ಬಡವನಿಗೆ ಬಾನವ ಇಕ್ಕುವಾಗ ನೋ ಪೋಟೊ ಪ್ಲೀಸ್..!

ಎನ್ ರವಿಕುಮಾರ್ ಟೆಲೆಕ್ಸ್    

ಕಳೆದ ಹದಿನೈದು ದಿನಗಳಿಂದ ಗಮನಿಸುತ್ತಿದ್ದೇನೆ. ದಿನಪತ್ರಿಕೆಗಳ ಪುಟಗಳನ್ನು ತಿರುವು ಹಾಕುತ್ತಿದ್ದಂತೆ ಹಸಿದವರಿಗೆ ,ಬಡವರಿಗೆ , ಕೂಲಿ ಕಾರ್ಮಿಕರಿಗೆ ಕೆಲವು ವ್ಯಕ್ತಿಗಳು, ಸಂಘಟನೆಗಳು  ಒಂದು ಬಿಸ್ಕೇಟ್ ಪ್ಯಾಕೇಟ್ ನಿಂದ ಹಿಡಿದು ಒಂದತ್ತು  ಕೆ.ಜಿ ಅಕ್ಕಿ ಚೀಲವನ್ನು ಕೊಡುವುದರವರೆಗೂ ದಾನ ಮಾಡುತ್ತಿರುವ ಪೋಟೂಗಳು  ನಿರಂತರವಾಗಿ ಪೇಜುಗಟ್ಟಲೆ ಪ್ರಕಟಗೊಳ್ಳುತ್ತಿವೆ. ಅಷ್ಟೇ ಅಲ್ಲ ಸಾಮಾಜಿಕ ಜಾಲ ತಾಣಗಳಲ್ಲಂತೂ ಇಂತಹ ಪೋಟೋಗಳಿಂದಲೇ ತುಂಬಿಹೋಗಿದ್ದು, ಕೊಡುವವರು ಗತ್ತು, ಪಡೆಯುವವರು ದೀನತೆ ಎರಡೂ ಕಂಡು ಬರುತ್ತಿವೆ.  ಕೊರೊನಾ ಹಿನ್ನಲೆಯಲ್ಲಿ  ಅನುಸರಿಸುತ್ತಿರುವ ನಿರ್ಬಂಧಾತ್ಮಕ ಕ್ರಮಗಳು  ಬಡವರು, ಶ್ರಮಿಕ ಸಮುದಾಯವನ್ನು ಕೊರೊನಾ ಸೋಂಕಿನ ಪರಿಣಾಮಗಳಿಗಿಂತ ಘನಘೋರ ದುಃಖಕ್ಕೆ ದೂಡಿವೆ.ಇಂತಹ ಸಂದರ್ಭದಲ್ಲಿ ಹಸಿದವರ, ಬಡವರ, ಕೂಲಿ ಕಾರ್ಮಿಕರ ನೆರವಿಗೆ ಉದಾತ್ತಾ ವ್ಯಕ್ತಿ, ಸಂಘಟನೆಗಳು ಕೈಚಾಚುತ್ತಿರುವುದು  ಈ ಸಮಾಜದಲ್ಲಿ ದ್ವೇಷಕ್ಕಿಂತಲೂ ಮಿಗಿಲಾಗಿ ಮಾನವೀಯತೆಯ ಸೆಲೆ ಇದೆ ಎಂಬುದನ್ನು ಸಾಬೀತು ಪಡಿಸುತ್ತಿದೆ. ಇದಕ್ಕಾಗಿ ಅಂತಹ ಎಲ್ಲಾ ಮಾನವೀಯ ಮನಸ್ಸುಗಳಿಗೆ ಕೃತಜ್ಞತಾ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತಲೇ ಇಂತಹ ಮಾನವೀಯ ಕೆಲಸಗಳು ಮುಂದುವರೆಯಲಿ ಎಂದು ಆಶಿಸುತ್ತೇನೆ.

ನೆರೆ ಹಾವಳಿ, ಭೂಕಂಪನ, ಬರ..ಇಂತಹ ನೈಸರ್ಗಿಕ ಅವಘಡಗಳು ಎರೆಗಿದಾಗಲೆಲ್ಲಾ ಮನುಷ್ಯ ಮನುಷ್ಯನ ನೆರವಿಗೆ ನಿಲ್ಲುತ್ತಲೆ ಬಂದಿದ್ದಾನೆ. ಕೊರೊನಾ ಕೂಡ ಇದೊಂದು ನೈಸರ್ಗಿಕ ವಿಪತ್ತು. ಮನುಕುಲವನ್ನೇ ಮರುಕಟ್ಟಲಾಗದಷ್ಟರ ಮಟ್ಟಿಗೆ ನಾಶದ ಆತಂಕವನ್ನು ತಂದಿಟ್ಟಿದೆ. ಅದರಲ್ಲೂ ಈ ಸಮಾಜದಲ್ಲಿನ ಬಡವರು, ನಿರ್ಗತಿಕರು,  ವಲಸೆ ಕಾರ್ಮಿಕರು, ಶ್ರಮಿಕ ಸಮುದಾಯದ ಪಡಿಪಾಟಲನ್ನು ನೋಡಲಾಗುತ್ತಿಲ್ಲ. ಇಂತಹ ವೇಳೆಯಲ್ಲಿ  ನೆರವಿನ ಹಸ್ತಗಳು ಪ್ರವಾಹೋಪಾದಿಯಲ್ಲಿ ಚಾಚುತ್ತಿರುವುದು ಈ ಸಮಾಜದಲ್ಲಿ ಮಾನವತೆ ಎಂಬ ಜನ್ಮಜಾತ ಗುಣಕ್ಕೆ ಬರವಿಲ್ಲ ಎಂಬುದು ಸಾಬೀತಾಗುತ್ತಿದೆ.   ಸಮಾಜದಲ್ಲಿ ಕೇಡು,ದ್ವೇಷ, ಸ್ವಾರ್ಥಗಳಂತಹ ಚರಂಡಿಗಳಿಗಿಂತ  ಉದಾತ್ತತೆ, ಮಾನವತೆ, ಪ್ರೀತಿ, ಕರುಣೆ ಸಂವೇದನೆಯ ದೊಡ್ಡ ನದಿಗಳೇ ಹರಿಯುತ್ತಿರುವುದನ್ನು ಎಲ್ಲಾ ಕಾಲದಲ್ಲೂ ಕಂಡಿದ್ದೇವೆ.

ನಂಬಿಕೆಯಂತೆ ಮನುಷ್ಯ  ದೇವರಿಂದ ಸೃಷ್ಟಿಸಲ್ಪಟ್ಟ ಜೀವಿ. ( ಇದರಲ್ಲಿ ಧರ್ಮ ಹುಡುಕಬೇಡಿ) ಇಲ್ಲಿ ದೇವರು ಎಂದರೆ ನನ್ನ ಮಟ್ಟಿಗೆ ‘ಒಳ್ಳೆಯದು’, ಒಳಿತು ಮಾಡುವುದು , ಕೇಡಿಲ್ಲದ, ಸೇಡಿಲ್ಲದ, ಸ್ವಾರ್ಥವಿಲ್ಲದ  ಪ್ರೇಮದಿಂದ ಕೂಡಿದ ಅಸೀಮ ಭಾವನೆಯೇ ದೇವರು. ಇಂತಹ ದೇವರಿಂದ ಸೃಷ್ಟಿಯಾದ ಮನುಷ್ಯ ಅಸಲಿಗೆ ದೇವರೇ ಆಗಿರಬೇಕು. ಅಂತಹ ದೇವರುಗಳು ಇಂದು ಎಲ್ಲ ಕಡೆ ದರ್ಶನವಾಗುತ್ತಿದ್ದಾರೆ. ಹಸಿದವರ, ನೊಂದವರ ದುಃಖ-ದುಮ್ಮಾನಗಳ ಬಹುರೂಪದಲ್ಲಿ ಜೊತೆ ನಿಲ್ಲುತ್ತಿರುವುದನ್ನು ಕಾಣುತ್ತಿದ್ದೇನೆ.  ಈ ಕೆಲಸಗಳು ಒಂದು ಗುರುತರವಾದ ಸಾಮಾಜಿಕ ಹೊಣೆಗಾರಿಕೆ ಮತ್ತು ಬದುಕಿನ ಮೌಲ್ಯವೂ ಕೂಡ. ಅದರೆ ಇಂತಹ ದೇವರ ಕೆಲಸ ಮಾಡುವಾಗ ವಿವೇಕ ಸತ್ತಂತೆ  ಕೆಲವರು ವರ್ತಿಸುತ್ತಿರುವುದು ಸತ್ಕಾರ್ಯದ ಘನತೆಗೆ ಕುಂದಾದರೆ,  ಹಸಿದವರ, ನಿರ್ಗತಿಕರ ಸ್ಥಿತಿಯನ್ನು ಲೇವಡಿ ಮಾಡುವ ಪ್ರಹಸನವೂ ಆಗುತ್ತಿರುವುದು ದೊಡ್ಡ ವಿಪರ್ಯಾಸ.

ಒಂದು ಬಾಳೆಹಣ್ಣನ್ನೋ, ಒಂದು ಪಾರ್ಲೇಜಿ ಬಿಸ್ಕೇಟ್ ಪ್ಯಾಕೇಟನ್ನೋ ಹಸಿದ ವ್ಯಕ್ತಿಯೊಬ್ಬನಿಗೆ ಕೊಡಲು ಮೂರ‍್ನಾಲ್ಕು ಜನಮುಗಿಬಿದ್ದು  ಕೈ ಜೋಡಿಸಿ ಪೋಟೋ ಕ್ಲಿಕ್ಕಿಸಿಕೊಂಡು ಪ್ರಚಾರಕ್ಕೆ ಹೊರಡುವವರಲ್ಲಿ  ಮಾನವತೆಗಿಂತ ಅಹಂ ನ  ಕ್ಷುಲ್ಲಕತನವೆ ಎದ್ದು ಕಾಣುತ್ತದೆ. “ಬಲಗೈಲಿ  ಮಾಡಿದ ದಾನ ಎಡಗೈ ಗೊತ್ತಾಗಬಾರದು”  ಎಂಬ ಜನಪರಂಪರೆಯ ಜ್ಞಾನವನ್ನು ಬಿತ್ತಿದ ಈ ಸಮಾಜದಲ್ಲಿ ಈಗ  ಎಡಗೈಗೆ ಗೊತ್ತಾಗುವುದಿರಲಿ,  ಊರೂರಿಗೂ ಸಾರುವ ದೇಶಾವರಿತನಗಳು ನಡೆಯುತ್ತಿವೆ. ನಿಜವಾದ ದಾನಿಗಳು, ಮಾನವೀಯ ತುಡಿತ ಉಳ್ಳವರು ಸದ್ದಿಲ್ಲದೆ ಸಂತ್ರಸ್ತರ ಕಣ್ಣೀರು ಒರೆಸುತ್ತಾ  ಶಿವನ, ಏಸುವಿನ, ಅಲ್ಲಾಃಹುವಿನ  ಸೇವೆ ಮಾಡಿದಂತೆ  ದೇವರನ್ನು ತಲುಪುತ್ತಿದ್ದಾರೆ. ಸ್ವತಃ ದೇವರೇ ಆಗುತ್ತಿದ್ದಾರೆ.! ಇಂತಹವರ ನಡುವೆಯೂ   ಬಡವರ ಕಣ್ಣೀರು, ಹಸಿವನ್ನು ಬಂಡವಾಳ ಮಾಡಿಕೊಂಡವರು ಮಾತ್ರ    ಅನ್ನದ ಚೀಲಕ್ಕೆ ತಮ್ಮ ಪೋಟೋ ಚಾಪಿಸಿಕೊಂಡು, ಕೊಡುವಾಗ ಪೋಟೋ , ಸೆಲ್ಫಿ ಕ್ಲಿಕ್ಕಿಸಿಕೊಂಡು ಸತ್ತ ಆತ್ಮ ಹೊತ್ತು ಮೆರೆವಣಿಗೆ ಹೊರಟಿದ್ದಾರೆ.

ಒಟ್ಟಾರೆ ಮನುಷ್ಯಕುಲಕ್ಕೆ ಒದಗಿದ ಬಂದ ಸಂಕಷ್ಟದ ಕಾಲದಲ್ಲೂ ಪಕ್ಷ, ಜಾತಿ,ಧರ್ಮ ಗಳ ಆಧಾರದಲ್ಲೂ ಬಡವರ ವಿಭಜನೆಯಾಗುವುದು ಬಹುಶಃ ಭಾರತದಲ್ಲಿ ಮಾತ್ರವೇನೋ?, ವ್ಯಕ್ತಿ ಇರಲಿ, ಸರ್ಕಾರವೇ ಮನೆ ಮನೆಗೆ ಉಚಿತ ಹಾಲು ತುಂಬಿದ ಪ್ಯಾಕೇಟ್ ವಿತರಿಸುವ ಕೆಲಸವೂ ಪಕ್ಷ ರಾಜಕಾರಣದ ರಣರೋಗದ ಸೋಂಕಿನಿಂದ ಕೂಡಿರುವುದು ದೌಭಾರ್ಗ್ಯದ ಸಂಗತಿ.

“ತನ್ನ ಮುಟ್ಟಿ ನೀಡಿದುದೆ ಪ್ರಸಾದ,
ತನ್ನ ಮುಟ್ಟದೆ ನೀಡಿದುದೆ ಓಗರ.
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ
ಇದು ಕಾರಣ, ಇಂತಪ್ಪ ಭೃತ್ಯಾಚಾರಿಗಲ್ಲದೆ
ಪ್ರಸಾದವಿಲ್ಲ ಗುಹೇಶ್ವರಾ..”

ಈ ಜಗತ್ತಿನಲ್ಲಿ ಯಾವುದೂ  ತನ್ನದಲ್ಲ. ಇಲ್ಲಿಂದಲೇ ಪಡೆದಿದ್ದು ಇಲ್ಲಿಗೆ ಅರ್ಪಿಸಬೇಕು. ಬಡವನೆಂಬ ಭಗವಂತನಿಗೆ  ಅರ್ಪಿಸುವ ಪದಾರ್ಥಗಳು ಮನಃಪೂರ್ವಕವಾಗಿ, ಭಾವತುಂಬಿ, ಪ್ರತಿಫಲ ಬೇಡದ ದಾಸೋಹಭಾವದಿಂದ ಅರ್ಪಿಸಿದಾಗ  ಅದು ಜಂಗಮನಿಗರ್ಪಿಸಿದ,  ಪ್ರವಾದಿ ಅಲ್ಹಾಃಹುವಿನೆಡೆಗೆ ತೋರಿದ, ಏಸುಪ್ರಭುವಿನ ಪಾದಕ್ಕರ್ಪಿಸಿದ ಪರಮ ಪ್ರಸಾದವಾಗುತ್ತದೆ.

ಈ ಹೊತ್ತಿನಲ್ಲಿ ಹಸಿದ  ಬಡವರೆಂಬ ಲಿಂಗಕ್ಕೆ ಬಾನವ ಇಕ್ಕುವಾಗ ನೋ ಪೋಟೋ ಪ್ಲೀಸ್..
ನೋ ಪಬ್ಲಿಸಿಟಿ ಪ್ಲೀಸ್..
ನೋ ಪಾಲಿಟಿಕ್ಸ್ ಪ್ಲೀಸ್.

ಕೊಡುವವರ ಕೈಗಳು ಅಕ್ಷಯವಾಗಲಿ
ಪಡೆವವರ ಬೊಗಸೆ ತುಂಬಿ ತೃಪ್ತವಾಗಲಿ.
ಜಗತ್ತು ಕೊರೊನಾ ದಿಂದ ಮುಕ್ತವಾಗಲಿ

‍ಲೇಖಕರು avadhi

April 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ. ದೇವನಹಳ್ಳಿ.

    ಮನುಕುಲಕ್ಕೆ ಇಂಥಾ ಕೇಡುಗಳು ಒದಗಬಾರದು. ರವಿಕುಮಾರ್ ಟೆಲೆಕ್ಸ್ ಅವರ ಬರಹಗಳ ಆಶಯವೇ ನೈಜ ಆದರ್ಶಗಳಲ್ಲಿ ಮನುಷ್ಯರಾಗುವ,ಮಾನವತೆಗೆ ಸದಾ ಕಾತರಿಸುವ ಮಹತ್ತನ್ನು ಒಳಗೊಂಡವು….ಯಾವ ಲೇಖನ,ಕವಿತೆಗಳಲ್ಲಾದರೂ ವಾಸ್ತವದ ಹಾದಿಗಳಲ್ಲಿ ಎಚ್ಚರ ಹಾಗೆ ಅರಿವು ತಳಹದಿಯಾಗುವ ಮೂಲಕ ಗಟ್ಟಿಮೌಲ್ಯಗಳ ಪರ ತುಡಿತಗಳಿರುತ್ತವೆ…. ಇಂಥಾ ಅಸ್ಮಿತೆಯ ಅರಿವು ಮೇಲಿನ ಅವರ ಲೇಖನದ ಆತ್ಮ. ಅಶಕ್ತರ ಪಾಲಿಗೆ ನೆರವು ನೀಡುವಾಗ ಪೋಟೋ ಹುಚ್ಚಿನ ಹಿಂದೆ ಬೀಳುವ ಆತ್ಮರತಿ ಅಪಾಯಕಾರಿ.. ಗುರುತಿಸಿಕೊಳ್ಳಲೇ ಬೇಕೆಂಬ ಉಮೇದುಗಳು ಅಸಹಾಯಕ ನೋವಿಗೆ ಸ್ಪಂದಿಸುವ ಬದಲು ಅವರನ್ನು ಇನ್ನೊಂದಿಷ್ಟು ಕುಗ್ಗಿಸಿ ಅವಮಾನಿಸುತ್ತವೇ ಹೊರತು ಪ್ರೀತಿಯ ಒಡಲಲ್ಲಿ ಆಪ್ತವಾಗಲಾರವು… ಅನ್ನ ಹಳ್ಳಿಯ ಹಾಗೂ ನಗರದ ಶ್ರಮಿಕರಿಗೆ ಗೌರವದ ಚೇತನವಾಗಿ ಅಭಿಮಾನವಾದರೆ ಅನೇಕ ಶ್ರೀಮಂತರಿಗೆ ಗರ್ವದ ಕುತೂಹಲವಷ್ಟೇ….. ಇಂಡಿಯಾ ಸಮಾನತೆಯ ಅಸ್ಮಿತೆಗಳ ಮೂಲಕವೇ ಬಹುಸಂಸ್ಕೃತಿಯ ಬಯಲು… ಹಾಗಾಗಿ ರವಿ ಟೆಲೆಕ್ಸ್ ಅವರು ಹೇಳುವ ಹಾಗೆ ಮೌಲ್ಯ ಮತ್ತು ನೆರವು ಹಾಗೇ ಅಶಕ್ತಸಮುದಾಯಕ್ಕೆ ಆತುಕೊಳ್ಳಲು ಪೋಟೋ ರೂಪದ ಧಿಮಾಕುಗಳು ಬೇಕಿಲ್ಲ……ಮಹಾಮಾನವತೆಯ ಕಸುವು ಸಾಕಲ್ಲವೇ….

    ಪ್ರತಿಕ್ರಿಯೆ
  2. T S SHRAVANA KUMARI

    ಈ ದಿನ ಪ್ರಜಾವಾಣಿ ಸಂಪಾದಕೀಯದ ಕೆಳಗೆ ಒಬ್ಬ ಉದ್ಯೋಗಸ್ತೆ ಟ್ವೀಟ್ ಮಾಡಿರುವುದನ್ನು ಹಾಕಿದ್ದರು. ‘ಲಾಕ್ಡೌನ್ ವಿಸ್ತರಣೆಯಾದರೆ ಪಾನು ನನ್ನ ಚಾಲಕ ಮತ್ತು ಮನೆಕೆಲಸದವಳಿಗೆ ಪೂರ್ತಿ ಸಂಬಳ ಕೊಡುತ್ತೇನೆ. ಅವರನ್ನು ಹಸಿವಿನಲ್ಲಿ ಇರಲು ಬಿಡುವುದಿಲ್ಲ. ಈ ಎರಢು ಜೀವಗಳ ಹೊಣೆ ಹೊತ್ತುಕೊಳ್ಳುತ್ತೇನೆ. ನೈತಿಕವಾಗಿ ಭ್ರಷ್ಟರಿಗಿರುವ ಈ ಸಮಾಜದಲ್ಲಿ ಎಲ್ಲ ಸವಲತ್ತುಗಳೊಂದಿಗೆ ಬದುಕುತ್ತಿರುವುದರಿಂದ ಅನುಭವಿಸುತ್ತಿರುವ ಪಾಪಪ್ರಜ್ಞೆಯಿಂದ ಪಾರಾಗಲು ನಾನು ಪಾರಾಗಲು ಮಾಡಬಹುದಾದ ಅಳಿಲು ಸೇವೆ ಇದಾಗಿದೆ’ ಎಂದು ಬರೆದುಕೊಂಡಿದ್ದಾರೆ. ಕೊಡಬೇಕಾದ್ದೇ ನ್ಯಾಯವಲ್ಲವೇ. ಇದರಲ್ಲಿ ಪೇಪರಿನಲ್ಲಿ ಹಾಕುವಂತ ಹೆಚ್ಚುಗಾರಿಕೆಯೇನಿದೆ ಎಂದೇ ನನಗರ್ಥವಾಗಲಿಲ್ಲ. ನನಗೆ ತಿಳಿದವರೆಲ್ಲರೂ ಹೀಗೆಯೇ ಕೊಡುತ್ತಿದ್ದಾರೆ. ಉದ್ಯೋಗಸ್ತರು ಅಕಸ್ಮಾತ್ ತಾವೂ ರಜ ಹಾಕಿದ್ದರೂ ತಾವೂ ಸಂಬಳ ಪಡೆದುಕೊಳ್ಳುತ್ತಿದ್ದರು ತಾನೇ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: