ಫೇಸ್ ಬುಕ್ ನ ಫ್ರೀ ಬೇಸಿಕ್ಸ್ ‘ಫ್ರೀ’ ನೂ ಅಲ್ಲ, ‘ಬೇಸಿಕ್ಕೂ’ ಅಲ್ಲ..

H S Jayakumar

ಜಯಕುಮಾರ್ ಎಚ್ ಎಸ್

ದಿಕ್ಕುತಪ್ಪಿಸುವ ಜಾಹೀರಾತುಗಳು:

‘ಗಣೇಶ್ ಎಂಬ ಬಡ ರೈತ ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಒಳ್ಳೆಯ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’

‘ರಾಹುಲ್ ಎಂಬ ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯು ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಉತ್ತಮ ಸಂಶೋಧಕನಾಗುತ್ತಿದ್ದಾನೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’ ಇಂತಹ ಫೇಸ್‍ಬುಕ್ ಕಂಪನಿಯ ಹತ್ತಲವು ಜಾಹೀರಾತುಗಳು ಜನತೆಯ ಕಣ್ಣು ಕಿವಿಗಳ ಮೇಲೆ ದಾಂಗುಡಿಯಿಡುತ್ತಿವೆ. ಮತ್ತೊಂದೆಡೆ, ಫ್ರೀಬೇಸಿಕ್ ಯೋಜನೆಯು ಬಡ ರೈತರನ್ನು ಉದ್ದಾರ ಮಾಡುವುದಿರಲಿ, ಅದೊಂದು ಡಿಜಿಟಲ್ ಆತ್ಮಹತ್ಯೆಗೆ ಕಾರಣವಾಗುತ್ತದೆಂದು ನೆಟ್ ಬಳಕೆದಾರರು ಫೇಸ್‍ಬುಕ್ ಕಂಪನಿಯ ಹುನ್ನಾರದ ವಿರುದ್ದ ಆನ್‍ಲೈನ್ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ವಿಶ್ವದ ಅತಿ ದೊಡ್ಡ ಜಾಲತಾಣಗಳ ಕಂಪನಿಗಳ ಪೈಕಿ ಫೇಸ್‍ಬುಕ್ ಕೂಡ ಒಂದು. ಇತ್ತೀಚೆಗೆ  ಈ ಕಂಪನಿ ದೇಶದ ಇಂಗ್ಲೀಷ್ ಮತ್ತು ಎಲ್ಲ ರಾಜ್ಯದ ಭಾಷೆಗಳ ದಿನಪತ್ರಿಕೆಗಳಲ್ಲಿ ಕೋಟ್ಯಾಂತರ ಹಣ ಖರ್ಚು ಮಾಡಿ ಜಾಹೀರಾತುಗಳನ್ನು ಪ್ರಕಟಿಸಿ ಜನರ ಗಮನಸೆಳೆಯುತ್ತಿದೆ. ಅದು ಜನರ ದಿಕ್ಕುತಪ್ಪಿಸುತ್ತಿದೆ ಎಂದು ಹೇಳುವುದು ಸರಿಯಾಗುತ್ತದೆ! ತಾನು ‘ಫ್ರೀಬೇಸಿಕ್’ ಹೆಸರಿನಲ್ಲಿ ಭಾರತ ದೇಶದ ಬಡವರಿಗೆ ಇಂಟರ್‍ನೆಟ್ ಸೌಲಭ್ಯವನ್ನು ಉಚಿತವಾಗಿ ಕೊಡಲು ಸಿದ್ದವಿರುವುದಾಗಿಯೂ, ಇದಕ್ಕೆ ಎಲ್ಲರೂ ಬೆಂಬಲ ಕೊಡಬೇಕೆಂದು ಜಾಹೀರಾತಿನಲ್ಲಿ ಕೋರಿಕೊಂಡಿದೆ. ಅಲ್ಲದೇ, ಜಾಲದಲ್ಲಿ ಸಮಾನತೆ ಪರವಾಗಿರುವ ಹೋರಾಟಗಾರರು ಇದನ್ನು ವಿರೋಧಿಸುತ್ತಿದ್ದು, ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆಂದೂ ಹೇಳಿಕೊಳ್ಳುತ್ತಿದೆ. ಫೇಸ್‍ಬುಕ್ ಕಂಪನಿಯ ಜಾಹೀರಾತಿಗೆ ದೇಶದ ಸಾಮಾನ್ಯ ವಿದ್ಯಾವಂತರಷ್ಟೇ ಅಲ್ಲ ವಿಶ್ವವಿದ್ಯಾನಿಲಯದ ಉಪಕುಲಪತಿಗಳಂತಹ ವ್ಯಕ್ತಿಗಳೇ ಮರುಳಾಗಿ ಬೆಂಬಲ ನೀಡಿದ್ದಾರೆ!

no-to-freebasics-lead-icdಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಫೇಸ್‍ಬುಕ್ ಕಂಪನಿಯ ಯೋಜನೆಗೆ ಅಸ್ತು ಎನ್ನಬೇಕಾದರೆ, ಆನ್‍ಲೈನ್ ಮೂಲಕ ನೆಟ್ ಬಳಕೆದಾರರು ಗರಿಷ್ಟ ಇ-ಮೇಲ್ ಗಳನ್ನು ಕಳುಹಿಸಿ ಬೆಂಬಲ ಪಡೆಯಬೇಕೆಂದು ಹೇಳಿದೆ. ಇದಕ್ಕಾಗಿ ಫೇಸ್‍ಬುಕ್ ಕಂಪನಿಯು ಕೋಟ್ಯಾಂತರ ಹಣ ವೆಚ್ಚ ಮಾಡಿ ಜನಸಾಮಾನ್ಯರನ್ನು ದಿಕ್ಕುತಪ್ಪಿಸಿ ಬೆಂಬಲ ಪಡೆಯುತ್ತಿದೆ. ಇದೇ ವೇಳೆ ಫ್ರೀ ಸಾಫ್ಟ್‍ವೇರ್ ಮೂವ್‍ಮೆಂಟ್ ಇಂಡಿಯಾ ದಂತಹ ಅನೇಕ ಸಂಘಟನೆಗಳು ಫೇಸ್‍ಬುಕ್ ಕಂಪನಿಯ ಯೋಜನೆಗೆ ಬೆಂಬಲ ನೀಡಬಾರದೆಂದು ದೇಶವ್ಯಾಪಿ ಆನ್‍ಲೈನ್ ಆಂದೋಲನ ನಡೆಸಿದ್ದಾರೆ. ಅಲ್ಲದೇ, ಹೈದರಾಬಾದ್, ಚೆನ್ನೈ, ಬೆಂಗಳೂರು ಇತ್ಯಾದಿ ನಗರಗಳಲ್ಲಿ ಧರಣಿ, ಪ್ರತಿಭಟನೆ ನಡೆಸಿದ್ದಾರೆ.

ಫ್ರೀಬೇಸಿಕ್ಸ್ ಯೋಜನೆ ಕಪಟತನ:

ಹೀಗಾಗಿ ಫೇಸ್‍ಬುಕ್ ನ ಕಪಟತನವನ್ನು ಅರಿಯಲು, ಮೊದಲಿಗೆ ಇಂಟರ್‍ನೆಟ್ ಅಥವಾ ಅಂತರ್ಜಾಲ ಕಾರ್ಯನಿರ್ವಹಿಸುವ ಬಗೆಯನ್ನು ಅರಿಯಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಂತೇ ಇಂಟರ್‍ನೆಟ್ ಕೂಡ ಒಂದು ರೀತಿ ಡಿಜಿಟಲ್ ಹೈವೇ. ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಬೇಕಾದರೆ (ಅದು ಕಾರು, ಸ್ಕೂಟರ್, ಬಸ್ಸು, ಏನೇ ಇರಲಿ) ನಾವು ಟೋಲ್ ಶುಲ್ಕ ಪಾವತಿಸಿ ಪಯಣಿಸುತ್ತೇವೆ. ಹೆದ್ದಾರಿಯನ್ನು ಪ್ರವೇಶಿಸಿದ ಮೇಲೆ ನಾವು ಯಾವುದೇ ಸ್ಥಳಕ್ಕಾಗಲಿ, ಹೋಟೆಲ್ಲಿಗಾಗಲಿ, ಊರಿಗಾಗಲಿ, ಹೋಗಲು ಸ್ವತಂತ್ರರು. ಆದರೆ, ಫೇಸ್ ಬುಕ್ ಕಂಪನಿಯು ಇಂಟರ್‍ನೆಟ್ ವಿಷಯದಲ್ಲಿ ಮಾಡಹೊರಟಿರುವುದೇನೆಂದರೆ, ಪ್ರಯಾಣಿಕರು ಯಾವ ಸ್ಥಳ, ಹೋಟೆಲ್, ಅಥವಾ ಊರಿಗೆ ಹೋಗಬೇಕೆಂದು ತಾನೇ ನಿರ್ಧರಿಸಲು ಹೊರಟಿರುವುದು. ಇಂಟರ್‍ನೆಟ್ ಸೌಲಭ್ಯಕ್ಕೆ ಅಗತ್ಯವಿರುವ ಹಣವನ್ನು (ಅಂದರೆ ಟೋಲ್ ಶುಲ್ಕ ಎಂದಿಟ್ಟುಕೊಳ್ಳಿ) ತಾನೇ ಪಾವತಿಸುತ್ತೇನೆ, ಆಮೂಲಕ ಐದಾರು ಅಂತರ್ಜಾಲ ತಾಣಗಳನ್ನು ಮಾತ್ರ ಬಳಸುವ ಸೌಲಭ್ಯವನ್ನು ತಾನು ನೀಡುತ್ತೇನೆ ಎನ್ನುತ್ತಿದೆ ಫೇಸ್‍ಬುಕ್. ಇದರಿಂದ ಇಂಟರ್‍ನೆಟ್ ಎಂದರೆ ಕೇವಲ ಐದಾರು ಅಂತರ್ಜಾಲ ತಾಣಗಳು ಮಾತ್ರವೇ, ತನ್ನ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡುವ ತಾಣಗಳು ಮಾತ್ರವೇ ಆಗಿಬಿಡುವ ಅಪಾಯವಿದೆ.

ಆದರೆ, ಇಂಟರ್‍ನೆಟ್‍ನ ಪೂರ್ಣ ಸಾಮಥ್ರ್ಯ ಇರುವುದು: ಕಂಪ್ಯೂಟರ್ ಮತ್ತು ಇಂಟರ್‍ನೆಟ್ ಸೌಲಭ್ಯ ಹೊಂದಿರುವ ಯಾರೇ ಆಗಲಿ ಕೇವಲ ಗ್ರಾಹಕರಾಗದೇ, ಸುದ್ದಿ ಮತ್ತು ಅನಿಸಿಕೆಗಳನ್ನು ಉತ್ಪಾದಿಸಲು ಇಂಟರ್‍ನೆಟ್ ಅವಕಾಶ ಕಲ್ಪಿಸುತ್ತದೆ. ಉದಾಹರಣೆಗೆ, ಯೂಟ್ಯೂಬ್ ಮತ್ತು ವೀಡಿಯೋ ಕ್ಯಾಮೆರಾವನ್ನು ಬಳಸಿಕೊಂಡು ಒಂದು ಟೆಲಿವಿಷನ್ ಸ್ಟೇಷನ್ ಶುರು ಮಾಡಬಹುದು! ಇಂಟರ್‍ನೆಟ್‍ನಲ್ಲಿ ಸುಮಾರು 100 ಕೋಟಿ ಜಾಲತಾಣಗಳಿದ್ದು, ಅದರಲ್ಲಿ 8.50 ಲಕ್ಷ ಕ್ರಿಯಾಶೀಲತೆಯಿಂದಿವೆ. ಇವೆಲ್ಲಾ ಜಾಲತಾಣಗಳ ವೇಗವನ್ನು ಕಡಿಮೆಗೊಳಿಸಿ, ಜನಸಾಮಾನ್ಯರನ್ನು ಕೇವಲ ಐದಾರು ಜಾಲತಾಣಗಳ ದಾಸರನ್ನಾಗಿ ಮಾಡುವ ಹುನ್ನಾರ ಫೇಸ್‍ಬುಕ್ ನದು.  ಎಲ್ಲರಿಗೂ ಬೇಕಾಗಿರುವ ‘ಪ್ರಾಥಮಿಕ’ (‘ಬೇಸಿಕ್ಸ್’) ಜಾಲತಾಣಗಳು ಇವೆಯೇ? ಒಬ್ಬ ರೈತ, ವಿದ್ಯಾರ್ಥಿ, ಮಹಿಳೆಗೆ ಬೇಕಾದ  ‘ಪ್ರಾಥಮಿಕ’ (‘ಬೇಸಿಕ್ಸ್’) ಜಾಲತಾಣಗಳು ಒಂದೆಯೇ? ಇದರ ನಿರ್ಣಯವನ್ನು ಫೇಸ್ ಬುಕ್ ಗೆ ಮಾತ್ರವಲ್ಲ ಯಾರಿಗೂ ಬಿಡಲು ಕೂಡದು. ಅದು ಅವರ ವೈಯಕ್ತಿಕ ನಿರ್ಣಯ ಆಗಬೇಕು.

‘ಫ್ರೀ ಬೇಸಿಕ್ಸ್’ನಲ್ಲಿರುವ ‘ಫ್ರೀ” (ಉಚಿತ)ವೂ ನಿಜವಲ್ಲ. ಫೇಸ್ ಬುಕ್ ಗ್ರಾಹಕರಿಗೆ ‘ಫ್ರೀ’ ಕೊಟ್ಟು ನಷ್ಟ ಮಾಡಿಕೊಳ್ಳುತ್ತಿಲ್ಲ. ಫೇಸ್ ಬುಕ್ ಜಾಹಿರಾತುಗಳ ಆದಾಯ ಮಾತ್ರವಲ್ಲ, ಅದು ಆಯ್ಕೆ ಮಾಡುವ ಐದಾರು ಜಾಲತಾಣಗಳಿಂದಲೂ ಹಣ ವಸೂಲಿ ಮಾಡುತ್ತದೆ. ಗ್ರಾಹಕರು ಸಹ ಅವರು ಕೊಡುವ ‘ಪ್ರಾಥಮಿಕ’ ಜಾಲತಾಣಗಳು ಸಾಕಾಗದೆ ದುಬಾರಿ ಬೆಲೆ ಕೊಟ್ಟು ಬೇರೆ ಜಾಲತಾಣಗಳನ್ನು ನೋಡುತ್ತಾರೆ.

ಹೀಗೆ ಫೇಸ್ ಬುಕ್ ನ ‘ಫ್ರೀ ಬೇಸಿಕ್ಸ್’ ‘ಫ್ರೀ”ನೂ ಅಲ್ಲ. ‘ಬೇಸಿಕ್ಕೂ’ ಅಲ್ಲ.

‘ಜಾಲದಲ್ಲಿ ಸಮಾನತೆ’ಯ ಪ್ರಾಮುಖ್ಯತೆ:

‘ಜಾಲದಲ್ಲಿ ಸಮಾನತೆ’ ಅಥವಾ ‘ಓeಣ ಓeuಣಡಿಚಿಟiಣಥಿ’ ಸಮಸ್ಯೆಯು ಬಹಳ ಸಂಕೀರ್ಣ ವಿಷಯದಂತೆಯೂ, ಕೇವಲ ನೆಟ್ ಬಳಕೆದಾರರಿಗೆ ಮಾತ್ರವೇ ಸಂಬಂಧಿಸಿರುವಂತೆಯೂ ಮೇಲ್ನೋಟಕ್ಕೆ ಕಾಣುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇಂಟರ್ ನೆಟ್ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಕಾಳಗದ ರಣಭೂಮಿಯೇ ‘ಜಾಲದಲ್ಲಿ ಸಮಾನತೆ’ ಎಂಬ ಪರಿಕಲ್ಪನೆ. ಅಂದರೆ, ಭೌತಿಕ ನೆಟ್‍ವರ್ಕ್‍ಗಳ ಮಾಲೀಕತ್ವ ಹೊಂದಿರುವವರು ಅಥವಾ ನಿಯಂತ್ರಿಸುತ್ತಿರುವವರು, ಆ ನೆಟ್‍ವರ್ಕ್‍ಗಳ ಮೇಲೆ ಹರಿಯುವ ಇಂಟರ್‍ನೆಟ್ ಮುಖೇನಾ ಒದಗಿಸಲಾಗುವ ವಿವಿಧ ರೀತಿಯ ಸೇವೆಗಳು ಅಥವಾ ಜಾಲತಾಣಗಳ ನಡುವೆ ತಾರತಮ್ಯ ಮಾಡಬಾರದು.

ಇದು ತಾರತಮ್ಯ-ರಹಿತ ತತ್ವವಾಗಿದ್ದು, ತಂತಿಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಟೆಲಿಕಾಂ ಕಂಪನಿಗಳು ಅಥವಾ ತರಂಗಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಮೊಬೈಲ್ ಕಂಪನಿಗಳು ಬಳಕೆದಾರರದಿಂದ ಅಗಾಧ ಪ್ರಮಾಣದ ಶುಲ್ಕ ವಿಧಿಸುವುದನ್ನು ತಡೆಯುತ್ತದೆ. ಇದಕ್ಕಾಗಿ: ಎಲ್ಲಾ ಜಾಲ ತಾಣ ಬಳಸುವುದಕ್ಕೂ ಸಮಾನ ಅವಕಾಶ, ಒಂದೇ ತೆರನಾದ ವೇಗ, ಮತ್ತು ಒಂದೇ ದತ್ತಾಂಶ ವೆಚ್ಚ ಇರಬೇಕು. ಜಾಲದಲ್ಲಿ ಸಮಾನತೆ ಎಂದರೆ, ಟೆಲಿಕಾಂ ಕಂಪನಿಗಳಿಗೆ ವೆಬ್ ಸೈಟ್ ಹೊಂದಿರುವ ಕಂಪನಿಗಳು ಹಣ ನೀಡಲಿ ಅಥವಾ ನೀಡದಿರಲಿ, ಎಲ್ಲ ವೆಬ್ ಸೈಟ್ ಡೌನ್ ಲೋಡ್ ವೇಗ ಒಂದೇ ಇರಬೇಕು.

ಈ ಹಿನ್ನೆಲೆಯಲ್ಲಿ  ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಟೆಲಿಕಾಂ ಕಂಪನಿಗಳು ಮತ್ತು ಅತಿದೊಡ್ಡ ನೆಟ್ ಕಂಪನಿಗಳ ಲಾಬಿಗೆ ಮಣಿಯದೇ ಜಾಲದಲ್ಲಿ ಸಮಾನತೆ ಕಾಯುವ ನಿಟ್ಟಿನಲ್ಲಿ ಬಲಿಷ್ಟ ನಿಯಮಗಳನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲ ಸಣ್ಣ & ಮಧ್ಯಮ ಇಂಟರ್ ನೆಟ್ ಕಂಪನಿಗಳು, ನೆಟ್ ಬಳಕೆದಾರರು, ಕಂಪ್ಯೂಟರ್ ಬಳಕೆದಾರರು, ಮತ್ತು ಜನ ಸಾಮಾನ್ಯರು ಇಂಟರ್ ನೆಟ್ ಸೇವೆಗಳು ಸರಕಾಗದಂತೆ ಪ್ರಜ್ಞಾವಂತಿಕೆಯಿಂದ ಒತ್ತಾಯ ತರಬೇಕು.

‍ಲೇಖಕರು Admin

January 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: