ಬಕ್ಕೆ ಹಣ್ಣಿನ ನೆನಪು…

ತಮ್ಮಣ್ಣ ಬೀಗಾರ

ಆಗ ಈಗಿನ ಹಾಗೆ ಅಂಗಡಿ ತಿಂಡಿಗಳು ಮಕ್ಕಳಿಗೆ ಸಿಗುತ್ತಿರಲಿಲ್ಲ. ಮನೆಯಲ್ಲಿ ಬಡತನ. ಊರಲ್ಲಿ ಯಾರೂ ಶ್ರೀಮಂತರಿರಲಿಲ್ಲ ಅನಿಸುತ್ತದೆ. ಮನೆಯಲ್ಲಿ ಬೆಳೆದ ಭತ್ತ ವರ್ಷಪೂರ್ತಿ ಊಟಕ್ಕೆ ಸಾಲದು. ಮನೆ ತುಂಬಾ ಮಕ್ಕಳು. ಎಲ್ಲರಿಗೂ ಹಸಿವು. ಒಂದು ಮೂಟೆ ಭತ್ತ ನೆನಸಿಟ್ಟು ಆಮೇಲೆ ಅದನ್ನು ದೂರದ ಯಲ್ಲಾಪುರಕ್ಕೆ ಒಯ್ದು ಅವಲಕ್ಕಿ ಮಾಡಿಸಿಕೊಂಡು ಬಂದರೆ… ಹಸಿ ಹಸಿ ಅವಲಕ್ಕಿ ಚೀಲದಲ್ಲಿ ಇದ್ದಹಾಗೇ ಮಕ್ಕಳ ಬಾಯಲ್ಲಿ ಕರಗಿಹೋಗುತ್ತಿತ್ತು. ಬಾಳೆಕಾಯಿಯ ದೊಡ್ಡ ಗೊನೆ ತಂದಿಟ್ಟಿದ್ದರೆ ಬುಡದಲ್ಲಿ ಒಂದೆರಡು ಕಾಯಿ ಹಳದಿ ಆಗುತ್ತಿದ್ದಂತೆಯೇ ಅದು ನಮ್ಮದ್ಯಾರದೋ ಹೊಟ್ಟೆಗೆ ಹೋಗಿ ಬಿಡುತ್ತಿತ್ತು.

ಕಾಯಿ ಹಳದಿಯಾಗುತ್ತಿದ್ದಂತೆ ಖಾಲಿ ಆಗುತ್ತಿದ್ದುದರಿಂದ ಬಾಳೆಗೊನೆಯ ಕೊನೆಯ ಕಾಯಿ ಹಣ್ಣಾಗುವುದಕ್ಕೂ ಗೊನೆ ಖಾಲಿಯಗುವುದಕ್ಕೂ ಸರಿಯಾಗುತ್ತಿತ್ತು. ಇದೆಲ್ಲ ಯಾಕೆ ಹೇಳಿದೆನೆಂದರೆ ನಮ್ಮ ಬಾಲ್ಯದಲ್ಲಿ ಈಗಿನ ಹಾಗೆ ಹಸಿವಿಗೆ ಅಂಗಡಿಗಳ ತಿಂಡಿ ಸಿಗುತ್ತಿರಲಿಲ್ಲ. ಆಗೆಲ್ಲ ಅವಲಕ್ಕಿ, ಗೆಣಸು, ಬಾಳೆಕಾಯಿ ಇಂತವುಗಳ ಜೊತೆಗೆ ಹಲಸು ನಮ್ಮ ಹಸಿವನ್ನು ಹೆಚ್ಚು ನೀಗಿಸುತ್ತಿತ್ತು.

ನಮ್ಮ ತೋಟದ ತುಂಬಾ ಇದ್ದಿದ್ದ ಹಲಸಿನ ಮರಗಳನ್ನು ನೆನಪಿಸಿಕೊಂಡರೆ ಈಗಲೂ ಖುಷಿಯಾಗುತ್ತದೆ. ಹಲಸಿನ ಹಣ್ಣು ನಿಮಗೆಲ್ಲರಿಗೂ ಗೊತ್ತಿದೆ. ಅದರಲ್ಲಿ ಎರಡು ವಿಧ. ಹಣ್ಣಾದಾಗಲೂ ಗಟ್ಟಿಯಾಗಿದ್ದು ಸೊಳೆಗಳನ್ನು ಜಗಿದು ತಿನ್ನುವುದು ಒಂದು ಬಗೆಯಾದರೆ… ಇನ್ನೊಂದು ಮೃದುವಾಗಿದ್ದು ರಸಮಯವಾದ ಮೆದು ಸೊಳೆಗಳದ್ದು ಇನ್ನೊಂದು ಬಗೆ. ನಾವು ಗಟ್ಟಿಯಾಗಿರುವುದಕ್ಕೆ ಬಕ್ಕೆ ಹಲಸು ಎಂದು ಮೃದುವಾಗಿರುವುದಕ್ಕೆ ಚಕ್ಕೆ ಹಲಸು ಎಂದೂ ಕರೆಯುತ್ತಿದ್ದೆವು.

ಜೊರೊ ಜೊರೊ ಎನ್ನುವ ಮಳೆಯಲ್ಲಿ ಶಾಲೆಯಿಂದ ತೋಟದ ಹಾದಿಯಲ್ಲಿ ತುಂಬಿ ಹರಿಯುತ್ತಿದ್ದ ಪುಟ್ಟ ಪುಟ್ಟ ಹಳ್ಳಗಳ ಸಂಕಗಳನ್ನು ದಾಟುತ್ತ ಮನೆಗೆ ತಲುಪುತ್ತಿದ್ದೆವು. ಮನೆಗೆ ತಲುಪುವಷ್ಟರಲ್ಲಿ ಹೊಟ್ಟೆ ಹಸಿದು ಒಂದು ರೀತಿಯ ತಳಮಳ ಆಗುತ್ತಿತ್ತು. ಆಗ ಬಂದವರೇ ಪಾಟೀಚೀಲವನ್ನು ಕೆಳಗೆ ಹಾಕಿ ಮನೆಯ ಹಿಂಬದಿಯ ಮಾಡಿನ ಅಡಿಗೆ ಮಣ್ಣಿನಲ್ಲಿ ಮುಚ್ಚಿಟ್ಟಿದ್ದ ಹಲಸಿನ ಬೇಳೆಯನ್ನು (ಬೀಜ) ಬೊಗಸೆ ತುಂಬಾ ಎತ್ತಿತಂದು ಬಚ್ಚಲ ಒಲೆಯ ಬೆಂಕಿಯ ಕೆಂಡಗಳ ನಡುವೆ ಹಾಕುತ್ತಿದ್ದೆವು. ಐದು ಹತ್ತುನಿಮಿಷಗಳಲ್ಲಿ ಹಲಸಿನ ಬೇಳೆ ಒಂದೆರಡು ಡಬ್ ಎನ್ನುತ್ತ ತಾನು ಬೆಂದಿದ್ದೇನೆ ಎಂದು ನಮಗೆ ಸೂಚನೆ ನೀಡುತ್ತಿತ್ತು. ಬಿಸಿ ಬಿಸಿ ಬೇಳೆಯನ್ನು ಹೊರಕ್ಕೆ ತೆಗೆದು ಮೇಲಿನ ಸಿಪ್ಪೆ ಸೊಲಿದು ಬಾಯಿಗೆ ಹಾಕಿಕೊಂಡರೆ… ಒಂದೊಂದು ಸಾರಿ ಹೊರಗೆ ಹೆಚ್ಚಿಗೆ ಬಿಸಿ ಇಲ್ಲದಿದ್ದರೂ ಒಳಗೆ ಹೆಚ್ಚಿಗೆ ಬಿಸಿ ಇದ್ದು ಬಾಯಿ ಸುಡುವುದೂ ಇತ್ತು. ಆದರೆ ಆಗಲೇ ಬೇಳೆಯ ರುಚಿ ನಾಲಿಗೆಗೆ ತಾಗಿ ಸುಡುತ್ತಿರುವ ಬೇಳೆಯನ್ನೇ ಬಾಯೊಳಗೆ ತಿರುಗಿಸಿ ತಿಂದು ಖುಷಿಪಡುತ್ತಿದ್ದೆವು.

ಎಪ್ರಿಲ ಮೇ ರಜೆಯಲ್ಲಿಯಂತೂ ಹಲಸಿನದೇ ಸಂಭ್ರಮ. ಮಾವಿನ ಹಣ್ಣುಗಳು ಸಿಗುತ್ತಿದ್ದವಾದರೂ ಹೊಟ್ಟೆ ಬೇಗ ತುಂಬಿಸುವುದು ಹಲಸಿನ ಹಣ್ಣೇ. ದಿನಾಲೂ ಬೆಳಗಾದಕೂಡಲೇ ತೋಟದ ಮೂಲೆಯಲ್ಲಿರುವ ಜೇನು ಹಲಸು (ಜೇನು ತುಪ್ಪದಂತಹ ರುಚಿ ಇರುವ ಹಲಸು) ಬಿಳೇ ಹಲಸು, ಕೆಂಪು ಹಲಸು ಬಕ್ಕೆ ಮರಗಳಿಗೆಲ್ಲ ನಾನೋ ಅಣ್ಣನೋ ಬೆಟ್ಟಿನೀಡಿ ಎಲ್ಲಿ ಹಣ್ಣಾಗಿದೆ ಎಂದು ನೋಡುತ್ತಿದ್ದೆವು. ಎಲ್ಲ ಮರಗಳನ್ನೂ ನಮ್ಮಿಂದ ಹತ್ತಲು ಆಗುತ್ತಿರಲಿಲ್ಲ. ಮರದಲ್ಲಿ ಹಣ್ಣಾಗಿದೆಯೋ ಎಂದು ನೋಡಲು ನಮ್ಮಲ್ಲಿ ಹಲವು ಉಪಾಯಗಳಿದ್ದವು. ಹಲಸಿನ ಮರದಡಿನಿಂತು ನಿಧಾನ ಉಸಿರಾಡುತ್ತ ಹಲಸಿನ ಹಣ್ಣಿನ ವಾಸನೆ ಮರದಿಂದ ಬರುತ್ತಿದೆಯೋ ನೋಡುವುದು.

ಮರದಲ್ಲಿಯ ಕಾಯಿಗಳನ್ನು ಸೂಕ್ಷ್ಮ ವಾಗಿ ನೋಡಿದರೆ ಹಣ್ಣೇನಾದರೂ ಆಗಿದ್ದಲ್ಲಿ ಅಳಿಲು ಕಾಗೆ ಮುಂತಾದವುಗಳು ಅವನ್ನು ತಿನ್ನಲು ತೂತು ಕೊರೆದದ್ದು ಕಾಣುತ್ತಿತ್ತು. ಹೀಗೆ ತೂತಾಗಿದ್ದಲ್ಲಿ ಅದು ಹಣ್ಣು ಎಂದು ಖಾತ್ರಿಯಾಗುತ್ತಿತ್ತು. ಇನ್ನು ಮರ ಹತ್ತಿ ಪ್ರತಿಕಾಯನ್ನು ಬೆರಳಿನಿಂದ ಸಿಡಿದು ನೋಡುವುದು. ಬೆರಳಿನಿಂದ ಸಿಡಿದಾಗ ಕಾಯಿಯಿಂಧ ಟಪ್ ಟಪ್ ಸಪ್ಪಳ ಬಂದರೆ ಹಣ್ಣಾಗಿಲ್ಲ ಎಂದು ಅರ್ಥ. ಡುಬ್ ಡುಬ್ ಸಪ್ಪಳ ಬಂದರೆ ಹಣ್ಣಾಗಿದೆ ಎಂದು ತಿಳಿಯಬೇಕು. ಹೀಗೆ ಹಣ್ಣಾದ ಬಕ್ಕೆ ಚಕ್ಕೆ ಹಲಸುಗಳನ್ನು ನಾವು ಬಹುಬೇಗ ಪತ್ತೆ ಹಚ್ಚುತ್ತಿದ್ದೆವು.

ಮೃದುವಾದ ಚಕ್ಕೆ ಹಲಸು ಮರದಿಂದ ಬಿದ್ದರೆ ಒಡೆದು ಚೂರುಚೂರಾಗಿ ಹೋಗುತ್ತದೆ. ಹೀಗೆ ಹಲಸಿನ ಹಣ್ಣು ಬಿದ್ದಾಗ ದೂರದಲ್ಲೆಲ್ಲೋ ಮೇಯುತ್ತಿರುವ ನಮ್ಮ ಮನೆಯ ದನಗಳು ವಾಂಯ್ ವಾಂಯ್ ಎಂದು ಕೂಗುತ್ತ ಓಡಿಬಂದು ಹಲಸಿನ ಹಣ್ಣು ತಿನ್ನುತ್ತಿದ್ದವು. ಹಲಸಿನ ಹಣ್ಣಿನಲ್ಲಿಯ ಸೊಳೆ ಬೇಳೆಗಳನ್ನು ತೆಗೆದ ಮೇಲೆ ಉಳಿಯುವುದು ಸಾರೆ. ಈ ಸಾರೆಗಳನ್ನು ದನಗಳಿಗೆ ಆಹಾರವಾಗಿ ಕೊಡುತ್ತಿದ್ದರು. ಅಬ್ಬೆ ಹಲಸಿನ ಹಣ್ಣಿನ ಸಾರೆಯನ್ನು ತೋಟದಲ್ಲಿ ಸುರಿದು ದೊಡ್ಡದಾಗಿ ‘ಸಾರೆ ಕೋ ಸಾರೆ ಕೋ’ ಎಂದು ಕೂಗಿದರೆ ಒಂದು ಕಿಲೋಮೀಟರಷ್ಟು ದೂರ ಮೇಯಲು ಹೋದ ದನಗಳೂ ಮೇಯುವುದನ್ನು ಬಿಟ್ಟು ಓಡಿ ಬರುತ್ತಿದ್ದವು. ಆಗ ಯಾರಿಂದಲೂ ಅವನ್ನು ತಡೆದು ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ.

ಹಲಸು ಮಿಡಿಯಾದಾಗಲೇ ಅದರಿಂದ ಗೊಜ್ಜು, ಚಟ್ನಿ, ಪಲ್ಯ, ಸಾಂಬಾರ ಮುಂತಾಗಿ ಏನೇನೋ ಮಾಡಲು ಶುರುಮಾಡುತ್ತಿದ್ದರು. ನಾವು ಶಾಲೆಯಿಂದ ಬಂದಾಗ ಹಲಸಿನ ಹಣ್ಣು ಇಲ್ಲದಿದ್ದರೆ ಕಾಯಿಯನ್ನೇ ಸೀಳಿ ಅದರ ಸೊಳೆ ತೆಗೆದು ಅದರ ಒಳಗೆ ಸ್ವಲ್ಪ ಉಪ್ಪು ಹಾಕಿ ಒಲೆಯ ಬೆಂಕಿಯಲ್ಲಿ ಹಾಕುತ್ತಿದ್ದೆವು. ಹೀಗೆ ಬೆಂಕಿಯಲ್ಲಿ ಬೆಂದ ಸೊಳೆ ತಿನ್ನಲು ತುಂಬಾ ರುಚಿಯಾಗಿರುತ್ತಿತ್ತು. ಅಬ್ಬೆ ಹಲಸಿನ ಸೊಳೆಗಳನ್ನು ನೀರಿನಲ್ಲಿ ಬೇಯಿಸಿ ಒರಳು ಕಲ್ಲಿನಲ್ಲಿ ಬೀಸಿ ಒಂದೇ ದಿನ ಐದಾರುನೂರು ಹಪ್ಪಳ ಮಾಡುತ್ತಿದ್ದಳು. ಹೀಗೆ ಹಪ್ಪಳ ಎರಡು ಮೂರು ಬುಟ್ಟಿಯಲ್ಲಿ ತುಂಬಿಟ್ಟರೂ ಮಕ್ಕಳಾದ ನಾವು ಅದನ್ನು ಬಹುಬೇಗ ಖಾಲಿ ಮಾಡುವುದರಲ್ಲಿ ಶೂರರೇ ಆಗಿದ್ದೆವು.

ಒಂದು ಸಾರಿ ಬೊಮ್ಮ ಎನ್ನುವ ಮುದುಕ ನಮ್ಮ ಮನೆಗೆ ಉದ್ದಿನ ಹಪ್ಪಳ ಮಾರಲು ಬಂದಿದ್ದ. ಒಂದು ಮನೆಯಿಂದ ಒಂದು ಮನೆಗೆ ಹೋಗುತ್ತ ಮಾರಾಟ ಮಾಡುವ ಅವನಿಗೆ ಯಾರದಾದರೂ ಮನೆಯಲ್ಲಿ ರಾತ್ರಿ ವಸತಿ ಉಳಿಯುವುದು ಅನಿವಾರ್ಯವಾಗಿತ್ತು. ಬೊಮ್ಮ ರಾತ್ರಿ ಊಟಕ್ಕೆ ನಮ್ಮ ಮನೆಯಲ್ಲಿ ಉಳಿದ. ಪಾಪ ಬೊಮ್ಮ ತನ್ನ ತೆಳ್ಳನೆಯ ಉದ್ದಿನ ಹಪ್ಪಳದ ಕಟ್ಟನ್ನು ಬಿಚ್ಚಿ ಅಬ್ಬೆಗೆ ಐದು ಹಪ್ಪಳ ಕೊಡಲು ಮುಂದಾದ. ಆದರೆ ಅಬ್ಬೆ ‘ಹಾಗೆಲ್ಲ ನೀನು ಕೊಡಬೇಡ. ನಿನಗೆ ಲುಕ್ಷಾಣು ಆಗುತ್ತದೆ’ ಎಂದು ಹೇಳಿದ್ದಲ್ಲದೇ ಆದಿನ ಹಲಸಿನ ಹಪ್ಪಳ ಕರಿದು ಅವನಿಗೆ ಐದಾರು ಹಪ್ಪಳ ತಿನಿಸಿದ್ದು ನೆನಪಿದೆ. ಬೆಳಗಿನ ತಿಂಡಿಗೆ ಹಲಸಿನ ಸೊಳೆಯಿಂದ ತಯಾರಿಸಿದ ಪಲ್ಯದಂತಹ ತಿಂಡಿ ಮಾಡುತ್ತಿದ್ದರು. ಅದಕ್ಕೆ ಉಕಡೋಪು ಎನ್ನುತ್ತಿದ್ದ ನೆನಪು.

ಎಷ್ಟೋ ಸಾರಿ ನಾವು ಮಕ್ಕಳು ಮಂಗಗಳೊಂದಿಗೆ ಪೈಪೋಟಿಗೆ ಇಳಿದು ಮಂಗಗಳಂತೆ ಮರದಲ್ಲೇ ಕುಳಿತು ಹಲಸಿನ ಹಣ್ಣು ಬಿರಿದು ಹೊಟ್ಟೆತುಂಬಾ ತಿನ್ನುವುದೂ ಇತ್ತು. ಆಗೆಲ್ಲ ಮರ ಹತ್ತಲಾಗದ ಚಿಕ್ಕವರು ನಮಗೂ ಹಣ್ಣು ಕೊಡಿ ಎಂದು ಅತ್ತು ಕೂಗುತ್ತಿದ್ದರು. ಆಗ ಹಲಸಿನ ಹಣ್ಣಿನ ಸೊಳೆ ಬಿಡಿಸಿ ಒಂದೊಂದಾಗಿ ಕೆಳಗೆ ಎಸೆದರೆ ಈಗಿನ ಮಕ್ಕಳು ಕ್ರಿಕೆಟ್ ಬಾಲ್ ಕ್ಯಾಚ ಮಾಡುವಂತೆ ತಟ್ಟನೆ ಹಿಡಿದು ಬಾಯಿಗೆ ಹಾಕಿಕೊಳ್ಳುತ್ತಿದ್ದರು. ಮತ್ತೆ ಕೈ ಮುಂದೆ ಚಾಚುತ್ತಿದ್ದರು.

ಅಂದು ಶಾಲೆ ಬಿಟ್ಟಕೂಡಲೇ ಹಸಿವಾಗಿದ್ದರಿಂದ ಬಕ್ಕೆಮರದ ನೆನಪಾಗಿ ಮನೆಗೆ ಓಡೋಡಿ ಬಂದಿದ್ದೆ. ಪಾಟಿಚೀಲವನ್ನು ಮೂಲೆಯಲ್ಲಿಟ್ಟು ಕೈಕಾಲು ತೊಳೆಯದಯೇ ತೋಟದ ಕಡೆ ಓಡಿದೆ. ನಿನ್ನೆ ಬಕ್ಕೆಮರದಲ್ಲಿ ಒಂದೂ ಹಣ್ಣು ಸಿಕ್ಕಿರಲಿಲ್ಲ. ಈ ದಿನ ಒಂದಾದರೂ ಹಣ್ಣು ಸಿಕ್ಕೇ ಸಿಗುತ್ತದೆ ಎಂದು ನನಗೆ ಖಾತ್ರಿ ಇತ್ತು.

ಓಡಿಬಂದು ಬಕ್ಕೆ ಮರದ ಅಡಿಯಲ್ಲಿ ನಿಂತು ನೋಡಿದೆ. ಹಣ್ಣಿನ ಸಾರೆಯ ಒಂದೆರಡು ತುಂಡು ಕೆಳಕ್ಕೆ ಬಿದ್ದಿದ್ದು ಕಂಡು ಮರದಲ್ಲಿ ಮಂಗ ಬಂದಿದೆಯೇನೋ ಎನ್ನುವ ಸಂಶಯವಾಯಿತು. ಮೇಲೆ ನೋಡಿದೆ. ಮರದ ತುದಿಯಲ್ಲಿ ಮಂಗ ಬಂದು ಕುಳಿತು ಹಣ್ಣು ತಿನ್ನುತ್ತಿರುವುದು ಕಂಡಿತು. ಇಂದೂ ನನಗೆ ಹಣ್ಣು ಇಟ್ಟಿಲ್ಲವೇನೋ ಎಂದೆಲ್ಲ ಅನಿಸಿ ಬೇಜಾರಾಯಿತು. ಆದರೆ ಅದು ತುದಿಯಲ್ಲಿದೆ. ಅಷ್ಟು ಎತ್ತರಕ್ಕೆ ನನ್ನಿಂದ ಹತ್ತಲೂ ಆಗದು. ನಾನು ಕೆಳಗೆ ಹಣ್ಣಾಗಿದೆಯೋ ನೋಡಬೇಕು ಎಂದುಕೊಳ್ಳುತ್ತ ಮರ ಹತ್ತ ತೊಡಗಿದೆ. ಮಂಗ ನಾನು ಮರ ಏರುವುದನ್ನು ನೋಡಿ ಮರ ಬಿಟ್ಟು ಪಕ್ಕದ ಅಡಿಕೆ ಮರಕ್ಕೆ ಹಾರಿತು. ಅಷ್ಟರಲ್ಲಿ ನಮ್ಮ ಕುಚ್ಚೂನಾಯಿ ಬಂದು ದೊಡ್ಡದಾಗಿ ಬೊಗಳಲು ತೊಡಗಿತ್ತು.

ನಾನು ಬಕ್ಕೆ ಕಾಯಿಯನ್ನು ಬೆರಳಿನಿಂದ ಸಿಡಿದು ನೋಡುತ್ತ ಮೇಲೆ ಹತ್ತ ತೊಡಗಿದೆ. ಹಾಂ, ಒಂದು ಹಣ್ಣು ಸಿಕ್ಕಿತು. ಹೌದು ಅದರಿಂದ ಡುಬ್ ಡುಬ್ ಸಪ್ಪಳ ಬರುತ್ತಿತ್ತು. ಅಲ್ಲದೇ ಸುತ್ತಲೂ ಹಣ್ಣಿನ ವಾಸನೆಯೂ ಹರಡಿತ್ತು. ಹಣ್ಣನ್ನು ತಿರುಗಿಸಿ ಕೆಳಗೆ ದೂಡಿದೆ. ಹಣ್ಣು ತೊಟ್ಟು ಹರಿದು ಕೆಳಗೆ ಬಿತ್ತು. ಈಗ ಮತ್ತೂ ಮೇಲೆ ಹತ್ತಿದೆ. ಅರೆ ಮತ್ತೊಂದು ಸಿಕ್ಕಿತು. ತುಂಬಾ ಖುಷಿಯಾಯಿತು. ಈದಿನ ಎರಡು ಹಣ್ಣು ಸಿಕ್ಕಿದ್ದರಿಂದ ಮನೆಯವರೆಲ್ಲರೂ ತಿನ್ನಬಹುದು ಎಂದುಕೊಂಡು ಅದನ್ನೂ ಕೆಡಗಿದೆ. ಇನ್ನು ಬಡಬಡನೆ ಕೆಳಗೆ ಇಳಿಯಬೇಕು.

ಮನೆಗೆ ಹಣ್ಣು ಹೊತ್ತು ಒಯ್ಯಬೇಕು ಎನ್ನುತ್ತ ಕಾಲನ್ನು ಕೆಳಗಿನ ಹಲಸಿನ ಕಾಯಿಯ ಮೇಲೆ ಇಟ್ಟು ಇನ್ನೊಂದು ಕಾಲನ್ನು ಜಾರಿಸಿದೆ. ಬಸಕ್ ಎಂದು ನಾನು ಕಾಲಿಟ್ಟ ಕಾಯಿಯ ತೊಟ್ಟು ಹಿಸಿದು ನಾನು ಜಾರಿ ಮರದಿಂದ ಬಿದ್ದೆ! ತಲೆಗೆ ವಿಪರೀತ ನೋವಾದಂತೆನಿಸಿ ಹಣೆಯ ಹತ್ತಿರ ಮುಟ್ಟಿ ನೋಡಿದರೆ ಕೈ ಎಲ್ಲ ರಕ್ತ. ಹೆದರಿ ಅಳುತ್ತ ಮನೆಗೆ ಓಡಿದೆ. ಅಬ್ಬೆ ಓಡಿ ಬಂದು “ಅಯ್ಯೋ! ತಲೆ ಒಡೆದುಕೊಂಡೆಯಾ” ಅನ್ನುತ್ತ ಒಳಗೆ ಹೋಗಿ ಒಂದಿಷ್ಟು ಅರಿಷಿಣ ಪುಡಿ ತಂದು ಗಾಯಕ್ಕೆ ಹಾಕಿ ಸೀರೆಯ ತುಂಡ ಒಂದರಿಂದ ಪಟ್ಟಿ ಕಟ್ಟಿದಳು. ತಲೆಯಲ್ಲಿರುವ ಗಾಯದ ಕಲೆ ನೋಡಿಕೊಂಡಾಗಲೆಲ್ಲ ನಮ್ಮ ಮನೆಯ ಬಕ್ಕೆ ಹಣ್ಣಿನ ನೆನಪು ಆಗುತ್ತಲೇ ಇರುತ್ತದೆ.

‍ಲೇಖಕರು Admin

April 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. S.T.Bhat

    ಬಕ್ಕೆ ಹಣ್ಣೀನ ಕಥೆ ,,ನಂಗತೂ ನಮ್ಮ ಬಾಲ್ಯದ ದಿನಗಳನ್ನು ಪೊಣಿಸಿಟ್ಟ ಹಾಗೆ ಅನಿಸಿತು.ತುಂಬಾ ಖುಷಿ ಆಯ್ತು ಓದಿ.. ಎಂತಾ ಸುಂದರ ಅನುಭವ, ಹೇಳಲಾಗದ್ದನ್ನು ಬರೆದಿದ್ದು ನೀವು .

    ಪ್ರತಿಕ್ರಿಯೆ
    • ತಮ್ಮಣ್ಣ ಬೀಗಾರ

      ನಿಮ್ಮ ಪ್ರತಿಕ್ರಿಯೆ ಬಕ್ಕೆಹಣ್ಣು ತಿಂದಷ್ಟೇ ಖುಷಿನೀಡಿತು. ಧನ್ಯವಾದಗಳು.

      ಪ್ರತಿಕ್ರಿಯೆ
  2. Nagaraj HUDED

    ಬಾಲ್ಯದ ನೆನಪು ಮರಕಳಿಸಿದೆ. ಚೆಂದದ ಬರಹ ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: