‘ಫ್ರೀ’ ಕೇವಲ ‘ಉಚಿತ’ ಅಲ್ಲ; ಅದರಲ್ಲೂ ಇರಲಿ ಸ್ವಾತಂತ್ರ್ಯ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

೧೯೯೧ರ ಬಾರ್ಡಿಕ್ ‍ಸರ್ಕಲ್ (ಒಟ್ಟಿಗೆ ಸೇರಿ ಹಾಡುಗಳನ್ನು ರಚಿಸಿ ಹಾಡುವ ಒಂದು ಕೂಟ) ಒಂದರಲ್ಲಿ ಸ್ವತಂತ್ರ ತಂತ್ರಾಂಶ ಚಳುವಳಿಯ ಹರಿಕಾರನೆಂದೇ ಗುರುತಿಸಲ್ಪಡುವ ರಿಚರ್ಡ್ ಸ್ಟಾಲ್ಮನ್ ಬಲ್ಗೇರಿಯನ್‌ನ ಸೋಡಿ ಮೊಮ ಜನಪದ ಗೀತೆಯ ತಾಳಕ್ಕೆ ಸರಿಹೊಂದುವಂತೆ ರಚಿಸಿದ ಸ್ವತಂತ್ರ ತಂತ್ರಾಂಶ ಗೀತೆಯನ್ನು ಅವರೇ ಹಾಡಿರುವ ಒಂದು ದೃಶ್ಯ ನಿಮಗಾಗಿ.

ಈ ಹಾಡಿನ ಸಾಹಿತ್ಯ ಈ ಕೆಳಕಂಡಂತಿದೆ.

Join us now and share the software;
ನಮ್ಮೊಡನೆ ಸೇರಿ ಮತ್ತು ಸಾಫ್ಟ್ವೇರ್ ಹಂಚಿ;

You’ll be free, hackers, you’ll be free.
ನೀವು ಸ್ವತಂತ್ರರಾಗುತ್ತೀರಿ, ಹ್ಯಾಕರ್ಸ್, ನೀವು ಸ್ವತಂತ್ರರಾಗುತ್ತೀರಿ.

Join us now and share the software;
ನಮ್ಮೊಡನೆ ಸೇರಿ ಮತ್ತು ಸಾಫ್ಟ್ವೇರ್ ಹಂಚಿ;

You’ll be free, hackers, you’ll be free.
ನೀವು ಸ್ವತಂತ್ರರಾಗುತ್ತೀರಿ, ಹ್ಯಾಕರ್ಸ್, ನೀವು ಸ್ವತಂತ್ರರಾಗುತ್ತೀರಿ.

Hoarders can get piles of money,
ಮುಂದೆ ಮಾಲೀಕರು ‍ಹಣದ ರಾಶಿ ಪಡೆಯುವರು

That is true, hackers, that is true.
ಅದು ನಿಜ, ಹ್ಯಾಕರ್ಸ್, ಅದು ನಿಜ

But they cannot help their neighbors;
ಆದರೆ ಅವರು ನೆರೆಹೊರೆಯವರಿಗೆ ಬೆಂಬಲಿಗರಾಗಿ ನಿಲ್ಲರು;

That’s not good, hackers, that’s not good.
ಅದು ಒಳ್ಳೆಯದಲ್ಲ, ಹ್ಯಾಕರ್ಸ್, ಅದು ಒಳ್ಳೆಯದಲ್ಲ.

When we have enough free software
ನಮಗೆ ಸಾಕೆನಿಸುವಷ್ಟು ಸ್ವತಂತ್ರ ತಂತ್ರಾಂಶವಿದ್ದಲ್ಲಿ

At our call, hackers, at our call,
ಆಗ ದನಿ ನಮ್ಮದೇ, ಹ್ಯಾಕರ್ಸ್, ದನಿ ನಮ್ಮದೇ,

We’ll kick out those dirty licenses
ನಾವು ಆ ಕೊಳಕು ಪರವಾನಗಿಗಳನ್ನು ಹೊಡೆದು ಓಡಿಸುತ್ತೇವೆ

Ever more, hackers, ever more.
ಮತ್ತಷ್ಟು ಹ್ಯಾಕರ್ಸ್ ಮತ್ತಷ್ಟು

Join us now and share the software;
ನಮ್ಮೊಡನೆ ಸೇರಿ ಮತ್ತು ಸಾಫ್ಟ್ವೇರ್ ಹಂಚಿ;

You’ll be free, hackers, you’ll be free.
ನೀವು ಸ್ವತಂತ್ರರಾಗುತ್ತೀರಿ, ಹ್ಯಾಕರ್ಸ್, ನೀವು ಸ್ವತಂತ್ರರಾಗುತ್ತೀರಿ.

Join us now and share the software;
ನಮ್ಮೊಡನೆ ಸೇರಿ ಮತ್ತು ಸಾಫ್ಟ್ವೇರ್ ಹಂಚಿ;

You’ll be free, hackers, you’ll be free.
ನೀವು ಸ್ವತಂತ್ರರಾಗುತ್ತೀರಿ, ಹ್ಯಾಕರ್ಸ್, ನೀವು ಸ್ವತಂತ್ರರಾಗುತ್ತೀರಿ.

(ಕನ್ನಡಕ್ಕೆ: ಓಂಶಿವಪ್ರಕಾಶ್)

ಒಂದು ನಿಮಿಷ ನೀವು ನಿಮ್ಮ ಆಲೋಚನೆಗಳನ್ನು, ನೀವು ಮೇಲೆ ಅರ್ಥೈಸಿಕೊಂಡ ಸಾಲುಗಳನ್ನು ಬದಿಗಿಡಿ. ನಿಮ್ಮಲ್ಲಿರ ಬಹುದಾದ ಕೆಲವು ಪ್ರಶ್ನೆಗಳಿಗೆ ನಾನು ಮೊದಲು ಉತ್ತರಿಸುತ್ತೇನೆ.

  • ಇದೇನು ಈ ಮನುಷ್ಯ ಸಾಫ್ಟ್ವೇರ್ ಹಂಚು ಎನ್ನುತ್ತಿದ್ದಾನಲ್ಲ?
  • ಸಾಫ್ಟ್ವೇರ್ ಹಂಚುವುದರಿಂದ ನೆರೆಹೊರೆಯವರಿಗೆ ಏನು ಉಪಯೋಗ?
  • ಇವನೇಕೆ ಹ್ಯಾಕರ್‌ಗಳನ್ನು ಕರೆಯುತ್ತಿದ್ದಾನೆ?
  • ಹೀಗೆ ಸಾಫ್ಟ್ವೇರ್ ಹಂಚಿಕೆಯಿಂದ ಸಿಗುವ ಸ್ವಾತಂತ್ರ್ಯವಾದರೂ ಏನು?
  • ಇದರಿಂದ ನಾವು ಸ್ವತಂತ್ರರಾಗುವುದು ಹೇಗೆ?
  • ಇವರು ಯಾವ ಲೈಸೆನ್ಸ್‌ಗಳನ್ನು ಹೊಡೆದು ದಬ್ಬುವ ಆಲೋಚನೆ ಮಾಡುತ್ತಿದ್ದಾರೆ?

ಹೀಗೆ ಹಲವಾರು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡಿರಬಹುದು ಹಾಗೂ ಇದನ್ನು ಹೀಗೆಳೆಯುವ ಅಥವಾ ಇದನ್ನು ‘ಹ್ಯಾಕರ್’ ಎಂಬ ಪದ ನೋಡಿದ ತಕ್ಷಣವೇ ಕೆಟ್ಟ ಕೆಲಸವನ್ನು ಪ್ರೇರೇಪಿಸಿ ನೋಡಲು ಬರೆದಿರುವ ಹಾಡು ಎಂದು ನಿಮಗೆ ಅನಿಸಿರಲೂಬಹುದು. ನಮ್ಮ ಕನ್ನಡದ ಹಾಡೊಂದನ್ನು ನೆನಪಿಸಿಕೊಳ್ಳಿ – ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು – ನಿಧಾನಿಸಿ ಯೋಚಿಸಿದಾಗ ನಿಜವು ಅರಿವುದು – ಜೊತೆಗೆ ನಿಮ್ಮನ್ನು ನೀವು ಚಿಂತನೆಗೆ ಹಚ್ಚಿಕೊಳ್ಳುವುದು ಉತ್ತಮ. ನಿಮ್ಮ ಇತರೆ ಪ್ರಶ್ನೆಗಳಿಗೆ ಉತ್ತರ ಕೊಡಲು, ಚರ್ಚಿಸಲು ನಾನು ಸಿದ್ಧನಿದ್ದೇನೆ.

ಹೌದು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಚಳುವಳಿ (F‌ree & Open Source Software Movement) ದಶಕಗಳ ಗಡಿದಾಟಿ ಇಂದು ಮೈಕ್ರೋಸಾಫ್ಟ್ ನಂತಹ ದೈತ್ಯನನ್ನೂ ಸಮುದಾಯ ಸಹಭಾಗಿತ್ವ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಭಾಗವಾಗಿ ಒಂದಾಗಿಸಿಕೊಳ್ಳುತ್ತಿದೆ.

ನಾನು ಕಂಪ್ಯೂಟರ್ ಬಳಸಲು ಪ್ರಾರಂಭಿಸಿದ ದಿನಗಳಿಂದ ಗೆಳೆಯರ ಮಧ್ಯೆ ಸಾಫ್ಟ್ವೇರ್ ವಿನಿಮಯ ಆಗುತ್ತಿದ್ದದ್ದೂ, ಸಾಧ್ಯವಾದಾಗ (ಇಂಟರ್ನೆಟ್ ಸಂಪರ್ಕ ಸಿಕ್ಕಾಗ) ಕೆಲವು ‘ಉಚಿತ’ ತಂತ್ರಾಂಶಗಳನ್ನು ಇಂಟರ್ನೆಟ್ ನಿಂದ ಇಳಿಸಿಕೊಂಡು ಬಳಿಸಿದ್ದೂ, ನಂತರದ ದಿನಗಳಲ್ಲಿ ‌IT, Chip ನಂತಹ ಮ್ಯಾಗಝೀನ್‌ಗಳನ್ನು ಕೊಂಡಾಗ ಸಿಗುತ್ತಿದ್ದ ‘ಉಚಿತ’ ಗೇಮ್‌ಗಳನ್ನು (ಬಹಳ ಕಡಿಮೆ ಆದರೂ) ಸಾಫ್ಟ್‌ವೇರ್‌ಗಳನ್ನು ಬಳಸಿದ್ದಿದೆ.

ಈ ತಂತ್ರಾಂಶ ಕೊಡು ತೆಗೆದುಕೊಳ್ಳುವಿಕೆಯ/ಅದಲು ಬದಲು ಮಾಡಿಕೊಳ್ಳುವ ಕ್ರಿಯೆ ನನಗೆ ಪುಸ್ತಕ ಹಾಗೂ ತರಗತಿಗಳಲ್ಲಿ ಕಲಿಯುತ್ತಿದ್ದ ಕಂಪ್ಯೂಟರ್ ಜ್ಞಾನಕ್ಕಿಂತ ತುಸು ಹೆಚ್ಚೇ ವಿಷಯವನ್ನು ನನ್ನ ಅರಿವಿನ ಗೊಂಚಲಿಗೆ ಸೇರಿಸಿಕೊಳ್ಳಲು ಸಹಕರಿಸಿತು.

ಕಾಲೇಜಿನಲ್ಲಿ, ನಾವು ಹೆಚ್ಚುವರಿ ಕಂಪ್ಯೂಟರ್ ವಿಷಯಗಳನ್ನು ಅಭ್ಯಸಿಸಿದ ಹಾಗೂ ಅಧ್ಯಾಪಕನಾಗಿ ಕೆಲಸ ಮಾಡಿದ ಎನ್‌ಐ‌ಐಟಿಯಲ್ಲಿ ನನ್ನ ಈ ಅರಿವು ಹೊಸ ಸ್ನೇಹಿತರನ್ನೂ ಹುಡುಕಿ ಕೊಟ್ಟಿತು. ಮುಂದಿನ ದಿನಗಳಲ್ಲಿ ಇದೇ ಕನ್ನಡಕ್ಕೂ ಒಂದಷ್ಟು ಸಣ್ಣಪುಟ್ಟ ಕೆಲಸಗಳನ್ನು ಸ್ವ-ಇಚ್ಚೆಯಿಂದ ಮಾಡಲು ಪ್ರೇರೇಪಿಸಿತು ಎಂದರೆ ತಪ್ಪಿಲ್ಲ.

ಇಲ್ಲಿ ಕಂಪ್ಯೂಟರಿನಲ್ಲಿ ನನ್ನ ಕೈಚಳಕ ನೋಡಿದ ಕೆಲವರು ನನ್ನನ್ನು ಹ್ಯಾಕರ್ ಎಂದು ಕರೆದದ್ದರಲ್ಲಿ ಉತ್ಪ್ರೇಕ್ಷೆ ಏನಿಲ್ಲ… ಏಕೆಂದರೆ ಹ್ಯಾಕರ್ ಅನ್ನುವ ಪದದ ಬಳಕೆ ಜಾಗತಿಕವಾಗಿ – ಡಿಜಿಟಲ್ ಲೋಕದಲ್ಲಿ ತಪ್ಪು ಮಾಡುವವನನ್ನು ಎತ್ತಿ ತೋರಿಸುತ್ತದೆಯಾದರೂ – ಈ ಪದದ ಬಳಕೆ ಶುರುವಾದದ್ದೆಲ್ಲಿ ಎಂದು ನೀವು ಅರಿಯಲು ಯತ್ನಿಸಿದರೆ ನಿಮ್ಮಲ್ಲಿನ ಹ್ಯಾಕರ್‌ನನ್ನೂ ನೀವು ಅಭಿನಂದಿಸಬಹುದು. ಇದೇ ಕಾರಣಕ್ಕೆ ರಿಚರ್ಡ್ ಸ್ಟಾಲ್ಮನ್ ಬರೆದ ಹ್ಯಾಕಿಂಗ್ ಲೇಖನದ ಕೊಂಡಿಯನ್ನು ನಿಮಗಿಲ್ಲಿ ನೀಡುತ್ತಿದ್ದೇನೆ‍.

ಯಾವುದೇ ಒಂದು ಪ್ರಶ್ನೆ/ಸವಾಲನ್ನು ಇದುವರೆಗೆ ಕಂಡು ಅರಿಯದ (ಕನಿಷ್ಠ ಕ್ರಿಯೆಯಲ್ಲಿ ಭಾಗಿಯಾದವರ ಜ್ಞಾನಾಧಾರದ ಮೇಲೆ ಅವಲಂಭಿಸಿದಂತೆ) ಉತ್ತರವೊಂದರಿಂದ ಬಗೆಹರಿಸಿದರೆ ಅದನ್ನು ಹ್ಯಾಕ್ ಮಾಡಲಾಯಿತು/ಬಗೆಹರಿಸಿದವ, ಅದನ್ನು ಹ್ಯಾಕ್ ಮಾಡಿದ ಎನ್ನುವುದು ಮೊದಲಿಗೆ ಎಂ.ಐ.ಟಿ ಅಂತಹ ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿ, ನಂತರ ಐ.ಟಿಯಲ್ಲಿ ಉದ್ಯೋಗಗಳಲ್ಲಿ ಜನಜನಿತವಾದಂತಹ ಒಂದು ಪರಿಭಾಷೆ.

ಇದರೆ ಜೊತೆಗೆ ಹ್ಯಾಕಿಂಗ್‌ ಅನ್ನು ಯಾವುದೇ ಒಂದು ವ್ಯವಸ್ಥೆಯ ದುರ್ಭಲ ಗುಣಲಕ್ಷಣಗಳನ್ನು ಎತ್ತಿ ತೋರಿಸಲೂ ಮಾಡಲಾಗುತ್ತದೆ. ಈ ಕ್ರಿಯೆಯಲ್ಲಿ ಬೇರೊಬ್ಬರಿಗೆ ತೊಂದರೆ ಆಗದಂತೆ/ಅವರ ಸಂಪನ್ಮೂಲ ಕೊಳ್ಳೆ ಹೊಡೆಯದೆ, ಆ ವ್ಯವಸ್ಥೆಯ ಮಾಲೀಕರಿಗೆ ಅದರ ಮನವರಿಕೆ ಮಾಡಿಕೊಡುವ ಒಳ್ಳೆಯ ಗುಣವನ್ನು ಹೊಂದಿರುವವರು ಹಾಗೂ ದುರುಪಯೋಗ ಪಡಿಸಿಕೊಳ್ಳುವ ಕೆಟ್ಟಗುಣವನ್ನು ಹೊಂದಿರುವವರನ್ನೂ ನಾವು ಸಮಾಜದಲ್ಲಿ ಕಾಣುತ್ತೇವೆ. ಬ್ಲಾಕ್ ಹ್ಯಾಟ್/ವೈಟ್ ಹ್ಯಾಟ್ ಹ್ಯಾಕರ್‌ಗಳು ಎಂಬ ಪದವನ್ನು ಕೂಡ ನೀವು ಈಗಾಗಲೇ ಕೇಳಿರಬಹುದು.

ಈಗ ಸಾಫ್ಟ್ವೇರ್ ಹಂಚಿಕೆಯ ಬಗ್ಗೆ, ಪರವಾನಗಿಗಳ ಬಗ್ಗೆ, ಅದರಲ್ಲಿ ಈ ಮೇಲೆ ಅಪೇಕ್ಷಿಸಿರುವ ಸ್ವಾತಂತ್ರ್ಯದ ಬಗ್ಗೆ ಒಂದಷ್ಟು ಚರ್ಚಿಸೋಣ. ಈ ಕೆಳಗಿನ ಮುಕ್ತ ಪ್ರಶ್ನೆಗಳು ನಿಮಗಾಗಿ – (ಉತ್ತರ ನಿಮ್ಮಲ್ಲೇ ಇರಲಿ)

ಮೊದಲನೆಯ ಹಂತ: ನಿಮ್ಮಲ್ಲಿ ಎಷ್ಟು ಜನ ನಿಮ್ಮ ಕಂಪ್ಯೂಟರಿನಲ್ಲಿರುವ/ಲ್ಯಾಪ್‌ಟಾಪ್‌ನಲ್ಲಿರುವ ಆಪರೇಟಿಂಗ್ ಸಿಸ್ಟ್ಂ ವಿಂಡೋಸ್ ಗೆ ಹಾರ್ಡ್‌ವೇರ್ ಜೊತೆಗೆ ಲೈಸೆನ್ಸ್ ದುಡ್ಡು ಕೊಟ್ಟು ಪಡೆದಿದ್ದೀರಿ? ನೀವು ದಿನ ನಿತ್ಯ ಬಳಸುವ ತಂತ್ರಾಂಶಗಳಲ್ಲಿ ಎಷ್ಟಕ್ಕೆ ಇನ್ನೂ ಲೈಸೆನ್ಸ್ ಕೊಂಡಿಲ್ಲ? ನಿಮ್ಮ ಗೆಳೆಯರು ಕೊಟ್ಟ ತಂತ್ರಾಂಶಗಳಲ್ಲಿ ಎಷ್ಟು ಮುಕ್ತವಾಗಿ ಲಭ್ಯವಿರುವಂತಹವು? ಅವುಗಳಲ್ಲಿ ಎಷ್ಟು ತಂತ್ರಾಂಶಗಳಲ್ಲಿ ನೀವು ದಿನ ನಿತ್ಯ ಇಂಟರ್ನೆಟ್ ಜಾಹೀರಾತು ನೋಡುತ್ತೀರಿ?

(ಪೈರಸಿಯ ಪಿಡುಗು ನಮ್ಮ ಸಿನೆಮಾ, ಸಿನೆಮಾ ಸಂಗೀತ, ಕೃತಿ ಚೌರ್ಯ ಇಷ್ಟರಲ್ಲೇ ಅಲ್ಲ, ನಿಮ್ಮ ಬೆರಳ ತುದಿಯಲ್ಲೇ ಮೊಬೈಲ್‌ನಲ್ಲೂ, ನಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲೂ ಅಡಗಿದೆ – ನಾವು ಮನಸ್ಸು ಮಾಡಿದರೆ ಇದನ್ನು ದೂರವಾಗಿಸಬಹುದು – ಸಾಧ್ಯತೆಯನ್ನು ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಬಳಕೆಯ ಮೂಲಕ ಕಂಡುಕೊಳ್ಳಬಹುದು)

ಎರಡನೆಯ ಹಂತ: ನೀವು ಬಳಸುವ ತಂತ್ರಾಂಶಗಳು ನಿಮ್ಮ ಗೆಳೆಯರಿಂದ ದೊರೆಯದೇ ಇದ್ದಿದ್ದರೆ ಅಥವಾ ಕೆಲವು ತಂತ್ರಾಂಶಗಳು ಇಂಟರ್ನೆಟ್‌ನಲ್ಲೂ ಸಿಗದೇ ಇದ್ದಿದ್ದರೆ ನೀವು ಏನನ್ನು ಕಲಿಯದೇ ಇರುತ್ತಿದ್ದಿರಿ? ಅಥವಾ ಇಂದಿನ ಮಟ್ಟಿಗೆ ಅಥವಾ ಅವನ್ನು ನಿಮ್ಮ ವ್ಯವಹಾರಕ್ಕೆ ಬಳಸುತ್ತಿದ್ದರೆ ಏನನ್ನು ನಾಳೆಗೆ ಕಳೆದುಕೊಳ್ಳುವಿರಿ?

ಈ ಪ್ರಶ್ನೆಗಳು ತಂತ್ರಜ್ಞಾನ ನಮಗೆ ನಾವು ಖರ್ಚುಮಾಡಿ ಖರೀದಿಸಿದ ಹಾರ್ಡ್‌ವೇರ್ ಅನ್ನು ನಮ್ಮ ಇಚ್ಚೆಗೆ ಬಳಸುವಲ್ಲಿ ನೀಡಿರುವ ಸ್ವಾತಂತ್ರ್ಯವನ್ನು (ಇದೂ ಕೂಡ ಪ್ರಶ್ನಿಸಬಹುದಾದ ಅಂಶ), ಅದರ ಒಳಗೆ ಬಳಸುವ ತಂತ್ರಾಂಶ ಲಭ್ಯವಾಗಿಸುತ್ತದೆಯೇ ಇಲ್ಲವೇ ಗೋಜಲಿಗೆ ಉತ್ತರ ಕಂಡುಕೊಳ್ಳುವಲ್ಲಿ ಸಹಕಾರಿ ಆಗಬಲ್ಲವು.

ಇಂತಹ ಪ್ರಶ್ನೆಗಳನ್ನು ಎಲ್ಲರ ಮುಂದಿಟ್ಟು, ತಂತ್ರಾಂಶಗಳು ಬಳಕೆದಾರನಿಗೆ ದೊರಕಿದಲ್ಲಿ, ಅದನ್ನು ಬಳಸುವ, ಅದನ್ನು ಬದಲಾವಣೆ ಮಾಡುವ, ಬದಲಾವಣೆ ಮಾಡಿದ ತಂತ್ರಾಂಶಗಳನ್ನು ತನ್ನ ಗೆಳೆಯರೊಂದಿಗೆ ಹಂಚಿಕೊಳ್ಳುವ ಇತ್ಯಾದಿ ಹಕ್ಕುಗಳನ್ನು ಬಳಕೆದಾರನಿಗೆ ಕೊಡಬೇಕು ಎಂದು ಪ್ರತಿಪಾದಿಸಿದವರಲ್ಲಿ ರಿಚರ್ಡ್ ಸ್ಟಾಲ್ಮನ್ ಮೊದಲಿಗರು.

‍ಲೇಖಕರು ಓಂಶಿವಪ್ರಕಾಶ್

August 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: