ಬಂದೂಕು.. ಬಾಂಬು.. ಸ್ಫೋಟಕದ ಮಧ್ಯೆ ಅರಳಿದ ಕ್ರಿಕೆಟ್ ಹೂವು.!!

ಆಶಿಕ್ ಮುಲ್ಕಿ

ಅದೊಂದು ಯಾತನಾಮಯ ಬದುಕು. ದಿನ ಬೆಳಗಾದರೆ ಬಾಂಬುಗಳು ಸಿಡಿಯುತ್ತವೆ. ಎಲ್ಲೆಂದರಲ್ಲಿ ಬಂದೂಕು ಮೇಳೈಸುತ್ತವೆ. ಶತ್ರುಗಳಿಗೆ ಎದೆಯೊಡ್ಡಿ ನಿಲ್ಲೋದೇ ಅಲ್ಲಿನ ಜನರ ದಿನದ ಕಾಯಕ. ತಾಯಿಯನ್ನ ಕಾಪಾಡಬೇಕು. ಮಕ್ಕಳನ್ನು ಉಳಿಸಬೇಕು. ಮಡದಿಯನ್ನ ಬದುಕಿಸಬೇಕು. ಹೀಗೊಂದು ದಿನಚರಿ ಅವರದ್ದು.

ಆದ್ರೆ ಅವರ ಬಾಳು ಬೆಳಗಿದ್ದು ಕ್ರಿಕೆಟ್.

ಸಂಜೆಯ ಹೊತ್ತಿಗೆ ಮಕ್ಕಳೆಲ್ಲಾ ಒಂದಾಗಿ ಮೈದಾನದಲ್ಲಿ ಒಗ್ಗೂಡುತ್ತಿದ್ದರು. ಉದ್ದೇಶ ಆಡೋದು. ಕ್ರಿಕೆಟ್ ಆಗಲೇ ಜಗತ್ತನ್ನು ತನ್ನ ಕೈ ತಾಳಕ್ಕೆ ಕುಣಿಸುತ್ತಿತ್ತು. ದಿನ ಬೆಳಗಾದರೆ ತಾನು ಬದುಕಿದ್ದೀನ..? ತನ್ನವರು ಬದುಕಿದ್ದಾರಾ..? ಅನ್ನೋ ಪ್ರಶ್ನೆಯಿಂದಲೇ ದಿನ ಆರಂಭವಾಗುತ್ತಿತ್ತು. ನಿಜಕ್ಕೂ ಅದು ಭಯಾನಕ ಕ್ಷಣ.

ಆ ಭೀಕರ ವಾತಾವರಣದಲ್ಲೂ ಕೂಡ ಒಂದಿಷ್ಟು ಯುವಕರು ಅದೊಂದು ಸುಂದರ ಕನಸೊಂದನ್ನ ಕಾಣುತ್ತಿದ್ದರು. ಅದು ನನಸಾಗಲ್ಲ ಅನ್ನೋ ಬಲವಾದ ನಂಬಿಕೆ ಅವರಲ್ಲಿತ್ತು. ಆದರೂ ಆ ಕನಸು ಕಾಣೋದನ್ನ ಮಾತ್ರ ಅವರು ನಿಲ್ಲಿಸಿರಲಿಲ್ಲ. ಹೌದು.. ಕನಸು ಕಾಣೋದನ್ನ ಯಾಕೆ ನಿಲ್ಲಿಸಬೇಕು ಅಲ್ಲವೇ..? ಅದೇ ಆಗಿತ್ತು ಆ ಯುವ ಸಮೂಹದ ಪ್ರಶ್ನೆ. ನಿಲ್ಲಿಸಲೇ ಇಲ್ಲ.

ಆದ್ರೆ ಒಂದು ಹಂತದಲ್ಲಿ ನಾವು ಬರೀ ಕನಸು ಕಾಣುತ್ತಿದ್ದೇವೆ. ಅದಕ್ಕಾಗಿ ಏನು ಮಾಡುತ್ತಿದ್ದೇವೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಹುಟ್ಟಿಕೊಂಡ್ತು. ವಾಸ್ತವದಲ್ಲಿ ಅದೊಂದು ಆರಂಭವೇ ಆಗಿತ್ತು. ನಂತರದ್ದೆಲ್ಲ ಈಗ ಇತಿಹಾಸ.

ನೋಡ್ತಾ ನೋಡ್ತಾ ಭಯದಿಂದ ಆರಂಭಗೊಳ್ಳುತ್ತಿದ್ದ ದಿನಚರಿ, ಹಸನ್ಮುಖಿ ಸಂತೋಷದಿಂದ ಆರಂಭಗೊಳ್ಳೋಕೆ ಶುರುವಾದವು. ಗಲ್ಲಿ ಗಲ್ಲಿಯಲ್ಲಿ ಮೇ ಖೇಲೆಗಾ ಅನ್ನೋ ಮಾತುಗಳು ಕೇಳಲಾರಂಭಿಸಿದವು. ಆದ್ರೆ ಇದು ಹೆತ್ತವರಿಗೆ ಮತ್ತೊಂದು ರೀತಿಯ ಆತಂಕವನ್ನು ಹುಟ್ಟಿಸಿತು. ಕ್ರಿಕೆಟ್ ಬ್ಯಾಟು ಬಾಲು ಹಿಡಿದುಕೊಂಡು ಮೈದಾನಕ್ಕೆ ಹೆಜ್ಜೆ ಹಾಕುತ್ತಿದ್ದ ಅವರ ಕಿವಿ ಕೆಂಪು ಕೆಂಪಾಗಿಯೇ ಇರುತ್ತಿತ್ತು. ಕ್ರಿಕೆಟ್ ಆಡೋದಕ್ಕೆ ಮನೆಯಿಂದ ತೀವ್ರ ವಿರೋಧವೂ ಅಂದು ಅವರಿಗೆ ವ್ಯಕ್ತವಾಗಿತ್ತು. ಯಾಕಂದ್ರೆ ಇಂಥಾ ಭಯದ ವಾತಾವರಣದಲ್ಲಿ ನೀವೆಲ್ಲಾ ಕ್ರಿಕೆಟ್ ಆಡಿ ಏನು ಸಾಧಿಸೋಕೆ ಹೊರಟಿದ್ದೀರ ಅನ್ನೋ ಮಾತು ಮನೆಯವರದ್ದಾಗಿತ್ತು.

ಆದ್ರೆ ಅವರಲ್ಲೊಂದು ಛಲವಿತ್ತು.. ನಂಬಿಕೆ ಇತ್ತು.. ನಿರ್ದಿಷ್ಟ ಗುರಿಯಿತ್ತು. ಗಲ್ಲಿ ಗಲ್ಲಿಗೂ ಒಬ್ಬೊಬ್ಬ ಕ್ರಿಕೆಟರ್ ಹುಟ್ಟಿಕೊಂಡ. ಅವರಿಗೆ ಅವರೇ ಗಾಡ್ ಫಾದರ್. ನೋಡ ನೋಡುತ್ತ ಕಾಲ ಬದಲಾಯ್ತು. ಜನರು ಬದಲಾದರು. ಆದರೂ ಜಾಗತಿಕ ಮಟ್ಟದಲ್ಲಿ ಬಡ ದೇಶ ಅನ್ನೋ ಹಣೆ ಪಟ್ಟಿ ಅವರಿಗಿತ್ತು. ಇದೇ ಕಾರಣಕ್ಕೆ ಪೂರಕ ವೇದಿಕೆ ಅಂದು ಆ ದೇಶದ ಕ್ರಿಕೆಟರ್‍ಗಳಿಗೆ ಸಿಕ್ಕೇ ಇಲ್ಲ.

ಅದು ಹಾಗೆಯೇ.! ಅದಿರಲಿ. ಇವರಿಗೆ ಕೆರಿಬಿಯನ್ನರು ಸ್ಫೂರ್ತಿ. ವೆಸ್ಟ್ ಇಂಡಿಯನ್ನರು ಪುಟಿದೆದ್ದಿದ್ದು ಹೀಗೆಯೇ.. ವಿಶ್ವ ಕ್ರಿಕೆಟೇ ನಿಬ್ಬೆರಗಾಗಿ ನೋಡಿದ ದಿನವಾಗಿತ್ತದು. ಕ್ರಿಕೆಟ್‍ನಲ್ಲಿ ನೂತನ ದೊರೆಗಳು ಜನ್ಮತಾಳಿದ ಸಮಯವೂ ಆಗಿತ್ತು. ಕಪ್ಪು-ಬಿಳುಪು ಅನ್ನೋ ತಾರತ್ಯಮದಿಂದ ಬೇಸತ್ತಿದ ಜನರು ಕ್ರಿಕೆಟನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡ ರೋಚಕ ಇತಿಹಾಸ ಕೆರಿಬಿಯನ್ನರದ್ದು. ಆ ವರೆಗೂ ಕ್ರಿಕೆಟ್ ಅಂದ್ರೆ, ಕಾಂಗರೂಗಳು ಹಾಗೂ ಆಂಗ್ಲರದ್ದೇ ಕಾರುಬಾರು ಇತ್ತು. ಬಣ್ಣ ತಾರತಮ್ಯದಿಂದ ಕುಗ್ಗಿದ್ದ ವೆಸ್ಟ್ ಇಂಡೀಸ್‍ಗೆ ಕ್ರಿಕೆಟ್ ಹೊಸ ಬದುಕೊಂದನ್ನ ನೀಡಿತ್ತು.

ಇವರ ಮುಂದೆ ಇಡೀ ವಿಶ್ವವನ್ನೇ ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದ ಆಂಗ್ಲರು ಬೆಚ್ಚಿಬಿದ್ದು, ಮಂಡಿಯೂರಿ ಕುಳಿತಿತ್ತು. ದಿ ಗ್ರೇಟ್ ಬ್ರಿಟನ್‍ಗೆ, ತನ್ನ ಸಾಮ್ರಜ್ಯವೇ ಕಳೆದು ಹೋದಂತೆ ಭಾಸವಾದ ಕ್ಷಣವೇ ಅದಾಗಿತ್ತು. ಕೆರಿಬಿಯನ್ನರಿಗೆ ಕ್ರಿಕೆಟ್ ಅಂದ್ರೆ ಕೇವಲ ಒಂದು ಕ್ರೀಡೆಯಷ್ಟೇ ಅಲ್ಲ. ಬದಲಾಗಿ ಕ್ರಿಕೆಟೇ ಇವರ ಬದುಕು. ಉಸಿರು. ಅಷ್ಟರ ಮಟ್ಟಿಗೆ ಕ್ರಿಕೆಟ್ ಇವರ ರಕ್ತದಲ್ಲಿ ಬೆರೆತು ಹೋಗಿದೆ. ಹೌದು.. ಕೆರಿಬಿಯನ್ನರು. ವಿಶ್ವ ಕ್ರಿಕೆಟ್‍ನಲ್ಲಿ ಕೊಹಿನೂರ್‍ನಂತೆ ಪಳಪಳ ಹೊಳೆಯುತ್ತಿರುವವರು.

ತಮ್ಮ ಮೋಜಿಗೆ, ಮಸ್ತಿಗೆ ಕಪ್ಪು ಜನರನ್ನ ಬಳಸಿಕೊಂಡಿದ್ದ ಆಂಗ್ಲರು ಯಾವತ್ತು ಅಂದುಕೊಂಡಿರ್ಲಿಕ್ಕಿಲ್ಲ. ತಮ್ಮ ತಮ್ಮ ಅಂತ್ಯದ ಆರಂಭ ಅನ್ನೋದು. 80ರ ದಶಕಗಳಲ್ಲಿ ಈ ಕೆರಬಿಯನ್ನರು ಕ್ರಿಕೆಟ್ ಅನ್ನೋ ಮಹಾ ಸಾಗರಕ್ಕೆ ಧುಮುಕಿದ್ರು. ಆದ್ರೆ ಅದು ಆಂಗ್ಲರ ಗುಲಾಮಗಿರಿಯಲ್ಲಿ ಅನ್ನೋದು ವಿಷಾಧ. ದೈಹಿಕವಾಗಿ ಬಲಾಢ್ಯರಾಗಿದ್ದ ಕೆರಿಬಿಯನ್ನರನ್ನ ಕೇವಲ ಬೌಲಿಂಗ್ ಮಾಡೋದಕ್ಕಷ್ಟೇ ಆಂಗ್ಲರು ಬಳಸಿಕೊಂಡಿದ್ರು. ಯಾವುದೇ ಕಾರಣಕ್ಕೆ ಕೆರಿಬಿಯನ್ನರು ಬ್ಯಾಟ್ ಮುಟ್ಟುವಂತಿರಲಿಲ್ಲ. ಬ್ಯಾಟಿಂಗ್ ಮಾಡೋದಕ್ಕೆ ಬಿಳಿಯರಷ್ಟೇ ಸೂಕ್ತರು. ಕರಿಯರು ಏನಿದ್ರು ಆಂಗ್ಲರು ಹೇಳಿದ ಹಾಗೆ ಬೌಲಿಂಗ್ ಅಷ್ಟೇ ಮಾಡಬೇಕಿತ್ತು.

ಆದರೆ ಕ್ರಿಕೆಟ್ ಮೇಲಿನ ಪ್ರೀತಿ ಆರಾಧನೆ ಅಂದು ಕೆರಿಬಿಯನ್ನರಿಗೆ ಹೊಸ ಹುಮ್ಮಸ್ಸು ಹಾಗೂ ಹುರುಪನ್ನು ನೀಡಿತ್ತು. ಹೌದು.. ಅದೊಂದು ದಿನ ಕೆರಿಬಿಯನ್ನರು ಆಂಗ್ಲರು ಶೋಷಣೆಯ ವಿರುದ್ಧ ಸಿಡಿದೆದ್ದರು. ಎಲ್ಲಿಯವರೆಗೆ ಎಂದರೆ ಕೆರಿಬಿಯನ್ ನಾಡುಗಳನ್ನ ಕ್ರಿಕೆಟ್ ಆಡಿಯೇ ಆಂಗ್ಲರ ಬಳಿಯಿಂದ ಬಿಡಿಸಿಕೊಂಡರು. ಈಗಲೂ ಅಷ್ಟೇ.. ಕೆರಿಬಿಯನ್ನರಿಗೆ ಕ್ರಿಕೆಟ್ ಅಂದ್ರೆ ಒಂದು ರೀತಿಯ ಹೋರಾಟ. ಸ್ವಾತಂತ್ರ್ಯ ಹೋರಾಟ.

ಕ್ರಿಕೆಟ್ ಕೇವಲ ಕೆರಿಬಿಯನ್ನರಿಗಷ್ಟೇ ಅಲ್ಲ. ಈ ಅಫ್ಘಾನಿಸ್ತಾನಕ್ಕೂ ಅಷ್ಟೇ. ಇಡೀ ಜಗತ್ತೇ ಈಗ ಅಫ್ಘಾನಿಸ್ತಾನದ ಬಗ್ಗೆ ಮಾತನಾಡಿಕೊಳ್ತಿದೆ. ಭಯೋತ್ಪಾದನೆಯ ಗೋದಾಮಿನಲ್ಲೇ ಮುಗಿದು ಹೋಗಬೇಕಿದ್ದ ಬದುಕು ಈಗ ಹಚ್ಚ ಹಸಿರ ಹುಲ್ಲು ಹಾಸಿನ ಮೇಲೆ ಜಿಂಕೆಯಂತೆ ಓಡಾಡುತ್ತಿದೆ. ಅದ್ಯಾವ ದುರಾದೃಷ್ಟವೋ ಪಾಕಿಸ್ತಾನದ ಪಕ್ಕದಲ್ಲೇ ಇರೋದು ಬಿಟ್ಟರೆ ನಾವು ಹುಟ್ಟಿನಿಂದ ಭಯೋತ್ಪಾದಕರಲ್ಲ ಅನ್ನೋದನ್ನ ಕ್ರಿಕೆಟ್ ಅಸ್ತ್ರವಾಗಿಟ್ಟುಕೊಂಡೇ ಈ ಅಫ್ಘನ್ನರು ಜಗತ್ತಿಗೆ ತಿಳಿ ಹೇಳಿದ್ದಾರೆ. ಇಡೀ ಅಫ್ಘಾನ್ ಈಗ ಕ್ರಿಕೆಟನ್ನ ಆರಾಧಿಸುತ್ತಿದೆ. ಕ್ರಿಕೆಟನ್ನೇ ಉಸಿರಾಡುತ್ತಿದೆ. ಎಲ್ಲಿಯವರೆಗೆ ಎಂದರೆ ಹೀಗೊಂದು ಆಂದೋಲನವೇ ಅಫ್ಘಾನಿಸ್ತಾನದಲ್ಲಿ ಶುರುವಾಗಿತ್ತು.

“Pull up your sleeves
Come to streets
And start playing CRICKET
Because Happiness is rare in a poor man’s life”

ಬಾಂಬುಗಳ ಮಧ್ಯೆ ಕಳೆದು ಹೋಗಬೇಕಿದ್ದ ಜೀವನ ಈಗ ವಿಶ್ವಕಪ್ ವೇದಿಕೆಗೆ ಬಂದು ನಿಂತಿದೆ. ಸೋತಿದ್ದಾರೆ ನಿಜ. ಆದರೆ ಇದುವೇ ಇವರ ಬದುಕು ಸಂಭ್ರಮಿಸೋದಕ್ಕಿರುವ ತೋರಣ. ಗೆಲ್ಲಬೇಕು ಅನ್ನೋದು ಆಸೆ. ಆದರೆ ಆಡಬೇಕು ಅನ್ನೋದು ಇವರ ಗುರಿ. ಆಡಬೇಕು ಅನ್ನೋ ಆಸೆಯನ್ನ ಪೂರೈಸಿಕೊಂಡ ಈ ಅಫ್ಘಾನ್ನರು ಗೆಲ್ಲಬೇಕು ಅನ್ನೋ ಆಸೆಯನ್ನ ಪೂರೈಸುವ ದಿನಗಳು ದೂರವಿಲ್ಲ.

ಈ ವಿಶ್ವಕಪ್ ಅಫ್ಘಾನಿಸ್ತಾನದ ಪಾಲಿಗೆ ಅವಿಸ್ಮರಣೀಯವೇ. ಯಾಕಂದ್ರೆ ತಮ್ಮ ಹೀನಾಯ ಸೋಲಿಗಿಂತ ರೋಚಕ ಗೆಲುವನ್ನೇ ಅವರು ಎದುರಾಳಿಗಳಿಗೆ ಕೊಟ್ಟಿದ್ದಾರೆ. ಅದುವೇ ಇವರ ಸಾಧನೆ. ಕೆರಿಬಿಯನ್ನರಂತೆ ಇವರೂ ಒಂದು ದಿನ ಕ್ರಿಕೆಟ್ ಜಗತ್ತನ್ನು ಆಳಲಿದ್ದಾರೆ ಅನ್ನೋದು ಕತ್ತಲಿನಷ್ಟೇ ಸತ್ಯ. ಅಂದಹಾಗೆ ಅಫ್ಘಾನ್ ಕ್ರಿಕೆಟ್ ಶಿಶುವಲ್ಲ.. ಕ್ರಿಕೆಟ್ ಹೂವುಗಳು.!!

‍ಲೇಖಕರು avadhi

July 1, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Raghu

    ಫಲ ಬೇಕಂದ್ರೆ ಛಲ ಇರ್ಬೇಕು,
    ಗೆಲ್ಲೊವರ್ಗೂ ತಾಳ್ಮೆ ಇರ್ಲೆ ಬೇಕು….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: