ಮಾಬಗಿ ತಿಂಗಳಬೈಲು ಅಂಗಡಿಬೈಲು ಬಸ್ಸು..

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.

ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಮೊನ್ನೆ ಅಂಕೋಲೆಗೆ ಹೋಗಿ ವಾಪಸ್ಸು ಬರುವಾಗ ಮಕ್ಕಳಿಗೆ ಚಾಕ್ಲೇಟು ಕೊಂಡಿಲ್ಲವೆಂಬುದು ನೆನಪಾಗಿ ಬಸ್ಟ್ಯಾಂಡು ಬುಡಕಿನ ನಾಯಕ್ ಕೋಲ್ಡ್ರಿಂಕ್ಸಿನ ಬಾಗಿಲಲ್ಲಿ ಗಾಡಿ ನಿಲ್ಲಿಸಿದೆ.
ಬನ್ನಿ ಬಾಯೋರೆ ಎಷ್ಟು ದಿನವಾಯ್ತು ನಿಮ್ಮನ್ನ ನೋಡಿ ಅಂದರು ಶೇಣ್ವಿಯವರ ಹೆಂಡತಿ. ಮೇಲೆ ಮನೆ ಕೆಳಗೆ ಅಂಗಡಿ. ಗಂಡ ಊಟಕ್ಕೆ ಹೋದಾಗ ಹೆಂಡತಿ ಕುಳ್ಳುತ್ತಾರೆ ಗಲ್ಲೆಯ ಸ್ಟೂಲಿನ ಮೇಲೆ. ಕೋವಿಡ್ ಕಾಲ, ಹೆಚ್ಚು ಯಾಪಾರ ಇಲ್ಲ. ಜನ ಇಲ್ಲದಿದ್ದರೆ ನಾನೂ ಐದು ನಿಮಿಷ ಅವರಲ್ಲಿ ಕುಳಿತು ಅವರು ತಂದಿಡುವ ಸೋಡಾ ಶರಬತ್ತು ಕುಡಿದು ಅದೂ ಇದೂ ಮಾತಾಡಿ ಏನಾದರೂ ಖರೀದಿಸಿ ಗಾಡಿ ಹತ್ತುವ ರೂಢಿ. ಇಂದೂ ಹಾಗೇ ನಡೆದಿರಲಾಗಿ ಅಂಗಡಿ ಮುಂದಿನ ರಸ್ತೆ ದಾಟಿ ಅದರಾಚೆಗಿನ ವಿಶಾಲ ಬಸ್ಟ್ಯಾಂಡಿನ ಕಡೆ ದೃಷ್ಟಿ ಹೋಯಿತು ನನ್ನದು.

ಅದೋ ಅದೋ ನಾಲ್ಕೈದು ಬಸ್ಸಿನ ನಡುವೆ ಒಂದು ಕಡೆ ಒಗ್ಗಾಲಾಗಿ ಮಾಸಲು ಬಿಳಿ ಮತ್ತು ನೀಲಿ ಬಣ್ಣ ಬಳಿದುಕೊಂಡ ಹಳೆಯ ಬಸ್ಸು ನನ್ನದಲ್ಲವೇ..? ಅದೆಷ್ಟು ದಿನವಾಯ್ತು ಅದನ್ನು ನೋಡಿ. ಖಾಯಂ ಒಂದೈದಾರು ತಿಂಗಳು ನನ್ನ ಹೊತ್ತುಕೊಂಡು ಬೆಳಗ್ಗೆ ಹೋಗಿ ಸಂಜೆ ಬರುತ್ತಿದ್ದ, ನನ್ನದೇ ಆಗಿ ಹೋಗಿದ್ದ ಮಾಬಗಿ, ತಿಂಗಳಬೈಲು, ಅಂಗಡಿಬೈಲು ಬಸ್ಸು ಅದು. ಬೋರ್ಡಿಲ್ಲದಿದ್ದರೂ ಗುತ್ತಾಗುವ ಬಸ್ಸು. ಈಗ ಈ ಕಡೆ ಟ್ರಾನ್ಸಫರ್ ಆಗಿ ಬಂದು ವರ್ಷವೇ ಆಯ್ತು ನಾನು. 

ಅಯ್ಯೋ ಒಮ್ಮೆ ಹತ್ತಿರದಿಂದ ನೋಡಬೇಕಲ್ಲ ಅದನ್ನು. ಮುಟ್ಟಬೇಕು ಕೂಡ ಅನ್ಸತಿದೆ ಮನಸ್ಸಿಗೆ. ಸಾಧ್ಯವಾದರೆ ಒಂದು ಬಾಗಿಲಿಂದ ಹತ್ತಿ ಇನ್ನೊಂದು ಬಾಗಿಲಿಂದ ಇಳೀಬೇಕು. ಏನು ಮಾಡೋದು ಈಗ ಚಡಪಡಿಸಲಾರಂಭಿಸಿತು ಮನಸ್ಸು. 

ನನ್ನ ದಿಟ್ಟಿ ಆ ಕಡೆಗಿರುವುದನ್ನು ನೋಡಿ “ಏನು ಆ ಕಡೆ ಹಾಕಿದ ಕಣ್ಣು ತೆಗಿಯದ ಹಾಗೆ ನೋಡ್ತಿದ್ದೀರಿ ಅಕ್ಕೋರು” ಎಂದರು ಶೇಣವಿ ಪತ್ನಿ. “ಹಿಂಗಿನ ಸಂಗ್ತಿ ಹಿಂಗೆ” ಅಂದೆ. ಅವರು ಹಿರಿಯರು ನಾನು ಕಿರಿಯಳು. ಬಹುದಿನದ ಸಲಿಗೆ ಬೇರೆ. “ನಿಮಗೆಂತ ಮಳ್ಳಾ..? ನೋಡಿದ ಜನ ಏನೆಂದಾರು? ಈಗ ಆರು ತಿಂಗಳಾಯ್ತು ಕೊರೊನಾ ಸಲುವಾಗಿ ಬಸ್ಸು ನಿಂತು. ಬಸ್ಟ್ಯಾಂಡಿನ ಎರಡೂ ಬಾಕ್ಲಿಗೆ ಹಲಗೆ ಹೊಡೆದು ರೀಪು ಕಟ್ಟಿ ಯಾರೂ ಒಳಗೆ ಹೋಗದೇ ಇದ್ದಂಗೆ ಮಾಡಿದಾರೆ. ಕಂಟ್ರೋಲರ್ರು ಅವ್ರು ಇವ್ರು ಹೋಗುಕೆ ಮಾತ್ರ ಸಣ್ಣ ದಣಪೆ ಇಟ್ಟಾರೆ. ಈಗ ಇವೆಲ್ಲ ದಾಟಿ ನೀವು ಅಲ್ಲಿ ಹೋಗಿ ಬಸ್ಸು ಕಿಟ್ಟಿ, ಸುತ್ತಾಕಿ, ಹತ್ತಿಳಿದು ಮಾಡಿದ್ರೆ ಜನ ನಿಮಗೆ ಮಳ್ಳು ಅನ್ನೋದಿಲ್ವ?…ಶೀ..! ಶೀ..! ಅವೆಲ್ಲ ಮಾಡೂಕೆ ಹೋಗುದು ಬ್ಯಾಡ ನೀವು. ಸುಮ್ಮನೆ ಇಲ್ಲಿಂದೇ ಅದನ್ನು ನೋಡ್ಕಂಡು. ಕೈಮುಕ್ಕಂಡು ಮನೆ ದಾರಿ ಹಿಡೀರಿ” ಅಂದರು.

ಅವರು ಹೇಳಿದ ಹಾಗೆ ನನಗೆ ಒಂಚೂರು ಮಳ್ಳೇ. ಒಂದು ನಿರ್ಜೀವ ವಸ್ತು ಅದು. ನನ್ನ ಸ್ವಂತ ವಾಹನ ಕೂಡ ಅಲ್ಲ. ಯಾಕೆ ಹಾಗೆ ಕಾಡುತ್ತವೆ ಕೆಲವೊಂದು ವಸ್ತುಗಳು ನನ್ನನ್ನು..?
‘ತನ್ನ ಹತ್ತಿರ ಇನ್ನು ಹೊಡೆಯಲಾಗದು, ಇಟ್ಟಲ್ಲೇ ಜಂಗು ಬಂದು ಹಾಳಾಗೋದು ಬೇಡ ಅಂತ ಅಪ್ಪ ತನ್ನ ಎಪ್ಪತ್ತನೇ ವಯಸ್ಸಿಗೆ ತಳಗದ್ದೆಯ ಹಾಲಕ್ಕಿ ಗೌಡ ಬಡಕುವಿಗೆ ಪುಕ್ಕಟೆ ಕೊಟ್ಟು ಬಿಟ್ಟ ಅವನ ಆತ್ಮಸಂಗಾತಿಯೇ ಆಗಿದ್ದ ನಲವತ್ತು ವರ್ಷ ಬಾಳಿಕೆ ಬರಿಸಿಕೊಂಡಿದ್ದ ಸೈಕಲ್ಲು’ ನೆನಪಾಯ್ತು.

ಅದನ್ನು ಕೊಟ್ಟಾಗ ಬಹಳ ದಿನ ಕೆಪ್ಪಾಗಿ ಜಗಲಿಯ ಮೇಲೆ ಆಕಾಶ ನೋಡುತ್ತ ಕುಳಿತಿರುತ್ತಿದ್ದ ಅಪ್ಪ. ಊಟ ತಿಂಡಿ ಕೂಡ ಸರಿಯಾಗಿ ಮಾಡಿರಲಿಲ್ಲ. ಏನೂ ಹೇಳದಿದ್ದರೂ ಬಡಕುವಿಗೆ ಅದು ಗೊತ್ತಾಗಿ ವಾರಕ್ಕೊಮ್ಮೆ ಬಂದು ಆ ಸೈಕಲ್ಲು ತೋರಿಸಿಕೊಂಡು ಹೋಗುತ್ತಿದ್ದ. ತೊಳೆದು ಒರೆಸಿ ಆಯ್ಲಿಂಗು ಗೀಯ್ಲಂಗು ಮಾಡಿ ಚಂದ ಇಟ್ಕಂಡಿದ್ದ. ಅಪ್ಪನಿಗೆ ಕಾಲಕ್ರಮೇಣ ಖುಷಿಯಾಗಿತ್ತು.

ಆ ಅಪ್ಪನ ಮಗಳಲ್ಲವೇ ನಾನು.

ನನ್ನ ಒಳ್ಳೇದಕ್ಕೇ ಹೇಳುವ ಕೆಲವು ಮಾತಿಗೆ ಸೊಪ್ಪು ಹಾಕುವ ನಾನು ಶೇಣ್ವಿಯವರ ಹೆಂಡತಿಯ ಈ ಮಾತಿಗೆ ಒಂದು ಎಲೆಯನ್ನೂ ಹಾಕಲಿಲ್ಲ. “ಬಂದೆ ಇರಿ “ಅಂತ ದಣಪೆ ದಾಟೇ ಬಿಟ್ಟೆ. ಎರಡೂ ಬಾಗಿಲಿಲ್ಲದ ಸಿಟಿ ಬಸ್ಸು ಅದು. ಎಂದೋ ಯಾವುದೋ ನಗರದಲ್ಲಿ ಓಡಾಡಿ ಹಳತಾದ ಮೇಲೆ ಅಂಕೋಲೆ ಡಿಪೋಗೆ ಬಂದು ಬಿದ್ದದ್ದು. ಹೋದೆ. ನೋಡಿದೆ. ಸುತ್ತುಹಾಕಿದೆ. ಹತ್ತಿ ಸೀಟಿನ ಮೇಲೆ ಕುಳಿತೆ.

ಅಷ್ಟಾಗುವಾಗ ಬೇಲೇಕೇರಿ ಕಂಡಕ್ಟರ್ ಗಣಪತಿ ಓಡಿಬಂದು “ತಂಗೀ ಇಲ್ಲೆಲ್ಲಿ ಬಂದಿದ್ಯೇ… ಎಲ್ಲಿಗೆ ಹೋಬೇಕು?” ಅಂದ. “ಇವಳಿಗೇನಾರು ಹೆಚ್ಚು ಕಮ್ಮಿ ಆಗಿದ್ಯೋ ಮತೆ?” ಅನ್ನೋ ಅವನ ಪರೀಕ್ಷಾ ದೃಷ್ಟಿ ಅರ್ಥವಾದವಳಂತೆ  “ಏನಿಲ್ವೋ.. ನಿಂಗೊತ್ತುಂಟಲ್ಲ.. ದಿನಾ ಹೋಗ್ತಿದ್ದ ಬಸ್ಸು ಒಮ್ಮೆ ಮಾತಾಡ್ಸುವಾ ಅನ್ನಿಸ್ತು” ಅಂದೆ. ಅರ್ಥವಾಯ್ತವನಿಗೆ. ಇಳಿದ ಮೇಲೆ ದಣಪೆಯವರೆಗೂ ಬಂದು ಬಿಳ್ಕೊಟ್ಟ.

ಬಸ್ಸಿನ ಕಥೆ

ಮಾಬಗಿ, ಅಂಗಡಿಬೈಲು, ತಿಂಗಳಬೈಲು ಊರಿಗೆ ದಿನಕ್ಕೆ ಮೂರು ಬಸ್ಸು ಹೋಗಿ ಬರುತ್ತವೆ. ತಾಲೂಕಿನಿಂದ ಮೂರಿಪ್ಪತ್ತರ ಮೇಲೆ ಒಂದೆರಡು ಕಿಮೀ ಹೆಚ್ಚಿರುವ ಊರು ಅದು. ರಸ್ತೆಯ ಎರಡೂ ಅಂಚಿಗೂ ಕಾಡೇ ಕಾಡು. ಅದರ ನಡುವಿಂದ ಒಳಗೆ ಅಂದಾಜು ಎರಡರಿಂದ ಹತ್ತು ಕಿಮೀವರೆಗೂ ಹೊರಟರೆ ದಿನದ ಮೂರೂ ಹೊತ್ತೂ ಹೆಂಚಿನ ಮೇಲಿಂದ ಹೊಗೆ ಏಳುವ ಅಲ್ಲಲ್ಲಿ ಬಿಸಾಡಿದಂತಿರುವ ಹತ್ತಾರು ಮನೆಗಳು ಸಿಗುತ್ತವೆ. ಅವೇ ಊರುಗಳು.

ರಸ್ತೆಯಂಚಿಗೆ ಸಿಗುವ ಒಳಗಿನ ಊರಿನ ಹೆಸರು ಹೊತ್ತ ಬೋರ್ಡುಗಳ ಒಂಟಿ ಬಸ್ಟ್ಯಾಂಡುಗಳಲ್ಲಿ ಗ್ರಾಮ್ ಪಂಚಾಯ್ತಿಗೆ, ರೇಶನ್ ತರೂಕೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊರಟ ಕೈ ಪಿಶ್ವಿಯ ಜನ ಹತ್ತಿಳಿಯುತ್ತಾರೆ. ಬೆಳಗ್ಗೆ ಮತ್ತು ಸಂಜೆಯಾದರೆ ಒಂದಿಷ್ಟು ಹೈಸ್ಕೂಲು ಮಕ್ಕಳು.

ಸಸಿ ನೆಟ್ಟಿ ಎಲ್ಲ ಮುಗಿಸಿ ಅಪರೂಪಕ್ಕೆ ಅಪ್ಪನ ಮನೆಗೆ, ಅಣ್ಣ-ತಮ್ಮಂದಿರ ಗದ್ದೆಗೂ ನಾಕುದಿನ ಕೈಯಾಡಿಸಲು ಬಂದ ಹೆಣ್ಣುಮಕ್ಕಳು ತೆಂಗಿನಸಸಿ, ಅರಶಿನ ಎಲೆ, ದಾಸಾಳ ಗಿಡದ ತುಂಡು, ಕೆಸುವಿನ ಗಡ್ಡೆ, ತೆಂಗಿನಕಾಯಿ ಚೀಲ, ಅಕ್ಕಿ ಪೊಟ್ಲೆಯೊಂದಿಗೆ ಸಂಜೆಯ ಇದೇ ಬಸ್ಸಿಗೆ ಪರತ್ ಆಗುವಾಗ ಅಂದು ತನ್ನೊಡನೆ ಶಾಲೆಗೆ ಹೋದ, ಸೊಪ್ಪು ಸೌದೆಗೆ ಬೆಟ್ಟಕ್ಕೆ ಹೋದ ‘ಸಂಗ್ತಿ ಜನ’ ಬಸ್ಸಿನಲ್ಲೆಲ್ಲಾದರೂ ಕಾಣ ಸಿಗುತ್ತಾರೇನೋ ಎಂದು ತವಕದಿಂದ ಹುಡುಕುತ್ತಾರೆ.

ಹುಡುಕುವುದೇನು ಬಂತು ಹತ್ತುವಾಗಲೇ ಇವರನ್ನು ಗುತ್ತು ಮಾಡಿ ಕುಳಿತಾಕ್ಷಣ ಮಾತು ಶುರುವಾಗುತ್ತದೆ ಪರಿಚಿತರದು.
“ಕುಸುಮಾ.. ಯಾವಾಗ ಬಂದಿದ್ಯೇ..?”
“ಸೋಮಾರ ಬಂದದೆ ಶೇಷಗಿರಿಯಣಾ… ಇಲ್ಲೇ ಒಬ್ರ ಎಮ್ಮೆಕರ ತಕಂಡಿದ್ದು… ಸೋವಿಲಿ ಸಿಕ್ತು. ನಿನ್ನೆಗೆ ರಿಕ್ಷಾ ಮೇಲೆ ಕಳಸಿದೆ… ಹಂಗೇ ನಾಕು ಹೊರೆ ಸೌದೆನೂ ಮಾಡಿ ಅದರ್‌ಮ್ಯಾಲೇ ಮುಟ್ಟಿಸ್ದೆ…”

ಈ ಮಾತು ನಡೆದಿರುವಾಗಲೇ ಮತ್ಯಾರೋ ಇನ್ಯಾರನ್ನೋ ಮಾತಾಡಿಸುತ್ತಾರೆ.
“ಬಾವೋ ಎಲ್ಲೋತ್ಯೋ..?”
“ಸಸಿ ಕಟ್ಟು ತರೂಕೆ ಅಂಗ್ಡಿಬೈಲಿಗೆ…”
“ನೀ ದೂರ್ ಹೋತ್ಯೋ..?”
“ನಾ ಕೊಡಪಾನ ಸರಿ ಮಾಡ್ಸುಕೆ ಕಂಚಗಾರ್ ಇದ್ದಲ್ಲೆ…”
“ಅಕ್ಕ ,ಮಕ್ಕಳೆಲ್ಲ ಆರಾಮೀವ್ರೆ..?”
“ಹೌದೋ… ನೀ ಬಾರೋ ನಾಳಗರೂ..”

ಮುಂತಾಗಿ ಆರಂಭವಾದ ಮಾತುಗಳು
ಗದ್ದೆ, ಮಳೆ, ನೆರೆ, ದನ, ಹಬ್ಬ, ಜಟಗ, ಮಾಸ್ತಿ
ಈ ಮುಂತಾದವುಗಳ ಗುಂಟ ಸುತ್ತು ಹಾಕುತ್ತ ಬಸ್ಸು ಅಂತಿಮ ಗಮ್ಯ ತಲುಪುವವರೆಗೂ ಅದರೊಳಗೆ ಚಲಾವಣೆಯಾಗುತ್ತಿರುತ್ತವೆ..
ಮಾಮೇರಿ ಮರಗಳ ಮರೆಗೆ ಅಡಗಿ ನಿಂತ ಮೂರು ಶೀಟಿನ ಬಸ್ಟ್ಯಾಂಡು ಮತ್ತು ಅದರ ಹಿಂದೆ ಕದ್ದುಮುಚ್ಚಿ ಹೊರಟ ಹಾದಿ ಬಸ್ಸು ನಿಂತ ಹೊರತೂ ಜಪ್ಪಯ್ಯ ಅಂದರೂ ನಿಮ್ಮ ಕಣ್ಣಿಗೆ ಬೀಳುವುದಿಲ್ಲ. ಹಾಗಾಗಿ ದಿನಾ ಅದೇ ಬಸ್ಸಿಗೆ ಹೋಗಿ ಬರುವ ಜನವೂ ತನ್ನ “ಗುತ್ತು” ಬಂತಾ ಹೆಂಗೆ ಅಂತ ಬಸ್ಸಿನ ಸೀಟಿಂದ ಆಗಾಗ ಎಗರಿ ನೋಡಿಕೊಂಡು ಮತ್ತೆ ಕುಳಿತು ಮತ್ತೆ ನಿಂತು ಚಡಪಡಿಸುವುದು ನಡೆದೇ ಇರುತ್ತದೆ.

‘ಕಲೆಕ್ಷನ್ ಕಡಿಮೆ’ ಅಂತ ಲಟ್ಟುಪಟ್ಟು ಬಸ್ಸನ್ನೆಲ್ಲ ಈ ರೋಡಿಗೆ ಹಾಕಿ ಕೈ ತೊಳಕಂಡು ಕಿವಿಗೋ ಮೂಗಿಗೋ ಕಡ್ಡಿ ಹಾಕಿಕೊಂಡು ಆರಾಮಾಗಿರ್ತಾನೆ ಬಸ್‌ ಡಿಪೋ ಮ್ಯಾನೇಜರ್ರು. ಕಂಡಕ್ಟರ್ ಡ್ರೈವರ್ರು ಮುಖಗಂವಿಸಿಕೊಂಡು ಕೊಂಯ್ಯ ಕೊಸ್ಕ ಅನ್ನದ ದಿನವಿಲ್ಲ. ಮಳೆಗಾಲಕ್ಕಂತೂ ಬೇಡ ಅವಸ್ಥೆ. ಬ್ರೆಕ್ಕೇ ಮುರಿದೋ, ಟೈರೇ ಪಂಕ್ಚರ್ರೋ, ಜಾಕೇ ಕಟ್ಟೋ… ಇಂಥವೆಲ್ಲ ನಡೆದೇ ಇದ್ದು ಜನ ಗೌಜಿ ಹಾಕಿದ್ದೂ ಉಂಟು ಹಿಂದೆಲ್ಲ. ಹಾಗಾಗಿ ಈ ರಸ್ತೆಯ ಆಜೂಬಾಜೂ ಊರುಗಳದ್ದೇ ಎರಡು ಮೂರು ಡ್ರೈವರ್ ಇದ್ದಾರೆ ತಾಲೂಕಿನಲ್ಲಿ. ಅವರನ್ನೇ ಈ ರೂಟಿಗೆ ಹಾಕಿ ಬಸ್ಸು ತಲೆಕೆಳಗಾಗಿ ಬಿದ್ರೂ ಜನ ತಮ್ಮೂರ ಪೋರಗೋಳ ಕುರಿತು ಕಮಕ್ ಕಿಮಕ್ ಅನ್ನೋ ಹಂಗೇ ಇಲ್ಲ ಹಂಗೆ ವ್ಯವಸ್ಥೆ ಮಾಡಿಕೊಂಡಿದ್ದಾನೆ ಡಿಪೋ ಮ್ಯಾನೇಜರ್ರು..

ಗುಂಡಬಾಳೆಯ ಎಂಕಟ್ರಮಣ, ಆಂದ್ಲೆ ಶಿಣ್ತಮ್ಮ , ಅಂಗಡಿಬೈಲ್ ಗಣಪತಿ ಬಹಳ ಧಾಡಸೀ ಜನವೂ ಹೌದು ಮುರುಕಲಾಟಿ ಬಸ್ಸು ಕೂಡ ಇವರು ಹೇಳಿದಂತೆ ಕೇಳಿ ಇವರು ಹೋಗೆಂದರೆ ಹೋಗಿ ಬಾ ಎಂದರೆ ಬರುತ್ತದೆ. ಅಕ್ಕಿ ಹಿಡಿದು ಕರೆದರೆ ಬೆನ್ನು ಹತ್ತುವ ಕೋಳಿ ಪಿಳ್ಳೆಯ ಹಾಗೆ. ಆಗುದೇ ಇಲ್ಲ ಅನ್ನೋ ಕಾಲಕ್ಕೆ ರಸ್ತೆ ಮಧ್ಯ ಒಗ್ಗಾಲಾಗಿ ನಿಂತ ಬಸ್ಸಿಗೆ “ಪಾಪ ನಮ್ಮೂರ್ ಹುಡುಗರಾದಕ್ಕೆ ಈ ಬಸ್ಸು ಹಿಂಗರೂ ತಕಂಡು ಹೋಗ್ತಿದಾರೆ. ಬೇರೆ ಜನ ಆಗಿದ್ರೆ ನಮ್ಮ ದರಕಂತ್ರಕ್ಕೇ ಕಿಡಗಿ ಹಾಕ್ತಿದ್ರು” ಎನ್ನುತ್ತ ಬಸ್ಸಿನ ಒಟ್ಟೂ ಜನ ಇಳಿದು ಕಂಡಕ್ಟರನ ಸೀಟಿಯ ಊಬಿಗೆ ತಕ್ಕಂತೆ ಅದನ್ನು ದೂಡುತ್ತಾರೆ. ಇಲ್ಲಾ ಅದು ಹಾಳೇ ಆಗಿದ್ದರೆ ಎಲ್ಲಿ ಹಾಳಾಗಿದೆ ಅಂತ ಮಣ್ಣುಬೂದಿ ತಿಳಿದೇ ಇದ್ರೂ ಡ್ರೈವರು ಕಂಡಕ್ಟರು ತಕ್ಕಮಟ್ಟಿಗೆ ರಿಪೇರಿ ಮಾಡುವಾಗ ತಗ್ಗಿ ಬಗ್ಗಿ ನೋಡುತ್ತಿರುತ್ತಾರೆ

ಮಳೆಗಾಲದಲ್ಲಂತೂ ದಡಕಿ ರಸ್ತೆಯ ತುಂಬ ಬಸ್ಸು ಎದ್ದೆದ್ದು ಕುಣಿಯುತ್ತ ಹೊರಟರೆ ಕಿಟಕಿಯಂಚಿನ ಒಂದು ಸೀಟು ಲೆಕ್ಕಕ್ಕೆ ಹಿಡಿವ ಹಾಗಿಲ್ಲ. ಮುಚ್ಚಿದ ಎರಡೂ ಗ್ಲಾಸಿನ ನಡುವಿನಿಂದ ಬಂದ ಮಳೆ ನೀರೇ ಒಂದೊಂದು ಲೀಟರ್ ಲೆಕ್ಕದಲ್ಲಿ  ಸೀಟಿನ ಮೇಲೆ ಎಗರೆಗರಿ ಕುಣಿಯುತ್ತಿರುತ್ತದೆ. ಅದನ್ನು ಅದರ ಪಾಡಿಗೆ ಬಿಟ್ಟು ಸೀಟಿನಂಚಿಗೆ ತೊಡೆಮುದುರಿ ಕುಳಿತಿರುತ್ತಾರೆ ಕುಳಿತವರು. ಬಸ್ಸು ಹತ್ತಿದ ಹೊಸಬರು ಸರಿಯಿರಿ ಆ ಕಡೆ ಎಂದಾಗಲೆಲ್ಲ. ಈ ಲೀಟರ್ ನೀರನ್ನು ತೋರಿಸುವುದೇ ಕೆಲಸ ಕುಳಿತವರಿಗೆ. ಮತ್ತು ನೀವು ಬೇಕಿದ್ದರೆ ಆ ಕಡೆ ಹೋಗಿ ಅಂತ ಸುಮ್ಮನೆ ಕಾಲು ಸರಿಸಿ ಅನುವುಮಾಡಿ ಕೊಟ್ಟಂತೆ ಮಾಡಿ ಮುಖ ನೋಡುವುದು ನಡೆದೇ ಇರುತ್ತದೆ. ಪರಿಸ್ಥಿತಿ ಅರ್ಥವಾಗಿ ಇವರು ಆ ಕಡೆ ಹೋಗದೇ ಸರಿಸಿದ ಕಾಲು ಮತ್ತೆ ಸ್ವಸ್ಥಾನಕ್ಕೆ ಬರುತ್ತದೆ. ದಿನಾ ಹೋಗುವವರಂತೂ ಒಂದು ಪಂಚೆ ಇಟ್ಕಂಡೇ ಬರ್ತಾರೆ ಬ್ಯಾಗಿನಲ್ಲಿ. ಸೀಟು ಒರೆಸಲು.

“ಈಗ ಇಷ್ಟಾದರೂ ಬೇಕು. ಮೊದ್ಲೆಲ್ಲ ನೋಡ್ಬೇಕಿತ್ತು ನೀನು. ಸೋರುವ ಬಸ್ಸಿನಲ್ಲಿ ಕೊಡೆ ಬಿಡ್ಸಿಕೊಂಡೇ ಕುಳ್ಳತಿದ್ವಿ. ಪೇಪರಿಗೆಲ್ಲ ಬಂದಿತ್ತು ಬಸ್ಸಿನೊಳಗೆ ಕೊಡೆ ನೀಡಿ ಕುಳಿತ ಫೋಟೋ. ಅದಾದ್ಮೇಲೆ ಚೂರು ಟಾಪಾದ್ರೂ ಸರಿ ಇರೋ ಬಸ್ಸು ಕೊಟ್ರು ಮಾರಾಯ್ತಿ” ಹೊಸಬರಿಗೆ ಹಳೆಯ ಕಥೆಗಳು ಬಹಳ ಸಿಗುತ್ತವೆ ಬಸ್ಸಿನ ಬಗೆಗೆ.

ಮುಂಜಾನೆಯ ಎಂಟೂವರೆಗೆ ಹೊರಟು ಸಂಜೆ ಐದೂವರೆಗೆ ವಾಪಸ್ಸಾಗುವ ಬಸ್ಸಿನ ಹೊಟ್ಟೆಯಲ್ಲಿ ಶಾಲೆಗಳ ಟೀಚರ್‌ಗಳು,ಇನ್ನಿತರ ಕಚೇರಿ ಸಿಬ್ಬಂದಿ ಹೆಚ್ಚಿಗೆ ತುಂಬಿರುತ್ತಾರೆ. ಅವರ ಊಟದ ಬ್ಯಾಗು ಮತ್ತು ನೀರಿನ ಬಾಟ್ಲಿಗಳು ಅವರು ಹೊರಟ ಊರಿಗೇ ಹೋಗಿ ಸಂಜೆ ಖಾಲಿಯಾಗಿ ಮತ್ತೆ ಬರುತ್ತವೆ.


ಸಣ್ಣ ಮಕ್ಕಳು, ಹಿರಿಯರು ಅದು ಇದು ಇದ್ದು ಮನೆಯಲ್ಲಿ ತಿಂಡಿ ತಿನ್ನೋಕೂ ಪುರುಸೊತ್ತು ಇಲ್ಲದ ಕೆಲ ಟೀಚರ್‌ಗಳು ಡಬ್ಬಕ್ಕೆ ಹಾಕಿಕೊಂಡು ಬಂದು ಬಸ್ಸಿನ ಮೇಲೇ ತಿನ್ನುವುದೂ ಇದೆ. ಸರಿಯಾಗಿ ತಲೆ ಬಾಚಲೂ ಟೈಮ್ ಇಲ್ಲದವರು ಒಂದು ಹಣಿಗೆ ಬ್ಯಾಗಿಗೆ ಹಾಕಿಕೊಂಡು ಬಂದು ಬಾಚಿಕೊಳ್ಳುತ್ತಾರೆ ಇಲ್ಲಿ. ಯಾರದೋ ಮಗು ಇನ್ಯಾರದೋ ಕಾಲಮೇಲೆ, ನಿಂತವರ ಒಜ್ಜೆ ಬ್ಯಾಗು ಮತ್ಯಾರದೋ ತೊಡೆಮೇಲೆ. 

ಹೊಸದಾಗಿ ಹೋದವರ ಸೊಂಟ ವಾರದಲ್ಲೇ ಮುರಿವ ರಸ್ತೆ ಇದು. ತಾವು ಹದಿಮೂರು ವರ್ಷದಿಂದ ಇದೇ ರಸ್ತೆಯಲ್ಲಿ ತಿರುಗಾಡಿ ಹಣ್ಣಾಗ್ತಿಲ್ವ. ಬಂದು ವಾರಕ್ಕೇ ಹೀಗೆ ಅಳು ಮುಖ ಮಾಡಿದರೆ ಹೆಂಗೆ ಎಂಬ ನಿರ್ಲಕ್ಷ್ಯದ ಮುಖಭಾವದ ಹಳಬರು ಹೊಸಬರತ್ತ ಅಷ್ಟು ಸುಲಭದಲ್ಲಿ ನಗು ಮಾತು ಹಂಚಿಕೊಳ್ಳರು. ಹಾಗಾಗಿ ಹೊಸಬರು ದಮ್ಮುಕಟ್ಟಿ ತೆಪ್ಪಗೆ ಕುಳಿತಿರುತ್ತಾರೆ. 

ಲೇಟಾದಾಗ ಶಾಪಹಾಕಿ, ಹಾಳಾದಾಗ ಜನ್ಮಜಾಲಾಡಿದರೂ ಜೋರುಮಳೆಯಲ್ಲಿ ಒಂಟಿ ಬಸ್ಟ್ಯಾಂಡಿನಲ್ಲಿ ನಡುಗುತ್ತ ಹೆದರುತ್ತ ಕುಳಿತಾಗೆಲ್ಲ ಅದೋ ಅದೋ ಅಲ್ಲಿ ರಸ್ತೆಯ ಆ ಮುರ್ಕಿಯಲ್ಲಿ ತಾಸು ತಡೆದಾದರೂ ನನ್ನ ಬಸ್ಸು ಬಂತಲ್ಲ ಎಂಬ ನೆಮ್ಮದಿಯನ್ನು ಖುಷಿಯನ್ನು ಬಹುದಿನಗಳವರೆಗೆ ದೊರಕಿಸಿಕೊಟ್ಟ ಬಸ್ಸು. ನನ್ನ ಕಂಡ ಕೂಡಲೇ ನಿಂತು ಬಿಡುವ ಬಸ್ಸು. ನನ್ನನ್ನು ಜೋಪಾನವಾಗಿ ಕರ್ಕಂಡು ಹೋಗಿ ಮತ್ತೆ ಮನೆ ಮುಟ್ಟಿಸುತ್ತಿದ್ದ ಬಸ್ಸು. ಅಣ್ತಮ್ಮಂದಿರೇ ಆಗಿಹೋದ ಡ್ರೈವರ್ ಗುಂಡಬಾಳೆಯ ಎಂಕಟ್ರಮಣ, ಆಂದ್ಲೆ ಶಿಣ್ತಮ್ಮ , ಅಂಗಡಿಬೈಲ್ ಗಣಪತಿ ಈಗಲೂ ನಾನೆಲ್ಲೇ ಕಂಡ್ರೂ ಹಾರ್ನಹಾಕಿ ಕೈ ಮಾಡಿ ಹೋಗುವ ಬಸ್ಸು. ಈಗ ಹೀಗೆ ನಿಂತು ಬಿಟ್ಟಿದೆ ಸುಮ್ಮನೆ ಬಸ್ಟ್ಯಾಂಡಿನಲಿ.

August 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Kiran Bhat

    ನಮ್ಮ ಕಾಲೇಜು ದಿನಗಳ ‘ ಹಡಿನಬಾಳ ಎಕ್ಸ್ಪ್ರೆಸ್’ ವ್ಯಾನ್ ನ ನೆನಪಾಯ್ತು….
    ಸುಮಾರು ಇಂತಾದ್ದೇ ಕತೆ.
    ಚಲೋ ಬರದಿದ್ಯೇ ರೇಣುಕಾ.

    ಪ್ರತಿಕ್ರಿಯೆ
  2. Smitha Amrithraj.

    ರೇಣಕ್ಕ, ನಿಮ್ಮೂರಿನ ಬಸ್ಸೊಂದು ನನ್ನ ಪಕ್ಕ ನಿಂತಂತೆ ಭಾಸವಾಯಿತು. ನಿಮ್ಮ ಬರಹಗಳು ಕತೆಯಂತೆ ತೆರೆದುಕೊಳ್ಳುತ್ತವೆ. ಮುದ ಕೊಡುವ ನಿಮ್ಮ ಭಾಷೆಯ ಲಾಲಿತ್ಯ ಬರಹಕ್ಕೆ ಹೊಸ ಮೆರಗನ್ನು ಕೊಡುತ್ತದೆ. ಅಭಿನಂದನೆಗಳು. ಬರೆಯುತ್ತಿರಿ.ಓದುವ ಸುಖ ನಮ್ಮದಾಗಲಿ. _ ಸ್ಮಿತಾ ಅಮೃತರಾಜ್.

    ಪ್ರತಿಕ್ರಿಯೆ
  3. Smitha Amrithraj.

    ಮುದ ಕೊಡುವ ಭಾಷೆಯೂ,ಕತೆಯಂತೆ ತೆರೆದು ಕೊಳ್ಳುವ ಬರಹವೂ ಬಹಳ ಆಪ್ತವಾಗಿದೆ.ನಿಮ್ಮೂರಿನ ಬಸ್ಸು ನನ್ನ ಕಣ್ಣ ಮುಂದೆ ನಿಂತಂತಾಯಿತು.ಬರೆಯುತ್ತಿರಿ.ಅಭಿನಂದನೆಗಳು. _ಸ್ಮಿತಾ

    ಪ್ರತಿಕ್ರಿಯೆ
  4. ರೇಣುಕಾ ರಮಾನಂದ

    ಕಿರಣಣ್ಣ ಥ್ಯಾಂಕ್ಯೂ ..ನಮ್ಮ ಉತ್ತರಕನ್ನಡದ ಎಲ್ಲಾ ಬಸ್ಸೂ ಒಂದೇ ನಮೂನಿ..ಹಡಿನಬಾಳ ಬಸ್ಸು ಇದರವ್ವಿಯೋ ಅಕ್ಕನೋ ಇರಬೇಕು ಬಹುಶಃ

    ಪ್ರತಿಕ್ರಿಯೆ
  5. ರೇಣುಕಾ ರಮಾನಂದ

    ಸ್ಮಿತಾ..ಥ್ಯಾಂಕ್ಯೂ ಕಣೇ..ನೀನೂ ಚಂದ ಬರೀತಿ..ನನ್ನ ಎಲ್ಲಾ ಬರಹ ಓದಿ ಅಭಿಪ್ರಾಯಿಸುವ ನಿನಗೆ ರಾಶಿ ಪ್ರೀತಿ

    ಪ್ರತಿಕ್ರಿಯೆ
  6. Nagaraj Harapanahalli

    ಸೊಗಸಾದ ಬರಹ ….

    ಬರಹಕ್ಕೆ ಕೆಲವೊಮ್ಮೆ ಮಾಂತ್ರಿಕತೆದ
    ಸಹಜವಾಗಿ ಬಂದುಬಿಡ್ತದೆ.

    ಪ್ರತಿಕ್ರಿಯೆ
  7. Sunanda Kadame

    ನಮ್ಮ ಕರಾವಳಿಯ ಜಡಿಮಳೆಯ ಕಾಲದ ತೊಯ್ದ ಬಸ್ಸಿನಲ್ಲಿ ತೊಟ್ಟಿಕ್ಕುವ ನೀರಂತೆ ಅಲ್ಲಲ್ಲಿ ಕಚಗುಳಿಯಿಡುವ ವಿವಿಧ ಬೆರಗಿನ ಮಾನವೀಯ ಸಂಬಂಧಗಳು ನೈಜ ಭಾಷಾ ಸ್ಪಂದನೆಯಲ್ಲಿ ಮತ್ತು ಅಷ್ಟೇ ಭಾವುಕತೆಯಲ್ಲಿ ಮೂಡಿದ ಆಪ್ತ ಬರಹ ರೇಣುಕಾ, ಆಲ್ ದಿ ಬೆಸ್ಟ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: