ಸೋಮು ಕುದರಿಹಾಳ ಓದಿದ ‘ಕೊಂದ ಕನಸುಗಳ ಕೇಸು’

ಸೋಮು ಕುದರಿಹಾಳ

ಸಾಮರಸ್ಯದ ಹುಡುಕಾಟವೇ ಇಂದಿನ ತುರ್ತು ಪರಿಸ್ಥಿತಿ ಆಗಿರುವಾಗ ದಾಂಪತ್ಯ ಬದುಕನ್ನೇ ಸಾಮರಸ್ಯ, ಸಮತೆಯ ಕೊಂಡಿಯಾಗಿ ಬೆಸೆದುಕೊಂಡಿರುವ ದಂಪತಿಗಳಾದ ಸಿದ್ದು ಬಿರಾದಾರ ಮತ್ತು ಮುಮ್ತಾಜ್ ಬೇಗಂ ಅವರ ಕೃತಿಗಳಲ್ಲಿ ಮೊದಲು ಕನಸುಗಳ ರೆಪ್ಪೆ ಬಡಿದುಕೊಂಡು ಬದುಕುತ್ತಿರುವ ನನ್ನಂಥವನನ್ನು ಕಾಡಿದ್ದು ಕವಯಿತ್ರಿ ಮುಮ್ತಾಜ್ ಬೇಗಂ ಅವರ ಕವನ ಸಂಕಲನ

*ಕೊಂದ ಕನಸುಗಳ ಕೇಸು* ಇಲ್ಲಿನ ಕವಿತೆಗಳ ಕೇಸು ದಾಖಲಿಸಲ್ಪಟ್ಟಿರುವುದು ಸಮಾಜದ ಕೊಲೆಗಡುಕ ಮನಸ್ಥಿತಿಗಳ ವಿರುದ್ಧ. *_ಕನಸು ಕಾಣುವುದ ಕಲಿಸಿ ಚೀತ್ಕಾರದ ಚಾದರ ಹೊದ್ದು ಮಲಗಿ ಎದ್ದು ಹೋದ ದಿನ ಸಣ್ಣದೊಂದು ಕಥೆ ಕದಲಿ ನನ್ನೊಳಗಿನ ಕಥೆಯು ಮುಗಿದಿದೆ_*

ಸಂಕಲನದ ಈ ಸಾಲುಗಳು ವಾಸ್ತವ ಜಗತ್ತಿನಲ್ಲಿ ಆಶಾದಾಯಕ ವಾತಾವರಣದ ನಿರ್ವಾತದ ಕಾರಣಗಳನ್ನು ಕೇಳುತ್ತಿದೆ. ಕಥೆಯೇ ಮುಗಿದಿದೆ ಎಂಬ ಅಂತಿಮ ಸತ್ಯದತ್ತ ಮನಸ್ಸು ಬಂದು ನಿಂತುಬಿಡುತ್ತಿದೆ. ಆದರೆ ಕವಿಮನಸ್ಸು ಯಾವುದನ್ನು ಅಷ್ಟು ಸಲೀಸಾಗಿ ಕೈಚೆಲ್ಲಿ ಕೂರುವುದಿಲ್ಲ.

*_ಆಕಾಶದ ಸೂರಿಗೊಂದು ಉಯ್ಯಾಲೆ ಕಟ್ಟಿ ಜೀಕುವೆ_* ಎಂಬ ವಿಶಾಲ ಕನಸನ್ನು ಹರವಿಕೊಳ್ಳುತ್ತದೆ.*ಪ್ರೀತಿಯ ಕೊಂದವರು* ಕವನದ ಒಂದು ಸಾಲು *_ಸತ್ತ ದೇಹಕ್ಕೂ ಧರ್ಮದ ನಂಟು_* ಎಂಬುದು ನಮ್ಮ ಅಂತ ಶಕ್ತಿಯನ್ನು ಕದಡುತ್ತದೆ. ಇದೇ ಕವಿತೆಯ ಕೊನೆಯಲ್ಲಿ ಕವಯಿತ್ರಿ ದೇವರ ಕಾಲಾಂತರ ಬದಲಾವಣೆಯನ್ನು ಮುನ್ನೆಲೆಗೆ ತರುತ್ತಾರೆ. ದೇವರು ಬರುವುದಾದರೆ ಮನುಷ್ಯನಾಗಿ ಬರಲಿ ಎಂಬ ಸ್ವಾಗತ ನೀಡುತ್ತಾರೆ. *ನಿನ್ನ ಸುತ್ತಲಿನವರು* ಕವಿತೆಯಂತೂ ಸಿಕ್ಕು ಸಿಕ್ಕಾದ ಪ್ರಶ್ನೆಗಳಿಗೆ ಉತ್ತರ ಹುಡುಕುವವರ ಮನೋಗತಿಯನ್ನು ಎದುರಿಸುತ್ತದೆ.

*_ಮಗ್ಗಲು ಬದಲಾಯಿಸಲಾಗುತ್ತಿಲ್ಲ ಗಂಡು ಹೆಣ್ಣು ಎನ್ನದೇ ಪರದೆ ಇರದೆ ಒಬ್ಬರ ಪಕ್ಕ ಮತ್ತೊಬ್ಬರು ಮಲಗಿರುವೆವು ಮಾತಾಡಿಕೊಳ್ಳಲಾಗದಷ್ಟು ಅಪರಿಚಿತರು_* ಈ ಮಿತಿಯೊಳಗಿನ ಬದುಕನ್ನು ನಾವು ಯಾಕಾದರೂ ಬದುಕುತ್ತಿದ್ದೇವೆ. ಸ್ಮಶಾನವೂ ನಮ್ಮನ್ನು ಏಕಾಂಗಿಯಾಗಿಸುತ್ತಿದೆ. ಕವಯಿತ್ರಿಯನ್ನು ಬಹುವಾಗಿ ಕಾಡಿರುವುದು ಏಕಾಂಗಿತನ. ಅವರ ಕಾವ್ಯದ ಹುಟ್ಟಿಗೆ ಇದು ಜೊತೆಯಾಗಿದ್ದರೂ *ಗೋರಿಯೊಳಗಿನ ಮಾತು* ಕವಿತೆಯಲ್ಲಿ ಮನಬಿಚ್ಚಿ ಹಗುರಾಗ ಹೊರಟಿದ್ದಾರೆ.*_ಬೆಳಕು ಬಂಧಿಸು ನೀನು ಬಯಲೊಳಗೆ ಬಯಲಾಗಿ ಮತ್ತೆ ಹುಟ್ಟು ಪಡೆಯುವೆ ಕವಿತೆಯಾಗಿ ನಾನು_* ಎಂಬ ಸಾಲುಗಳು ಎಲ್ಲಾ ಕಾಲದ ಸಾಕ್ಷಿಗನ್ನಡಿ.

ಕವಿಮನಸ್ಸನ್ನು ಎಷ್ಟೇ ಬಂಧನದಲ್ಲಿಟ್ಟರೂ ತನ್ನನ್ನು ತಾನೇ ತಹಬಂಧಿಯಾಗಿಸಿಕೊಂಡರೂ ಚಡಪಡಿಕೆ ನಿಲ್ಲುವುದಿಲ್ಲ. ಯಾರಾದರೂ ಬಾಯಿ ಮುಚ್ಚಿ ನನಗ್ಯಾಕೆ ಊರ ಉಸಾಬರಿ ಎಂದಾರು!? ಆದರೆ ಕಾವ್ಯ ಕೋವಿದನಂತೆ. *ಕೋಮು ವ್ಯಾಧಿ*ಕವಿತೆ ಬಹಳಷ್ಟು ನೊಂದು ಮಾತಾಡಿದೆ. ಕಾಲದ ಚಲನೆಯನ್ನು ತನ್ನೊಳಗೆ ಮುಳ್ಳಿನಂತೆ ತಿವಿದುಕೊಳ್ಳುತ್ತಾ ತನ್ನ ಜಾಡನ್ನು ತಾನೇ ತೊರೆದ ಮಹಾದರ್ಶಗಳ ಪಲ್ಲಟದೊಂದಿಗೆ ಸಂವಿಧಾನವೇ ಎಲ್ಲಕ್ಕೂ ಶ್ರೇಷ್ಠ ಎನ್ನುವ ಚಿಕಿತ್ಸಕ ಪರಿಹಾರವಿದೆ. ಮನುಷ್ಯಾರಾಗೋಣ, ಸೀರೆ, ಅಯ್ಯೋ ಅಪ್ಪ, ಬಾಕಿ ಉಳಿದ ಲೆಕ್ಕ ಕವನಗಳನ್ನು ನಾವು ಸ್ವೀಕರಿಸುವ ಪರಿಯೇ ಬದಲಾಗಬೇಕು.

ಮನುಷ್ಯನ ವರ್ತನೆಗಳನ್ನು ಬದಲಿಸಿದ ಬರಹಕ್ಕೆ ಎಲ್ಲಿಯ ಸಾರ್ಥಕತೆ? ಓದುಗನ ಕೈಯಲ್ಲಿರುವ ಪುಸ್ತಕ ಅವದ ಧೋರಣೆಗಳಿಗೆ ಇಂಬುಗೊಟ್ಟು ಚಿಂತನೆಗೆ ಹಚ್ಚಬೇಕು.*_ಬೆತ್ತಲೆಯ ಬೆಳಕನ್ನು ಹುಡುಕುವ ಕಗ್ಗತ್ತಲೆಯ ಒಂಟಿ ರಾತ್ರಿಗೂ ಅವ್ಯಕ್ತ ಸಂಕಟದ ಕನಸು ಮನಸ್ಸು ಮನಸ್ಸಿನ ಪಿಸುಮಾತಿಗೂ ಪದಗಳಿಲ್ಲದ ಹಾಡು_* ಎಂಬುದನ್ನು ಓದುತ್ತಿದ್ದಾಗ ಸಾಹಿತ್ಯ ಕೆಲವೊಮ್ಮೆ ಕೈಚೆಲ್ಲಿ ಕುಳಿತುಬಿಡುತ್ತದೆ. ಸೋತ ಭಾವದ ಕತ್ತಲೆಯ ಆವರಣದಲ್ಲಿ ನರಳುತ್ತದೆ. ಬೆಳಕಿನ ಬೆತ್ತಲೆಯಲ್ಲಿ ಸಂಕಟಪಡುವಾಗಲೇ ಆತ್ಮಬಂಧುವಿನಂತಹ ಪದವಿಲ್ಲದ ಹಾಡು ಹುಟ್ಟಿಕೊಳ್ಳುತ್ತವೆ.

*ಪೌರತ್ವ* ಕವಿತೆಯಂತೂ ಜರ್ಜರಿತ ಕಾಲವನ್ನು ಜೀರ್ಣಿಸಿಕೊಳ್ಳದ ಹಂತಕ್ಕೆ ತಲುಪಿರುವುದನ್ನು ತೋರುತ್ತದೆ. ಮಂದಿರ ಮಸೀದಿಗಳ ರಾಮ ರಹೀಮರನ್ನು ಹಂಚಿಕೊಂಡ ನಮ್ಮೊಳಗಿನ ನಮ್ಮನ್ನು ಈ ಸಂಕಲನ ಹಲವಾರು ಸಲ ಆವರಿಸಿಕೊಳ್ಳುತ್ತದೆ. ಮಾನವೀಯತೆಯೇ ಮೊದಲು ಎನ್ನುವ ಭಾವ ನಮಗೆ ಅಗತ್ಯವಿದೆ. ಸಂಕ್ರಮಣ ಕಾಲದಲ್ಲಿ ನಕ್ಷತ್ರಗಳು ಮಿಣುಕುತಿವೆ ಚಂದ್ರನಿಗೂ ಮತ್ಸರ ಕೊಂದ ಕನಸುಗಳ ಕೇಸಿನಲ್ಲಿ ನಗ್ನ ಪಾದದ ಹೆಜ್ಜೆ ಗುರುತುಗಳ ಸಾಕ್ಷಿಗಳನ್ನೇನೋ ಹುಡುಕಿ ತರಬಹುದು. ಆದರೆ ನಿಶ್ಯಬ್ದ ವಂಚನೆಯ ಕೊಂದ ಕನಸುಗಳ ಪರ ಇಲ್ಲಿ ಕೊಲೆ ಕೇಸು ದಾಖಲಾಗುವುದಿಲ್ಲ ಎಂಬ ವೇದನೆಗೆ ಯಾವ ಸಾಂತ್ವನ ಸಂದೀತು? ಅಪರಿಚಿತ ಮಳೆಗೆ ಗುಬ್ಬಿ ತೊಯ್ದಂತೆ ದುಃಖತಪ್ತ ಮನಸ್ಸು.

ಸಮಾಜವನ್ನು ಮುಂದಿಟ್ಟುಕೊಂಡು ಬದುಕುವ ಪ್ರತಿ ಜೀವಕ್ಕೂ ಒಂದು ವೈಯಕ್ತಿಕ ಹಂಬಲ ಇರುತ್ತದೆ. ಮನೆಯೊಳಗಿನ ಒಲವು ಬದುಕು ದಾಂಪತ್ಯ ಪ್ರೀತಿ ಪ್ರೇಮ ಗೆಳೆತನ ತಾಯಿ ತಂದೆಯರ ವಾತ್ಸಲ್ಯಗಳು ಕಾಡುವ ಮಸಿಡಬ್ಬಿಯ ಕುಂಚದಂತೆ. *_ನಡೆದು ದಣಿದ ಮೇಲೆ ಮೇಲ್ದುಟಿಯಲಿ ಮೂಡಿದ ಬೆವರ ಸಾಲು ತಿಂಗಳ ತಪ್ಪಿ ಕಿಬ್ಬೊಟ್ಟೆಯಲಿ ಏನೋ ಕದಲಿ ಹೆರಿಗೆ ಕೋಣೆಯಲಿ ಒಡಲು ಸೀಳಿಕೊಂಡು ಆಚೆ ಬರುವಾಗ ಸಾವಿರ ಸಲ ಅಮ್ಮಾ ಎಂದವಳು_* ಎಂಬ ಭಾವಶರಧಿ ಪ್ರತಿ ಹೆಣ್ಣಿನ ಹೆಣ್ತನ ಮತ್ತು ತಾಯ್ತನ.

ಹೆಣ್ಣು ಸಾಗರದಂತೆ ಭೂಮಿಯಂತೆ ಎಂಬ ರೂಪಕ್ಕೊಪ್ಪಿಕೊಳ್ಳುವ ಶಕ್ತಿ. ಹೆಣ್ಣು ನಿಸರ್ಗ ಚೇತನ. ಸದಾ ಬಾಣಂತಿ. ಏಕಾಂತದ ಕೋಣೆಯಲ್ಲಿ ಹುಟ್ಟುವ ಅಸಂಖ್ಯಾತ ಕೂಸುಗಳ ಹೆರಿಗೆಗೆ ನೋವುಣ್ಣುವ ಗಟ್ಟಿಗಿತ್ತಿ. ತನ್ನ ಬಲವನ್ನೆಲ್ಲ ತನ್ನ ಕರುಳಬಳ್ಳಿಗೆ ಧಾರೆ ಎರೆವ ಒಂದೇ ಪಲ್ಲವಿ ಪದ್ಯ. *_ಗೂಡು ಕಟ್ಟುವ ತವಕದಲಿ ಹೆಗಲಿಗೆ ಹೆಗಲಾದ ಬಾಳ ಪಯಣಿಗನ ಒಲುಮೆಯ ಪ್ರೇಮ ಮಮತೆ ಪ್ರೀತಿಯ ಆಸರೆಯ ಜೀವ ಮನೆ ಮನದ ತುಂಬಾ ಆವರಿಸಿದೆ_* ಎನ್ನುವ ಸಾಲುಗಳಲ್ಲಿ ಒಲವು ಜೀವನ ಪ್ರೀತಿಯ ಕೈದೀವಿಗೆಯ ಆಸರೆ ಬೇಕಾಗುತ್ತದೆ.

ಭಾವದ ಗೆಲುವನ್ನು ಹರಿದ ಹಾಳೆಯಲ್ಲಿ ಚಿತ್ರಿಸುವಚಿರಯೌವ್ವನದ ಪ್ರೀತಿ ಘಟಿಸುವ ಸಮಯ ಇನ್ನೂ ಇದೆ. ಬಿಟ್ಟು ಬಿಡಲಾರದ ಬಾಹು ಬಂಧನವನ್ನು ಎದೆಗಪ್ಪಿಕೊಳ್ಳಬೇಕಾಗಿದೆ. ನೀ ಕೈ ಕಟ್ಟಿದಾಗೊಮ್ಮೆ ಹಬ್ಬಿ ಆವರಿಸುವ ಒಲವು ಬೇಕಾಗಿದೆ. ಈ ಸಂಕಲನವನ್ನು ಕೈಗೆತ್ತಿಕೊಂಡಾಗ ನಾವು ಘಾಸಿಗೊಳ್ಳುತ್ತೇವೆ. ವಾಸ್ತವದಿಂದಲೂ ಒಲವಿನಿಂದಲೂ.. ಕಾವ್ಯದ ನೈಜತೆಯೆಂದರೆ ಭಾವದೀಪ್ತಿ.

ಓದುಗನ ಮನದ ಜೊತೆ ಮಾತಾಗುವ ಶಕ್ತಿ. ಇಂತಹ ಸಶಕ್ತ ಕಾವ್ಯ ಸ್ಫುರಣ ನಿರಂತರವಾಗಿ ಪ್ರವಹಿಸುತ್ತಿರಲಿ. ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿ ಈ ಸಂಕಲನದ ಸ್ವತ್ತು. ಕವಯಿತ್ರಿಯ ಏಕಾಂಗಿತನದ ಕಾವ್ಯ ಸೃಷ್ಟಿ ಕಾರಣಗಳು ಕಾವ್ಯಸಕ್ತರಿಗೆ ಆಸ್ತಿ. ಕೇಸು ದಾಖಲಾದ ಹೊತ್ತಿನಲ್ಲಿ ಬಿಡುಗಡೆಗೆ ಕಾದವರು ಓದಬೇಕಾದ ಕೃತಿ ಕೊಂದ ಕನಸುಗಳ ಕೇಸು.

‍ಲೇಖಕರು Admin

April 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: