ಹಾರಿತೋ ಹಂಸ ಹಾರಿತೋ…

 ಡಾ ಲಕ್ಷ್ಮಿಶಂಕರ್ ಜೋಶಿ

“ಸಾವನ್ನೂದು ಹುಚ್ಚಿ ಕೈಯಾನ ಹುರಕಡ್ಲಿ ಆಗೇದ ನೋಡ‌”. ಊರಿಂದ ಬಂದ ಅಮ್ಮನ ಜತೆ ಯಾಂತ್ರಿಕವಾಗಿ ಮಾತಿಗಿಳಿದಾಗ ಅಮ್ಮ ಅಂದ್ಲು ಈ ಮಾತು.

ನಿನ್ನೆಯಿಂದ ಕ್ಷಣ ಕ್ಷಣ ಕ್ಷಣಕ್ಕೂ ಕಣ್ತುಂಬುತ್ತಿವೆ. ಹೌದು…ಹತ್ತು ಸಲ ಹಳ ಹಳಿ. ಅಯ್ಯೋ ಹಿಂಗಾಗಬಾರದಾಗಿತ್ತು. ಹಿಂಗ್ಯಾಕಾತೇನೋ? ಹೆಂಗ ಎದ್ದ ಹೋಗಿರಬೇಕವರು. ಮನಸ್ಸೆಲ್ಲ ಸರ್ ಸುತ್ತಲೇ ಸುತ್ತುತ್ತಿದೆ. ಕೊರೋನಾ ಕಾಲ ಘಟ್ಟದಲ್ಲಿ ಎಷ್ಟು ಜನರನ್ನು ಕಳೆದುಕೊಳ್ಳುತ್ತಿದ್ದೇವೆ. ಮನಸ್ಸು ವಿಹ್ವಲವಾಗಿದೆ. ಒದ್ದಾಡ್ತಾ ಇದೆ.

ಡಾ.ಈಶ್ವರಯ್ಯ.ಮಠ. ಕಲಬುರಗಿ ಕಂಡ ಕನ್ನಡದ ಶ್ರೇಷ್ಠ ಅಧ್ಯಾಪಕ, ದಕ್ಷ ಆಡಳಿತಗಾರ, ಜನಾನುರಾಗಿ, ವಿದ್ಯಾರ್ಥಿ ಮಿತ್ರ, ಇನ್ನೆಷ್ಟೋಗಳ ಒಟ್ಟು ಮೊತ್ತ. ಹೈದ್ರಾಬಾದ್ ಕರ್ನಾಟಕ ಶಿಕ್ಷಣ  ಸಂಸ್ಥೆಯ ಕಲಬುರಗಿಯ ಎಂ.ಎಸ್.ಆಯ್. ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಈಶ್ವರಯ್ಯ.ಮಠ ನಿನ್ನೆ ಅಸ್ತಂಗತರಾದರು. ಸುರಪುರ ತಾಲೂಕಿನ ದೇವರ ಗೋನಾಲದಲ್ಲಿ ಜನಿಸಿದ್ದ ಅವರು ಸುರಪುರದ ಶ್ರೀ ಪ್ರಭು ಕಾಲೇಜಿನಲ್ಲಿ ಓದಿದ್ದರು. ಎಂ.ಎ.ಕನ್ನಡ ಮುಗಿಸಿದ ನಂತರ ಓದಿದ್ದ ಸಂಸ್ಥೆಯಲ್ಲೇ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದ್ದರು.

ಹಲವಾರು ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಮಠ ಅವರು ಹಲವು ಕೃತಿಗಳ ಸಂಪಾದನೆ ಮಾಡಿದ್ದರು. ಸಾಯುವ ವಯಸ್ಸಲ್ಲ. ಕಂಚಿನ ಕಂಠದ ಚತುರ ವಾಗ್ಮಿಗಳಾದ ಈಶ್ವರಯ್ಯ ಈಗಿಲ್ಲ. ನಂಬಲು ಆಗ್ತಾಯಿಲ್ಲ. ಅವರ ವಿದ್ಯಾರ್ಥಿಗಳು ಅಕ್ಷರಶಃ ಬಿಕ್ಕುತ್ತಿವೆ. .ಬಹಳ ವಿದ್ಯಾರ್ಥಿಗಳ ಜತೆ ಮಾತಾಡಿದೆ. ಎಲ್ಲರದೂ ಒಂದೇ ಮಾತು.”ಏನಂತ ಹೇಳಬೇಕ್ರಿ ಮೇಡಂ. ಎಷ್ಟ ಹೇಳಿದರೂ ಕಡಿಮಿ.. ಅವರ ಪ್ರಚೋದನಕಾರಿ ಮಾತುಗಳು ನಮ್ಮನ್ನು ಬೆಳೆಸುತ್ತಿದ್ದವು. ನಿನ್ನಿಂದ ಗೆಲ್ಲುವದು ಸಾಧ್ಯವಿಲ್ಲ ಅನ್ನುವದಕ್ಕಿಂತ ನೀನು ಹೀಗೆ ಮಾಡಿದರೆ ಗೆದ್ದೇ ಗೆಲ್ತಿ ಮಗಾ” ಅಂತ ಹುರುದುಂಬಿಸುತ್ತಿದ್ದರು.

ಡಾ.ಈಶ್ವರಯ್ಯ ಅವರು ನನಗೆ ಕಲಿಸಿದ ಗುರುಗಳಲ್ಲ. ಆದರೂ ಕನ್ನಡ ಪ್ರೇಮ ಎಂಥವರನ್ನೂ ಒಂದು ಮಾಡುತ್ತದೆ. ನಾನು ಕಲಬುರಗಿಗೆ ಬಂದ ಹೊಸದರಲ್ಲಿ ‘ತರಂಗ’ದಲ್ಲಿ ಈಶ್ವರಯ್ಯ ಅಂತ ಬರೀತಿದ್ದರು. ಹೆಂಡತಿಯ ತಮ್ಮ,ಹೆಂಡತಿ ಕುರಿತಾಗಿ ಬಲೇ ರಸವತ್ತಾದ ಲೇಖನಗಳಿರುತ್ತಿದ್ದವು. ಇವರನ್ನು ನಾನು ಅವರೇ ಅಂತ ಮಾಡಿದ್ದೆ. ನಂತರ ಗೊತ್ತಾದದ್ದು ಆ ಈಶ್ವರಯ್ಯ ಬೇರೆ ಅಂತ.

ಆದರೆ ಅವರ ಹಾಗೆಯೇ ಇವರೂ ರಸಪೂರಿತರೇ.. ರಸಿಕರು. ಮಾತಂತೂ ರಸಗವಳ. ನಿರರ್ಗಳ. ಮಾತಿಗೆ ನಿಂತರೆ ಅಸ್ಖಲಿತ ವಾಗ್ಝರಿ. ಓತ ಪ್ರೋತವಾಗಿ ಹರಿಯುವ ಛಿಟಲ್ಲನೇ ಚಿಮ್ಮುವ ಉತ್ಸಾಹದ ಊಟೆ. ತುಂಬಿದ ಗಲ್ಲಗಳ ಮಧ್ಯೆ ಈಟೀಟೆ ಕಣ್ಣುಗಳಲ್ಲಿ ಪ್ರಖರತೆ ಎದ್ದು ಕಾಣುತ್ತಿತ್ತು. ಗುಂಡ ಗುಂಡಗೆ ಸ್ವಲ್ಪ ಸ್ಥೂಲ ದೇಹಿಯಾದ ಡಾ.ಈಶ್ವರಯ್ಯ ಅವರು ಕನ್ನಡಕದೊಳಗಿಂದ ಇಣುಕಿ ನೋಡಿ ಮಾತಾಡುವ ಪರಿಯೇ ಬೇರೆ. ಮೈಕಿನ ಮುಂದೆ ನಿಂತಾಗ ಚಸ್ಮಾ ಏರಿಸಿ ಏರಿಸಿ ಮಾತಾಡುತ್ತಿದ್ದರೆ ಸಭಾಂಗಣವೆಲ್ಲ ಮೌನಕ್ಕೆ ಜಾರುತ್ತಿತ್ತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಳಗಳಲ್ಲಿ, ಅನುಭವ ಮಂಟಪದಲ್ಲಿ ಅನೇಕ ಸಭೆ ಸಮಾರಂಭಗಳಲ್ಲಿ,ಕಾಲೇಜುಗಳಲ್ಲಿ, ಸೆಮಿನಾರುಗಳಲ್ಲಿ, ವಿಶ್ಶವಿದ್ಯಾಲಯದಲ್ಲಿ, ಪುಸ್ತಕ ಬಿಡುಗಡೆಗಳಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ಹಲವಾರು ಕಡೆ ಅವರ ಸೊಗಸುಗಾರಿಕೆಯ ಮಾತು ಸವಿದದ್ದುಂಟು. ಹೀಗೂ ಮಾತಾಡಬಹುದಾ? ಅಂತ ಎಷ್ಟೋ ಸಲ ಅನಿಸಿದ್ದುಂಟು. ಯಾರನ್ನೂ ಮುಲಾಜಿಲ್ಲದೇ  ನೇರವಾದ ನುಡಿಯಿಂದ ಖಂಡಿಸುವ, ದಾಖಲೆಗಳ ಸಹಿತ ತಮ್ಮ ಮಾತನ್ನೇ ಖರೆ ಮಾಡುವ ಎದೆ ಸೆಟೆದುಕೊಂಡು ನಿಂತು ಬಡಿದಾಡುವ ಜೀವ ಇಷ್ಟು ಬೇಗ ಹೋಗಬಾರದಿತ್ತು.

‘ಹಾರಿತೋ ಹಂಸ ಹಾರಿತೊ’ ಎಂಬುದು ಅವರ ಸಂಶೋಧನಾ ಪ್ರಬಂಧ ಕೃತಿ. ಅದು ಸ್ವರ ವಚನಗಳ ಬಗ್ಗೆ ಸಂಶೋಧನೆ ಮಾಡಿದ ಅಪೂರ್ವ ಕೃತಿಯಾದರೆ ಕಡಕೋಳ ಮಡಿವಾಳಪ್ಪನ ಬಗ್ಗೆ ಕೂಡ ಎಂ ಫಿಲ್ ಮಾಡಿದ್ದರು. ಪ್ರಾದೇಶಿಕತೆಯನ್ನೇ ಮೈಗೂಡಿಸಿಗೊಂಡ ಮಠ ಸರ್ ಸರಳ ಮಾತಿನ ವಿದ್ಯಾರ್ಥಿ ಮಿತ್ರ.

ವಿದ್ಯಾರ್ಥಿಗಳು ಹಸಿದರೆ ತಮ್ಮ ಕಿಸೆಯಿಂದ ದುಡ್ಡು ಖರ್ಚು ಮಾಡುವದಕ್ಕೆ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹಳ್ಳಿಯಿಂದ ಬರುವ ಮಕ್ಕಳ ಓದಿನ ಬಗ್ಗೆ ಅವರಿಗೆ ವಿಪರೀತ ಕಾಳಜಿ ಇತ್ತು. ಓದುವ ಮಕ್ಕಳಿಗಾಗಿ ವಿಶೇಷವಾಗಿ ಲೈಬ್ರರಿಯಲ್ಲಿ ವ್ಯವಸ್ಥೆ ಮಾಡಿರುತ್ತಿದ್ದರು. ಮಧ್ಯಾಹ್ನದ ಊಟ ಕೂಡ ಅವರೇ ಒದಗಿಸುತ್ತಿದ್ದರೆಂದು ನನ್ನ ವಿದ್ಯಾರ್ಥಿಯೊಬ್ಬ ಹೇಳಿದ. “ತಲೆ ಮೇಲೆ ಮಗುವಿನಂತೆ ಕೈಯಾಡಿಸಿ ಕಿಸೇಲಿ ದುಡ್ಡಿಡ್ತಿದ್ದರು”ಎಂದನೊಬ್ಬ. ಹೃದಯದ ಮಮತೆಯನ್ನೆಲ್ಲ ಕೈಗಿಳಿಸಿ, ಮುಖ ಸವರಿ, ಗಲ್ಲ ನೇವರಿಸುತ್ತಿದ್ದರು. ಆ ಸ್ಪರ್ಶ ನೆನಪಾದರೆ ಮನಸ್ಸು ಅವ್ಯಕ್ತ ಆನಂದದಲ್ಲಿ ಮೀಯುತ್ತದೆ ಎಂದನೊಬ್ಬ. ಆತನ ಕಂಠ ಬಿಗಿದಿತ್ತು. ಅಳುತ್ತಲೇ ಮಾತಾಡಿದ ಆ ಹುಡುಗ.

ಹಾಡಿನ ಹುಡುಗಿ ಸ್ಪೂರ್ತಿ ಹುನಗುಂದ ಹೇಳ್ತಾಳೆ.. “ಎಂದೂ ಅವರು ನಮಗೆ ಏನೇ ಕೇಳಿದರೂ ಆಗಲ್ಲ, ಬೇಡ ಅಂದದ್ದು ನೆನಪಿಲ್ಲ. ಯುವಜನೋತ್ಸವದಲ್ಲಿ ಚಾಂಪಿಯನ್ ಆದರೆ ಹೋಟೇಲೂಟ ಗ್ಯಾರಂಟಿ ಇರ್ತಿತ್ತು. ಎಲ್ಲಿಯಾದರೂ ಪ್ರಾರ್ಥನೆ ಗೀತೆ ಹಾಡಿ ಬಂದರೆ ಚೇಂಬರಿಗೆ ಕರೆಸಿ ಪಾಕೀಟಿನಲ್ಲಿ ದುಡ್ಡು ಹಾಕಿ ಕೊಡ್ತಿದ್ರು .ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅಂತಾಳೆ ಅವಳು.

ಪುಸ್ತಕ ಪ್ರೇಮಿ ಈಶ್ವರಯ್ಯ ಅವರು ಯಾರ ಮನೆ ಸಮಾರಂಭಕ್ಕೆ ಹೋದರೂ ಅವರ ಶ್ರೀಮತಿಯವರು ಏನೇ ಕೊಟ್ಟರೂ ತಾವು ಪುಸ್ತಕ ಕೊಡುವದನ್ನು ಮರೆಯುತ್ತಿರಲಿಲ್ಲ.ನನಗೆ ಅವರು ಕೊಟ್ಟ ಪುಸ್ತಕ “ಅನಂತ ವಿನಾಯಕ” ಅವರೇ ಕನ್ನಡ ನಿರೂಪಣೆ ಮಾಡಿದ ತೆಲುಗು ಮೂಲದ ಪುಸ್ತಕ. ಗಣೇಶ ಚತುರ್ಥಿಗೆ ಪ್ರತಿ ವರ್ಷ ಹೊಸ ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡುವ ನಾನು ಈ ಬಾರಿ ಡಾ.ಈಶ್ವರಯ್ಯ.ಮಠ ಅವರ ಪುಸ್ತಕದಲ್ಲಿನ ಕನ್ನಡ ಹಾಡನ್ನೇ ಆಯ್ಕೆ ಮಾಡಿ ಹಾಡಿ ಗಣೇಶನಿಗೆ ಅರ್ಪಣೆ ಮಾಡಿದ್ದೆ‌.

ವಿದ್ವತ್ತಿನಲ್ಲೂ, ತೂಕದಲ್ಲೂ ಗಣಪನ ರೂಪಿನ ವಿದ್ವಾನ್ ಡಾ.ಈಶ್ವರಯ್ಯ ಮಠ ಅವರು ಈ ಹಾಡು ಕೇಳಲಿಲ್ಲ ಎನ್ನುವ ಹಳ ಹಳಿ ಉಳಿಯಿತು. ಸಂಗೀತಗಾರರ ಮೇಲೂ ವಿಶೇಷ ಪ್ರೀತಿ ಅವರಿಗೆ. ವಿ.ಜಿ.ಮಹಿಳಾ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿದ್ದಾಗ ಎರಡು ದಿನದ ಸಂಗೀತ ಕಾರ್ಯಾಗಾರ ಆಯೋಜಿಸಿ ಅರ್ಥಪೂರ್ಣವಾದ ಕಾರ್ಯಕ್ರಮ ಆಯೋಜಿಸಿ ಸಂಗೀತಗಾರರಿಗೆ ಹೊಸ ಹೊಳಹು ತೋರಿದ್ದರು. ರಾಜ್ಯವ್ಯಾಪಿ ಒಂದು ಸಂಘಟನೆ ಹುಟ್ಟು ಹಾಕಿ ಸಂಗೀತಗಾರರ ಬೇಡಿಕೆಗಳನ್ನು ಈಡೇರಿಸುವತ್ತ ರಾಜ್ಯದ ಗಮನ ಸೆಳೆಯಬೇಕು ಎಂದು ಆಶಾ ಭಾವನೆ ಮೂಡಿಸಿದ್ದರು. ಯಾರ ಬಾಯಲ್ಲಿ ಕೇಳಿದರೂ ಅದೇ ಮಾತು. ಎಂಥಾ ವ್ಯಕ್ತಿತ್ವ ಅವರದು ಅಂತ.

ಅವರು ಎಲ್ಲೇ ಬಂದರೂ ಗತ್ತಿನಲ್ಲೇ ಬರ್ತಿದ್ದರು. ಅಸ್ಖಲಿತವಾಗಿ ಮಾತು, ಅಸಾಧಾರಣ ಕನ್ನಡ ಪ್ರೇಮ, ಕನ್ನಡ ಅಧ್ಯಯನದಿಂದ ಅವರ ವ್ಯಕ್ತಿತ್ವ ಅಪರೂಪದ್ದಾಗಿತ್ತು. ನಮ್ಮದಲ್ಲದ ವ್ಯಕ್ತಿತ್ವವನ್ನು ಆವಾಹಿಸಿಕೊಂಡು ಮತ್ತೊಬ್ಬರಿಂದ ಪ್ರೀತಿಸಿಕೊಳ್ಳುವದಕ್ಕಿಂತ ನಾವು ನಾವಾಗಿಯೇ ಇದ್ದು ದ್ವೇಷಕ್ಕೊಳಪಡುವದೇ ಉತ್ತಮ ಎನ್ನುವಂತೆ ಬದುಕಿದರು. ಅವರೆಂದೂ ಬದಲಾಗಲಿಲ್ಲ. ಯಾರಿಗೂ ಮಣೆ ಹಾಕಲಿಲ್ಲ. ಪ್ರಿನ್ಸಿಪಾಲಗಿರಿಗಿಂತ ಅಧ್ಯಯನ. ಅಧ್ಯಾಪನವೇ ಅವರಿಗೆ ಬೇಕಾಗಿತ್ತು. ಸತತಾಧ್ಯಾಯಿ ಅವರು. ಇಂಥ ಅಧ್ಯಾಪಕರು ತಮ್ಮಲ್ಲಿರುವ ಜ್ಯೋತಿಯಿಂದ ಮತ್ತೊಬ್ಬರ ಮನೆ ಮನ ಬೆಳಗುತ್ತಾರೆ. ಗುರುಗಳಿದ್ದರೆ ಹೀಗಿರಬೇಕು ಎನ್ನುವಂಥ ಮಾತು ಎಲ್ಲ ಕಡೆಯಿಂದ ಬಂತು.ಬದುಕೆಂದರೆ ಇದೇ ಅಲ್ಲವೇ?

ನಿನ್ನೆ ಬುಧವಾರ ಆಗಸ್ಟ 26 ಎಲ್ಲರ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಇವರ ಫೋಟೋನೇ ರಾರಾಜಿಸುತ್ತಿತ್ತು. ಬಹಳ ಮಕ್ಕಳು ಒದ್ದಾಡ್ತಾ ಇದ್ದರು. ಇನ್ನು ಮನೆಯ ಸದಸ್ಯರು, ಮಕ್ಕಳು ಗತಿ‌ ಕೇಳುವವರಾರು? ಕರುಳ ಬಳ್ಳಿ ಕಡಿದ ಹೊತ್ತಿನ ಹಾಡು ನೆನಪಾಗ್ತಿದೆ… ಖೈನೂರು ಕೃಷ್ಣಪ್ಪನ ಕುರಿತಾದ ಕಡಕೋಳ ಮಡಿವಾಳಪ್ಪನ ತತ್ವಪದ

      ಮೋಹ ತೀರಲಿಲ್ಲ.ಮಗನಿಗೆ ಮಾರಿ ನುಂಗಿತಲ್ಲ

      ಧಾರುಣಿಯೊಳಗೆ ಬಹು ಸೂರತ ಇವನ ಸರಿ

      ದಾರು ಕಾಣಲಿಲ್ಲ ಸಿದ್ಧ  ಸೇವಕನನ್ನ

      ಬಿಚ್ಚಿ ಹೇಳಲೇನು ಪರಿಯಾ ಒಡಲೊಳು

      ಹಚ್ಚಿದಂತೆ ಉರಿಯ ಅಚ್ಚ ಉಚ್ಚ  ಜನ

      ಹೆಚ್ಚಾದೀತೋ ಪಚ್ಛನಾಗೋ ಎನ್ನ ಇಚ್ಛುಳ್ಳ   

      ದೊರೆಯೇ ಕೆಟ್ಟಿತೆನ್ನ ಬಲವ ಇಂಥವ ಎಂದು

      ಹುಟ್ಟಿ ಬರುವ.ಎಂದು ಹುಟ್ಟಿ ಬರುವ.ಎಂದು

      ಹುಟ್ಟಿ ಬರುವ.

ಜೀವಿಸಿರುವಾಗ ಯಾವದೇ ವ್ಯಕ್ತಿಯಲ್ಲಿದ್ದ ಹಿರಿತನ ಗೊತ್ತಾಗುವದಿಲ್ಲ. ಆ ವ್ಯಕ್ತಿಯಲ್ಲಿದ್ದ ಅವಗುಣಗಳನ್ನೆಲ್ಲ ಮರೆತು ಕೇವಲ ಗುಣಗಳನ್ನೇ ಸ್ಮರಿಸುವದು ಸಾವಿನ ಗುಟ್ಟು. ಇದಕ್ಕೆ ನೀವು ಹೇಗೆ ಹೊರತಾಗುತ್ತೀರಿ ಸರ್. ನಿಮ್ಮ ಜತೆ ಹಂಚಿಕೊಳ್ಳುವ ಎಷ್ಟೋ ಮಾತುಗಳಿದ್ದವು. ಯಾವಾಗ ಆಡಲಿ?

‍ಲೇಖಕರು avadhi

August 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. D.M.NADAF.

    ಹಾರಿತೋ ಹಂಸ……….(ಲಕ್ಷ್ಮೀಶಂಕರ ಜೋಷಿ) ಈಶ್ವರಯ್ಯ ಮಠ ಅವರ ಕುರಿತ ಉತ್ತಮ ಪರಿಚಯಾತ್ಮಕ ಲೇಖನ.
    ಅವರ ಉದಾರತೆಯೊಂದಿಗೆ ವಿದ್ಯಾರ್ಥಿಪ್ರೀತಿ ಅಧ್ಯಯನದ ಹುಚ್ಚು, ಮೋಡಿಮಾಡುವ ಮಾತುಗಾರಿಕೆ,ದಿಟ್ಟ ನಿಲುವು ಅವರ ವ್ಯಕ್ತಿ ತ್ವದ ಲಕ್ಷಣಗಳಾಗಿದ್ದವು.
    ಇವುಗಳೊಂದಿಗೆ ರಾಜಿರಹಿತ ಸ್ವಾಭಿಮಾನ ಅವರಿಗಿತ್ತು. ತಮ್ಮ ವೃತ್ತಿ ಬದುಕಿನಲ್ಲಾಗಲೀ ಸಾಮಾಜಿಕವಾಗಿ ತಾವು ತಳೆದ ನಿಲುವುಗಳಲ್ಲಾಗಲೀ ಯಾವುದೇ ಕಾರಣಕ್ಕಾಗಿ ಅವರು ಎಂದೂ ಇನ್ನೊಬ್ಬರ ಮುಲಾಜಿಗೆ ಬಿದ್ದು ಆತ್ಮಸಾಕ್ಷಿಯನ್ನು ಮಾರಿಕೊಳ್ಳಲಿಲ್ಲ.
    ಕಲಬುರಗಿಯ ಸಾಂಸ್ಕೃತಿಕ ಲೋಕದ ಎಲ್ಲರಿಗೂ ಬೇಕಾದವರಾಗಿದ್ದರು. ಶರಣ ಸಂಸ್ಕೃತಿಯ ಅನುಯಾಯಿಗಳಾಗಿದ್ದ ಈಶ್ವರಯ್ಯ “ಬೈದವರೆನ್ನ ಬಂಧುಗಳೆಂಬೆ”ಎನ್ನುವ ಜಾಯಮಾನದವರಾಗಿದ್ದರು
    ಅವರ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿ ದೊರೆಯಲಿ.
    ಡಿ.ಎಮ್.ನದಾಫ್
    ಅಫಜಲಪುರ

    ಪ್ರತಿಕ್ರಿಯೆ
  2. Prajna Mattihalli

    well written Laxmi mam Though I didnt know about Math sir your writing made me to cry for the great soul

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: