ಅಲ್ಲಿ ದಲಿತ ಹೋರಾಟದ ನೀಲಿ ಬಾವುಟಗಳು ಯಾಕಿರಲಿಲ್ಲ?

ಪ್ರೀತಿಯ ವಾಲ್ಮೀಕಿ -ನಾಯಕ ಸಮುದಾಯದ ಸಹೋದರರೇ…

ಡಾ. ವಡ್ಡಗೆರೆ ನಾಗರಾಜಯ್ಯ

ಈ ಮೊದಲೇ ತಿಳಿಸಿದಂತೆ ವಾಲ್ಮೀಕಿ -ನಾಯಕ ಸಮುದಾಯವು 7.5% ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ನಾನು ನೈತಿಕವಾಗಿ ಬೆಂಬಲಿಸುತ್ತಿದ್ದೇನೆ. ಈಗ ನಿಮ್ಮ ಮುಂದೆ ನಾನು ಮಂಡಿಸುತ್ತಿರುವ ಈ ಕೆಳಗಿನ ತಕರಾರುಗಳೆಲ್ಲವೂ ನಿಮಗೆ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಲಿ ಎಂದಷ್ಟೇ ಆಶಿಸುತ್ತೇನೆ…

ಮೊನ್ನೆ ನಡೆದ ವಾಲ್ಮೀಕಿ- ನಾಯಕ ಸಮಾವೇಶದಲ್ಲಿ ಭಗವಾಧ್ವಜಗಳು ಹಾರಾಡುತ್ತಿದ್ದವು. ಭಗವಾಧ್ವಜ ಎಂಬುದು ನಾಯಕ ಸಮುದಾಯದವರ ಪಾಲಿಗೆ ದಲಿತರ ಸ್ವಾಭಿಮಾನಿ ಹೋರಾಟದ ಲಾಂಛನವಾಗಿರುವ ನೀಲಿ ಬಾವುಟಕ್ಕಿಂತಲೂ ಮಹತ್ವವಾದದ್ದೇನು? ಭಗವಾಧ್ವಜಗಳನ್ನು ಹಾರಾಡಿಸಿಕೊಂಡು ಯಾರೇ ಬರಲಿ ಅವರು ಅಂಬೇಡ್ಕರ್ ಗೆ ವಿರೋಧಿಗಳೆಂದು ನಾವು ತಿಳಿಯಬೇಕಾಗಿದೆ.

ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸಾಮಾಜಿಕ ನ್ಯಾಯದ ಮಾನದಂಡವೆಂದು ಮೀಸಲಾತಿಯನ್ನು ದೊರಕಿಸಿಕೊಟ್ಟ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿರುವ ಎಲ್ಲ ಪಂಗಡಗಳು ಒಂದಾಗುವುದನ್ನು ಬಿಟ್ಟು ಮೀಸಲಾತಿ ವಿರೋಧಿಗಳಾದ ಕೇಸರಿ ಪಡೆಗಳ ಹಿಂದೆ ಭಗವಾಧ್ವಜ ಹಾರಿಸುತ್ತಾ ಹೋಗುವುದು ನ್ಯಾಯವೇನು? ಬುದ್ಧಗುರು – ಬಸವಣ್ಣ – ಗಾಂಧೀಜಿ – ಅಂಬೇಡ್ಕರ್- ಕುವೆಂಪು ಮುಂತಾದ ಮಾನವತಾವಾದಿಗಳ ಜಾತ್ಯತೀತ ಹೋರಾಟದ ಹಿನ್ನೆಲೆ ತಿಳಿಯದೆ ಕೋಮುವಾದಿ ಸಂಘಿಗಳೊಂದಿಗೆ ಕೈಜೋಡಿಸುತ್ತಾ ಬರಿದೇ ಮೀಸಲಾತಿ ಫಲಾನುಭವಗಳಿಗಾಗಿ ಆಸೆಪಡುವ ಜನರು, ಅನ್ನ ಕೊಟ್ಟ ಡಾ.ಅಂಬೇಡ್ಕರ್ ಅವರ ಸಂವಿಧಾನದ ಬದಲು ರಾಮಾಯಣ – ಮಹಾಭಾರತ- ಭಗವದ್ಗೀತೆ ಬೇಕೆನ್ನುತ್ತಿದ್ದಾರೆ.

ಆತ್ಮಗೌರವದ ಸಂಕೇತವಾದ ನೀಲಿ ಧ್ವಜ ಬೇಕಿಲ್ಲವೆಂದು ದೂರವಿಟ್ಟಿರುವ ಇದೇ ಜನ ಹಿಂದುತ್ವದ ಹೆಸರಿನಲ್ಲಿ ಮತೀಯ ಧ್ವೇಷ ಹರಡುವ ಭಗವಾಧ್ವಜ ಹಿಡಿದುಕೊಂಡಿದ್ದಾರೆ. ಜೈ ಭೀಮ್ ಎಂದು ಭೀಮಮಂತ್ರ ಹೇಳಬೇಕಾದವರು ಜೈ ಶ್ರೀರಾಮ್ – ಜೈ ಭಜರಂಗಬಲಿ ಎಂದು ಕೂಗುತ್ತಿದ್ದಾರೆ. ಏನೆಂತಾ ವರ್ತನೆ ಇವರದು? ಈ ವರ್ತನೆ ಎಷ್ಟರಮಟ್ಟಿಗೆ ಸರಿ?.

ಮೇಲ್ಜಾತಿಗಳ ಗುಡಿಗಳಿಗೂ ಮನೆಗಳಿಗೂ ಪ್ರವೇಶಿಸುವ ಸಾಮಾಜಿಕ ಸ್ವಾತಂತ್ರ್ಯವಿರುವ ವಾಲ್ಮೀಕಿ- ನಾಯಕರಿಗೆ ಹೋಲಿಸಿ ನೋಡಿದರೆ, ಅದೇ ಮೇಲ್ಜಾತಿಯವರ ಗುಡಿಯಾಚೆಗೂ ಮನೆಯಾಚೆಗೂ ತಲೆ ತಗ್ಗಿಸಿ ಕೈಕಟ್ಟಿಕೊಂಡು ನಿಂತಿರುವ ಹೊಲೆಮಾದಿಗರಷ್ಟು ತೀವ್ರವಾದ ಸಾಮಾಜಿಕ ಶೋಷಣೆಗೀಡಾಗಿಲ್ಲವೆಂಬುದು ವಾಸ್ತವ ಸಂಗತಿ.

ಸಾಮಾಜಿಕ ಬಹಿಷ್ಕಾರಕ್ಕೆ ಹೊಲೆಮಾದಿಗರು ಗುರಿಯಾಗುತ್ತಿರುವರೇ ಹೊರತು ನಾಯಕ ಜನಾಂಗದವರಲ್ಲ. ಮೀಸಲಾತಿ ಕೇಳುವ ವಾಲ್ಮೀಕಿ – ನಾಯಕರು ಸವರ್ಣೀಯರೊಂದಿಗೆ ಮಾತ್ರ ಗುರುತಿಸಿಕೊಳ್ಳುತ್ತಿದ್ದಾರೆ. ಚಪ್ಪಲಿ ಹೊಲೆಯುವ – ಸತ್ತ ಪಶುಗಳನ್ನು ಹೊತ್ತು ಸಾಗಿಸುವ – ಅರೆ ತಮಟೆ ನುಡಿಸುತ್ತಾ ತೋಟಿ ಕೆಲಸ ಮಾಡುವ – ಕಕ್ಕಸ್ಸು ಬಾಚಿ ಜಾಡಮಾಲಿ ಕೆಲಸ ಮಾಡುವ ಹೊಲೆಮಾದಿಗರನ್ನು ಅಸ್ಪೃಶ್ಯರನ್ನಾಗಿ ಕಾಣುತ್ತಿದ್ದಾರೆ.

ಸಮಾಜದ ಸೇವೆ ಮಾಡುತ್ತಾ ಕಟ್ಟಕಡೆಯವರಾಗಿ ಬದುಕುತ್ತಿರುವ ಹೊಲೆಮಾದಿಗರ ವಿರುದ್ಧ ನಾಯಕ ಸಮುದಾಯದವರು ತೋರಿಸುವ ಅಸಡ್ಡೆ -ಕೃತಘ್ನತೆ- ಶೋಷಣೆ ಮಾನವೀಯವಾದದ್ದೇ? ಅಂಬೇಡ್ಕರ್ ದೊರಕಿಸಿ ಕೊಟ್ಟಿರುವ ಮೀಸಲಾತಿಯ ಅನುಕೂಲ ಬೇಕೆಂದ ಮೇಲೆ ಅಂಬೇಡ್ಕರ್ ಅವರು ಹುಟ್ಟಿದ ಅಸ್ಪೃಶ್ಯರ ಸಮಾಜದ ಪರವಾಗಿ ನಿಲ್ಲದಿರುವ ಬಹತೇಕ ನಾಯಕರು, ಜಾತಿ ದೌರ್ಜನ್ಯ ಎಸಗುವ ಸವರ್ಣೀಯರೊಂದಿಗೆ ಮನುವಾದಿಗಳೊಂದಿಗೆ ಗುರುತಿಸಿಕೊಳ್ಳುವುದು ಸರಿಯೇನು? ಇತ್ತೀಚೆಗೆ ಏಪ್ರಿಲ್ 14 ರಂದು ಪಾವಗಡದಲ್ಲಿ ನಾಯಕ ಸಮುದಾಯದವರು ಸವರ್ಣೀಯರೊಂದಿಗೆ ಕೈಜೋಡಿಸಿ ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ದಲಿತ ವಿರೋಧಿ ವರ್ತನೆ ಮತ್ತು ಅಸ್ಪೃಶ್ಯರ ವಿರುದ್ಧ ನಾಯಕರು ಎಸಗುತ್ತಿರುವ ದೌರ್ಜನ್ಯವನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ?

ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಎಂಬುವ ಸ್ವಾಮೀಜಿಯೊಬ್ಬ ಠೇಂಕಾರದಿಂದ ಮಾತಾಡುತ್ತಾ ಮನುವಾದಿಗಳ ತಾಳಕ್ಕೆ ಕುಣಿಯುವ ಭಟ್ಟಂಗಿಯಾಗಿ ವಾಲ್ಮೀಕಿ ಸಮುದಾಯದ ಯುವಕರನ್ನು ಕೋಮುವಾದಿಗಳನ್ನಾಗಿ ಪರಿವರ್ತಿಸುತ್ತಿದಾರೆ. ಮೊನ್ನೆ ದಿನ ಮೀಸಲಾತಿಗಾಗಿ ಆಗ್ರಹಿಸಿ ನಡೆಸಿದ ವಾಲ್ಮೀಕಿ – ನಾಯಕ ಸಮಾವೇಶದಲ್ಲಿ ಭಗವಾಧ್ವಜಗಳು ಈ ಸ್ವಾಮೀಜಿಯ ನೇತೃತ್ವದಲ್ಲಿ ರಾರಾಜಿಸುತ್ತಿದ್ದವು.

ಅಲ್ಲಿ ದಲಿತ ಚಳವಳಿಯ ಸ್ವಾಭಿಮಾನಿ ಹೋರಾಟದ ಸಂಕೇತವಾದ ನೀಲಿ ಬಾವುಟಗಳು ಯಾಕಿರಲಿಲ್ಲ? ಕೇಸರಿ ಭಗವಾಧ್ವಜವು ಅಂಬೇಡ್ಕರ್ ವಿರೋಧಿ ಮನುವಾದಿಗಳಿಗೆ ಮಾತ್ರ ಲಾಂಛನವಾಗಿರುತ್ತದೆ. ಅಂತಹ ವಿರೋಧಿ ಶಕ್ತಿಗಳ ಜೊತೆಗೆ ಗುರುತಿಸಿಕೊಂಡಿರುವ ಸ್ವಾಮೀಜಿಯು ಒಪ್ಪುವ ಕೇಸರಿ ಬಾವುಟಗಳನ್ನೇಕೆ ನೀವು ಬಳಸಿದಿರಿ? ಇದು ಕೇಸರಿ ಬಾವುಟ ಹಿಡಿಯಲು ದಲಿತ ಯುವಕರನ್ನು ಪ್ರಚೋದಿಸುತ್ತಿರುವ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಆಲಿಯಾಸ್ ಕಿಟ್ಟಿಗೂ ಅನ್ವಯಿಸುವ ಪ್ರಶ್ನೆ. ಭಾರತೀಯ ದಲಿತ ಚಳುವಳಿಯ ಪ್ರಜ್ಞೆಯಾಗಲೀ ಪ್ರಜಾತಾಂತ್ರಿಕ ತಿಳಿವಳಿಕೆಯಾಗಲೀ ಇಲ್ಲದೇ ಭಗವಾಧ್ವಜ ಹಾರಿಸುವ ಸ್ವಾಮೀಜಿಗಳು ನಮ್ಮ ಪ್ರಜಾತಾಂತ್ರಿಕ ನಡಿಗೆಗೆ ಯಾವತ್ತಿಗೂ ಮಾರಕವೆಂದು ನಿಮಗೆ ಅನ್ನಿಸುತ್ತಿಲ್ಲವೇಕೆ?

ಮ್ಯಾಸಬೇಡರು ಊರನಾಯಕರಿಗಿಂತ ಹಿಂದುಳಿದಿದ್ದಾರೆ. ಮ್ಯಾಸಬೇಡರು ಇಂದಿಗೂ ಬುಡಕಟ್ಟು ಚಹರೆಗಳನ್ನು, ಪೆಟ್ಟಿಗೆ ದೇವರುಗಳನ್ನು, ನೆಲದೇವತೆಗಳ ನೆಲೆಗಳನ್ನು, ಪ್ರತ್ಯೇಕ ಭಾಷೆಯನ್ನು, ಗೋಮಾಂಸ ಸೇವನೆಯ ಮೂಲ ಆಹಾರ ಸಂಸ್ಕೃತಿಯನ್ನು, ಗುಡಿಕಟ್ಟು ಕಟ್ಟೆಮನೆ ಒಳಾಡಳಿತ ಪದ್ದತಿಯನ್ನು ಉಳಿಸಿಕೊಂಡುಬಂದಿದ್ದಾರೆ. ಹಾಗಾಗಿ ಮ್ಯಾಸಬೇಡರು ನಿಜವಾದ ಮೀಸಲಾತಿ ಫಲಾನುಭವಿಗಳಾಗಬೇಕಿದೆ. ಇವರು ಇಂದಿಗೂ ಶಿಕ್ಷಣಕ್ಕಾಗಲೀ ನಾಗರಿಕ ಬದುಕಿಗಾಗಲೀ ತೆರದುಕೊಳ್ಳದೆ ಮೀಸಲಾತಿಯೂ ಸಿಗದೆ ಒದ್ದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರಲು ಹಕ್ಕಿಪಿಕ್ಕಿ ಸೋಲಿಗ ಕಾಡುಕುರುಬ ಮಲೆಕುಡಿಯ ಜೇನುಕುರುಬ ಇರುಳಿಗ ಸಿದ್ಧಿಯರು ಮುಂತಾದವರಿಗೆ ಸಿಗಬೇಕಾದ ST ಮೀಸಲಾತಿಯ ಸಿಂಹಪಾಲು ಊರನಾಯಕರ ಪಾಲಾಗುತ್ತಿದೆ. ದೇವರ ಎತ್ತುಗಳ ಕಿಲಾರಿಗಳನ್ನು ಮತ್ತು ದೇವರ ಎತ್ತುಗಳನ್ನೇ ಪವಿತ್ರವೆಂದು ಎತ್ತಿನ ಬಾಲ ಹಿಡಿದುಕೊಂಡಿರುವ ಮ್ಯಾಸನಾಯಕರು ಮೂಲೆಗುಂಪಾಗಿದ್ದಾರೆ. 2011 ರಲ್ಲಿಯೇ ಮ್ಯಾಸಬೇಡರನ್ನು ಓಬಿಸಿ ಪಟ್ಟಿಗೆ ಸೇರಿಸಲಾಗಿದೆ.. ಇದು ಊರನಾಯಕರು ಮಾತ್ರ 7.5% ಮೀಸಲಾತಿ ದೋಚಿಕೊಳ್ಳಲು ಮಾಡಿರುವ ಹುನ್ನಾರವಾಗಿದೆ. ಈ ಪ್ರಶ್ನೆಗೆ ನಿಮ್ಮ ಉತ್ತರವೇನು?

ದಾರ್ಶನಿಕ ಕವಿ ವಾಲ್ಮೀಕಿ ಅವರಿಗಿರುವಷ್ಟು ಸ್ಥಾನಮಾನವನ್ನು ನಾಯಕ ಸಮುದಾಯದವರು, ನಮಗೆಲ್ಲರಿಗೂ ಮೀಸಲಾತಿ ತಂದುಕೊಟ್ಟ ಮಹಾನ್ ನೇತಾರನಾದ ಅಂಬೇಡ್ಕರ್ ಅವರಿಗೆ ನೀಡುತ್ತಿಲ್ಲ. ವಾಲ್ಮೀಕಿ ಒಬ್ಬ ಪುರಾಣಿಮ ಕವಿ – ಅಂಬೇಡ್ಕರ್ ಮೀಸಲಾತಿಯನ್ನು ಕೊಟ್ಟ ಸಾಮಾಜಿಕ ಹೋರಾಟಗಾರ. ಪುರಾಣ ಸಂಗತಿಗಳು ಸಮಾಜದ ಧಾರ್ಮಿಕ ನಾಡಿಯೇ ಹೊರತು ಸಂವಿಧಾನಪ್ರಣೀತ ರಾಜಕೀಯ ಶಕ್ತಿಯಲ್ಲ. ಬುದ್ಧಗುರು – ಬಸವಣ್ಣ – ಗಾಂಧೀಜಿ – ಅಂಬೇಡ್ಕರ್ – ಕುವೆಂಪು ಮುಂತಾದ ಮಾನವತಾವಾದಿ ಜಾತ್ಯತೀತ ಹೋರಾಟಗಾರು ಹಾಗೂ ಸಾಮಾಜಿಕ ನ್ಯಾಯದ ನಿಷ್ಠಾವಂತ ಪ್ರಗತಿಪರ ಹೋರಾಟಗಾರರು ನಮಗೆ ಪ್ರಧಾನವಾಗಬೇಕೇ ಹೊರತು ಪುರಾಣಿಮ ಪ್ರತಿಮಾ ನಾಯಕರಲ್ಲ.

ಪುರಾಣಿಮ ಕವಿ ವಾಲ್ಮೀಕಿ ನಮ್ಮೆಲ್ಲರ ಸಾಂಸ್ಕೃತಿಕ ಹೆಮ್ಮೆಯ ಸಂಕೇತವೆಂಬುದನ್ನು ಒಪ್ಪುತ್ತೇವೆ. ಆದರೆ ಮೀಸಲಾತಿ ದೊರಕಿಸಿಕೊಟ್ಟ ಡಾ.ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಅಂಬೇಡ್ಕರ್ ನಮಗಿಂದು ಸಾಮಾಜಿಕ ಚಳವಳಿಗಳಲ್ಲಿ ಹೆಚ್ಚು ಪ್ರಸ್ತುತ ಎಂಬುದು ನಿಮಗೇಕೆ ತಿಳಿಯುತ್ತಿಲ್ಲ? ವಾಲ್ಮೀಕಿ ಜಯಂತಿಯನ್ನು ಆಚರಿಸಲು ತೋರಿಸುವ ಉತ್ಸಾಹದ ಅರ್ಧದಷ್ಟಾದರೂ ನಾಯಕ ಸಮುದಾಯದವರು ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ತೋರಿಸುತ್ತಿಲ್ಲ ಯಾಕೆ?

ಪುರಾಣಿಮ ನಾಯಕನಾದ ವಾಲ್ಮೀಕಿ ಮತ್ತು ಚಾರಿತ್ರಿಕ ಪಾಳ್ಳೇಗಾರನಾದ ಮದಕರಿನಾಯಕರ ಜಯಂತಿಗಳನ್ನು ಆಚರಿಸುವ ಇದೇ ಜನ, ಡಾ.ಅಂಬೇಡ್ಕರ್ ಅವರ ಜಯಂತಿ ಆಚರಿಸಲು ಅಥವಾ ಗೌರವ ತೋರಿಸಲು ಯಾಕೆ ಮುಂದಾಗಬಾರದು? ಪುರಾಣಿಮ ಕವಿ ವಾಲ್ಮೀಕಿಗೆ ಕೊಟ್ಟಿರುವ ಲೇಶಮಾತ್ರ ಗೌರವದ ಸ್ಥಾನವನ್ನು ಅಂಬೇಡ್ಕರ್ ಗೆ ಕೊಡದಿರುವ ಇವರು ವಾಲ್ಮೀಕಿಯಿಂದ ಮೀಸಲಾತಿ ಪಡೆದರೋ ಅಥವಾ ಅಂಬೇಡ್ಕರ್ ಅವರಿಂದ ಪಡೆದರೋ?

ಪ್ರೊ.ಕೆ.ನಾರಾಯಣಸ್ವಾಮಿ (ಕೆಎನ್ಎಸ್) ಅವರನ್ನು ಹೊರತುಪಡಿಸಿ ಅಷ್ಟೊಂದು ಬದ್ಧತೆಯಿಂದ ದಲಿತ ಚಳವಳಿಗಾಗಿ ನಾಯಕ ಸಮುದಾಯದ ಯಾವುದೇ ನೇತಾರ ಹೋರಾಟ ಮಾಡಿದ ಉದಾಹರಣೆಗಳಿಲ್ಲ ಎಂಬುದು ಕಟುಸತ್ಯ. ಒಬ್ಬ ವ್ಯಕ್ತಿಯಾಗಿ ನ್ಯಾ.ಎಲ್.ಜಿ.ಹಾವನೂರು ವರದಿ ಹೊರತುಪಡಿಸಿ, ಇಲ್ಲಿಯವರೆಗೆ ನಡೆದುಕೊಂಡು ಬಂದಿರುವ ಒಟ್ಟಾರೆ ಮೀಸಲಾತಿ ಹೋರಾಟಗಳಿಗೆ ನಾಯಕ ಸಮುದಾಯದವರು ನೀಡಿರುವ ಕೊಡುಗೆ ಏನು? ಹಾಗೂ ಈ ಹೋರಾಟಗಳಲ್ಲಿ ಅಸ್ಪೃಶ್ಯರೊಂದಿಗೆ ಕೈಜೋಡಿಸಿ ಒಳಮೀಸಲಾತಿ ಸಮಸ್ಯೆ ನಿರ್ವಹಣೆಗೆ ಎಷ್ಟರಮಟ್ಟಿಗೆ ಸ್ಪಂದಿಸಿದ್ದಾರೆ? ಇನ್ನು ಅಲೆಮಾರಿಗಳ ಪಾಡಂತೂ ಮತ್ತಷ್ಟು ಚಿಂತಾಜನಕವಾಗಿದೆ. ಇಂದಿಗೂ ಟೆಂಟು ಡೇರೆಗಳಲ್ಲಿ ಗೋಚರಿಸದವರಾಗಿ ಅನೇಕ ಅಲೆಮಾರಿ ಸಮುದಾಯಗಳು ಭಿಕ್ಷಾಟನೆ ಮಾಡಿಕೊಂಡು ಊರೂರು ಅಲೆದಾಡುತ್ತಾ ಬದುಕುತ್ತಿವೆ. ಅವರ ಬದುಕು ಹಸನಾಗಿಸುವವರು ಯಾರು?

ಮೀಸಲಾತಿಯ ಮೂಲಕ ಅನ್ನ ಕೊಟ್ಟ ತಂದೆಯನ್ನೇ ಹೊರಗಿಡಬಾರದು. ಒಳಮೀಸಲಾತಿ ವರ್ಗೀಕರಣದ ಹೋರಾಟದಲ್ಲಿ ನಾಯಕ ಸಮುದಾಯದವರ ಬೆಂಬಲವೇ ವ್ಯಕ್ತವಾಗಿಲ್ಲ. ಇಲ್ಲಿ ಪ್ರಶ್ನೆ ಇರುವುದು ಕೇವಲ ಒಳ ಮೀಸಲಾತಿಯ ವರ್ಗೀಕರಣದ ಬಗ್ಗೆಯಲ್ಲ. ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಗಳಲ್ಲಿ ಮೀಸಲಾತಿಯ ಜನಕ ಬಾಬಾ ಸಾಹೇಬರ ಭಾವಬಿಂಬವನ್ನು ನಾಯಕ ಸಮುದಾಯದವರು ಅಸ್ಪೃಶ್ಯರಷ್ಟು ಹೃದಯ- ದಮನಿ- ನಾಡಿಗಳಲ್ಲಿ ಹರಿಯುವ ನೆತ್ತರಿನ ಪ್ರಜ್ಞೆಯಾಗಿಸಿಕೊಂಡಿಲ್ಲ ಎಂಬುದೇ ಪ್ರಶ್ನೆ.

ವಾಲ್ಮೀಕಿ ಸಮುದಾಯದ ಬಂಧುಗಳೆಲ್ಲರಲ್ಲಿಯೂ ಅರಿವು ಮೂಡಿ ಶೋಷಿತ ಸಮುದಾಯಗಳ ಬೆನ್ನಿಗೆ ನಿಂತಿದ್ದೇ ಆದರೆ, ದಲಿತರ ಮೇಲೆ ಜಾತಿ ಕಾರಣಕ್ಕೆ ದೌರ್ಜನ್ಯ ಎಸಗುವ ಜಾತಿಗ್ರಸ್ತ ಮನಸುಗಳ ಎದೆ ನಡುಗುವುದಷ್ಟೇ ಅಲ್ಲದೆ ಒಂದು ನಿರ್ಣಾಯಕ ರಾಜಕೀಯ ಶಕ್ತಿಯಾಗಿ ಹೊಮ್ಮಬಹುದು. ಮೀಸಲಾತಿ ವಿಚಾರ ಬಂದಾಗ ಮಾತ್ರ ಅಂಬೇಡ್ಕರ್ ಫೋಟೋ ಹಿಡಿಯೋದು, ಬಾಕಿಯ ವೇಳೆಯಲ್ಲಿ ಹಿಂದುತ್ವದ ಝಂಡಾ ಹಾರಿಸೋದು ಹೀಗಿದೆ ಬಹುತೇಕ ಜನರ ವರ್ತನೆ. ಕೆಲವರು ಅಂಬೇಡ್ಕರ್ ಅಂದ್ರೆ ಹೊಲಯ ಮಾದಿಗ ಸಮುದಾಯಕ್ಕೆ ಮೀಸಲು ಅಂತಾ ತಿಳಿದುಕೊಂಡಿದ್ದಾರೆ… ತಾವೂ ದಲಿತರೆಂಬುದನ್ನು ಮರೆತೇಬಿಟ್ಟಿದ್ದಾರೆ. ನೆನಪಿರಲಿ ಮೀಸಲಾತಿಗೆ ಈ ದೇಶದ ಎಲ್ಲಾ ಧರ್ಮೀಯ ಶೋಷಿತರು ಹಕ್ಕುದಾರರು. ಸಂವಿಧಾನದ ಮೂಲಕ ಆ ಹಕ್ಕನ್ನು ದೊರಕಿಸಿಕೊಟ್ಟಿರುವುದು ಅಂಬೇಡ್ಕರ್! ಅದೇ ಸಂವಿಧಾನವನ್ನು ಸುಡುತ್ತಿರುವ ವಿರೋಧಿಗಳೊಂದಿಗೆ ಗುರುತಿಸಿಕೊಳ್ಳುವುದೆಂದರೆ ಅದು ಹೆತ್ತ ತಾಯಿಯ ವಿರುದ್ಧ ಮಕ್ಕಳು ಎಸಗುವ ಮಹಾ ಪಾಪಕಾರ್ಯ!

ಇಂತಹ ವಾಸ್ತವಗಳಿಗೆ ನಾವು ಮುಖಾಮುಖಿಯಾಗಬೇಕು. ಇಲ್ಲದಿದ್ದರೆ ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಸಾಗುವ ದ್ರೋಹಿಗಳೂ ಆತ್ಮವಂಚಕರೂ ಆಗುತ್ತೇವೆ. ಶರಣು ಶರಣಾರ್ಥಿಗಳು.

‍ಲೇಖಕರು avadhi

July 1, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: