ಡಾ ವಿ ಎ ಲಕ್ಷ್ಮಣ್
ಕಳೆದು ಒಂದು ತಿಂಗಳಿನಿಂದ ಈ ಫುಡ್ ಡೆಲಿವರಿ ಹುಡುಗರಿಗೆ, ಕಂಪನಿ ಎಂಪ್ಲಾಯಿಗಳನ್ನು ಅವರು ಮನೆಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವ ಡ್ರೈವರುಗಳಿಗೆ ಫಿಜಿಕಲ್ ಫಿಟನೆಸ್ ಸರ್ಟಿಫಿಕೇಟ್ ಕೊಡುವ ನೆಪದಲ್ಲಿ ಒಂದಿಷ್ಟು ಹೊತ್ತು ಕಳೆದೆ.
ಒಬ್ಬೊಬ್ಬ ಹುಡುಗನೂ ಎದೆಯಲ್ಲಿ ಸುಡುವ ಕತೆಯನ್ನು ಹೊತ್ತು ಈ ಊರಿಗೆಲ್ಲ ಊಟ ತಿಂಡಿ ಹಂಚುತ್ತಾರೆಂದು ಖಾತರಿಯಾಯ್ತು.
ಹಗಲು ಒಂದು ಕಾರ್ಖಾನೆಯಲ್ಲಿ ದುಡಿದು ಪಾರ್ಟ್ ಟೈಮ್ ಜಾಬ್ ಅಂತ ರಾತ್ರಿ ಆರ್ಡರು ತೆಗೆದುಕೊಳ್ಳುವ ಹುಡುಗರು, ಅಪರಾತ್ರಿಯಲ್ಲಿ ಎಂತಹ ಚಳಿ ಮಳೆ ಗುಡುಗು ಇದ್ದರೂ ತಮ್ಮ ದಾರಿಯಲ್ಲಿ ಎಂತಹ ಮರ ಅಡ್ಡ ಬಿದ್ದರೂ “ಕಸ್ಟಮರ್” ಗೆ ಹೇಳಿದ ಸಮಯಕ್ಕೆ ಊಟ ಕೊಡುವ ಇವರು ನಿಜವಾಗಿಯೂ “ಅನ್ನದಾತರು”.
ಐದು ನಿಮಿಷ ತಡವಾದರೂ ಇವರ ಆರ್ಡರ್ ಕ್ಯಾನ್ಸಲ್ ಆಗಿ ಎಷ್ಟೋ ದೂರದಿಂದ ಬಂದರೂ ಇವರಿಗೆ ಇವರ ಪಾಲಿನ ಪೇಮೆಂಟ್ ಸಿಗುವುದಿಲ್ಲ .ಬೆಳಿಗ್ಗೆ ಕಾಲೇಜಿಗೆ ಹೋಗಿ ರಾತ್ರಿ ಕೆಲಸ ಮಾಡುವ ಹದಿನೆಂಟು ವರ್ಷದವರಿಂದ ಕಣ್ಣು ಮಂಜು ಮಂಜಾದರೂ, ಕೈ ನಡುಗುತ್ತಿದ್ದರೂ, ಟೂ ವ್ಹೀಲರ್ ಓಡಿಸುವ ಐವತ್ತು ವರುಷದ ನಡುವಯಸ್ಕರೂ ಈ ಕೆಲಸ ಮಾಡುತ್ತಾರೆ.
ಇವರ ಈ ಕಷ್ಟದ ದುಡಿಮೆಯ ಹಿಂದಿನ ಉದ್ದೇಶದಲ್ಲಿ ಈ ಹುಡುಗರ ಮುದಿ ತಾಯಿ ತಂದೆಯವರ ಊಟವಿದೆ, ಓದುತ್ತಿರುವ ತಮ್ಮನ ಭವಿಷ್ಯವಿದೆ, ಅಕ್ಕನ ಮದುವೆಗೆಂದೇ ಮಾಡಿದ ಸಾಲದ ಋಣಭಾರವಿದೆ. ಈ ಮಹಾನಗರದವರ ಹಸಿವು ಇಂಗಿಸುವ ಇವರ ಎದೆಯಲ್ಲೊಂದು ಸದಾ ಉರಿಯುವ ಒಲೆಯಿದೆ. ಹಾಗಂತ ಇವರು ತಮ್ಮ ಸಂಕಟವನ್ನು ಎಲ್ಲಿಯೂ ಹೇಳಿಕೊಂಡವರಲ್ಲ. ಸದಾ ತಮ್ಮ ಸಹೋದ್ಯೋಗಿಗಳೊಂದಿಗೆ ನಗು ನಗುತ್ತಲೇ ಕಾಲ ತಳ್ಳುತ್ತಾರೆ.
ರಾಯಚೂರು, ಬಿಜಾಪುರ, ಚಿಂತಾಮಣಿ, ಬೆಳಗಾವಿ, ಹಾಸನ, ಕಡಪಾ, ಕದರಿ,…ಊರು ಬಿಡಲು ಯಾವ ಕಾರಣಗಳಿದ್ದವೊ? ಈ ಮಥುರೆಯಂತಹ ಮಹಾನಗರಗಳು ಎಷ್ಟೊಂದು ಗೋಪಾಲಕರನ್ನು ಸೆಳೆದಿದೆಯೋ? ಅಥವ ಎಳೆದು ತಂದಿದೆಯೋ?
ಸಟ್ಟ ಸರಹೊತ್ತಿನಲ್ಲಿ ಓಲಾ ಊಬರಿನಲ್ಲಿ ನಿಮ್ಮನ್ನು ಮನೆ ತಲುಪಿಸುತ್ತಾನಲ್ಲ ಆ ಚಾಲಕ ಅವನದೂ ಇದಕ್ಕಿಂತ ಭಿನ್ನ ಕತೆಯೇನೂ ಇರುವುದಿಲ್ಲ.
ಅಷ್ಟೆಲ್ಲ ಬೇಡ ದೊಡ್ಡ ಹೋಟೇಲಿನಲ್ಲಿ ನೀವು ನಿಮ್ಮ ಗೆಳೆಯರೊಂದಿಗೆ ಝಗಮಗಿಸುವ ಬೆಳಕಿನಲ್ಲಿ ಪಾರ್ಟೀ ಮೂಡಿನಲ್ಲಿ ಕುಣಿಯುತ್ತೀರಲ್ಲ… ಒಮ್ಮೆ ಅನಾಯಾಸವಾಗಿ ಆ ಮೂಲೆಯ ಮಂದಬೆಳಕಿನಲ್ಲಿ ತಮ್ಮಂದಿರಂತಹ “ವೇಟರು” ಗಳ ಕಣ್ಣುಗಳನ್ನೊಮ್ಮೆ ನೋಡಿ, ಸಾಧ್ಯವಾದರೆ ತಮ್ಮಾ ಯಾವೂರೋ ನಿಂದು ಅಂತ ವಿಚಾರಿಸಿ ಮುಟ್ಟಿ ಮೈದಡವಿ ಮಾತನಾಡಿಸಿ ನೋಡಿ ಸಾಕು… ಈ ಕಟ್ಟು ಕತೆ, ಕಟ್ಟು ಕವಿತೆಗಳೆಲ್ಲ ಯಾರಿಗೆ ಬೇಕು!?.






ನಿಜ. ಇಂತಹ ಮನ ಕಲಕುವ ವ್ಯಥೆಯ ಕತೆ ಆಟೋ ಡ್ರೈವರ್ ಹಾಗೂ ಕ್ಯಾಬ್ ಡ್ರೈವರುಗಳಲ್ಲೂ ಕೇಳಿದ್ದೇನೆ.
ಹೃದಯ ಸ್ಪರ್ಶಿ ಲೇಖನ, ನೀವು ಹೇಳಿದಂತೆಯೇ ಸದಾ ಇಂತಹ ಅನುಭವಗಳಿಗೆ, ಪರಸ್ಪರ ಸ್ವಾ ನಂತನಕ್ಕೆ ತೆರೆದುಕೊಳ್ಳುವ ನನಗೆ ಮಹಾತ್ಮ ಗಾಂಧಿ ಯವರು ನೆನಪದರು, ಅವರು ಒಮ್ಮೆ ದಕ್ಷಿಣ ಆಫ್ರಿಕಾದಲ್ಲಿ, ಹೋಟೆಲ್ಗ್ಗ್ ಹೋಗಿದ್ದಾಗ, ತನಗೆ ಸರ್ವ್ ಮಾಡಿದ ಅಲ್ಲಿನ ಮಾಣಿಗೆ ಥ್ಯಾಂಕ್ಸ್ ಹೇಳಿದರಂತೆ, ಆತನ ಹೃದಯ ತುಂಬಿ ಬಂದು, ಕಣ್ಣಿರ ಹರಿಸುತ್ತ, ನನ್ನ ಸರ್ವಿಸ್ನಲ್ಲೇ ಪ್ರಪ್ರಥಮ ಬಾರಿಗೆ ಈ ತರಹದ ಪ್ರೀತಿ, ಸೌಜನ್ಯ ತೋರಿದವರಲ್ಲಿ ನೀವೇ ಮೊದಲಿಗರು ಎಂದು ಅಭಿಮಾನ ಪೂರಕವಾಗಿ ಗಾಂಧಿಯವರಿಗೆ ಹೇಳಿದನಂತೆ…. ಎಲ್ಲೋ ಓದಿದ ಆ ಪ್ರಸಂಗವನ್ನು ನೆನೆಯುತ್ತ, ಮಹಾತ್ಮರ ಆ ನಡೆ ನಮ್ಮೆಲ್ಲರಿಗೂ ಮಾದರಿಯಗಲಿ ಎಂದು ಆಶಿಸುತ್ತ..
ನಾವು ಇತ್ತೀಚಿಗೆ ಅಹಮದಾಬಾದ್ಗೆ ಹೋದಾಗ ಹೋಟೆಲ್ನಲ್ಲಿ ಅನುಭವವಾಯ್ತು.ಹೊಟ್ಟೆ ಪಾಡಿಗೆ ಅಲ್ಲಿ ಮಾಣಿ ಕೆಲಸಕ್ಕೆ ಸೇರಿದ್ದ ಸುಮಾರು 45-46 ಪ್ರಾಯದ ಆತನನ್ನು ಆತ್ಮೀಯವಾಗಿ ಮಾತನಾಡಿಸಿದಾಗ,ಆತನೂ ಸಂಭ್ರಮಿಸಿದ.
ನಿಜ ಕಾಳಜಿಯ ಬರಹ
ಕಣ್ಣೀರು