಕವು ತೇಜೋ-ತುಂಗಭದ್ರಾ ಆಗಿ ರೂಪುಗೊಂಡಿದೆ. ಈ ವಿಶೇಷ ಓದಿಗಾಗಿ ವಸುಧೇಂದ್ರರಿಗೆ ಮತ್ತೊಮ್ಮೆ ವಂದನೆಗಳು.

‍ಲೇಖಕರು avadhi

January 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಪುಸ್ಸಕ ಕೈಗೆ ಬಂದಿದೆ. ಓದು ಇನ್ನೂ ಶುರುವಾಗಬೇಕಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: